Wednesday, February 1, 2012

ಕಾವ್ಯದ ಕುಣಿತ - ಮೊದಲ ಹೆಜ್ಜೆಗಳು 3: ಮಾತ್ರೆ-ಗಣ (ಮುಂದುವರೆದಿದೆ)

ಹಿಂದಿನ ಬರಹದಲ್ಲಿ ಲಘು-ಗುರುಗಳ ಬಳಕೆಯನ್ನು ಸ್ವಲ್ಪ ಮಟ್ಟಿಗೆ ನೋಡಿದೆವು; ಬರೀ ಲಘುವನ್ನೇ ಬಳಸಿ ಮತ್ತು ಬರೀ ಗುರುವನ್ನೇ ಬಳಸಿ ಕೆಲವು ಸಾಲುಗಳನ್ನು ಮಾಡಿದೆವು. (ನೋಡಿಲ್ಲದೆ ಇದ್ದರೆ ಆ ಬರಹ ಇಲ್ಲಿದೆ ನೋಡಿ)

ಸುಮ್ಮನೆ ಒಂದು ಸಲ ನೆನಪಿಸಿಕೊಳ್ಳೋಣ. ಲಘುವನ್ನೇ ಬಳಸಿ ಎರಡು, ಮೂರು, ನಾಲ್ಕು, ಐದು ಮತ್ತು ಏಳು ಮಾತ್ರೆಗಳ ಗುಂಪಿರುವಂತೆ ಸಾಲುಗಳನ್ನು ರಚಿಸಿದೆವು, ಹಾಗೇ ಗುರುವನ್ನೇ ಬಳಸಿ ಎರಡು, ನಾಲ್ಕು ಮತ್ತು ಆರು ಮಾತ್ರೆಗಳ ಗುಂಪಿರುವಂತೆಯೂ ಸಾಲುಗಳನ್ನು ರಚಿಸಿದೆವು.

ಆದರೆ ನಾವು ಯಾವಾಗಲೂ ಬರೀ ಲಘುವಿನಲ್ಲಿ ಅಥವಾ ಬರೀ ಗುರುವಿನಲ್ಲಿ ಮಾತಾಡುತ್ತೀವಾ? ಖಂಡಿತಾ ಇಲ್ಲ. ನಮ್ಮ ಮಾತಲ್ಲಿ ಲಘು-ಗುರು ಎರಡೂ ರೀತಿಯ ಅಕ್ಷರಗಳು ಇದ್ದೇ ಇರುತ್ತವೆ ಅಲ್ಲವೇ? ಹಾಗೇ ಪದ್ಯದಲ್ಲೂ ಕೂಡ. ಯಾವುದೇ ಪದ್ಯವಾದರೂ ಲಘು-ಗುರುಗಳ ಮಿಶ್ರಣ. ಕೆಲವು ಅಕ್ಷರ ತುಂಡು (ಲಘು), ಕೆಲವಕ್ಕೆ ಎಳೆತ (ಗುರು). ಮೊದಲು ಮಾಡಿದೆವಲ್ಲ, ಮೂರು, ನಾಲ್ಕು, ಐದು, ಏಳು ಇತ್ಯಾದಿ ಲಯಬದ್ಧ ಗುಂಪು? ಅಲ್ಲಿ ಬರೀ ಲಘು ಅಥವ ಬರೀ ಗುರು ಬಳಸುವ ಬದಲು, ಲಘು ಮತ್ತು ಗುರು ಎರಡನ್ನೂ ಬೇರೆಬೇರೆ ರೀತಿಗಳಲ್ಲಿ ಬಳಸಿ ಬೇರೆ ಬೇರೆ ಲಯಗಳನ್ನು ಸೃಷ್ಟಿಸಬಹುದು.

ಇಲ್ಲಿ ನೋಡಿ (ಇದನ್ನು ಜೋರಾಗಿ ಹೇಳಿ):

ಬಳಸಿ ಬಳಸಿ ನುಡಿಯ ಬೇಡ ನೇರ ನುಡಿಯ ನೂ (ತಕಿಟ ತಕಿಟ ತಕಿಟ ತಕಿಟ ತಾತ ತಕಿಟ ತಾ ಎಂಬಂತೆ) [ಬಳಸಿ (UUU) ಬಳಸಿ (UUU) ನುಡಿಯ (UUU) ಬೇಡ ( _U) ನೇರ ( _U) ನುಡಿಯ (UUU) ನೂ - ಇಲ್ಲಿ ಮೂರುಮೂರು ಮಾತ್ರೆಯ ಜೊತೆ ಬಂದಿದೆ, ಆದರೆ ಕೆಲವು ಗುಂಪುಗಳಲ್ಲಿ ಎಲ್ಲವೂ ಲಘು, ಕೆಲವರಲ್ಲಿ ಲಘು-ಗುರುಗಳ ಮಿಶ್ರಣ]

ಗಣಪತಿ ಬಪ್ಪಾ ಬಂದಾ ನೋಡೂ (ತಕತಕ ತಾತಾ ತಾತಾ ತಾತಾ ಎಂಬಂತೆ) [ಗಣಪತಿ (UUUU) ಬಪ್ಪಾ ( _ _ ) ಬಂದಾ ( _ _ ) ನೋಡೂ ( _ _ ) - ನಾಲ್ಕುನಾಲ್ಕು ಮಾತ್ರೆಯ ಜೊತೆ, ಲಘು-ಗುರುಗಳ ಮಿಶ್ರಣ]

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮಾ (ತಾತಕಿಟ ತಾತಕಿಟ ತಾತಕಿಟ ತಾತಾ ಎಂಬಂತೆ) [ತೂಕಡಿಸಿ ( _UUU) ತೂಕಡಿಸಿ ( _UUU) ಬೀಳದಿರು ( _UUU) ತಮ್ಮಾ ( _ _ ) - ಐದೈದು ಮಾತ್ರೆಗಳ ಜೊತೆ, ಲಘು ಗುರುಗಳ ಸೊಗಸಾದ ಮಿಶ್ರಣ ಇಲ್ಲಿ]

ಶಾಲೆಯಲಿ ನೀ ಓತ್ಲ ಹೊಡೆದರೆ ನಾಕು ಬಾರಿಸಿ ಬಿಡುವೆನು (ತಾತಕಿಟತಾ ತಾತಕಿಟತಕ ತಾತತಾಕಿಟ ತಕಿಟತಾ ಎಂಬಂತೆ) [ಶಾಲೆಯಲಿ ನೀ ( _UUU _) ಓತ್ಲ ಹೊಡೆದರೆ ( _U UUUU) ನಾಕು ಬಾರಿಸಿ ( _U _UU) ಬಿಡುವೆನು (UUUU) - ಏಳೇಳು ಮಾತ್ರೆಯ ಜೊತೆ, ಲಘು-ಗುರುಗಳ ಹದವಾದ ಮಿಶ್ರಣ ಇಲ್ಲಿದೆ]

ಗೆಳೆಯರೇ, ಇಷ್ಟು ಓದಿದಮೇಲೆ, ಹಾಡಿದ ಮೇಲೆ, ನಿಮಗೆ ಮಾತ್ರೆ-ಲಯದ ಮರ್ಮ ಅರ್ಥವಾಗಿರಬೇಕು. ಇನ್ನು ವಿಜೃಂಭಿಸಿ. ೧-೨ (ಲಘು-ಗುರು) ಗಳನ್ನು ವಿವಿಧ ರೀತಿಯಲ್ಲಿ ಬಳಸಿ ಎರಡೋ ಮೂರೋ ನಾಲ್ಕೋ ಹೀಗೆ ನಿಮ್ಮ ಮನಸ್ಸಿನಲ್ಲಿ ಮೂಡಿದ ಲಯದಲ್ಲಿ ಸಾಲುಗಳನ್ನು ರಚಿಸಿ. ನೆನಪಿರಲಿ, ಇದು ಕಾವ್ಯವಾಗಬೇಕಿಲ್ಲ, (ಕಾವ್ಯವಾದರೂ ತಪ್ಪಲ್ಲ) ಒಟ್ಟಿನಲ್ಲಿ ಲಯಬದ್ಧವಾದ, ಅರ್ಥಬದ್ಧವಾದ ಸಾಲುಗಳು ಬಂದರೆ ಸರಿ.

ಮತ್ತೆ ನೆನಪಿಸುತ್ತೇನೆ, ಬರೀ ಯಾಂತ್ರಿಕವಾಗಿ ಲಘು ಗುರುಗಳನ್ನು ಲೆಕ್ಕಹಾಕಿ ಬರೆಯಬೇಡಿ. ನೀವು ಬರೆದದ್ದು ನಿಮಗೇ ತಾಳಹಾಕಿಕೊಂಡು ಓದಲು ಸಿಗಬೇಕು. ಲಯ ಮನಸ್ಸಿನಲ್ಲಿ ಮೂಡಬೇಕಷ್ಟೇ ಬರೀ ಲೆಕ್ಕದಲ್ಲಿ ಅಲ್ಲ.

ಇದು ನಿಮ್ಮ ಹಿಡಿತಕ್ಕೆ ಸಿಕ್ಕಿದ ಮೇಲೆ ಮುಂದೆ ನೋಡೋಣ.