Monday, July 26, 2010

ಕಿಟಕಿ ಪಕ್ಕದ ಸೀಟು

ಮೊನ್ನೆ ಬೆಂಗಳೂರಿನಿಂದ ಮೈಸೂರಿಗೆ ಬರುವಾಗ ನನ್ನ ಮಡದಿ ತಾನಾಗಿಯೇ ನನಗೆ ಕಿಟಕಿ ಸೀಟನ್ನು ಬಿಟ್ಟುಕೊಟ್ಟದ್ದು ಅದೇಕೋ ಮನಸ್ಸಿಗೆ ನಾಟಿತು. ಅವಳು ಹಾಗೆ ನನಗೆ ಕಿಟಕಿ ಸೀಟು ಬಿಟ್ಟುಕೊಟ್ಟದ್ದೇನು ಮೊದಲನೆಯ ಸಲವೂ ಅಲ್ಲ, ಹೊಸದೂ ಅಲ್ಲ. ಆದರೆ ಈ ಔದಾರ್ಯ ಯಾವಾಗ ಶುರುವಾಯಿತೋ ನೆನಪಿಲ್ಲ. ಕಿಟಕಿ ಸೀಟಿಗಾಗಿ ನಾವು ಕೊನೆಯ ಸಲ ಕಿತ್ತಾಡಿದ್ದು ಯಾವಾಗ? ನೆನಪಿಗೆ ಬರುತ್ತಿಲ್ಲ, ಕಿತ್ತಾಡುತ್ತಿದ್ದಂತೂ ನಿಜ. ಬಹಳಷ್ಟೇ ದಿನ ನಡೆದುಕೊಂಡುಬಂದ ಈ ಕಿತ್ತಾಟ ಅದು ಯಾವುದೋ ಮಾಯದಲ್ಲಿ ನನ್ನ ಗಮನಕ್ಕೇ ಬರದೇ ಕೊನೆಗೊಂಡಿತ್ತು.

ಹತ್ತು ವರ್ಷದ ಹಿಂದೆ ನಾವು ಮಧುಚಂದ್ರಕ್ಕಾಗಿ ದಿಲ್ಲಿಯಿಂದ ಮನಾಲಿಗೆ ಪಯಣಿಸುತ್ತಿದ್ದಾಗಿನ ಘಟನೆ ನೆನಪಿಗೆ ಬರುತ್ತದೆ. ಇದು ನಾವಿಬ್ಬರೂ ಬಹಳ ಆಸ್ತೆಯಿಂದ ಯೋಜಿಸಿದ್ದ ಪ್ರವಾಸವಾಗಿತ್ತು. ಅಲ್ಲದೇ ಹಿಮಾಲಯದ ದರ್ಶನ ನನ್ನ ಬಹುದಿನಗಳ ಹೆಬ್ಬಯಕೆಯಾಗಿತ್ತು ಕೂಡ. ಬೆಟ್ಟಗಳು ಬೆಳ್ಳಗೂ ಇರುತ್ತವೆ ಎಂಬುದು ನನ್ನ ಜ್ಞಾನ ಪ್ರಪಂಚದಲ್ಲಿ ನಮೂದಾದ್ದ ವಿಷಯವೇ ಹೊರತು, ನನ್ನ ಭಾವಪ್ರಪಂಚದಿಂದ ಅದು ಸಂಪೂರ್ಣ ಹೊರಗು. ಹೀಗಾಗಿ ಬೆಳ್ಳಿ ಬೆಟ್ಟದ ಬೆರಗನ್ನು ನೋಡಲು ಮನಸ್ಸು ಬಹಳ ಉತ್ಸುಕವಾಗಿತ್ತು. ದಿಲ್ಲಿಯಿಂದ ರಾತ್ರಿ ಹೊರಟ ಬಸ್ಸು ಕುಲು ಕಣಿವೆಯನ್ನು ಪ್ರವೇಶಿಸುವ ಹೊತ್ತಿಗೆ ಅರುಣೋದಯದ ಸಮಯ. ಇವಳಿಗೆ ತಡೆಯದಷ್ಟು ನಿದ್ದೆ. ಕಣಿವೆಯ ಕೊನೆಯಲ್ಲಿ ನಿಧಾನಕ್ಕೆ ಕೆಂಪಾಗುತ್ತಿತ್ತು. ಬೆಳ್ಳನೆಯ ಗೋಡೆಗಳಂತೆ ನಿಂತಿದ್ದ ಹಿಮಶೀತಲ ಶೈಲಗಳನ್ನು ಮುಟ್ಟುವುದೋ ಬೇಡವೋ ಎಂಬಂತೆ ಸೂರ್ಯನ ಪ್ರಥಮ ಕಿರಣಗಳು ಅದರ ತುದಿಯನ್ನು ತುಸುವೇ ಸೋಂಕಿ ಸೋಂಕಿ ಹಿಂಜರಿಯುತ್ತಿದ್ದವು. ಬೆಟ್ಟವೂ ಸ್ವಲ್ಪಹೊತ್ತು ತನ್ನ ಸ್ವಭಾವಸಿದ್ಧವಾದ ದಿವ್ಯ ಶೀತಲತೆಯನ್ನು ನಟಿಸಿತು. ಆದರೇನು? ರವಿಗೆ ಕರಗದ ಮಂಜೇ? ಸ್ಪರ್ಶಕ್ಕೆ ನಾಚಿ ನಿಧಾನಕ್ಕೆ, ಬಹು ನಿಧಾನಕ್ಕೆ ಹಿಮಗಿರಿಯ ತುದಿಗಳು ಕೆಂಪೇರತೊಡಗಿದ್ದುವು. ಜುಮ್ಮೆನ್ನುವ ಮಲಯ ಮಾರುತಕ್ಕೆ ಕುಲು ಕಣಿವೆಯ ಹೂ ಗಿಡ ಮರಗಳು ಪುಳಕಿತಗೊಂಡು ತಲೆದೂಗುತ್ತಿದ್ದವು. ನೋಡನೋಡುತ್ತಿದ್ದಂತೆ ಇದುವರೆಗೂ ತಮೋನೀರಸವಾಗಿದ್ದ ಇಡೀ ಕಣಿವೆ ತನ್ನ ಸೌಂದರ್ಯ ಸಮಸ್ತವನ್ನು ಮರೆಮಾಚಿದ್ದ ನಿಷೆಯ ಜವನಿಕೆಯನ್ನು ಕಿತ್ತೊಗೆದು ತನ್ನೆಲ್ಲ ವರ್ಣ ವೈವಿಧ್ಯದೊಂದಿಗೆ ಮುಂಜಾವಿನ ಸೊಬಗನ್ನು ಸ್ವಾಗತಿಸಲು ಎದ್ದು ನಿಂತಿತು. ಶುಭ್ರ ಶ್ವೇತ ಗಿರಿ ಪಂಕ್ತಿ, ನಡುವಿನ ಬಿಡುವಿನಲ್ಲಿ ತುಸುವೇ ಕೆಂಪೇರಿದ ನಸುಗಪ್ಪು ನೀಲಿ ಆಕಾಶ, ಅಲ್ಲೊಂದು ಇಲ್ಲೊಂದು ತುಂಡು ಮೋಡಗಳು, ಕ್ಷಣಕ್ಕೊಮ್ಮೆ ರಂಗು ಬದಲಿಸುತ್ತಿದ್ದ ಸೂರ್ಯ, ಇವೆಲ್ಲಾ, ಮೊದಲೇ ವರ್ಣಮಯವಾದ ಕಣಿವೆಯ ಮೇಲೆ ತಮ್ಮ ಕುಂಚವಾಡಿಸಿ ಅದೊಂದು ಹೊಸ ಲೋಕವನ್ನು ನಿರ್ಮಿಸಿದ್ದುವು.

ಗಳಿಗೆಗೊಂದು ಹೊಸ ರಂಗು, ರೂಪ ತಳೆಯುತ್ತಿದ್ದ ಈ ಚೇತೋಹಾರಿ ದೃಶ್ಯಾವಳಿಯನ್ನು ಸೆರೆಹಿಡಿಯುತ್ತಾ, ಹಿಮಾಲಯದ ಮಹೋನ್ನತ ಶಿಖರಗಳ ಭವ್ಯತೆಗೆ ಬೆರಗಾಗುತ್ತಾ ಮೈಮರೆತಿದ್ದಾಗ ಒಂದು ವಿಷಯ ನನ್ನ ಗಮನಕ್ಕೆ ಬಂತು. ಇಡೀ ಬಸ್ಸಿನಲ್ಲಿ ಕುಳಿತಿದ್ದ ಸುಮಾರು ಮೂವತ್ತು ಜೋಡಿಗಳಲ್ಲಿ, ಕಿಟಕಿಯ ಪಕ್ಕ ಕುಳಿತಿದ್ದ ಗಂಡು ನಾನೊಬ್ಬನೇ. ಉಳಿದವರೆಲ್ಲಾ ಆ ಜಾಗವನ್ನು ತಂತಮ್ಮ ಮಡದಿಯರಿಗೆ ಒಪ್ಪಿಸಿ ಕೊಟ್ಟು ತಾವು ನಿದ್ದೆ ಹೊಡೆಯುತಿದ್ದರು. ನನ್ನ ಪುರುಷಪ್ರಜ್ಞೆ ಸ್ವಲ್ಪ ನಾಚಿತು; ಇವಳ ಮುಖ ನೋಡಿದೆ. ಅವಳೂ ಈ ವಿಷಯವನ್ನು ನನಗಿಂತ ಮುಂಚೆಯೇ ತುಸು ಅಸಮಾಧಾನದಿಂದ ಗಮನಿಸಿದ್ದಂತೆ ಕಂಡಿತು. ಹೊಸ ಪರಿಚಯ, ಕೇಳುವುದು ಹೇಗೆ ಎಂದು ಸುಮ್ಮನಿದ್ದಿರಬಹುದು. ಗಂಡಾಗಿ ನಾನೇ ಈ etiquette ಯನ್ನು ಅರ್ಥಮಾಡಿಕೊಳ್ಳಲಿ ಎಂಬ ನಿರೀಕ್ಷೆಯೂ ಇರಬಹುದು. ಎಷ್ಟುಹೊತ್ತು ಕಳೆದರೂ ನಾನು ಆ ಸಭ್ಯತೆಯನ್ನು ತೋರಿಸದಿದ್ದುದು ಕಂಡು, ಇದೆಂಥಾ ವಡ್ಡನ ಜೊತೆ ಗಂಟುಬಿತ್ತೆಂದು ಅನಿಸಿರಲೂ ಸಾಕು. ನನಗೋ, ಪುರುಷರು ಮಹಿಳೆಯರಿಗೆ ಕಿಟಕಿ ಸೀಟು ಬಿಟ್ಟುಕೊಡಬೇಕೆನ್ನುವ ಈ ಅಲಿಖಿತ ಅರ್ಥಹೀನ ಕಂದಾಚಾರ, ಈ ಸ್ವರ್ಗಸದೃಶ ಪಯಣದಲ್ಲಿ, ಮೊಸರನ್ನದಲ್ಲಿ ಸಿಕ್ಕ ಕಲ್ಲಿನಂತೆ ದೊಡ್ಡ ಕಿರಿಕಿರಿಯನ್ನೇ ಉಂಟುಮಾಡಿತು. Once in a life time ಎನಿಸುವ ಪಯಣವೊಂದುಕಡೆ, etiquette ಪಾಲಿಸಲಿಲ್ಲವೆಂದು ಮುಖವೂದಿಸಿಕೊಂಡು ಕುಳಿತ ಮುದ್ದಿನ ಮಡದಿಯೊಂದುಕಡೆ (ಅತ್ತ ದರಿಯೇನೋ ಸರಿ, ಇತ್ತ ಪುಲಿ ಎನ್ನಲಾದೀತೇ). ಆದರೂ, ಜೀವನದ ಪ್ರತಿಯೊಂದನ್ನೂ ಹಂಚಿಕೊಂಡು ಬದುಕಬೇಕಾದ ನಾವು ಈ ಆನಂದವನ್ನೂ ಹಂಚಿಕೊಳ್ಳಬೇಕಲ್ಲವೇ? ಅಷ್ಟೇ ಏನು, ಕಿಟಕಿಯಪಕ್ಕ ಕೂಡುವುದು ಅವಳ ಹಕ್ಕೂ ಅಲ್ಲವೇ? ಒಬ್ಬಳೇ ಬಂದಿದ್ದರೆ ಅವಳು ಆ ಹಕ್ಕನ್ನು ನಿರ್ಭಿಡೆಯಿಂದ ಚಲಾಯಿಸುತ್ತಿದ್ದಳಲ್ಲವೇ? ಇಬ್ಬರೂ ಒಟ್ಟಿಗೇ ಪಯಣಿಸುತ್ತಿದ್ದರಿಂದ ಈ ಕಿಟಕಿ ಸೀಟಿನ ಆನಂದ ಇಬ್ಬರಿಗೂ ಸಮಾನವಾಗಿ ದಕ್ಕಬೇಕಾದ್ದೇ ನ್ಯಾಯ. ಹೇಗೂ ನಾನು ಕಿಟಕಿಯ ಪಕ್ಕದಲ್ಲಿ ಒಂದು ಕಾಲು ಭಾಗದಷ್ಟು ದಾರಿ ಪಯಣಿಸಿದ್ದಾಗಿದೆ. ಅವಳೊಂದುಸ್ವಲ್ಪ ಹೊತ್ತು ಕೂಡಲಿ, ಮತ್ತೆ ಅವಳೇ ನನಗೆ ಬಿಟ್ಟುಕೊಡುತ್ತಾಳೆ; ಇಷ್ಟಕ್ಕೂ ಅವಳಿಗೆ ಅಸಮಾಧಾನವಾಗಿದೆ ಎನ್ನುವುದು ಕೇವಲ ನನ್ನ ಭ್ರಮೆಯಿರಬಹುದು; ನಾನು ಅದುವರೆಗೂ ಆ ದೃಶ್ಯವೈಭವವನ್ನು ನೋಡುತ್ತಾ ಚಿಕ್ಕ ಹುಡುಗರಂತೆ ಹಿಗ್ಗುತ್ತಿದ್ದುದನ್ನು ಅದೊಂದು ರೀತಿಯ ಆತ್ಮೀಯತೆಯಿಂದ ಗಮನಿಸುತ್ತಿದ್ದಳಲ್ಲವೇ. ನಾನೇನು ಬೇರೆಯವನೇ, ಅವಳಿಗೆ ಬೇಕಿದ್ದರೆ ಕೇಳಿಯೇ ಕೇಳುತ್ತಿದ್ದಳು - ಉಳಿದಂತೆ ಎಷ್ಟು ಕೇಳಿಲ್ಲ; ಆದರೂ ಇರಲಿ ಯಾವುದಕ್ಕೂ ವಿಚಾರಿಸಿ ನೋಡುವಾ; ಅವಳಿಗೆ ಬೇಕಾದರೆ ಬಿಟ್ಟುಕೊಡುತ್ತೇನೆ, ಇಲ್ಲದಿದ್ದರೆ ನಾನೇ ಇಲ್ಲಿ ಮುಂದುವರೆಯುತ್ತೇನೆ ಎಂದೆಲ್ಲಾ ಯೋಚಿಸಿ, "ಕಿಟಕಿ ಪಕ್ಕ ಕೂತ್ಕೋಬೇಕಾ?" ಎಂದು ಕೇಳಿದೆ. ಅವಳು ಹೂಂಗುಟ್ಟಿದಳು. "ಎಲ್ಲರೂ ಅವರವರ ಹೆಂಡತಿಯರಿಗೆ window seat ಬಿಟ್ಟುಕೊಟ್ಟಿದ್ದಾರೆ, ನಾನು ಮಾತ್ರ ನಿನ್ನ ಕೇಳಲೂ ಇಲ್ಲ ಅಂತ ಕೋಪಾನಾ?" ಎಂದು ಕೇಳಿದೆ. ಮುಗುಳ್ನಕ್ಕು ಅದಕ್ಕೂ ಹೂಂ ಎಂದಳು. ಸರಿ, ಇನ್ನು ಬೇರೆ ದಾರಿಯೇ ಇಲ್ಲ. ಕಿಟಕಿ ಸೀಟನ್ನು ಅದೊಂದು ಮಾಣಿಕ್ಯವೋ ಎಂಬಂತೆ ಅವಳಿಗೆ ಹಸ್ತಾಂತರಿಸಿ ನಾನು ಈಚೆ ಬದಿಗೆ ಬಂದು ಕುಂತೆ.

ತರ್ಕದಿಂದ ಈ "ತ್ಯಾಗ"ಕ್ಕೆ ನನ್ನ ಬುದ್ಧಿಯನ್ನು ಒಲಿಸಿದೆನಾದರೂ ಅದೇಕೋ ಭಾವ ಮಾತ್ರ ಬುದ್ಧಿಗೇಡಿ ಮಗುವಿನಂತೆ ಮುಸುಗುಡುತ್ತಲೇ ಇತ್ತು, "ಕಿಟಕಿ ಸೀಟು... ಕಿಟಕಿ ಸೀಟೂಊ" ಎಂದು. ಇವಳಾದರೋ, ಜಾಗ ಬದಲಿಸಿದವಳೇ ಒಂದೈದು ನಿಮಿಷ ಹೊರಗೆ ನೋಡುತ್ತಿದ್ದವಳು ಮತ್ತೆ ನನ್ನೆಡೆ ತಿರುಗಿ ಹೆಗಲ ಮೇಲೆ ತಲೆಯಿಟ್ಟು ಹಾಗೇ ನಿದ್ದೆಹೋದಳು; ದೈವವೇ ಎದುರು ನಿಂತಿರಲು, ಚರುಪು ಪಡೆಯಲು ಪೂಜಾರಿಯ ಹಿಂದೆ ಓಡುವಂತೆ. ಈಗಂತೂ ದೂರದ ಬೆಳ್ಳಿಯ ಶಿಖರ ಹೊತ್ತಿಕೊಂಡು ಉರಿಯುತ್ತಿದೆಯೋ ಎಂಬಂತೆ ಕಿತ್ತಳೆ ಬಣ್ಣದೊಂದಿಗೆ ಜಗಜಗಿಸುತ್ತಿತ್ತು. ಅನ್ಯಾಯ ಇಷ್ಟು ಅಮೂಲ್ಯವಾದ ದೃಶ್ಯವನ್ನು ಕಳೆದುಕೊಳ್ಳುತ್ತಿದ್ದಾಳಲ್ಲಾ ಈ ಪೆದ್ದು ಹುಡುಗಿ - ನನಗೂ ಇಲ್ಲ, ತನಗೂ ಇಲ್ಲ - ಎನ್ನಿಸಿದರೂ ಮಗುವಿನಂತೆ ನಿದ್ರಿಸುತ್ತಿದ್ದ ಅವಳ ಮುಖವನ್ನೇ ಕೆಲಹೊತ್ತು ನಿಟ್ಟಿಸಿದೆ. ಈಗ ಅವಳ ಮುಖದಮೇಲೆ ನಲಿಯುತ್ತಿದ್ದ ಸೂರ್ಯ ಕಿರಣ, ಮುಖದ ಚೆಲುವನ್ನು ಇಮ್ಮಡಿಸಿತ್ತು. ಆದರೆ ಈ ಸೌಖ್ಯ ಬಹುಕಾಲ ಉಳಿಯಲಿಲ್ಲ. ಅವಳು ಎಚ್ಚೆತ್ತು "ಮುಖಕ್ಕೆ ಗಾಳಿ ಹೊಡೆಯುತ್ತಿದೆ, ಕಿಟಕಿ ಮುಚ್ಚಿ, ನಾನು ಸ್ವಲ್ಪ ನಿದ್ದೆ ಮಾಡುತ್ತೇನೆ" ಎಂದಾಗ ಮಾತ್ರ ನನಗೆ ಎಲ್ಲಿಲ್ಲದ ಕೋಪ ಬಂತು. ಆದರೇನು, courtship etiquette ಮೀರಲಾದೀತೇ - ಸಮಯ, ಸಂದರ್ಭ. ಕೊನೆಗೂ ತನ್ನ ಹಕ್ಕಿನ ವಿಂಡೋ ಸೀಟನ್ನು ಪಡೆದ ನೆಮ್ಮದಿಯಲ್ಲಿ ಕಿಟಕಿ ಮುಚ್ಚಿ ನಿದ್ದೆ ಹೋದಳು ಹುಡುಗಿ.

ಕಿಟಕಿ ಸೀಟಿಗಾಗಿ ಹೀಗೆ ಶುರುವಾದ ನಮ್ಮ ಕಾದಾಟ ಬಹಳಷ್ಟು ದಿನ ಮುಂದುವರಿಯಿತೆನ್ನಿಸುತ್ತದೆ. ಪ್ರತಿ ಬಾರಿಯೂ ನಾನೇ ತ್ಯಾಗ ಮಾಡಿ ದೊಡ್ಡವನಾಗುತ್ತಿದ್ದೆ. ಆಗೊಮ್ಮೆ ಈಗೊಮ್ಮೆ ನಾನು ಹಾಗೆ ತ್ಯಾಗ ಮಾಡದಿದ್ದರೆ "ನೀವು 'ಯಾವಾಗಲೂ' ಹೀಗೆಯೇ" ಎನ್ನುವ ಬಾಣ ಸಿದ್ಧವಾಗಿರುತ್ತಿತ್ತು. ಹಾಗೆಂದು ಅವಳಿಗೇನು ಕಿಟಕಿಯ ಬಳಿ ಕೂಡುವ ಹುಚ್ಚೇನೂ ಇದ್ದಂತಿರಲಿಲ್ಲ. ಇನ್ನು ಕಿಟಕಿಯ ಹೊರಗೆ ನೋಡುವ ವಿಚಾರವಂತೂ ದೂರವೇ ಉಳಿಯಿತು. ಬೇರೆ ಯಾರ ಜೊತೆ ಹೋದರೂ ಕಿಟಕಿಯ ಬಗ್ಗೆ ಚಕಾರವನ್ನೂ ಎತ್ತುತ್ತಿರಲಿಲ್ಲ. ಬಹಳಷ್ಟು ಸಾರಿ ತನಗೆ ಗಾಳಿ ಆಗುವುದಿಲ್ಲ ಎಂದು ಹೇಳಿ ಅವರಿಗೇ ಬಿಟ್ಟುಕೊಡುತ್ತಿದ್ದಳು. ಅವಳ ತಕರಾರೆಲ್ಲಾ ನನ್ನೊಡನೆ ಪಯಣಿಸುವಾಗ ಮಾತ್ರ. ಆಗ ಮಾತ್ರ ಕಿಟಕಿ ಅವಳಿಗೆ ಹಕ್ಕಿನ ವಿಷಯವಾಗುತ್ತಿತ್ತು.

ಹಾಗೆಂದು ಕಿಟಕಿಗೋಸ್ಕರ ನನ್ನದೇನು ಹಕ್ಕಿನ ಕಾದಾಟವಲ್ಲ; ಅಥವ ಅದೊಂದು ಅನಿವಾರ್ಯವೂ ಅಲ್ಲ. ಪ್ರಯಾಣ ಅನಿವಾರ್ಯವಾದಾಗ ಎಲ್ಲೋ ಹೇಗೋ ನಿಂತುಕೊಂಡೂ ಪಯಣಿಸಿದ್ದಿದೆ. ಆದರೆ ಕಿಟಕಿಯ ಪಕ್ಕ ಕುಳಿತೂ ಅದರ ಸದುಪಯೋಗ ಪಡೆಯದಿದ್ದರೆ ಮಾತ್ರ ಹೊಟ್ಟೆ ಉರಿಯುತ್ತದೆ. ಹಾಗೆ ನೋಡಿದರೆ ಕಿಟಕಿಯೊಂದೇ ಅಲ್ಲ, ಪಯಣದ ಬಗ್ಗೆ ನನಗೆ ನನ್ನದೇ ಆದ ಅನೇಕ ಗೊತ್ತುಪಾಡುಗಳಿವೆ. ಪಯಣ ತೀರ ಅನಿವಾರ್ಯವಲ್ಲದಿದ್ದರೆ ನಾನು ಈ ಗೊತ್ತುಪಾಡುಗಳನ್ನು ಸಾಕಷ್ಟೇ ಕಟ್ಟುನಿಟ್ಟಾಗಿ ಅನುಸರಿಸುತ್ತೇನೆ, ಮತ್ತು ಅಂಥಾ ಪ್ರಯಾಣಕ್ಕಾಗಿ ಕಾಯುತ್ತೇನೆ, ಒಂದು ಬಸ್ಸು ಮಿಸ್ಸಾದರೂ ಪರವಾಗಿಲ್ಲ (ಅದರಿಂದಲೇ ನಾನು ತೀರಾ 'ನಚ್ಚು' ಎಂಬ ಹಣೆಪಟ್ಟಿಯನ್ನೂ ಸಂಪಾದಿಸಿದ್ದೇನೆ).

ಪ್ರಯಾಣಕ್ಕೆ ಬಸ್ಸಿಗಿಂತ ರೈಲಾದರೆ ಸೂಕ್ತ; ಅದು ಸ್ವಚ್ಚವಾಗಿ ಥಳಥಳಿಸುತ್ತಿರಬೇಕಿಲ್ಲವಾದರೂ ಗಲೀಜಾಗಿರಬಾರದು; ಬಸ್ಸೇ ಆದರೆ ಅದು ವಿಡಿಯೋ ಕೋಚ್ ಆಗಿರಬಾರದು; 'ಸಂಗೀತ'ದ ಗಲಾಟೆಯಿರಬಾರದು; ಬಸ್ಸಿನಲ್ಲಿ ತೀರ ಹಿಂದಲ್ಲದ ತೀರಾ ಮುಂದಲ್ಲದ ಮಧ್ಯ ಭಾಗದ ಸೀಟಾದರೆ ಉತ್ತಮ; ಒಬ್ಬನೇ ಪಯಣಿಸುವಾಗ ಇಬ್ಬರ ಸೀಟಾದರೆ ಒಳ್ಳೆಯದು; ಅಷ್ಟಾದರೂ ಆ ಎರಡನೆಯ ಸೀಟಿಗೆ ಬರುವವರು ಯಾರೋ ಎಂಬ ಟೆನ್ಷನ್ ತಪ್ಪಿದ್ದಲ್ಲ. ಯಾರೂ ಬರದಿದ್ದರೆ ಒಳ್ಳೆಯದು. ಹಾಗೊಂದುವೇಳೆ ಬಂದರೂ ಅದು ಕಿರಿಕಿರಿಯ ಪ್ರಯಾಣಿಕನಲ್ಲದಿದ್ದರೆ ನಾನು ಧನ್ಯ. ಅದೇನೇ ಇರಲಿ, ಆ ಪ್ರಾಣಿ ಬಂದು ಕೂಡುವವರೆಗೂ ಜೀವಕ್ಕೆ ನೆಮ್ಮದಿಯಿಲ್ಲ.

ಇದು ನಿಮಗೆ ತಮಾಷೆಯೆನ್ನಿಸಬಹುದು. ಆದರೆ ನಗಬೇಡಿ, ಅನುಭವದಿಂದ ಹೇಳುತ್ತೇನೆ; ನಿಮ್ಮ ಆ "ಸಹ" ಪ್ರಯಾಣಿಕರಿಗೆ ನಿಮ್ಮ ಪಯಣವನ್ನೇ ಗಬ್ಬೆಬ್ಬಿಸಿಬಿಡುವ ತಾಕತ್ತಿರುತ್ತದೆ. ಈ ಪಕ್ಕಪಯಣಿಗರ ತರಹೇವಾರಿ ರಖಂಗಳನ್ನು ನೋಡಿಬಿಟ್ಟಿದ್ದೇನೆ. ಕೆಲವರಿರುತ್ತಾರೆ. ಅವರು ನಿಮ್ಮ ಪಕ್ಕ ಕುಳಿತಿರುವುದೇ ಗೊತ್ತಾಗುವುದಿಲ್ಲ ನಿಮಗೆ. ತಾವಾಯಿತು, ತಮ್ಮ ಪುಸ್ತಕವೋ/ಮ್ಯಾಗಜೀನೋ ಆಯಿತು. ಇನ್ನು ಕೆಲವರು ನಿಮ್ಮತ್ತ ಒಂದು ಸೌಜನ್ಯದ ಮುಗುಳ್ನಗು ಎಸೆಯುತ್ತಾರೆ; ಹಿತಮಿತವಾಗಿ ಮಾತಾಡುತ್ತಾರೆ. ಆಸಕ್ತಿ ಕುದುರಿದರೆ ಪಯಣದುದ್ದಕ್ಕೂ ಒಳ್ಳೆಯ ಕಂಪನಿಯಾಗಬಲ್ಲರು ಇವರು. ಆದರೆ ಈ ಎರಡೂ ತರಹೆಯ ಜನ ಅಲ್ಪಸಂಖ್ಯಾತರು. ಇವರಿಗಿಂತಲೂ ಮುಂದುವರೆದ ಇನ್ನೊಂದು ಪಂಗಡವಿದೆ. ಇವರಿಗೆ ಮೌನವೆಂದರೆ ಆಗದು. ಯಾರಾದರೂ ಸುಮ್ಮನೆ ಇರುವುದನ್ನು ಕಂಡರೆ ಆಗದು. ವಿನಾಕಾರಣ ನಿಮ್ಮನ್ನು ಮಾತಿಗೆಳೆಯುತ್ತಾರೆ. ನಿಮ್ಮ ವೈಯಕ್ತಿಕ ವಿವರಗಳೆಲ್ಲ ಇವರಿಗೆ ಬೇಕು. ನೀವು ಕೆಲಸ ಮಾಡುವುದೆಲ್ಲಿ (ಕೆಲಸ ಮಾಡುತ್ತೀರಾ?), ಸಂಬಳ ಎಷ್ಟು, ಎಷ್ಟು ಇನ್ಕಂ ಟ್ಯಾಕ್ಸ್ ಕಟ್ಟುತ್ತೀರಿ, ಮಕ್ಕಳೆಷ್ಟು, ಕೊನೆಗೆ ಹೆಂಡತಿಯರೆಷ್ಟು ಎನ್ನುವವರೆಗೂ ಎಲ್ಲ ವಿವರಗಳೂ ಬೇಕು. ಅಷ್ಟೆಲ್ಲ ಕೇಳಿದಮೇಲೂ ಕೊನೆಗೆ "ನೀವು ಬಿಡೀಪ್ಪಾ, ಐಟಿ ಜನ. ನಿಮ್ಮಿಂದಲೇ ಬೆಲೆಯೆಲ್ಲ ಜಾಸ್ತಿಯಾಗಿ ನಮ್ಮಂಥ ಬಡವರ ಹೊಟ್ಟೆ ಮೇಲೆ ಒದ್ದೆಬಟ್ಟೆ" ಎಂದು ಮೂತಿ ದಬ್ಬುತ್ತಾರೆ.

ಇದು ಒಂದು ತರಹೆಯಾದರೆ ಇನ್ನು ಕೆಲವರಿರುತ್ತಾರೆ. ಅವರಿಗೆ ನಿಮ್ಮ ಅಸ್ತಿತ್ವವೇ ಲೆಕ್ಕಕ್ಕಿರುವುದಿಲ್ಲ. ಬಂದವರೇ ನಿಮ್ಮನ್ನೂ ಒತ್ತರಿಸಿಕೊಂಡು ಧೊಪ್ಪನೆ ಕೂತಿದ್ದೇ ಸೈ. ಇದು ಇಬ್ಬರ ಸೀಟು, ನನ್ನ ಭಾಗ ಇದರ ಅರ್ಧ ಮಾತ್ರ ಎಂದು ಅವರಿಗೆ ಅನಿಸುವುದೇ ಇಲ್ಲ. ತಮ್ಮದೇ ಸೀಟಿನ ಮೂಲೆಯಲ್ಲಿ ನೀವೊಂದು ಕಸದಂತೆ ಬಂದು ಕುಳಿತಿದ್ದೀರೆಂದೇ ಅವರ ಅನಿಸಿಕೆ. ಆದ್ದರಿಂದಲೇ ನಿಮ್ಮನ್ನು ಆದಷ್ಟು ಒತ್ತರಿಸಿ ಉಳಿದ ಜಾಗದ ಸದುಪಯೋಗ ಮಾಡಿಕೊಳ್ಳುತ್ತಾರೆ. ಸಣ್ಣಗಿರುವುದು ಎಷ್ಟು ಹೀನಾಯ ಎಂದು ನಿಮಗನ್ನಿಸುವುದೇ ಆಗ. ಕೂತವರು ಸುಮ್ಮನೆ ಕೂಡುತ್ತಾರೆಯೇ, ಇಲ್ಲ. ಮೊಬೈಲ್ ತೆಗೆದು ಯಾರೊಡನೆಯೋ ಜೋರಾಗಿ ಸಂಭಾಷಿಸತೊಡಗುತ್ತಾರೆ, ಎಲ್ಲ ಹಾವಭಾವಗಳೊಡನೆ. ಆ ಕಡೆ ಇರುವ ಪ್ರಾಣಿಗೆ ತಮ್ಮ ಕೈಕರಣಗಳೊಂದೂ ಕಾಣದು ಎಂದು ಇವರಿಗೆ ಅನಿಸದು. ನಿಸ್ಸಂಕೋಚವಾಗಿ ನಿಮ್ಮ ಕರ್ಣಪಟಲದ ಮೇಲೆ ದಾಳಿಗೈಯುತ್ತಾ ಅವರ ವೈಯಕ್ತಿಕ ವಿವರಗಳನ್ನೆಲ್ಲಾ ನಿಮ್ಮ ಮುಂದರಚುತ್ತಾರೆ - ಅದು ಪ್ರೇಯಸಿಯೊಡನಿನ ಲಲ್ಲೆಯಿರಬಹುದು, ಅತ್ತೆಸೊಸೆಯರ ಜಗಳವಿರಬಹುದು, ಸಾಲ ವಸೂಲಿಯಿರಬಹುದು, ಆಸ್ತಿ ತಗಾದೆಯಿರಬಹುದು. ಇಲ್ಲದಿದ್ದರೆ ಮೊಬೈಲಿನಿಂದ ಜೋರಾಗಿ ಸಂಗೀತಸುಧೆಯನ್ನು ಹರಿಸತೊಡಗುತ್ತಾರೆ. ನಿಮ್ಮ ಮುಂದೆ ಅವರ ಮೊಬೈಲ್ ಕಿಂದರಿ ಏನೂ ಉಪಯೋಗವಿಲ್ಲವೆಂದು ಅವರಿಗೆ ತಿಳಿಯುವುದೇ ಇಲ್ಲ. ಇದೇನೂ ಇಲ್ಲದಿದ್ದರೂ ಕುಳಿತಹಾಗೇ ನಿಮಗೊರಗಿ ನಿಶ್ಚಿಂತೆಯಿಂದ ನಿದ್ದೆಹೋಗುತ್ತಾರೆ. ಕಿಟಕಿಯ ಪಕ್ಕ ಕುಳಿತವರು ನೀವಾದರೂ, ಅದರ ಬಾಗಿಲಿನ ಸ್ವಾಮ್ಯ ಮಾತ್ರ ಅವರದೇ. ಅದನ್ನು ಅವರಿಗೆ ಬೇಕಾದಾಗ ಮುಚ್ಚುವುದು, ತೆರೆಯುವುದು ಮಾತ್ರ ನಿಮ್ಮ ಕರ್ತವ್ಯ. ನಿಮ್ಮ ದುರದೃಷ್ಟಕ್ಕೆ ನಿಮಗೆ ಸೆಖೆಯಾದಾಗ ಅವರಿಗೆ ಚಳಿಯೂ, ನಿಮಗೆ ಚಳಿಯಾದಾಗ ಅವರಿಗೆ ಸೆಖೆಯೂ ಆಗುತ್ತದೆ.

ಇದನ್ನೆಲ್ಲಾ ಹೇಗೋ ಸಹಿಸಿಕೊಳ್ಳೋಣವೆಂದರೆ ಇನ್ನೊಂದು ಬಾಧೆಯಿದೆಯಲ್ಲ, ಅದು ಮಾತ್ರ ಸಹಿಸಲಸದಳ. ಅದು ಜರದಾ-ಬೀಡಾ ಜಗಿಯುವವರದ್ದು. ಸದಾ ಸರ್ವದಾ ಜಗಿಯುತ್ತಲೇ ಇರಬೇಕು, ಉಗಿಯುತ್ತಲೇ ಇರಬೇಕು. ಇವರ ಪಾಲಿಗೆ ಕಿಟಕಿ ಕೇವಲ ಪೀಕುದಾನಿಯಷ್ಟೇ. ಮೊದಲುಮೊದಲು ನಿಮ್ಮ ಅನುಮತಿ ಕೇಳುತ್ತಾರೆಂದುಕೊಂಡರೂ ಎಷ್ಟು ಸಲ ಅಂತ ಅನುಮತಿ ಕೇಳುತ್ತಲೇ ಇರುವುದು? ನೀವಾದರೂ ಏನಂದುಕೊಳ್ಳುತ್ತೀರಿ. ಆದ್ದರಿಂದ ನಿಮ್ಮ ಅನುಮತಿಗೂ ಕಾಯದೇ ಎದ್ದು ನಿಮ್ಮ ಮೇಲೆ ಬಗ್ಗಿ ತಲೆ ಹೊರಚಾಚಿ ಸರಿಯಾಗಿ ತುಪ್ಪಿ ಕುಳಿತುಕೊಳ್ಳುತ್ತಾರೆ, ಮತ್ತೊಂದು ಗುಕ್ಕಿಗೆ (ಕೆಳಗೆ ಯಾರಾದರೂ ಬಿಳೀಬಟ್ಟೆ ಧರಿಸಿ ಹೋಗುತ್ತಿದ್ದರೆ, ಗೋವಿಂದ). ಒಂದುರೀತಿಯಲ್ಲಿ ಅವರು ನಿಮ್ಮ ಅನುಮತಿ ಕೇಳದಿರುವುದೇ ಸರಿ. ಅನುಮತಿ ಕೇಳಲು ನಿಮ್ಮ ಮುಂದೆ ಬಾಯಿಬಿಟ್ಟರೆ ನಿಮಗೇ ಕಷ್ಟ.

ಇನ್ನು ನೀವೇನಾದರೂ ಘಾಟ್ ಸೆಕ್ಷನ್ನಿನಲ್ಲಿ ಪಯಣಿಸುತ್ತಿದ್ದರೋ, ನಿಮ್ಮನ್ನು ದೇವರೇ ಕಾಪಾಡಬೇಕು. ಘಟ್ಟದ ರುದ್ರಸೌಂದರ್ಯವನ್ನು ಸವಿಯಬೇಕೆಂದು ನೀವು ಬಸ್ಸಿನಲ್ಲಿ ಪಯಣಿಸುವಿರಾದರೆ ನೀವು ಅಷ್ಟು ಆಸೆಯಿಟ್ಟುಕೊಳ್ಳದಿರುವುದೇ ಒಳ್ಳೆಯದು. ಬಸ್ಸು ಒಂದೆರಡು ತಿರುವು ತಿರುಗಿದ್ದೇ ತಡ, ಪಕ್ಕದಿಂದ ಬೇಡಿಕೆ ಬರುತ್ತದೆ "ವಾಂತಿ ಮಾಡಬೇಕು" ಪ್ರಕೃತಿಯ ಕರೆ, ಇಲ್ಲ ಅನ್ನುವಂತೆಯೇ ಇಲ್ಲ. ಅದೇನು ಬಸ್ಸಿನಲ್ಲಿ ವಾಂತಿಮಾಡುವುದು ಸಾಂಕ್ರಾಮಿಕ ರೋಗವೋ ಏನೋ, ಮತ್ತೊಂದೆರಡು ತಿರುವು ಹೋಗುವಷ್ಟರೊಳಗೆ ಇಡೀ ಬಸ್ಸಿಗೆ ಬಸ್ಸೇ ಕಿಟಕಿಯಿಂದ ತಲೆ ಹೊರಚಾಚಿ ವಾಂತಿಮಾಡಿಕೊಳ್ಳುತ್ತಿರುತ್ತದೆ. ಆಗಂತೂ ನೀವು ವಾಂತಿ ಮಾಡದಿದ್ದರೂ ಕಿಟಕಿಯನ್ನು ಮುಚ್ಚಿ ತೆಪ್ಪಗೆ ಕೂತುಕೊಳ್ಳುವುದೇ ವಾಸಿ. ಇನ್ನು, ಹಿಂದಿನವರಿಗೆ ಯಾವುದೇ ಪೂರ್ವಸೂಚನೆ ಕೊಡದೆ ತಲೆ ಹೊರಹಾಕಿ ವಾಂತಿಮಾಡುವ ಭೂಪ-ಭೂಪತ್ನಿಯರೂ (ವೈಯಾಕರಣರು ಮನ್ನಿಸಬೇಕು) ಇರುತ್ತಾರೆ. ಆಗಂತೂ ಮನೆ ತಲುಪಿದ ಮೇಲೆ ನಿಮಗೆ ಸಚೇಲಸ್ನಾನವೇ ಗಟ್ಟಿ. ಅದುವರೆಗೂ ಮತ್ತೊಮ್ಮೆ ಮುಖಪ್ರಕ್ಷಾಳನವಾಗದಂತೆ ಕಿಟಕಿ ಭದ್ರಮಾಡಿಕೊಂಡು ಮನೆಯ ಬರವನ್ನೇ ಹಾರೈಸುತ್ತಾ ಮುದುರಿ ಕೂಡುವುದಷ್ಟೇ ನಿಮ್ಮ ಕೆಲಸ. ಕಿಟಕಿಗೆ ಆಸೆಪಟ್ಟಿರಲ್ಲವೇ, ಅದರ ಫಲ ಇದು. ಆಸೆಯೇ ದುಃಖಕ್ಕೆ ಮೂಲಕಾರಣ ಎಂದು ಬುದ್ಧ ಹೇಳಿದ್ದ, ಆದರೆ ನಿಮಗಂತು ಬುದ್ಧಿ ಬರಲಿಲ್ಲ. "ಅವಶ್ಯಮನುಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ..."

ಇಷ್ಟಾದರೂ ಕಿಟಕಿಯ ಸೆಳೆತವಂತೂ ಹೋಗದು. ಕಿಟಕಿ ಪಕ್ಕದ ಸೀಟಿನಲ್ಲಿ ಏನೋ ಆಕರ್ಷಣೆ ಇದೆ. ಈ ಮಾತನ್ನು ನಿಮ್ಮಲ್ಲಿ ಬಹಳಷ್ಟು ಮಂದಿ ಒಪ್ಪುತ್ತೀರಿ ಎಂದು ನನಗೂ ಗೊತ್ತು. ಪಯಣಕ್ಕೆ ಯಾವ ಸೀಟಾದರೇನು, ಅದು ಎತ್ತಿ ಹಾಕದಿದ್ದರೆ ಸರಿ ಎನ್ನುವ ಸೌಕರ್ಯವಾದಿಗಳೂ ಸಹ, ಅವಕಾಶ ಸಿಕ್ಕರೆ ಕಿಟಕಿಯ ಸೀಟನ್ನೇ ಬಯಸುತ್ತಾರೆನ್ನುವುದು ನನ್ನ ಅನುಭವಕ್ಕೆ ಬಂದ ಸತ್ಯ. ಇಷ್ಟಕ್ಕೂ ಅಂಥಾದ್ದೇನಿದೆ ಕಿಟಕಿ ಪಕ್ಕದಲ್ಲಿ? ಇನ್ನೇನಿಲ್ಲದಿದ್ದರೂ ಆರಾಮವಾಗಿ ಪಕ್ಕಕ್ಕೊರಗಿ ಕೂಡಲು ಆಧಾರ ಸಿಗುತ್ತದೆ. ಮತ್ತೆ ತುಂಬಿದ ಬಸ್ಸಿನಲ್ಲಿ ನೀವು ಕಿಟಕಿಯ ಅಕ್ಕದ (ಕಿಟಕಿ ಪಕ್ಕದ ಪಕ್ಕ!) ಸೀಟಿನಲ್ಲೇನಾದರೂ ಕುಳಿತರೆ ನಿಮ್ಮ ತಲೆಯಮೇಲೇ ಬುಟ್ಟಿಯನ್ನಿಟ್ಟು ನಿಮ್ಮ ಹೆಗಲಮೇಲೆ ಪೃಷ್ಠವನ್ನೂರಿ ನಿಂತೇ ಪಯಣಿಸುವವರ ಕೋಟಲೆಯಿದೆ. ಅದರಿಂದ ತಪ್ಪಿಸಿಕೊಳ್ಳಬೇಕಾದರೆ ಕಿಟಕಿ ಪಕ್ಕದ ಸೀಟೇ ಉತ್ತಮ. ಅಲ್ಲದೇ ಕಿಟಕಿ ಪಕ್ಕ ಒಳ್ಳೆ ಗಾಳಿಯಾಡುತ್ತದೆ. ಅಷ್ಟು ಬಿಟ್ಟರೆ ಕಿಟಿಕಿ ಸೀಟಿನ "ಐಹಿಕ"ಉಪಯೋಗಗಳೇನೂ ಕಾಣೆ. ಆದರೆ ಕಿಟಕಿ ಪಕ್ಕದ ಪ್ರಯಾಣದ ನಿಜವಾದ ಸುಖವೇ ಬೇರೆ.

ಮೇಲೆ ಹೇಳಿದ ಕೋಟಲೆ-ಕಿರಿಕಿರಿಗಳೊಂದೂ ಇಲ್ಲದ ಕಿಟಕಿ ಸೀಟು ನಿಮಗೆ ದಕ್ಕಿತೆಂದುಕೊಳ್ಳಿ. ನಿಮ್ಮ ಮುಂದಿನ ಮೂರೋ ಐದೋ ಹತ್ತೋ ಗಂಟೆಗಳ ಪಯಣದದಾರಿ, ನಿಮ್ಮದೇ ಭಾವಪ್ರಪಂಚದ ಪಯಣಕ್ಕೆ ರಹದಾರಿ. ಬಸ್ಸು ಹೊರಟ ಮೊದಲ ಹತ್ತು-ಹದಿನೈದು ನಿಮಿಷದ ಗದ್ದಲ ಗಲಿಬಿಲಿ ಶಾಂತವಾಗುತ್ತಿದ್ದಂತೆ ನಿಧಾನವಾಗಿ ಬಸ್ಸಿನ ಒಳ ಆವರಣ ಮರೆಯುತ್ತಾ ಹೋಗುತ್ತದೆ. ಹೊರಗಡೆ ಕಿಟಕಿಯ ಚೌಕಟ್ಟಿನ ಮಧ್ಯೆ ಓಡುವ ದೃಶ್ಯಾವಳಿ, ತೀಡುವ ಗಾಳಿ, ಬಸ್ಸಿನ ಎಂಜಿನ್ನಿನ ಏಕತಾನದ ನಾದ ಎಲ್ಲವೂ ಸೇರಿ ನಿಧಾನಕ್ಕೆ ಹೊಸದೊಂದು ಪ್ರಪಂಚವನ್ನು ತೆರೆದಿಡುತ್ತದೆ. ಹೊರಗೆ ಓಡುತ್ತಿರುವ ಬಸ್ಸಿಗೆ ಸಮಾನಾಂತರವಾಗಿ ನಿಮ್ಮ ಮನಸ್ಸಿನಲ್ಲೂ ಆಲೋಚನೆಗಳ ಬಸ್ಸು ಓಡತೊಡಗುತ್ತದೆ. ಆಲೋಚನೆಗಳು ನಿಧಾನವಾಗಿ ಕಲ್ಪನೆಗಳಾಗುತ್ತವೆ, ಕನಸಾಗುತ್ತವೆ. ಹಾಗೆಂದು ನೀವೇನು ನಿದ್ದೆ ಮಾಡಿಲ್ಲ. ಹೊರಗೆ ನಡೆಯುವ ಪ್ರತಿಯೊಂದು ವಿದ್ಯಮಾನಗಳನ್ನೂ ಗಮನಿಸುತ್ತಿದ್ದೀರಿ, ಅವೆಲ್ಲವೂ ನಿಮ್ಮ ಭಾವಪ್ರಪಂಚದಲ್ಲಿ ದಾಖಲಾಗುತ್ತಿವೆ - ಓಡುವ ಮರ-ಗಿಡಗಳು, ರಸ್ತೆ ಕಲ್ಲುಗಳು, ವಿದ್ಯುತ್ ಕಂಬಗಳು, ಕಂಬದಿಂದ ಕಂಬಕ್ಕೆ ಏರುತ್ತಾ ಇಳಿಯುತ್ತಾ ನರ್ತಿಸುವ ತಂತಿಗಳು, ಮಧ್ಯೆ ಮಧ್ಯೆ ಬಂದುಹೋಗುವ ಊರುಗಳು, ಅಲ್ಲೆಲ್ಲಾ ಕಳ್ಳೇಕಾಯಿ, ಸೌತೇಕಾಯಿ, ಮಿಠಾಯಿ ವಡೆ ಮಾರುವ ಹುಡುಗರು, ಊರು ಬದಲಾಗುತ್ತಿದ್ದಂತೆಯೇ ಬದಲಾಗುವ ಅವರ ವೇಷಭೂಷಣಗಳು, ನಡೆ-ನುಡಿಗಳು, ದಾರಿಯಲ್ಲಿ ಅಡ್ಡಹಾಯುವ ಬೆಟ್ಟಗುಡ್ಡ, ನದಿಗಳು, ದಾರಿಯುದ್ದಕ್ಕೂ ಹಾದುಹೋಗುವ ಸುಂದರವಾದ ಹಳ್ಳಿಗಳು, ಮನೆಗಳ ಚಿಮಣಿಯಿಂದ ಏಳುತ್ತಿರುವ ತೆಳ್ಳನೆ ಹೊಗೆ, ಹೊಲದಲ್ಲಿ ಕಣ್ಣಿ ಕಿತ್ತುಕೊಂಡು ಕಿವಿಯಲ್ಲಿ ಗಾಳಿಹೊಕ್ಕಂತೆ ಓಡುತ್ತಿರುವ ಬಿಳೀ ಕರು, ಕನಸಿನೂರಿನ ದಾರಿಗಳಂತೆ ಅಂಕುಡೊಂಕಾಗಿ ಏರಿಳಿದು ಮರೆಯಾಗುವ ಒಳದಾರಿಗಳು; ಕೆಲವೊಮ್ಮೆಯಂತೂ ಅಲ್ಲೇ ಇಳಿಯಬೇಕೆನ್ನಿಸುತ್ತದೆ, ಆದರೆ ನೀವು ಟಿಕೇಟು ತೆಗೆದುಕೊಂಡಿರುವುದು ಕೊನೆಯ ಸ್ಟಾಪಿಗೆ. ಇಲ್ಲಿ ಇಳಿದರೆ ಮತ್ತೆ ನಿಮ್ಮೂರು ಸೇರುವುದು ಕಷ್ಟ.

ಚಲಿಸುತ್ತಿರುವ ಬಸ್ಸಿನ ಎಂಜಿನ್ನಿನ ಏಕತಾನದ ನಾದವೂ ಮನಸ್ಸಿನಲ್ಲಿ ಅದೊಂದು ಆಧಾರಶ್ರುತಿಯನ್ನು ನಿರ್ಮಿಸುತ್ತದೆ. ಸಾಮಾನ್ಯವಾಗಿ ನನ್ನಷ್ಟಕ್ಕೆ ನಾನು ಪಯಣಿಸುತ್ತಿರುವಾಗ ಮನಸ್ಸಿನಲ್ಲಿ ಯಾವುದೋ ರಾಗವೋ ರಚನೆಯೋ ಗುನುಗುತ್ತಿರುತ್ತಿದೆ. ಅನೇಕ ಸಲ ಎಚ್ಚೆತ್ತು ಗಮನಿಸಿದಾಗ ಅದು ಎಂಜಿನ್ನಿನ ಶ್ರುತಿಗೆ ಅನುಸಾರವಾಗಿ ಹೋಗುತ್ತಿರುವುದನ್ನು ಗಮನಿಸಿ ಆಶ್ಚರ್ಯಪಟ್ಟಿದ್ದೇನೆ. ಅಷ್ಟೇಅಲ್ಲ, ನೀವು ನಿಯಮಿತ ದಾರಿಯಲ್ಲಿ ಪಯಣಿಸುತ್ತಿದ್ದೀರಾದರೆ ನಿಮ್ಮ ಆಲೋಚನೆಯ ಅಲೆಯೂ ಅದೊಂದು ರೀತಿಯ ನಿಶ್ಚಿತತೆಯನ್ನು ಪಡೆಯುತ್ತದೆ. ಉದಾಹರಣೆಗೆ ನಾನು ಸಾಮಾನ್ಯವಾಗಿ ಮೈಸೂರು ಬೆಂಗಳೂರು ಮಾರ್ಗವಾಗಿ ಪಯಣಿಸುವಾಗೆಲ್ಲಾ ಒಂದೊಂದು ಊರು ಬರುವಹೊತ್ತಿಗೆ ಆಲೋಚನೆ ಕೆಲವೊಂದು ನಿರ್ಧರಿತ ದಿಕ್ಕಿಗೆ ಹೊರಳಿಕೊಳ್ಳುತ್ತದೆ. ಚನ್ನಪಟ್ಟಣ ಬಂದಂತೆಲ್ಲ ನಮ್ಮ ತಾತನವರ ಮನೆ, ನನ್ನ ಬಾಲ್ಯದ ನೆನಪುಗಳು ದಟ್ಟವಾಗುತ್ತಾ ಹೋಗುತ್ತದೆ. ಅವರ ಮನೆಯ ಕೊಟ್ಟಿಗೆ, ಅಲ್ಲಿ ತುಂಗೆ ಕರುವಿನೊಡನೆ ಗಂಟೆಗಟ್ಟಲೆ ಹರಟುತ್ತಾ ಕಳೆಯುತ್ತಿದ್ದುದು, ತಾತನವರ ಮನೆಯ ದೇವರಪೂಜೆಯ ವೈಭವ, ಪೂಜೆಯ ಸಮಯದಲ್ಲಿ ನಡೆಯುತ್ತಿದ್ದ ವೇದಘೋಷ, ಮತ್ತೆ ನಾನೂ ನನ್ನ ಓರಗೆಯ ಕಿಟ್ಟಿಯೂ ಅನೇಕಬಾರಿ ಅಭಿನಯಿಸುತ್ತಿದ್ದ ಕರ್ಣಾರ್ಜುನರ ಯುದ್ಧ, ಭೀಮ-ದುರ್ಯೋಧನರ ಕಾಳಗ - ಮನೆಯ ಅಂಗಳವೇ ನಮ್ಮ ರಣರಂಗ, ಮಟ್ಟಾಳೆ ಕಸಬರಿಕೆಯ ಕಡ್ಡಿಯೇ ಬಿಲ್ಲು ಬಾಣ, ಹಾಕಿದ್ದ ಶರಟಿನ ಹಿಂಬದಿಯೇ ನಮ್ಮ ಅಕ್ಷಯ ತೂಣೀರ; ಆಗೀಗ ಮನೆಯ ಮುಂದೆ ಕಟ್ಟಿರುತ್ತಿದ್ದ ಬಾಳೆಯ ಕಂದೇ ಗದೆ. ಹೀಗೊಮ್ಮೆ ದುರ್ಯೋಧನನಾದ ನಾನು (ನನಗೆ ದಕ್ಕುತ್ತಿದ್ದದ್ದು ಯಾವಾಗಲೂ ಕೆಟ್ಟ ಪಾತ್ರಗಳೇ), ಭೀಮನಾದ ಕಿಟ್ಟಿಯ ಮುಖಕ್ಕೆ ಬಾಳೆ ಕಂದಿನ ಗದೆಯಿಂದ ಅಪ್ಪಳಿಸಿದ್ದರ ಪರಿಣಾಮವಾಗಿ ಅವನ ಕಣ್ಣು ಹೋಗಿಬಿಡುವುದರಲ್ಲಿತ್ತು. ತತ್ಪರಿಣಾಮವಾಗಿ ಇಬ್ಬರಿಗೂ ಭೀಷ್ಮಪಿತಾಮಹರಿಂದ ಸರಿಯಾಗಿ ಲಾತಾಗಳೂ ಬಿದ್ದಿದ್ದವು.

ಸರಿ, ಇನ್ನೇನು ಮದ್ದೂರು ಬಂತು. ಇಳಿದು ಊಟಮುಗಿಸಿ ಮತ್ತೆ ಗಾಡಿ ಹತ್ತಿದರೆ ಮಂಡ್ಯದವರೆಗು ಒಂದಿಪ್ಪತ್ತು ನಿಮಿಷ ಸಣ್ಣ ಜೋಂಪು. ಪಯಣದುದ್ದಕ್ಕೂ ಮನಸ್ಸು ಯಾವುದಾದರೂ ರಾಗವನ್ನೋ ರಚನೆಯನ್ನೋ ಗುನುಗುತ್ತಿರುತ್ತದೆ ಎಂದೆನಷ್ಟೇ. ಈ ಮಾರ್ಗದಲ್ಲಿ ಅದರಲ್ಲೂ ಒಂದು ನಿರ್ದಿಷ್ಟ pattern ಇದೆ ಎಂಬುದನ್ನು ಇತ್ತೀಚೆಗಷ್ಟೇ ಗಮನಿಸಿದೆ. ಮಂಡ್ಯ ಬಿಟ್ಟು ಒಂದು ಹತ್ತು ಹದಿನೈದು ನಿಮಿಷ ಬಾಬುರಾಯನ ಕೊಪ್ಪಲು ಬರುವ ಹೊತ್ತಿಗೆ, ಅದೇನೇ ಯೋಚಿಸುತ್ತಿದ್ದರೂ ಮನಸ್ಸು ಅಪ್ರಯತ್ನತಃ ತೋಡಿ ರಾಗದ ಮಟ್ಟುಗಳನ್ನು ಗುನುಗುನಿಸತೊಡಗುತ್ತದೆ. ಇದನ್ನು ಬಹುಕಾಲ ಗಮನಿಸಿರಲಿಲ್ಲ, ಆದರೆ ಎರಡುಮೂರು ಬಾರಿ ಗಮನಿಸಿದಾಗ ಆಶ್ಚರ್ಯವಾಗಿತ್ತು, ಅದೇಕೆ ಆ ಸ್ಥಳದಲ್ಲೇ ಇದೇ ರಾಗ ನೆನಪಿಗೆ ಬರುತ್ತದೆ? ಉತ್ತರಮಾತ್ರ ಹೊಳೆದಿರಲಿಲ್ಲ. ಮನಸ್ಸಿನಲ್ಲೇ ಒಂದು ಕಿರು ಆಲಾಪನೆ ಮುಗಿದು, ಪಲುಕು ತಾನಾಗೇ "ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ..." ಎಂದು ಶುರು ಮಾಡುವ ಹೊತ್ತಿಗೆ ಬಸ್ಸು ಕಾವೇರಿಯ ಮೊದಲ ಕವಲನ್ನು ದಾಟಿ ಶ್ರೀರಂಗಪಟ್ಟಣದಲ್ಲಿರುತ್ತದೆ. ಕಾವೇರಿಗೂ, ಶ್ರೀರಂಗನಿಗೂ ಈ ಹಾಡಿಗೂ ಸಂಬಂಧವಿದ್ದರೂ, ತೋಡಿ ರಾಗದ ಈ ಹಾಡಿಗೆ ಪೀಠಿಕೆಯಾಗಿಯೇ ಆ ರಾಗ ಅಷ್ಟುಹೊತ್ತಿನಿಂದ ಮನಸ್ಸಿನಲ್ಲಿ ತೊಡಗಿದ್ದು ಎಂದು ಹೊಳೆದಾಗಮಾತ್ರ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಈ ಅಚ್ಚರಿ ಅಷ್ಟಕ್ಕೇ ಮುಗಿಯುವುದಿಲ್ಲ. ಬಸ್ಸು ಕಾವೇರಿಯ ಮತ್ತೊಂದು ಕವಲನ್ನು ದಾಟಿ ಶ್ರೀರಂಗಪಟ್ಟಣವನ್ನು ಬಿಡುವಹೊತ್ತಿಗೆ ಆ ಹಾಡು (ಅಥವ ಒಂದು ಚರಣ) ಮುಗಿದು, ಹಾಡು "ರಂಗ ನಾಯಕಂ... ಭಾವಯೇ..." (ನಾಯಕೀ ರಾಗ) ಎಂದು ತಿರುಗಿರುತ್ತದೆ. ಅದರನಂತರ ಅದೇ ರಾಗವನ್ನು ತುಸುಹೋಲುವ "ದರ್ಬಾರು" (ಇದಕ್ಕೂ ಮೈಸೂರು ದರ್ಬಾರಿಗೂ ಸಂಬಂಧವಿದೆಯೇ, ದೇವರೇ ಬಲ್ಲ), ಅದರನಂತರ "ದರ್ಬಾರೀ ಕಾನಡ" ಶೇಷಣ್ಣನವರ ತಿಲ್ಲಾನದ್ದೊಂದು ಪಲುಕು... ಕೊನೆಗೆ ಬಿಲಹರಿಯದೊಂದು ತುಣುಕು, "ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ" ಎಂದು ಮುಗಿಸುವಹೊತ್ತಿಗೆ ಮೈಸೂರು ಬಸ್ ನಿಲ್ದಾಣ ಬಂದಿರುತ್ತದೆ. ಈಗಂತೂ ಅದನ್ನು ನಾನು ಗಮನಿಸಿಬಿಟ್ಟಿರುವುದರಿಂದ ಮೊದಲಿನಷ್ಟು ನಿಶ್ಚಿತತೆ, spontaneity ಇಲ್ಲ.

ಅದೇನೇ ಇರಲಿ, ಮನಸ್ಸಿನ ಮಾರ್ಗಗಳನ್ನು ಕಂಡು ಬೆರಗಾಗಿದ್ದೇನೆ. ಅದು ತನ್ನನ್ನು ತಾನೇ ರಂಜಿಸಿಕೊಳ್ಳುವ, ಕಲ್ಪನೆ ಕಟ್ಟುವ, ಕಂಪನಿ ಕೊಟ್ಟುಕೊಳ್ಳುವ ಪರಿ ನಿಜಕ್ಕೂ ಅದ್ಭುತ. ಒಳಗಿನ ’ನಿಶ್ಶಬ್ದ’ಕ್ಕೆ ಹೆದರಿ ಹೊರಗೆ ಗದ್ದಲದ "ಸಂಗೀತ"ಕ್ಕೆ ಮರೆಹೊಗುವವರನ್ನು ಕಂಡಾಗ ಮರುಕವುಂಟಾಗುತ್ತದೆ. ಈ ಗದ್ದಲವನ್ನು ಒಂದೇ ಕ್ಷಣ ಬಂದು ಮಾಡಿ, ನಿಮ್ಮೊಳಗಿನ ದನಿಯನ್ನು ಆಲಿಸಿ ನೋಡಿ, ಅದೇ ಒಂದು ಲೋಕ. ಅಲ್ಲಿ ನಿಮಗೆ "ಬೋರ್"ಎಂಬುದು ಆಗಲು ಸಾಧ್ಯವೇ ಇಲ್ಲ. ಈ ಲೋಕ ತೆರೆದುಕೊಳ್ಳುವ ಅಂಥ ಒಂದು ಸಂದರ್ಭ, ಕಿಟಕಿ ಪಕ್ಕದ ಸೀಟು. ಮುಂದಿನ ಸಲ ಪಯಣಿಸುವಾಗ ಪುಸ್ತಕಕ್ಕೋ ಐಪೋಡಿಗೋ ಮರೆಹೊಗಬೇಡಿ. ಸುಮ್ಮನೇ ಕಿಟಿಕಿಯಾಚೆ ಕಣ್ಣುಕೀಲಿಸಿ ಓಡುವ ಬಸ್ಸಿನೊಡನೆ ನಿಮ್ಮ ಮನಸ್ಸನ್ನು ಹರಿಯಬಿಡಿ. ಆಮೇಲೆ ನೋಡಿ.