Sunday, December 29, 2019

ಕೊನೆಗೊಂಡ ಸದಾಚಾರ-ಸೌಶೀಲ್ಯಗಳ ಯುಗ


ಶ್ರೀಗಳ ಸಮ್ಮುಖ ನಮ್ಮ ಪಾಲಿಗೆ ಬಹುಸಾಮಾನ್ಯವೆಂಬಂತಿದ್ದದ್ದು ನನ್ನ ಎಳವೆಯಲ್ಲಿ. ಚನ್ನಪಟ್ಟಣಕ್ಕೆ ಬಂದ ಎಲ್ಲ ಸ್ವಾಮಿಗಳಿಗೂ ನಮ್ಮ ತಾತನವರದ್ದೇ ಆತಿಥ್ಯ, ಊರಿನ ರಾಮದೇವರ ಗುಡಿಯಲ್ಲಿ ವಾಸ್ತವ್ಯ ಎಂದು ನನ್ನ ನೆನಪು. ಅವರು ಊರಿಗೆ ಬಂದ ದಿನ ಸಂಜೆ ಸಾಮಾನ್ಯವಾಗಿ ನಮ್ಮ ತಾತನವರ ಮನೆಗೆ ಭೇಟಿ - ದೊಡ್ಡ ಮನೆ, ಅಲ್ಲೊಂದು ಪುಟ್ಟ ಸಭೆ ನಡೆಯುತ್ತಿತ್ತು. ಶ್ರೀಗಳ ಆಶೀರ್ವಚನ - ಅದೇ ವಿದ್ಯುತ್ಕಾಂತಿಯ ಮಾಸದ ನಗೆ, ಸ್ವಗತದ ಶೈಲಿಯ ಮೃದುಗಂಭೀರವಾಣಿ, ಫಲಮಂತ್ರಾಕ್ಷತೆ, ನಗೆಮೊಗದ ಕುಶಲಪ್ರಶ್ನೆ - ಈ ಕ್ರಮ ಬಹುತೇಕ ನಮ್ಮ ತಾತನವರು ಬದುಕಿರುವ ತನಕ ತಪ್ಪಿದ್ದಿಲ್ಲ. ಆಮೇಲೆ ಊರಿನ ಸಂಪರ್ಕ ತಪ್ಪಿ ದಶಕಗಳೇ ಕಳೆದುವು. ಮಾಧ್ಯಮಗಳ ಮೂಲಕವಷ್ಟೇ ಶ್ರೀಗಳ ಪರೋಕ್ಷಸಂಪರ್ಕ. ಎಷ್ಟೋ ದಶಕಗಳನಂತರ ಮೊನ್ನೆಮೊನ್ನೆ ಶ್ರೀಗಳ ನೇರ ದರ್ಶನ ಬೆಂಗಳೂರಿನಲ್ಲಿ, ಸರಿಯಾಗಿ 18 ದಿನದ ಕೆಳಗೆ, 11/12/2019ರಂದು, ಶ್ರೀ ವಿದ್ಯಾಪ್ರಸನ್ನತೀರ್ಥರ ಐವತ್ತನೇ ಪುಣ್ಯದಿನದ ಸ್ಮರಣೆಯಲ್ಲಿ. ಪ್ರಸನ್ನತೀರ್ಥರೊಡನಿನ ಅರವತ್ತೈದು ವರ್ಷಕ್ಕೂ ಹಿಂದಿನ ತಮ್ಮ ನೆನಪುಗಳನ್ನು ಹೆಕ್ಕಿ ತೆಗೆದು ಹಂಚಿಕೊಂಡರು, ತಮಿಳುನಾಡಿನ ಯಾವುದೋ ಹಳ್ಳಿಯ ಹೆಸರು ಕೂಡ ಶ್ರೀಗಳ ನೆನಪಿನಲ್ಲಿತ್ತು. ಆ ದಿನ ಶ್ರೀಗಳನ್ನು ನೋಡಿದವರಿಗೆ ಅದೇ ಕೊನೆಯ ದರ್ಶನವಾಗಬಹುದೆಂಬ ಊಹೆ ಖಂಡಿತಾ ಇರಲಿಕ್ಕಿಲ್ಲ. ಶ್ರೀಗಳ ಅದಮ್ಯಚೇತನಕ್ಕೆ 88 ಇನ್ನೂ ಕಿರಿಯವಯಸ್ಸು. ಬಿಡುವಿಲ್ಲದ ಕಾರ್ಯಕ್ರಮದ ಕಾರಣದಿಂದ, ಈ ಕಾರ್ಯಕ್ರಮದ ಅರ್ಧದಲ್ಲೇ ಉಡುಪಿಗೆ ಹೊರಡಬೇಕಾಗಿ ಬಂದ ಕಾರಣವನ್ನು ಸಭೆಗೆ ವಿವರಿಸಿ "ಸಭೆಯ ಅನುಮತಿ ಪಡೆದು ಪ್ರಯಾಣ ಬೆಳಸುತ್ತೇವೆ" ಎಂದ ಶ್ರೀಗಳ ಸೌಜನ್ಯ ಬೆರಗಾಗಿಸಿತು.

ಕಳೆದ ವರ್ಷವೋ ಏನೋ, ಪ್ರಯಾಣದಲ್ಲಿ ಬೆನ್ನಿಗೆ ಪೆಟ್ಟಾಗಿ, ಎದ್ದು ನಿಲ್ಲುವುದೇ ದುಸ್ತರವಾಗಿ, ವೈದ್ಯರು ಬೆಡ್ ರೆಸ್ಟ್ ಹೇಳಿದ್ದಾಗ್ಯೂ ಎರಡೇ ದಿನದಲ್ಲಿ ಕೂಡಿದ ಮಟ್ಟಿಗೆ ನಿತ್ಯಕರ್ಮಾನುಷ್ಠಾನವನ್ನು ರೂಢಿಸಿಕೊಂಡರೆಂದು ಕೇಳಿದ್ದೇನೆ. ಸಾಂಪ್ರದಾಯಿಕ ಸನ್ಯಾಸಿಯೊಬ್ಬನಿಗೆ ನಿತ್ಯಕರ್ಮಾನುಷ್ಠಾನ ಅದೆಷ್ಟು ಮುಖ್ಯವೆಂದು ಸಂಪ್ರದಾಯವನ್ನು ಬಲ್ಲವರೆಲ್ಲರೂ ಅರಿತ ವಿಷಯ. ಇದು ಸನ್ಯಾಸಿಗಳಿಗೆಲ್ಲ ಮಾದರಿಯಾಗಬಹುದಾದ ವಿಶ್ವೇಶತೀರ್ಥರ ಇಚ್ಛಾಶಕ್ತಿ.

ಸಾಂಪ್ರದಾಯಿಕ ಸನ್ಯಾಸದ ಚೌಕಟ್ಟಿನೊಳಗೇ ಸಾಮಾಜಿಕಸುಧಾರಣೆಗಾಗಿ ತುಡಿದ ಈ ಚೇತನ, ಕೇಳಿದ ಕಟಕಿಗಳೆಷ್ಟು, ಎದುರಿಸಿದ ವಿರೋಧವೆಷ್ಟು, ಅನುಭವಿಸಿದ ನಿರ್ಲಜ್ಜ ವೈಯಕ್ತಿಕ ಭರ್ತ್ಸನೆಗಳೆಷ್ಟು? ರಾಜಕೀಯಸ್ಥನೆಂದರು, ಪೊಲಿಟಿಕಲ್ ಗಿಮಿಕ್ ಎಂದರು, ಕೇಳಬಾರದ ಪ್ರಶ್ನೆಗಳನ್ನು ಕೇಳಿದರು, ಆಡಬಾರದ್ದನ್ನಾಡಿದರು - ಈ ಎಲ್ಲ ಸಂದರ್ಭಗಳಲ್ಲೂ ತಮ್ಮದೇ ಸಮುದಾಯದ ಯತಿಗಡಣವಿರಲಿ, ಬ್ರಾಹ್ಮಣಸಮಾಜದ, ಇಡೀ ಹಿಂದೂ ಸಮಾಜದ ಯತಿಸಮುದಾಯವೂ ನಿರ್ಲಿಪ್ತಮೌನ ವಹಿಸಿದಾಗ್ಯೂ, ತಾವೂ ಸ್ವತಃ ನಿರ್ಲಿಪ್ತರಾಗಿ ತಾವು ಸರಿಯೆಂದು ಅರಿತದ್ದನ್ನು ನಡೆಸಿಕೊಂಡು ಹೋದ ದೃಢತೆ ಸ್ವಾಮಿಗಳದ್ದು.

ಸ್ವಚ್ಛತೆ, ಸದಾಚಾರ, ಸಂಯಮ, ಸೌಶೀಲ್ಯಗಳ ಒಂದು ಯುಗ ಇಂದಿಗೆ ಮುಗಿದಿದೆ. ಆ ಯುಗದ ಒಂದು ಭಾಗದಲ್ಲಿ ನಾವೂ ಜೀವಿಸಿದ್ದೆವೆಂಬ ಸಾರ್ಥಕತೆ ನಮಗುಳಿದಿದೆ, ಆ ಸಾರ್ಥಕತೆಗೆ ಮುಕ್ಕಾಗದಂತೆ ಬದುಕುವ ಹೊಣೆಗಾರಿಕೆಯೂ!  ನೆಚ್ಚಿದ ತತ್ತ್ವಕ್ಕೆ ಕಟ್ಟಿ ನಿಲ್ಲುವ ಆ ದೃಢತೆ, ಗುಬ್ಬಚ್ಚಿಯಂತಹ ಪುಟ್ಟ ದೇಹದಲ್ಲಿ ಸದಾ ಪುಟಿಯುವ ಆ ಚೈತನ್ಯ, ಆ ಮಗುವಿನಂತಹ ನಗೆ - ಇವೆಲ್ಲ ಕಣ್ಣಿಗೆ ಕಟ್ಟಿದಂತಿದೆ.

ಈ ಚೇತನ ನಮ್ಮ ಹಿಂದೆ ಸದಾ ಬೆಂಗಾವಲಾಗಿರಲಿ ಎಂಬ ಹಾರೈಕೆಯೊಂದಿಗೆ 🙏🙏🙏