Thursday, March 16, 2017

ಕಲೆಗೆ ಕಟ್ಟೆಲ್ಲಯ್ಯಾ...

ರೇಡಿಯೋ ನಮ್ಮ ದಿನಚರಿಯನ್ನು ನಿಯಂತ್ರಿಸುತ್ತಿದ್ದ ಕಾಲ ಅದು.  ನನ್ನ ಬಾಲ್ಯದ ಬೆಳಗುಗಳು ಶುರುವಾಗುತ್ತಿದ್ದುದೇ ನಮ್ಮ ತಂದೆಯವರ ರೇಡಿಯೋದಲ್ಲಿ ಬೆಳಗ್ಗೆ ಐದಕ್ಕೋ ಐದೂವರೆಗೋ ಅದಾವುದೋ ಸ್ಟೇಷನ್ನಿನಿಂದ ಮೊಳಗುತ್ತಿದ್ದ ಹಮ್ದ್ ಒ ನಾತ್ - ಇಸ್ಲಾಮ್ ಭಕ್ತಿಗೀತೆಗಳ ಕಾರ್ಯಕ್ರಮದಿಂದ. ಬೆಳಗಿನ ಮೌನವನ್ನು ಮೆಲ್ಲಮೆಲ್ಲಗೆ ಸರಿಸುತ್ತಾ, ಮಂದ್ರವೂ ಅಲ್ಲದ, ಕೀರಲೂ ಅಲ್ಲದ, ಸಹಜ ಧ್ವನಿಯಲ್ಲಿ ಹೊಮ್ಮುತ್ತಿದ್ದ ಗೀತೆಗಳು ವಾತಾವರಣದಲ್ಲಿ ಅದೊಂದು ರೀತಿಯ ಪ್ರಸನ್ನತೆಯನ್ನು ಪಸರಿಸುತ್ತಾ ಬೆಳಗಿನ ಸಕ್ಕರೆನಿದ್ದೆಯ ಸಿಹಿಯನ್ನು ಹೆಚ್ಚಿಸುತ್ತಿತ್ತು.  ಅದಾದಮೇಲೆ ಆರು ಗಂಟೆಗೆ ಬೆಂಗಳೂರು ಕೇಂದ್ರದ ಪ್ರಸಾರ ಶುರುವಾಗುತ್ತಿತ್ತು - ಒಂದೆರಡು ನಿಮಿಷ ನಾದಸ್ವರವಾದನ, ವಂದೇಮಾತರಂ, ಆಮೇಲೆ ಇಂಗ್ಲಿಷಿನಲ್ಲಿ ವಾರ್ತೆಗಳು, ಅನಂತರ ಗೀತಾರಾಧನ - ಭಕ್ತಿಗೀತೆಗಳ ಕಾರ್ಯಕ್ರಮ - ಹೀಗೆ ಸಾಗುತ್ತಿತ್ತು.  ಸಾಹಿತ್ಯ ಕಿವಿಗೆ ಬಿದ್ದರೂ ಅರ್ಥವಾಗದ ಕಾಲ, ಈ ಹಮ್ದ್ ನಾತ್ ಗೀತೆಗಳಲ್ಲಿ ಕೆಲವು - ಅಪ್ನಾ ಕ್ಯಾ ಹೈ, ತಮಾಮ್ ಉನ್ಕಾ ಹೈ; ಯೆಹ್ ಸಬ್ ತುಮ್ಹಾರಾ ಕರಮ್ ಹೈ ಆಕಾ ಮುಂತಾಗಿ ಹಲವು ಗೀತೆಗಳು ಇವತ್ತಿಗೂ ಕಿವಿಗಳಲ್ಲಿ ಅಚ್ಚೊತ್ತಿವೆ (ಹಾಡುತ್ತಿದ್ದ ಕಲಾವಿದರಾರೋ ಪರಿಚಯವಾಗದ ವಯಸ್ಸದು - ಆ ಮಾಧುರ್ಯವೂ ಆರ್ತತೆಯೂ ಸರಳತೆಯೂ ಮತ್ತೆ ಸಿಕ್ಕೀತೇ ಎಂದು ಇಂಟರ್ನೆಟ್ಟಿನಲ್ಲಿ ಹುಡುಕಿ ವಿಫಲನಾಗಿದ್ದೇನೆ).  ನಾದಮಾಧುರ್ಯವನ್ನು ಮೀರಿ ಹಾಡಿನಲ್ಲಿನ ’ಮಾತು’ ಸುಮಾರಾಗಿ ಅರ್ಥವಾಗತೊಡಗಿದ ಮೇಲೂ, ಭಾವವದಲ್ಲಾಗಲೀ ಭಕ್ತಿಯಾಗಲೀ ಈ ಗೀತೆಗಳು ನಮ್ಮದೇ ವಚನ-ದಾಸರ ಪದಗಳಿಂದ ಹೊರಗಿನವೆನಿಸಲಿಲ್ಲವೆನ್ನುವುದು ನನ್ನ ಅನುಭವ.   "ಕಿಸೀ ಕಾ ಎಹೆಸಾನ್ ಕ್ಯೂನ್ ಉಠಾಯೇನ್, ಕಿಸೀ ಕೊ ಹಾಲಾತ್ ಕ್ಯೂನ್ ಬತಾಯೇನ್; ತುಮ್ ಹಿ ಸೆ ಮಾಂಗೇಂಗೆ ತುಮ್ ಹೀ ದೋಗೇ (ಯಾರ ನೆರವನೋ ಕೇಳುವುದೇಕೆ, ಮತ್ತಾರೊಳೊ ಅಳಲನು ಪೇಳುವುದೇಕೆ; ಬೇಡುವೆವು ನಿನ್ನೊಬ್ಬನನೆ ನೀನೀವೆ ಬೇಡಿದ್ದೆಲ್ಲವ)" ಈ ಸಾಲು, "ಹಾಡಿದರೆ ಎನ್ನ ಒಡೆಯನ ಹಾಡುವೆ, ಬೇಡಿದರೆ ಎನ್ನ ಒಡೆಯನ ಬೇಡುವೆ, ಒಡೆಯಗೆ ಒಡಲನು ತೋರುವೆ ಎನ್ನ ಬಡತನ ಬಿನ್ನಹ ಮಾಡುವೆ" ಎಂಬ ದಾಸವಾಣಿಗಿಂತ ಬೇರೆನಿಸುವುದೇ?    ಈ ಶರಣಾಗತಿ, ಪ್ರಪತ್ತಿ, ಏಕದೈವಾರಾಧನೆ, ಇವೆಲ್ಲ ಈ ನೆಲದ ಪರಿಕಲ್ಪನೆಗಳೇ ತಾನೆ! 

ಖವ್ವಾಲಿಗಳ ಕಡೆ ನಮ್ಮ ತಂದೆಯವರಿಗಿದ್ದ ಸೆಳೆತ ಕೇವಲ ಸಂಗೀತದ ಗಮ್ಮತ್ತಿನ ಕುರುಡು ಸೆಳೆತವಾಗಿರಲಿಲ್ಲ, ಅಲ್ಲೊಂದು ಅನುಸಂಧಾನವೂ ಇತ್ತೆಂಬುದು ಹಿನ್ನೋಟದಲ್ಲಿ ನನಗನಿಸಿದೆ.  ಎಷ್ಟೋ ಬಾರಿ ಅಲ್ಲೊಂದು ಇಲ್ಲೊಂದು ಸಾಲುಗಳ ಅರ್ಥ ಕೇಳಿದಾಗ, ಅವರು ಅರ್ಥವನ್ನು ಕನ್ನಡದಲ್ಲಿ ಹೇಳುವುದಲ್ಲದೇ ಅದೇ ಭಾವಮುದ್ರೆಯನ್ನು ದಾಸರ ಪದಗಳಿಂದಲೋ ವಚನಗಳಿಂದಲೋ ತಂದೊದಗಿಸುತ್ತಿದ್ದುದೂ ಉಂಟು.  ಹೀಗಾಗಿ, ಕಲೆಯ ಮಟ್ಟದಲ್ಲಿರಲಿ, ಧರ್ಮದ, ಅನುಭಾವದ ಮಟ್ಟದಲ್ಲೂ ನಮಗಿವು ಹೊರಗಿನವೆಂದು ಅನ್ನಿಸಿರಲೇ ಇಲ್ಲ.  ಇವತ್ತು ಬಲವಂತವಾಗಿಯಾದರೂ ತಂದುಕೊಳ್ಳಬೇಕಾಗಿರುವ ’ಸರ್ವಧರ್ಮಸಮನ್ವಯ’, ಆ ಪದದ ಪರಿಚಯವೂ ಇಲ್ಲದ ಬಾಲ್ಯದಲ್ಲಿ, ಬೆಳಗಿನ ಸವಿ-ಅರೆನಿದ್ದೆಯ ರೂಪದಲ್ಲಿ ನನ್ನದಾಗಿದ್ದು, ನನಗೊದಗಿದ ಬಹು ದೊಡ್ಡ ಸಂಸ್ಕಾರವೆಂದೇ ನನ್ನೆಣಿಕೆ.

ಮೊನ್ನೆ ದೂರದರ್ಶನ ವಾಹಿನಿಯೊಂದರಲ್ಲಿ ಸುಹಾನಾ ಎಂಬ ಹೆಣ್ಣುಮಗಳು ’ಹಿಂದೂ’ ಭಕ್ತಿಗೀತೆ ಹಾಡಿದ್ದನ್ನೇ ಒಂದು ಅದ್ಭುತವೆಂಬಂತೆ ಕಾರ್ಯಕ್ರಮ ನಿರ್ವಾಹಕರು ಹಿಗ್ಗಾಮುಗ್ಗಾ ಕೊಂಡಾಡಿದ್ದೂ, ಅದೇ ಕಾರಣಕ್ಕಾಗಿ ಆಕೆ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದದ್ದೂ, ನೋಡಿದಾಗ, ಕಳೆದುಹೋದ ಪ್ರಸನ್ನಬಾಲ್ಯ ನೆನಪಾಯಿತು.  ಘಟನೆಯೇ ಅಲ್ಲದ ಘಟನೆಗೆ ಇಷ್ಟು ಹುಯ್ಯಲೆಬ್ಬಿಸುವ ನಾವು, ಕಾಲದಿಂದ ನಮ್ಮನ್ನು ಬೆಸೆದಿರುವ ಧಾರ್ಮಿಕ ಸಾಮರಸ್ಯವನ್ನು ಕಾಣದೇ ಹೋಗುತ್ತಿದ್ದೇವೆಯೇ? ಎಷ್ಟು ಜನ ಮುಸ್ಲಿಮ್ ಭಕ್ತರು ಹಿಂದೂ ದೇವಾಲಯಗಳಿಗೆ ಹರಕೆ ಹೊರುತ್ತಾರೆ, ಹಿಂದೂಗಳು ದರ್ಗಾಗಳಿಗೆ ಹರಕೆ ಸಲ್ಲಿಸಿ ಸಕ್ಕರೆ ಪ್ರಸಾದ ಕೊಂಡು ಬರುತ್ತಾರೆ, ಎಷ್ಟು ಊರೊಟ್ಟಿನ ಹಿಂದೂ ದೇವಾಲಯಗಳ ಆಡಳಿತ ಮಂಡಲಿಯಲ್ಲಿ ಊರಿನ ಗಣ್ಯ ಮುಸ್ಲಿಮರಿರುತ್ತಾರೆ! ಇನ್ನು ಹಿಂದೂ ಮುಸ್ಲಿಂ ಭಾವೈಕ್ಯವನ್ನು ಸಾರಿದ, ನಮ್ಮೆಲ್ಲರ ಒಡೆಯನೊಬ್ಬನೇ ಎಂಬ ಸತ್ಯವನ್ನು ಪದೇಪದೇ ಎತ್ತಿಹಿಡಿದ ಅದೆಷ್ಟು ಸೂಫೀ ಸಂತರು ಈ ನೆಲದಲ್ಲಿ ಆಗಿಹೋಗಿಲ್ಲ!  ಇರಲಿ, ಧಾರ್ಮಿಕ-ಆಧ್ಯಾತ್ಮಿಕ ಸ್ತರದಲ್ಲೇ ಈ ಪರಿಯ ಸಾಮರಸ್ಯ ಸಾಧಿಸಿದ ಈ ಮಣ್ಣಿನ ಗುಣ, ಕಲೆಯಲ್ಲಿ ಧರ್ಮದ ಭೇದವನ್ನೆಣಿಸಿದ ಉದಾಹರಣೆಗಳಿವೆಯೇ? ಧರ್ಮವೊಂದು ಸಂಗೀತವನ್ನು ’ಹರಾಮ್’ ಎನ್ನುತ್ತದೆನ್ನುವುದು, ಸ್ವತಃ ಧಾರ್ಮಿಕರ ನಡುವೆಯೇ ವಿವಾದಕ್ಕೊಳಪಟ್ಟ ವಿಷಯ.  ಆದರೆ, ಕಲಾವಿದ, ಅದೊಂದಕ್ಕೂ ತಲೆ ಕೆಡಿಸಿಕೊಂಡದ್ದೇ ಇಲ್ಲ!  ಭಾರತೀಯ, ಅದರಲ್ಲೂ ಹಿಂದೂಸ್ತಾನೀ ಸಂಗೀತಕ್ಕೆ ಬಹುದೊಡ್ಡ ಕೊಡುಗೆ ನೀಡಿದವರು ಮುಸ್ಲಿಮರೆಂಬುದನ್ನು ಮರೆಯುವಂತಿಲ್ಲ - ಸ್ವತಃ ತಾನ್ಸೇನನ ಮಕ್ಕಳಾದ ಬಿಲಾಸ್ ಖಾನ್, ತಾನತರಂಗ್ ಖಾನರಿಂದ ಹಿಡಿದು ತೀರ ಕಳೆದ ಶತಮಾನದ ಅಮೀರ್ ಖಾನರವರೆಗೆ ಎಷ್ಟು ಜನ!  ಅವರಲ್ಲಿ ಹಲವರು ಸ್ವತಃ ಘರಾನೆಗಳನ್ನು ಹುಟ್ಟುಹಾಕಿದವರು, ಹಲವರು ಕಳೆಗುಂದಿದ್ದ ಘರಾನೆಗಳನ್ನು ಉಜ್ಜಿ ಹೊಳಪು ನೀಡಿದವರು.  ಒಂದು ಕಾಲಕ್ಕೆ ಇದು ಎಷ್ಟು ಮುಸ್ಲಿಂ ಮಯವಾಗಿತ್ತೆಂದರೆ, ಉತ್ತರಾದಿ ಸಂಗೀತವೆಂದರೆ ಮುಸಲರ ಸಂಗೀತವೆನ್ನುವಷ್ಟು.  ಆದರೆ ಇವರೆಲ್ಲ ನೀಡಿದ್ದು ಅದೆಂಥಾ ದೈವೀ ಗಾನ!  ಇದನ್ನು ’ಹರಾಮ್’ ಎನ್ನಲಾದೀತೇ?  ಸಂಗೀತಕ್ಕೆ ಕಲೆಗೆ ಇನ್ನಿಲ್ಲದಂತೆ ಪ್ರೋತ್ಸಾಹ ನೀಡಿದ ಮುಘಲ್ ಅರಸರು ಸ್ವತಃ ಸಂಗೀತಕಲೆಯಲ್ಲಿ ನಿಷ್ಣಾತರಾಗಿದ್ದರೆಂಬುದನ್ನೂ ಮರೆಯುವಂತಿಲ್ಲ (ಕೆಲವು ಅಪವಾದಗಳನ್ನುಳಿದು).  ಧರ್ಮದ ಕಟ್ಟಿರಲಿ, ಸಂಗೀತಕ್ಕೆ ಲಿಂಗದ ಕಟ್ಟಾದರೂ ಇದೆಯೇ? ಉಹೂಂ!  ಸಾಂಪ್ರದಾಯಿಕವಾಗಿ ಸಂಗೀತನೃತ್ಯಗಳು ಸ್ತ್ರೀಯರದೇ ಭದ್ರಕೋಟೆ.  ಈಗ ಬಿಡಿ, ಈ ಹಿಂದೆಯೂ ಅದೆಷ್ಟು ಜನ ವಿದುಷಿಯರು ಆಗಿಹೋದವರು!   ಗೋಹರ್ ಜಾನ್, ಗೋಹರ್ ಬಾಯಿ ಕರ್ನಾಟಕಿ, ಅಮಿರ್ ಬಾಯಿ ಕರ್ನಾಟಕಿ, ಅಬ್ದುಲ್ ಕರೀಮ್ ಖಾನರ ಶಿಷ್ಯೆ ರೋಷನಾರಾ ಬೇಗಂ, ಮತ್ತೆ ನಮ್ಮವರೇ ಆದ ಬೆಂಗಳೂರು ನಾಗರತ್ನಮ್ಮ (ಈಕೆಯ ಪ್ರಸಿದ್ಧಿ ಸಂಗೀತವೊಂದಕ್ಕೇ ಅಲ್ಲ - ತಿರುವಯ್ಯಾರಿನಲ್ಲಿ ಪಾಳಾಗಿದ್ದ ಸಂತ ತ್ಯಾಗರಾಜರ ಸಮಾಧಿಸ್ಥಳವನ್ನು ಪತ್ತೆಹಚ್ಚಿ, ಅದಕ್ಕೊಂದು ಭವನವನ್ನು ನಿರ್ಮಾಣಮಾಡಿ ವರ್ಷವರ್ಷ ಆರಾಧನೆ ನಡೆಯುವಂತೆ ಅನುವುಗೊಳಿಸಿದ್ದು, ಅದಕ್ಕೋಸ್ಕರ ತನ್ನೆಲ್ಲ ಸಂಪತ್ತನ್ನೂ ಸುರಿದದ್ದು ಈ ಮಹಾನ್ ಚೇತನ.  ಇವತ್ತು ತಿರುವಯ್ಯಾರು ದಕ್ಷಿಣಾದಿ ಸಂಗೀತದ ಶ್ರದ್ಧಾಕೇಂದ್ರವಾಗಿದ್ದರೆ ಅದರ ಶ್ರೇಯಸ್ಸು ಶ್ರೀಮತಿ ನಾಗರತ್ನಮ್ಮನವರಿಗೆ ಸೇರತಕ್ಕದ್ದು).  ಒಂದು ಕಾಲಕ್ಕೆ ’ಕುಲೀನ’ಸ್ತ್ರೀಯರು ಸಂಗೀತ-ನೃತ್ಯಗಳಲ್ಲಿ ಈಡುಪಡುವುದಕ್ಕೆ ನಿಷೇಧವಿದ್ದದ್ದು ನಿಜ, ಆದರೆ ಅದು ಕೇವಲ ಒಂದು ಕಾಲಘಟ್ಟವಷ್ಟೇ.  ಈಗಂತೂ ಆ ’ನಿಷೇಧ’ ಹೇಳಹೆಸರಿಲ್ಲದಂತೆ ಮಾಯವಾಗಿದೆಯಲ್ಲವೇ?  ಉತ್ತರಾದಿ ಸಂಗೀತವಿರಲಿ, ಇಸ್ಲಾಮಿಕ್ ಭಕ್ತಿಸಂಗೀತದಲ್ಲೂ ಆ ಕಟ್ಟು ಎಲ್ಲಿದೆ ಇವೊತ್ತು?  ಸಂಗೀತ ಸಾಮ್ರಾಜ್ಞಿ ಪರ್ವಿನ್ ಸುಲ್ತಾನಾ, ಬೇಗಮ್ ಅಕ್ತರ್, ಅಬಿದಾ ಪರ್ವೀನ್ ಇವರಾರ ಹೆಸರನ್ನೂ ನಾವು ಕೇಳಿಲ್ಲವೇ? (ಹೆಸರುಗಳು ಪ್ರಾತಿನಿಧಿಕವಷ್ಟೇ, ಇಂದು ಖ್ಯಾತನಾಮರಾದ ವಿವಿಧ ಧರ್ಮಗಳ ಎಲ್ಲ ಸ್ತ್ರೀ ಪುರುಷ ಕಲಾಕಾರರ ಹೆಸರುಗಳನ್ನು ಬರೆದರೆ ಗ್ರಂಥವೇ ಬೇಕಾದೀತು).

ಸಂಗೀತವೇನೋ ಹೋಗಲಿ, ಆದರೆ ಅದರಲ್ಲಿ ’ಮಾತು’ ಇದೆಯಲ್ಲ, ಅದು ’ಅನ್ಯ’ ಧರ್ಮಕ್ಕೆ ಕಟ್ಟುಬಿದ್ದಿದೆಯಲ್ಲವೇ ಎನ್ನುವುದಾದರೆ, ಅದಕ್ಕೆ ಸಮಾಧಾನ ಈ ಲೇಖನದ ಮೊದಲಲ್ಲೇ ಇದೆ.  ಕಟ್ಟುಗಳಿರುವುದು ನೋಡುವವನ ಕಣ್ಣಿನಲ್ಲೇ ಹೊರತು ಗೀತೆಗಳಲ್ಲಲ್ಲ.  (ಅ)ಧಾರ್ಮಿಕ ಸಾಹಿತ್ಯವೆಂಬ ಕಾರಣಕ್ಕೆ ಮೇಲೆ ವಿವರಿಸಿದ ಮಹನೀಯ ಸಂಗೀತಗಾರರು ಯಾರೂ ತಾವು ಹಾಡುವ ಬಂದಿಶ್, ಠುಮ್ರಿಗಳಲ್ಲಿ ಸಾಹಿತ್ಯವನ್ನು ಬಿಟ್ಟು ಬರೀ ಸ್ವರವನ್ನೇ ಹಾಡಿದ್ದಿಲ್ಲ - ಅಂದ ಮಾತ್ರಕ್ಕೆ ಅವರು ಧರ್ಮಭ್ರಷ್ಟರಾಗಿದ್ದೂ ಇಲ್ಲ ಎಂಬುದನ್ನು ಗಮನಿಸಬೇಕು.  ಅಷ್ಟೇಕೆ, ಭಕ್ತಿಪ್ರಧಾನವೆಂದೇ ಹೆಸರಾದ ಕರ್ನಾಟಕಸಂಗೀತದಲ್ಲೇ ಸಾಧನೆಯ ಉತ್ತುಂಗಕ್ಕೇರಿದ ’ಹಿಂದು’ ಅಲ್ಲದ ಮಹನೀಯರಿದ್ದಾರೆ.  ಪಕ್ಕನೆ ಯಾರಿಗೂ ಹೊಳೆಯಬಹುದಾದ ಉದಾಹರಣೆ, ಡಾ. ಯೇಸುದಾಸರದು.  ಇನ್ನು ಹಿಗ್ಗಿನ್ಸ್ ಭಾಗವತರ್ ಎಂದೇ ಹೆಸರಾಗಿದ ಅಮೆರಿಕೆಯ ಶ್ರೀ ಜಾನ್ ಬಿ ಹಿಗಿನ್ಸ್ ಹೆಸರನ್ನು ಕರ್ನಾಟಕಸಂಗೀತ ರಸಿಕರು ಮರೆಯುವುದಕ್ಕಿಲ್ಲ.  ಅಂತೆಯೇ ಶೇಕ್ ಚಿನ್ನಾ ಮೌಲಾನ, ನಾಗೋರ್ ಎಸ್ ಎಮ್ ಎ ಖಾದಿರ್, ನಾಗೋರ್ ಯೂಸುಫ್, ದಾಸರ ಪದಗಳ ಕಂಪು ಹರಡುತ್ತಿರುವ ಹುಸೈನ್ ಸಾಬ್, ಫಯಾಜ್ ಖಾನ್, ಖಾನ್ ಸಹೋದರರೆಂದೇ ಹೆಸರಾದ ಉಸ್ತಾದ್ ರಾಯಿಸ್ ಬಲೇ ಖಾನ್ ಮತ್ತು ಹಫೀಜ಼್ ಬಲೇ ಖಾನ್... ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.  ಅಷ್ಟೇಕೆ, ಸ್ವತಃ ಉಸ್ತಾದ್ ಅಬ್ದುಲ್ ಕರೀಮ್ ಖಾನರು ಕರ್ನಾಟಕ ಸಂಗೀತಕೃತಿಗಳಾದ ರಾಮ ನೀ ಸಮಾನಮೆವರು (ಖರಹರಪ್ರಿಯ) ಮತ್ತು ಎಂತನೇರ್ಚಿನ (ಸಾವೇರಿ) ಎಂಬ ಎರಡು ಕೃತಿಗಳನ್ನು ಹಾಡಿರುವ ಅಪರೂಪದ ಧ್ವನಿಮುದ್ರಣ ಲಭ್ಯವಿದೆ (ಇವು ’ಹಿಂದೂ’ ಭಕ್ತಿರಚನೆಗಳೆಂದು ಪ್ರತ್ಯೇಕ ಹೇಳಬೇಕಿಲ್ಲವಲ್ಲ). 

ಸಂಗೀತ, ಸಾಹಿತ್ಯ, ಕಲೆಗಳು ಅಭಿವ್ಯಕ್ತಿಸಾಧನಗಳು.  ಅಭಿವ್ಯಕ್ತಿಯ ಹೆಸರಿನಲ್ಲಿ ಬರುವ ವಿಕೃತಿಗಳನ್ನು, ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ತಡೆಗಟ್ಟಲು ಕಾನೂನು ಮಾಡಬಹುದು, ಧರ್ಮಶಾಸ್ತ್ರದ ಕಟ್ಟುಗಳನ್ನು ಹಾಕಬಹುದು.  ಆದರೆ ಹಾಗೆ ಸಮಾಜಕ್ಕೆ ಕೆಡಕುಂಟುಮಾಡದ ಶುದ್ಧ ಅಭಿವ್ಯಕ್ತಿಯನ್ನು ಯಾವ ಕಟ್ಟುಕಟ್ಟಲೆಗಳೂ ತಡೆಯಲು ಸಾಧ್ಯವಿಲ್ಲ - ಅದು ದೇಶ ಲಿಂಗ ಧರ್ಮಗಳಿಗೆ ಅತೀತವಾದುವು. 

ದೇಶ ಕಂಡ ಅತ್ಯುತ್ತಮ ಕಲಾವಿದರಲ್ಲೊಬ್ಬರಾದ ಶಹನಾಯ್ ಸಾಮ್ರಾಟ್ ಉಸ್ತಾದ್ ಬಿಸ್ಮಿಲ್ಲಾ ಖಾನರು ಈ ಸಂಗೀತವೆಂಬ ’ಹರಾಮ್’ ಬಿಟ್ಟುಬಿಡಿರೆಂದು ಬೋಧಿಸಿದ ಧರ್ಮಗುರುವೊಬ್ಬರಿಗೆ ನೀಡಿದ ಉತ್ತರ ಮಾರ್ಮಿಕವಾಗಿದೆ:  "ನಾನೀಗ "ಅಲ್ಲಾಹು ಅಲ್ಲಾಹ್" ಎಂದು ಭೈರವ್ ರಾಗದಲ್ಲಿ ಹಾಡ್ತೇನೆ ಎಂದುಕೊಳ್ಳಿ.  ನೀವು ಅದನ್ನ ಅಲ್ಲಾಹ್ ಎನ್ನುತ್ತೀರಿ, ಆದರೆ ಅದರ ರಾಗವಂತೂ ಭೈರವವೇ.  ಕೇಳುವವರು ರಾಗವನ್ನ ಕೇಳುತ್ತಾರೆ, ಸ್ಮರಿಸುವವರು ಭಗವಂತನನ್ನು ಸ್ಮರಿಸುತ್ತಾರೆ, ಇದರಲ್ಲಿ ಹರಾಮ್ ಏನು ಬಂತು?"

ಅದೂಂದು ಅಲೌಕಿಕ ಶಕ್ತಿ - ಅದನ್ನು ಅಲ್ಲಾಹ್ ಎನ್ನಿ, ರಾಮನೆನ್ನಿ, ಶಿವನೆನ್ನಿ - ಎದೆಯೆದೆಯಲ್ಲೂ ಒಂದು ಜ್ಯೋತಿಯನ್ನು ಹೊತ್ತಿಸಿ ಇಟ್ಟಿದೆ - ಅದೇ ಪ್ರೀತಿ.  ಅದನ್ನು ಉದ್ದೀಪಿಸುವ ಸಾಧನಗಳೇ ಕಲೆ, ಸಾಹಿತ್ಯ, ಸಂಗೀತಗಳು.  ಅವನ್ನು ಉಪಯೋಗಿಸಿಕೊಂಡು ಎದೆಯ ಬೆಳಕನ್ನು ಕಾಪಿಟ್ಟುಕೊಳ್ಳುವುದು ನಮ್ಮ ಕೈಲೇ ಇದೆಯಲ್ಲವೇ?

ಅಂಧೇರೇ ಮೆ ದಿಲ್ ಕೇ ಚಿರಾಗ್ ಏ ಮೊಹಬ್ಬತ್
ಏ ಕಿಸ್ ನೇ ಜಲಾಯಾ ಸವೇರೇ ಸವೇರೇ

(ಚಿತ್ರಕೃಪೆ: ಅಂತರ್ಜಾಲ)

ಸೂ:  ಈ ಲೇಖನ ಇಂದಿನ ವಿಶ್ವವಾಣಿ ಪತ್ರಿಕೆಯ ’ಗುರು’ ವಿಭಾಗದಲ್ಲಿ "ಕಟ್ಟುವಿರೋ ಕಟ್ಟಿ ಕಲಾಧರ್ಮ" ಎಂಬ ಶೀರ್ಷಿಕೆಯಡಿ ಪ್ರಕಟವಾಗಿದೆ.  ಪ್ರಕಟಿತ ಲೇಖನದ ಕೊಂಡಿ ಇಲ್ಲಿದೆ:
http://epaper.vishwavani.news/bng/e/bng/16-03-2017/15