Saturday, August 29, 2009

ಕನ್ನಡ ಕಾವ್ಯ ನಡೆದು ಬಂದ ದಾರಿ - ಒಂದು ಹಿನ್ನೋಟ

ಇದನ್ನು ಈಗ ಬರೆಯುವ ವಿಶೇಷ ಸಂದರ್ಭವೇನು ಇರಲಿಲ್ಲ. ಹೀಗೇ ಸ್ನೇಹಿತರ ವಲಯದಲ್ಲಿ ಪದ್ಯ-ಗದ್ಯ, ನವ್ಯ-ನವೋದಯ ಕಾವ್ಯಮಾರ್ಗಗಳ ಬಗ್ಗೆ ಚರ್ಚೆ ಎದ್ದುದರಿಂದ ಅದರ ಬಗ್ಗೆ ಒಂದೆರಡು ವಿಷಯ ಬರೆಯಹೊರಟೆ. ಆದರೆ ಅದು ಒಂದು ಸಂಪೂರ್ಣ ಲೇಖವವೇ ಆಗಬಹುದೆನಿಸಿತು. ಅದೇ ಇದು.

ಸಾಹಿತ್ಯ, ಜೀವನದ ಪ್ರತಿಫಲನ ಎನ್ನುತ್ತಾರೆ. ಜೀವನ ಎಂದೂ ನಿಲ್ಲದೇ ನಿರಂತರವಾಗಿ ಹರಿಯುವ ನದಿ ಎನ್ನಬಹುದಾದರೆ, ಸಾಹಿತ್ಯ ಕೂಡ ಹಾಗೆಯೇ. ನದಿ, ನಮಗೆ ಯಾವುದೋ ಕಾಲಘಟ್ಟದಲ್ಲಿ ಕಾಣುವಂತೆ ಬರೀ ಹರಿಯುವ ನೀರಲ್ಲ; ಕಾಲಾಂತರದಲ್ಲಿ ನದಿಯೇ ಬದಲಾಗುತ್ತದೆ, ಅದರ ಪಾತ್ರ ಬದಲಾಗಬಹುದು, ಕೆಲವೆಡೆ ಆಳ ಹೆಚ್ಚಬಹುದು, ಮತ್ತೆ ಕೆಲವೆಡೆ ತಗ್ಗಬಹುದು, ನದಿಯೇ ಮಾಯವಾಗಬಹುದು. ಸಾಹಿತ್ಯ ಕೂಡ ಇದರಂತೆಯೇ ನಿರಂತರ ಚಲನಶೀಲ. ಕಾಲಾಂತರದಲ್ಲಿ ಅದರ ನಿಲುವು, ಒಲವು, ಭಾವ-ಭಂಗಿ ನಮೂನೆಗಳೇ ಬದಲಾಗಬಹುದು. ಜೀವನದಂತೆಯೇ ಇಲ್ಲೂ ನಿರಂತರ ಕೊಡುಕೊಳ್ಳುವಿಕೆ ನಡೆದೇ ಇರುತ್ತದೆ. ಸಮಾಜವು ಸಾಹಿತ್ಯವನ್ನೂ, ಸಾಹಿತ್ಯವು ಸಮಾಜವನ್ನೂ ಪ್ರಭಾವಿಸುತ್ತವೆ; ಹಾಗೆಯೇ ಭಾಷೆ ಇನ್ನೊಂದು ಭಾಷೆಯನ್ನು

ವೈಯಕ್ತಿಕವಾದ ಅಭಿವ್ಯಕ್ತಿ ಕಾಲಕ್ರಮದಲ್ಲಿ ಸ್ಪಷ್ಟ ರೂಪು-ರೇಷೆ-ಲಕ್ಷಣ-ಶೈಲಿಗಳನ್ನು ರೂಪಿಸಿಕೊಳ್ಳುತ್ತಿದ್ದಂತೆ ಅದಕ್ಕೊಂದು ಸಾರ್ವತ್ರಿಕ ನಮೂನೆ (standard format) ದೊರಕಿತೆನ್ನಿಸುತ್ತದೆ. ಹೀಗೆ ರೂಪಗೊಂಡಿದ್ದು ಛಂದಸ್ಸು, ಅಲಂಕಾರ ಇತ್ಯಾದಿ. ಕಾಲಕ್ರಮದಲ್ಲಿ ಇದು ಸರ್ವಸಮ್ಮತವಾಗಿ, ಕಾವ್ಯ "ಹೀಗೇ" ಇರಬೇಕೆಂದು ಶಾಸ್ತ್ರದ ರೂಪ ಪಡೆದಿರಬೇಕು. ಮುಂದೆ ಒಂದು ಭಾಷೆಯಲ್ಲಿ ಬಳಕೆಯಲ್ಲಿದ್ದ ಛಂದಸ್ಸು, ವೃತ್ತ ಇತ್ಯಾದಿ ಸಾಹಿತ್ಯ ಪರಿಕರಗಳು (literary components) ಮತ್ತೊಂದು ಭಾಷೆಯಲ್ಲೂ ಬಳಕೆಗೆ ಬಂದುವು. ಆದಿಕಾಲದ ಕನ್ನಡ ಸಾಹಿತ್ಯ ಕೂಡ ಹೀಗೆಯೇ ತನ್ನ ಶೈಲಿ-ನಮೂನೆ-ಭಾಷೆಗಳನ್ನು ಸಂಸ್ಕೃತದಿಂದ ಭಾರಿ ಪ್ರಮಾಣದಲ್ಲಿ ಎರವಲು ಪಡೆದದ್ದನ್ನು ಕಾಣುತ್ತೇವೆ.

ಅದೇನೇ ಇರಲಿ, ಸಾಹಿತ್ಯ ರಚನೆ ಜನಸಾಮಾನ್ಯರ ಮಟ್ಟದಿಂದ ಬಹು ಮೇಲೇರಿ, ಅದೊಂದು ಕಲೆ-ಶಾಸ್ತ್ರದ ಸ್ಥಾನ ಪಡೆದಿದ್ದಂತೂ ನಿಜ. ಕಲೆ ಎಂದಮೇಲೆ ಅದಕ್ಕೊಂದು ಪ್ರತಿಭೆಯೂ, ಶಾಸ್ತ್ರವೆಂದಮೇಲೆ ಅದಕ್ಕೊಂದು ನಿಶ್ಚಿತ ವಿಧಿ-ವಿಧಾನಗಳೂ "ಮಾಡು-ಬೇಡ"ಗಳೂ (do's and dont's) ಇರಬೇಕಲ್ಲವೇ? ಕಾವ್ಯದಲ್ಲಿ ಎಳ್ಳಷ್ಟು "ದೋಷ" ಸುಳಿದರೂ ಕಣ್ಣಿನಲ್ಲಿ ಬಿದ್ದ ಕಸ ಇಡೀ ಕಣ್ಣನ್ನೇ ಮುಚ್ಚುವಂತೆ ಅದು ಇಡಿಯ ಕಾವ್ಯವನ್ನೇ ಕೆಡಿಸುತ್ತದೆ ಎನ್ನುವ ಕಾಲವೊಂದಿತ್ತು.

ಅವಗುಣಮಿನಿತಾದೊಡಮಾ ಕವಿತಾಬಂಧಮನಶೇಷಮಂ ದೂಷಿಸುಗುಂ
ಸವಿಳಾಸ ಲೋಲಲೋಚನ ವಿವರಮನೆಡೆವೆತ್ತ ಕಸದ ವೋಲನವರತಂ (ಕವಿರಾಜಮಾರ್ಗ)

ಆದ್ದರಿಂದ ಕಾವ್ಯದೋಷಗಳನ್ನು ನಿವಾರಿಸಲೆಂದೇ ಕಾವ್ಯದ ಗುಣ-ಲಕ್ಷಣ-ದೋಷಗಳನ್ನು ತಿಳಿಸುವ ಗ್ರಂಥಗಳು ಬಂದುವು. ಕವಿರಾಜ ಮಾರ್ಗ (ಕ್ರಿ.ಶ.೯ನೆಯ ಶತಮಾನ) ಅಂತಹ ಒಂದು ಗ್ರಂಥ. ಕನ್ನಡದಲ್ಲಿ ನಮಗೆ ಸಿಗುವ ಮೊದಲ "ಕಾವ್ಯ-ಲಕ್ಷಣ" ಗ್ರಂಥ ಇದು. ಆದರೂ ಕಾವ್ಯದ ಗುಣ ಲಕ್ಷಣಗಳನ್ನು ತಿಳಿಸುವ ಗ್ರಂಥ ಇದಾದ್ದರಿಂದ ಕನ್ನಡದಲ್ಲಿ ಕಾವ್ಯ ಇನ್ನೂ ತುಂಬಾ ಹಿಂದಿನಿಂದಲೇ ಇದ್ದಿರಬೇಕೆಂಬುದು ಸುಲಭವಾದ ತರ್ಕ, ಇರಲಿ. ನಾನು ಹೇಳಹೊರಟಿದ್ದು, ಸುಮಾರು ೮-೯ನೆಯ ಶತಮಾನದಿಂದ ೧೨ನೆಯ ಶತಮಾನದ ವರೆಗಿನ ಹಳೆಗನ್ನಡ ಕಾವ್ಯಕ್ಕೆ ಅದರದೇ ಬಂಧ-ಛಂದಗಳು, ನಿಲುವು-ನಡೆಗಳು, ಭಾಷೆ-ಭಾವ-ರಸಗಳ ಕಟ್ಟುಪಾಡು - ಸಾಕಷ್ಟು ಕಠಿಣವಾಗೇ ಇತ್ತು. ಈ ಎಲ್ಲ ಕಡುಕಟ್ಟುಗಳ ನಡುವೆಯೇ ಕವಿಯ ಪ್ರತಿಭೆ ವಿಜೃಂಬಿಸಬೇಕಿತ್ತು, ವಿಜೃಂಭಿಸಿತು ಕೂಡ. ನಡೆ ತಪ್ಪಿದರೆ ಹೀನಾಯ-ಅವಮಾನ ಕಟ್ಟಿಟ್ಟ ಬುತ್ತಿ. ಕಾವ್ಯಕ್ಕಿಂತಾ ಪಾಂಡಿತ್ಯದ ದರ್ಪವೇ ಹೆಚ್ಚಿದ್ದ ಕಾಲ. ಹೀಗಾಗಿ, ಇದು ಕವಿಯೊಬ್ಬನ 'ಅಹಂ'ನ ಪ್ರಶ್ನೆಯಾಗಿದ್ದರಿಂದ "ದೋಷಾರೋಪಣೆ" ಮಾಡುವಮೊದಲು ವಿಮರ್ಶಕನೂ ಅದೆಷ್ಟು ಎಚ್ಚರ ವಹಿಸಿದ್ದರೂ ಸಾಲದು. "ಫಣಿಪತಿಯ ಫಣಾರತ್ನಮುಮಂ ರನ್ನನ ಕೃತಿರತ್ನಮುಮಂ ಪೇಳ್ ಪರೀಕ್ಷಿಪಂಗೆಂಟೆರ್ದೆಯೇ" (ಹಾವಿನ ಹೆಡೆಯ ರತ್ನವನ್ನೂ ರನ್ನನ ಕೃತಿರತ್ನವನ್ನೂ ಪರೀಕ್ಷಿಸಬೇಕೆನ್ನುವನಿಗೆ ಎಂಟೆದೆಯಿರಬೇಕು) ಎನ್ನುತ್ತಾನೆ ರನ್ನ. ಹೀಗಾಗಿ ಅದು ಕವಿ-ಕವಿಗಳ, ಕವಿ-ವಿಮರ್ಶಕರ, ವಿಮರ್ಶಕ-ವಿಮರ್ಶಕರ ದರ್ಪದ ಗದಾಯುದ್ಧವೇ ಆಗಿತ್ತು. ಕಾವ್ಯಕನ್ನಿಕೆ ಸಂಸ್ಕೃತ ಭೂಯಿಷ್ಟವಾದ ಕಂದ-ವೃತ್ತ-ಚಂಪೂ ಛಂದಸ್ಸಿನ ಗುರು-ಲಘು-ಮಾತ್ರೆ-ಗಣ-ಯತಿಗಳ ಆಭರಣ-ಅಲಂಕಾರಗಳಲ್ಲಿ ಬಂದಿ. ಈ ವಜ್ರದ ಮೇಲ್ಮುಸುಕನ್ನು ಮೆಲ್ಲನೆ ಸರಿಸಿ ನೋಡಿದಾಗಷ್ಟೇ ಅವಳ ಕಣ್ಣ ಮಿಂಚು ಹೊಳೆಯಬೇಕು (ಅದಿದ್ದರೆ). ಹೀಗೆ ಈ ಅಲಂಕಾರಗಳ ವೈಭವವನ್ನೂ ಮೀರಿ ವಿಜೃಂಭಿಸಬೇಕಾದರೆ ಕಾವ್ಯಕ್ಕೆ ನಿಜವಾದ ಸತ್ವವಿರಬೇಕಿತ್ತು. ಹಳೆಗನ್ನಡದ ಪಂಪ, ರನ್ನನೇ ಮುಂತಾದ ಕವಿಪರಂಪರೆ, ಈ ಜರಡಿಯಲ್ಲಿ ಉಳಿದ ಗಟ್ಟಿ ಕಾಳುಗಳು. ಉಳಿದಂತೆ ಕೇವಲ ಛಂದಸ್ಸು-ಪದ-ಅಲಂಕಾರಗಳ ಹಿಂದೆ ಬಿದ್ದು ಕಾವ್ಯಕ್ಕೆ ಎರವಾಗಿ ಕಳೆದುಹೋದ ಪುಡಿ ಕವಿಗಳೆಷ್ಟೋ!

ಬದಲಾವಣೆಗೊಳಗಾಗುವುದೇ ಜೀವಂತವಾದ, ಜೀವನಕ್ಕೆ ಸಂಬಂಧಿಸಿದ ಎಲ್ಲದರ ಲಕ್ಷಣ. ಕಾವ್ಯ ಇದಕ್ಕೆ ಹೊರತಲ್ಲ. ಕಾವ್ಯಕ್ಕೆ ಬಿಗಿದ ಸಂಕಲೆಗಳು ಉಸಿರುಗಟ್ಟಿಸತೊಡಗಿ ಕಾವ್ಯ ನಿಂತ ನೀರಾಗತೊಡಗಿದಂತೆ ಈ ಕಟ್ಟುಗಳನ್ನು ತುಸು ಸಡಿಲಿಸಿ, ಕಾವ್ಯಕನ್ನಿಕೆ ಸ್ವಲ್ಪ ಸರಾಗವಾಗಿ ಉಸಿರಾಡಿಸುವ ಅಗತ್ಯ ಕಂಡುಬಂತು. ಭಾಷೆ, ಛಂದಸ್ಸುಗಳೆಲ್ಲವನ್ನೂ ಸಂಸ್ಕೃತದಿಂದ ಸಾರಾಸಗಟಾಗಿ ಎರವಲು ತರುವ ಅಗತ್ಯವಾದರೂ ಏನು? ಉದಾಹರಣೆಗೆ ಯತಿನಿಯಮ. ಪ್ರತಿಯೊಂದು ಪದದಲ್ಲೂ ಯಾವುದೋ ಒಂದು ಅಕ್ಷರದ ಮೇಲೆ ಒತ್ತು ಬೀಳುವ ಮೂಲಕ ಅದರ ಅರ್ಥ ಸ್ಫುಟಗೊಳ್ಳುತ್ತದೆ. ಹೀಗೆ ನಾವು ಮಾತಾಡುವಾಗ ಪ್ರತಿಯೊಂದು ಪದದ ಅರ್ಥಕ್ಕನುಗುಣವಾಗಿ ಕೆಲವು ಅಕ್ಷರದಲ್ಲಿ ನಿಲ್ಲಿಸಿ/ಒತ್ತು ಹಾಕಿ ನುಡಿಯುತ್ತೇವೆ. ಇದು ಯತಿ ನಿಯಮ. ಆದರೆ ಪದ್ಯವೊಂದರ ಛಂದಸ್ಸಿಗೆ ಅದರದೇ ಅಕ್ಷರ ಗಣದ ನಿಯಮವೂ ಇರುತ್ತದೆ (ಅದು ಅರ್ಥವನ್ನನುಸರಿಸಬೇಕೆಂದೇನೂ ಇಲ್ಲ). ಹೀಗಾದಾಗ, ಛಂದೋನಿಯಮಕ್ಕೆ ಕಟ್ಟುಬಿದ್ದು ಪದಗಳನ್ನು ಅರ್ಥಹೀನವಾಗಿ ಒಡೆಯುವ ಸಾಧ್ಯತೆಗಳಿವೆ. ಹೀಗಾಗಬಾರದೆಂದೇ ಛಂದೋಬದ್ಧ ರಚನೆಯಲ್ಲೂ ಯತಿನಿಯಮವನ್ನು ಪಾಲಿಸಬೇಕೆಂಬುದು ಸಂಸ್ಕೃತ ಪದ್ಯ ರಚನೆಯ ನಿಯಮಗಳಲ್ಲೊಂದು. ಉದಾಹರಣೆಗೆ ಈ ಶ್ಲೋಕ ನೋಡಿ:

ಟಾಟವೀ ಗಜ್ವಲ ಪ್ರವಾಹಪಾಲಿಸ್ಥಲೇ ಗಳೇsವಲಂಬ್ಯ ಲಂಬಿತಾಂ ಭುಜಂಗ ತುಂಗ ಮಾಲಿಕಾಂ

ದಪ್ಪಕ್ಷರದಲ್ಲಿರುವ ಅಕ್ಷರಗಳು ಲಯಕ್ಕೂ ಅರ್ಥಕ್ಕೂ ಅನುಗುಣವಾಗೇ ಒತ್ತನ್ನು ಪಡೆಯುತ್ತವೆ. ಸಂಸ್ಕೃತದಲ್ಲಿ ಇದನ್ನು ಸುಲಭವಾಗಿ ಸಾಧಿಸಬಹುದು, ಏಕೆಂದರೆ ಸಂಸ್ಕೃತದ ಪದಗಳ ಜಾಯಮಾನವೇ ಅದು. ಆದರೆ ಕನ್ನಡದಲ್ಲಿ ಅದು ಕಷ್ಟ. ಉದಾಹರಣೆಗೆ ಪಂಪನ ಈ ಸಾಲುಗಳನ್ನು ನೋಡಿ.

ಚಾಗದಭೋಗದಕ್ಕರದಗೇಯದಗೊಟ್ಟಿಯಲಂಪಿನಿಂಪು

ಳ್ಗಾಗರಮಾದಮಾನಿಸರೆ ಮಾನಿಸರಂತವರಾಗಿ ಪುಟ್ಟದೇ

ನಾಗಿಯುಮೇನೊತೀರ್ದಪುದೆ ತೀರದೊಡಂ ಮರಿದುಂಬಿಯಾಗಿ ಮೇಣ್

ಕೋಗಿಲೆಯಾಗಿಪುಟ್ಟುವುದು ನಂದನದೊಳ್ ಬನವಾಸಿ ದೇದೊಳ್

ಇಲ್ಲಿ ಮೂರಕ್ಷರದ ಅಕ್ಷರಗಣದಿಂದ ಲಯ ಬರುತ್ತದೆ ಆದರೆ ಲಯಬದ್ಧವಾಗಿ ಉಚ್ಛರಿಸಿದಾಗ ಅದರ ಅರ್ಥವುಳಿಯುವುದಿಲ್ಲ. ಮತ್ತೆ ಅರ್ಥಕ್ಕನುಗುಣವಾಗಿ ಪಠಿಸಿದರೆ ಲಯದ ಅನುಭವವಾಗುವುದಿಲ್ಲ. ಕನ್ನಡದಲ್ಲೂ ಯತಿನಿಯಮಗಳನ್ನು ಅನುಸರಿಸಿರುವ ರಚನೆಗಳಿಲ್ಲ ಎಂದಲ್ಲ, ಉದಾಹರಣೆಗೆ, ಸೋಮೇಶ್ವರ ಶತಕದ ಈ ಸಾಲುಗಳನ್ನು ನೋಡಿ:

ಪ್ರಜೆಯಂ ಪಾಲಿಸ ಬಲ್ಲೊಡಾತನರಸಂ ಕಯ್ಯಾಶೆಯಂ ಮಾಡದಂ
ನಿಜಮಂತ್ರೀಶ್ವರ ತಂದೆತಾಯ ಸಲಹಲ್ ಬಲ್ಲಾತನೇ ಧಾರ್ಮಿಕಂ

ಆದರೆ ಅದು ಅಪವಾದ ಅಷ್ಟೇ. ಕವಿರಾಜಮಾರ್ಗಕಾರನೇನೋ ಯತಿವಿಲಂಘನೆಯು ಕನ್ನಡದ ವಿಶೇಷ ಲಕ್ಷಣವೆಂದು ಕರೆದು ಈ ಅಪವಾದವನ್ನು ಸೂತ್ರಬದ್ಧಗೊಳಿಸಿಯೂ ಬಿಟ್ಟ. ಆದರೆ ಒಟ್ಟಂದದಲ್ಲಿ ಈ ನಿಯಮಗಳೆಲ್ಲಾ ಸಂಸ್ಕೃತದ ಜಾಯಮಾನಕ್ಕೆ ಒಗ್ಗೀತೇ ಹೊರತು ಕನ್ನಡದ ಜಾಯಮಾನಕ್ಕಲ್ಲ. ಹಾಗಿದ್ದಮೇಲೆ ಕನ್ನಡಕ್ಕೆ ಒಗ್ಗದ್ದನ್ನೂ ಸಂಸ್ಕೃತದಿಂದ ಎರವಲು ತಂದು ಅದರ ಕಟ್ಟುಪಾಡಿನಲ್ಲಿ ಕಾವ್ಯವನ್ನು ಸಿಲುಕಿಸಬೇಕೇಕೆ? ಕ್ಲಿಷ್ಟವಾದ ಅಕ್ಷರ ಗಣಗಳು, ವೃತ್ತದ ಸುತ್ತುಗಳು ಇಲ್ಲದೆ ಕಾವ್ಯಸೃಷ್ಟಿ ಸಾಧ್ಯವೇ ಇಲ್ಲವೇ? ಮುಂದಿನ ಸುಮಾರು ಮುನ್ನೂರು-ನಾನೂರು ವರ್ಷ (೧೨ರಿಂದ ೧೬ನೆಯ ಶತಮಾನ) ಕಾವ್ಯಮಾರ್ಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆದುವು. ಸರಳ ಸುಂದರವಾದ ಷಟ್ಪದಿ-ರಗಳೆಗಳು ಜನಪ್ರಿಯವಾದದ್ದು ಹೀಗೆ. ಸರಳ ನಡೆ, ತಿಳಿಯಾದ ಭಾಷೆ, ಆದರೆ ಪ್ರಖರವಾದ ಕಾವ್ಯಗುಣ ಹೊಸ ಕಾವ್ಯಮಾರ್ಗದ ವಿಶೇಷವಾಯಿತು. ನಡುಗನ್ನಡ ಕಾವ್ಯದ ಕುಮಾರವ್ಯಾಸ-ಹರಿಹರ-ರಾಘವಾಂಕ; ಜಾನಪದ ಸೊಗಡಿನ ಸಾಂಗತ್ಯಗಳ ರತ್ನಾಕರವರ್ಣಿ; ತ್ರಿಪದಿಗಳ ಸರ್ವಜ್ಞ ಯಾರಿಗೆ ಗೊತ್ತಿಲ್ಲ. ಗದುಗಿನ ಭಾರತ, ತ್ರಿಪದಿ, ಸಾಂಗತ್ಯಗಳು, ದಾಸರ ಪದಗಳು ಜನಸಾಮಾನ್ಯರ ಮನೆ ಮನಗಳಲ್ಲಿ ನಲಿದುವು. ಆದರೂ ಈ ಬದಲಾವಣೆ ಸುಲಭದ್ದೇನಾಗಿರಲಿಲ್ಲ. ಹಳೆಗನ್ನಡದಿಂದ ಬಂದ ಕಾವ್ಯದ ಸತ್ವವನ್ನು ಕಳೆದುಕೊಳ್ಳದೇ, ಅನಗತ್ಯವೆನಿಸಿದ ನಿಯಮಗಳನ್ನು ಮುರಿದು (ಅಥವ ಕೈಬಿಟ್ಟು), ಹೊಸ ನಿಯಮವನ್ನು ಅನುಸರಿಸಿ, ಹೊಸ ನಮೂನೆ-ವಸ್ತುಗಳನ್ನು ಬಳಸಿ ಕಾವ್ಯ ಬರೆಯುವುದು, ಅದರಲ್ಲೂ ಅದು "ಪಂಡಿತ" ಜನರಲ್ಲಿ ಒಪ್ಪಿತಗೊಳ್ಳುವುದು ಒಂದು ಸವಾಲಾಗೇ ಇತ್ತು. ಲಕ್ಷ್ಮೀಶನ ಈ ಸಾಲುಗಳನ್ನು ನೋಡಿ:

ಕೆನೆವಾಲ ಕಡೆದು ನವನೀತಮಂ ತೆಗೆದು ಬಾ
ಯ್ಗಿನಿದಾಗಿ ಸವೆಯದದರೊಳಗೆ ಪುಳಿವಿಡಿದು ರಸ
ವನೆಗೆಡಿಸಿದೊಡೆ ಕರೆದ ಸುರಭಿಗಪ್ಪುದೆ ಕೊರತೆ ಕಾವ್ಯಮಂ ಕೇಳ್ದು ಮಥಿಸಿ
ಜನಿಸಿದ ಪದಾರ್ಥಮಂ ತಿಳಿದು ನೋಡದೆ ವಿನೂ
ತನ ಕವಿತೆಯೆಂದು ಕುಂದಿಟ್ಟು ಜರಿದೊಡೆ ಪೇಳ್ದ
ವನೊಳಾವದೂಣೆಯಂ ಜಾಣರಿದನರಿದು ಮತ್ಸರವ ಮರೆದಾಲಿಸುವುದು

(ಕೆನೆ ಹಾಲನ್ನು ಕಡೆದು ಬೆಣ್ಣೆ ತೆಗೆದರೆ ಅದನ್ನು ಸವಿಯುವುದು ಬಿಟ್ಟು, ಇದು ಹುಳಿಹಿಡಿದ ಹಾಲು, ಆದ್ದರಿಂದ ಚೆನ್ನಲ್ಲ ಎಂದರೆ ಕರೆದ ಹಸುವಿಗೆ ಅದರಿಂದ ಕುಂದೇನು? ಹಾಗೆಯೇ ಕಾವ್ಯವನ್ನು ಕೇಳಿ, ಅದನ್ನು "ಕಡೆದು" ಅದರ ಬೆಣ್ಣೆಯನ್ನು ಸವಿಯದೆ, ಇದು ಹೊಸ ಕವಿತೆ, ಸಾಂಪ್ರದಾಯ ಬಾಹಿರ (ಆದ್ದರಿಂದ ಚೆನ್ನಾಗಿಲ್ಲ) ಎಂದು ಜರಿದರೆ, ಅದರಲ್ಲಿ ಕವಿಯ ತಪ್ಪೇನು? ಆದ್ದರಿಂದ ಜಾಣರಾದವರು ಇದನ್ನು ಅರಿತು, ಮತ್ಸರವನ್ನು ಮರೆತು ಆಲಿಸಿ - ಜೈಮಿನಿ ಭಾರತ)

ನಿಯಮಗಳಲ್ಲಿ ಸಡಿಲಿಕೆ ಬಂದರೂ, ಹೊಸ ನಿಯಮಗಳು ಬಂದರೂ ನಿಯಮಗಳೇ ಇಲ್ಲವಾಗಲಿಲ್ಲ. ಆದರೂ ಇದೇ ಕಾಲಘಟ್ಟದಲ್ಲಿ ಬಂದ ವಚನಸಾಹಿತ್ಯ ಮಾತ್ರ ಸಾಲುಗಳ ಉದ್ದ, ಗಾತ್ರಗಳ ಯಾವ ನಿಯಮವನ್ನೂ ಪಾಲಿಸದೇ, ಅದರ "ಆಳ"ದ ಬಗೆಗೆ ಮಾತ್ರ ಗಮನ ನೀಡಿತು. ಬಸವಣ್ಣನವರ ಮಾತಿನಲ್ಲಿ ಹೇಳುವುದಾದರೆ, "ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು". ಅದೇ ಅಲ್ಲವೇ ಕಾವ್ಯ? ನುಡಿ ಹಾಗಿದ್ದಮೇಲೆ, ಅದು ಎಷ್ಟು ಉದ್ದ, ಯಾವ ನಡೆಯಲ್ಲಿದ್ದರೆ ಏನು? ಹಾಗೆ ನೋಡಿದರೆ ಇತ್ತೀಚಿನ ದಶಕಗಳಲ್ಲಿ ನಾವು ನವ್ಯದಲ್ಲಿ ಏನು ಪ್ರಯೋಗ ಮಾಡಿದೆವೋ ಅದು ವಚನಗಳಲ್ಲಿ ಆಗಲೇ ನಡೆದಿತ್ತು (atleast, with respect to physical format). ೧೨ನೆಯ ಶತಮಾನದಲ್ಲಿ ನಡೆದ ಈ ಸಾಹಿತ್ಯಕ ಕ್ರಾಂತಿ, ಅವರು ನಡೆಸಿದ ಸಾಮಾಜಿಕ ಕ್ರಾಂತಿಯ ಸಂಕೇತವೂ ಆಗಿತ್ತು. ಆದರೂ ನಡುಗನ್ನಡದ ಸರಳ ನಿಯಮ, ಸರಸ ಕಾವ್ಯಗಳ ಯುಗದಲ್ಲಿ ವಚನಸಾಹಿತ್ಯದ ನಿಯಮರಾಹಿತ್ಯದ ಈ ಕ್ರಾಂತಿ ಒಂದು exception ಆಗಿ ಉಳಿತಷ್ಟೇ ಹೊರತು, ಸಾಹಿತ್ಯದ ಶೈಲಿಯಲ್ಲಿ ಅದು ಮುಂದೆ ಪರಂಪರೆಯಾಗಿ ಬೆಳೆಯಲಿಲ್ಲ. ತದನಂತರದ ನಿಜಗುಣಶಿವಯೋಗಿಗಳಂಥವರೂ ಸಹ (ಕ್ರಿ.ಶ.೧೬೦೦) ಸ್ವರ ವಚನಗಳೆಂಬ ನಿಬದ್ಧ ಪ್ರಕಾರನ್ನೇ ಬಳಸಿಕೊಂಡರು

ಮತ್ತೆ ಕೆಲವು ಕಾಲ ಸರಿದಂತೆ ಸಾಹಿತ್ಯ ಮತ್ತೆ ನಿಂತ ನೀರು. ಇದುವರೆಗೂ "ದೇಸೀ" ಆಗಿದ್ದ ಬದುಕು-ಭಾಷೆ-ಸಾಹಿತ್ಯ, ಬ್ರಿಟಿಷರ ಆಳ್ವಿಕೆಯಲ್ಲಿ ಫಕ್ಕನೆ ಪಾಶ್ಚಾತ್ಯ ಪ್ರಭಾವಕ್ಕೊಳಗಾಯಿತು. ೧೯ನೆಯ ಶತಮಾನದ ಕೊನೆಗೆ ಪಡುವಣ ದಿಕ್ಕಿನಿಂದ ಬೀಸಿದ ಈ ಹೊಸ ಗಾಳಿ ನಮ್ಮ ನಡೆ-ನುಡಿ-ನೋಟಗಳಲ್ಲಿ ಹೊಸ ಬದಲಾವಣೆಯನ್ನೇ ತಂದಿತು. ಕಾಲದಿಂದ ಜುಂಗು ಹಿಡಿದು ನಿಂತಿದ್ದ ಶತಮಾನದ ಸಾಹಿತ್ಯಕ್ಕೀಗ "ನವೋದಯ"ವಾಯಿತು. ಆಗ ಇಂಗ್ಲಿಷಿನಲ್ಲಿ ಜನಪ್ರಿಯವಾಗಿದ್ದ ರೊಮಾಂಟಿಕ್ ಸಾಹಿತ್ಯ ಕನ್ನಡ ಸಾಹಿತ್ಯದ ಮೇಲೆ ಪ್ರಭಾವ ಬೀರಿತು. ರೊಮಾಂಟಿಕ್ ಕವಿಗಳಾದ Wordsworth, Shelly, Tennyson ಮುಂತಾದವರಿಂದ ಸ್ಫೂರ್ತಿಗೊಂಡರು ನವೋದಯದ ಕನ್ನಡ ಕವಿಗಳು. ನಡು/ಹಳೆಗನ್ನಡದ ಪುರಾಣ, ಪ್ರಸಿದ್ಧವ್ಯಕ್ತಿಗಳನ್ನು ಬಿಟ್ಟು, ಪ್ರಕೃತಿ, ಪ್ರೀತಿ-ಪ್ರೇಮ, ಅದರ ದೈವಿಕತೆ, (ಸಭ್ಯತೆ ಮೀರದ) ಪ್ರಣಯ, ನವಿರಾದ ಭಾವನೆಗಳು ಇವು ಹೊಸಕಾವ್ಯದ ವಸ್ತುಗಳಾದುವು. ಇಂಗ್ಲಿಷಿನ ಸಾನೆಟ್ ಇತ್ಯಾದಿ ಛಂದಃಪ್ರಕಾರಗಳನ್ನು ಹೋಲುವ ಹೊಸ ಹೊಸ ಛಂದಸ್ಸುಗಳು ಕನ್ನಡದಲ್ಲಿ ಬಳಕೆಗೆ ಬಂದುವು. ಕಾವ್ಯ ಚಿಕ್ಕಚಿಕ್ಕ ಗೀತೆಗಳ ರೂಪ ಪಡೆಯಿತು. ಭಾಷೆ ಜನ ಬಳಕೆಗೆ ಹತ್ತಿರ ಬಂತು. ಮಾತು ಭಾವವನ್ನು ಅನುಸರಿಸಿ ಬರಬೇಕೇ ಹೊರತು ಭಾವ ಮಾತಿಗೆ ಬಂದಿಯಾಗಬಾರದು ಎನ್ನುವ ನಿಲುವು ಮನ್ನಣೆ ಪಡೆಯಿತು. ಇದುವರೆಗೂ ಇದ್ದ ಛಂದೋನಿಯಮಗಳನ್ನು ದಿಕ್ಕರಿಸಿ, ಭಾವಕ್ಕೆ ತಕ್ಕಂಥ ಸಹಜ ನಡೆ/ಲಯಗಳನ್ನು ಬಳಸಿ ಬರೆಯುವ ಕ್ರಮ ಬಂತು. ನಡುಗನ್ನಡದಲ್ಲಿ ಕಾವ್ಯ ಸರಸವಾಗಿದ್ದರೂ, ಜನದ ಮಟ್ಟದಿಂದ ಒಂದು ಹೆಜ್ಜೆ ಮೇಲಿತ್ತು; ಈಗ ಹೊಸಗನ್ನಡದ ನವೋದಯದಲ್ಲಿ ಇದು ಇನ್ನಷ್ಟು ಸರಸವಾಯಿತು, ಜನದ ಮಟ್ಟಕ್ಕೆ ಇಳಿದುಬಂತು, ನಾವು ಸುತ್ತಮುತ್ತಲ ನಿರ್ದಿಷ್ಟ ವಸ್ತು/ವಿಷಯ/ಅನುಭವಗಳಿಗೆ ಚಿನ್ನದ ಕಟ್ಟು ಹಾಕುವ ಕವಿತೆಗಳಾದುವು. ಗೇಯ ಗುಣ, ಭಾವದ ಲಾಲಿತ್ಯ ಈ ಕಾವ್ಯದ ಮುಖ್ಯ ಅಂಶ. ಕುವೆಂಪು, ಬೇಂದ್ರೆ. ಪುತಿನ, ನರಸಿಂಹಸ್ವಾಮಿ ಮುಂತಾದ ಅತ್ಯುತ್ತಮ ಕವಿಗಳನ್ನು ಕೊಟ್ಟಿತು, ಈ ಘಟ್ಟ.

ಇದರಂತೆಯೇ ನಮ್ಮ ಮೇಲೆ ಪ್ರಭಾವ ಬೀರಿದ ಮತ್ತೊಂದು ಸಾಹಿತ್ಯವೆಂದರೆ ಗ್ರೀಕ್ ಸಾಹಿತ್ಯ. ಗ್ರೀಕ್ ಪುರಾಣಗಳನ್ನಾಧರಿಸಿದ ರುದ್ರನಾಟಕಗಳು ಕನ್ನಡಕ್ಕೆ ಭಾಷಾಂತರಗೊಂಡುವು. ಆ ನಾಟಕಗಳ ವಸ್ತು-ರೌದ್ರತೆ-ಭಾಷೆಯ ತೂಕಕ್ಕೆ ಸರಿದೂಗಿಸಬಲ್ಲಂತೆ ಅವುಗಳನ್ನು ನಮ್ಮ ಹಳೆಗನ್ನಡ ಭಾಷೆಯಲ್ಲಿ ಭಾಷಾಂತರಿಸಲಾಯಿತು. ಕ.ವೆಂ.ರಾಘವಾಚಾರ್ಯರ ಈಡಿಪಸ್ ಇಂಥಾ ನಾಟಕಗಳಲ್ಲೊಂದು. ಇದು ಭಾಷಾಂತರವಾದರೆ, ಇಡೀ ನಾಟಕದ ವಸ್ತು-ಪಾತ್ರಗಳನ್ನು ನಮ್ಮ ಪೌರಾಣಿಕ ಸನ್ನಿವೇಶ-ಪಾತ್ರಗಳಿಗೆ ಅಳವಡಿಸಿ ಮೂಲ ನಾಟಕವನ್ನು ನಮ್ಮ ಸನ್ನಿವೇಶದಲ್ಲಿ ಪುನಃಸೃಷ್ಟಿಸುವ "ರೂಪಾಂತರ" ಕಾರ್ಯಗಳೂ ನಡೆದುವು. ಬಿಎಂಶ್ರೀಯವರ "ಅಶ್ವತ್ಥಾಮನ್" ಇಂಥದ್ದೊಂದು ಉತ್ತಮ ಕೃತಿ. ಮೂಲ ಗ್ರೀಕ್ ನಾಟಕ ಸಾಪೋಕ್ಲೀಸನ "ಅಯಾಜ್" ನ ರೂಪಾಂತರ ಇದು.

ಆದರೆ ಕಾವ್ಯ ಎಂದರೆ ಬರೀ ಪ್ರಕೃತಿ ಸೌಂದರ್ಯ, 'ದೈವೀ'ಪ್ರೇಮ, ನದಿ, ಕಣಿವೆ, ಬೆಟ್ಟ, ಬಾನಾಡಿಗಳನ್ನಷ್ಟೇ ಬಣ್ಣಿಸಿ ತೃಪ್ತಿ ಪಟ್ಟುಕೊಂಡರೆ ಸಾಕೇ? ಕೋಗಿಲೆಯ ಕೂಗನ್ನೇ ಅದೆಷ್ಟುದ್ದ ಎಳೆಯಲು ಸಾಧ್ಯ? ಮನುಷ್ಯನ ಮನದಾಳದಲ್ಲಿ ಕ್ರೂರಮೃಗ ಹೂಂಕರಿಸುತ್ತಿರುವಾಗ ಬರೀ ಅವನ ಔನ್ನತ್ಯವನ್ನಷ್ಟೇ ಕೊಂಡಾಡಿದರೆ ಅದು ಹಸೀ ಸುಳ್ಳಲ್ಲವೇ. ಮನದಾಳದ ವ್ಯಾಪಾರ, ಮನುಷ್ಯ-ಸಮಾಜ-ಪರಿಸರದ ಸಂಬಂಧ, ಕೊಡುಕೊಳ್ಳುವಿಕೆ, ಅವನ ನೂರೆಂಟು ಗೋಳುಗಳು, ಸಣ್ಣಪುಟ್ಟ ನೋವು-ನಲಿವುಗಳಿಗೆ ಕಣ್ಣುಮುಚ್ಚಿ ಬರೀ ಪ್ರಕೃತಿಯನ್ನಾರಾಧಿಸುವವ ಅದೆಂಥ ಕವಿಯಾದಾನು? ಕಾವ್ಯಕ್ಕೂ ಬದುಕಿಗೂ ನಡುವೆ ಕಂಡುಬರುವ ಒಂದು ಬಗೆಯ ವೈರುಧ್ಯ, ಭ್ರಮನಿರಸನಕ್ಕೆಡೆಗೊಟ್ಟಿತು. ಈ ಸರಣಿಯ ಆಲೋಚನೆಗಳು ಜಗತ್ತಿನ ಸಾಹಿತ್ಯವಲಯದಲ್ಲಿ ಹರಿಯತೊಡಗಿ, ಹೊಸಬಗೆಯ ಕಾವ್ಯ ಸೃಷ್ಟಿಗೆ ದಾರಿಗೊಟ್ಟಿತು. ಫ್ರಾಯ್ಡನ ಸುಪ್ತಮನೋವಿಶ್ಲೇಷಣೆಯಿಂದ ಹಿಡಿದು ಮಾರ್ಕ್ಸನ ಸಮತಾವಾದದವರೆಗು ಅನೇಕ ಆಲೋಚನಾಧಾರೆಗಳು ಈ ಕಾವ್ಯಮಾರ್ಗವನ್ನು ರೂಪಿಸಿದುವು; ಹಾಗೆಯೇ ಚಿತ್ರಕಲೆ-ಸಂಗೀತಗಳೇ ಮೊದಲಾದ ಅನೇಕ ಕ್ಷೇತ್ರಗಳಲ್ಲಿ ನಡೆದ ಹೊಸ ಪ್ರಯೋಗಗಳು ತಮ್ಮದೇ ಕೊಡುಗೆಯನ್ನು ನೀಡಿದುವು. ಇದನ್ನೇ ಕನ್ನಡದಲ್ಲಿ ನವ್ಯ ಕಾವ್ಯದ ಯುಗ ಎನ್ನಲಾಯಿತು. ಸ್ವಾತಂತ್ರೋತ್ತರ ದಿನಗಳಲ್ಲಿ ಬಳಕೆಗೆ ಬಂದ ಈ ಪ್ರಕಾರದ ಮೊದಲ ಕವಿ ಬಹುಶಃ ಗೋಪಾಲ ಕೃಷ್ಣ ಅಡಿಗರು. ಸ್ವತಃ ನವೋದಯ ಕವಿಯಾಗಿ "ಯಾವ ಮೋಹನ ಮುರಳಿ ಕರೆಯಿತು", "ನಗು ನನ್ನ ನಲ್ಲೆ" ಇತ್ಯಾದಿ ಸುಂದರ ಕವಿತೆಗಳನ್ನು ನೀಡಿದ ಅಡಿಗರು, ಅನಂತರದ ದಿನಗಳಲ್ಲಿ ನವ್ಯದ ಕಡೆ ಹೊರಳಿದರು. "ಹಿಮಗಿರಿಯ ಕಂದರ", "ಭೂಮಿಗೀತ" ದಂತಹ ಶಕ್ತ ಕವನಗಳು ಹೊರಬಂದವು. ನಿಸಾರ್, ಲಂಕೇಶ್, ರಾಮಚಂದ್ರಶರ್ಮ, ರಾಮಾನುಜಂ ಮುಂತಾದ ಪ್ರಮುಖ ಕವಿಗಳು ನವ್ಯದಲ್ಲಿ ಬರೆದರು.

ನವೋದಯದಲ್ಲಿ ನವಿರು ಭಾವಗಳಿಗೂ, ಅವಕ್ಕನುಗುಣವಾದ ಸರಳ, ಸಹಜ, ಸುಂದರ ಲಯಕ್ಕೂ ಒತ್ತುಕೊಟ್ಟಿದ್ದರೆ, ನವ್ಯದ ಮಾರ್ಗದಲ್ಲಿ ಭಾವ, ಅಭಾವ, ಅದರ ತೀವ್ರತೆ-ಸಂಕೀರ್ಣತೆಗಳೇ ಪ್ರಧಾನವಾದುವು. ಅದರ ಸಹಜ ಹರಿವಿಗೆ "ಅಡ್ಡಿ"ಯುಂಟುಮಾಡುವ ಯಾವುದೂ ಕಾವ್ಯದಲ್ಲಿ ಇರತಕ್ಕದ್ದಲ್ಲ. ಆದ್ದರಿಂದ ಕಾವ್ಯ ಮನದಲ್ಲಿ ಧುಮ್ಮಿಕ್ಕುವ ಭಾವದ ಲಯವನ್ನು ಅನುಸರಿಸಬೇಕೇ ಹೊರತು, ಅದಾವುದೋ ಎರವಲು ತಂದ ಮೂರಕ್ಷರದ್ದೋ ಎರಡಕ್ಷರದ್ದೋ ಲಯವನ್ನಲ್ಲ. ಸರ್ವತೋಮುಖ ಸ್ವಾತಂತ್ರ್ಯ, ಸ್ವ'ಚ್ಛಂದ' ನವ್ಯಕಾವ್ಯದ ಹೆಗ್ಗುರುತು. ಅದಕ್ಕೆಂದೇ, ಅದುವರೆಗಿನ "ಶಿಷ್ಟ" ಸಾಹಿತ್ಯದಲ್ಲಿ ಮಡಿವಂತಿಕೆಯಿಂದ ಬಿಟ್ಟಿದ್ದ ಕಾಮ ಇಲ್ಲಿ ಪ್ರಮುಖ ವಸ್ತುವಾಯಿತು. ಇದ್ದದ್ದನ್ನು ಕೆಡವಿ ಹೊಸದನ್ನು ಕಟ್ಟುವ ಉತ್ಸಾಹವೇ ಇಲ್ಲಿನ ಮೂಲಮಂತ್ರ. ಆದ್ದರಿಂದಲೇ, ನವ್ಯಕಾವ್ಯದಲ್ಲಿ ಸ್ವಚ್ಛಂದದ ಇನ್ನೊಂದು ಮುಖವಾದ "ಲಯ"ವಿಹೀನತೆಯೇ ಮುಖ್ಯ ಗುರುತು ಎಂಬಂತಾಯಿತು. ಇದನ್ನೇ ನವ್ಯಕಾವ್ಯದ ವಿಮರ್ಶಕರು "ನಿಯತಿಕೃತ ನಿಯಮ ರಾಹಿತ್ಯ" ಎಂದರು.

ಹಾಗಿದ್ದರೆ ಕಾವ್ಯಕ್ಕೂ ಗದ್ಯಕ್ಕೂ ಏನು ವ್ಯತ್ಯಾಸ? "ಪದ್ಯ"ವೆಂದು ಬರೆದ ತುಂಡು ಸಾಲುಗಳನ್ನು ಒಂದರಪಕ್ಕ ಒಂದು ಜೋಡಿಸಿದರೆ ಗದ್ಯವಾಗುವುದಿಲ್ಲವೇ? ಇದು ಸಾಮಾನ್ಯವಾಗಿ ಕೇಳಿಬರುವ ಪ್ರಶ್ನೆ. ಇದಕ್ಕೆ ಸಾಮಾನ್ಯವಾಗಿ "ಹೌದು" ಎಂದು ಉತ್ತರಿಸಲಾಗುತ್ತದೆ. ಆದರೆ, ಅದು ಹಾಗಲ್ಲ. ನವ್ಯಕಾವ್ಯ ನಿಯತಿಕೃತ ನಿಯಮಗಳನ್ನು ಮೀರಿದರೂ ಅದು ಮೊತ್ತವಾಗಿ ನಿಯಮವಿಹೀನವೇನೂ ಅಲ್ಲ. ಅದು ಕಣ್ಣಿಗೆ ಕಾಣುವ (ಅಥವ ಕಿವಿಗೆ ಕೇಳುವ) "ಅಸಹಜ" ಲಯವನ್ನು ನಿರಾಕರಿಸಿತೇ ಹೊರತು, ಸಾರಾಸಗಟಾಗಿ ಲಯವನ್ನೇ ಅಲ್ಲ. ಅದರ ನಿಲುವು, ಕಾವ್ಯ ಭಾವದ ಲಯವನ್ನು ಅನುಸರಿಸಬೇಕೆಂಬುದಷ್ಟೇ. ಕಾವ್ಯವನ್ನು ನಿರ್ದಿಷ್ಟ ಛಂದಸ್ಸಿನಲ್ಲಿ ಇರುಕುವ ಬದಲು, ಕವನವೊಂದು ತನ್ನದೇ ಛಂದಸ್ಸನ್ನು ಕಂಡುಕೊಳ್ಳಬೇಕೆನ್ನುವುದು ಇದರ ಆಶಯ. ಇದನ್ನು ಬಿಟ್ಟರೆ, ಕಾವ್ಯಕ್ಕೆ ಅನ್ವಯಿಸುವ ಮೂಲಭೂತ ನಿಯಮಗಳೆಲ್ಲಾ ಇಲ್ಲಿಯೂ ಅನ್ವಯಿಸುತ್ತವೆ. ಕಾವ್ಯಕ್ಕೆ ಅದರದೇ ಆದ ಭಾಷೆಯಿದೆ - ಅದು matter-of-factly ಎನಿಸುವ ಗದ್ಯದ ಭಾಷೆಗಿಂತ ತುಸು ಭಿನ್ನವಾದ ನಾಟಕೀಯ ಭಾಷೆ (ಉದಾ: ಬರುತ್ತೀಯಾ - ಬರುವೆಯಾ); ಗದ್ಯಕ್ಕೆ ಒಂದು ಭೌತಿಕ ಲಯವಿಲ್ಲ, ಆದರೆ ಕಾವ್ಯದಲ್ಲಿ ಲಯವಿದೆ, ಅದು ಭಾಷೆಯ ಲಯವಿರಬಹುದು, ಭಾವದ ಲಯವಿರಬಹುದು ಅಥವ ಅಕ್ಷರಗಳ ಲಯವಿರಬಹುದು, ಮುಖ್ಯವೆಂದರೆ, ಅದು ಆ ಕವನದ್ದೇ ಆದ ಲಯ, ಹೊರಗಿನಿಂದ ಹೇರಿದ್ದಲ್ಲ. ಈ ದೃಷ್ಟಿಯಿಂದ, ಕಾವ್ಯ ಲಯವಿಹೀನ ಅಲ್ಲವೇ ಅಲ್ಲ; ತಂತ್ರಗಾರಿಕೆಯಿಂದ ಗದ್ಯ-ಕಾವ್ಯಗಳು ಬೇರೆಯೇ.

"ನವ್ಯಕಾವ್ಯ ಬರೆಯುವುದಕ್ಕೆ ಛಂದಸ್ಸು, ಪ್ರಾಸ, ಲಯ ಇತ್ಯಾದಿ ನಿಯಮಗಳೇನೂ ಇಲ್ಲ, ಹೇಗೆ ಬೇಕೆಂದರೂ ಬರೆಯಬಹುದು" ಎಂಬ ಮಾತು ಪದೇಪದೇ ಕೇಳಿಬರುತ್ತದೆ. ಹೇಗೆ ಬೇಕಿದ್ದರೂ ಬರೆಯಬಹುದೇನೋ, ಆದರೆ ಅದನ್ನು "ಕಾವ್ಯ"ವೆನ್ನಬಹುದೇ ಎಂಬುದು ಬೇರೆಯೇ ಪ್ರಶ್ನೆ. ಈ ಸಂದರ್ಭದಲ್ಲಿ ಶತಾವಧಾನಿ ರಾ.ಗಣೇಶರ ಮಾತು ನೆನಪಿಗೆ ಬರುತ್ತದೆ:

"ಇಂದಿನ ಕವಿಲೋಕ ಛಂದಸ್ಸನ್ನರಿಯದೆಯೇ ಅದನ್ನು ಪರಿತ್ಯಜಿಸಿದ ಅಟ್ಟಹಾಸ ಮಾಡಿದೆ. ಪರಿಗ್ರಹಣವಿಲ್ಲದ ಪರಿತ್ಯಾಗಕ್ಕೆ ಬೆಲೆಯೇನು? ಕವಿಗಳಿಗೇ ಇದರ ಅರಿವಿಲ್ಲದಿದ್ದರೆ ಸಹೃದಯರಿಗೆ ತಿಳಿಯುವುದೆಂತು? ಇವರಿಬ್ಬರನ್ನೇ ಅಭ್ಯಸಿಸುವ ವಿದ್ಯಾರ್ಥಿಗಳಿಗಂತೂ ಛಂದದ ಗಂಧವೂ ಇಲ್ಲದಂತಾಗಿದೆ" - ಅ.ರಾ.ಮಿತ್ರರ "ಛಂದೋಮಿತ್ರ" ಗ್ರಂಥದ ಮುನ್ನುಡಿಯಿಂದ.

ಅಕ್ಷರದ ಲಯ ಅಥವ ಛಂದಸ್ಸುಗಳಿಗೆ ಅಂಟಿಕೊಳ್ಳದಿದ್ದರೂ, ಅಕ್ಷರ, ಭಾವ, ಭಾಷೆಯ ಲಯಗಳನ್ನು ಹದವಾಗಿ ನೆಯ್ದ ನವ್ಯ ಕವನಗಳನ್ನು ಓದಬೇಕಾದರೆ ಅಡಿಗರನ್ನು ಓದಬೇಕು. ಉದಾಹರಣೆಯಾಗಿ ಈ ಸಾಲುಗಳನ್ನು ನೋಡಿ:

"ನವಾವತಾರ ಪುರುಷರು:
ವೇದವನ್ನು ಕದ್ದು, ಮತ್ತೆ ಸೋಮಕನಿಗೆ ಕೊಟ್ಟವರು,
ಭೂಗೋಳವ ಬೆನ್ನ ಮೇಲೆ ಹೊತ್ತಾಡುವ ಕಮಠರು,
ಹಿರಣ್ಯವನ್ನು ತೊಡೆದು ತೆಗೆದು ನೋಟಿನ ಮಳೆಗರೆದವರು,
ನೆಲವ ಚಾಪೆ ಬಿಚ್ಚಿ ಮೈ ಚಾಚಿ ಮಲಗಿ ಕೊಂಡವರು;
ಎಡವು ಅಲ್ಲ, ಬಲವು ಅಲ್ಲ;
ಗಾಂಧಿ ಅಲ್ಲ, ಮಾರ್ಕ್ಸೂ ಅಲ್ಲ;
ಅಹಿಂಸೆಯಲ್ಲ, ಹಿಂಸೆಯಲ್ಲ;
ಇಹವಿಲ್ಲದ ಪರವೊಲ್ಲದ
ಅನುಕೂಲಸಿಂಧು ರಚಿಸುತಿರುವ ಅವರ್ಣ್ಯರೂಪ ಭೂಪರು;
ಬಲ್ಲಿದರನ್ನೊತ್ತಿ ತುಳಿದು ಬಡವಗೆ ಕೈ ಕೊಟ್ಟವರು;
ಚಿಂತಕರನ್ನೊರಸಲಿಕ್ಕೆ ಬೀದಿಕೂಗ ಮಸೆದವರು,
ಮೂರು ಬಾರಿ ನಾಡ ಸೋಸಿ ಮರಳಿ ಪಟ್ಟವೇರಿದವರು,
ಆಹಾ ಮಹಾಪುರುಷರು;
ಉಪವಾಸದಿ ಸಮ್ಮ ಹಿಡಿದು ತೃಪ್ತಿ ತೇಗ ಬರಿಸುವವರು,
ಸಾಲ ಮಾಡಿ ತುಪ್ಪ ತಿಂದು ನಮ್ಮ ಮೂತಿಗೊರಸಿದವರು,
ಯೋಜನೆಗಳ ಯಜ್ಞದಲ್ಲಿ ವಪೆಯ ರುಚಿಯನರಿತವರು,
ಕಾನೂನಿನ ಗಾಣದಿಂದ ಮರಳಿನೆಣ್ಣೆ ತೆಗೆಯುವವರು,
ಕತ್ತೆ ಕುದುರೆಯಾಗುವಂತೆ, ಹುಲಿ ಹೊಟ್ಟನ್ನುಣ್ಣುವಂತೆ
ನೆಲವೆ ನಾಕವಾಗುವಂತೆ, ನಾಯಿಬಾಲ ನಿಗುರುವಂತೆ
ಮಾಡಬಲ್ಲ ದೊಂಬರು"

- "ಬರುತ್ತಾರೆ" ಕವನದಿಂದ

ಇದನ್ನು ಒಂದರ ಪಕ್ಕ ಒಂದು ಜೋಡಿಸಿ ನೋಡಿ, ಗದ್ಯವಾಗುತ್ತದೆಯೋ?

ಇಷ್ಟಕ್ಕೂ ಆದಿ ಕಾಲದ ಸಂಸ್ಕೃತ ಕಾವ್ಯದಿಂದ ಹಿಡಿದು ಇವತ್ತಿನ ನವ್ಯ/ನವ್ಯೋತ್ತರ ಕಾವ್ಯದ ವರೆಗೂ, ಕಾವ್ಯಕ್ಕೆ ಬದ್ಧತೆ ಹೊಂದಿದ ಯಾವುದೇ ಬರಹ ಕೂಡ, ಒಂದು ಮೂಲಭೂತ ನಿಯಮವನ್ನು ಪಾಲಿಸುತ್ತಾ ಬಂದಿದೆ; ಅದೆಂದರೆ ಸಹಜತೆ. ಕಾವ್ಯ ರುಚಿಯಾಗುವುದಕ್ಕೆ ಅಗತ್ಯವಾಗಿ ಬೇಕಾದ್ದು ಅದರ ಸೆಳೆಯುವ, ಮಿಡಿಯುವ, ಮಿಂಚು ಹೊಳೆಸುವ ಗುಣ; "ಆಗಲೇ ಅಲ್ಲೇ ಹುಟ್ಟಿಬಂತೆನಿಸುವ" ತಾಜಾತನ. W.B.Yeatsನ ಮಾತಿನಲ್ಲಿ ಹೇಳಬೇಕಾದರೆ:

"A line will take us hours maybe;
Yet, if it doesn't seem a moment's thought
Our stitching and unstitching has been naught.
Better go down upon your marrow-bones
And scrub a kitchen pavement, or break stones
Like an old pauper, in all kinds of weather"

("ಕವಿತೆ ಸಾಲೊಂದ ಸಾಧಿಸಲು
ಗಂಟೆಗಟ್ಟಲೆ ನಾವು ಹೆಣಗಬೇಕು;
ಆದರೂ ಆ ಸಾಲು ಅಲ್ಲೆ, ಆ ಗಳಿಗೆಯೇ
ಚಿಮ್ಮಿ ಬಂದದ್ದೆಂದು ಅನ್ನಿಸದೆ ಇದ್ದಲ್ಲಿ
ಹೊಲೆದು ಬಿಚ್ಚಿದ್ದೆಲ್ಲ ಪೂರ ವ್ಯರ್ಥ.
ಬೆನ್ನು ಬಗ್ಗಿಸಿ ಮಂಡಿಯೂರಿ ಕೊಳೆಯಡಿಗೆಮನೆ ನೆಲವನ್ನುಜ್ಜುವುದೋ,
ಕಡುಭಿಕಾರಿಯ ಹಾಗೆ ಬಿಸಿಲು ಚಳಿ ಎನ್ನದೆ ಕಲ್ಲನ್ನೊಡೆಯುವುದೋ
ಇದಕಿಂತ ಉತ್ತಮ"

- ಅನು: ಡಾ. ಲಕ್ಷ್ಮೀನಾರಾಯಣಭಟ್ಟ)

ಅಡಿಟಿಪ್ಪಣಿ: ನವ್ಯೋತ್ತರ ಸಾಹಿತ್ಯದ ಪ್ರಕಾರಗಳೆಂದು ಬಂಡಾಯ ಸಾಹಿತ್ಯ, ದಲಿತ ಸಾಹಿತ್ಯ, ಸ್ತ್ರೀ ಸಾಹಿತ್ಯ ಇತ್ಯಾದಿಗಳು ಬಂದರೂ, ಅವೆಲ್ಲ ಕೆಲವು ನಿರ್ದಿಷ್ಟ ಸಾಮಾಜಿಕ ಸನ್ನಿವೇಶ, ಇಸಂ/ಸಿದ್ಧಾಂತ ಅಥವಾ ನಿರ್ದಿಷ್ಟಸಾಮಾಜಿಕ ಗುರಿಗೆ ಬದ್ಧವಾಗಿ "ಕಾವ್ಯ"ದ ಬದ್ಧತೆಯನ್ನು ಕಡೆಗಣಿಸಿದುವೆಂದೇ ನನ್ನ ಅನಿಸಿಕೆ. ಅಲ್ಲೂ ಗಟ್ಟಿ ಕಾವ್ಯ ಇರಲಿಲ್ಲವೆಂದಲ್ಲ, ಆದರೆ ನವ್ಯದಿಂದಲೇ ಬೇರೆಯಾದ "ಅಲೆ" ಎಬ್ಬಿಸಿದ್ದನ್ನು ಕಾಣೆ. ಅವುಗಳ ನಿರ್ದಿಷ್ಟ ಸಿದ್ಧಾಂತ-ಧೋರಣೆ-ಸಂವೇದನೆಗಳನ್ನು ಬಿಟ್ಟರೆ, ಶೈಲಿ, ರೂಪಗಳಲ್ಲಿ ನವ್ಯದ್ದೇ ಒಂದು ಪ್ರಭೇದವೆಂದು ಪರಿಗಣಿಸಬಹುದಾದ್ದರಿಂದ, ಅವುಗಳ ಬಗ್ಗೆ (ಕಾವ್ಯದ ಸಂದರ್ಭದಲ್ಲಿ) ಪ್ರತ್ಯೇಕವಾಗಿ ಬರೆಯಲು ಏನಾದರೂ ಇದೆ ಎನಿಸುವುದಿಲ್ಲ.