Thursday, March 1, 2007

ಒಳಹೋಗುವ ಮುನ್ನ ಒಂದು ನಿಮಿಷ...

ಅಂತೂ ಕೊನೆಗೊಮ್ಮೆ ಈ ಪುಟಕ್ಕೆ ಬಂದು ಮುಟ್ಟಿದ್ದೇನೆ. ಬ್ಲಾಗ್ ಒಂದನ್ನು ರೂಪಿಸುವ, ಮನಕ್ಕೆ ತೋಚಿದ್ದನ್ನು ಅಲ್ಲಿ ದಾಖಲಿಸುತ್ತಾ ಹೋಗುವ ಆಲೋಚನೆಯೇನೋ ಬಹಳ ದಿನದಿಂದ ಇತ್ತು. ಆದರೆ ಜನ್ಮಜಾತವಾದ ಸೋಮಾರಿತನ ಇದನ್ನು ಮುಂದೂಡುತ್ತಲೇ ಇತ್ತು. ಬ್ಲಾಗು ಭಾವಕ್ಕೆ ಕಾಯಬಹುದು, ಭಾವ ಬ್ಲಾಗಿಗೆ ಕಾಯುತ್ತದೆಯೇ? ಪಂಪ ರನ್ನ ಕುಮಾರವ್ಯಾಸರಿಗೆ ಬ್ಲಾಗುಗಳೇ ಇತ್ತೆ? ಕುಮಾರವ್ಯಾಸನದಂತೂ ಬ್ಲಾಗಿರಲಿ, "ಪಲಗೆ ಬಳಪವನ್ನೂ ಪಿಡಿಯದೊಂದಗ್ಗಳಿಕೆ" (ಈ ಅಗ್ಗಳಿಕೆ ನಮಗೂ ಸಾಕಷ್ಟೇ ಇದೆ ಎನ್ನಿ. "ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್" ನಾವು). ಇರಲಿ, as usual ವಿಷಯ ಮತ್ತೆಲ್ಲಿಗೋ ಹೋಯಿತು. ಒಟ್ಟಾರೆ ಬ್ಲಾಗಿಗೆ ಕಾಯದೇ ಬರಹ ಬೆಳೆಯುತ್ತಿತ್ತು, ಅದಕ್ಕೆ ಮುಂಚಿನಿಂದ ಗೀಚಿದ್ದೂ ಒಂದಷ್ಟಿತ್ತು. ಆದ್ದರಿಂದ ಸಧ್ಯಕ್ಕೆ ಹೊಸದೊಂದನ್ನು ದಾಖಲಿಸುವ ಮುನ್ನ, ಹಳೆಯದನ್ನೆಲ್ಲ ಇಲ್ಲಿ ತಂದು ಜೋಡಿಸಿಡುವ ಕೆಲಸ ಬಾಕಿ.
:
ನನ್ನ ಕವನಗಳ ಕಡತ ತೆರೆಯುವ ಮುನ್ನ ಒಂದು ಮಾತು. ಇದುವರೆಗೂ ನಾನು ಬರೆದಿದ್ದು ಬೆರಳೆಣಿಕೆಯಷ್ಟೇ ಕವನಗಳಾದರೂ, ಅವುಗಳನ್ನು ಬರೆದ ಕಾಲಾವಧಿ ಮಾತ್ರ ಸಾಕಷ್ಟು ದೀರ್ಘವೆಂದೇ ಹೇಳಬೇಕು. ಸುಮಾರು ೧೫-೧೮ ವರ್ಷಗಳಿಂದ ಬರೆದ ಕೆಲವೇ ಕವನಗಳನ್ನು ಇಲ್ಲಿ ದಾಖಲಿಸಲು ಯತ್ನಿಸುತ್ತೇನೆ (ತೀರ ಹಸಿ ಹಸಿ, ವೈಯಕ್ತಿಕವೆನ್ನಿಸಿದ ಕೆಲವನ್ನು ಹೊರತು ಪಡಿಸಿ).
:
ಲೇಖಕನೊಬ್ಬ ಹಲ ವರ್ಷಗಳ ಅವಧಿಯಲ್ಲಿ ಬರೆದ ಎಲ್ಲ ಬರಹಗಳನ್ನು ಅವುಗಳನ್ನು ಬರೆದ ಅನುಕ್ರಮದಲ್ಲೇ ಜೋಡಿಸಿಟ್ಟರೆ, ಆ ಸಂಕಲನ ಅವನು ಈ ವರ್ಷಗಳಲ್ಲಿ ವೈಯಕ್ತಿಕವಾಗಿ, ಸಾಹಿತ್ಯಕವಾಗಿ ಬೆಳೆದುಬಂದ ದಾರಿಯನ್ನು ಗುರ್ತಿಸುತ್ತವಾ ಎಂಬ ಕುತೂಹಲ ನನಗಿದೆ. ಬರಹಗಳು ಪರೋಕ್ಷವಾಗಿ ಯಾವುದೋ ರೀತಿಯಿಂದ ಬರಹಗಾರನೊಬ್ಬನ ಜೀವನ/ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ ಎಂದು ಎಲ್ಲೊ ಓದಿದ ನೆನಪು. ಆದರೆ ಅವು ಕವಿಯ ವ್ಯಕ್ತಿತ್ವವನ್ನಾಗಲಿ, ಅವನ ಜೀವನದ ಘಟನೆಗಳನ್ನಾಗಲಿ ಯಥಾವತ್ತಾಗಿ ಚಿತ್ರಿಸುತ್ತವೆಂದು ಖಂಡಿತ ಒಪ್ಪಲಾರೆ. ಇಲ್ಲಿ ಕಾಣುವ ಬರಹಗಳಿಗೆ ಪೂರ್ವಭಾವಿಯಾಗಿ ಇದನ್ನು ಸೂಚಿಸಬೇಕೆನ್ನಿಸಿತು.
:
ಕವಿ ತಾನೇ ಅನುಭವಿಸಿದ್ದರ ಜೊತೆಗೆ, ಎಲ್ಲೋ ನೋಡಿದ್ದು, ಕೇಳಿದ್ದು, ಚಿಂತಿಸಿದ್ದು, ಭಾವಿಸಿದ್ದು, ಪರಿಭಾವಿಸಿದ್ದು, ಪರಿತಪಿಸಿದ್ದು ಈ ಎಲ್ಲ ಯಾವ ಯಾವುದೋ ಹದದಲ್ಲಿ ಪಾಕಗೊಳ್ಳುತ್ತವೆ, ಆತನ ಬರಹದಲ್ಲಿ - ಎಷ್ಟೋ ಬಾರಿ ನೈಜವೆನಿಸುವ ಮಟ್ಟಿಗೆ. ಇದರಲ್ಲಿ ಕವಿಯ ಯೋಚನಾಲಹರಿಯ ಕೆಲವು ಹೊಳಹುಗಳನ್ನು ಮಾತ್ರ ಕಾಣಬಹುದಷ್ಟಲ್ಲದೇ ಸಾಕ್ಷಾತ್ ಕವಿಯನ್ನೇ ಕಾಣಬಯಸುವುದು ವ್ಯರ್ಥ. ಇನ್ನು ಕವಿಯ ಬುದ್ಧಿ ಭಾವಗಳಲ್ಲಿ ರೂಪುತಳೆದ ಈ ಶಿಶು, ಓದುಗನ ದೃಷ್ಟಿಕೋನದಲ್ಲಿ ಬೇರೆಯ ನಿಲುವನ್ನೇ ತಳೆಯುತ್ತದೆ. ಪು.ತಿ.ನ.ರವರ ಸಾಲೊಂದು ನೆನಪಾಗುತ್ತದೆ; "ಬರೆಯುವವನದಲ್ಲ ಕವಿತೆ, ಹಾಡುವವನದು" (ಪದಗಳು ಸರಿಯಾಗಿ ನೆನಪಿಲ್ಲ). ಹೀಗಾಗಿ, ಕಾವ್ಯದ ನಿರೂಪಣೆಗೆ ಸಹೃದಯನ ಕೊಡುಗೆಯೂ ಇದೆ ಎನ್ನುವುದನ್ನು ಮರೆಯಬಾರದು. ಎಷ್ಟೊ ಬಾರಿ ಇದರಲ್ಲಿ ಓದುಗ ತನ್ನನ್ನೇ ಕಂಡುಕೊಳ್ಳುತ್ತಾನೆ. ಹೀಗೆ, ಕಾವ್ಯ ಕವಿ-ಓದುಗನ ನಡುವೆ ಒಂದು ಮೌನ ಸಂವಾದವನ್ನೇರ್ಪಡಿಸುತ್ತದೆ. ಕವಿಯ ಮನದಲ್ಲಿ ಮಿಡಿದ ಒಂದು ನಾದದ ಒಂದು ಎಳೆ, ಓದುಗನ ಮನದಲ್ಲೂ ಸಮಶ್ರುತಿ ಮಿಡಿದರೆ ಕಾವ್ಯದ ಹುಟ್ಟು ಸಾರ್ಥಕ ಎಂದು ನನ್ನ ಅನಿಸಿಕೆ. ಎಲ್ಲೋ ಎಂದೋ ಇದ್ದು ಸಂದು ಹೋದ ಘಾಲಿಬನಾಗಲೀ, ಕನಕ-ಕಬೀರರಾಗಲೀ, ವ್ಯಾಸ-ವಾಲ್ಮೀಕಿಗಳಾಗಲೀ ದೇಶ ಕಾಲಗಳಾಚಿನಿಂದ ನಮ್ಮೆದೆಯನ್ನು ಮುಟ್ಟುವುದು, ಮಾತಾಡಿಸುವುದು, ಹೀಗೆ.
:
ಬ್ಲಾಗನ್ನು ತುಂಬುವ ಮುನ್ನ ನನ್ನ ಮನದಲ್ಲಿ ಮೂಡಿದ ಕೆಲವು ವಿಚಾರಗಳನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು, ಬರಹ ತುಸು ಉದ್ದವೆನಿಸಿದ್ದರೆ ಕ್ಷಮಿಸಿ. ಇನ್ನು ಶೀರ್ಷಿಕೆಗಳಿಗೆ.

5 comments:

jayant said...

ಸಾರ್ ಕನ್ನಡ ಸಾಹಿತ್ಯ ಪ್ರಭೇದಗಳು,ಕಾವ್ಯದ ವೈಖರಿಗಳು,ಕವನದ ಮೂಲಭೂತ ಅಂಶಗಳು ಇವುಗಳ ಬಗ್ಗೆ ನಾನು ನಮ್ಮ ಆರ್‍ಕುಟ್ ನ ಕನ್ನಡ ಕವಿತೆ ಕಥೆ ವಿಭಾಗದವರು ಸಾಕಷ್ಟು ತಿಳಿದಿದ್ದೇವೆ,ಅನುಸರಿಸುವ ಪ್ರಯತ್ನವನ್ನು ಕೈಗೊಂಡಿದ್ದೇವೆ.ಈ ಹಿನ್ನೆಲೆಯಲ್ಲಿ ನಾನು ಪೂರ್ವಾಗ್ರಹ ಪೀಡಿತನಾಗಿ ಇದನ್ನು ಬರೆಯುತ್ತಿಲ್ಲ..ಸುಮ್ಮನೆ ತಮಾಶೆಗೆ ಹೇಳಿದೆ..
"ಒಳಹೋಗುವ ಮುನ್ನ.." ಮನಮುಟ್ಟಿತು.ಕಾವ್ಯದ ಜನನ,ಉದ್ದೇಶ,ಪರಿಪೂರ್‍ಣತೆಗೆ,ಸಾರ್ವಕಾಲಿಕತೆ,ಸಹ್ರದಯಿ ಓದುಗರ ಪಾತ್ರ.. ಇವುಗಳ ಬಗ್ಗೆ ತುಂಬ ಸೊಗಸಾದ ಚಿತ್ರಣವಿದೆ.ಹೇಳಬೇಕಾದ್ದಕ್ಕೆ ಬಳಸಿರುವ ಕೋಟ್ಸ್,ವ್ಯಕ್ತಿಗಳು ..ವಸ್ತುವಿಷಯವನ್ನು ಛಾಪು ಹೊತ್ತುವಂತಿವೆ..

ನಿಮ್ಮೆಲ್ಲ ಕವನಗಳನ್ನು ಇಲ್ಲಿ ನಿರೀಕ್ಷಿಸುತ್ತೇನೆ ಹಾಗೆ ನಿಮ್ಮ ಪೂರ್ಣ,ಅಪೂರ್‍ಣ ಕಥೆಗಳನ್ನು ಪೋಣಿಸಿ..

indira said...

:)

Srinivas said...

interesting! but i take such a long time to completely go thru let alone understand!! :) they are really good.

ಸುಸಂಕೃತ said...

"ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್" ನಾವು - ಚಂದವಾಗಿ ಹೇಳಿದೀರಿ...'ಒಳ ಹೋಗುವ ಮುನ್ನ' ಅನ್ನೋ ಈ ಬೋರ್ಡನ್ನ ನೋಡದೆ ದಾಟಿಕೊಂಡು ಹಿಂದೊಮ್ಮೆ ನುಗ್ಗಿದ್ದೆ.ಈಗ ಎಲ್ಲವನ್ನೂ ಮೂಲೆ ಮೂಲೆಯನ್ನು ತಡಕಾಡಿ ಓದುವ ಆಸೆ...ಬಂದಿದ್ದೇನೆ..ಇಲ್ಲಿಂದಲೇ ಪ್ರಾರಂಭವಾಗಲಿ!

ಅರುಣ ಸಿರಿಗೆರೆ [Aruna Sirigere ] said...

ಮಂಜುನಾಥ್ ರವರೇ,
ನಿಮ್ಮ ಈ ಒಳ ಹೋಗುವ ಮುನ್ನ ಓದಿದ ತಕ್ಸಣ ಅನ್ನಿಸಿದ್ದು...
"ಇಲ್ಲಿ ನಿಲ್ಲದೆ ಒಳಗೆ ನುಗ್ಗಿ ಇರುವುದನ್ನೆಲ್ಲಾ ನೋಡಿಬಿಡಬೇಕಿತ್ತು " ಎಂದು. :)

ನೀವು ಹೇಳಿರುವಂತೆ, ಒಬ್ಬ ಕವಿಯ ಅಥವಾ ಲೇಖಕನ ಬರಹಗಳು ಅವನ ವ್ಯಕ್ತಿತ್ವವನ್ನ ಬಿಂಬಿಸೋದಿಲ್ಲ, ಅವು ಅವನ ಯೋಚನಾ ಲಹರಿಯನ್ನ ಬಿಂಬಿಸುತ್ತವೆ...
ನಿಮ್ಮ ಈ ಅನಿಸಿಕೆಗೆ ನನ್ನ ಮತ. :)