Sunday, July 12, 2009

ನಮ್ಮೂರಲೊಂದು ಸುತ್ತು

ಬೆಂಗಳೂರಿಂದ ನಮ್ಮೂರು,ಬಹುದೂರ
ಏನಿಲ್ಲ; ಮೂರು
ಗಂಟೆಯ ಪಯಣ.
(ಆದರೂ ಬೆಂಗಳೂರಿನ ಗಜಿ-
ಬಿಜಿಯ ಮಂದಿಗೆ,
ಹತ್ತಿರದ ಶೌಚವೂ ನಿತ್ಯ ಮರಣ)

ಬಹುದೂರವೇನಿಲ್ಲ...
ರಾಮನಗರ-
ದಲ್ಲೊಂದು ಹಿಡಿ ಕಡಲೆ ಬೆಲ್ಲ;
ಮದ್ದೂರಿನೊಂದು ಕಡೆ ಒಂದೆರಡು ವಡೆ
ನಂಚಿಕೊಳ್ಳಲು ದೆವ್ವದ್ದೋ ಭೂತದ್ದೋ ಕತೆಯ ಕಂತೆ -
ಮೆದ್ದು ಮುಗಿವುದರೊಳಗೆ
ಅದೋ ಅಲ್ಲಿ,
ಕೊಳ್ಳೆ-
ಗಾಲ!
ಕೊಳ್ಳೆ ಹೊಡೆದವರಿಲ್ಲ, ಗಾಲ ಪಿಡಿದವರಿಲ್ಲ,
ಆದರೂ ನಮ್ಮೂರು,
ಕೊಳ್ಳೆಗಾಲ.

ಬೆಂಗಳೂರಿನ ಕಾಡಿಗೆನ್ನನಟ್ಟಿದಮೇಲೆ
ಬಹಳ ಬದಲಾಗಿಹುದು
ಊರು-ಕೇರಿ

ಬಸ್ಸಿಳಿದ ಒಡನೆ
ಮುರುಕು ಸೊಂಡಿಲ ಬೀಸಿ
ಸ್ವಾಗತಿಪ ಗಣಪ ಕಾಣಲಿಲ್ಲ
ಗೋಪುರದ ಮೇಲೆ
ಝಗಝಗಿಸಿತ್ತು ಪಾಶಾಂಕುಶ ಕರ
ರಕ್ತಾಂಬರಧರ
ಲಂಬೋದರ
ಮಂಡಿತ ಸೊಂಡಿಲು ಪೂರ!

ಮೊಗದಿರುಹಿ
ಎಡಕೆ ನಡೆದರೆ ಪೇಟೆ
ಬೀದಿ
ಮಾರ್ಕೆಟ್ ಚೌಕದ ಅರವಟ್ಟಿಗೆ ಜಾಗದಲ್ಲೀಗ
ಹೊಸ ಮಸೀದಿ ಮಿನಾರ!
ಮುಂದೀಗ ಮಾರುವರು ಕೋಕ-ಕೋಲ
ಹಿಂದೆಯೇ ಶಿವನ ಗೋಪುರ ಬಸವ,
ಮತ್ತದರ ಬಾಲ.

ತರಕಾರಿ ಮಾರುಕಟ್ಟೆಯಲಿ ಸೊಪ್ಪನು ಮೆದ್ದು
ಓಡುತಿದ್ದುವು ತೊಂಡು ದನದ ಹಿಂಡು
ಮೂವತ್ತು ವರ್ಷಗಳ ಹಿಂದೆಯೂ ಇದೆ ಕೆಲಸ
ಹಿಡಿದು ನಡೆಸಿತ್ತಿದರ ಪೂರ್ವಜರ ದಂಡು

ಗುಡಿಬೀದಿಯಲಿ ನಾವು ಬಾಡಿಗೆಗಿದ್ದ ಮನೆ
ಕೆಡವಿ
ಹೊಸಮನೆ ಕಟ್ಟಿದ್ದಾರೆ;
ಮನೆಮುಂದಿನೊಗೆಯುವ ಕಲ್ಲು,
ನೆರೆಮನೆಯ ಹುಡುಗಿ
ದಿನವು ಎದೆಯಲ್ಲಿ ಮಿಡಿಸುತ್ತಿದ್ದ ಝಲ್ಲು
ಮುಗಿಲೆತ್ತರದ ತೆಂಗಿನ ಮರ
ಕೆ
ಹೆದೆಯೇರಿಸಿದ ಕಾಮ
ನ ಬಿಲ್ಲು
ಇಂದಿಲ್ಲ.

ಮುಟ್ಟು ಚಟ್ಟಾದರೂ ಹೊತ್ತಿ ಉರಿಯುತ್ತಿದ್ದ
ಹನುಮನ ಕಿತ್ತೆತ್ತಿ ತಂದು
ಹೊಸ ಗುಡಿಯಲಿಟ್ಟಿದ್ದಾರೆ
ಹಾರಿ ಹೋಗದ ಹಾಗೆ ಸರೀ ಕಟಕಟೆಯ ಕಟ್ಟಿದ್ದಾರೆ.

ಪಾಂಡವರು ಪೂಜಿಸಿದ
ಊರ ನಾರಾಯಣನ
ದೇಗುಲಕೆ,
ಹೊಸ ಬೊಂಬೆಗಳ ಜಡಿದು,
ಮೇಲೆ ಬಣ್ಣವ ಬಡಿದು ಚೊಕ್ಕ ಮಾಡಿದ್ದಾರೆ.

ಮಜ
ಬೂತಾದ ತೇರಿಗೀಗೊಂದು ಭಾರಿಯ ಶೆಡ್ಡು.
ತೇರ ತುಂಬೆಲ್ಲ ಗಿಜಿಗುಡುತಿದ್ದ
ಪಡ್ಡೆದೆವ್ವಗಳೀಗ
ಕತೆಯ ಬುಕ್ಕುಗಳಲ್ಲಿ ತಲೆಮರೆಸಿವೆ.

ಗುಡಿಬಿಟ್ಟು ಎಡಕೆ ಹೊರಳಿದರೆ,
ಕಾವೇರಿ
ಬೀದಿ;
ಪೈಸಕೊಂದು ಬಿಸ್ಕತ್ತಿನಂಗಡಿ-
ರಾಮು ಅಂಗಡಿ;
ಅಲ್ಲೀಗ ನೆಟ್ ಬ್ರೌಸಿಂಗ್ ಸೆಂಟರ್ ತಲೆಯೆತ್ತಿದೆ
ರಾಮುವೂ ಇಲ್ಲ, ರಾವಣನೂ ಇಲ್ಲ.

ಶಾಲೆಯಲ್ಲೆನ್ನೊಮ್ಮೆ ಕಚ್ಚಿ ನೆತ್ತರಿಸಿದ್ದ
ಗುಂಡಣ್ಣನಿನ್ನೂ ಇದ್ದಾನೆ, ಅವಗಿಂದು
ಹಲ್ಲು ಬಿದ್ದಿವೆ, ತಲೆಗೆ ನರೆ ಬಂದಿದೆ

ನನ್ನೊಡನೆ ಬಚ್ಚಲು ಬಿದ್ದು,
ಗೋಲಿ ಗಜ್ಜುಗವಾಡಿ,
ಚಿಣ್ಣಿ-ದಾಂಡನು ಬಡಿದು,
ದೊಣ್ಣೆಯಾಡಿದ ಸಹ-
ಧರ್ಮಚಾರಿಗಳಿಂದು
ಅಪ್ಪಂದಿರಾಗಿದ್ದಾರೆ;
ಮಕ್ಕಳು
ಹೊಂ-ವರ್ಕು ಬುಕ್ಕಿನಲ್ಲಿ ತಲೆಹುಗಿದಿವೆ.

ಸಂಜೆ ಐದಕ್ಕಿಹುದು ಬೆಂಗಳೂರಿನ ಬಸ್ಸು,
ಹೊಚ್ಚ'ಹೊಸ' ಉದಯರಂಗ, ಎಕ್ಸ್ ಪ್ರೆಸ್ಸು.
ಕಿವಿಗೆ ಹತ್ತಿಯ ಜಡಿದು ಸಣ್ಣ ನಿದ್ದೆಯ ಬಡಿದು
ಕಣ್ಣು ಬಿಡುವಷ್ಟರಲಿ ಬೆಂಗಳೂರು,
ಬಿದ್ದಿಹುದು ಕೆಲಸಗಳು ನೂರು ನೂರು!