Sunday, July 4, 2021

ಭವ-ಭಾವ-ಅನುಭಾವ

"... ರಸವೆಂದರೇನು ಎಂಬುದರ ದಿಗ್ದರ್ಶನವನ್ನಾದರೂ ಇಲ್ಲಿ ಮಾಡಿಕೊಡುವುದು ಅವಶ್ಯವೆನಿಸುತ್ತದೆ... ಭಾವವನ್ನು ಉದ್ಬೋಧಗೊಳಿಸುವ ಕಾರಣಸಾಮಗ್ರಿಗೆ 'ವಿಭಾವ' ಎಂದೂ, ಭಾವದ ಕಾರ್ಯಸಮುದಾಯಕ್ಕೆ 'ಅನುಭಾವ' ಎಂದೂ ಸಂಜ್ಞೆ... ಈ ವಿಭಾವಾನುಭಾವಗಳನ್ನು ಕವಿ ಸಮುಚಿತವಾಗಿ ವರ್ಣಿಸಿರುವುದರಿಂದ ಅವುಗಳನ್ನು ಪರಿಭಾವಿಸಿದ ಮಾತ್ರಕ್ಕೇ ನಾವು ...ರಸವನ್ನು ಅನುಭವಿಸುತ್ತೇವೆ"
 
- ತೀನಂಶ್ರೀ (ಭಾರತೀಯಕಾವ್ಯಮೀಮಾಂಸೆ).

ಟಿಪ್ಪಣಿ:
ಭವವೆಂಬ ಭೌತಿಕಜಗತ್ತಿನಿಂದ ವಿಭಾವ, ವಿಭಾವದಿಂದ ಅನುಭವ, ಅನುಭವದಿಂದ ಭಾವ, ಭಾವದಿಂದ ಅನುಭಾವ; ಈ ವಿಭಾವಾನುಭಾವಗಳು ಭೌತಿಕ ಜಗತ್ತಿನಲ್ಲಾಗುವುದರ ಬದಲು ಕಾವ್ಯದಲ್ಲಿ ಆದಾಗ ಅದರಿಂದ ನಮ್ಮಲ್ಲುಂಟಾಗುವ ವಿಶಿಷ್ಟ ಅನುಭವಕ್ಕೆ 'ರಸ' ಎಂದು ಹೆಸರು - ಹೀಗಿಟ್ಟುಕೊಳ್ಳಬಹುದು.

ಭವ (ಈ ಭೌತಿಕಜಗತ್ತು) ತನ್ನ ದಿನನಿತ್ಯದ ಆಗುಹೋಗುಗಳಿಂದ ವ್ಯಕ್ತಿಯ ಮೇಲೆ ನಿರಂತರ ಪರಿಣಾಮವನ್ನುಂಟುಮಾಡುತ್ತಿರುತ್ತದೆ.  ಭವದ ಆಗುಹೋಗುಗಳಿಂದ ವ್ಯಕ್ತಿಯಲ್ಲಾಗುವ ಅನುಭೂತಿ (ಹಿತ, ನೋವು, ಉತ್ಸಾಹ ಇತ್ಯಾದಿಗಳು) ಅನುಭವವೆಂದು ಕರೆಸಿಕೊಳ್ಳುತ್ತವೆ - ಭವವನ್ನು ಅನುಸರಿಸಿ ಬಂದದ್ದು, ಭವದಿಂದ ಬಂದದ್ದು 'ಅನು'ಭವ.  ಈ ಅನುಭವದಿಂದ ಉಂಟಾಗುವ ಚಿತ್ತವೃತ್ತಿಯೇ ಭಾವ (ಸುಖ, ದುಃಖ, ಆನಂದ ಇತ್ಯಾದಿ).  ಈ ಭಾವವನ್ನುಂಟುಮಾಡುವ ಜಗತ್ತಿನ ಕಾರ್ಯಸಮುದಾಯ (ಆಗುಹೋಗು)ಗಳೇ 'ವಿಭಾವ'ಗಳು.   

ಈ ಭಾವ, ವ್ಯಕ್ತಿಯಲ್ಲಿ ಉಂಟಾದ ಮೇಲೆ ಅದು ಆ ಆಗುಹೋಗಿಗೆ (ವಿಭಾವಕ್ಕೆ) ಪ್ರತಿಕ್ರಿಯೆಯಾಗಿ ಅಭಿವ್ಯಕ್ತಿಗೊಳ್ಳಬೇಕಷ್ಟೇ?  ಭಾವದಿಂದ ಹೊಮ್ಮಿದ ಈ ಪ್ರತಿಕ್ರಿಯೆಯೇ ಅನುಭಾವ.  ಭವವು ಮನಸ್ಸಿನ ಮೇಲೆ ಪರಿಣಾಮ ಬೀರಿ 'ಭಾವ'ವವನ್ನುಂಟುಮಾಡುವಂತೆಯೇ ಆ ಭಾವವೂ ಮನಸ್ಸಿನ ಮೇಲೆ ವಿಶೇಷಪರಿಣಾಮವನ್ನುಂಟುಮಾಡುತ್ತದೆ.  ಆ ಪರಿಣಾಮವೇ ಅದು ಮನಸ್ಸಿಗೆ ತಂದುಕೊಡುವ ಒಂದು ಒಳನೋಟ, ಅಂತರ್ದೃಷ್ಟಿ - ಅದೂ ಅನುಭಾವವೇ (ಮೊದಲ ಚಿತ್ರ ನೋಡಿರಿ).

ಈ ವಿಭಾವಾನುಭಾವಗಳ ಸಂಬಂಧವನ್ನು ವಿವರಿಸಲು, ಮದುವೆಯಾದ ಮಗಳನ್ನು ಗಂಡನ ಮನೆಗೆ ಬೀಳ್ಕೊಡುವ ಮನೋಜ್ಞಚಿತ್ರಣವೊಂದನ್ನು ಕಟ್ಟಿಕೊಡುವ ಪಂಪನ ಪ್ರಸಿದ್ಧಪದ್ಯವೊಂದನ್ನು ತೀನಂಶ್ರೀ ಉದಾಹರಿಸುತ್ತಾರೆ (ಎರಡನೆಯ ಚಿತ್ರ ನೋಡಿರಿ) -


ಪೊಡೆಮಡುವಪ್ಪಿಕೊಳ್ವ ನೆನೆಯುತ್ತಿರಿಮೆಂಬ ಸಮಸ್ತವಸ್ತುವಂ
ಕುಡುವ ಪಲರ್ಮೆಯಿಂ ಪರಸಿ ಸೇಸೆಯನಿಕ್ಕುವ ಬುದ್ಧಿವೇೞ್ವ ಕ-
ಯ್ಯೆಡೆ ನಿಮಗೆಂದೊಡಂಬಡಿಪ ನಲ್ಲರಗಲ್ಕೆಗೆ ಕಣ್ಣ ನೀರ್ಗಳಂ
ಮಿಡಿವ ಬಹುಪ್ರಕಾರಜನಸಂಕಟಮೊಪ್ಪಿದುದಾ ಪ್ರಯಾಣದೊಳ್
(ಆದಿಪುರಾಣ 4-57)

ಪೊಡೆಮಡುವ (ನಮಸ್ಕರಿಸುವ), ಅಪ್ಪಿಕೊಳ್ವ, "ನೆನೆಯುತ್ತಿರಿಂ" ಎಂಬ, ಸಮಸ್ತವಸ್ತುವಂ ಕುಡುವ, ಪಲರ್ಮೆಯಿಂ ಪರಸಿ ಸೇಸೆಯನಿಕ್ಕುವ (ಬಹುವಿಧವಾಗಿ ಹರಸಿ ಅಕ್ಷತೆಯಿಕ್ಕುವ), ಬುದ್ಧಿವೇಳ್ವ, "ಇದು ಕೈಗಾವಲಿಗಿರಲಿ" ಎಂದು ಹೇಳಿ ಒಪ್ಪಿಸುವ, ಪ್ರಿಯರ ಅಗಲಿಕೆಗೆ ಕಣ್ಣೀರುಗರೆವ ಬಹುಪ್ರಕಾರವಾದ ಜನಸಂಕಟವು ಆ ಪ್ರಯಾಣದಲ್ಲಿ ತೋರಿಬಂತು.

ಮಗಳ ಅಗಲಿಕೆಯೆನ್ನುವುದು ಇಲ್ಲಿ ವಿಭಾವ.  ಅದರಿಂದ ಉಂಟಾದ ನೋವು ಅನುಭವ.  ಅದರ ಪರಿಣಾಮವಾಗಿ ದುಃಖವೆಂಬ ಭಾವ ಮಡುಗಟ್ಟುತ್ತದೆ.  ಈ ದುಃಖವೇ ಕಣ್ಣೀರಾಗಿ, ಅಪ್ಪುಗೆಯಾಗಿ, ಆಶೀರ್ವಾದವಾಗಿ, ಬುದ್ಧಿಮಾತಾಗಿ, ಆತಂಕವಾಗಿ, ಕಕ್ಕುಲತೆಯಾಗಿ ಅಭಿವ್ಯಕ್ತಿಗೊಳುತ್ತದೆ.  ಇದು ಅನುಭಾವ, ಭಾವದ ಕಾರ್ಯ.  ಈ ಅನುಭಾವವು ಒಂದು ಒಳನೋಟವಾಗಿ ಪ್ರತಿಯೊಬ್ಬರಲ್ಲೂ ಇರುವುದೇ ಆದ್ದರಿಂದ ನಿಜಕ್ಕೂ ಆ ದುಃಖವನ್ನು ಅನುಭವಿಸುತ್ತಿಲ್ಲದವರೂ ಹಾಗೆ ಅನುಭವಿಸುವವರಿಗಾಗಿ ಮರುಗುತ್ತಾರೆ, ಸಹಾನುಭೂತಿ ವ್ಯಕ್ತಪಡಿಸುತ್ತಾರೆ, ಮೇಲೆ ವರ್ಣಿಸಿದಂತೆ ವಿಧವಿಧವಾಗಿ ದುಃಖಿಸುತ್ತಿರುವ ಪ್ರೀತಿಪಾತ್ರರ ಅಗಲಿಕೆಯ ದುಃಖವನ್ನು ನೋಡಿ ಮತ್ತೆ ಹಲವರು ತಾವೂ "ಕಣ್ಣ ನೀರ್ಗಳಂ ಮಿಡಿ"ಯುತ್ತಾರೆ - ಇದೂ ಅನುಭಾವವೇ.

ಇವೆಲ್ಲಾ ನಿಜಜಗತ್ತಿನಲ್ಲಿ ಆದಾಗ ಆ ವಿಭಾವಾನುಭಾವಗಳೆಲ್ಲ ಸತ್ಯ - ನಾವು ಅದರಲ್ಲಿ ಪ್ರತ್ಯಕ್ಷವಾಗಿ ಭಾಗಿಯಾಗಿದ್ದೇವೆ.  ಒಳ್ಳೆಯದಾದರೆ ಮಾತ್ರ ಸಂತೋಷಿಸಬಲ್ಲೆವು - ಕೆಟ್ಟದಾಗಲೆಂದು ಬಯಸುವುದೂ ಇಲ್ಲ, ಅದನ್ನು ಆನಂದಿಸುವುದು ದೂರದ ಮಾತು.  ಆದರೆ ಇವೆಲ್ಲಾ ಕಾವ್ಯದಲ್ಲಿ ಬಂದರೆ, ಅದು ಒಳ್ಳೆಯ ಅನುಭವವಿರಲಿ ಕೆಟ್ಟದಿರಲಿ, ನಾವದರಲ್ಲಿ ಇಲ್ಲದಿರುವುದರಿಂದ ಆ ಕಾವ್ಯ ಮೂಡಿಸುವ ಭಾವಗಳು ಒಂದು ರೀತಿ ಆಹ್ಲಾದವನ್ನೇ ಕೊಡಬಲ್ಲುದು.  ಕಾವ್ಯದಲ್ಲಿ ದುಃಖಿಸುವವರ ಜೊತೆ ನಾವೂ ದುಃಖಿಸುತ್ತೇವೆ, ಸುಖಿಸುವವರ ಜೊತೆ ನಾವೂ ಸುಖಿಸುತ್ತೇವೆ, ಕೋಪಗೊಳ್ಳುವವರ ಜೊತೆ ನಾವೂ ಕೋಪಗೊಳ್ಳುತ್ತೇವೆ - ಆದರೆ ಇದಾವುದೂ ನಮ್ಮದೇ ಭಾವವಲ್ಲ, ಮತ್ತು ಅದು ನಮ್ಮಲ್ಲಿ ಯಾವ ಪ್ರತಿಕ್ರಿಯೆಯನ್ನೂ ಪ್ರೇರಿಸುವುದಿಲ್ಲ.  ಹೀಗೆ, ನಿಜಜೀವನದಲ್ಲಿ ನಮ್ಮಲ್ಲಿ ಪ್ರತಿಕ್ರಿಯೆಯನ್ನು ಪ್ರೇರಿಸಬಹುದಾದ ಭಾವಗಳು, ಅವೇ ಕಾವ್ಯದಲ್ಲಿ ಬಂದಾಗ ಕೇವಲ ಭಾವಗಳಾಗಿ ಮಾತ್ರ ಉಳಿಯುತ್ತವೆ.  ಇದೇ 'ರಸ'.   - ನಿಜಜೀವನದ ವಿಭಾವಾನುಭಾವಗಳು ಕಾವ್ಯದಲ್ಲಿ ಬಂದಾಗ ನಮ್ಮಲ್ಲಿ ಉಂಟಾಗುವ ಭಾವವೇ 'ರಸ'  (ಮೂರನೆಯ ಚಿತ್ರ ನೋಡಿ).


ಈ ರಸಕ್ಕೆ ಪ್ರತಿಯಾಗಿ ನಮ್ಮಲ್ಲಿ ಮೂಡಬಹುದಾದ 'ಅನುಭಾವ'ವೆಂದರೆ ಆನಂದವಷ್ಟೇ - ಅದು ಕರುಣರಸವಿರಲಿ, ವೀರರಸವಿರಲಿ, ಉತ್ಸಾಹರಸವಿರಲಿ, ಭೀಭತ್ಸವೇ ಇರಲಿ ಅದು ಒಂದು ಆಹ್ಲಾದಕರವಾದ ಅನುಭವವನ್ನು ನೀಡುತ್ತದೆಯಾಗಲೀ ನಮ್ಮನ್ನು ನಿಜಕ್ಕೂ ಅಳುವಂತೆ, ಯುದ್ಧಮಾಡುವಂತೆ, ಕುಣಿದಾಡುವಂತೆ, ಹೆದರಿ ಓಡಿಹೋಗುವಂತೆ ಪ್ರೇರೇಪಿಸುವುದಿಲ್ಲ.  ನಿಜಜೀವನದಲ್ಲಿ ಯಾರದೋ ತಲೆಯೊಡೆದು ಮಿದುಳು ಹೊರಚೆಲ್ಲಿದ್ದರೆ ನಿಮ್ಮಲ್ಲಿ ಮೊದಲು ಮೂಡುವ ಭಾವ ಭಯ.  ಅದಕ್ಕೆ ಪ್ರತಿಕ್ರಿಯೆಯಾಗಿ ನೀವು ಕಿಟಾರನೆ ಕಿರುಚಿಕೊಳ್ಳಬಹುದು, ಓಡಿಹೋಗಬಹುದು, ಪೋಲೀಸರಿಗೆ ಫೋನ್ ಮಾಡಬಹುದು, ಹೆಣದ ವಿಲೇವಾರಿಗೆ ವ್ಯವಸ್ಥೆ ಮಾಡಬಹುದು, ಅಥವಾ ಇದೆಲ್ಲಿಯ ಗ್ರಹಚಾರವಪ್ಪಾ ಎಂದುಕೊಂಡು ಮೆಲ್ಲನೆ ಜಾರಿಕೊಳ್ಳಬಹುದು, ಇವೆಲ್ಲ 'ಅನುಭಾವ'ಗಳು.  ಅದೇ ಸನ್ನಿವೇಶ ಕಾವ್ಯದಲ್ಲಿ ಬಂದರೆ "ಕದನದೊಳುಣ್ಮಿದೊಳ್ಮಿದುಳ ಕರ್ದಮ"ದ ಚಿತ್ರಣವನ್ನು ನೋಡಿ ಭಯದಿಂದ ಓಡಿಹೋಗುವುದಿಲ್ಲ.  ಬದಲಿಗೆ "ಆಹಾ, ಅಬ್ಬಾ, ಅದ್ಭುತ" ಎಂಬ ಉದ್ಗಾರದೊಡನೆ ಆಸ್ವಾದಿಸುತ್ತೀರಿ.  ಜೊತೆಗೊಂದು ಫಿಲ್ಟರ್ ಕಾಫಿಯೋ ಖಾರದ ಶೇಂಗಾ ಬೀಜವೋ ಇದ್ದರೆ ಇನ್ನೂ ಸೊಗಸು.  ಭಯದ 'ಭಾವ'ವು ಇಲ್ಲಿ ಭೀಭತ್ಸ'ರಸ'ವಾಗಿ ನಿಮ್ಮಲ್ಲಿ ಮೂಡಿದೆ.  ಭಯದ ಪರಿಣಾಮವಾಗಿ ನಿಜಜೀವನದಲ್ಲಿ ಬಂದಿರಬಹುದಾಗಿದ್ದ ಅನುಭಾವಗಳು (ಕಿರುಚಿಕೊಳ್ಳುವುದು, ಓಡಿಹೋಗುವುದು ಇತ್ಯಾದಿ), ಇಲ್ಲಿಲ್ಲ.  ಬದಲಿಗೆ ಇಲ್ಲಿ 'ರಸ'ದ ಪರಿಣಾಮವಾಗಿ ಮೂಡುವ ಅನುಭಾವ - ಆನಂದ.

ಕಾವ್ಯದ ಓದು ಒಂದು ರೀತಿ ಕನಸಿದ್ದಂತೆ.  ಅಲ್ಲಿನ ಎಲ್ಲ ಪಾತ್ರಗಳ ಸನ್ನಿವೇಶಗಳ ಒಳಹೊಕ್ಕು ನಾವೇ ಅದನ್ನು ಅನುಭವಿಸಿದರೂ, ಅದು ನಿಜಕ್ಕೂ ನಮ್ಮದಲ್ಲವೆಂಬ ಅರಿವು ಚೆನ್ನಾಗಿಯೇ ಇರುವುದರಿಂದ ಅಲ್ಲಿ ಬರುವ ಭಾವಗಳೆಲ್ಲ ನಿಜವಾದ ಭಾವಗಳಾಗದೇ ಕೇವಲ 'ರಸ'ವಾಗಿ ಪರಿಣಮಿಸಿ ಅಂತಿಮವಾಗಿ ಆನಂದವನ್ನೇ ನೀಡುತ್ತವೆ.

ಆದರೆ ಕೆಲವೊಮ್ಮೆ ಕನಸಿನಲ್ಲಿ ಹೀರೋಗಳ ರೀತಿ ಫೈಟಿಂಗ್ ಮಾಡುತ್ತಾ ಆನಂದಿಸುತ್ತಿರುವ ವ್ಯಕ್ತಿ ನಿಜಕ್ಕೂ ಪಕ್ಕದಲ್ಲಿದ್ದವರಿಗೆ ಒದೆಯುವುದೂ ಉಂಟು - ಪಕ್ಕದಲ್ಲಿದ್ದವರು ಎಚ್ಚೆತ್ತು ತಿರುಗಿಸಿ ಒದೆಯುವವರೆಗೂ.  ರಸೋತ್ಕರ್ಷವೂ ಮಿತಿಮೀರಿದರೆ ರಸಾಭಾಸವಾಗಬಹುದಷ್ಟೇ?  ಚಿಕ್ಕಂದಿನಲ್ಲಿ ಎಲ್ಲೋ ಓದಿದ್ದ/ಹಿರಿಯರು ಯಾರೋ ಹೇಳುತ್ತಿದ್ದ ನಾಟಕದ ಘಟನೆಯೊಂದು ನೆನಪಾಗುತ್ತದೆ.

ಸತ್ಯವಾನ್ ಸಾವಿತ್ರಿ ನಾಟಕದ ಪ್ರದರ್ಶನ.  ಯಮರಾಜ ಬಂದು ಸತ್ಯವಾನಿಗೆ ಪಾಶ ಹಾಕಿದ್ದಾನೆ.  ಸಾವಿತ್ರಿಯ ಗೋಳಾಟ ಎಂತಹ ಕಲ್ಲೆದೆಯನ್ನೂ ಕರಗಿಸುವಂತಿದೆ.  ಪಿಟೀಲಿನವನಂತೂ ಈ ಗೋಳುಕರೆ ನೂರ್ಮಡಿಯಾಗುವಂತೆ ಕಮಾನಾಡಿಸಿ ಪೀಡಿಸುತ್ತಿದ್ದಾನೆ.  ಈ ಗೋಳುಕರೆ ತಾರಕಕ್ಕೇರಿದಾಗ ತಡೆಯಲಾರದೇ ಪ್ರೇಕ್ಷಕರಲ್ಲೊಬ್ಬ ದಢೂತಿ ಆಸಾಮಿ ರಂಗಕ್ಕೆ ನುಗ್ಗೇ ಬಿಡುತ್ತಾನೆ.  ಸಾವಿತ್ರಿಯನ್ನು ಗೋಳಾಡಿಸುತ್ತಿದ್ದ ಯಮಧರ್ಮನಿಗೆ ಕಪಾಳಕ್ಕೆ ಬಿಗಿದು ಅಬ್ಬರಿಸುತ್ತಾನೆ - "ಸಾಕ್ ನಿಲ್ಸಯ್ಯಾ, ಅವಾಗಿಂದ ನಾನೂ ನೋಡ್ತಾನೇ ಅವ್ನಿ, ಆ ಯಮ್ಗೂಸು ಅಂಗೆ ಕಳ್ಳು ಕಿತ್ಬರಂಗೆ ಗೋಳಾಡ್ತಾದೆ, ರಟ್ಟೆಗಾತ್ರದ ಮೀಸೆಯಿಟ್ಕಂಡು, ಯಮ್ಗೂಸ್ನ ಗೋಳಾಡಿಸ್ತಿದ್ದಯಲ್ಲ ನಾಚ್ಗೆ ಆಗಾಕಿಲ್ವಾ... ಅಂಗೂ ನಿಂಗೆ ಯಾರ್ನಾರ ತಗಂಡೋಗ್ಲೇಬೇಕು ಅಂದಿದ್ರೆ, ಅಲ್ನೋಡಲ್ಲಿ ಆಗಿಂದ ಕಮಾನಾಡ್ಸೀ ಆಡ್ಸೀ ಪೀಡಿಸ್ತವ್ನಲ್ಲ ಆ ಪಿಟೀಲ್ನೋನ್ನ ಯಳಕಂಡ್ ಹೋಗ್..." - ಕಾವ್ಯವನ್ನು ನಿಜಜೀವನದೊಳಗೆ ಬಿಟ್ಟುಕೊಂಡಾಗ ಹೀಗಾಗುತ್ತದೇನೋ.

ಸೂ: 
ದಿ. ತೀನಂಶ್ರೀಯವರ ಆಚಾರ್ಯಕೃತಿ ಭಾರತೀಯಕಾವ್ಯಮೀಮಾಂಸೆಯನ್ನು ಅಲ್ಲಿಲ್ಲಿ ಆಗೀಗ ಅನೇಕ ಬಾರಿ ತಿರುವಿ ಹಾಕಿದ್ದೇನಾದರೂ, ಇದುವರೆಗೂ ಒಮ್ಮೆಯಾದರೂ ಆಮೂಲಾಗ್ರವಾಗಿ ಕೂತು ಓದಲಾಗಿರಲಿಲ್ಲವೆಂಬುದೇ ಆಶ್ಚರ್ಯ.  ನನ್ನನ್ನು ಕಾವ್ಯ ಸೆಳೆದಷ್ಟು ಕಾವ್ಯಮೀಮಾಂಸೆ ಸೆಳೆಯಲಿಲ್ಲವೆಂಬುದೂ ಇದಕ್ಕೆ ಕಾರಣವಿರಬಹುದು.  ರಸವನ್ನು ಅನುಭವಿಸುವ ಬದಲು ಅದರ ವಿಶ್ಲೇಷಣೆಗೆ ತೊಡಗುವುದು ಯಾವ ಪುರುಷಾರ್ಥಕ್ಕೆ ಎಂಬ ನನ್ನ ಧೋರಣೆಯೂ ಇದಕ್ಕೆ ಕಾರಣವಿರಬಹುದು.  ಆದರೆ ತೀನಂಶ್ರೀಯವರ ಈ ಕೃತಿ ಸುಂದರವಾದ ಗದ್ಯವನ್ನೋದುವ ಸುಖವನ್ನೂ ಒದಗಿಸುವುದರಿಂದ ಇಲ್ಲಿ ಕಾವ್ಯಮೀಮಾಂಸೆಯೂ ರಸಮಯವೇ.  ಇತ್ತೀಚಿಗೆ ಹಲವು ಪ್ರೇರಣೆಗಳಿಂದಾಗಿ ಇದನ್ನು ಕೂತು ಓದಬೇಕೆನ್ನಿಸಿತು.  ಓದಿನ ಹಾದಿಯಲ್ಲಿ ಮನಸ್ಸಿಗೆ ಹೊಳೆದದ್ದನ್ನು ಹೀಗೆ ಟಿಪ್ಪಣಿ ಮಾಡಿ ಹಾಕುತ್ತಿದ್ದೇನಷ್ಟೇ.  ನನ್ನ ಗ್ರಹಿಕೆಗಳು ತಪ್ಪಿರಬಹುದು, ಓದು ಬೆಳೆದಂತೆ ಬದಲಾಗಲೂಬಹುದು.  ಕಾವ್ಯಮೀಮಾಂಸೆಯನ್ನು ಬಲ್ಲ ಹಲವು ವಿದ್ವಾಂಸರೂ ನನ್ನ ಮಿತ್ರವಲಯದಲ್ಲಿರುವುದರಿಂದ ಅವರ ಗ್ರಹಿಕೆಗಳ ಲಾಭವೂ ಇಲ್ಲಿ ದಕ್ಕೀತೆಂಬುದು ಇದನ್ನಿಲ್ಲಿ ಹಂಚಿಕೊಂಡ ಆಶಯಗಳಲ್ಲೊಂದು.