Thursday, November 29, 2012

ಅವಧಾನಕಲೆ

ಇದೇ ತಿಂಗಳ ೩೦ರಿಂದ ಮೂರುದಿನ ಬೆಂಗಳೂರಿನಲ್ಲಿ ತುಂಬುಗನ್ನಡದ ಶತಾವಧಾನ ಕಾರ್ಯಕ್ರಮ ಜರುಗಲಿದೆ.  ಜೊತೆಗೆ ಅವಧಾನವೆಂದರೆ ಏನೆಂಬ ಕುತೂಹಲದ ಪ್ರಶ್ನೆ ಅನೇಕ ಆಸಕ್ತ ಮಿತ್ರರಿಂದ ಬಂದಿದೆ.  ಒಂದು ಕಾಲದಲ್ಲಿ ತನ್ನ ಸಕಲ ವೈಭವದೊಡನೆ ವಿಜೃಂಭಿಸಿ ಈಗ ಹಿನ್ನೆಲೆಗೆ ಸರಿದಿರುವ ಈ ಅಭಿಜಾತ ಕಲೆಯ ಕಿರುಪರಿಚಯ ಮಾಡಿಕೊಡುವುದು, ತನ್ಮೂಲಕ ಕಾರ್ಯಕ್ರಮದ ಆಸ್ವಾದಕ್ಕೆ ಅನುವು ಮಾಡಿಕೊಡುವುದು ಈ ಲೇಖನದ ಉದ್ದೇಶ.

ಅವಧಾನವೆಂದರೆ ಸರಿಸುಮಾರು attention ಎಂಬ ಅರ್ಥ.  ಚಿತ್ತೈಕಾಗ್ರ್ಯಂ ಅವಧಾನಂ ಎಂಬ ಮಾತಿದೆ.  ಅನೇಕ ಗೊಂದಲ/ಗಲಿಬಿಲಿಗಳ ನಡುವೆಯೂ ಚಿತ್ತವನ್ನು ಏಕಾಗ್ರಗೊಳಿಸಿ ಕೆಲಸವೊಂದನ್ನು ನೆರವೇರಿಸುವುದೇ ಅವಧಾನದ ಮೂಲ ತತ್ತ್ವ.

ಸಾಮಾನ್ಯವಾಗಿ ಸವಾಲ್-ಜವಾಬಿನ ರೂಪದಲ್ಲಿರುವ ಅವಧಾನ ಕಾರ್ಯಕ್ರಮದ ಕೇಂದ್ರಬಿಂದು ಅವಧಾನಿಯೇ.  ಅವನನ್ನು ಸುತ್ತುವರಿದು ಪ್ರಶ್ನಿಸುವವರು ಅನೇಕ ಜನ.  ಇವರನ್ನು ಪೃಚ್ಛಕ (ಪ್ರಶ್ನಿಸುವವ)ರೆನ್ನುತ್ತಾರೆ.  ವೇದಾವಧಾನ, ಗಣಿತಾವಧಾನ, ಸಂಗೀತಾವಧಾನ, ಸಾಹಿತ್ಯಾವಧಾನ, ಹೀಗೆ ಒಂದು ಸಾಂಸ್ಕೃತಿಕ ಕಲೆಯಾಗಿ ಅವಧಾನಕಲೆ ಬಹು ಹಿಂದಿನಿಂದ ಚಾಲ್ತಿಯಲ್ಲಿದೆ.  ಅವಧಾನ ಕಾರ್ಯಕ್ರಮವೊಂದು ಇವೆಲ್ಲದರ ಮಿಶ್ರಣವೂ ಆಗಿರಬಹುದು.  ತೆಲುಗಿನಲ್ಲಿ ಇದು ಇಂದಿಗೂ ಬಹು ಜನಪ್ರಿಯ ಸಾಹಿತ್ಯ ಕ್ರೀಡೆಯಾಗಿ ಉಳಿದಿದೆ.  ಆದರೆ ಇದರ ಉಗಮ ಕನ್ನಡದ್ದು ಎಂದು ಹೇಳಲಾಗುತ್ತದೆ.

ಅವಧಾನದಲ್ಲಿ ಭಾಗವಹಿಸುವ ಪೃಚ್ಛಕರ ಸಂಖ್ಯೆಯ ಆಧಾರದ ಮೇಲೆ ಅವಧಾನವು ಗುರುತಿಸಲ್ಪಡುತ್ತದೆ.  ಅದು ಅಷ್ಟಾವಧಾನ ಅಥವ ಶತಾವಧಾನವೇ ಆಗಬೇಕೆಂದಿಲ್ಲ.  ಶೋಡಷಾವಧಾನ (ಹದಿನಾರು ಪೃಚ್ಛಕರು) ಅಷ್ಟಾದಶಾವಧಾನ (ಹದಿನೆಂಟು), ಶತಾವಧಾನ, ಸಹಸ್ರಾವಧಾನ ಅಷ್ಟೇಕೆ ಲಕ್ಷಾವಧಾನ (ಲಕ್ಷ ಜನ ಪೃಚ್ಛಕರು) ಸಹಾ ಚಾಲ್ತಿಯಲ್ಲಿತ್ತೆಂದು ಉಲ್ಲೇಖಗಳು ತಿಳಿಸುತ್ತವೆ.  ಅದರಲ್ಲಿ ಉತ್ಪ್ರೇಕ್ಷೆಯೇನೇ ಇರಲಿ ಶತಾವಧಾನವು ನಾವು ಕಂಡರಿತ ಅತಿ ದೊಡ್ಡ ಅವಧಾನ. 

ಚಿತ್ರಸಾಹಿತಿಯಾಗಿ ಖ್ಯಾತಿ ಪಡೆದ ಬೆಳ್ಳಾವೆ ನರಹರಿಶಾಸ್ತ್ರಿಗಳು ಓರ್ವ ಖ್ಯಾತ ಅವಧಾನಿಯೂ ಆಗಿದ್ದರು.  ಕನ್ನಡದಲ್ಲಿ ಮರೆಯಾಗಿದ್ದ ಅವಧಾನ ಕಲೆಯನ್ನು ಪುನರುತ್ಥಾನಗೊಳಿಸಿದ ಕೀರ್ತಿ ಶಾಸ್ತ್ರಿಗಳದು.  ಹಾಗೆಯೇ ನಮ್ಮ ದಿವಂಗತ ಪ್ರಧಾನಿ ಪಿ ವಿ ನರಸಿಂಹರಾವ್ ಸಹ ಅವಧಾನ ಕಾರ್ಯಕ್ರಮಗಳನ್ನು ನೀಡುತ್ತಿದ್ದರೆಂದು ಕೇಳಿದ್ದೇನೆ.  ಒಂದು ಸಾವಿರದ ಹತ್ತಿರ ಹತ್ತಿರ ಅವಧಾನಕಾರ್ಯಕ್ರಮಗಳನ್ನು ನೆಡೆಸಿದ ಬಹುಶ್ರುತ ವಿದ್ವಾಂಸ ರಾ. ಗಣೇಶರು ಇವತ್ತು ನಮ್ಮ ನಡುವಿರುವ ಏಕೈಕ ಶತಾವಧಾನಿ.

ಇವತ್ತು ಚಾಲ್ತಿಯಲ್ಲಿರುವ ಸಾಮಾನ್ಯ ಅಷ್ಟಾವಧಾನದಲ್ಲಿ ಪೃಚ್ಛಕರ ಕ್ರಮ ಹೀಗೆ.  ಎಂಟು ಜನ ಪೃಚ್ಛಕರಿರುತ್ತಾರೆ.  ಅವರಲ್ಲಿ ನಾಲ್ಕು ಜನ ಅವಧಾನಿಯ ನೆನಪಿನ ಶಕ್ತಿಯನ್ನು ಪರೀಕ್ಷಿಸುವವರಾದರೆ ಇಬ್ಬರು ಅವಧಾನಿಯ ಕಾವ್ಯ ಪ್ರೌಢಿಮೆ, ಓದಿನ ಉದ್ದಗಲಗಳನ್ನು ಪರೀಕ್ಷಿಸುವವರಾಗಿರುತ್ತಾರೆ.  ಇನ್ನಿಬ್ಬರು ಪದೇಪದೇ ಅವಧಾನಿಗೆ ತಡೆಯನ್ನೊಡ್ಡುವುದರ ಮೂಲಕ ಅವನ ಏಕಾಗ್ರತೆಯನ್ನು ಅಗ್ನಿಪರೀಕ್ಷೆಗೊಳಡಿಸುತ್ತಾರೆ.

ಅವಧಾನಿಯು ಪ್ರತಿಯೊಬ್ಬ ಪೃಚ್ಛಕನ ಪ್ರಶ್ನೆಯನ್ನೂ ಸರದಿಯ ಮೇಲೆ ತೆಗೆದುಕೊಂಡು ಉತ್ತರಿಸುತ್ತಾ ಮುಂದುವರೆಯುತ್ತಾನೆ.  ಮೊದಲ ಆರೂ ಜನರಿಗೆ ಉತ್ತರಿಸಿದ ನಂತರ ಎರಡನೆಯ ಸುತ್ತು.  ಹೀಗೆ ಸಾಮಾನ್ಯವಾಗಿ ನಾಲ್ಕು ಸುತ್ತು ನಡೆಯುತ್ತದೆ.  ಕೊನೆಯ ಇಬ್ಬರು ಪೃಚ್ಛಕರು ಯಾವಾಗಲೆಂದರೆ ಆಗ ಮಧ್ಯಪ್ರವೇಶಿಸಬಹುದು. 

ಮೊದಲ ನಾಲ್ಕು ಪೃಚ್ಛಕರೆಂದರೆ:

ನಿಷೇಧಾಕ್ಷರ: ಈತ ಅವಧಾನಿಗೆ ಒಂದು ವಸ್ತುವಿನ ಮೇಲೆ ಒಂದು ಛಂದಸ್ಸಿನಲ್ಲಿ ಪದ್ಯವೊಂದನ್ನು ರಚಿಸಲು ಹೇಳುತ್ತಾನೆ.  ಆದರೆ ಅವಧಾನಿಯು ಹೇಳಿದ ಪ್ರತಿಯೊಂದು ಅಕ್ಷರಕ್ಕೂ, ಮುಂದಿನ ಅಕ್ಷರವನ್ನು ಊಹಿಸುತ್ತಾ ಅದನ್ನು ನಿಷೇಧಿಸುತ್ತಾ ಹೋಗುತ್ತಾನೆ.  ಅವಧಾನಿಯು ಈ ನಿಷೇಧವನ್ನು ಪರಿಗಣಿಸಿ ಬೇರೊಂದು ಅಕ್ಷರವನ್ನು ಬಳಸುತ್ತಾ ಸಾಗಬೇಕು.  ಉದಾಹರಣೆಗೆ ಗಣಪನ ಮೇಲೆ ಪದ್ಯವೊಂದನ್ನು ರಚಿಸಬೇಕಾಗಿದೆಯೆನ್ನೋಣ.  ಅವಧಾನಿಯು ಗಣಪತಿ ಎಂದು ಹೇಳಬೇಕೆಂದುಕೊಂಡು ಗ ಎನ್ನುತ್ತಾನೆ.  ಆದರೆ ಇದನ್ನು ಊಹಿಸುವ ಪೃಚ್ಛಕ ಣಕಾರವನ್ನು ನಿಷೇಧಿಸಿಬಿಡುತ್ತಾನೆ.   ಈಗ ಗಣಪತಿ ಎನ್ನುವಹಾಗಿಲ್ಲ.  ಬದಲಿಗೆ ಗಜ ಎಂದು ಹೇಳುತ್ತಾನೆ ಅವಧಾನಿ.  ಇದು ಗಜಮುಖ ಎಂದಾಗಬಹುದೆಂದು ಊಹಿಸಿದ ಪೃಚ್ಛಕ ಮಕಾರವನ್ನು ನಿಷೇಧಿಸುತ್ತಾನೆ.  ಆಗ ಅವಧಾನಿ ಗಜವದನ ಎಂಬುದನ್ನು ಮನಸ್ಸಿನಲ್ಲಿಟ್ಟು ವ ಎಂದು ಹೇಳಿದರೆ ಇದನ್ನೂ ಊಹಿಸಿದ ಪೃಚ್ಛಕ ದಕಾರವನ್ನು ನಿಷೇಧಿಸುತ್ತಾನೆ.  ಆದರೆ ಅವಧಾನಿಯ ಶಬ್ದಸಂಪತ್ತು ದೊಡ್ಡದು.  ಆತ ಗಜವದನ ಎಂಬುದರ ಬದಲಿಗೆ ಗಜವಕ್ತ್ರ ಎಂದು ಹೇಳಿ ಪದವನ್ನು ಪೂರ್ಣಗೊಳಿಸುತ್ತಾನೆ.  ಹೀಗೆ ಪೃಚ್ಛಕನ ತಡೆಯನ್ನೂ ಮೀರಿ ಗಣಪತಿ ಗಜವಕ್ತ್ರನಾಗುತ್ತಾನೆ.  ಆದರೂ ಉದ್ದಕ್ಕೂ ಆತನು ಛಂದೋನಿಯಮಗಳನ್ನು ಮರೆಯುವಂತಿಲ್ಲ!  ಹೀಗೆ ಪದ್ಯದ ಒಂದು ಸಾಲನ್ನು ಪೂರೈಸಿದ ಅವಧಾನಿ ಮುಂದಿನ ಪೃಚ್ಛಕನೆಡೆ ತಿರುಗುತ್ತಾನೆ.

ಸಮಸ್ಯಾಪೂರಣ:  ಈತ ಅವಧಾನಿಗೆ ಸಮಸ್ಯೆಯಂಥಾ ಸಾಲೊಂದನ್ನು ನೀಡುತ್ತಾನೆ.  ಇದು ನಾಲ್ಕು/ಆರು ಸಾಲಿನ ಪದ್ಯವೊಂದರ ಕೊನೆಯ ಸಾಲಾಗಿರುತ್ತದೆ, ಮತ್ತು ಕೇಳಲು ಅರ್ಥಹೀನವೋ ಅಸಮಂಜಸವೋ ಅಶ್ಲೀಲವೋ ಆಗಿರಬಹುದು.  ಅವಧಾನಿಯ ಕೆಲಸವೆಂದರೆ ಪದ್ಯದ ಉಳಿದ ಸಾಲುಗಳನ್ನು ಅದೇ ಛಂದಸ್ಸಿನಲ್ಲಿ ರಚಿಸಿ, ಆ ಮೂಲಕ ಕೊನೆಯ ಸಾಲಿಗೊಂದು ಸಮಂಜಸವಾದ ಅರ್ಥ ಬರುವಂತೆ ಮಾಡುವುದು.  ಉದಾಹರಣೆಗೆ ಸಮಸ್ಯೆಯೊಂದರ ಸಾಲು ಹೀಗಿದೆಯೆನ್ನಿ "ತಂದೆಯನೇ ಕೊಂದುತಿಂಬ ಸುತನತಿ ರಮ್ಯಂ"  ಇದೊಂದು ಕಂದಪದ್ಯದ ಕೊನೆಯ ಸಾಲು.  ಅರೇ! ಇದೊಳ್ಳೇ ತಮಾಷೆಯಾಯಿತಲ್ಲ!  ಮಗ ಎಲ್ಲಾದರೂ ತಂದೆಯನ್ನು ಕೊಲ್ಲುವುದೆಂದರೇನು, ಕೊಂದು ತಿನ್ನುವುದೇನು, ಹಾಗೆ ಕೊಂದು ತಿನ್ನುವ ಮಗ ರಮ್ಯವಾಗಿ ಕಾಣುವುದಾದರೂ ಹೇಗೆ?  ಅವಧಾನಿಯ ಚಾತುರ್ಯವಿರುವುದು, ಈ ಸಾಲಿನಲ್ಲಿ ಕಾಣುವ ಅನರ್ಥವನ್ನು ತೊಡೆದು ಹಾಕಿ ಅದಕ್ಕೊಂದು ಒಪ್ಪವಾದ ಅರ್ಥವನ್ನು ಕೊಡುವುದು.  ಇದಕ್ಕೆ ನಾನು ನೀಡುವ ಪರಿಹಾರ ಹೀಗೆ:

ಕಂದಂ ಕೊಂಡಾಟದೊಳಾ
ತಂದೆಯ ಮುಂದಲೆಯ ಜಗ್ಗಿ ಗರ್ಜಿಸುತಿಪ್ಪಂ
ತಿಂದಪೆನಿದೊ ನಾಂ ಪುಲಿಯೆನೆ
ತಂದೆಯನೇ ಕೊಂದು ತಿಂಬ ಸುತನತಿ ರಮ್ಯಂ

ಮಗು ತಂದೆಯೊಡನೆ ಆಟವಾಡುತ್ತಿದೆ.  "ನಾನು ಹುಲಿ, ನಿನ್ನ ತಿಂದುಬಿಡ್ತೀನಿ" ಎಂದು ಗರ್ಜಿಸುತ್ತಾ ತಂದೆಯನ್ನು ಜಗ್ಗಾಡುತ್ತಿದೆ.  ಇದು ಎಷ್ಟು ರಮ್ಯವಾದ ದೃಶ್ಯವಲ್ಲವೇ?  ಸಮಸ್ಯೆಯ ಸಾಲಿನಲ್ಲಿನ ಅನರ್ಥ ಹೀಗೆ ನೇರ್ಪಟ್ಟಿತು.  ಇದು ಪೃಚ್ಛಕನು ಸಿದ್ಧಪಡಿಸಿಟ್ಟುಕೊಂಡಿರುವ ಪರಿಹಾರ.  ಹೀಗೇ ಸ್ಥಳದಲ್ಲೇ ಅವಧಾನಿಯೂ ತನ್ನ ಪರಿಹಾರವನ್ನು ಕೊಡುತ್ತಾನೆ.  ಅದು ಬೇರೆಯೇ ಇರಬಹುದು.

ಶತಾವಧಾನಿ ಆರ್ ಗಣೇಶರ ಮೈಸೂರಿನ ಅಷ್ಟಾವಧಾನವೊಂದರಲ್ಲಿ ನಾನು ಕೊಟ್ಟ ಸಮಸ್ಯೆಯ ಸಾಲು ಹೀಗಿತ್ತು.  "ನಾನೀನೋನೀನೆನಾನೋ ನೆನೆನೆನೆನೆನೆ ನಾನೇನುನೀನೇನದೇನೋ".  ಸ್ರಗ್ಧರಾವೃತ್ತದಲ್ಲಿರುವ ಈ ಸಾಲು ಕೇಳುವುದಕ್ಕೆ ಅರ್ಥಹೀನವಾಗಿದೆ.  ಇದಕ್ಕೆ ಗಣೇಶರು ಕೊಟ್ಟ ಸಮಾಧಾನ ಹೀಗೆ:

ದೀನಂ ಸಂಗ್ರಾಮರಂಗಸ್ಥಿತ ನನರದೊ ಕಾಣ್ ಜಾರೆ ಕೋದಂಡ ಕಾಂಡಂ|
ಮಾನಾಮಾನಾವಲೀಢಂ ಮಥಿಸೆ ಮನದೊಳೇ ಕೃಷ್ಣನೊಲ್ದೀಯೆ ಗೀತಾ|
ಯಾನಂ ಧೈರ್ಯ ಪ್ರವಾಸಕ್ಕೆನೆ ಭವರಣದೊಳ್ ಚಿಂತಿಸುತ್ತೆಂದನಿನ್ನೇನ್|
ನಾನೀನೋ ನೀನೆನಾನೋ ನೆನೆನೆನೆನೆನೆ ನಾನೇನೊ ನೀನೇನದೇನೋ|

(ಸಂಗ್ರಾಮರಂಗದಲ್ಲಿ ಮುಂದಿನ ದಾರಿ ಕಾಣದೇ ಬಿಲ್ಲುಬಾಣಗಳನ್ನು ಕೆಳಗೆಸೆದು ಕೂತ ಪಾರ್ಥನಿಗೆ ಕೃಷ್ಣನು ಒಲಿದಿತ್ತ ಗೀತೆಯ ಸಾರ ಇದು "ನಾನೀನೋ, ನೀನೆ ನಾನೋ, ಯೋಚಿಸು... ನಾನೇನು, ನೀನೇನು ಅದೇನೆಂಬ ವಿವರಗಳನ್ನು ಯೋಚಿಸು - ಇದೊಂದು ಅಧ್ಯಾತ್ಮ ಚಿಂತನೆ)

ಅವಧಾನದ ಕೊನೆಯಲ್ಲಿ ಪೃಚ್ಛಕನೂ ಇದಕ್ಕೆ ತನ್ನ ಪರಿಹಾರವನ್ನೂ ಹೇಳಬೇಕಾಗುತ್ತದೆ.  ಇದಕ್ಕೆ ನನ್ನ ಪರಿಹಾರ ಹೀಗಿತ್ತು:

ನಾನಾ ವ್ಯಾಖ್ಯಾನ ಪೂರಂ ಬಹುಮಥಿತ ಮತಾಲಂಬ ಗಂಭೀರ ಪಾರಂ
ನೀನೀಗಳ್ ಭಾವಿಸಲ್ಕಿಂತಿರುತಿಹುದು ಕಣಾ ವೇದವೇದಾರ್ಥ ಸಾರಂ
ನಾನುಂ ನೀನೆಂಬುದುಂ ಪೇಳಿತರಬಹುತರೋಪಾಧಿಗಂ ಮೂಲಮೇನೈ
ನಾನೀನೋ ನೀನೆನಾನೋ ನೆನೆನೆನೆನೆನೆ ನಾನೇನೊ ನೀನೇನದೇನೋ

(ವೇದವೇದಾರ್ಥಗಳು ಅನೇಕ ವ್ಯಾಖ್ಯಾನಗಳಿಂದಲೂ, ಮತಾವಲಂಬೀ ವಿವರಣೆಗಳಿಂದಲೂ ತುಂಬಿವೆ.  ಆದರೂ ಅದೆಲ್ಲವನ್ನೂ ಸಂಕ್ಷಿಪ್ತವಾಗಿ ನೋಡಿದರೆ, ಅದರ ಅಭಿಮತವಿಷ್ಟೇ:  ನಾನು ನೀನೆಂಬುದೇ ನಾವಿಂದು ಕಾಣುತ್ತಿರುವ ಅನೇಕ ರೂಪಗಳಿಗೂ ಮೂಲವೇ, ನಾನೇ ನೀನೋ, ನೀನೆ ನಾನೋ (ಅಂದರೆ ನಾವಿಬ್ಬರೂ ಒಂದೆಯೋ), ಯೋಚಿಸಿ ನೋಡು, ನಾನೇನು, ನೀನೇನು, ಅದೇನೆಂಬುದನ್ನು ಯೋಚಿಸು)

ಈ ಪೃಚ್ಚಕನಿಗೂ ಮೊದಲ ಸಾಲನ್ನು ರಚಿಸಿ ಹೇಳಿ ಅವಧಾನಿ ಮುಂದಿನ ಪೃಚ್ಛಕನೆಡೆ ಗಮನ ಹರಿಸುತ್ತಾನೆ.

ದತ್ತಪದಿ: ಈತನ ಕೆಲಸ, ಅವಧಾನಿಗೆ ಮೂರೋ ನಾಲ್ಕೋ ಸಂಬಂಧವಿಲ್ಲದ ಪದಗಳನ್ನು ಕೊಟ್ಟು ಯಾವುದಾದರೊಂದು ಛಂದಸ್ಸಿನಲ್ಲಿ ಆ ಪದಗಳಿಗೆ ಸಂಬಂಧವೇ ಇಲ್ಲದ ವಿಷಯದ ಮೇಲೆ ಪದ್ಯವೊಂದನ್ನು ರಚಿಸಲು ಹೇಳುವುದು.  ಉದಾಹರಣೆಗೆ ಕಳೆದೊಂದು ಅವಧಾನದಲ್ಲಿ ನಾನು ಕೊಟ್ಟ ದತ್ತಪದಿಯ ಸಮಸ್ಯೆ ಹೀಗಿತ್ತು.  ಮೂರ್ಖ, ಮಂಕ ಮತ್ತು ಮಡ್ಡಿ ಈ ಮೂರು ಹೆಸರುಗಳನ್ನು ಉಪಯೋಗಿಸಿಕೊಂಡು ತ್ರಿಮೂರ್ತಿಗಳನ್ನು ಸ್ತುತಿಸಬೇಕು, ಆದರೆ ಇದು ನಿಂದಾಸ್ತುತಿಯಾಗಿರಬಾರದು ಅಥವಾ ಸ್ವನಿಂದೆಯಾಗಿರಬಾರದು, ಮತ್ತು ಮತ್ತೇಭವಿಕ್ರೀಡಿತ ವೃತ್ತದಲ್ಲಿರಬೇಕು.

ಇದಕ್ಕೆ ಅವಧಾನಿಗಳು ಕೊಟ್ಟ ಪರಿಹಾರ ಇದು:

ಸಮನಾರ್ ಮೂರ್ ಖನಟದ್ರವೀಂದು ಚಪಲಾವ್ರಾತಕ್ಕೆ ತೇಜಸ್ಸಿನೊಳ್
ವಿಮಲಾತ್ಮದ್ಯುತಿಯಿಂದಮಾಂತರತಮಂ ಕಟ್ಟಿಟ್ಟವೊಲ್ ನೀಗುಗುಂ
ಪ್ರಮೆಯಿಂ ಮೂವರನೀಕ್ಷಿಸಲ್ ಸ್ಫುರಿಪುದೈತಾಮಡ್ಡಿಯಾಗರ್ ನತ
ಕ್ರಮಕಂ ಕಾಣ್ ತ್ರಿಗುಣಂಗಳೊಳ್ ಮಡೆಯರೇಂ ಭಕ್ತೇಂಗಿತಂ ಬೇರಿಸಲ್

ನನ್ನ ಪರಿಹಾರ ಹೀಗಿತ್ತು:

ಮೊನೆಗಳ್ ಮೂರ್ ಖಗರಾಜವಾಹನ ಚತುರ್ವಾಗೀಶರೂಪಂ ಜಗನ್
ಮನಗಳ್ಗೀತ ವಿಧಾತನೈ ಸಕಲಮಂ ಕಣ್ಸನ್ನೆಯೊಳ್ ಸಾಧಿಪಂ
ಎಣೆಯಿಲ್ಲಂ ಜಗತೀ ಸಹಸ್ರ ಮೆರೆವೀ ತುಂಗಾಂಗನಂ ಭಾವಿಸಲ್
ಕೊನೆಗಾ ತಾಮಸಮಡ್ಡಿಯಂ ಕಿಡಿಸುವೀ ಮುಮ್ಮೂರ್ತಿಯಂ ಧ್ಯಾನಿಪೆಂ

ಈತನಿಗೂ ಪದ್ಯದ ಒಂದು ಸಾಲನ್ನು ರಚಿಸಿಕೊಟ್ಟು ಅವಧಾನಿ ಮುಂದುವರೆಯುತ್ತಾನೆ.

ಚಿತ್ರಬಂಧ: ಇದರಲ್ಲಿ ಅಕ್ಷರಗಳು ಕೆಲವು ನಿರ್ದಿಷ್ಟ ಕ್ರಮದಲ್ಲಿ ಪದೇಪದೇ ಬರುವಂತೆ ಪದ್ಯ ರಚಿಸಲಾಗುತ್ತದೆ.  ಉದಾಹರಣೆಗೆ:
ತಾಕಾ ತಿ ಕ್ತೀಶಂ
ಮೋರೆ ತೋರೆ ತಿರೆ ಸ್ವಶಂ

ಇಲ್ಲಿ ಪ್ರತಿ ಎರಡನೆಯ ಅಕ್ಷರ ರಕಾರವಾಗಿರುವುದನ್ನು ಗಮನಿಸಿ.  ಈ ರೀತಿ ವಿವಿಧ ವಿನ್ಯಾಸಗಳನ್ನು ವಿವಿಧ ಹೆಸರಿನಿಂದ ಕರೆಯಲಾಗುತ್ತದೆ - ಪುಷ್ಪಗುಚ್ಛಬಂಧ, ಸರ್ಪಬಂಧ, ಗೋಮೂತ್ರಿಕಾ ಬಂಧ, ಮುರಜ ಬಂಧ, ನಾಗಬಂಧ ಇತ್ಯಾದಿ.  ಇದೂ ಸಾಮಾನ್ಯವಾಗಿ ನಾಲ್ಕು ಸಾಲಿನ ಯಾವುದಾದರೂ ಛಂದಸ್ಸಿನಲ್ಲಿರುತ್ತದೆ.

ಈ ಪೃಚ್ಛಕನಿಗೂ ಒಂದು ಸಾಲನ್ನು ರಚಿಸಿಕೊಟ್ಟು ಅವಧಾನಿ ಮುಂದಿನ ಪೃಚ್ಛಕನೆಡೆ ಗಮನ ಹರಿಸುತ್ತಾನೆ.

ವರ್ಣನೆ/ಆಶುಕವಿತೆ:  ಪೃಚ್ಛಕನು ವಸ್ತು/ವಿಷಯವೊಂದನ್ನು ಅವಧಾನಿಗೆ ಕೊಟ್ಟು ನಿರ್ದಿಷ್ಟ ಛಂದಸ್ಸಿನಲ್ಲಿ ಕಾವ್ಯ ರಚಿಸಲು ಹೇಳುತ್ತಾನೆ.  ಇದು ಸಾಮಾನ್ಯವಾಗಿ ಕಾವ್ಯಾತ್ಮಕವಾಗಿ, ವರ್ಣನಾತ್ಮಕವಾಗಿರುತ್ತದೆ.  ಉದಾಹರಣೆಗೆ ತನ್ನದಲ್ಲದ ಕಾರಣಕ್ಕಾಗಿ ಪ್ರಿಯತಮೆಯಿಂದ ದೂರವಾಗಿ ಜೈಲು ಸೇರಿರುವ ನಿರಪರಾಧಿಯೊಬ್ಬನ ಭಾವನೆ ಹುಣ್ಣಿಮೆ ರಾತ್ರೆಯಲ್ಲಿ ಹೇಗಿರಬಹುದು ಎಂದು ವರ್ಣಿಸಲು ಕೇಳಬಹುದು.  ಇದಕ್ಕೆ ಉತ್ತರವಾಗಿ ಅವಧಾನಿ ಸ್ಥಳದಲ್ಲೇ ಕವಿತೆಯೊಂದನ್ನು ರಚಿಸಿಕೊಟ್ಟು ಮುಂದುವರೆಯುತ್ತಾನೆ.

ಕಾವ್ಯವಾಚನ: ಇಲ್ಲಿ ಪೃಚ್ಛಕನು ಯಾವುದಾದರೊಂದು ಕಾವ್ಯದ ಯಾವುದೋ ಒಂದು ಭಾಗವನ್ನು ವಾಚಿಸುತ್ತಾನೆ.  ಇದು ಯಾವ ಕಾವ್ಯವಾದರೂ ಆಗಿರಬಹುದು, ಯಾವ ಮೂಲೆಯಿಂದಾದರೂ ಎತ್ತಿದ್ದಿರಬಹುದು.  ಅದನ್ನು ಕೇಳಿಸಿಕೊಂಡು ಅವಧಾನಿಯು ಆ ಕಾವ್ಯ, ಕವಿ, ಸಂದರ್ಭವನ್ನು ತಿಳಿಸುತ್ತಾನೆ.

ಹೀಗೆ ಆರೂ ಪೃಚ್ಛಕರಿಗೆ ಉತ್ತರಿಸಿದ ನಂತರ ಎರಡನೆಯ ಸುತ್ತು ಪ್ರಾರಂಭವಾಗುತ್ತದೆ, ನಿಷೇಧಾಕ್ಷರಿಯ ಎರಡನೆಯ ಸಾಲಿನ ರಚನೆ... ಹೀಗೆ ನಾಲ್ಕು ಸುತ್ತು ಮುಂದುವರೆಯುತ್ತದೆ ಅವಧಾನ.  ಮೇಲಿನ ನಾಲ್ಕೂ ಪೃಚ್ಛಕರಿಗೂ ಅವಧಾನಿಯು ಒಂದೊಂದು ಒಂದೊಂದು ಸುತ್ತಿನಲ್ಲಿ ಒಂದೊಂದು ಸಾಲುಗಳನ್ನು ಹೇಳುತ್ತಾ ಕೊನೆಯ ಸುತ್ತಿನ ನಂತರ ಪ್ರತಿಯೊಬ್ಬನಿಗೂ ಪೂರ್ಣ ಪದ್ಯವನ್ನು ಒಪ್ಪಿಸಬೇಕು. ಹಾಗೆಯೇ ಪೃಚ್ಛಕರೂ ತಂತಮ್ಮ ಪದ್ಯಗಳನ್ನು ಪಠಿಸುತ್ತಾರೆ.  ಆದರೆ ಕೊನೆಯ ಇಬ್ಬರು ಪೃಚ್ಛಕರ ಪ್ರಶ್ನೆ ಸುತ್ತುಗಳಲ್ಲಿ ಮುಂದುವರೆಯುವುದಿಲ್ಲ.  ಅವರ ಪ್ರಶ್ನೆಗಳಿಗೆ ಆಯಾ ಸುತ್ತಿನಲ್ಲೇ ಪೂರ್ಣಪದ್ಯ ರಚಿಸಿಕೊಟ್ಟು ಅವಧಾನಿ ಮುಂದುವರೆಯುತ್ತಾನೆ.  ಮೊದಲ ನಾಲ್ಕು ಪೃಚ್ಛಕರ ಕೆಲಸ ಅವಧಾನಿಯ ನೆನಪಿನ ಶಕ್ತಿ, ಛಂದೋ ಪಟುತ್ವವನ್ನು ಪರೀಕ್ಷಿಸುವುದಾದರೆ, ಕೊನೆಯ ಇಬ್ಬರು ಪೃಚ್ಛಕರ ಕೆಲಸ ಅವಧಾನಿಯ ಕಾವ್ಯ ಸಾಮರ್ಥ್ಯವನ್ನೂ ಓದಿನ ವಿಸ್ತಾರವನ್ನೂ ಒರೆ ಹಚ್ಚುವುದು.

ಈ ಮೇಲೆ ಹೇಳಿದ ಆರು ಪೃಚ್ಛಕರು ನಿಯತವಾಗಿ ತಮ್ಮತಮ್ಮ ಸರದಿಯಲ್ಲಿ ಪ್ರಶ್ನೆ ಕೇಳಿದರೆ, ಉಳಿದಿಬ್ಬರು ಪೃಚ್ಛಕರು ಯಾವಾಗಲಾದರೂ ಮಧ್ಯ ನುಗ್ಗಿ ಪ್ರಶ್ನೆಗಳನ್ನು ಕೇಳಬಹುದು.  ಮುಖ್ಯವಾಗಿ ಅವಧಾನಿಯ ಏಕಾಗ್ರತೆಯನ್ನು ಕದಲಿಸುವುದೇ ಇವರ ಗುರಿ.  ಸಾಮಾನ್ಯವಾಗಿ ಈ ಪೃಚ್ಛಕರು ಈ ಕೆಳಗಿನ ಯಾವುದಾದರೂ ಎರಡು ವಿಭಾಗಗಳನ್ನು ನಿರ್ವಹಿಸುತ್ತಾರೆ:

ಅಪ್ರಸ್ತುತ ಪ್ರಸಂಗಿ:  ಹೆಸರೇ ಸೂಚಿಸುವಂತೆ ಈತ ಅಪ್ರಸ್ತುತ ಪ್ರಸಂಗಿ.  ಸಂದರ್ಭಕ್ಕೆ ಸಂಬಂಧವೇ ಇಲ್ಲದಂತೆ ಈತ ಏನಾದರೂ ಮಾತಾಡಬಹುದು/ಏನಾದರೂ ಕೇಳಬಹುದು.  ಅವಧಾನಿ ಅವನನ್ನು ಕಡೆಗಣಿಸುವಂತಿಲ್ಲ, ರೇಗುವಂತಿಲ್ಲ, ಉತ್ತರ ಕೊಡುವುದಿಲ್ಲ ಎನ್ನುವಂತಿಲ್ಲ.  ಈತನ ಸವಾಲುಗಳನ್ನು ನಗುನಗುತ್ತಾ ಸ್ವೀಕರಿಸುತ್ತಾ, ಆತನೊಡನೆ ಸರಸವಾಗಿ ಸಂಭಾಷಿಸುತ್ತಲೇ ಈತನನ್ನು ನಿವಾರಿಸಿಕೊಂಡು ಅವಧಾನಿ ಮುಂದುವರಿಯಬೇಕಾಗುತ್ತದೆ.

ಸಂಖ್ಯಾಬಂಧ:  ೫ X ೫ ರ ಚೌಕವೊಂದರಲ್ಲಿ ಹೇಗೇ ಕೂಡಿದರೂ ಒಂದೇ ಮೊತ್ತ ಬರುವಂತೆ ಒಂದು ಬಂಧವನ್ನು ಪೃಚ್ಛಕ ಮೊದಲೇ ರಚಿಸಿಕೊಂಡು ಬಂದಿರುತ್ತಾನೆ.  ಕಾರ್ಯಕ್ರಮದ ಮೊದಲಲ್ಲಿ ಅವಧಾನಿಗೆ ಈ ಮೊತ್ತವನ್ನಷ್ಟೇ ಆತ ಕೊಡುತ್ತಾನೆ.  ಆಮೇಲೆ ಮಧ್ಯ ಮಧ್ಯ ಮನಬಂದಾಗ ಈ ಬಂಧದ ಒಂದು ನಿರ್ದಿಷ್ಟ ಮನೆಯಲ್ಲಿ ಬರುವ ಸಂಖ್ಯೆಯನ್ನು ಕೇಳುತ್ತಾನೆ.  ಉದಾಹರಣೆಗೆ, ಮೂರನೆಯ ಸಾಲಿನ ನಾಲ್ಕನೆಯ ಮನೆಯಲ್ಲಿ ಬರುವ ಸಂಖ್ಯೆ ಎಷ್ಟು?  ಅವಧಾನಿ ಮನಸ್ಸಿನಲ್ಲೇ ಬಂಧವನ್ನು ರಚಿಸಿಕೊಂಡು ಆಯಾ ಮನೆಯಲ್ಲಿ ಬರುವ ಸಂಖ್ಯೆಯನ್ನು ಪೃಚ್ಛಕನು ಕೇಳಿದಾಗಲೆಲ್ಲಾ ಹೇಳಬೇಕಾಗುತ್ತದೆ.  ಅದನ್ನು ಪೃಚ್ಛಕನು ಪ್ರೇಕ್ಷಕರಿಗೆ ಮಾತ್ರ ಕಾಣುವಂತೆ ಬಂಧದಲ್ಲಿ ಬರೆಯುತ್ತಾ ಹೋಗುತ್ತಾನೆ.  ಕೊನೆಯಲ್ಲಿ ಅವುಗಳನ್ನು ಕೂಡಿದಾಗ ಮೊದಲು ನೀಡಿದ ಮೊತ್ತ ಬಂದಿರಬೇಕು.

ಘಂಟಾಗಣನ: ಪೃಚ್ಛಕನೊಬ್ಬ ಒಂದು ಘಂಟೆಯನ್ನು ಹಿಡಿದು ಕುಳಿತಿರುತ್ತಾನೆ.  ಅವಧಾನದುದ್ದಕ್ಕೂ ಯಾವಾಗ ಬೇಕಾದರೂ ಎಷ್ಟು ಬಾರಿ ಬೇಕಾದರೂ ಅವನು ಗಂಟೆಯನ್ನು ಬಾರಿಸಬಹುದು.  ಅದನ್ನು ಅವಧಾನಿ ಮನಸ್ಸಿನಲ್ಲೇ ಲೆಕ್ಕವಿಟ್ಟುಕೊಳ್ಳಬೇಕು.  ಪ್ರೇಕ್ಷಕರೂ ಲೆಕ್ಕವಿಟ್ಟುಕೊಳ್ಳಬಹುದು.  ಕಾರ್ಯಕ್ರಮದ ಕೊನೆಯಲ್ಲಿ ಅವಧಾನಿ ಇದರ ಲೆಕ್ಕವನ್ನು ಒಪ್ಪಿಸುತ್ತಾನೆ.  ಪ್ರೇಕ್ಷಕರು ಇದರ ತಾಳೆ ನೋಡಿಕೊಳ್ಳಬಹುದು.  ಪುಷ್ಪಗಣನವು ಘಂಟಾಗಣನದ ಇನ್ನೊಂದು ರೂಪ.  ಪೃಚ್ಛಕನು ಅವಧಾನಿಯ ಮೇಲೆ ಹೂವನ್ನು ಎಸೆಯುತ್ತಾ ಹೋಗುತ್ತಾನೆ.  ಅದನ್ನು ಅವಧಾನಿ ಲೆಕ್ಕವಿಟ್ಟುಕೊಳ್ಳಬೇಕು.  ಇದೇ ರೀತಿ ಇಸ್ಪೀಟು, ಚದುರಂಗಗಳನ್ನೂ ಕೆಲವು ಅವಧಾನಿಗಳು ಅಳವಡಿಸಿಕೊಳ್ಳುವುದುಂಟು

ಮೇಲೆ ಹೇಳಿದ ವಿಭಾಗಗಳಲ್ಲದೇ ಹಾಗೆಯೇ ನ್ಯಸ್ತಾಕ್ಷರಿ (ಪದ್ಯವೊಂದರ ಕೆಲಕೆಲವು ಸ್ಥಾನಗಳಲ್ಲಿ ಕೆಲ ಕೆಲವು ಅಕ್ಷರಗಳು ಬರಬೇಕು ಎಂಬ ನಿಬಂಧನೆ); ವ್ಯಸ್ತಾಕ್ಷರಿ (ಸಾಲೊಂದರಲ್ಲಿ ಬರುವ ವಿವಿಧ ಅಕ್ಷರಗಳನ್ನೂ ಅವುಗಳ ಸ್ಥಾನ ಸಂಖ್ಯೆಗಳನ್ನೂ ಪ್ರತ್ಯೇಕವಾಗಿ ಬರೆದಿಟ್ಟುಕೊಂಡು ಕ್ರಮ ತಪ್ಪಿದ ರೀತಿಯಲ್ಲಿ ಈ ಅಕ್ಷರಗಳನ್ನು ಆಗಾಗ ಅವಧಾನಿಗೆ ತುಸುವೇ ಕಾಲ ತೋರಿಸುತ್ತಾ ಹೋಗುವುದು.  ಈ ಎಲ್ಲ ಅಕ್ಷರಗಳನ್ನೂ ನೆನಪಿಟ್ಟುಕೊಂಡು ಅವಧಾನದ ಕೊನೆಯಲ್ಲಿ ಅವುಗಳನ್ನು ಕ್ರಮವಾಗಿ ಜೋಡಿಸಿ ಇಡೀ ವಾಕ್ಯವನ್ನು ಅವಧಾನಿ ನಿರೂಪಿಸುವುದು) ಈ ಪ್ರಕಾರಗಳನ್ನೂ ಅಳವಡಿಸಿಕೊಳ್ಳುವುದುಂಟು.

ಇನ್ನು ಶತಾವಧಾನವು ಸಂಯೋಜನೆಯಲ್ಲಿ ಸರಿಸುಮಾರು ಅಷ್ಟಾವಧಾನವನ್ನೇ ಹೋಲುತ್ತದೆಯಾದರೂ ಇಲ್ಲಿ ಪೃಚ್ಛಕರ ಸಂಖ್ಯೆ, ಮತ್ತು ಆ ಕಾರಣದಿಂದ ಇಡೀ ಕಾರ್ಯಕ್ರಮದ ಅವಧಿ ಹೆಚ್ಚು.  ಒಂದು ನಿಷೇಧಾಕ್ಷರಿಯ ಜಾಗದಲ್ಲಿ ಹತ್ತು ಜನ, ಒಬ್ಬ ಸಮಸ್ಯಾಪೂರಕನ ಜಾಗದಲ್ಲಿ ಹತ್ತು ಜನ, ಹೀಗೆ ಸಂಖ್ಯೆ ಜಾಸ್ತಿಯಾಗುತ್ತದೆ, ಮತ್ತು ರಚಿಸಲ್ಪಡುವ ಪದ್ಯಗಳ ಸಂಖ್ಯೆಯೂ ಹೆಚ್ಚು.  ಜೊತೆಗೆ ಅವಧಾನಿಯ ಸಾಮರ್ಥ್ಯಕ್ಕನುಗುಣವಾಗಿ ಅವಧಾನದ ವಿಭಾಗಗಳೂ ಹೆಚ್ಚಬಹುದು.

ಅದೇನೇ ಇರಲಿ, ಅವಧಾನಕಾರ್ಯಕ್ರಮವೆಂದರೆ ಪ್ರಶ್ನೋತ್ತರಗಳ ಗುಡುಗು-ಮಿಂಚುಗಳಿಗೂ ಸರಸ ಸಂಭಾಷಣೆಗಳ ತುಷಾರಸೇಚನಕ್ಕೂ, ಕಾವ್ಯದ ವಿವಿಧ ರೂಹುಗಳ ಅನಾವರಣಕ್ಕೂ ತೆರೆದುಕೊಂಡ ಭವ್ಯರಂಗಸ್ಥಳವೇ ಸರಿ.  ಅವಧಾನ ಕಲೆಯೆಂಬುದೇ ನಶಿಸುತ್ತಿರುವ ಈ ಯುಗದಲ್ಲಿ ಶತಾವಧಾನ, ಅದರಲ್ಲೂ ಸಂಪೂರ್ಣ ಕನ್ನಡ ಶತಾವಧಾನವೆಂಬ ವಿಸ್ಮಯ ಇದೇ ೩೦ನೆಯ ದಿನಾಂಕದಂದು ಅನಾವರಣಗೊಳ್ಳಲಿದೆ.  ಅಪರೂಪದಲ್ಲಿ ಅಪರೂಪವೆನಿಸಿಕೊಳ್ಳುವ ಇಂಥಾ ಕಾರ್ಯಕ್ರಮವೊಂದು ಇಂದಿಗೂ ನೋಡಸಿಗುತ್ತಿದೆಯೆಂಬುದು ನಿಜಕ್ಕೂ ಕೌತುಕದ, ಹೆಮ್ಮೆಯ ವಿಷಯ.

18 comments:

ಚುಕ್ಕಿಚಿತ್ತಾರ said...

ಅತ್ಯುತ್ತಮವಾಗಿ , ಸರಳವಾಗಿ ಅರ್ಥವಾಗುವ೦ತೆ ಅವಧಾನಕಲೆಯನ್ನು ವಿವರಿಸಿದ್ದೀರಿ.. ಆರ್. ಗಣೇಶ್ ರವರಿಗೆ ಡಿ.ಲಿಟ್ ತ೦ದುಕೊಟ್ಟ ’ಅವಧಾನಕಲೆ’ ಅನ್ನುವ ಪುಸ್ತಕದ ಕೆಲವು ಭಾಗಗಳನ್ನು ಓದಿದ್ದೆ..ಆಗ ಸ೦ಪೂರ್ಣ ಓದಲಾಗಲಿಲ್ಲ ಅನ್ನುವುದು ಈಗ ಕೊರತೆಯಾಗಿದೆ. ಒ೦ದು ದಿನವಾದರೂ ಕಾರ್ಯಕ್ರಮಕ್ಕೆ ಬರುವ ಆಸೆಯಿದೆ.

ಧನ್ಯವಾದಗಳು.

Rj said...

ಮಂಜುನಾಥರೇ,
ಈ ಹೊತ್ತಿನಲ್ಲಿ ಇಂಥದೊಂದು ಲೇಖನವನ್ನು ನಿಮ್ಮ ಕಡೆಯಿಂದ ನಿರೀಕ್ಷೆ ಮಾಡಿಯೇ ಇದ್ದೆ.ಎಷ್ಟು ಚೆನ್ನಾಗಿ ಅವಧಾನ ಕಲೆಯನ್ನು ವಿವರಿಸಿದ್ದೀರಿ.ನನ್ನ ಅನಿಸಿಕೆಯ ಪ್ರಕಾರ ನಮ್ಮಲ್ಲಿ ಎಲ್ಲ ವಿದ್ಯೆಗಳ ಬಗ್ಗೆ ಪ್ರೀತಿಯಿದೆ.ಪ್ರೋತ್ಸಾಹವಿದೆ.ಆದರೆ ಕೆಲವೊಮ್ಮೆ rules of the game ಬಹಳಷ್ಟು ಜನಕ್ಕೆ ಗೊತ್ತಿರುವದಿಲ್ಲ.ಹೀಗಾಗಿ ಆಟದ ಮಜ ಗೊತ್ತಾಗುವ ಮೊದಲೇ ಆಟದಲ್ಲಿ ಸೋಲೊಪ್ಪಿಕೊಳ್ಳುವ ಪ್ರಸಂಗಗಳ ಪೈಕಿ ಇದೂ ಒಂದು.ತಿಳಿದವರು ಇದನ್ನು ನಿಮ್ಮ ಹಾಗೆ ಗೊತ್ತುಪಡಿಸಬೇಕಿದೆ.
-Rj

ಮನಸು said...

ಮಂಜುನಾಥ್ ಸರ್,
ಸಮಯೋಚಿತ ಬರಹ.. ಎಲ್ಲರಲ್ಲೂ ಕಾಡುತ್ತಿದ್ದ ಪ್ರಶ್ನೆಗಳಿಗೆ ಮತ್ತು ಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸಿದ್ದೀರಿ. ನನಗೆ ಇಲ್ಲಿನ ವಿವರದಲ್ಲಿ ಅದ್ಭುತವೆನಿಸಿದ್ದು "ಮೂರ್ಖ, ಮಂಕ ಮತ್ತು ಮಡ್ಡಿ ಈ ಮೂರು ಹೆಸರುಗಳನ್ನು ಉಪಯೋಗಿಸಿಕೊಂಡು ತ್ರಿಮೂರ್ತಿಗಳನ್ನು ಸ್ತುತಿಸಬೇಕು, ಆದರೆ ಇದು ನಿಂದಾಸ್ತುತಿಯಾಗಿರಬಾರದು ಅಥವಾ ಸ್ವನಿಂದೆಯಾಗಿರಬಾರದು, ಮತ್ತು ಮತ್ತೇಭವಿಕ್ರೀಡಿತ ವೃತ್ತದಲ್ಲಿರಬೇಕು." ಅಬ್ಬಾ..!! ಎಂಥಾ ಸಾಲುಗಳನ್ನು ಬರೆದಿದ್ದಾರೆ ಅನ್ನಿಸುತ್ತದೆ... ನಿಜಕ್ಕೂ ಇಲ್ಲಿ ಯಾವುದೇ ಲೋಪಬಾರದಂತೆ ರಚಿಸುವುದು ಮನೋಘ್ನ ಸಂಗತಿಯೇ ಸರಿ.

ಡಾ. ಆರ್ ಗಣೇಶ್ ರವರು ನೆಡೆಸಿಕೊಡುತ್ತಿರುವ ಶತಾವಧಾನ ಕಾರ್ಯಕ್ರಮ ನಿಜಕ್ಕೂ ವಿಸ್ಮಯವೇ ಸರಿ. ದೂರದಲ್ಲೆಲ್ಲೋ ಇರುವ ನಮ್ಮಂತವರಿಗೆ ಇಂತಹ ಕಾರ್ಯಕ್ರಮಗಳನ್ನು ನೋಡುವ ಭಾಗ್ಯ ಸಿಗದು. ಸಾಧ್ಯವಾದಲ್ಲಿ ವಿಡಿಯೋ ಆದರೂ ನೋಡಬಹುದು ಎಂದುಕೊಂಡಿದ್ದೇನೆ.

ಧನ್ಯವಾದಗಳು ಸರ್ ಅವಧಾನಕಲೆಯ ಬಗ್ಗೆ ಬಹಳಷ್ಟು ಮಾಹಿತಿಪೂರ್ಣ ಲೇಖನ ಕೊಟ್ಟಿದ್ದಕ್ಕೆ.

Subrahmanya said...

ದೇವರೂ ಕೂಡಾ ಇಷ್ಟು ಬೇಗ ವರವನ್ನು ಕೊಡಲಾರ. ನೀವು ಮಾತ್ರ Superfast and updated !. ತಡವಾದರೂ ಅಡವಾಗಿ ಬಂದಿದೆ ನಿಮ್ಮ ಬ್ಲಾಗು ಬರಹ :-)

sunaath said...

ಮಂಜುನಾಥರೆ,
ತುಂಬ ಉತ್ತಮವಾದ ಬರಹಕ್ಕಾಗಿ ಧನ್ಯವಾದಗಳು.

Susheel Sandeep said...

ಅದ್ಭುತ! ಸಮಯಕ್ಕೆ ಸರಿಯಾಗಿ ಸರಳವಾಗಿ ಸುಂದರವಾಗಿ ಮೂಡಿಬಂದಿದೆ ನಿಮ್ಮ ಬರಹ..ಅತೀ ಉಪಯುಕ್ತವಾದ ಮಾಹಿತಿ ಕೊಟ್ಟಿದೀರ... ಅವದಧಾನ ಕಾರ್ಯಕ್ರಮವನ್ನ ಆನಂದಿಸೋಕೆ ಅನುಕೂಲವಾಯ್ತು :)

Swarna said...

ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್, ನೆನ್ನೆ ಶತವಾಧಾನದಲ್ಲಿ
ನಿಮ್ಮ ಹೆಸರು ಕೇಳಿದೆ.ನಾನು ಆಡಿಯೋ ಮಾತ್ರ ಕೇಳ್ತಾ ಇದ್ದೆ ಪೂರ್ತಿ ನೋಡಲಾಗಲಿಲ್ಲ. ಶತಾವಧಾನದ ಸರ್ಪ ಬಂಧ ತುಂಬಾ ಚೆನ್ನಾಗಿತ್ತು.ಸ್ರಗ್ಧರಾ ಈಗ ಸ್ವಲ್ಪ ತಿಳಿಯಿತು
ಧನ್ಯವಾದಗಳು ಮತ್ತು ವಂದನೆಗಳು

Swarna said...

ಈಗ ನೋಡಿದೆ ತಮ್ಮನ್ನ ವೇದಿಕೆ ಮೇಲೆ.
ಖುಷಿಯಾಯ್ತು ,ಅಭಿನಂದನೆಗಳು

Anitha Naresh Manchi said...

ಅವಧಾನ ಕಲೆಯ ಬಗ್ಗೆ ಒಳ್ಳೆಯ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು.

Manjunatha Kollegala said...

ಚುಕ್ಕಿಚಿತ್ತಾರ,
ಧನ್ಯವಾದ. ಅವಧಾನಕಾರ್ಯಕ್ರಮಕ್ಕೆ ಬಂದಿದ್ದಿರೆಂದು ಭಾವಿಸುತ್ತೇನೆ.

Manjunatha Kollegala said...

RJ, ಧನ್ಯವಾದ. rules of the game ಎಂಬುದೇ ದೊಡ್ಡ aversion ಆಗಿರುವ ನಮ್ಮ ’ಸ್ವಚ್ಛಂದ’ಯುಗದಲ್ಲಿ rules ಬಗ್ಗೆ ಮಾತಾಡುವ ನಿಮ್ಮಂಥ ಸಹೃಯರಿರುವುದೇ ಒಂದು ಸಂತಸ :)

Manjunatha Kollegala said...

ಮನಸು, ಧನ್ಯವಾದ. ಶತಾವಧಾನ ಕಾರ್ಯಕ್ರಮ webcast ರೂಪದಲ್ಲಿಯೂ ಲಭ್ಯವಿತ್ತು. ನೀವು ನೋಡಿದಿರೆಂದುಕೊಳ್ಳುತ್ತೇನೆ. ಕೊನೆಯ ದಿನದ ಎರಡು sessionಗಳು ಈಗಲೂ http://new.livestream.com/accounts/1646169/events/1600941/videos ಇಲ್ಲಿ ಲಭ್ಯವಿದೆ. ಮೊದಲ ಎರಡು ದಿನದ್ದು ಸಧ್ಯಕ್ಕೆ ಲಭ್ಯವಿಲ್ಲವಂತೆ, ನಾನೂ ನೋಡಲು ಉತ್ಸುಕನಾಗಿದ್ದೇನೆ. ಅದು ಡಿವಿಡಿ ರೂಪದಲ್ಲಿ ಮಾರುಕಟ್ಟೆಯಲ್ಲಿ ಬರಲಿದೆಯೆಂದು ಆಯೋಜಕರು ತಿಳಿಸಿದರು. ಕಾದು ನೋಡಬೇಕು.

Manjunatha Kollegala said...

ಸುಬ್ರಹ್ಮಣ್ಯ, ಧನ್ಯವಾದಗಳು. ನೀವು ದೇವರಿಗಿಂತಾ ಹೆಚ್ಚು. ಅವಧಾನದ ಸಮಾರಂಭದಲ್ಲಿ ಸುಮ್ಮನೆ ಮುಖ ತೋರಿಸಿ ವರ ಬೇಡುವಷ್ಟರೊಳಗೆ ಮರೆಯಾದಿರಿ :)

Manjunatha Kollegala said...

ಸುನಾಥರೇ, ಧನ್ಯವಾದಗಳು.

Manjunatha Kollegala said...

ಸುಶೀಲ್, ಧನ್ಯವಾದಗಳು. ನೀವು ಕಾರ್ಯಕ್ರಮಕ್ಕೆ ಲಾಗಿನ್ ಆಗಿದ್ದು ಗಮನಿಸಿದೆ. ಕಾರ್ಯಕ್ರಮವನ್ನು ಆನಂದಿಸಿದಿರೆಂದು ತಿಳಿಯುವೆ.

Manjunatha Kollegala said...

ಸ್ವರ್ಣಾ, ಧನ್ಯವಾದಗಳು

Manjunatha Kollegala said...

ಅನಿತಾ, ಧನ್ಯವಾದಗಳು.

Badarinath Palavalli said...

ಅವಧಾನ ಕಲೆಯ ಬಗ್ಗೆ ನನಗೆ ಪೂರ್ತಿ ಗೊತ್ತಿರಲಿಲ್ಲ. ಈ ಲೇಖನ ನನಗೆ ಸಂಪೂರ್ಣ ಮಾಹಿತಿ ಒದಗಿಸಿತು.