Monday, June 27, 2011

ಮರಳು ಜೇನಳೂ ಮತ್ತು ಪಾದ್ರಿಯೂ (ಮತ್ತೊಂದು ಅನುವಾದ)

ಬಹಳ ಹಿಂದೆ ನಾನು ಮಾಡಿದ W.B.Yeats ಕವನವೊಂದರ ಅನುವಾದವನ್ನು ತುಸು ಬದಲಿಸಿ ಮರುಬರೆದಿದ್ದೇನೆ. ಮೊದಲ ಅನುವಾದವನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ (right click ಮಾಡಿ ಬೇರೊಂದು ಕಿಟಕಿಯಲ್ಲಿ ತೆರೆದಿಟ್ಟುಕೊಂಡರೆ ಅನುಕೂಲ)

ದಾರಿಯಲ್ಲಿ ಆ ಪಾದ್ರಿ ಸಿಕ್ಕಿದ್ದ
ಅದೂ ಇದೂ ಮಾತಾಡಿದೆವು.
"ಎಂಥ ಮೊಲೆ, ಹೇಗೆ ಬತ್ತಿಹೋಗಿವೆ ನೋಡು,
ನರಗಳಿನ್ನೇನು ಸೊರಗುವುವು;
ನಡೆಯಿನ್ನಾದರು ಸ್ವರ್ಗದಲಿ ಬದುಕು
ಸಾಕೀ ನರಕದ ಕೊಳೆ ಬದುಕು"

"ಕೊಳಕಿಗು ಥಳುಕಿಗು ಬಿಡದಿಹ ನಂಟು
ಅಗಲಿ ಇರವು ಅವು" - ಚೀರಿದೆ ನಾನು,
"ಸಖರು ಹೋದರೂ ಗೋರಿಯೂ ತಿಳಿದಿದೆ
ಸುಖದ ಶಯ್ಯೆಯೂ ನಿಜವಿದನು.
ಈ ಪತಿತ ದೇಹದಲೆ, ವಿನಯದಿ ಹೆಮ್ಮೆಯ
ಮನದಿ ಅರಿತೆನೀ ಸತ್ಯವನು"

"ಹೆಣ್ಣು ಉಬ್ಬುವಳು ಸೆಡೆತು ಬೀಗುವಳು
ಪ್ರೇಮದುನ್ನತಾವಸ್ಥೆಯಲಿ;
ಆದರಾ ಪ್ರೇಮ ಸೌಧದ ನೆಲೆಯೋ
ಹೊಲಸೇ ತುಂಬಿದ ಠಾವಿನಲಿ!
ಹರಿಯದ ಬಿರಿಯದ ಒಂದಿದ್ದರೆ ಅದ
ಹೊಲೆವುದು ತಾನೇ ಎಲ್ಲಿ?"

ಟಿಪ್ಪಣಿ:
ಕೊನೆಯ ಎರಡು ಸಾಲುಗಳಿಗೆ ಮೂಲದಲ್ಲಿರುವ ನುಡಿ:
For nothing can be sole or whole
That has not been rent?

ಸೋಲ್ (sole) ಮತ್ತು ಹೋಲ್ (whole) ಎನ್ನುವ ಪದಗಳನ್ನು ಉಚ್ಚರಿಸಿದಾಗ ಅವು soul ಮತ್ತು hole ಎನ್ನುವ ಧ್ವನಿಗಳನ್ನೂ ಹೊರಡಿಸುವ ಮೂಲಕ ಮುಂದಿನ ಸಾಲಿನಲ್ಲಿ ಬರುವ rent ಅನ್ನುವ ಪದಕ್ಕೆ ವಿವಿಧಾರ್ಥಗಳನ್ನು ಕೊಡುತ್ತದೆ; ಅದೇ ಇಲ್ಲಿನ ಸ್ವಾರಸ್ಯ - rent ಅನ್ನುವ ಪದಕ್ಕೇ ಬಾಡಿಗೆಗೆ ಕೊಡು/ಹರಿದುಹಾಕು (rend p.p. rent) ಅನ್ನುವ ಅರ್ಥಗಳಿರುವುದನ್ನೂ ಮತ್ತು ಈ ಕವನದಲ್ಲಿ ಬರುವ ಜೇನ್ ಓರ್ವ ವೇಶ್ಯೆಯೆನ್ನುವುದನ್ನೂ ಗಮನಿಸಿದರೆ rent ಅನ್ನುವುದರ ಸ್ವಾರಸ್ಯ ಹೊಳೆಯುತ್ತದೆ. ಹರಿಯದೇ ಹೊಲೆಯುವುದಕ್ಕಾಗುವುದೇ ಎಂಬ ಅರ್ಥದ ಜೊತೆ, ಇಲ್ಲಿ "ಹರಿಯದೇ ತೂತಾಗುವುದೇ" ಅನ್ನುವ ವ್ಯಂಗ್ಯಾರ್ಥವೂ ಮತ್ತು "ಹರಿದಿದ್ದಕ್ಕೇ ತಾನೆ ಒಂದಾಗುವ ಅಗತ್ಯ?" ಎಂಬ ಅರ್ಥವೂ ಕೂಡಿ ಬರುತ್ತದೆ. ಜೊತೆಗೆ, ತನ್ನ ಈ ಹರಿದ (ಮಾರಿಕೊಂಡ) ಜೀವನದ ಪಾಪಕೂಪವೇ ನನ್ನ ಆತ್ಮೋನ್ನತಿಯ ದಾರಿ ಎಂಬ ಧ್ವನಿಯೂ ಇದೆ (soul ಅನ್ನುವ ಉಚ್ಚಾರಣೆಯ ಭ್ರಮೆ ಇದನ್ನೇ ಧ್ವನಿಸುತ್ತದೆ). ಇದಕ್ಕೆ ಇಂಬುಕೊಡುವಂತೆ ಈ ಮೊದಲ ನಾಲ್ಕು ಸಾಲುಗಳನ್ನು ಗಮನಿಸಬಹುದು:

ಹೆಣ್ಣು ಉಬ್ಬುವಳು ಸೆಡೆತು ಬೀಗುವಳು
ಪ್ರೇಮದುನ್ನತಾವಸ್ಥೆಯಲಿ;
ಆದರಾ ಪ್ರೇಮ ಸೌಧದ ನೆಲೆಯೋ
ಹೊಲಸೇ ತುಂಬಿದ ಠಾವಿನಲಿ!

("A woman can be proud and stiff
When on love intent;
But love has pitched his mansion in
The place of excrament;)

ಪ್ರೇಮದ ಉತ್ಕಟಸ್ಥಿತಿಯೇ ಆತ್ಮದ ಉನ್ನತಿಯೆನ್ನುತ್ತಾರೆ, ಆದರೆ ಆ "ಪ್ರೇಮ" ಅರಳುವುದೇ ಹೊಲಸಿನ ಕೂಪದಲ್ಲಿ ಅನ್ನುತ್ತಾಳೆ ಜೇನ್. ಶಿಷ್ಟ/ಪವಿತ್ರ ಜೀವನವನ್ನು ಪ್ರತಿನಿಧಿಸುವ ಪಾದ್ರಿಯ ಉಪದೇಶದ ಭಾಷೆಗೆ ಸವಾಲೆಸೆವಂತೆ ಮೈಮಾರಿ ಬದುಕುವ ಹೆಂಗಸಿನ ಒರಟು (rude and crude) ಭಾಷೆಯನ್ನೂ, ಆ ಭಾಷೆಯ ಒರಟುತನದಲ್ಲೇ ಅರಳುವ ತಲೆದೂಗಿಸುವ ತರ್ಕದ ಸೂಕ್ಷ್ಮತೆಯನ್ನೂ ಇಲ್ಲಿ ಗಮನಿಸಬಹುದು. ಕೆಸರಿನ ಕಮಲದಂತೆ ಒರಟು ಮಾತಿನಲ್ಲಿ ಅರಳುವ ಈ ಸೂಕ್ಷ್ಮ, ಜೇನಳೇ ಹೇಳುವಂತೆ ಹೊಲಸಿನಲ್ಲರಳುವ ಸೊಗಸು, ಕಾಮದ ಕೆಸರಿನಲ್ಲಿ ಹುಟ್ಟಿ ಮೇಲೇರುವ ಪ್ರೇಮದ ಔನ್ನತ್ಯವನ್ನೂ ಧ್ವನಿಸುತ್ತದೆ.

ಆದರೆ sole ಮತ್ತು whole ಗಳನ್ನು soul ಮತ್ತು hole ಎಂದೂ ಅರ್ಥ ಸ್ಫುರಿಸುವಂತೆ ಉಚ್ಚರಿಸುವ ಸೌಲಭ್ಯ ಕನ್ನಡದಲ್ಲಿ ಇಲ್ಲವಾದ್ದರಿಂದ ಈ ಸ್ವಾರಸ್ಯವನ್ನು ಕನ್ನಡದ ಅನುವಾದದಲ್ಲಿ ತರುವುದು ಕಷ್ಟ; ಆದ್ದರಿಂದ ಬರೀ ಅರ್ಥವನ್ನು ಮಾತ್ರ ಉಳಿಸಿಕೊಂಡಿದ್ದೇನೆ. ಈ ದೃಷ್ಟಿಯಿಂದ ಈ ಅನುವಾದದ ಬಗೆಗೆ ನನಗೆ ಅತೃಪ್ತಿಯಿದೆ.