Monday, January 7, 2019

ಆಲೂಗಡ್ಡೆ ಈರುಳ್ಳಿ ಹುಳಿ

ಯಾವಾಗಲೂ ಗಂಭೀರ ವಿಷಯವನ್ನೇ ಏಕೆ ಬರೆಯಬೇಕೆಂದು ನಾನು ವಾದಿಸುವುದಿಲ್ಲ, ಆದರೆ ತಿನ್ನುವುದು ಗಂಭೀರ ವಿಷಯವಲ್ಲವೆಂದು ಯಾರು ಹೇಳಿದರು.  ಒಂದು ದಿನ ಏಕಾದಶಿ ನಿಟ್ಟುಪವಾಸ ಮಾಡಿ, ಮರುದಿನ ಪಾರಣೆ, ಇನ್ನೇನು ತುತ್ತು ಬಾಯಿಗಿಡಬೇಕೆಂದಾಗ ಯಾರೋ ದೂರದ ಬಂಧುವೊಬ್ಬರು ಶಿವನಪಾದ ಸೇರಿದ ಸುದ್ದಿ ಬಂತೆನ್ನಿ, ಅಥವಾ ಅಡುಗೆ ಮಾಡುವವರೊಡನೆ (ಅದು ನಿಮ್ಮ ಪತ್ನಿಯಿರಬಹುದು, ಪತಿಯೇ ಇರಬಹುದು) ಸ್ವಲ್ಪ ಕಿರೀಕ್ ಮಾಡಿಕೊಂಡು ನೋಡಿ - ಸಾರಿಗೋ ಪಲ್ಯಕ್ಕೋ ಒಂದು ಹಿಡಿ ಉಪ್ಪೋ ಮೆಣಸಿನಪುಡಿಯೋ ಹೆಚ್ಚು ಬೀಳಲಿ, ಆಗ, ಆಹಾರ ಎಷ್ಟು ಗಂಭೀರ ವಿಷಯವೆಂಬುದು ಮನದಟ್ಟಾಗುತ್ತದೆ - ಅಷ್ಟಲ್ಲದೇ ವೇದಗಳು ಸಾರಿದುವೇ? "ಅನ್ನಂ ಬ್ರಹ್ಮೇತಿವ್ಯಜಾನಾತ್"

ಇರಲಿ, ಒಂದು ಆಲೂಗೆಡ್ಡೆ ಈರುಳ್ಳಿ ಹುಳಿಯ ರೆಸಿಪಿ ಹಾಕಲಿಕ್ಕೆ ಇಷ್ಟೊಂದು ಜಸ್ಟಿಫಿಕೇಶನ್ ಏಕೆ ಎಂದಿರಾ?  ಅದೇ ನನಗೂ ಅರ್ಥವಾಗುತ್ತಿಲ್ಲ.  ಅಡುಗೆಯ ಘನತೆಯ ಬಗೆಗೆ ಇಷ್ಟು ಕೀಳರಿಮೆಯಿದ್ದಿದ್ದರೆ ಮಂಗರಸನು ಸೂಪಶಾಸ್ತ್ರವನ್ನು ಬರೆಯುತ್ತಲೇ ಇರಲಿಲ್ಲ, ಇರಲಿ.  ನಾನಾದರೂ ಕುಗ್ಗಲಿ ಏಕೆ, ದಿಟ್ಟತನದಿಂದಲೇ ಹೇಳುತ್ತೇನೆ.  ಫೇಸ್ಬುಕ್ಕಿನಲ್ಲಿ ಸ್ನೇಹಿತರೊಬ್ಬರು ಕೇಳಿದರು.  ಹಲವು ವರ್ಷಗಳಿಂದ ಮಾಡಿಕೊಂಡು ಬಂದ ಸ್ವಯಂಪಾಕ - ಹೇಳಿದೆ.  ಮರೆತುಹೋಗಬಾರದೆಂದು ಇಲ್ಲಿ ಬರೆದಿಟ್ಟುಕೊಂಡಿದ್ದೇನೆ - ಬರೆದಿಟ್ಟದ್ದು ಒಂದಷ್ಟು ಜನಕ್ಕಾದರೂ ಉಪಯೋಗವಾಗುವುದಾದರೆ ಆಗಿಯೇ ಹೋಗಲಿ ಎಂದು ಇಲ್ಲಿ ಹಾಕುತ್ತಿದ್ದೇನೆ.  ಮತ್ತೆ, "ಉಪಯೋಗವೇ ಆಗುತ್ತೆ ಎಂದು ಹೇಗೆ ಹೇಳುತ್ತೀ?" ಎಂದು ಕೇಳಬೇಡಿ - ಸುಮಾರು ವರ್ಷಗಳು ಹಸಿಯಗೊಡದೇ ಈ ಸ್ವಯಂಪಾಕವು ನನ್ನನ್ನು ಪೊರೆದಿದೆಯೆಂಬ ಧೈರ್ಯದ ಮೇಲೆ ಹೇಳುತ್ತಿದ್ದೇನೆ :) Take it with a pinch/bag of salt as required.

1) ಒಲೆ ಹೊತ್ತಿಸಿ (ತುಂಬಾ ಮುಖ್ಯ - ಅನುಭವದಿಂದ ಕಲಿತದ್ದು)

೨) ಎರಡು ಕಪ್ ತೊಗರೀಬೇಳೆ ಬೇಯಲಿಕ್ಕೆ ಇಡಿ (ಮುಚ್ಚಿಡುವ ಮೊದಲು ಮೇಲೊಂದು ಚಮಚೆ ಎಣ್ಣೆ ಹಾಕಿ ಅರಿಸಿನ ಉದುರಿಸಿ)

೩) ರುಚಿಗೆ ತಕ್ಕಷ್ಟು ಹುಣಸೇ ಹಣ್ಣು ನೆನೆಹಾಕಿಕೊಳ್ಳಿ

೪) ಎರಡು ಚಮಚೆ ಹುಳಿ ಪುಡಿ, ಒಂದಷ್ಟು ಶುಂಠಿ, ಒಂದು ಹಿಡಿಯಷ್ಟು ತೆಂಗಿನಕಾಯಿ ತುರಿ, ಒಂದು ಅರ್ಧ ಹಿಡಿ ಹುರಿಗಡಲೆ, ಇಷ್ಟನ್ನು ಮಿಕ್ಸಿಯಲ್ಲಿ ಹಾಕಿಕೊಳ್ಳಿ (ನಾನು ಇದರ ಜೊತೆಗೆ ಈರುಳ್ಳಿ ಟೊಮ್ಯಾಟೋ ಕೂಡ ರುಬ್ಬಿ ಹಾಕಿಬಿಡುತ್ತೇನೆ, ಸಾಮಾನ್ಯವಾಗಿ ನೇರ ಹುಳಿಗೆ ಹಾಕುತ್ತಾರೆ, ಹೋಳು ಸಿಕ್ಕುವ ಹಾಗೆ. ಹೇಗಾದರೂ ಮಾಡಬಹುದು - ಸಣ್ಣೀರುಳ್ಳಿ (ಸಾಂಬಾರ್ ಈರುಳ್ಳಿ) ಸಿಕ್ಕರೆ ಅದರ ರುಚಿಯೇ ಬೇರೆ).

೫) ಇಷ್ಟು ಹೊತ್ತಿಗೆ ಕುಕ್ಕರ್ ಕೂಗಿರಬೇಕು, ಆರಲು ಬಿಟ್ಟು, ದೊಡ್ಡದಾಗಿ ಹೆಚ್ಚಿದ ಆಲೂ ತೆರೆದ ಪಾತ್ರೆಯಲ್ಲಿ ಬೇಯಲು ಇಡಿ. ಹುಳಿಗೆ ಹಾಕಬೇಕಾದಷ್ಟು ಉಪ್ಪಿನಲ್ಲಿ ಅರ್ಧವನ್ನು ಈಗಲೇ ಹಾಕಿಬಿಡಿ.

೬) ಮೇಲೆ ರುಬ್ಬಲು ತಯಾರಾದ ಮಿಶ್ರಣಕ್ಕೆ, ನೆನೆಹಾಕಿದ ಹುಣಸೇಹಣ್ಣು ಕಿವುಚಿ ಹಾಕಿ, ಮಿಕ್ಸಿ ಮಾಡಿಟ್ಟುಕೊಳ್ಳಿ

೭) ಕುಕ್ಕರ್ ತೆಗೆದು ಬೆಂದ ಬೇಳೆಯನ್ನು ಚೆನ್ನಾಗಿ ಮಿದ್ದು, ಬೇಯುತ್ತಿರುವ ಆಲೂ ಜೊತೆಗೆ ಹಾಕಿ. ಈರುಳ್ಳಿ ಮತ್ತು ಟೊಮ್ಯಾಟೋ ಹೆಚ್ಚಿ ಹಾಕಿ (ಮೇಲಿನಂತೆ ಈಗಾಗಲೇ ರುಬ್ಬಿ ಹಾಕಿಲ್ಲದಿದ್ದರೆ).

೮) ಇಷ್ಟು ಹೊತ್ತಿಗೆ ಆಲೂ ಒಂದರ್ಧ ಬೆಂದಿರಬೇಕು. ಮೇಲೆ ಮಿಕ್ಸಿ ಮಾಡಿಟ್ಟುಕೊಂಡ ಮಿಶ್ರಣವನ್ನು ಅದಕ್ಕೆ ಹಾಕಿ.

೯) ಇದಾದಮೇಲೆ ತಳ ಹಿಡಿಯದಂತೆ ಆಗಾಗ ಕೈಯಾಡಿಸುತ್ತಿರುವುದು ಒಳ್ಳೆಯದು. ಒಂದು ಕುದಿ ಬಂದನಂತರ ಒಂದೆರಡು ದೊಡ್ಡ ಹಸಿ ಮೆಣಸಿನ ಕಾಯನ್ನು ಉದ್ದುದ್ದಕ್ಕೆ ಸೀಳಿ ಅದಕ್ಕೆ ಹಾಕಿಬಿಡಿ, ಹಾಗೇ ಒಂದು ನಿಂಬೇಹಣ್ಣು ಹಿಂಡಿ (ಸಾಂಬಾರು ಒಂದು ಸ್ವಲ್ಪ ಹುಳಿ ಮುಂದಾಗಿದ್ದರೆ ಚೆನ್ನ ಎಂಬುದಕ್ಕಾಗಿ ಇದು, ಇಲ್ಲದಿದ್ದರೆ ಅರ್ಧ ನಿಂಬೇಹಣ್ಣು ಸಾಕು), ಜೊತೆಗೆ ಅರ್ಧ ನಿಂಬೆಯ ಗಾತ್ರದ ಬೆಲ್ಲ.

೧೦) ಈಗ ಹುಳಿಯ ಗಟ್ಟಿತನ ನೋಡಿಕೊಂಡು ಒಂದೋ ಎರಡೋ ಲೋಟ ನೀರು, ಇನ್ನೂ ಹಾಕಬೇಕಾದ ಉಳಿದ ಉಪ್ಪನ್ನು ಹಾಕಿಬಿಡಿ. ನೀರಿಗೆ ಒಂದು ಚಮಚ ಅಕ್ಕಿಪುಡಿಯನ್ನು ಕದರಿ ಹಾಕಿದರೆ ಇನ್ನೂ ರುಚಿ.

೧೧) ಎಲ್ಲಾ ಒಂದು ಕುದಿ ಕುದ್ದಮೇಲೆ, ಒಂದು ಜೊಂಪೆ ಬೇರು ಕಿತ್ತು ಶುದ್ಧಗೊಳಿಸಿದ ಕೊತ್ತಂಬರಿ ಸೊಪ್ಪನ್ನು ಹಾಗೆಯೇ ಹುಳಿಯಲ್ಲಿ ಮುಳುಗಿಸಿ ಮುಚ್ಚಿಟ್ಟುಬಿಡಿ - ಸಣ್ಣ ಉರಿಯಿರಲಿ.

೧೨) ಇನ್ನೊಂದು ಒಲೆಯ ಮೇಲೆ ಎರಡೋ ಮೂರೋ ಚಮಚೆ ಒಳ್ಳೆಯ ತುಪ್ಪ ಕಾಯಲಿಕ್ಕಿಟ್ಟು (ಎಣ್ಣೆಯೇ? ಅಡುಗೆಗೆ ತುಪ್ಪವಿಲ್ಲದಿದ್ದರೆ ಅದೆಂತಹ ಸಮೃದ್ಧಿ   ತುಪ್ಪವನ್ನೇ ಬಳಸಿ), ಅದಕ್ಕೆ ಸಾಸಿವೆ ಹಾಕಿ ಚಟಗುಟ್ಟಿಸಿ, ಆಮೇಲೆ ಒಂದು ಚಮಚೆಯಷ್ಟು ಕಡಲೆ ಬೇಳೆ, ಉದ್ದಿನಬೇಳೆ ಒಂದೆರಡು ಕಾಳು ಮೆಂತ್ಯ, ಒಂದು ಚಿಟುಕೆ ಇಂಗಿನ ಪುಡಿ, ಒಂದೆಸಳು ಕರಿಬೇವಿನ ಸೊಪ್ಪಿನ ಎಲೆಗಳು ಇಷ್ಟನ್ನೂ ಹಾಕಿ ಬಾಡಿಸಿ ಒಗ್ಗರಣೆ ಹಾಕಿ.

೧೩) ಒಳ್ಳೆಯ ಘಮಘಮ ಸಾಂಬಾರಿನ ಫೋಟೋ ತೆಗೆದು (ಇದು ಮುಖ್ಯ), ಒಲೆ ಆರಿಸಿ, ಮುಚ್ಚಿಟ್ಟುಬಿಡಿ (ಇದೂ ತುಂಬಾ ಮುಖ್ಯ)

೧೪) ಬಂದು ಫೇಸ್ಬುಕ್ಕಿಗೆ ಆ ಫೋಟೋ ಅಪ್ಲೋಡ್ ಮಾಡಿ, ಒಂದೈವತ್ತು ಅರವತ್ತು ಲೈಕ್ ಬರುವವರೆಗೆ ಕಾಯಿರಿ.

೧೫) ಇಷ್ಟುಹೊತ್ತಿಗೆ ಕೊತ್ತಂಬರಿ ಸೊಪ್ಪು ತನ್ನ ಘಮಲನ್ನು ಬಿಟ್ಟಿರುತ್ತದೆ. ಈಗ ಪಾತ್ರೆಯನ್ನು ನೇರ ಊಟದ ಟೇಬಲಿಗೆ ವರ್ಗಾಯಿಸಿ (ಅನ್ನ ಮಾಡಿದ್ದೀರಿ ತಾನೆ?); ಸೊಗಸಾದ ಸಾಂಬಾರ್-ಅನ್ನವನ್ನು ಸವಿಯಲು ಸಿದ್ಧರಾಗಿ.

ಸೂ: ಮೇಲೆ (೪) ರಲ್ಲಿ ಹುಳಿಪುಡಿಯ ಬಗ್ಗೆ ಹೇಳಿದೆ. ಹುಳಿಪುಡಿ - ಶಕ್ತಿ ಸಾಂಬಾರ್ ಪೌಡರನ್ನೋ ಇನ್ನಾವುದನ್ನೋ ಹಾಕಬಹುದು. ಮನೆಯಲ್ಲೇ ಮಾಡಿಕೊಳ್ಳುವುದಾದರೆ ಹೀಗೆ (ಅಳತೆ ಹೇಳಲು ಕಷ್ಟ, ಒಂದು ವಾರಕ್ಕಾಗುವಷ್ಟು ಹೀಗೆ ತಯಾರಿಸಿಕೊಳ್ಳಬಹುದು):

೧) ಕಾಲು ಕೆಜಿ ಒಣಮೆಣಸಿನ ಕಾಯಿ (ಗುಂಟೂರಿನದ್ದಾದರೆ ಒಂದು ಹಿಡಿ ಕಡಿಮೆ ಮಾಡಿ), ಒಂದು ಹಿಡಿ ಕೊತ್ತಂಬರಿ ಬೀಜ, ಒಂದು ಹಿಡಿ ಕಡಲೇಬೇಳೆ, ಒಂದು ಹಿಡಿ ಉದ್ದಿನ ಬೇಳೆ, ಒಂದರ್ಧ ಹಿಡಿ ಮೆಂತ್ಯ, ಎರಡು ಚಮಚ ಜೀರಿಗೆ, ಎರಡು ಚಮಚ ಮೆಣಸು, ಅರ್ಧ ಚಮಚ ಇಂಗಿನ ಪುಡಿ, ಅರ್ಧ ಗಿಟುಕು ಕೊಬ್ಬರಿ ತುರಿ - ಎಲ್ಲವನ್ನೂ ಬೇರೆಬೇರೆ ಹುರಿದಿಟ್ಟುಕೊಳ್ಳಿ (ಕೆಲವರು ಚಕ್ಕೆ, ಲವಂಗ ಎಲ್ಲಾ ಹಾಕುತ್ತಾರೆ, ನನಗೆ ಸೇರದು)

೨) ಆರಿದ ಮೇಲೆ, ಚೆನ್ನಾಗಿ ತೊಳೆದು ಒಣಗಿಸಿದ ಒಂದು ಹತ್ತೋ ಹದಿನೈದೋ ಎಸಳು ಕರಿಬೇವಿನ ಎಲೆಯನ್ನೂ ಹಾಕಿ ಮಿಕ್ಸಿ ಮಾಡಿಟ್ಟುಕೊಳ್ಳಿ

ಮೇಲಿನ ಅಳತೆ ಕೇವಲ ಕೈತೂಕದ್ದಷ್ಟೇ. ಮಾಡುವಾಗ ನೋಡಿಕೊಂಡು ಹದಕ್ಕೆ ತಕ್ಕಂತೆ ಹಾಕಬೇಕು.

ವಿ.ಸೂ: ರುಬ್ಬಿದ ಹುಳಿ ಮಾಡುವುದಾದರೆ ಇನ್ನೂ ರುಚಿಯಾಗಿರುತ್ತದೆ. ಹಾಗೆ ಮಾಡುವುದಾದರೆ, ಮೇಲೆ (೪)ರಲ್ಲಿರುವ ಸೂಚನೆಯ ಬದಲು ಹೀಗೆ ಮಾಡಿ:

೧) ಒಂದೆರಡು ಗುಂಟೂರು ಮೆಣಸಿನಕಾಯಿ (ಬೇರೆಯದಾದರೆ ನಾಲ್ಕು), ಒಂದರ್ಧ ಚಮಚ ಕೊತ್ತಂಬರಿ ಬೀಜ, ಅರ್ಧರ್ಧ ಚಮಚೆ ಕಡಲೇಬೇಳೆ, ಉದ್ದಿನ ಬೇಳೆ, ಎರಡೆರಡು ಕಾಳು ಮೆಂತ್ಯ, ಜೀರಿಗೆ, ಮೆಣಸು, ಚುಟುಕೆ ಇಂಗು ಇಷ್ಟನ್ನೂ ಹುರಿದುಕೊಳ್ಳಿ (ಹುರಿಯದೇ ಹಾಗೇ ಮಾಡುವುದೂ ಉಂಟು, ಅದೂ ಒಂದು ರೀತಿ ರುಚಿ - ಹಾಗೆ ಮಾಡುವುದಾದರೆ ಕಡಲೇಬೇಳೆ, ಉದ್ದಿನಬೇಳೆ ಮತ್ತು ಮೆಂತ್ಯವನ್ನು ಕೆಲಕಾಲ ನೀರಿನಲ್ಲಿ ನೆನೆ ಹಾಕಿಟ್ಟುಕೊಳ್ಳುವುದು ಒಳ್ಳೆಯದು)

೨) ಮೇಲೆ ಹೇಳಿದ ಮಿಶ್ರಣಕ್ಕೆ ಒಂದೆಸಳು ಕರಿಬೇವಿನ ಸೊಪ್ಪು, ಒಂದಷ್ಟು ಶುಂಠಿ, ಎರಡು ಹಿಡಿಯಷ್ಟು ತೆಂಗಿನಕಾಯಿ ತುರಿ, ಒಂದು ಅರ್ಧ ಹಿಡಿ ಹುರಿಗಡಲೆ ಸೇರಿಸಿ ರುಬ್ಬಿಕೊಳ್ಳಿ (ಮೇಲೆ ಹೇಳಿದಂತೆ, ಈರುಳ್ಳಿ ಮತ್ತು ಟೊಮ್ಯಾಟೋ ಕೂಡ ಸೇರಿಸಿ ರುಬ್ಬಿಕೊಳ್ಳಬಹುದು, ಅಥವಾ ಸಾಮಾನ್ಯವಾಗಿ ಮಾಡುವಂತೆ ಅದನ್ನ ಪ್ರತ್ಯೇಕವಾಗಿಯೂ ಹಾಕಬಹುದು). ರುಬ್ಬಲು ಮಿಕ್ಸಿಯ ಬದಲು ಒರಳಿದ್ದರೆ ಇನ್ನೂ ಚಂದ

ಐದನೇ ಪಾಯಿಂಟಿನಿಂದಾಚೆಗೆ ಮೇಲೆ ಹೇಳಿದಂತೆ ಮುಂದುವರೆಯಿರಿ.

ಚಿತ್ರಕೃಪೆ: ವಿಕಿಪೀಡಿಯಾ (Trimmed to fit the frame)