Tuesday, January 17, 2012

ಕಾವ್ಯದ ಕುಣಿತ - ಮೊದಲ ಹೆಜ್ಜೆಗಳು 2: ಮಾತ್ರೆ-ಗಣ (ಮುಂದುವರೆದಿದೆ)

ಹಿಂದಿನ ಬರಹದಲ್ಲಿ ಲಘು-ಗುರು ಅಂದರೆ ಏನು ಅಂತ ತಿಳಿದುಕೊಂಡೆವು (ನೋಡಿಲ್ಲದೇ ಇದ್ದರೆ ಆ ಬರಹ ಇಲ್ಲಿದೆ ನೋಡಿ)

ಸುಮ್ಮನೇ ಒಂದು ಸಲ ನೆನಪಿಸಿಕೊಳ್ಳೋಣ. ಲಘು ಅಂದರೆ ಒಂದು ಚಿಟುಕೆ ಹೊಡೆಯುವಷ್ಟು ಕಾಲ. ಗುರು ಅಂದರೆ ಅದರ ಎರಡರಷ್ಟು ಕಾಲ. ಆದ್ದರಿಂದ ಸಾಮಾನ್ಯವಾಗಿ ಎಲ್ಲ ಹ್ರಸ್ವಾಕ್ಷರಗಳೂ ಲಘು; ಎಲ್ಲಾ ಧೀರ್ಘಾಕ್ಷರಗಳೂ ಗುರು. ಒತ್ತಕ್ಷರದ ಹಿಂದಿನ ಅಕ್ಷರ ಅದೇನೇ ಇದ್ದರೂ ಗುರುವೇ. ಸರಳವಾಗಿ ತಿಳಿಯಲು ಇದಿಷ್ಟು ಈಗ್ಗೆ ಸಾಕು. ಈಗ ಬಳಕೆಯಲ್ಲಿ ಈ ಲಘು-ಗುರುಗಳನ್ನು ಸ್ವಲ್ಪ ನೋಡೋಣ.

ಈ ಸಾಲುಗಳನ್ನು ಜೋರಾಗಿ ಓದಿ:

ಚಿಲಿಪಿಲಿ ಉಲಿಯುತ ನಲಿವುದೆ ಸೊಗಸು (ತಕ ತಕ ತಕ ತಕ ಎಂಬಂತೆ - ಚಿಲಿ| ಪಿಲಿ| ಉಲಿ| ಯುತ| ನಲಿ| ವುದೆ| ಸೊಗ| ಸು - ಇಲ್ಲೆಲ್ಲಾ ಎರಡೆರಡು ಮಾತ್ರೆಯ ಜೊತೆಯಾಗಿ ಬಂದಿದೆ)

ಇಲಿಯು ಗಣಪಗೊಲಿಯಿತು (ತಕಿಟ ತಕಿಟ ತಕಿಟ ಎಂಬಂತೆ - ಇಲಿಯು| ಗಣಪ| ಗೊಲಿಯಿ| ತು - ಇಲ್ಲಿ ಮೂರುಮೂರು ಮಾತ್ರೆಯ ಜೊತೆಗಳು ಬಂದುವು)

ತಲೆಯನು ಪರಪರ ಕೆರೆಯುತಲಿಹಳು (ತಕತಕ ತಕತಕ ತಕತಕ ಎಂಬಂತೆ - ತಲೆಯನು| ಪರಪರ| ಕೆರೆಯುತ| ಲಿಹಳು| - ಇಲ್ಲಿ ನಾಲ್ಕು ನಾಲ್ಕು ಮಾತ್ರೆಯ ಜೊತೆ)

ಮನೆಗೆಲಸ ಮುಗಿಸದೆಯೆ ತರಗತಿಗೆ ಹೊರಟ (ತಕತಕಿಟ ತಕತಕಿಟ ತಕತಕಿಟ ಎಂಬಂತೆ - ಮನೆಗೆಲಸ| ಮುಗಿಸದೆಯೆ| ತರಗತಿಗೆ| ಹೊರಟ| - ಇಲ್ಲಿ ಐದೈದು ಮಾತ್ರೆಯ ಜೊತೆ)

ಮನೆಯ ಕೆಲಸವ ಬರೆದು ಮುಗಿಸದೆ ತರಗತಿಗೆ ಇವ ಹೊರಟನು (ತಕಿಟತಕತಕ ತಕಿಟತಕತಕ ಎಂಬಂತೆ - ಮನೆಯ ಕೆಲಸವ| ಬರೆದು ಮುಗಿಸದೆ| ತರಗತಿಗೆ ಇವ| ಹೊರಟನು| - ಇಲ್ಲಿ ಏಳೇಳು ಮಾತ್ರೆಯ ಜೊತೆ)

ಇಲ್ಲಿ ನೀವು ಗಮನಿಸಬೇಕಾದ್ದು ಮೇಲೆ ಬಳಸಿರುವುದೆಲ್ಲಾ ಲಘು (U) ಅಕ್ಷರಗಳೇ! ಅಂದರೆ ಕೇವಲ ಒಂದು ಮಾತ್ರೆಯ (ಒಂದು ಚಿಟುಕೆ ಹೊಡೆಯುವಷ್ಟೇ) ಅಕ್ಷರಗಳು.

ಇದೇ ರೀತಿ ಕೆಲವು ಅಭ್ಯಾಸಗಳನ್ನು ಮಾಡೋಣವೇ? ಮೇಲೆ ಹೇಳಿದ ಯಾವುದಾದರೂ ಲಯದಲ್ಲಿ, ಬರೀ ಲಘು ಅಕ್ಷರಗಳನ್ನೇ ಬಳಸಿ ಏನಾದರೂ ಬರೆಯಿರಿ (ಅದು ಅದ್ಭುತ ಕಾವ್ಯವಾಗಿರಬೇಕಿಲ್ಲ, ಏನಾದರೂ ಆಗಬಹುದು)

ಈಗ ಈ ಸಾಲುಗಳನ್ನು ಜೋರಾಗಿ ಓದೋಣ.

ಕಾ ಕಾ ಕಾಗೇ ಬಂತೂ ನೋಡೀ (ತಾ ತಾ ತಾ ತಾ ಎಂಬಂತೆ - ಕಾ| ಕಾ| ಕಾ| ಗೇ| ಬಂ| ತೂ| ನೋ| ಡೀ| - ಇಲ್ಲಿ ಎರಡೆರಡು ಮಾತ್ರೆಗಳು ಬಂದಿದಿವೆ, ಆದರೆ ಒಂದೊಂದರ ಎರಡು ಲಘುವಿನ ಬದಲು ಒಂದೇ ಗುರು ಬಂದಿದೆ)

ಬಂದಾ ಬಂದಾ ಚಂದಾ ಮಾಮಾ (ತಾತಾ ತಾತಾ ತಾತಾ ತಾತಾ ಎಂಬಂತೆ - ಬಂದಾ| ಬಂದಾ| ಚಂದಾ| ಮಾಮಾ| - ಇಲ್ಲಿ ನಾಲ್ಕು ನಾಲ್ಕು ಮಾತ್ರೆಯ ಜೊತೆ, ಅಂದರೆ ಒಂದೊಂದು ಗುಂಪಿನಲ್ಲೂ ಎರಡೆರಡು ಗುರು)

ರಂಗಯ್ಯಾ ಬಂದವ್ನೇ ಬಾಗ್ಲಲ್ಲೀ ನಿಂದವ್ನೇ (ತಾತಾತಾ ತಾತಾತಾ ತಾತಾತಾ ತಾತಾತಾ ಎಂಬಂತೆ - ರಂಗಯ್ಯಾ| ಬಂದವ್ನೇ| ಬಾಗ್ಲಲ್ಲೀ| ನಿಂದವ್ನೇ| - ಇಲ್ಲಿ ಆರಾರು ಮಾತ್ರೆಯ ಜೊತೆ, ಅಂದರೆ ಒಂದೊಂದು ಗುಂಪಿನಲ್ಲೂ ಮೂರುಮೂರು ಗುರು)

ಇಲ್ಲಿ ನೀವು ಗಮನಿಸಬೇಕಾದ್ದು ಮೇಲೆ ಬಳಸಿರುವುದೆಲ್ಲಾ ಗುರು ( _ ) ಅಕ್ಷರಗಳೇ! ಅಂದರೆ ಎರಡು ಮಾತ್ರೆಯ (ಎರಡು ಚಿಟುಕೆ ಹೊಡೆಯುವಷ್ಟು) ಅಕ್ಷರಗಳು.

ಇದೇ ರೀತಿ ಕೆಲವು ಅಭ್ಯಾಸಗಳನ್ನು ಮಾಡೋಣವೇ? ಮೇಲೆ ಹೇಳಿದ ಯಾವುದಾದರೂ ಲಯದಲ್ಲಿ, ಬರೀ ಗುರು ಅಕ್ಷರಗಳನ್ನೇ ಬಳಸಿ ಏನಾದರೂ ಬರೆಯಿರಿ

ಗೆಳೆಯರೇ, ಇಲ್ಲಿಂದಾಚೆಗೆ ಇದು ನಿಮ್ಮೆಡೆಯಿಂದ ತುಸು ಅಭ್ಯಾಸವನ್ನು ನಿರೀಕ್ಷಿಸುತ್ತದೆ. ಅಭ್ಯಾಸರೂಪದ ಪ್ರತಿಕ್ರಿಯೆಗಳು ಬಂದಷ್ಟೂ ಮುಂದುವರೆಸಲು ಹುರುಪು.

ಇದು ಸ್ವಲ್ಪ ಕೈವಶವಾದ ನಂತರ ಮುಂದುವರೆಯೋಣ.

ಈ ಸರಣಿಯ ಮುಂದಿನ ಬರಹ ಇಲ್ಲಿದೆ.