Sunday, August 2, 2009

ಕಂಡಿತು ಕಣ್ಣು ಸವಿದಿತು ನಾಲಗೆ ಪಡೆದೀತೀ ದೇಹಾ...

ನಡುಬೇಸಿಗೆಯ ಮಧ್ಯಾಹ್ನ, ಒಂದೆಲೆ ಅಲುಗುವಷ್ಟೂ ಗಾಳಿಯಿಲ್ಲ. ಮೋಡ ಕವಿದರೂ ಬಾರದ ಮಳೆ, ಮೂಗುಬ್ಬಸ. ಉರಿಯುವ ಬಿಸಿಲಿಗೆ ಮನೆಯ ತಾರಸಿ ಕಾದು ಒಳಗೂ ಹೊರಗೂ ಅಸಾಧ್ಯ ಧಗೆ. ಬೆಳಗಿನಿಂದ ಯಾವಯಾವುದೋ ವಿಚಾರಗಳಲ್ಲಿ ಸಿಕ್ಕಿ ಮನಸ್ಸು ಕೊಚ್ಚೆಯಾಗಿತ್ತು. ಹಣಕಾಸಿನ ಲೆಕ್ಕವಾಯಿತು, ಮನೆ ಖರ್ಚಿನ ಲೆಕ್ಕವಾಯಿತು, careerಬಗೆಗಿನ ಚಿಂತನೆಯಾಯಿತು, mail check ಮಾಡಿದ್ದಾಯಿತು, ಆರ್ಕುಟ್ ನೋಡಿದ್ದಾಯಿತು, ಟೀವಿ ಆಯಿತು... ಉಹೂಂ, ಮನಸ್ಸು ಅದೇಕೋ ವಿರಮಿಸಲೊಲ್ಲದು. ಎದ್ದು ಹೋಗಿ ನನ್ನ ಲೈಬ್ರರಿಯಿಂದ ಕವನ ಸಂಕಲನವೊಂದನ್ನು ಹೊರಗೆಳೆದೆ. ಬೇಂದ್ರೆಯವರ ಕವನ ಸಂಕಲನಗಳ ಸಂಕಲನ ಅದು. ಪುಸ್ತಕ ತೆರೆದಾಗ ಮೊದಲು ಸಿಕ್ಕ ಕವಿತೆ "ಬೆಳಗು", ನನ್ನ ಅಚ್ಚುಮೆಚ್ಚಿನ ಕವನಗಳಲ್ಲೊಂದು. "ವಾಹ್" ಅನ್ನಿಸಿತು. ಈ ಕವನ ತನ್ನ ವಿಶಿಷ್ಟ ಗೇಯತೆಯೊಂದಿಗೆ, ಕಾವ್ಯ ಗುಣದೊಂದಿಗೆ ಮತ್ತೆ ಮತ್ತೆ ಮನದಲ್ಲಿ ರಿಂಗಣಗೊಳ್ಳುತ್ತದೆ. ಬೆಳಗು ತರುವ ಚೈತನ್ಯದ ಸಾಂಕ್ರಾಮಿಕತೆ, ಅದು ತಾನೇ ತಾನಾಗಿ ಮುಟ್ಟಿದ್ದಕ್ಕೆಲ್ಲಾ ಊಡುವ ಜೀವ, ಅದನ್ನು ಚಿತ್ರಿಸುವ ಪರಿ, ಅನ್ಯಾದೃಶ.


"ರತ್ನದ ರಸದಾ ಕಾರಂಜೀಯೂ ಪುಟಪುಟನೇ ಪುಟಿದು ತಾನೆ ಪುಟಪುಟನೇ ಪುಟಿದು ಮಘಮಘಿಸುವಾ ಮುಗಿದ ಮೊಗ್ಗೀ ಪಟಪಟನೇ ಒಡೆದು ತಾನೇ ಪಟಪಟನೇ ಒಡೆದು" ಎನ್ನುವಲ್ಲಿ ರತ್ನದ ರಸದ ಕಾರಂಜಿ ಪುಟಪುಟನೆ ಪುಟಿದಾಗ, ಮುಗಿದ ಮೊಗ್ಗು ತಾನಾಗೇ ಒಡೆಯುವುದು. ಕಾವ್ಯದ ಸೌಂದರ್ಯದೊಡನೆ ಇಲ್ಲಿ ಮತ್ತೆ ಮತ್ತೆ ಅನುರಣನಗೊಳ್ಳುವ ಸಾಲುಗಳು, ಅದಕ್ಕೆ ತಕ್ಕಂತೆ ಮೇಳದಂತೆ ಬರುವ ಪ್ರಾಸಗಳು ಅದಕ್ಕೊಂದು ವಿಚಿತ್ರ ಗೇಯತೆ ತಂದುಕೊಡುತ್ತದೆ. ಹಾಗೆಯೇ ಮತ್ತೊಂದು ಸಾಲು - "ತಂಗಾಳೀಯಾ ಕೈಯೊಳಗಿರಿಸೀ ಎಸಳಿನಾ ಚವರಿ ಹೂವಿನ ಎಸಳೀನಾ ಚವರಿ, ಹಾರಿಸಿಬಿಟ್ಟರು ತುಂಬಿಯ ದಂಡು ಮೈಯೆಲ್ಲಾ ಸವರಿ ಗಂಧಾ ಮೈಯೆಲ್ಲಾ ಸವರಿ" - ಎಸಳಿನ ಚವರಿ ಮತ್ತೆ "ಹೂವಿನ ಎಸಳಿನ ಚವರಿ" ಎಂದು ಅನುರಣನಗೊಳ್ಳುವ ಮೂಲಕ ಎಸಳಿನ ಚವರಿಗೆ ಹೊಸ ಅರ್ಥ ಕೊಡುತ್ತದೆ. ಚವರಿಯ ಕೆಲಸವೇ ತಂಗಾಳಿ ಬೀಸುವುದು. ಮತ್ತೆ ತಂಗಾಳಿಯೇ ಚವರಿ ಹಿಡಿದು ನಿಂತರೆ? ಅದಕ್ಕೆ ಅನುವಾದವಾಗಿ ಬರುವ ಮುಂದಿನ ಸಾಲು ನೋಡಿ, "ಹಾರಿಸಿಬಿಟ್ಟರು ತುಂಬಿಯ ದಂಡು, ಮೈಯೆಲ್ಲಾ ಸವರಿ.. ಗಂಧಾ ಮೈಯೆಲ್ಲಾ ಸವರಿ". ಹೂವಿಗೂ ದುಂಬಿಗೂ ಇರುವ ಸಂಬಂಧ ಸರ್ವ ಸಾಮಾನ್ಯ. ಹೂವಿನೆಸಳಿನ ಚವರಿ ಬಂದಾಗ ದುಂಬಿಯ ಪ್ರಸ್ತಾಪ ಸಹಜವೇ, ಆದರೆ ಅದನ್ನು ಸುಮ್ಮನೇ ಹಾರಿಸಿ ಬಿಡಲಿಲ್ಲ "ಹಾರಿಸಿಬಿಟ್ಟರು... ಮೈಯೆಲ್ಲಾ ಸವರಿ" ಅನ್ನುವಾಗಿನ ಆಪ್ಯಾಯತೆ, "ಗಂಧಾ ಮೈಯೆಲ್ಲಾ ಸವರಿ" ಎಂದು ಅನುರಣನಗೊಂಡಾಗ, ಹೂವು, ದುಂಬಿ, ಗಂಧಗಳ ಮಧುರ ಸಂಬಂಧ ಸುಂದರವಾಗಿ ಮೈದಳೆಯುತ್ತದೆ.


ಕವನವನ್ನು ಮೆಚ್ಚುತ್ತಾ ಇರಬೇಕಾದರೆ, ಮೂರು ವರ್ಷದ ರಾಘವಾಂಕ "ಅಣ್ಣಾ" ಎಂದು ಕರೆದಿದ್ದು ಕೇಳಿಸಿತು. ತಲೆಯೆತ್ತಿ ನೋಡಿದೆ. ಕಂಪ್ಯೂಟರಿನಲ್ಲಿ ಅದಾವುದೋ ಭಾವಗೀತೆ ಸಣ್ಣಗೆ ಗುಯ್ ಗುಡುತ್ತಿತ್ತು. ಟೀವಿ ಬಡಬಡಿಸುತ್ತಿತ್ತು, ನೋಡುವರಾರೂ ಇಲ್ಲದೆ. ರಾಘವಾಂಕ ಮಾಡಲು ಚೇಷ್ಟೆಯೇನೂ ಹೊಳೆಯದೆ ಅದಾವುದೋ ಪುಸ್ತಕದ ಮೇಲೆ ಗೀಚುತ್ತಾ ಮಂಕಾಗಿ ಕುಳಿತಿದ್ದ. ಅವನು ಕೆಲವೊಮ್ಮೆ ಬೈಕಿನಂತೆ, ಕೆಲವೊಮ್ಮೆ ಕುದುರೆಯಂತೆ ಬಳಸುವ ದೊಡ್ಡ ನಾಯಿಯ ಬೊಂಬೆ ನಿರ್ಲಕ್ಷ್ಯಕ್ಕೊಳಗಾಗಿ ಅಲ್ಲೊಂದು ಕಡೆ ಬಿದ್ದಿತ್ತು. ಸಾಮಾನ್ಯವಾಗಿ ಸುಮ್ಮನೆ ಕುಳಿತಿರುವ ಜೀವವಲ್ಲ ರಾಘವಾಂಕ. ಏನಾದರೊಂದು ಮಾಡುತ್ತಿರಬೇಕು - ಗೋಡೆಯ ಮೇಲೆ ಗೀಚುವುದೋ, ರೇಡಿಯೋ-ಗೀಡಿಯೋ ಬಿಚ್ಚಿ "ರಿಪೇರಿ" ಮಾಡುವುದೋ, ಚತ್ತಿನ ಮೇಲೆ ಕುಳಿತ ದೊಡ್ಡ ಹಲ್ಲಿಗೆ ಕೂಗುಹಾಕಿ ಓಡಿಸಲು ಪ್ರಯತ್ನಿಸುವುದೋ, ಏನಾದರೊಂದು. ನೀರಾಟ ಅವನ ಅತಿ ಇಷ್ಟವಾದ ಕ್ರೀಡೆಗಳಲ್ಲೊಂದು. ಆದರೆ "ಮಗುವಿಗೆ ಶೀತ ಆಗಬಹುದೆಂಬ" ಕಾರಣದಿಂದ ಈ ಕ್ರೀಡೆಯಮೇಲೆ ಕಟ್ಟುನಿಟ್ಟಿನ ನಿಷೇಧವಿತ್ತು. ನಿಷೇಧಿತವಾಗಿದ್ದು ಇದೊಂದೇ ಅಲ್ಲ, ಟೆರೇಸಿನ ಮೇಲೆ ಹೋಗುವುದು, ಒಬ್ಬನೇ ಬಚ್ಚಲ ಮನೆಗೆ ಹೋಗುವುದು, ಗೇಟಿನ ಬಳಿ ಆಡುವುದು, ಮಣ್ಣು ಮುಟ್ಟುವುದು, ಬಿಸಿಲಲ್ಲಿ ಹೋಗುವುದು, ಪುಸ್ತಕ-ಪೆನ್ನು ಮುಟ್ಟುವುದು, ಹೀಗೆ ಅವನನ್ನು ಕಟ್ಟಿ ಹಾಕಿದ್ದ ಪಟ್ಟಿ ಸಾಕಷ್ಟು ದೊಡ್ಡದೇ ಇದೆ. ಆದರೆ ಅವನೋ, "ದೇವರಂತೆ ಬಂದು ಠಾವಿಲಿ ಕೂಡ"ಲು ಒಲ್ಲದ ಹುಲು ಮಾನವ ಶಿಶು. ನಾನು ಮನೆಯಲ್ಲಿದ್ದರೆ ಈ ಪಟ್ಟಿಯ ಕಟ್ಟು ಸ್ವಲ್ಪ ಸಡಿಲಗೊಳ್ಳುತ್ತದೆ. ಹಾಗೆ ದೊರಕುವ ಸ್ವಾತಂತ್ರ್ಯಕ್ಕಾಗಿ ಅವ ನನಗೋಸ್ಕರ ಪ್ರತಿ ವಾರ ಕಾದಿರುತ್ತಾನೆ.

"ಅಣ್ಣಾ" ಎಂದು ಕರೆದಾಗೊಮ್ಮೆ ತಲೆಯೆತ್ತಿ ಮಗನ ಮುಖ ನೊಡಿದೆ. ಅನ್ಯಮನಸ್ಕನಾಗಿ ನನ್ನದೊಂದು ಪುಸ್ತಕದ ಮೇಲೆ ಗೀಚುತ್ತಾ ಕುಳಿತಿದ್ದ. ನಾನು ಪುಸ್ತಕ ಹಿಡಿದು ಕುಳಿತಿದ್ದಕ್ಕೆ ಅಸಮಾಧಾನ ಮುಖದ ಮೇಲೆ ಆಳವಾಗಿ ಕೊರೆದಿಟ್ಟಂತಿತ್ತು. ಮತ್ತೆ ತನ್ನ ಬಾಲಭಾಷೆಯಲ್ಲಿ ಹೇಳಿದ "ಅಣ್ಣಾ, ಆ ಪುಸ್ತಕ ಚೆನ್ನಾಗಿಲ್ಲ, ಮುಚ್ಚಿಡು. ಕಂಪ್ಯೂಟರು ಆರಿಸು... ಬಾ ಇಲ್ಲಿ". ಪುಸ್ತಕ ಪಕ್ಕಕ್ಕಿಟ್ಟು ಎದ್ದು ಹತ್ತಿರ ಹೋದೆ. ಅವನು ಗೀಚುತ್ತಿದ್ದ ಪುಸ್ತಕ ನನ್ನ Financial Management ಪುಸ್ತಕ! ಓದಲು ಬರದ ಮಗು, ಬರೆಯುತ್ತಿತ್ತು. ಬೈಯಲು ಮನಸ್ಸು ಬರಲಿಲ್ಲ. ಪೆನ್ನನ್ನು ಕಿತ್ತುಕೊಂಡು ಮಗನನ್ನು ಹತ್ತಿರ ಸೆಳೆದು ಹಗುರವಾಗಿ ಮುದ್ದಿಸಿದೆ. ಪೆನ್ನು ಕಿತ್ತುಕೊಂಡದ್ದಕ್ಕೆ ಪ್ರತಿಭಟನೆಯೇನೂ ವ್ಯಕ್ತವಾಗಲಿಲ್ಲ. ತನ್ನ ಬಾಲಭಾಷೆಯಲ್ಲಿ ಮತ್ತೆ ಹೇಳಿತು ಮಗು "ಅಣ್ಣಾ, ಕಂಪ್ಯುಟರ್ ಮಾಡಿದ್ದು ಸಾಕು, ಆರಿಸಿಬಿಡು, ಇಲ್ಲಿ ಕೂತುಕೋ ಬಾ" ಹಾಗೇ ಮಗುವನ್ನು ಅಪ್ಪಿಕೊಂಡು ಚಿಂತಿಸಿದೆ. ಬೆಳಗಿನಿಂದ ನಾನು ಕಾಲ ಕಳೆದಿದ್ದು ಕಾಗದ ಹೂಗಳ ನಡುವೆ ಅಲ್ಲವೇ! ಕ್ಷಣ ಸುಮ್ಮನಾದೆ.


ಮೇಲೆ ನೀರಿನ ತೊಟ್ಟಿ ಕೊಳೆಯಾಗಿತ್ತು, ನಲ್ಲಿಯಲ್ಲಿ ಕೊಳೆನೀರು ಬರುತ್ತಿತ್ತು. ಕ್ಲೀನ್ ಮಾಡಬೇಕು. ಇಂಥ ಕೆಲಸವೆಲ್ಲಾ ಚಿಕ್ಕಂದಿನಿಂದ ನನ್ನದೇ. ಈಗ ನನ್ನ ಮಡಿಲಲ್ಲಿ ಕುಳಿತು ಮುದ್ದುಗರೆಯುತ್ತಿದ್ದ ರಾಘವಾಂಕನಿಗೆ ಹೇಳಿದೆ "ಮೇಲೆ ಟ್ಯಾಂಕ್ ಕ್ಲೀನ್ ಮಾಡೋಣ?" ಅಷ್ಟು ಹೇಳಿದ್ದೇ ತಡ, ಅದೆಲ್ಲಿತ್ತೋ ಉತ್ಸಾಹ, ದುಡುದುಡು ಓಡಿಹೋದ, ಒಂದು ಪುಟ್ಟ ಬಕೆಟ್ಟು, ಮಗ್ಗು ಮತ್ತೊಂದು ದೊಡ್ಡ ಬಕೆಟ್ ತಂದ. ತೊಟ್ಟಿ ಕ್ಲೀನ್ ಮಾಡುವ ಕ್ರಮ ಅವನಿಗೆ ಸಂಪೂರ್ಣ ಗೊತ್ತು. ಕೆಳಗೆ ನೆಲ್ಲಿಯಲ್ಲಿ ನೀರು ಬಿಟ್ಟು ಟ್ಯಾಂಕ್ ಖಾಲಿ ಮಾಡಬೇಕು. ಟ್ಯಾಂಕಿನ ನೀರು ತಳಮಟ್ಟ ಮುಟ್ಟಿದ ಮೇಲೆ ಟೆರೇಸಿನ ಮೇಲೆ ಹೋಗಿ ನಾನು ಟ್ಯಾಂಕಿನ ಕಟ್ಟೆಯ ಮೇಲೆ ಹತ್ತಬೇಕು; ದೊಡ್ಡ ಬಕೆಟ್ಟನ್ನು ಟ್ಯಾಂಕಿನ ಕಟ್ಟೆಯ ಕೆಳಗೆ ನೆಲದ ಮೇಲಿಡಬೇಕು; ಟ್ಯಾಂಕಿನ ತಳ ನನ್ನ ಕೈಗೆ ನಿಲುಕದ್ದರಿಂದ ಯಾರಾದರೊಬ್ಬರು ಅದರ ಒಳಗೆ ಇಳಿದು ಅಲ್ಲಿ ಉಳಿದ ನೀರು ಖಾಲಿ ಮಾಡಬೇಕು. ಅದಕ್ಕೆ ಎರಡಡಿ ಉದ್ದದ ರಾಘವಾಂಕನಲ್ಲದೆ ಇನ್ನಾರಿಗೆ ಸಾಧ್ಯ! ಅದು ಅವನ ಹಿಗ್ಗು. ಕ್ಲೀನ್ ಮಾಡುವ ಪರಿಕರಗಳನ್ನೆಲ್ಲಾ ಹೊತ್ತು ತಂದು, ಎಲ್ಲರಬಳಿಯೂ ಒಮ್ಮೆ ಹೋಗಿ ಹೇಳಿಕೊಂಡು ಬಂದ. ಅವನ ಅಮ್ಮನ ಬಳಿ ಹೋಗಿ "ಅಮ್ಮಾ, ಈಗ ಅಣ್ಣ ನನಗೆ ಟ್ಯಾಂಕ್ ಕ್ಲೀನ್ ಮಾಡಲು ಹೇಳಿದೆ. ನೀನು ನನ್ನ ಬಯ್ಯಕೂಡದು" ಎಂದು ತಾಕೀತಿನ ರೂಪದ ಅಪ್ಪಣೆ ಬೇಡಿದ್ದೂ ಆಯಿತು; ಅವಳು "ಸರಿ, ಅಪ್ಪ ಮಗನಿಗೆ ಇನ್ನೇನು ಕೆಲಸ, ಉರಿಬಿಸಿಲು, ಮಗು ನೀರಾಡಿ ಶೀತ ಬಂದರೆ ಡಾಕ್ಟರ ಬಳಿ ಹೋಗಲು ನಾನು ಗಟ್ಟಿಯಾಗಿದ್ದೀನಲ್ಲ" ಎಂದು ಆಕ್ಷೇಪಣಾರೂಪದ ಅನುಮತಿಯನ್ನು ನೀಡಿದ್ದೂ ಆಯಿತು. ನೀರಾಟದ, ಕ್ಷಮಿಸಿ, ಕ್ಲೀನ್ ಮಾಡುವ ಪರಿಕರಗಳನ್ನು ಹೊತ್ತು ನಾವಿಬ್ಬರೂ ಮೇಲೆ ನಡೆದೆವು.

ಕೆಳಗೆ ನೆಲ್ಲಿ ಬಿಟ್ಟಿದ್ದರಿಂದ ಟ್ಯಾಂಕಿನ ನೀರು ತಳ ಮುಟ್ಟಿತ್ತು. ಇನ್ನಷ್ಟು ನೀರನ್ನು ಮೊಗೆದು ಈಚೆ ಸುರಿಯಬೇಕಿತ್ತು. ಮೇಲೆ ಬಿಸಿಲಿಗೆ ಟೆರೇಸು ಕಾದಿತ್ತು. ನಾನು ನೀರು ಮೊಗೆದು ಕೆಳಗಿದ್ದ ಬಕೀಟಿಗೆ ಸುರಿದರೆ, ರಾಘವಾಂಕ ಮತ್ತೊಂದು ಮಗ್ಗಿನಿಂದ ಅದನ್ನು ಮೊಗೆದು ಟೆರೇಸಿನ ಮೇಲೆ ಸುರಿಯುವುದು ವ್ಯವಸ್ಥೆ. ಆ ಹಿಗ್ಗನ್ನು ಮೊಗೆಯಲು ಅವನಾಗಲೇ ಉತ್ಸುಕನಾಗಿದ್ದ. ಹಿಗ್ಗು ಮೊಗದಲ್ಲಿ ಕುಣಿಯುತ್ತಿತ್ತು. ನಾನು ಮೇಲಿನಿಂದ ನೀರನ್ನು ಸುರಿಯಲು ಶುರು ಮಾಡಿದೆ. ಬಕೆಟ್ಟು ತುಂಬುವತನಕ ಕಾಯುವ ಮಾತೇ ಇಲ್ಲ. ಮಗ್ಗಿಗೆ ಸಿಕ್ಕಷ್ಟು ನೀರು ಮೊಗೆದು ಸಿಕ್ಕ ಸಿಕ್ಕಂತೆ ಎರಚತೊಡಗಿದ. ಪುಟ್ಟ ಮಗು ಇಷ್ಟಿಷ್ಟೇ ನೀರು ಎರಚಾಡುತ್ತಾ ಇಡೀ ಟೆರೇಸಿನ ತುಂಬಾ ಕುಣಿಯುತ್ತಿದ್ದರೆ, ಮೇಲಿನ ಸುಡುಬಿಸಿಲಿಗೂ ಅದರ ಲಯ ದಕ್ಕಿತ್ತು. ಮೋಡ ನೆರಳು ಬೆಳಕಿನಾಟ ನಡೆಸಿತ್ತು. ಮಕ್ಕಳನ್ನು ಬಿಸಿಲು ಸುಡುವುದುಂಟೇ? ಶೀತ ಮುಟ್ಟುವುದುಂಟೇ? ಇವಳಿಗೆಲ್ಲೋ ಭ್ರಾಂತು. ಮೇಲಿನ ಗದ್ದಲ ಕೇಳಿ ನನ್ನನ್ನು ಬೈಯಲೆಂದು ಮೇಲೆ ಬಂದ ಮಡದಿ, ಕುಣಿಯುತ್ತಿದ್ದ ಮಗನ ಚೆಲುವಿಗೆ ಮನಸೋತು ಕ್ಷಣ ನಿಂತು ಹಿಂದಿರುಗಿದಳು. ಅಲ್ಲೆಲ್ಲೋ ಏನೋ ಓದುತ್ತಿದ್ದ ನನ್ನ ತಮ್ಮ ಮೇಲೆ ಬಂದ. ಚಿಕ್ಕಪ್ಪನನ್ನು ನೋಡಿದ ಮಗುವಿಗೆ ಮತ್ತೂ ಉತ್ಸಾಹ. ಈ ಉತ್ಸಾಹದ ಭರದಲ್ಲಿ ನಾನು ಮೇಲಿನಿಂದ ಸುರಿಯುತ್ತಿದ್ದ ನೀರಿಗೆ ತಲೆ ಕೊಟ್ಟ. ತಲೆಯೆಲ್ಲಾ ತೊಯ್ದುಹೋಯ್ತು. ಒಂದು ಕ್ಷಣವಷ್ಟೇ ಚಕಿತನಾಗಿ ನಿಂತಿದ್ದು. ಮರುಕ್ಷಣ ಹಿಗ್ಗು ಕಿತ್ತು ಹರಿಯಿತು. ಸುಡುಬಿಸಿಲಿನಲ್ಲಿ, ಹಾಕಿಕೊಂಡಿದ್ದ ಬಟ್ಟೆ ಸಮೇತ ಅನಾಮತ್ತು ನೆನೆದಿತ್ತು ಮಗು. ಮುಂದಿನ ಒಂದು ಮಗ್ಗು ನೀರನ್ನು ಅವ ನೆಲಕ್ಕೆ ಸುರಿಯಲೇ ಇಲ್ಲ. ಸೀದಾ ತಲೆಯಮೇಲೆ ಸುರಿದುಕೊಂಡದ್ದೇ! ಆ ಕ್ಷಣಕ್ಕೆ ಅವನ ಮುಖ ನೋಡಬೇಕಿತ್ತು. ನೂರು ಭಾವದ ಮೆರವಣಿಗೆ, ನೀರಿನ ಕಟ್ಟಳೆ ಮೀರಿದ್ದೋ, ಅನಿರೀಕ್ಷಿತ ಸ್ನಾನವೋ, ಉಟ್ಟಬಟ್ಟೆ ಪೂರಾ ನೆಂದಿದ್ದೋ, ನೂರು ಬೆಳಕಿನ ಸಂತೆ ಅಲ್ಲಿತ್ತು. ಇಷ್ಟು ನೆನೆದ ಮೇಲೆ ಇನ್ನೇನು ಎಂದು ಇಡೀ ಬಕೆಟ್ಟಿನಲ್ಲಿದ್ದ ನೀರನ್ನು ತೆಗೆದು ಅನಾಮತ್ತಾಗಿ ಮೇಲೆ ಸುರಿದುಕೊಂಡು ದಬದಬನೆ ಕುಣಿಯಲಾರಂಭಿಸಿದ. ವಿಚಿತ್ರ ಉನ್ಮಾದ ಮುಖದಲ್ಲಿ ಕುಣಿಯುತ್ತಿತ್ತು. ಅವನ ಕಾಲಿನ ಹುಚ್ಚು ಲಯಕ್ಕೆ ಸಿಕ್ಕಿ ಟೆರೇಸು ಪೂರಾ ನರ್ತಿಸುತ್ತಿತ್ತು. ಆ ಕ್ಷಣಕ್ಕೆ ಆ ಮೊಗದಲ್ಲಿ ಮೂಡಿದ ಹಿಗ್ಗು, ಚೊಂಬು ನೀರಿನ ಕಿಂಚಿತ್ತಿನಿಂದ ಪಡೆದ ಧನ್ಯತೆಯ ಮಹತ್ತು, ನೋಡಿಯೇ ಅನುಭವಿಸಬೇಕಾದ್ದು. ಕೆಳಗೆಲ್ಲೋ ಕಾವ್ಯದ ಪುಸ್ತಕದಲ್ಲಿ ಮಲಗಿದ್ದ ನಿರ್ಜೀವ ಸಾಲುಗಳು ಜೀವ ಪಡೆದು ಕಣ್ಣ ಮುಂದೆ ನಿಂತಿತ್ತು.

ಕಂಡಿತು ಕಣ್ಣು ಸವಿದಿತು ನಾಲಗೆ ಪಡೆದಿತೀ ದೇಹ
ಸ್ಪರ್ಶಾ ಪಡೆದೀತೀ ದೇಹ
ಕೇಳಿತು ಕಿವಿಯು ಮೂಸಿತು ಮೂಗು ತನ್ಮಯವೀ ಗೇಹ
ದೇವರದೀ ಮನಸಿನ ಗೇಹಾ

ಅಲ್ಲವೇ? ಮೈ-ಕೈ ಕಟ್ಟಿ ಕಿಟಕಿ-ಬಾಗಿಲು ಮುಚ್ಚಿ ಮಾಡುವ ಅದಾವ ಧ್ಯಾನ, ಅದಾವ ಯೋಗ ನೀರಾಟವಾಡಿದ ಈ ಪೋರನ ಆನಂದ ತರಬಲ್ಲುದು? ಚೈತನ್ಯದ ಪರಮ ಸುಖ ಮೈಯ ಮೂಲಕವೇ ಅಲ್ಲವೇ ಮನವನ್ನು ಮುಟ್ಟುವುದು. ಅದು ರಾಘವಾಂಕನ ನೀರಾಟವಿರಬಹುದು, "ಮಘಮಘಿಸುವ ಹೂವಿನ ಮೊಗ್ಗೀ" ಇರಬಹುದು, ಬೆಳಗಿನ ಚೈತನ್ಯಪೂರ್ಣ ಆನಂದವಿರಬಹುದು, ಅದು ಮೈಯ ಗೇಹದ ಮೂಲಕವೇ ಅಲ್ಲವೇ ಸುಳಿದು ಮನಸಿನ ದೇವರನ್ನು ಮುಟ್ಟುವುದು. ಇಂದ್ರಿಯವಾದದ ಕಾವ್ಯಮಯ ಪ್ರಸ್ತುತಿ ಇದೇ ಅಲ್ಲವೇ?

ಕವಿಗೆ ಅದೊಂದು ಒಳಗಣ್ಣಿದೆ, ನಿಜ, ಆದರೆ ಅವನು ಹೊರಗಣ್ಣನ್ನು ಮುಚ್ಚಿ ಕೂಡುವುದಿಲ್ಲ. ಹೊರಗಣ್ಣಿಲ್ಲದೇ ಒಳಗಣ್ಣಿಲ್ಲ. ಅವನಿಗೆ ಪ್ರಪಂಚ ಇಂದ್ರಿಯಗಳ ಮೂಲಕವೇ ಒಳಗಿಳಿಯಬೇಕು; ಅದು ಕೊಡುವ ಸಮಸ್ತ ಅನುಭವಗಳೂ ಅವನಿಗೆ ಬೇಕು, ಬೇರೆಯವರಿಗಿಂತ ಹೆಚ್ಚು ಬೇಕು, ಯಾಕೆಂದರೆ, ಬೇರೆಯವರು ಅದನ್ನು ಸುಮ್ಮನೇ ಅನುಭವಿಸಿ ಮರೆಯುತ್ತಾರೆ, ಆದರೆ ಕವಿ ಹಾಗಲ್ಲ, ಪಡೆದದ್ದನ್ನು ನೂರ್ಮಡಿ ಅನುಭಿಸುತ್ತಾನೆ, ಅನುಭವಿಸಿ ಹಾಡುತ್ತಾನೆ, ಹಾಡಿ ತನ್ನ ಅನುಭವನ್ನು ಕಣ್ಣಿಗೆ ಕಟ್ಟುವಂತೆ, ಮನ ಮುಟ್ಟುವಂತೆ ಹಂಚುತ್ತಾನೆ.

ಅದಕ್ಕೇ, ಹೆರರಿಗೆ ಇದು ಬರೀ ಬೆಳಗಾದರೆ, ಕವಿಗೆ ಅದು ಬರಿ ಬೆಳಗಲ್ಲ... ಅಮೂರ್ತವಾದ ಶಾಂತಿರಸದ ಮೂರ್ತರೂಪ.

ಅರಿಯದು ಅಳವು ತಿಳಿಯದು ಮನವುಕಾಣಾದೋ ಬಣ್ಣಾ
ಕಣ್ಣಿಗೆ ಕಾಣಾದೋ ಬಣ್ಣಾ
ಶಾಂತಿರಸವೇ ಪ್ರೀತಿಯಿಂದಾಮೈದೊರೀತಣ್ಣಾ
ಇದು ಬರಿ ಬೆಳಗಲ್ಲೋ ಅಣ್ಣಾ..

ಸ್ವಭಾವತಃ ಅಮೂರ್ತವಾದ ಶಾಂತಿರಸ ಹೀಗೆ ಪ್ರೀತಿಯಿಂದ ಮುಂಜಾವಿನ ರೂಪದಲ್ಲಿ ಮೈದೋರದಿದ್ದರೆ, "ಅರಿಯದು ಅಳವು ತಿಳಿಯದು ಮನವು ಕಾಣಾದೋ ಬಣ್ಣಾ, ಕಣ್ಣಿಗೆ ಕಾಣಾದೋ ಬಣ್ಣಾ" ಎಂದು ಮೂರ್ತಕ್ಕೇ ಒಗ್ಗಿಕೊಂಡ ಈ ಮನಸ್ಸಿಗೆ ತನ್ನ ಸುತ್ತಮುತ್ತಲ ಈ ಚಿಲಿಪಿಲಿಯಲ್ಲೂ ಅಂತರ್ಗತವಾದ ಶಾಂತಿ ಅರಿವಿಗೆ ಬರುವುದಾದರೂ ಹೇಗೆ.

ಮೂರ್ತದಿಂದ ಅಮೂರ್ತದೆಡೆಗೆ, ಹುಚ್ಚು ಉನ್ಮಾದದಿಂದ ಪರಮ ಶಾಂತಿಯೆಡೆಗೆ; ಲೋಕೋತ್ತರದ ಪಯಣಕ್ಕೆ ಹೆಬ್ಬಾಗಿಲು ಲೋಕವೇ ಅಲ್ಲವೇ?