Wednesday, December 21, 2011

ಹಾಯ್ಕುಗಳು

ಹಾಯ್ಕು ಎನ್ನುವುದು ಒಂದು ಜಪಾನಿ ಕಾವ್ಯ ಪ್ರಕಾರ; ನಮ್ಮಲ್ಲಿನ ಹನಿಗವನ ಮಿನಿಗವನ ಇತ್ಯಾದಿ ಚಿಕ್ಕ ಕವನ ಇದೆಯಲ್ಲ ಹಾಗೆ. ಯಾವುದಾದರೊಂದು ವಿಷಯ, ಅದರಲ್ಲೊಂದು ಪಂಚ್ ಲೈನ್, ಅರ್ಥದ ಮಿಂಚು. ತೀರ ಚಿಕ್ಕ ಪದ್ಯವಾದ್ದರಿಂದ ಈ ಅರ್ಥದ ಮಿಂಚು ಬಹಳ ಮುಖ್ಯ. ಅರ್ಥದ ಸೊಗಸು ಪದೇಪದೇ ಮನಸ್ಸಿನಲ್ಲಿ ಮೂಡುವಂತಿರಬೇಕು. ಜಪಾನಿನಲ್ಲಿ ಬಹು ಜನಪ್ರಿಯ ಪ್ರಕಾರ ಇದು.

ನಮ್ಮ ಹನಿಗವನಗಳಂತೆ ಅಂದೆ, ಆದರೆ ನಮ್ಮ ಹನಿಗವನಗಳಂತೆ ಅಳತೆಯಿಲ್ಲದ ಕವನಗಳಲ್ಲ ಇವು. ನಮ್ಮ ಹಳೆಗನ್ನಡದ ಕಂದಪದ್ಯಗಳಂತೆ ಚುಟುಕು, ಆದರೆ ಲೆಕ್ಕಾಚಾರದಿಂದ ಕೂಡಿದ ಪದ್ಯಗಳು. ಆದರೆ ನಮ್ಮ ಕಂದಪದ್ಯಗಳಲ್ಲಿ ಮಾತ್ರಾಕಾಲವನ್ನು ಪರಿಗಣಿಸುತ್ತೇವೆ, ಹಾಯ್ಕುಗಳಲ್ಲಿ ಅಕ್ಷರಗಳನ್ನು.

ಹಾಯ್ಕುಗಳು ಮೂರುಸಾಲಿನವು. ಮೊದಲನೆಯ ಸಾಲಿನಲ್ಲಿ ೫, ಎರಡನೆಯ ಸಾಲಿನಲ್ಲಿ ೭ ಮತ್ತು ಮೂರನೆಯ ಸಾಲಿನಲ್ಲಿ ೫ ಅಕ್ಷರಗಳು. ಜಪಾನೀಯರು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಮತ್ತೆ ಮೊದಲೇ ಹೇಳಿದಂತೆ ಅಲ್ಲೊಂದು ಪಂಚ್ ಇರಲೇಬೇಕು, ಆದರೆ ನಮ್ಮ ಕಂದಪದ್ಯಗಳಲ್ಲಿ ಈ ನಿಯಮವೇನೂ ಇಲ್ಲ.

ಹಾಯ್ಕುಗಳ ಅಕ್ಷರವಿನ್ಯಾಸದ ಬಗ್ಗೆ ಹೇಳಿದ್ದೆ (ಮೊದಲ, ಎರಡನೆಯ ಮತ್ತು ಮೂರನೆಯ ಸಾಲುಗಳಲ್ಲಿ ಕ್ರಮವಾಗಿ ೫,೭ ಮತ್ತು ೫ ಅಕ್ಷರಗಳು). ಆದರೆ ಇಲ್ಲಿ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಜಪಾನೀ ಭಾಷೆ ಕನ್ನಡದಂತಲ್ಲ. It is a highly phonetic language (ಅಂದರೆ ಸ್ವರಬದ್ಧವಾದ ಭಾಷೆ). ಆದ್ದರಿಂದ ಅಲ್ಲಿನ ಅಕ್ಷರಗಳ ಎಣಿಕೆ ನಮ್ಮ ಕನ್ನಡದ ಅಕ್ಷರದ ಎಣಿಕೆಯಂತಲ್ಲ. ನಾವು ಕಣ್ಣಿಗೆ ಕಾಣುವ ಅಕ್ಷರಗಳನ್ನು ಎಣಿಸಿದರೆ ಅವರು ಉಚ್ಛಾರಣೆಯಲ್ಲಿ ಬರುವ ಘಟಕಗಳನ್ನು (syllableಗಳನ್ನು) ಎಣಿಸುತ್ತಾರೆ. Syllable ಎಂದರೆ ಒಂದೇ ಉಚ್ಚಾರಣೆಯ ಪ್ರಯತ್ನದಲ್ಲಿ ಉಚ್ಚರಿಸಲ್ಪಡುವ ಶಬ್ದ. ಅದು ಒಂದೇ ಅಕ್ಷರವಿರಬಹುದು, ಅಥವ ಒಂದಕ್ಕಿಂತ ಹೆಚ್ಚು ಅಕ್ಷರಗಳ ಗುಂಪೂ ಇರಬಹುದು. ಇದನ್ನು ಕೆಲವು ಉದಾಹರಣೆಗಳೊಂದಿಗೆ ಹೀಗೆ ವಿವರಿಸೋಣ:

"ಲವ್ (love)" ಇಲ್ಲಿ ಕಣ್ಣಿಗೆ ಕಾಣುವುದು ಕನ್ನಡದಲ್ಲಿ ಎರಡು ಅಕ್ಷರಗಳು, ಇಂಗ್ಲಿಷಿನಲ್ಲಿ ನಾಲ್ಕು ಅಕ್ಷರಗಳು. ಆದರೆ ಉಚ್ಚಾರಣೆಯ unit (syllable) ಕೇವಲ ಒಂದೇ (ಲೌ). ಆದ್ದರಿಂದ ಹಾಯ್ಕುಗಳ ವಿಷಯದಲ್ಲಿ ಇದನ್ನು ಒಂದು ಎಂದು ಎಣಿಸಬೇಕು.

"ಕಣ್" ಇದೂ ಹಾಗೆಯೇ, ಎರಡು ಅಕ್ಷರಗಳು ಕಂಡರೂ ಉಚ್ಚಾರಣೆಯ syllable ಒಂದೇ. ಆದ್ದರಿಂದ ಹಾಯ್ಕಿನಲ್ಲಿ ಇದು ಒಂದೇ ಅಕ್ಷರವೆಂದಾಗುತ್ತದೆ.

"ಜಂಪ್" ಎನ್ನುವುದೂ ಹಾಗೇ. ಆದರೆ "ಜಂಪು" ಎಂದಾಗ ಮಾತ್ರ ಅಲ್ಲಿ ಎರಡು syllables ಬರುತ್ತವೆ, ಜಂ ಮತ್ತು ಪು.

ಹಾಗೆಯೇ "ಬಂಪರ್ (bumper)" ಎನ್ನುವುದರಲ್ಲಿ 3 (ಇಂಗ್ಲಿಷಿನ 6) ಅಕ್ಷರಗಳು ಆದರೆ ಎರಡೇ syllableಗಳು (ಬಂ + ಪರ್), ಆದರೆ "ಬಂಪರು" ಎನ್ನುವುದರಲ್ಲಿ ಮೂರು syllables ಮತ್ತು ಮೂರು ಅಕ್ಷರಗಳು.

"ಕಾವೇರಿ" ಇಲ್ಲಿ ಕಣ್ಣಿಗೆ ಕಾಣುವುದೂ ಮೂರು ಅಕ್ಷರ, ಉಚ್ಚಾರಣೆಯಲ್ಲೂ ಮೂರು ಅಕ್ಷರ (3 letters and 3 syllables).

ಆದ್ದರಿಂದ ಹಾಯ್ಕುಗಳನ್ನು ಬರೆಯುವಾಗ ೧,೨ ಮತ್ತು ೩ನೆಯ ಸಾಲುಗಳಲ್ಲಿ ೫,೭ ಮತ್ತು ೫ ಅಕ್ಷರಗಳನ್ನು ಎಣಿಸುವ ಬದಲಿಗೆ ೫,೭ ಮತ್ತು ೫ ಸಿಲೆಬಲ್ಲುಗಳನ್ನು ಎಣಿಸುವುದು ಸೂಕ್ತ.

ಹೀಗೆ ಹಾಯ್ಕುಗಳ ಸಾಮಾನ್ಯ format ಹೀಗಿರಬಹುದು:

ನನ ನನನ
ನನ ನನ ನನನ
ನನ ನನನ

(ಮೇಲೆ ಹೇಳಿದಂತೆ ಅದು ಹ್ರಸ್ವಾಕ್ಷರವೇ ಆಗಬೇಕಿಲ್ಲ, "ನ" ಅನ್ನುವುದರ ಬದಲು "ನಾ" ಎಂದು ಕೂಡ ಆಗಬಹುದು, ಅಥವ "ನನ್" ಕೂಡ ಆಗಬಹುದು)

ಮತ್ತೆ, ಮೊದಲೇ ಹೇಳಿದಂತೆ ಜಪಾನೀ ನುಡಿ ಕನ್ನಡಕ್ಕಿಂತ ಹೆಚ್ಚು phonetic ನುಡಿಯಾದ್ದರಿಂದ ಅವರು ಈ ಎಣಿಕೆಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಕನ್ನಡದ ಜಾಯಮಾನ ಹಾಗಲ್ಲವಾದ್ದರಿಂದ ನಾವು ಅದನ್ನು ಅಷ್ಟು ಕಟ್ಟುನಿಟ್ಟಾಗಿ ಅನುಸರಿಸಬೇಕಿಲ್ಲವೆಂಬುದು ನನ್ನ ಅನಿಸಿಕೆ. ಆದರೂ ಆದಷ್ಟು ಈ ಲಕ್ಷಣಗಳನ್ನು ಅನುಸರಿಸುವುದು ಒಳ್ಳೆಯದು. ಒಂದೋ ಎರಡೋ ಸಿಲೆಬಲ್ಲುಗಳು ಹೆಚ್ಚು ಕಡಿಮೆಯಾದರೆ ಪರವಾಗಿಲ್ಲ, ಆದರೆ ತೀರ ಎಣಿಕೆಗೇ ಸಿಗದಂತಿರಬಾರದೆಂಬುದು ನನ್ನ ನಿಲುವು.

ಮತ್ತೆ, ಪ್ರಾಸದ ಬಗ್ಗೆ ಯಾವ ನಿಯಮವೂ ಇದ್ದಂತಿಲ್ಲ, ಆದರೆ ಪ್ರಾಸವಿರಬಾರದೆಂದೇನೂ ಇಲ್ಲ. ಅರ್ಥದ ಮಿಂಚಿಗೆ ಮತ್ತಷ್ಟು ಹೊಳಪು ಸೇರಿಸುವುದಾದರೆ ಏಕಿರಬಾರದು? ಹೀಗೇ ಗೀಚಿದ ಕೆಲವು ಹಾಯ್ಕುಗಳು ಇಲ್ಲಿವೆ:

ಐದು ಏಳರ
ಮೇಲೈದುಲಿಯಂ ಹಾಕು
ಬಂದಿತು ಹಾಯ್ಕು

ಬಂಪರ್ ಟು ಬಂಪರ್
ಜೋರಾಗಿ ಗುದ್ದಿದರೆ
ಬಂಪರ್ ಹೊಡೆತ

ನಿನ್ನ ನಗೆ ಹೂ
ಮೊಲ್ಲೆಯ ಚೆಲ್ಲಿಬಿಡು
ಹೂಮಂಚವೇಕೆ?

ಆ ಕಣ್ಣು ತುಟಿ
ಹೀರಿ ತೂರಾಡುವನು
ಇವ, ಕುಡುಕ!

ನಗೆಯ ಮಿಂಚ
ಮುಂದೆ ಮಳೆಯ ಮಿಂಚು
ಮಂಕಾಯಿತಲ್ಲ!

ಮಳೆ ಗುಡುಗು
ಮಿಂಚಿ ತೋರಿಸಿದ್ದೇನು?
ಊಳಿಡೋ ದೆವ್ವ!

ಕಣ್ಣ ಮುಚ್ಚಿದೆ
ನಿದ್ದೆಯಲೂ ನೀ ಬಂದೆ
ನಿದ್ದೆ ಬಿಟ್ಟೆದ್ದೆ

ಕಾಡದಿರು ನೀ
ಗೆಳತಿ, ನೋಡುವಳು
ನಿನ್ನ ಸವತಿ!

ಕಾಡೆ ನೀ ಹೀಗೆ,
ಬೇಜಾರುಗೊಳ್ಳುವನು
ಶನಿರಾಯನು

ಎಕ್ಸಾಮಂದ್ರಿಷ್ಟೇ,
ಜಸ್ಟ್ ಕಾಪಿ ಪೇಸ್ಟ್, ಕಾಪಿ ಪೇಸ್ಟ್
ಓದೋದೆಲ್ಲಾ ವೇಸ್ಟ್

ದೆವ್ವದ್ ಕತೇಲೇ
ಹೆದ್ರುಸ್ತಿದ್ದಾ ನಂ ತಾತ
ಈಗವ್ನೇ ಭೂತಾ!

ಎತ್ತಣ ಮಾವೋ
ಎತ್ತಣ ಕೋಗಿಲೆಯೋ
ಬಂದೂಕು ಶಬ್ದ!

ಹೊಟ್ಗಿಲ್ಲ ಅನ್ನಾ
ತಿರ್ಕೊಂಡ್ ತಿನ್ನೋದ್ ಏನ್ ಚೆನ್ನ?
ಹಾಕ್ತೀನಿ ಕನ್ನ

ಹಾಯ್ಕುವಿನ ಗಮ್ಮತ್ತೇ ಅದು. ಸುಮ್ನೇ ಚಾಟ್ ಮಾಡಿದಹಾಗೆ ಬರೀತಾನೇ ಹೋಗಬಹುದು.

ಈ ಮಾತೇ ಮುತ್ತು
ಮಾತೇ ಮತ್ತು, ಮಾತಲ್ಲೇ
ಕಾಣೋ ಗಮ್ಮತ್ತು

ಚಾಟ್ ಮಾಡ್ದಾಗೆ, ಚಾಟ್
ತಿಂದ್ ಹಾಗೆ, ಚಾಟೀ ಹಾಯ್ಕೊಂಡ್
ಬಂದ್ ಹಾಗ್ ಮಾತು

ನೀನಾಡೋ ಮಾತ್ನೇ
ಕಟ್ ಕಟ್ ಮಾಡು, ಹಾಯ್ಕೊಂದಲ್
ಬಂದಯ್ತೆ ನೋಡು