Monday, February 19, 2018

ಹುಚ್ಚು ಹೂವೊಂದರ ಸ್ವಗತ

ನಿನ್ನ ಕೈಲಿಹುದು ಕುಡುಗೋಲೇನು?
ನಾನರಿಯೆ
(ಯಾರ‍್ಯಾರ ಮುಕ್ತಿ ಎಲ್ಲಿಹುದೊ ಬಲ್ಲವರಾರು? -
ಈ ಚಣವೆ ದಿಂಡುರುಳಿ ಮಲಗುವುದೋ
ನಿನ್ನ ತಿರುವಡಿಯ ಹುಡಿಸೇರಿ ನಲುಗುವುದೋ
ನನ್ನದೆಂತೋ!)

ನೀ ಬರುವ ಹಾದಿಯಲಿ ಬಾಡಿರದ ನಗೆ ಹೂವು
ಮೃದುಮಂದಹಾಸದೊಲು ಕಾದಿರುವುದು
ಹೆಸರಿರದ ನೆಪ್ಪಿರದ ಮುಪ್ಪಿರದ ಪುಷ್ಪವಿದು
ಮೊಗವೆತ್ತಿ ನಿನ್ನನೇ ನೋಡುತಿಹುದು

ಗಗನದಿಂ ಕಣ್ಕಿತ್ತು ಭುವಿಗೆ ಚಿತ್ತವನಿತ್ತು
ನೋಡಬಾರದೆ ಕಣ್ಗೆ ಕಣ್ಣ ಬೆರೆಸಿ? -
ವಾಮನನ ಹೆಜ್ಜೆಯದು ಭೂಮಿಗಿಳಿಸುವ ಮುನ್ನ
ಮುಖದ ಚಹರೆಯನಿಷ್ಟು ಎದೆಯೊಳುಳಿಸಿ.

ಹಾದಿಬದಿ ಬೆಳೆದಳಿವ ಗುರುತಿರದ ಹೂವಿದನು
ಕಾಣಬಹುದೇ ಕಂಡು ಹುಡುಕಬಹುದೇ?
ಎಲ್ಲಿಯೋ ಮುಂದೊಮ್ಮೆ ಕಂಡರಳಿ ನಗಲಾಗ
ಬಿರುಮೊಗದಿ ಪರಿಚಯದ ನಗೆಯಿರುವುದೇ?