Tuesday, September 23, 2025

ಆಚಾರ್ಯರು ಅಮಲ್ದಾರರಾದ ಕತೆ

ನಮ್ಮ ಬಾಲ್ಯದಲ್ಲಿ ನಮ್ಮ ತಾತ ಒಂದು ಕತೆ ಹೇಳುತ್ತಿದ್ದರು, ಆಚಾರ್ ಅಮಲ್ದಾರ್ ಕತೆ ಎಂದೇ ಪ್ರಸಿದ್ಧ. ಕತೆಯನ್ನು ಅವರಿಂದ ನಾನು ಕೇಳಿದ್ದಂತೆಯೇ ಅರಿಕೆ ಮಾಡಿಕೊಳ್ಳುತ್ತಿದ್ದೇನೆ.  ಏನಾಯ್ತಂತೆ-

ದಿವಾನ್ ಪೂರ್ಣಯ್ಯನವರ ಮನೆಯಲ್ಲಿ ದೇವರ ಪೂಜೆ ಮಾಡಲು ಒಬ್ಬ ಆಚಾರ್ ಬರೋರಂತೆ.  ಪಾಪ ನಿಷ್ಠಾವಂತ ಬ್ರಾಹ್ಮಣ, ದಿನಾ ದೇವರ ಪೂಜೆ ಮಾಡಿ ದಿವಾನರಿಗೆ ತೀರ್ಥ ಕೊಡೋರು.  ಆಮೇಲೇ ಅರಮನೆಗೆ ದಿವಾನ್ ಸಾಹೇಬರ ಪಯಣ.  ಹೀಗೇ ದಶಕಗಳೇ ಕಳೆದುವು.  ದಿವಾನರು ನಿವೃತ್ತರಾಗುವ ಸಮಯ ಬಂತು.  ಇಷ್ಟು ವರ್ಷ ಮನೆಯಲ್ಲಿ ಪೂಜೆ ಮಾಡಿದ್ದಾರೆ, ಈ ಆಚಾರ್ರಿಗೆ ತಮ್ಮ ಅಧಿಕಾರಾವಧಿಯಲ್ಲಿ ಏನಾದರೂ ಮಾಡಬೇಕೆಂಬ ಅಪೇಕ್ಷೆ ದಿವಾನರದು.  ಕರೆದು ಕೇಳುತ್ತಾರೆ - "ಆಚಾರ್ ಸ್ವಾಮಿ, ನನ್ನ ಮನೆ ದೇವರ ಚಾಕರಿಯಲ್ಲೇ ನಿಮ್ಮ ಜೀವನ ಪೂರ್ತಿ ಸವೆಸಿದಿರಿ, ದಕ್ಷಿಣೆ ಬಿಟ್ಟು ಇನ್ನೊಂದನ್ನು ನಾನು ಕೊಡಲೂ ಇಲ್ಲ ನೀವು ಕೇಳಲೂ ಇಲ್ಲ.  ಇನ್ನೇನು ನಾನು ರಿಟೈರ್ ಆಗಲಿದ್ದೇನೆ.  ನನ್ನ ಕೈ ನಡೆಯುವಾಗ ನಿಮಗೆ ಏನಾದರೂ ಮಾಡಬೇಕು ಅಂತ ನನ್ನ ಆಸೆ.  ನಿಮಗೆ ಏನು ಬೇಕು ಅಪ್ಪಣೆ ಮಾಡಬೇಕು".

ಈ ಆಚಾರ್ರೋ, ಬಡತನವನ್ನೇ ಮಡಿಪಂಚೆಯ ರೂಪದಲ್ಲಿ ಉಟ್ಟು, ಅದರದೇ ಒಂದು ತುಂಡನ್ನು ಹೆಗಲ ಮೇಲೆ ಹೊದ್ದ ಮನುಷ್ಯ.  ಅದರಲ್ಲೇ ಜೀವನವೇ ಕಳೆದಿದೆ.  ಈಗ ಇನ್ನೇನು ಬೇಕಾದೀತು?  ಕೈ ಮುಗಿದುಕೊಂಡು ಹೇಳಿದರಂತೆ - "ಅಯ್ಯೋ ಸ್ವಾಮಿ, ನನಗೇನು ಬೇಕು ನನ್ನೊಡೆಯಾ, ಒಂದು ಹೊತ್ತೂಟ ಹೇಗೋ ಇಲ್ಲೇ ಕಳೆದು ಹೋಗುತ್ತೆ, ಮನೆಯಲ್ಲಿ ಹೆಂಡತಿ ಮಕ್ಕಳು ನೆಮ್ಮದಿಯಾಗಿದ್ದಾರೆ.  ನಿಮ್ಮ ದಯೆಯೊಂದಿದ್ದರೆ ಸಾಕು"

ಪೂರ್ಣಯ್ಯ ಬಿಡಲಿಲ್ಲ - "ಅಯ್ಯೋ ಹಾಗೆಲ್ಲಾದರೂ ಉಂಟೇ, ನೀವು ಏನಾದರೂ ಕೇಳಲೇ ಬೇಕು.  ನೋಡಿ, ಶ್ರೀರಂಗಪಟ್ಟಣದ ಹತ್ತಿರ ಒಂದು ಗ್ರಾಮ ಉಂಬಳಿ ಹಾಕಿಕೊಡಲೇ?  ಅಥವಾ ಒಂದು ಹತ್ತೆಕರೆ ಜಮೀನು?"

"ಅಯ್ಯೋ ಅದೆಲ್ಲಾ ಬೇಡ ಮಾಸ್ವಾಮಿ, ಈ ವಯಸ್ಸಾದ ಕಾಲದಲ್ಲಿ ಅದನ್ನೆಲ್ಲ ನಡೆಸೋ ಶಕ್ತಿಯಾದರೂ ಎಲ್ಲಿಂದ ಬರಬೇಕು" - ಆಚಾರ್ರು ಕೊಂಚ ತಡೆದು, ಯೋಚಿಸಿ ಹೇಳಿದರಂತೆ - "ತಾವು ಇಷ್ಟೊಂದು ಕೇಳುತ್ತಿದ್ದೀರಿ ಅಂತ ಹೇಳಬೇಕಾಗಿದೆ.  ಬಹುಕಾಲದಿಂದ ಮನಸ್ಸಿನಲ್ಲಿ ಒಂದು ಆಶೆ ಉಂಟು, ಅದನ್ನು ಖಾವಂದರು ನಡೆಸಿಕೊಡುವುದಾದರೆ..."

ಪೂರ್ಣಯ್ಯನವರಿಗೆ ಬಹಳ ಹಿಗ್ಗು.  ಆತುರರಾಗಿ ಕೇಳಿದರಂತೆ, "ಹೇಳಿ ಆಚಾರ್ ಸ್ವಾಮಿ, ಅದೇನು ಹೇಳಿ, ಧಾರಾಳವಾಗಿ ನಡೆಸಿಕೊಡೋಣ"

ಆಚಾರ್ರು, ಹಿಂಜರಿಯುತ್ತ, ಹಲ್ಲು ಗಿಂಜುತ್ತ, ಕೈ ಹೊಸೆಯುತ್ತಾ - "ಅದೇನೋ ಚಿಕ್ಕಂದಿನಿಂದ ಒಂದು ಆಸೆ ಬಂದುಬಿಟ್ಟಿದೆ, ಈ ಅಮಲ್ದಾರಿಕೆ ಅಂತಾರಲ್ಲ, ಅದನ್ನ ಒಂದು ದಿನವಾದರೂ ಮಾಡಿಯೇ ಚಟ್ಟ ಹತ್ತಬೇಕು ಅಂತ.  ತಿರುಕನ ಕನಸು ಅಂತ ಸುಮ್ಮನಾಗಿದ್ದೆ.  ಈಗ ಖಾವಂದರು ಜುಲುಮೆ ಮಾಡುತ್ತಿರುವುದರಿಂದ ಹೇಳಬೇಕಾಗಿದೆ.  ಅದನ್ನೊಂದು ದಿನ ನಡೆಸಿ ಕೊಟ್ಟುಬಿಟ್ಟರೆ..."

ಪೂರ್ಣಯ್ಯನವರು ಜೋರಾಗಿ ನಕ್ಕುಬಿಟ್ಟರಂತೆ - "ಆಚಾರ್ರೇ, ಬಲೇ ತಮಾಷೆ ಮಾಡ್ತೀರ್ರಪ್ಪ, ನಾನು ಗಂಭೀರವಾಗಿ ಕೇಳುತ್ತಿದ್ದರೆ ನೀವು ಏನೇನೋ ಹೇಳುತ್ತೀರಿ.  ನಿಮಗೆ ಏನು ಬೇಕು ಸ್ವಲ್ಪ ಗಂಭೀರವಾಗಿ ಹೇಳಿ.  ಸುಮ್ಮನೇ ತಮಾಷೆ ಮಾಡಬೇಡಿ"

ಆಚಾರ್ರು ಗಂಭೀರವದನರಾಗಿ - "ಇಲ್ಲ ಮಾಸ್ವಾಮಿ, ನಾನು ತಮಾಷೆ ಮಾಡ್ತಿಲ್ಲ, ತಾವು ಬಲವಂತ ಮಾಡಿದ್ದರಿಂದ ಯೋಚಿಸಿಯೇ ಅರಿಕೆ ಮಾಡಿಕೊಂಡಿದ್ದು.  ಇದು ಬಿಟ್ಟು ನನಗೆ ಬೇರೇನೂ ಅಗತ್ಯವೇ ಇಲ್ಲ"

ಈಗ ಪೂರ್ಣಯ್ಯನವರು ಚಿಂತಾಕ್ರಾಂತರಾದರು.  ಬ್ರಾಹ್ಮಣ ಕೇಳಿಬಿಟ್ಟಿದ್ದಾನೆ, ಇಲ್ಲವೆನ್ನುವ ಹಾಗಿಲ್ಲ, ಆದರೆ ಕೇಳಿರುವುದೋ, ಆಗುವುದಲ್ಲ ಹೋಗುವುದಲ್ಲ.  ಅನುನಯದಿಂದ ಹೇಳಿದರಂತೆ - "ಸ್ವಾಮಿ, ಅಮಲ್ದಾರಿಕೆ ಅಂದರೆ ಅದೇನು ಹುಡುಗಾಟದ ಮಾತೇ?  ಅಮಲ್ದಾರ ಅಂದರೆ ಇಡೀ ತಾಲ್ಲೂಕಿಗೇ ಸರ್ಕಾರದ ಪ್ರತಿನಿಧಿ.  ಅದಕ್ಕೆಲ್ಲಾ ಬಹಳ ಅನುಭವ ಇರಬೇಕು, ದೊಡ್ಡದೊಡ್ಡ ಜನದ ಜೊತೆ ಸಂಪರ್ಕವಿರಬೇಕು, ಅದು ಬಹಳ ಜವಾಬ್ದಾರಿ ಕೆಲಸ, ನೀವು ತಿಳಿದಂತೆ ಅಲ್ಲ.  ನಿಮಗೆ ಬೇಕಾದಷ್ಟು ಜಮೀನು, ಹಸು, ಕುದುರೆ ಎಲ್ಲ ಕೊಡುತ್ತೇನೆ, ಏನು ಬೇಕೋ ಕೇಳಿ"

ಆಚಾರ್ರದು ಒಂದೇ ಮಾತು - "ಏನೋ ಇದೊಂದು ಆಶೆಯಿತ್ತು, ತಾವು ಕೇಳಿದಿರಿ ಅಂತ ಹೇಳಿದೆ ಸ್ವಾಮಿ.  ಮಾಡುವುದಾದರೆ ಇದೊಂದು ಅಪ್ಪಣೆಯಾಗಬೇಕು.  ಇಲ್ಲದಿದ್ದರೆ ಪರವಾಗಿಲ್ಲ, ದೇವರೇನು ಯಾವುದಕ್ಕೂ ಕಮ್ಮಿ ಮಾಡಿಲ್ಲ, ನನಗೆ ಇನ್ನೇನೂ ಬೇಡ"

ದಿವಾನರಿಗೆ ಒಳ್ಳೆ ಪೀಕಲಾಟ.  ಚಿಂತಿಸಿ ಚಿಂತಿಸಿ, ಕೊನೆಗೆ, ಒಂದು ದಿನಕ್ಕೆ ತಾನೆ, ಆದದ್ದಾಗಲಿ ನೋಡಿಕೊಳ್ಳೋಣ ಎಂದು ಆರ್ಡರ್ ಹಾಕಿಕೊಟ್ಟರಂತೆ - "ಶ್ರೀ ರಂಗಾಚಾರ್ಯರನ್ನು ದಿನಾಂಕ... ರಂದು ಒಂದು ದಿನದ ಮಟ್ಟಿಗೆ ಶ್ರೀರಂಗಪಟ್ಟಣದ ಅಮಲ್ದಾರರನ್ನಾಗಿ ನೇಮಕ ಮಾಡಲಾಗಿದೆ"

ಆಚಾರ್ಯರಿಗೆ ಸ್ವರ್ಗಕ್ಕೆ ಮೂರೇ ಗೇಣು.  ಖಾವಂದರಿಗೆ ಕೃತಜ್ಞತೆಯಿಂದ ಕೈ ಮುಗಿದು, ನಾಳೆ ಬೆಳಂಝಾಮವೇ ಹೊರಟುಬಿಡುತ್ತೇನೆ ಎಂದು ಹೇಳಿ ಮನೆಗೆ ಹೊರಡುತ್ತಿದ್ದಾಗ ಅವರನ್ನು ತಡೆದು ಒಂದು ಕಿವಿಮಾತು ಹೇಳಿದರಂತೆ ಪೂರ್ಣಯ್ಯ - "ನೋಡಿ ಆಚಾರ್ ಸ್ವಾಮಿ, ಇದೊಂದು ಮಾತನ್ನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಂಡಿರಿ - ಈ ಆಫೀಸು ವ್ಯವಹಾರದಲ್ಲಿ ಶಿರಸ್ತೇದಾರ್ರು ಬಹಳ ಮುಖ್ಯ, ಯಾವಾಗಲೂ ಅವರ ಕಿವಿ ಕಚ್ಚಿಕೊಂಡೇ ಇರತಕ್ಕದ್ದು, ಹೆಡ್ ಗುಮಾಸ್ತರು ಸ್ವಲ್ಪ ತರಲೆ, ಅವರಲ್ಲಿ ಯಾವಾಗಲೂ ಮುಖ ಕಪ್ಪಗೇ ಮಾಡಿಕೊಂಡಿರಿ - ಮರೆಯಬೇಡಿ"

ಸರಿ, ಇವತ್ತು ಏಕಾದಶಿ, ಮಾರನೇ ದಿನ ಬೆಳ್ಳಿ ಮೂಡುವ ಮೊದಲೇ ಎದ್ದು, ಪ್ರಾತರ್ವಿಧಿಗಳನ್ನು ಮುಗಿಸಿ ಹೊರಟರು ಆಚಾರ್ರು.  ದಾರಿಯಲ್ಲೇ ಕಾವೇರೀ ಸ್ನಾನವೂ ಆಗುತ್ತೆ, ಅಲ್ಲೇ ಅಡುಗೆ ಮಾಡಿದರೆ ಪಾರಣೆಯೂ ಆಗುತ್ತೆ ಎಂದು ಅಡುಗೆ ಸಾಮಾನೆಲ್ಲವನ್ನೂ ಆಳಿನ ಕೈಲಿ ಹೊರೆಸಿಕೊಂಡು (ಅಮಲ್ದಾರರು ತಾನೆ, ಸರ್ಕಾರ ಕೂಡಲೇ ಒಬ್ಬ ಆಳನ್ನೂ ಕೊಟ್ಟಿತ್ತು) ಹೊರಟರಂತೆ.  ಅಮಲ್ದಾರರ ಸವಾರಿಗಾಗಿ ಆಗಲೇ ಒಂದು ಕುದುರೆ ಬಂದು ನಿಂತಿತ್ತು.  ಅಮಲ್ದಾರರೇನು ಉನ್ನತ ಹಯವನ್ನೇರಿ ಸವಾರಿ ಮಾಡುವಷ್ಟು ಕಟ್ಟುಮಸ್ತಾದ ಆಸಾಮಿಯೇ?  ಆ ತುರಗ ಈ ಅಮಲ್ದಾರರನ್ನು ಎಲ್ಲಾದರೂ ಕೆಡವಿಬಿಟ್ಟರೆ ಏನು ಗತಿ - ನಗೋರ ಮುಂದೆ ಹಾರಿ ಬಿದ್ದಂತೆ.  ಅದಕ್ಕಾಗಿಯೇ, ಸ್ವಲ್ಪ ಮೆದುವಾದ, ಹೇಳಿದಂತೆ ಕೇಳುವ, ಜಟಕಾ ಬಂಡಿಗೆ ಕಟ್ಟುವ, ಓಡುವ ಬದಲು ನಡೆಯುವ ಕುಳ್ಳು ಕುದುರೆಯೊಂದನ್ನು ದಿವಾನರು ವಿಶೇಷವಾಗಿ ಹುಡುಕಿಸಿ ವ್ಯವಸ್ಥೆ ಮಾಡಿಸಿದ್ದರು.  ಸರಿ, ಅಮಲ್ದಾರಸಾಹೇಬರು ತಮ್ಮ ಥಟ್ಟನ್ನೇರಿ (ಥಟ್ಟು ಎಂದರೆ ಕುದುರೆ) ಹೊರಟರು.  ಆ ಥಟ್ಟೋ, ಓಡುವುದಲ್ಲ ನಡೆಯುವುದು ಎಂದೆವಲ್ಲ, ಸರಿ.  ಆದರೆ ಅದರ ನಿಧಾನಸ್ವಭಾವ ಎಷ್ಟು ಮಟ್ಟಿನದೆಂದರೆ, ಒಂದು ಹೆಜ್ಜೆ ಮುಂದಿಟ್ಟರೆ ಮೂರು ಹೆಜ್ಜೆ ಹಿಂದಿಡುವುದು.  ಅದೇನು ದೊಡ್ಡ ಮಾತೇ?  ಮೈಸೂರಿಗೆ ಮುಖವಾಗಿ, ಶ್ರೀರಂಗಪಟ್ಟಣಕ್ಕೆ ಬೆನ್ನಾಗಿ, ಮೈಸೂರಿನ ಕಡೆ ಒಂದು ಹೆಜ್ಜೆ, ಶ್ರೀರಂಗಪಟ್ಟಣದ ಕಡೆ ಮೂರು ಹೆಜ್ಜೆ ಇಡುತ್ತಾ ಥಟ್ಟು ಹೊರಟಿತು.  ಅದರ ಹಿಂದೆ, ಅಲ್ಲಲ್ಲ ಮುಂದೆ, ಸಾಮಾನು ಸರಂಜಾಮು ಹೊತ್ತ ಆಳು ರಂಗ.  ಹೀಗೇ ಸವಾರಿ ಬೆಳೆಯುತ್ತಾ, ಅರುಣೋದಯದ ಹೊತ್ತಿಗೆ ಸವಾರಿ ತಿರುಮಕೂಡಲು ತಲುಪಿತು.  [ಇದೇನು, ಮೈಸೂರು ಶ್ರೀರಂಗಪಟ್ಟಣದ ದಾರಿಯಲ್ಲಿ ತಿರುಮಕೂಡಲು ಎಲ್ಲಿ ಬರುತ್ತದೆ ಎಂದು ಪಾಠಕಮಹಾಶಯರು ಮೂಗು ಮುರಿಯಬಾರದು (ಅದು ತಮ್ಮ ಮೂಗಿಗೇ ಕೇಡು).  ಒಂದು, ಆಗೆಲ್ಲಾ ಈಗಿನಂತೆ ನೈಸ್ ರಸ್ತೆಯಿರಲಿಲ್ಲ; ಎರಡು, ಆಚಾರವಂತರಾದ ಅಮಲ್ದಾರ್ರು ಮನಸ್ಸು ಮಾಡಿದರೆ ತಿರುಮಕೂಡಲನ್ನು ದಾರಿಯಲ್ಲಿ ತಂದುಕೊಳ್ಳುವುದು ದೊಡ್ಡದೇ? ತ್ರಿವೇಣೀಸಂಗಮ, ಅಗಸ್ತೇಶ್ವರನ ಸನ್ನಿಧಿ, ಶೇಷಚಂದ್ರಿಕಾಚಾರ್ಯರ ಸನ್ನಿಧಿ, ಗುಂಜಾನರಸಿಂಹಸ್ವಾಮಿಯ ಸನ್ನಿಧಿ - ದೊಡ್ಡ ಅಧಿಕಾರಕ್ಕೆ ಹೋಗುತ್ತಿರುವ ಅಮಲ್ದಾರ್ ಸಾಹೇಬರು ಸಂಗಮಸ್ನಾನ ಮಾಡಿ ದೇವರಿಗೆ ಗುರುಗಳಿಗೆ ನಮಸ್ಕರಿಸುವುದೊಂದು ತಪ್ಪೇ?]

ಸರಿ, ತಿರುಮಕೂಡಲು ತಲುಪಿದವರೇ, "ಕಾವೇರೀಕಪಿಲಾಲವಾಲಕಲಿತಾ... " ಸ್ತೋತ್ರಾದಿಗಳನ್ನು ಪಠಿಸುತ್ತಾ, ಸಂಗಮದಲ್ಲಿ ಸ್ನಾನಾಹ್ನಿಕಗಳನ್ನು ಪೂರೈಸಿ, ಅಲ್ಲೇ ಮೂರು ಕಲ್ಲುಗುಂಡು ಹೂಡಿ ಲಕ್ಷಣವಾಗಿ ಅನ್ನ ತೊವ್ವೆ ಮಾಡಿ, ಪೂಜೆ ದ್ವಾದಶಿ ಪಾರಣೆ ಮುಗಿಸಿ ಮತ್ತೆ ಸವಾರಿ ಬೆಳೆಸಿ, ಬೆಳಗ್ಗೆ ಹತ್ತು ಗಂಟೆಗೆಲ್ಲಾ ಸಾಹೇಬರು ಅಮಲ್ದಾರ್ ಆಫೀಸಿನ ಮುಂದೆ ಹಾಜರು.

"ಲಾ... ಯಾರಾ ಅಲ್ಲಿ" - ಆಚಾರಮಲ್ದಾರರ ಗುಟುರಿಗೆ, ಆಗತಾನೇ ಆಫೀಸು ತೆಗೆದು, ಬಾಗಿಲ ಮುಂದೆ ಕುಂತು ತೂಕಡಿಸುತ್ತಿದ್ದ ಪ್ಯೂನು ಪಾಪಣ್ಣ ಗಡಬಡಿಸಿ ಮೇಲೆದ್ದ.  ನೋಡುತ್ತಾನೆ, ಯಾರೋ ಆಚಾರೈನೋರು, ಗಂಧಾಕ್ಷತೆ ತುಳಸೀಮಾಲಾಲಂಕೃತರಾಗಿ ಕುದುರೆಯ ಮೇಲೆ ಕುಂತಿದ್ದಾರೆ.  

"ಯಾರ್ಸಾಮೇ, ಏನಾಗಬೇಕಿತ್ತು?" ಎದ್ದವನೇ ಕೈ ಮುಗಿದುಕೊಂಡು ನಮ್ರನಾಗಿ ಕೇಳಿದ ಪಾಪಣ್ಣ

"ಅಮಲ್ದಾರಾಫೀಸು ಇದೇ ಏನಯ್ಯಾ?" ಜರ್ಬಾಗಿ ಕೇಳಿದರು ಆಚಾರು

"ಔದು ಬುದ್ದೀ, ಅಮಲ್ದಾರು ಸಾಯಬ್ರು ಇನ್ನೂ ಅಪೇಂಟಾಗಿಲ್ಲ, ಯೆಡ್ ಗುಮಾಸ್ತಯ್ನೋರು ಆಪೀಸು ನೋಡ್ಕತವ್ರೆ"

"ಓಹೋ, ಹೆಡ್ ಗುಮಾಸ್ತ್ರೋ, ಎಲ್ಲಿದ್ದಾರೆ?"

"ಇನ್ನೂ ಬಂದಿಲ್ಲ ಬುದ್ದೀ, ಗದ್ದೆತವ್ಕೋಗವ್ರೆ, ಅವ್ರೇನಿದ್ರೂ ಅನ್ನೆರಡು ಗಂಟೆಗೇ ಬರಾದು"

"ಸರಿ, ಸಿರಸ್ತೇದಾರ್ರು"

"ಅವ್ರೂ ಬಂದಿಲ್ಲ ಬುದ್ದೇ, ಪೂಜಗೀಜ ಮುಗುಸ್ಕಂಡು ಅವ್ರೂ ಮದ್ಯಾನ ಬತ್ತರೆ"

"ಏನಯ್ಯಾ, ಆಪೀಸು ಹತ್ತಕ್ಕೆ, ಇವರೆಲ್ಲ ಮಧ್ಯಾಹ್ನ ಬರೋದು?  ಹೋಗಿ ಕರ್ಕಂಬಾರಯ್ಯ"

"ಅದ್ಸರಿ, ನೀವು ಯಾರ ಬುದ್ದಿ?  ಏನಾಗ್ಬೇಕಿತ್ತು ಯೇಳಿ"

"ನಾನು ಯಾರಾ? ಈ ತಾಲೂಕಿಗೆ ಹೊಸಾ ಅಮಲ್ದಾರ್ರು"

ಪಾಪಣ್ಣಗೆ ತಡೆಯಲಾರದ ನಗೆ - "ಅಯ್ಯ, ಏನಯ್ನೋರೇ ಬೆಳ್ಬೆಳಗ್ಗೆ ನಿಮ್ದು?  ಏನಾರ ದಕ್ಸ್ಣೆ ಗಿಕ್ಸ್ಣೆ ಬೇಕಿದ್ರೆ ಕ್ಯೋಳಿ, ಅಮಲ್ದಾರಂತೆ ಅಮಲ್ದಾರು... ಏ, ವೋಗಿ ಬುದ್ದಿ ಸುಮ್ಕೆ"

"ಏಯ್, ಏನು ತಲೆಯೆಲ್ಲಾ ಮಾತಾಡ್ತೀ, ನೋಡಿಲ್ಲಿ, ನಿಮ್ಮಪ್ಪ ಕೊಟ್ಟಿದಾನೆ ಆರ್ಡ್ರು"

ದಿವಾನರ ಆರ್ಡರು ನೋಡಿದ ಕೂಡಲೇ ಪ್ಯೂನ್ ಪಾಪಣ್ಣನ ಮೈಯೆಲ್ಲಾ ಬೆವರು ಕಿತ್ತುಕೊಂಡಿತು.  ನಿಂತಲ್ಲೇ ಸಾಷ್ಟಾಂಗ ಹೊಡೆದು "ತೆಪ್ಪಾಯ್ತು ಬುದ್ದೀ, ವಟ್ಟಗಾಕ್ಕಂಬುಡಿ - ಈಗ್ಲೇ ವೋಗಿ ಕರ್ಕಂಬತ್ತಿನಿ" ಎಂದು ಅಲ್ಲಿಂದ ಕಂಬಿ ಕಿತ್ತ.

ಇದನ್ನೆಲ್ಲ ನೋಡಿ ಅಲ್ಲೇ ನಡುಗುತ್ತಾ ನಿಂತಿದ್ದ ಅಟೆಂಡರನ್ನು ನೋಡಿ ಅಮಲ್ದಾರ್ರು "ನೀನ್ಯಾರೋ" ಅಂದರು.

"ನಾನು ಪುಟ್ಟಯ್ಯ ಬುದ್ದಿ, ಅಟೆಂಡ್ರು".

"ಸರಿ, ಪುಟ್ಟಾ, ನನ್ನ ಜಾಗ ತೋರ್ಸು ನಡಿ.  ಎಲ್ಲಾ ಕ್ಲೀನ್ ಮಾಡು"

"ಅಪ್ಪಣೆ ಬುದ್ದಿ" - ಪುಟ್ಟ ಟೇಬಲ್ ಎಲ್ಲ ಕ್ಲೀನ್ ಮಾಡಿ, ಸಾಯಬ್ರಿಗೆ ಕೂರಲು ಅನುವು ಮಾಡಿ ಕೊಟ್ಟ. 

"ಲಾ ಪುಟ್ಟಾ"

"ಏನ್ ಬುದ್ದೀ"

"ಇಲ್ಲಿ ಲಾಂದ್ರ ಇದೆಯೇನೋ"

"ಐತೆ ಬುದ್ದಿ"

"ತತ್ತಾ..."

ಓಡಿ ಹೋದ ಪುಟ್ಟ ಲಾಂದ್ರ ತಂದ.

"ಒಳಗೆ ಎಣ್ಣೆ ಇದೆಯಾ"

"ಐತೆ ಬುದ್ದಿ"

"ಸರಿ, ಲಾಂದ್ರ ಹಚ್ಚು"

"ಬುದ್ದೀ, ಅಗಲೊತ್ತು, ಇಪ್ಪಾಟಿ ಬೆಳಕಿದೆ, ಈಟೊತ್ನಲ್ಲಿ ಲಾಂದ್ರ... ಆ..."

"ಥಬ್ಬಲೀ... ನಾ ಹೇಳ್ದಷ್ಟು ಮಾಡು, ನಾನು ಅಮಲ್ದಾರು, ಒದ್ದೋಡಿಸಿಯೇನು, ಹುಷಾರ್..."

"ಅಯ್ಯಯ್ಯೋ, ತೆಪ್ಪಾಯ್ತು ಬುದ್ದೀ..." ಪುಟ್ಟ ಲಾಂದ್ರ ಹಚ್ಚಿದ.

ಲಾಂದ್ರದ ಮುಚ್ಚಳ ತೆಗೆದು ಮೇಲೇಳುತ್ತಿದ್ದ ದೀಪದ ಹಬೆಗೆ ಕೈಯಿಟ್ಟರು ಆಚಾರ್ರು.  ಬೆಳಗಿನ ಚುಮುಚುಮು ಚಳಿಗೆ ಕೈ ಬೆಚ್ಚಗಾಯಿತು. ಒಂದಾದಮೇಲೊಂದು ಕೈ ಕಾಸಿಕೊಳ್ಳುತ್ತಾ, ಬೆಚ್ಚನೆಯ ದೀಪದ ಹೊಗೆ ಅಂಗೈಯಲ್ಲಿ ಕಟ್ಟತೊಡಗಿತು.

ಇಷ್ಟು ಹೊತ್ತಿಗೆ, ಪಾಪಣ್ಣ ಶಿರಸ್ತೇದಾರ್ರು ಮತ್ತೆ ಹೆಡ್ ಗುಮಾಸ್ತರನ್ನ ಕರೆತಂದ.  ಇಬ್ಬರೂ ಗಡಗಡ ನಡುಗುತ್ತಾ ಬಿಟ್ಟ ಕೆಲಸ ಬಿಟ್ಟು ಓಡಿ ಬಂದಿದ್ದರು.  ಶಿರಸ್ತೇದಾರ್ರ ಶಿರದಲ್ಲಿ, ತರಾತುರಿಯಲ್ಲಿ ಸೊಟ್ಟಂಪಟ್ಟ ಕಟ್ಟಿದ್ದ ರುಮಾಲಿನ ತುದಿ ಶಿರಪೇಶಿನಂತೆ ನೇತಾಡುತ್ತಿತ್ತು.  ಹೆಡ್ ಗುಮಾಸ್ತರ ಹೆಡ್ಡು ಖಾಲಿಯಿತ್ತು - ರುಮಾಲು ಇನ್ನೂ ಕೈಯಲ್ಲಿತ್ತು, ಕೂದಲು ಉದುರಿತ್ತು.  ಬೋಳು ತಲೆಯಿಂದ ಬೆವರು ಧಾರಾಕಾರವಾಗಿ ಹರಿದು, ಇನ್ನೂ ಗದ್ದೆಯ ಕೆಸರು ಮೆತ್ತಿದ್ದ ಅವರ ಕಾಲನ್ನು ತೊಳೆಯುತ್ತಿತ್ತು.  ಠೀವಿಯಿಂದ ಲಾಂದ್ರದ ಮೇಲಿಟ್ಟಿದ್ದ ಕೈ ಮೇಲೆತ್ತದೇ ಇಬ್ಬರನ್ನೂ ಹತ್ತಿರ ಕರೆದರು ಅಮಲ್ದಾರ್ರು.

"ನಿಮ್ಮಲ್ಲಿ ಶಿರಸ್ತೇದಾರ್ರು ಯಾರ್ರೀ?" ಗುಡುಗಿದರು

ಶಿರಸ್ತೇದಾರ್ ಮುಂದೆ ಬಂದರು "ನಾನು ಮಾಸ್ವಾಮಿ, ನರಸಿಮ್ಮೂರ್ತಿ.  ಇವತ್ತು ಸ್ವಲ್ಪ ತಡವಾಯಿತು... ಅದು..."

"ಹತ್ರಾ ಬನ್ರೀ"

ಶಿರಸ್ತೇದಾರರಿಗೆ ನಡುಕ, ಕಪಾಳಮೋಕ್ಷದ ಭೀತಿ... ಹೆದರಿಕೊಂಡೇ ಹತ್ತಿರ ಬಂದರು.

"ಇನ್ನೂ ಹತ್ರಾ ಬನ್ರೀ..."

ಇನ್ನೂ ಹತ್ತಿರ ಬಂದರು ಶಿರಸ್ತೇದಾರ್ರು.

"ಇನ್ನೂ ಬನ್ನಿ, ಎಲ್ಲಿ ಕಿವಿ ಕೊಡಿ..."

ಕಿವಿ ಕೊಟ್ಟು ಗುಟ್ಟಿನ ಮಾತು ಕೇಳುವುದು ಶಿರಸ್ತೇದಾರರಿಗೆ ಹೊಸದೇನಲ್ಲ - ಎಲ್ಲ ಸಾಹೇಬರು ಮಾಡಿಕೊಂಡು ಬಂದದ್ದೇ ಅದು.  ಸ್ವಲ್ಪ ನಿರಾಳವಾಗಿ ಗುಟ್ಟು ಕೇಳಲು ಕಿವಿಯನ್ನು ಅಮಲ್ದಾರರ ಮುಖದ ಬಳಿ ತಂದರು.

"ಇನ್ನೂ ಹತ್ರಾ ಬನ್ನಿ" ಎಂದು ಶಿರಸ್ತೇದಾರರ ಕಿವಿಯನ್ನು ಹತ್ತಿರ ಎಳೆದುಕೊಂಡ ಅಮಲ್ದಾರರು ಕಿವಿಯ ಬಳಿ ಬಾಯಿಟ್ಟವರೇ ಕಟಕ್ಕನೆ ಕಚ್ಚಿಯೇ ಬಿಟ್ಟರು.

ಗುಟ್ಟಿಗಾಗಿ ಕಿವಿ ತಂದಿದ್ದ ಶಿರಸ್ತೇದಾರರಿಗೆ ಇದು ಕಪಾಳಮೋಕ್ಷಕ್ಕೂ ಮೀರಿದ ಆಘಾತ.  ಸ್ವಲ್ಪ ತಡವಾಗಿ ಬಂದರೆ ಈ ಶಿಕ್ಷೆಯೇ! ಅಯ್ಯಯ್ಯೋ ಎಂದು ಕೂಗುತ್ತಾ ಸಾವರಿಸಿಕೊಳ್ಳುವಷ್ಟರಲ್ಲಿ ಸಾಹೇಬರು ಮತ್ತೆ ಹುಕುಂ ಮಾಡಿದರು...

"ಎಲ್ಲಿ, ಆ ಕಿವಿ ಕೊಡಿ..."

ಹೌಹಾರಿದ ಶಿರಸ್ತೇದಾರರು "ಅಯ್ಯಯ್ಯೋ, ಬ್ಯಾಡಿ ಸ್ವಾಮೀ... ತಪ್ಪಾಯ್ತು..." ಎಂದು ಅಲವತ್ತುಕೊಳ್ಳುವಷ್ಟರಲ್ಲಿ ಬಲವಂತದಿಂದ ಆ ಕಿವಿಯನ್ನೂ ಎಳೆದುಕೊಂಡ ಅಮಲ್ದಾರರು ಅದನ್ನೂ ಕಟಕ್ಕನೆ ಕಡಿದುಬಿಟ್ಟರು.  ಶಿರಸ್ತೇದಾರರಿಗೋ ಎರಡೂ ಕಿವಿಯಿಂದಲೂ ಧಾರಾಕಾರ ನೆತ್ತರು.

ಈಗ ಅಮಲ್ದಾರರ ದೃಷ್ಟಿ, ಧಾರಾಕಾರ ಬೆವರು ಮುಂತಾದುವನ್ನು ಸುರಿಸಿಕೊಳ್ಳುತ್ತಾ ನಿಂತಿದ್ದ ಹೆಡ್ ಗುಮಾಸ್ತರ ಮೇಲೆ ಬಿತ್ತು.

"ನೀವೇಯೋ ಹೆಡ್ ಗುಮಾಸ್ತ್ರು?  ಏನ್ ಹೆಸರು?"

"ಶ್ ಶ್ ಶ್ರೀಕಂಠಸ್ವಾಮಿ ಮಾಸ್ವಾಮೀ..." ತೊದತೊದಲುತ್ತಾ ನಡುಗಿದರು ಹೆಡ್ ಗುಮಾಸ್ತರು.

"ಬನ್ನಿ, ಹತ್ರ ಬನ್ನಿ"

ಇದಂತೂ ಹೆಡ್ ಗುಮಾಸ್ತರಿಗೆ ತಮ್ಮ ಮರಣಶಾಸನದಂತೆಯೇ ಕೇಳಿಸಿತು.  ಎರಡೂ ಕಿವಿಯಿಂದ ನೆತ್ತರು ಸುರಿಸುತ್ತಾ ನಿಂತಿದ್ದ ಶಿರಸ್ತೇದಾರರ ಮುಖವನ್ನೇ ದೀನವದನದಿಂದ ನೋಡುತ್ತಾ, ತಮ್ಮ ಕಿವಿ ಸವರಿಕೊಳ್ಳುತ್ತಾ, ಮರಣದಂಡನೆಗೆ ಗುರಿಯಾದ ಖೈದಿಯಂತೆ ಅಮಲ್ದಾರರ ಬಳಿ ಸರಿದರು ಹೆಡ್ ಗುಮಾಸ್ತರು.

"ಬನ್ರೀ, ಹತ್ರ ಬನ್ರೀ..." ನಿಧಾನಕ್ಕೆ ಲಾಂದ್ರದ ಮೇಲಿಟ್ಟಿದ್ದ ತಮ್ಮ ಕೈಯೆತ್ತಿದರು ಅಮಲ್ದಾರರು.  ಕೈಯಲ್ಲಿ ದಪ್ಪಗೆ ಕಟ್ಟಿದ್ದ ಲಾಂದ್ರದ ಕಪ್ಪು.  

"ತಪ್ಪಾಯ್ತು ಮಾಸ್ವಾಮೀ, ಇನ್ಮೇಲೆ ತಡವಾಗಿ ಬರೊಲ್ಲ..." ಅಮಲ್ದಾರರ ಆ ಮಶೀಮಯ ಹಸ್ತವನ್ನೇ ನೋಡುತ್ತಾ ಅಯೋಮಯವಾಗಿ ಮುಖವನ್ನು ಹತ್ತಿರ ತಂದರು ಹೆಡ್ ಗುಮಾಸ್ತರು.

ಹೆಡ್ ಗುಮಾಸ್ತರು ಮುಖ ಹತ್ತಿರ ತಂದೊಡನೆ ಅಮಲ್ದಾರರು ಅನಾಮತ್ ಆ ಮಸಿಗಟ್ಟಿದ್ದ ಕೈಯನ್ನು ತಂದವರೇ ರಪ್ಪನೆ ಆ ಮಸಿಯನ್ನು ತಮ್ಮ ಮುಖಕ್ಕೆ ಬಳಿದುಕೊಂಡರು, ಹೆಡ್ ಗುಮಾಸ್ತರ ಮುಖವನ್ನು ಕೆಕ್ಕರಿಸಿ ನೋಡಿದರು.  ಮುಖಕ್ಕೆ ಮಸಿ ಬಳಿದು ಅವಮಾನಿಸುತ್ತಾರೇನೋ ಎಂದುಕೊಂಡು ಹೆದರುತ್ತಿದ್ದ ಹೆಡ್ ಗುಮಾಸ್ತರಿಗೆ, ಅಮಲ್ದಾರರು ತಾವೇ ಮುಖಕ್ಕೆ ಮಸಿ ಬಳಿದುಕೊಂಡು ಕೆಕ್ಕರಿಸಿ ನೋಡುವುದನ್ನು ಕಂಡು ಹುಚ್ಚೇ ಹಿಡಿದಂತಾಯಿತು.  ಕಿತ್ತುಕೊಳ್ಳಲು ಬೋಳುತಲೆಯಲ್ಲಿ ಕೂದಲೂ ಇಲ್ಲದುದನ್ನು ನೆನೆಯುತ್ತಾ ಕಿಂಕರ್ತವ್ಯಮೂರ್ಖರಾಗಿ ನಿಂತಿರುವಾಗ್ಗೆ-

ಸನ್ನಿವೇಶ ವಿಪರೀತಕ್ಕಿಟ್ಟುಕೊಂಡುದನ್ನು ಗಮನಿಸಿದ ಪುಟ್ಟಯ್ಯ ಪಾಪಣ್ಣಗಳು ಓಡಿ ಹೋಗಿ ಊರ ಪಟೇಲರಿಗೆ ಸುದ್ದಿ ಮುಟ್ಟಿಸಲು, ಅವರು ಹರಿಕಾರರನ್ನಟ್ಟಿ ಮೈಸೂರಿಗೆ ಸುದ್ದಿ ಮುಟ್ಟಿಸಲು, ಏನಾದರೂ ಉಪದ್ವ್ಯಾಪವಾದೀತೆಂದು ಮೊದಲೇ ಮನಗಂಡು, ಹೊರಡಲು ಆಗಲೇ ಸಿದ್ಧರಾಗಿದ್ದ ದಿವಾನ್ ಪೂರ್ಣಯ್ಯನವರು ತಡಮಾಡದೇ ಹಾರಗುದುರೆಯ ಮೇಲೆ ಕುಳಿತು ರಂಗಪಟ್ಟಣಕ್ಕೆ ಬಂದಿಳಿದರು.  ಅಮಲ್ದಾರ್ ಕಛೇರಿಯಲ್ಲಿ ನೋಡುತ್ತಾರೆ - 

ಹಾಡ ಹಗಲೇ ಲಾಟೀನು ಉರಿಯುತ್ತಿದೆ, ಮುಖಕ್ಕೆ ಮಸಿ ಬಳಿದುಕೊಂಡ ಅಮಲ್ದಾರ್ ಸಾಹೇಬರು ಒಮ್ಮೆ ಹೆಡ್ ಗುಮಾಸ್ತರನ್ನು ಮುಖ ಕಪ್ಪಗೆ ಮಾಡಿಕೊಂಡು ನೋಡುತ್ತಾ, ಮತ್ತೊಮ್ಮೆ ಶಿರಸ್ತೇದಾರರ ಕಿವಿ ಕಚ್ಚುತ್ತಾ ಅಮಲ್ದಾರಿಕೆ ನಡೆಸುತ್ತಿದ್ದಾರೆ.  ಶಿರಸ್ತೇದಾರರ ಕಿವಿಯಿಂದ ರಕ್ತ ಧಾರಾಕಾರವಾಗಿ ಹರಿಯುತ್ತಿದೆ, ಸಾಹೇಬರ ಕಪ್ಪು ಮುಖವನ್ನು ಕಂಡು ಹೆಡ್ ಗುಮಾಸ್ತರರ ಮುಖ ಹೆದರಿ ಬಿಳಿಚಿಕೊಂಡಿದೆ.

ಓಡಿ ಬಂದ ಪೂರ್ಣಯ್ಯನವರು ಕೇಳುತ್ತಾರೆ - "ಇದೇನು ಆಚಾರ್ ಸ್ವಾಮೀ, ಏನು ಮಾಡುತ್ತಿದ್ದೀರಿ?".  ಖಾವಂದರನ್ನು ನೋಡಿದೊಡನೇ ತಮ್ಮ ಅಮಲ್ದಾರಿಕೆಯನ್ನು ಸ್ವಲ್ಪ ನಿಲ್ಲಿಸಿ, ಹಸನ್ಮುಖರಾಗಿ ಕೈ ಮುಗಿದುಕೊಂಡು ಆಚಾರ್ರು ವರದಿ ಒಪ್ಪಿಸಿದರಂತೆ - "ಖಾವಂದರು ಅಪ್ಪಣೆ ಕೊಡಿಸೋಣವಾಗಿತ್ತಲ್ಲ - ಯಾವಾಗಲೂ ಶಿರಸ್ತೇದಾರರ ಕಿವಿ ಕಚ್ಚಿಕೊಂಡೇ ಇರತಕ್ಕದ್ದು, ಹೆಡ್ ಗುಮಾಸ್ತರರಲ್ಲಿ ಯಾವಾಗಲೂ ಮುಖ ಕಪ್ಪಗೇ ಮಾಡಿಕೊಂಡಿರಬೇಕು ಅಂತ - ಹಾಗೇ ನಡೆಸೋಣವಾಗ್ಯದೆ, ಮಾಸ್ವಾಮಿಗಳು ಪರಾಮರಿಸಬೇಕು, ಶಿರಸ್ತೇದಾರರ ಕಿವಿಯೆರಡೂ ಸರಿಯಾಗಿ ಕಚ್ಚಿ ಹಾಕ್ಯದೆ, ಹೆಡ್ ಗುಮಾಸ್ತರ ವಿಷಯ, ನನ್ನ ಮುಖದಲ್ಲೇ ಸ್ವಾಮಿಗಳಿಗೆ ಅರಿಕೆಯಾಗ್ಯದೆ"

ವಿಷಯ 'ಅರಿಕೆ'ಯಾದ ಪೂರ್ಣಯ್ಯನವರು ತಲೆ ಚಚ್ಚಿಕೊಂಡು ಹೇಳಿದರಂತೆ - "ಅಯ್ಯೋ ಆಚಾರ್ ಸ್ವಾಮೀ, ನಾನು ಹೇಳಿದ್ದೇನು ನೀವು ಮಾಡುತ್ತಿರುವುದೇನು?  ಶಿರಸ್ತೇದಾರ್ರ ಕಿವಿ ಕಚ್ಚಿಕೊಂಡಿರಬೇಕು ಎಂದರೆ, ಯಾವಾಗಲೂ ಗುಟ್ಟಿನ ವಿಷಯಗಳನ್ನು ಅವರಲ್ಲಿ ಉಸುರಬೇಕು, ಅವರನ್ನ ವಿಶ್ವಾಸದಲ್ಲಿಟ್ಟಿರಬೇಕು ಅಂತ; ಹೆಡ್ ಗುಮಾಸ್ತರಲ್ಲಿ ಮುಖ ಕಪ್ಪಗೆ ಮಾಡಿಕೊಳ್ಳಬೇಕು ಅಂದರೆ ಮಸಿ ಬಳಿದುಕೊಳ್ಳೋದಲ್ಲ, ಅವರೊಡನೆ ಸ್ವಲ್ಪ ಕೋಪದಿಂದಲೇ ವ್ಯವಹರಿಸಬೇಕು, ಸಲುಗೆ ನೀಡತಕ್ಕದ್ದಲ್ಲ ಅಂತ; ನೀವು ನೋಡಿದರೆ ಈ ಬಡಪಾಯಿಗಳನ್ನು ಹೀಗೆ ಹೆದರಿಸುವುದೇ?  ಆಗಲಿ, ಒಂದು ದಿನದ ಅಮಲ್ದಾರಿಕೆ ಮುಗಿದು ತಮ್ಮ ಆಸೆ ಈಡೇರಿತು ತಾನೆ? ಇನ್ನು ಇದೆಲ್ಲ ಉಪದ್ವ್ಯಾಪ ಬಿಟ್ಟು ನನ್ನ ಜೊತೆಗೆ ಬನ್ನಿ, ಪೂಜೆ ಮಾಡಿಕೊಂಡು ನಮ್ಮ ಮನೆಯಲ್ಲಿರಿ" ಎಂದು ಹೇಳಿ, ಕಿವಿ ಸೋರುತ್ತಿದ್ದ ಶಿರಸ್ತೇದಾರರಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಿ, ಕರ್ತವ್ಯನಿರ್ವಹಣೆಯ ಲೋಪಕ್ಕೆ ಇಬ್ಬರಿಗೂ ಛೀಮಾರಿ ಹಾಕಿ, ಆಚಾರ್ರನ್ನು ಕರೆದುಕೊಂಡು ಮೈಸೂರಿಗೆ ತೆರಳಿದರಂತೆ - ಇತಿ ಮಂಗಳಂ.

Tuesday, May 21, 2024

ಭರವಸೆ

























ಬೀಸುಗಾಳಿಗೆ ದಿಂಡುಗೆಡೆದ ಸಸಿ
ನೆಲಕಚ್ಚಿದರೂನೂ
ಕಳಚಿಲ್ಲ 
ತಾಯಿಬೇರಿನ ಕರುಳ ಬಳ್ಳಿ ದಾರ;
ಹಗ್ಗ
ಕಟ್ಟಿದ್ದಾಯ್ತು, ಕಡ್ಡಿ ನೆಟ್ಟಿದ್ದಾಯ್ತು
ಇಟ್ಟಿಗೆ ಕಲ್ಲು 
ಮತ್ತಾವುದೋ ಮರದ ಗೆಲ್ಲು ಬಳ್ಳಿ 
ತಂದು ಒಟ್ಟಿದ್ದಾಯ್ತು
ದಿಟಕು ನಿಲುವುದೆ ಹೇಳಿ ಮುರಿದ ಸೊಂಟ?
ಕೊನೆಗೊಮ್ಮೆ ಚೆಲ್ಲಿ ಕೈ 
ಬಿಟ್ಟಿದ್ದಾಯ್ತು;
ಮುರಿದು ತೆಗೆಯಲೆ ಬೇಕು ಇಂದು ನಾಳೆ.

ಬೇರಿಗೋ, ಹುಚ್ಚು - 
ನೆಚ್ಚಿಗೆಲ್ಲಿಯ ಪಾರ?
ನಡುಮುರಿದ ಗಿಡಕೆ
ಅಂಟಿಯೂ ಅಂಟಿರದ 
ತುಣುಕು ತೊಗಟೆಯ ದಾರಿ
ಹಿಡಿದು ಹರಿಸುತ್ತಲಿದೆ
ಜೀವಸಾರ;
ಸಾವ ದಾರಿಯ ತುಂಬ ಹಸಿರ ನಳನಳಿಸುತಿಹ
ಉಡಿದ ಮರ - 
ಯಾವುದೋ ಮಾಂತ್ರಿಕನ ನೆಚ್ಚಿ ಕಾಯ್ದಿಹ ಬೇರು - 
ಹನಿ ಹನಿ ಹನಿ ಹನಿ.

ದಿನವೆರಡು ಕಳೆದರೂ
ಎಲೆಯೊಂದೂ ಕಂದಿಲ್ಲ
ಮೂರು ಮತ್ತೆರಡಾಯ್ತು
ಹಸಿರ ಸಿರಿ ಸವೆದಿಲ್ಲ
ಕಾದದ್ದೇ ಬಂತು.
ಹತ್ತಕ್ಕೆ ಸೂತಕವೂ ಕಳೆಯಿತು
ವೈಕುಂಠ
ಮುಕ್ತಿ ಕರುಣಿಸೆ ಕಡಿವ ಕೊಡಲಿ ಬಂದು,
ಸಾಕಿನ್ನು ಯಾತನೆಯು
ಹುರುಳಿರದ ವೇದನೆಯು
ರೋದನೆಗೆ ಮಂಗಳವ ಹಾಡಲಿನ್ನು
ಕೊಡಲಿಯೆತ್ತಿದ ಕೈಗೆ ಕಂಡುದೇನು?
ಅಯ್ಯೋ ತಡೆ ತಡೆ
ಕಾಣು ಕಾಣದೇನು?
ಸಿರಿಯ ಹಸುರಿಗೆ ಹೊನ್ನ ಸರಿಗೆಯಿಟ್ಟಂತೆವೋಲ್
ನಳನಳಿಸಿ ನಗುವೊಂದು ನವಪಲ್ಲವಂ
ಅಡ್ಡಮಲಗಿದ ಗಿಡದ ನಡುವಿಂದ ಮೊಗವೆತ್ತಿ
ಬದುಕ ಭರವಸೆಯೆ ಮೈಯಾಂತಂತೆ 
ಕೇಳುತಿದೆ-
"ದೊರೆಯಬಹುದೇ ಒಂದು ಕಾಯಕಲ್ಪ"
ಉತ್ತರ
ಕುರಿತು ಹೊರಟಿಹ ಮೋಡ
'ಧೋಂ'ಕಾರದೊಡನೆ ಮುಂಗಾರುತ್ತಿದೆ
ದೊರೆಯಬಹುದೋ ಒಂದು ಕಾಯಕಲ್ಪ!

ದೊರೆಯಬಹುದೇ ಒಂದು ಕಾಯಕಲ್ಪ? 

Saturday, February 3, 2024

ಕೀರ್ತನೆ: ಆಟವನಾಡಿದನೋ - ರಾಗ ಆನಂದಭೈರವಿ - ಅಟ್ಟತಾಳ

ಅಯೋಧ್ಯೆಯ ಅಬಾಧಿತವಾದ ಕ್ಷೇತ್ರಮಾಹಾತ್ಮ್ಯವೊಂದು ಕಡೆ, ಅದನ್ನು ಸುತ್ತುವರಿದಿರುವ ವಾದವಿವಾದಗಳಿನ್ನೊಂದುಕಡೆ, ಮತ್ತು ಕ್ಷೇತ್ರದ ಪುನರುತ್ಥಾನದಿಂದ ಕೋಟ್ಯಂತರ ಮಂದಿ ಅನುಭವಿಸಿರುವ ಧನ್ಯತೆ ಮತ್ತೊಂದು ಕಡೆ. ಅವೆಲ್ಲ ಏನೇ ಇರಲಿ, ಈ ಶ್ರದ್ಧಾಭಕ್ತಿಗಳ ಕೇಂದ್ರವಾಗಿ ಮೂಡಿ ನಿಂತಿರುವ ಬಾಲರಾಮ ಮಾತ್ರ ಜಗನ್ಮೋಹನಾಕಾರ; ಆತನದು ಕಿಸುರಿಲ್ಲದ ರೂಪ, ಕಾಡುವ ಸೌಂದರ್ಯ.

ಬಾಲರಾಮ, ಬಾಲಕೃಷ್ಣನಷ್ಟು ಪ್ರಸಿದ್ಧನೇನಲ್ಲ, ಆತನ ಬಾಲ್ಯ ಬಹುಶಃ ಈತನ ಬಾಲ್ಯದಷ್ಟು ವರ್ಣರಂಜಿತವೂ ಅಲ್ಲ - ವಾಲ್ಮೀಕಿಯಂತೂ ವಿವರವಾದ ವರ್ಣನೆಗೆ ಹೋಗುವುದಿಲ್ಲ, ತುಳಸೀದಾಸರೂ ವರ್ಣನೆಯಲ್ಲಿ ತುಸುಮಟ್ಟಿಗೆ ಕೃಷ್ಣನ ಬಾಲ್ಯವನ್ನೇ ಅನುಕರಿಸಿದ್ದಾರಾದರೂ ಬಹುವಿಸ್ತಾರಕ್ಕೆ ಹೋಗಿಲ್ಲ. ರಾಮನ ನಿಜದ ಬಾಲ್ಯ ಹೇಗಿತ್ತೋ! ಕಪಟನಾಟಕಸೂತ್ರಧಾರಿಯಾದ ಕೃಷ್ಣನ ಗುಣಸ್ವಭಾವಗಳು ಆತನ ಬಾಲ್ಯದಲ್ಲೇ ಪ್ರಕಟವಾದಂತೆ, ಮರ್ಯಾದಾಪುರುಷೋತ್ತಮನಾದ (ನಮ್ಮ ಮರ್ಯಾದೆ ರಾಮಣ್ಣ) ರಾಮನ ಗುಣಸ್ವಭಾವವೂ ಆತನ ಬಾಲ್ಯದಲ್ಲೇ ಪ್ರಕಟವಾಗಿದ್ದೀತು, ಆತನ ಮುಗ್ದ ಬಾಲಲೀಲೆಗಳೂ ಆತನಷ್ಟೇ ಧೀರಗಂಭೀರವಾಗಿಯೇ ಇದ್ದೀತು. ತಮ್ಮಂದಿರೇ ಜೊತೆಗಾರರಾಗಿ, ಬಿಲ್ಲುಬಾಣಗಳೇ ಆಟದ ಸಾಮಾನುಗಳಾಗಿ, ವನಸಂಚಾರ-ರಾಕ್ಷಸಸಂಹಾರಗಳೇ ಅವರ ಆಟದ ರಮ್ಯಕಲ್ಪನೆಗಳಾಗಿದ್ದೀತು. ನೇತ್ರೋನ್ಮೀಲನದ ಮುಂಚೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡೂ ಮುಗುಳುನಗೆ ಇಣುಕುವ ಆ ವಿಗ್ರಹವಂತೂ, ಶಬ್ದವೇದಿಯನ್ನು ಪ್ರಯೋಗಿಸುವ ಕುತೂಹಲದಿಂದ ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ಬಾಲಕನ ಕಲ್ಪನೆಯನ್ನೇ ತಂದಿತು. ಹಾಗೆ ಆಡುತ್ತಾ ಉಲ್ಲಾಸಚಿತ್ತನಾಗಿದ್ದ ಮಗುವನ್ನು ಯಾರಾದರೂ "ರಾಮಾ, ಬಾರೋ" ಎಂದು ಕರೆದರೆ ಅದೇ ಮುಖಭಾವದಿಂದ ಓಡಿಬಂದು ಹೊಸ್ತಿಲ ಮೇಲೆ ನಿಲ್ಲುವ ಮಗುವಿನ ಭಂಗಿ ಹೇಗಿದ್ದೀತು? ಶಿಲ್ಪಿ ಅರುಣ್ ಯೋಗಿರಾಜರು ಅರಿತೋ ಅರಿಯದೆಯೋ ಅಂಥದ್ದೊಂದು ಸಹಜಸುಂದರ ಕ್ಷಣವನ್ನು, ಫೋಟೋ ತೆಗೆದಿಟ್ಟಂತೆ ತಮ್ಮ ಶಿಲ್ಪದಲ್ಲಿ ಸೆರೆಹಿಡಿದು ಅಮರಗೊಳಿಸಿಬಿಟ್ಟಿದ್ದಾರೆ. ಶಿಲ್ಪಿ ಕಂಡರಿಸಿರುವ ಆ ಮುಗ್ದ-ಸ್ನಿಗ್ಧಸೌಂದರ್ಯಕ್ಕೆ ನನ್ನದೊಂದು ನುಡಿ ಕಾಣಿಕೆ, ಈ ಕೀರ್ತನರೂಪದ ರಚನೆ-

==========================

ಆಟವನಾಡಿದನೋ - ರಾಮ ಬಿ-
ಲ್ಲಾಟವನಾಡಿದನೋ ||ಪ||

ಆಟವನಾಡಿದ ಹಾಟಕಚೇಲನು|
ಮಾಟನೆ ಬಿಲ್ಲು ಬಾಣಗಳ ಕೈಯಲಿ ಪಿಡಿದು ||ಅ.ಪ||

ಬೆಣ್ಣೆ ಪಾಲ್ಗಳ ಕದಿಯ - ಈ ಬಾಲನು
ಪೆಣ್ಣ ಕಾಡುವುದರಿಯ - ಸಂಮಾನದ
ತಿಣ್ಣಗೆಡಿಸಲರಿಯ - ಒಪ್ಪಿಡಿ
ಮಣ್ಣ ಬಾಯೊಳಗಿಟ್ಟು ಬ್ರಹ್ಮಾಂಡ ತೋರುವ
ಕಣ್ಕಟ್ಟು ಮಾಯವ ಕಾಣದೀ ಕಂದನು ||೧||

ಅಮ್ಮನ ಕಾಡದವ - ತನ್ನ ಘನತೆಗೆ
ಗುಮ್ಮನ ಬೇಡದವ - ಬೇರೆ ಮಕ್ಕಳೊ-
ಳೊಮ್ಮೆಯು ಕೂಡದವ
ತಮ್ಮ ಲಕ್ಷ್ಮಣ ಶತ್ರುಘ್ನ ಭರತರಿರೆ
ತಮ್ಮ ಸಾಮ್ರಾಜ್ಯದೊಳೋಲಾಡುತ ಬಲು ||೨||

ದಟ್ಟ ಕಾಡಿಹುದಂತೆ - ಆ ಕಾಡೊಳು
ಕೆಟ್ಟ ರಕ್ಕಸರಂತೆ - ಆ ರಕ್ಕಸ-
ರ್ಹುಟ್ಟಡಗಿಪುದಂತೆ
ಕಟ್ಟುತ ಬಟ್ಟೆಯ ಪುಟ್ಟ ಕಂಗಳಿಗೆ ಮುಂ-
ದೊಟ್ಟುವ ಬಾಣವ ದಿಟ್ಟ ಬಾಲಕನಿವ ||೩||

ಕಪ್ಪುಗುರುಳ ಸುಳಿಯು - ಮಿನುಗುವ ಆ
ಕಪ್ಪುಗಂಗಳ ಛವಿಯು - ಆ ನಗೆಮುಗು-
ಳೊಪ್ಪೋ ಕದಪ ಸವಿಯು
ಅಪ್ಪ ಬಾರೋ ಎನಲೋಡುತ ಬಂದ ನ-
ಮ್ಮಪ್ಪ ಶ್ರೀ ಸೌಮ್ಯನಾರಣನೆಂಬ ಚೆಲುವನು ||೪||

ಸೂ: ಶಾಸ್ತ್ರೀಯಸಂಗೀತದ ಚೌಕಟ್ಟಿನ ಕೀರ್ತನೆಯ ಶೈಲಿಯಲ್ಲಿರುವ ಇದನ್ನು ಯಾರಾದರೂ ಹಾಡಿದರೆ ಕೇಳಿ ಆನಂದಿಸಲು ಉತ್ಸುಕನಾಗಿದ್ದೇನೆ :)

- 31/01/2024

Friday, February 2, 2024

ಕೀರ್ತನೆ: ಕಂಡೆನೊ ಚೆಲ್ವ ವೆಂಕಟನ - ರಾಗ ಪೂರ್ವಿಕಲ್ಯಾಣಿ - ಅಟ್ಟತಾಳ

ಕಂಡೆನೊ ಚೆಲ್ವ ವೆಂಕಟನ - ಒಳ್ಳೆ
ಗಂಡಾನೆ ಮೇಲೆ ಬೇಟೆಗೆ ಪೋಪ ತೆರದೊಳು ||ಪ||

ಕಂಡ ಕನಸು ಸಟೆಯಲ್ಲ ದರ್ಶನದೊಲು ||ಅ.ಪ||

ಕೊರಳೊಳು ತೋಮಾಲೆಯರಳು - ನೊಸಲೊಳು
ಇರಿಸಿದ ದಪ್ಪ ಕಪ್ಪುರನಾಮವಿರಲು
ಉರದಿ ದೇವಿಯರೊಪ್ಪಿರಲು - ನಮ್ಮ
ತಿರುಮಲೆಯಪ್ಪ ಮೋದದೊಳಿಪ್ಪ ಸೊಬಗನು ||೧||

ಏಕಾಂತಸೇವೆಯೊಳಿರಲು - ಸರ್ವ
ಲೋಕೇಶಗೆ ಗಜವಾಹನವೆನಲು
ಆ ಕರಿರಾಜನೆ ನಡೆತಂದು ಬಾಗಿಲ
ನೂಕಿ ತಾನೊಳಬಂದು ನಿಂತಿಪ್ಪ ಸೋಜಿಗವ ||೨||

ಬೆಟ್ಟವೆ ತಾ ಬಾಗಿತೆನಲು - ಏಳು
ಬೆಟ್ಟದೊಡೆಯ ಗಜವೇರಿ ಕುಳ್ಳಿರಲು
ಕಟ್ಟಿದ ಕಿರುಗತ್ತಿ ಖಣಿಲು - ಖಳರನಿಕ್ಕಿ
ಮೆಟ್ಟಿದ ಕೋದಂಡ ತೂಗುವ ಹೆಗಲು ||೩||

ಮಿಗಿಲಾದ ಗಜವ ತಾನೇರಿ ಮೆಲ್ಲಡಿಯೊಳು
ನಿಗಮಗೋಚರನಗೋಚರನಾಗೋ ಮೊದಲು
ನಗೆಮುಗುಳೊಂದನೆಸೆವ ಆ ಕ್ಷಣದೊಳು
ಜಗದೀಶ ಸೌಮ್ಯನಾರಣನೆಂಬ ಚೆಲುವನ ||೪||

- 26/12/2023

Thursday, December 21, 2023

ಶ್ವಾನವೃತ್ತಾ-ನ್ತ

ಇವತ್ತು ಬೆಳಗ್ಗೆ, ರೂಮಿನ ಪಕ್ಕದಲ್ಲೇ ಕುಳಿತು ಚಿಲಿಪಿಲಿಗುಟ್ಟುತ್ತಿದ್ದ ಹಕ್ಕಿಯೊಂದರ ಸದ್ದಿಗೆ ಎಚ್ಚರಗೊಂಡು, ಎದ್ದು ಮುಖತೊಳೆದು, ಹಬೆಯಾಡುವ ಕಾಫಿಯೊಂದಿಗೆ ಹೊರಗೆ ಪಡಸಾಲೆಗೆ ಬಂದೆ.  ಚುಮುಚುಮು ಬೆಳಗು.  ಚಾಮುಂಡಿ ಬೆಟ್ಟದ ಕಡೆಯಿಂದ ಸೂರ್ಯನ ಮೊದಲ ಕಿರಣಗಳು ಆಗಷ್ಟೇ ಸೂಸುತ್ತಿದ್ದುವು, ಎಲೆಗಳ ಮೇಲಣ ಪನಿ ಇನ್ನೂ ಆರಿರಲಿಲ್ಲ.  ಇವತ್ತು ಏನೇನು ಮಾಡಬೇಕೆಂದು ಯೋಚಿಸುತ್ತಾ ಪಡಸಾಲೆಯಲ್ಲಿದ್ದ ತೂಗುಯ್ಯಾಲೆಯಲ್ಲಿ ಕೂರುತ್ತಿದ್ದಂತೆ, ಆಗಲೇ ಎದ್ದು, ತೋಟವನ್ನೆಲ್ಲಾ ಒಂದು ಸುತ್ತು ಠಳಾಯಿಸಿ ಹೂಬಿಸಿಲಿಗೆ ಮೈಯೊಡ್ಡಿ ಮಲಗಿದ್ದ ನಮ್ಮ ಸಿಂಬಣ್ಣ (ಆಯ್ತು, ಸಿಂಬಕ್ಕನೆಂದೇ ಇರಲಿ) ಓಡಿಬಂದು, ನನ್ನ ಮುಂದೆ ತನ್ನ ಎರಡೂ ಮುಂಗಾಲುಗಳನ್ನು ನೆಲಕ್ಕೆ ಚಾಚಿ, ತಲೆಯನ್ನದರಲ್ಲಿ ಹುದುಗಿಸುತ್ತಾ ಅರ್ಧದಂಡನಮಸ್ಕಾರ ಮಾಡಿದಳು (ಅರ್ಧದಂಡವೇ ಎಂದು ಮೂಗು ಮುರಿಯಬೇಡಿ, ನಾಯಿಗಳಿಗೆ ಅರ್ಧದಂಡವೇ ಶಾಸ್ತ್ರವಿಹಿತ; ದೀರ್ಘದಂಡ ಈ ಕಾಲದಲ್ಲಿ ಮನುಷ್ಯರಿಗೂ ಆಗದ ಕಸರತ್ತು).  ಎಲಯೆಲಾ, ಮೊನ್ನೆಮೊನ್ನೆಯವರೆಗೂ ಚಪ್ಪಲಿ, ಪುಸ್ತಕ ಹೀಗೆ ಸಿಕ್ಕಿದ್ದನ್ನು ಹೊತ್ತೊಯ್ದು ಕಚ್ಚಿಕಚ್ಚಿ ಚಿಂದಿ ಮಾಡಿ ಹಾಕುತ್ತಿದ್ದ ಈಕೆ ನೋಡನೋಡುತ್ತಿದ್ದಂತೆ ಇಷ್ಟು ಸಂಸ್ಕಾರವಂತೆಯಾಗಿಬಿಟ್ಟಳಲ್ಲ, ಈಗಿನ ಕಾಲದಲ್ಲಿ ಮನುಷ್ಯರೇ ನಕ್ಕು ಕಡೆಗಣಿಸುವ ನಮಸ್ಕಾರವೆಂಬ ಆತ್ಮೋದ್ಧಾರಕಕ್ರಿಯೆಯನ್ನು, ನಾಯಿಯಾದರೂ ಈಕೆ ಮನಗಂಡು ಅಳವಡಿಸಿಕೊಂಡಿದ್ದಾಳಲ್ಲಾ ಎಂಬ ಅಚ್ಚರಿಯೊಂದಿಗೆ, ಮನಸ್ಸೂ ತುಂಬಿ ಬಂತು.  ತಲೆಸವರಿ, ಮನದುಂಬಿ ಆಶೀರ್ವದಿಸುತ್ತಾ, ಹಿಂದೀ ಮಹಾಭಾರತದ ಭೀಷ್ಮದ್ರೋಣರಂತೆ (ಗಡ್ಡವಿಲ್ಲದುದರಿಂದ ಗಡ್ಡ ನೀವಿಕೊಳ್ಳಲಾಗಲಿಲ್ಲ) "ದೀರ್ಘಾಯುಷ್ಮಾನ್ ಭವ್" ಎಂದೆ.

ಅವಳಿಗೆ ನನ್ನ ಆಶೀರ್ವಚನವೇನು ಅರ್ಥವಾದಂತೆ ಕಾಣಲಿಲ್ಲ, ಬದಲಿಗೆ ಈ ಹೊಸ ಪೆಚ್ಚಿಗೆ ಅಚ್ಚರಿಗೊಂಡು ಕಣ್ಣರಳಿಸಿ ನನ್ನನ್ನೇ ನೋಡುತ್ತ "ಭೌ ಭೌ" ಎಂದಳು.  ಓಹೋ, ಸರಿಸರಿ ಎಂದು ತಿದ್ದಿಕೊಂಡು "ದೀರ್ಘಾಯುಷ್ಮಾನ್ ಭೌ ಭೌ" ಎಂದೆ.  ಈ 'ತಿದ್ದುಪಡಿ'ಯಿಂದಲೂ ಅವಳಿಗೇನೂ ತೃಪ್ತಿಯಾದಂತೆ ಕಾಣಲಿಲ್ಲ.  ಅಲ್ಲೇ ಇಟ್ಟಿದ್ದ ಬಿಸ್ಕೆಟ್ಟಿನ ಡಬ್ಬದೆಡೆ ನೋಡಿ ಮತ್ತೆ ನನ್ನ ಕಡೆ ತಿರುಗಿ ದೀರ್ಘಪ್ಲುತಸಮನ್ವಿತವಾಗಿ "ಭೌವ್ ವೌವ್" ಎಂದಳು.  ಓಹೋ, ತಿಳಿಯಿತು - ಈ ನಮಸ್ಕಾರವೆಲ್ಲಾ ಯಾವ ಆತ್ಮೋದ್ಧಾರಕ್ಕಾಗೂ ಅಲ್ಲ, ಕೇವಲ ಒಂದು ಹಿಡಿ ಬಿಸ್ಕೆಟ್ಟಿಗಾಗಿ (ಮನಸ್ಸಿಗೆ ಪಿಚ್ಚೆನ್ನಿಸಿತು)! ಅಷ್ಟಲ್ಲದೇ ದಾಸರು ಹೇಳಿದರೇ - "ಎಲ್ಲರು ಮಾಡುವುದು ಹೊಟ್ಟೆಗಾಗಿ".  ಆದರೆ ಹೊಟ್ಟೆಗಾಗಿ ನರಮನುಷ್ಯರು ಮಾಡುವ ಗಿಲೀಟುಗಳನ್ನು ನಾಯಿಗಳೂ ಅಳವಡಿಸಿಕೊಂಡಿವೆಯೆಂಬುದು ನನಗಾದರೂ ಹೇಗೆ ತಿಳಿಯಬೇಕು? "ಸರಿಕಣವ್ವ" ಎಂದುಕೊಂಡು, ಎದ್ದು ಹೋಗಿ ಬಿಸ್ಕೆಟ್ ಡಬ್ಬದಿಂದ ಒಂದು ಹಿಡಿ ಬಿಸ್ಕೆಟ್ ತೆಗೆದು ತಟ್ಟೆಗೆ ಹಾಕಿದೆ, ಬಟ್ಟಲಿಗೆ ಹಾಲು ತಂದು ಸುರಿದೆ.  ಉಲ್ಲಾಸದಿಂದ ಬಾಲವಾಡಿಸುತ್ತಾ ಬೆಳಗಿನ ಉಪಾಹಾರಕ್ಕೆ ಕುಳಿತಳು.  ಅವಳು ಮೈಮುರಿದದ್ದನ್ನು ನಾನು ನಮಸ್ಕಾರವೆಂದುಕೊಂಡದ್ದು, ಮತ್ತೆ ಆ 'ನಮಸ್ಕಾರ'ವನ್ನು ಬಿಸ್ಕೆಟ್ಟಿಗಾಗಿ ಮಾಡಿದ ಗಿಲೀಟೆಂದುಕೊಂಡದ್ದು - ನನ್ನ ಈ ಯಾವ ಮನೋವಿಕಾರಗಳೂ ಆಕೆಯನ್ನು ಬಾಧಿಸಿದಂತೆ ಕಾಣಲಿಲ್ಲ.  ಮುಗುಳ್ನಗುತ್ತಾ ಮತ್ತೊಮ್ಮೆ "ದೀರ್ಘಾಯುಷ್ಮಾನ್ ಭೌ ಭೌ" ಎಂದು ತಲೆ ನೇವರಿಸಿದೆ.  ತಿನ್ನುತ್ತಲೇ ಹಗುರವಾಗಿ ಬಾಲವಾಡಿಸಿದಳು.  ಇನ್ನಷ್ಟು ಆಪ್ತತೆಯಿಂದ "ದೀರ್ಘಾಯುಷ್ಮಾನ್ ಭೌಭೌ ಭೌಭೌ" ಎಂದೆ.  ಅರೆ! ಒಂದು ಕ್ಷಣ ಸ್ತಬ್ಧನಾದೆ.  ಮತ್ತೊಮ್ಮೆ ಅದನ್ನೇ ಹೇಳಿಕೊಂಡೆ - "ದೀರ್ಘಾಯುಷ್ಮಾನ್ ಭೌಭೌ ಭೌಭೌ" - ಈ ಸಾಲು ಅದೇಕೋ ಪರಿಚಿತವೆನಿಸಿತು.  ಈಗಷ್ಟೇ ಮೂಡಿದ ಸಾಲುಗಳು, ಪರಿಚಿತವಿರಲು ಹೇಗೆ ಸಾಧ್ಯ?  ಪೂರ್ವಜನ್ಮದ ವಾಸನೆಯೋ!  ಮತ್ತೊಂದೆರಡು ಬಾರಿ ಹೇಳಿಕೊಂಡಾಗ ಹೊಳೆಯಿತು - ಪರಿಚಿತವೆನ್ನಿಸಿದ್ದು ಸಾಲಲ್ಲ, ಅದರ ಲಯ; ಪರಿಚಿತವೆಂದರೆ ತೀರ ಪರಿಚಿತವಲ್ಲ, ಅಪರಿಚಿತವೂ ಅಲ್ಲ; ಚಿಂತಿಸುತ್ತಿದ್ದಂತೆ ಒಂದೆರಡು ಕ್ಷಣದಲ್ಲೇ ಸೂತ್ರವಾಕ್ಯವೂ ನೆನಪಾಗಿಬಿಟ್ಟಿತು - "ವಿದ್ಯುನ್ಮಾಲಾ ಮೋ ಮೋ ಗೋ ಗಃ" - ವಿದ್ಯುನ್ಮಾಲಾ ಎಂಬ ಛಂದಸ್ಸಿನ ಲಕ್ಷಣವಾಕ್ಯವದು.  ತಮಾಷೆಗೆಂದು ನುಡಿದ ಮಾತು ಒಂದು ಛಂದೋಬದ್ಧವಾದ ಸಾಲಾಗಿಬಿಟ್ಟಿತ್ತು!

ಒಂದು ಕ್ಷಣ, ಮೈಯಲ್ಲಿ ವಿದ್ಯುತ್ಸಂಚಾರವಾದಂತಾಯಿತು (ವಿದ್ಯುನ್ಮಾಲೆಯ ವಿಷಯವಲ್ಲವೇ ಮತ್ತೆ?).  ಆದಿಕವಿ ವಾಲ್ಮೀಕಿಗೂ ಆತನ ಸುಪ್ರಸಿದ್ಧವಾದ "ಮಾನಿಷಾದಪ್ರತಿಷ್ಠಾಂ..." ಸಾಲು ಹೊಮ್ಮಿದನಂತರ ಇಂಥದ್ದೇ ರೋಮಾಂಚನವಾಗಿರಬೇಕು-

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಸ್ಸಮಾಃ|

ಯತ್ಕ್ರೌಂಚಮಿಥುನಾದೇಕಂ ಅವಧೀಃ ಕಾಮಮೋಹಿತಮ್||

ಎಲೋ ಬೇಡನೇ, ಕಾಮಮೋಹಿತವಾಗಿದ್ದ ಈ ಕ್ರೌಂಚಪಕ್ಷಿಗಳಲ್ಲೊಂದನ್ನು ಹೊಡೆದು ಹಾಕಿದ ನೀನು ಬಹುಕಾಲ ಬದುಕಿರಬಾರದು - ಮಧುರವಾಗಿ ಕೂಗುತ್ತಾ ಒಂದನ್ನೊಂದು ಬಿಡದೇ ಹಾರಾಡುತ್ತಿದ್ದ ಕ್ರೌಂಚಪಕ್ಷಿಗಳ ಜೋಡಿಯಲ್ಲಿ ಒಂದನ್ನು ಬೇಡನೊಬ್ಬನು ಹೊಡೆದುಹಾಕಿದಾಗ, ರಕ್ತಸುರಿಸುತ್ತಾ ಕೆಳಬಿದ್ದ ಗಂಡು ಹಕ್ಕಿ, ಅದರ ವಿಯೋಗದಿಂದ ಕರುಣಾಜನಕವಾಗಿ ಆಕ್ರಂದಿಸುತ್ತಿದ್ದ ಹೆಣ್ಣುಹಕ್ಕಿಯ ಗೋಳನ್ನು ನೋಡಲಾರದೇ ವಾಲ್ಮೀಕಿಯ ಬಾಯಿಂದ ಹೊರಟ ಶಾಪವಾಕ್ಯವಿದು.

ದುಃಖದಿಂದ ಮಾತೇನೋ ಹೊರಬಿದ್ದಿತು.  ಆಡಿದ ಮರುಕ್ಷಣದಲ್ಲಿಯೇ ವಾಲ್ಮೀಕಿಮುನಿಗೆ ಅಚ್ಚರಿಯಾಯಿತಂತೆ, ಏಕೆಂದರೆ ಅದು ಕೇವಲ ಮಾತಾಗಿರಲಿಲ್ಲ, ಲಯಬದ್ಧವಾದ ಶ್ಲೋಕವಾಗಿತ್ತು - ಎಲಾ, ದುಃಖದಲ್ಲಿ ನಾನು ಏನು ಮಾತಾಡಿದೆ (ಶೋಕಾರ್ತೇನಾಸ್ಯ ಶಕುನೇಃ ಕಿಮಿದಂ ವ್ಯಾಹೃತಂ ಮಯಾ)!  ಶೋಕದಲ್ಲಿ ಆಡಿದ ಮಾತು ಪಾದಬದ್ಧವಾಗಿ, ಸಮಾಕ್ಷರಗಳಿಂದ ಕೂಡಿ, ತಂತಿಯ ಲಯಕ್ಕೆ ಹೊಂದುವಂತೆ ಮೂಡಿತಲ್ಲಾ (ಪಾದಬದ್ಧೋSಕ್ಷರಸಮಸ್ತಂತ್ರೀಲಯಸಮನ್ವಿತಃ); ಶೋಕದಿಂದ ಒಡಮೂಡಿದ ಮಾತು ಶ್ಲೋಕವಾಗಿಯೇ ಉಳಿಯಲಿ (ಶೋಕಾರ್ತಸ್ಯ ಪ್ರವೃತ್ತೋ ಮೇ ಶ್ಲೋಕೋ ಭವತು ನಾನ್ಯಥಾ) ಎಂದು ಶಿಷ್ಯನಾದ ಭರದ್ವಾಜನಿಗೆ ಹೇಳಿದರಂತೆ.  ಅಲ್ಲಿಂದ ನದಿಯಲ್ಲಿ ಸ್ನಾನ ಮುಗಿಸಿಕೊಂಡು ಆಶ್ರಮಕ್ಕೆ ಹಿಂದಿರುಗಿದ ಮೇಲೂ ಮುನಿಗೆ ಅದೇ ಗುಂಗು - ಶೋಕದಲ್ಲಿ ಆಡಿದ ಮಾತು ಶ್ಲೋಕವಾಯಿತಲ್ಲ, ಎಂತಹ ಸೋಜಿಗ!  ಆಗ ಬ್ರಹ್ಮದೇವನು ಪ್ರತ್ಯಕ್ಷನಾಗಿ, ಇದು ಆಕಸ್ಮಿಕವೇನಲ್ಲ, ನನ್ನ ಇಚ್ಛೆಯಿಂದಲೇ ಈ ವಾಣಿಯು ನಿನ್ನ ಮುಖದಿಂದ ಹೊರಹೊಮ್ಮಿತು (ಮಚ್ಛಂದಾದೇವ ತೇ ಬ್ರಹ್ಮನ್ ಪ್ರವೃತ್ತೇಯಂ ಸರಸ್ವತೀ); ನೀನು ಮಹಾತ್ಮನಾದ ರಾಮನ ಚರಿತ್ರೆಯನ್ನು ರಚಿಸು ಎಂದು ಹೇಳಿ ಕಣ್ಮರೆಯಾದನಂತೆ.  ಆನಂತರ ವಾಲ್ಮೀಕಿಮುನಿಗಳು ಅದೇ ಶ್ಲೋಕವನ್ನು ಮತ್ತೆಮತ್ತೆ ಹೇಳುತ್ತಾ ಅದರ ಲಯವನ್ನು ಮನಸ್ಸಿನಲ್ಲಿ ಗಟ್ಟಿಮಾಡಿಕೊಳ್ಳುತ್ತಿದ್ದಂತೆ ರಾಮಕತೆಯು ಅದೇ ಅನುಷ್ಟುಪ್ ಛಂದಸ್ಸಿನಲ್ಲಿ ಮೂಡಲಾರಂಭಿಸಿತು.  ಇದು ರಾಮಾಯಣಾವತಾರದ ಕತೆ.

ಅಲ್ಲ, ವಾಲ್ಮೀಕಿಯ ಮಾತು ಬಂದದ್ದಕ್ಕೆ ಇಷ್ಟು ಹೇಳಬೇಕಾಯಿತಷ್ಟೇ.  ಈಗೇನು?  ವಾಲ್ಮೀಕಿಯಂತೆಯೇ ನಿನ್ನದೊಂದು ರಾಮಾಯಣ ಬರಲಿದೆಯೋ ಎಂದು (ಮುಸಿನಗುತ್ತಾ) ಕೇಳುತ್ತೀರೆಂದು ನನಗೆ ಗೊತ್ತು.  ಸದ್ಯ, ಸ್ವಾಮೀ ಆ ಘಟನೆಯನಂತರ ಅದೆಷ್ಟು ಬೇಡರು ಹುಟ್ಟಿಲ್ಲ, ಅದೆಷ್ಟು ಕ್ರೌಂಚಪಕ್ಷಿಗಳನ್ನು ಕೊಂದಿಲ್ಲ - ಕ್ರೌಂಚಪಕ್ಷಿಯೊಂದು ಬಿದ್ದಾಗೆಲ್ಲಾ ಒಂದು ರಾಮಾಯಣ ಹುಟ್ಟಿದ್ದಿದ್ದರೆ "ರಾಮಾಯಣದ ಕವಿಗಳ ಭಾರದಲಿ" ತಿಣುಕುತ್ತಿದ್ದ ಫಣಿರಾಯ ಈ ಹೊತ್ತಿಗೆ ನೆಲಕಚ್ಚಿಯೇ ಬಿಡುತ್ತಿದ್ದ.   ಇಷ್ಟಕ್ಕೂ ರಾಮಾಯಣ ಬರೆಯುವುದೇನು ಸಾಮಾನ್ಯವೇ?  ಛಂದಸ್ಸಿನ ಸಾಲೊಂದು ಹೊಳೆದರೆ ರಾಮಾಯಣವೇ ಹೊಳೆದುಬಿಡುವುದೇ?  ಬ್ರಹ್ಮ ಪ್ರತ್ಯಕ್ಷವಾಗಬೇಕು, ಕತೆ ಬರೆಯೆಂದು ಆಶೀರ್ವದಿಸಬೇಕು, ಎಲ್ಲಕ್ಕಿಂತ ಹೆಚ್ಚಾಗಿ ಹುತ್ತಗಟ್ಟಬೇಕು - "ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು, ಪುರುಷೋತ್ತಮನ ಆ ಅಂಥ ರೂಪ-ರೇಖೆ?"  ನನ್ನ ಸುತ್ತ ಹುತ್ತಗಟ್ಟಿಕೊಂಡರೆ ಈ ಮನೆ ಈ ಸಂಸಾರ ನೋಡಿಕೊಳ್ಳುವರಾರು?  ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಸಿಂಬಣ್ಣನಿಗೆ ಬಿಸ್ಕೇಟು ಹಾಕುವವರಾರು?  ಇದಕ್ಕೆಲ್ಲ ಒಂದು ವ್ಯವಸ್ಥೆಯಾಗದೇ, ಮೋಕ್ಷವೇ ಸಿಗುತ್ತದೆಂದರೂ ಹೋಗಲುಂಟೇ?  ಏನೋ, ವಾಲ್ಮೀಕಿಗಾದಂತೆ ನಮಗೂ ಒಂದು ಅನುಭವವಾಯಿತು ಎಂದು ಹೇಳಬಂದೆನಷ್ಟೇ- "ಒಬ್ಬೊಬ್ಬ ಗಂಡನಲಿ ಶ್ರೀರಾಮನಡಗಿಹನು" ಕವಿವಾಣಿಯೇ ಇಲ್ಲವೇ? "ಒಂದೊಂದು ಹಳ್ಳಿಯಲಿ ಒಬ್ಬೊಬ್ಬ ಜಸವಂತನಾಗದಿಹ ವಾಲ್ಮೀಕಿ ನೆಲೆಸಿಹನು..." ಇರಬಹುದು, ಶ್ರೀರಾಮನ ಹೋಲಿಕೆಯೆಂದ ಮಾತ್ರಕ್ಕೆ ಪತ್ನಿಯನ್ನು ಕಾಡಿಗಟ್ಟಲಾದೀತೇ?  ಶ್ರೀಕೃಷ್ಣನಂಥವನು ಎಂದ ಮಾತ್ರಕ್ಕೆ, ಹದಿನಾರು ಸಾವಿರ ಬೇಡ ಎಂಟು ಮಂದಿಯನ್ನಾದರೂ ಕಟ್ಟಿಕೊಂಡು ಜಯಿಸಲಾದೀತೇ?  ವಾಲ್ಮೀಕಿಯಂತೆ ನನಗೂ ಒಂದು ಛಂದಸ್ಫುರಣವಾಯಿತೆಂದ ಮಾತ್ರಕ್ಕೆ ಮುಂದುವರೆದು ರಾಮಾಯಣವನ್ನೂ ಬರೆಯಲಾದೀತೇ?

ಈ ರಾಮಾಯಣವೆಲ್ಲ ನಮಗೇಕೆ?  ವಿದ್ಯುನ್ಮಾಲೆಯ ವಿಷಯಕ್ಕೆ ಮರಳೋಣ.  ವಿದ್ಯುನ್ಮಾಲೆ, ಎಂಟಕ್ಷರದ ಅಕ್ಷರಗಣದ ವೃತ್ತ - ವಿದ್ಯುನ್ಮಾಲಾ ಮೋ ಮೋ ಗೋ ಗಃ (ವಿದ್ಯುನ್ಮಾಲೆಯಲ್ಲಿ ಮಗಣ, ಮಗಣ, ಗುರು ಮತ್ತೊಂದು ಗುರು).  ಮಗಣವೆಂದರೆ ಮೂರು ಗುರ್ವಕ್ಷರಗಳ ಗುಂಪು (ಎಂದರೆ ಮೂರು ದೀರ್ಘಾಕ್ಷರಗಳು); ಅಂಥವೆರಡು ಗಣಗಳು ಮತ್ತೆ ಎರಡು ಗುರು - ಎಂದರೆ ಎಂಟು ಗುರ್ವಕ್ಷರವಿರುವ ಸರ್ವಗುರು ವೃತ್ತವಿದು - ನಾನಾನಾ ನಾನಾನಾ ನಾನಾ ಎಂಬಂತೆ - ಸ್ವಲ್ಪ ಢಿಕ್ಕಿಹೊಡೆದಂತೆ ಚಲಿಸುವ ಅಡ್ಡಡ್ಡ ಚಲನೆ ಈ ಸಾಲಿನದು.

ರಾಮಂ ಸೀತಾರಾಮಂ ವಂದೇ

ಸೌಮಿತ್ರ್ಯಗ್ರೇಜಾತಂ ಶಾಂತಮ್

ವೈದೇಹೀಕಾಂತಂ ಕೌಸಲ್ಯಾ

ನಂದಂ ತಂ ಕೋದಂಡಸ್ಕಂಧಂ


ಹೀಗೆ ಬರುತ್ತದೆ.  ಇಂಥದ್ದನ್ನೇ ಕನ್ನಡದಲ್ಲೂ ಮಾಡಬಹುದು


ಬುದ್ಧಂ ತಾನೆದ್ದಾಗಳ್ ಲೋಕಂ

ನಿದ್ರಾಸ್ವಪ್ನಾವಸ್ಥಾಬದ್ಧಂ

ಸಿದ್ಧಂ ತಾನೆಯ್ದಾಗಳ್ ಲೋಕಂ

ಮತ್ತಂ ನಿದ್ರಾವಸ್ಥಾಬದ್ಧಂ

(ಬುದ್ಧ ಎದ್ದಾಗ ಲೋಕ ನಿದ್ರಾಬದ್ಧವಾಗಿ ಕನಸು ಕಾಣುತ್ತಿತ್ತು; ಆತ ಸಿದ್ಧನಾಗಿ ಹೊರಟುಹೋದಾಗಲೂ ಲೋಕ ನಿದ್ರಾಬದ್ಧವಾಗಿಯೇ ಇತ್ತು)

ಛಂದೋಂಬುದಿಯಲ್ಲಿ ನಾಗವರ್ಮನು ವಿದ್ಯುನ್ಮಾಲೆಯ ಲಕ್ಷಣವನ್ನು ಹೀಗೆ ಕೊಡುತ್ತಾನೆ (ಅದೇ ಛಂದಸ್ಸಿನಲ್ಲಿ)-

ಪಿಂತುರ್ವೀಯುಗ್ಮಂಗಳ್ ಬರ್ಕುಂ

ಮುಂತೀಶಾನದ್ವಂದ್ವಂ ನಿಲ್ಕುಂ

ಸಂತಂ ನೀ ಕೇಳಂಭೋಜಾಕ್ಷೀ

ಕಾಂತಂ ವಿದ್ಯುನ್ಮಾಲಾವೃತ್ತಂ

ತಾವರೆಗಣ್ಣವಳೇ, ಗಮನಿಸಿ ಕೇಳು, ಮನೋಹರವಾದ ವಿದ್ಯುನ್ಮಾಲಾವೃತ್ತದಲ್ಲಿ ಮೊದಲು ಉರ್ವೀಯುಗ್ಮ (ಎರಡು ಭೂಮಿಗಳು) ಮತ್ತೆ ಈಶಾನಯುಗ್ಮ (ಇಬ್ಬರು ಹರರು); ಭೂಮಿ ಎಂದರೆ ಮಗಣ (ಮೂರು ಗುರುವಿನ ಗುಂಪು - ನಾನಾನಾ ಎಂಬಂತೆ); ಹರ ಎಂದರೆ ಗುರು, ದೀರ್ಘಾಕ್ಷರ.  ವಿದ್ಯುನ್ಮಾಲೆಯಲ್ಲಿ ಎರಡು ಮಗಣ (ನಾನಾನಾ ನಾನಾನಾ ಎಂಬಂತೆ), ಮತ್ತು ಎರಡು ಗುರು (ನಾ ನಾ).  ಇದು ಪ್ರಸಿದ್ಧಕರ್ಣಾಟಕವೃತ್ತಗಳಷ್ಟು (ಮತ್ತೇಭವಿಕ್ರೀಡಿತ, ಶಾರ್ದೂಲವಿಕ್ರೀಡಿತ, ಉತ್ಪಲಮಾಲಾ, ಚಂಪಕಮಾಲಾ, ಸ್ರಗ್ಧರಾ, ಮಹಾಸ್ರಗ್ಧರಾ), ಅಥವಾ ವಸಂತತಿಲಕ, ಹರಿಣೀ, ಮಂದಾಕ್ರಾಂತ ಮುಂತಾದ ಇತರ ವೃತ್ತಗಳಷ್ಟು ಪ್ರಸಿದ್ಧವಲ್ಲವಾದರೂ ಈ ಲಯ ತೀರ ಅಪರಿಚಿತವೇನಲ್ಲ.

ಶ್ರೀ ವಾದಿರಾಜರಿಗೆ ಸಂಬಂಧಿಸಿದ್ದೆಂದು ಒಂದು ಕತೆ ಪ್ರಚಲಿತವಾಗಿದೆ - ವಾದಿರಾಜರ ಶಿಷ್ಯರಲ್ಲೊಬ್ಬ, ನಾರಾಯಣಾಚಾರ್ಯನೆಂಬವನು ಬಹಳ ದೊಡ್ಡ ವಿದ್ವಾಂಸ, ಆದರೆ ವಿದ್ಯೆಗೆ ತಕ್ಕ ವಿನಯವಿಲ್ಲ.  ವಿದ್ಯಾಮದದಿಂದ ಯಾರ ಮುಖ ಮುರಿಯಲೂ ಹಿಂಜರಿಯುತ್ತಿರಲಿಲ್ಲ.  ಒಮ್ಮೆ ಗುರುಗಳಾದ ಶ್ರೀ ವ್ಯಾಸರಾಜರನ್ನು ಸಂದರ್ಶಿಸಲು ವಾದಿರಾಜರು ಶಿಷ್ಯಸಮೇತ ಹಂಪಿಗೆ ಬಂದಿದ್ದಾಗ, ಗುರುಗಳ ದರ್ಶನಕ್ಕೆ ತಡವಾಗಬಹುದೆಂದು ತಮ್ಮ ಸ್ನಾನಾಹ್ನಿಕಗಳನ್ನು ಸ್ವಲ್ಪ ಚುಟುಕಾಗಿಸಿದರಂತೆ.  ಶಿಷ್ಯನಿಗೆ ಅದೇ ನೆಪವಾಯಿತು - ಗುರುಗಳಾದ ವಾದಿರಾಜರನ್ನೂ ವ್ಯಾಸರಾಜರನ್ನೂ ತುಂಬಾ ಹಂಗಿಸಿದನಂತೆ.  ಗುರುಗಳನ್ನೂ ಬಿಡದಿದ್ದ ಶಿಷ್ಯನಮೇಲೆ ವಿಪರೀತ ಸಿಟ್ಟಿಗೆದ್ದ ವಾದಿರಾಜರು, ವಿದ್ಯಾಹಂಕಾರಿಯಾದ ನೀನು ಬ್ರಹ್ಮರಾಕ್ಷಸನಾಗು ಎಂದು ಶಪಿಸಿ ಹೊರಟುಹೋದರಂತೆ.  ಅಂದಿನಿಂದ ಹಂಪಿಯ ದಾರಿಯಲ್ಲಿದ್ದ ಭಾರೀ ಮರವೊಂದರ ಮೇಲೆ ನಾರಾಯಣಾಚಾರ್ಯ ಉರ್ಫ್ ಬ್ರಹ್ಮರಾಕ್ಷಸನ ವಾಸ.  ಆ ದಾರಿಯಲ್ಲಿ ಹೋಗಬರುವವರಿಗೆಲ್ಲ ಧುತ್ತನೆ ಪ್ರತ್ಯಕ್ಷನಾಗುವನು, ಬೆದರಿ ಮಿಡುಕುವ ದಾರಿಗನಿಗೆ ಒಂದು ಶರತ್ತು ಹಾಕುವನು - "ಒಂದು ಪ್ರಶ್ನೆ ಕೇಳುತ್ತೇನೆ, ಉತ್ತರಿಸಿದರೆ ನೀನು ಬಚಾವು".  ದಾರಿಗ ಒಪ್ಪಿ ತಲೆಯಾಡಿಸುತ್ತಿದ್ದಂತೆ ಬ್ರಹ್ಮರಾಕ್ಷಸ ಗರ್ಜಿಸಿ ಕೇಳುವನು - "ಆಕಾಮಾವೈ ಕೋ ನಸ್ನಾತಃ?".  ಅರ್ಥವೇ ಆಗದ ಪ್ರಶ್ನೆಗೆ ದಾರಿಗ ಏನುತ್ತರಿಸಿಯಾನು? ಅಂದಿಗೆ ಆತ ಬ್ರಹ್ಮರಾಕ್ಷನ ಹೊಟ್ಟೆಗೆ ಆಹಾರ! ಜನ ಆ ದಾರಿಯಲ್ಲಿ ಓಡಾಡುವುದನ್ನೇ ಬಿಡಲಾರಂಭಿಸಿದರು.  ಹೀಗಿರಲೊಮ್ಮೆ ಕೆಲಕಾಲಾನಂತರ ಸ್ವತಃ ವಾದಿರಾಜರು ಆ ದಾರಿಯಲ್ಲೇ ಬಂದರು.  ಮುರಿದು ತಿನ್ನುವ ಬ್ರಹ್ಮರಾಕ್ಷಸನಿಗೆ ಯಾರಾದರೇನು? ಧುತ್ತನೆ ಮರದಿಂದ ಧುಮುಕಿದವನೇ ಗರ್ಜಿಸಿದ - "ಆಕಾಮಾವೈ ಕೋ ನಸ್ನಾತಃ".  ಕೊಂಚವೂ ವಿಚಲಿತರಾಗದ ವಾದಿರಾಜರು ಉತ್ತರಿಸಿದರು - "ರಂಡಾಪುತ್ರ ತ್ವಂ ನಸ್ನಾತಃ" (ಆಷಾಢ ಕಾರ್ತಿಕ ಮಾಘ ವೈಶಾಖಗಳಲ್ಲಿ (ತೀರ್ಥ)ಸ್ನಾನ ಮಾಡದವನು ಯಾರು - ಇದು ಬ್ರಹ್ಮರಾಕ್ಷಸನ ಪ್ರಶ್ನೆ.  ಆ ಪುಣ್ಯಮಾಸಗಳಲ್ಲಿ ಶಾಸ್ತ್ರವಿಹಿತವಾದ ತೀರ್ಥಸ್ನಾನ ಮಾಡದ ಪಾಪಿ, ನೀರು ಕಂಡರೆ ಹೆದರುವ ನೀನಲ್ಲದೇ ಇನ್ನಾರಾಗಿರಲು ಸಾಧ್ಯ?  ಇದು ಉತ್ತರ - ರಂಡಾಪುತ್ರ (ರಂಡೆಯ ಮಗನೇ) ಈ ಬಗೆಯ ಬೈಗಳು ಎಲ್ಲ ಕಾಲದಲ್ಲೂ ಎಲ್ಲ ಸ್ತರಗಳಲ್ಲೂ ಇತ್ತು).  ಬ್ರಹ್ಮರಾಕ್ಷಸನಿಗೆ ಪೂರ್ವಜನ್ಮಸ್ಮರಣೆ ಬಂತಂತೆ - ತನ್ನನ್ನು ಶಪಿಸಿ ಈ ಗತಿಗೆ ತಂದವರೇ ಇವರು.  ತಿಳಿವು ತಿಳಿದು ಪಶ್ಚಾತ್ತಾಪವಾಗುವುದರ ಬದಲು ಸಿಟ್ಟು ಭುಗಿಲೆದ್ದಿತಂತೆ - ವಾದಿರಾಜರಿಗೆ ವಾದಕ್ಕಾಹ್ವಾನ ನೀಡಿತು ಬ್ರಹ್ಮರಾಕ್ಷಸ.  ತಾನು ಗೆದ್ದರೆ ವಾದಿರಾಜರನ್ನು ಮುರಿದು ತಿನ್ನುವುದು; ತಾನು ಸೋತರೆ, ಅವರ ದಾಸನಾಗಿ ಪಲ್ಲಕ್ಕಿ ಹೊರುವುದು.  ಕೊನೆಗೆ ಬ್ರಹ್ಮರಾಕ್ಷಸನೇ ಪಲ್ಲಕ್ಕಿ ಹೊರಬೇಕಾಯಿತೆಂದು ಬೇರೆ ಹೇಳಬೇಕಾಗಿಲ್ಲವಲ್ಲ.

ಇರಲಿ, ಬಾಲ್ಯದಲ್ಲಿ ಕೇಳಿದ ಕತೆ - ಕತೆಗೆ ಕಾಲಿಲ್ಲ, ಇನ್ನು ಆಧಾರವನ್ನೆಲ್ಲಿ ತರುವುದು? ಆಮೇಲೆ ಇದನ್ನು ಬೇಲೂರು ಕೇಶವದಾಸರ ಕರ್ಣಾಟಕ ಭಕ್ತವಿಜಯದಲ್ಲೂ ಓದಿದ್ದೇನೆ - ಆಕರ ತಿಳಿಯದು.  ಅದೇನೇ ಇರಲಿ, ಕತೆಯ ವಿಮರ್ಶೆ ನಮ್ಮ ತಲೆನೋವಲ್ಲ.  ಮೇಲಿನ ಸಂಭಾಷಣೆ - "ಆಕಾಮಾವೈ ಕೋ ನಸ್ನಾತಃ", "ರಂಡಾಪುತ್ರ ತ್ವಂ ನಸ್ನಾತಃ" ವಿದ್ಯುನ್ಮಾಲಾವೃತ್ತದಲ್ಲೇ ಇದೆಯೆನ್ನುವುದಕ್ಕೆ ಇಷ್ಟು ಹೇಳಬೇಕಾಯಿತು.

ವಿಚಿತ್ರ ನಡೆಯುಳ್ಳ ಈ ವೃತ್ತ, ಹಲವು ಚಮತ್ಕಾರದ ರಚನೆಗಳಿಗೆ ಸ್ಫೂರ್ತಿಯಾಗಿದೆ.  ಉದಾಹರಣೆಗೆ, ವೆಂಕಟಾಧ್ವರಿಯ "ಶ್ರೀ ರಾಘವ ಯಾದವೀಯಂ" ಎಂಬ ದ್ವಿಸಂಧಾನಕಾವ್ಯ (ದ್ವಿಸಂಧಾನಕಾವ್ಯವೆಂದರೆ ನೇರವಾಗಿ ಓದಿದರೆ ಒಂದು ಕತೆ, ಅವೇ ಶ್ಲೋಕಗಳನ್ನು ತಿರುವುಮುರುವಾಗಿ ಓದಿದರೆ ಇನ್ನೊಂದು ಕತೆ - ಹೀಗೆ ಇಡೀ ಕಾವ್ಯ ಎರಡೆರಡು ಕತೆ ಹೇಳುವಂಥದ್ದು).  ಉದಾಹರಣೆಯಾಗಿ ಇದರ ಮೊದಲ ಶ್ಲೋಕ ನೋಡಿ (ವಿದ್ಯುನ್ಮಾಲೆಯಲ್ಲಿರುವುದರಿಂದ ಈ ಉದಾಹರಣೆ)-

ವಂದೇSಹಂ ದೇವಂ ತಂ ಶ್ರೀತಂ

ರಂತಾರಂ ಕಾಲಂ ಭಾಸಾಯಃ

ರಾಮೋರಾಮಾಧೀರಾಪ್ಯಾಗೋ

ಲೀಲಾಮಾರಾಯೋಧ್ಯೇ ವಾಸೇ

ಇದು ಅಯೋಧ್ಯಾರಾಮನ ಸ್ತುತಿ.  ಮೇಲಿನ ಶ್ಲೋಕವನ್ನೇ ಕೊನೆಯ ಅಕ್ಷರದಿಂದ ಮೊದಲಿನವರೆಗೆ ಓದಿಕೊಂಡು ಬಂದರೆ ಅದು ಹೀಗಾಗುತ್ತದೆ-

ಸೇವಾಧ್ಯೇಯೋರಾಮಾಲಾಲೀ

ಗೋಪ್ಯಾರಾಧೀ ಮಾರಾಮೋರಾಃ

ಯಸ್ಸಾಭಾಲಂಕಾರಂ ತಾರಂ

ತಂ ಶ್ರೀತಂ ವಂದೇSಹಂ ದೇವಂ

ಇದು ಗೋಪೀಲೋಲನಾದ, ಶ್ರೀನಿವಾಸನಾದ, ಅಷ್ಟಮಹಿಷಿಯರೊಡನೆ ವಿಲಸಿಸುವ ಕೃಷ್ಣನ ಸ್ತುತಿ.

ಶ್ರೀ ವೇದಾಂತದೇಶಿಕರ ಪಾದುಕಾಸಹಸ್ರದಲ್ಲಿ ಬರುವ ಈ ಪದ್ಯವಂತೂ ಇನ್ನೂ ಚಮತ್ಕಾರಯುಕ್ತವಾದದ್ದು (ಇದೂ ವಿದ್ಯುನ್ಮಾಲೆಯೇ)

ಯಾಯಾಯಾಯಾಯಾಯಾಯಾಯಾ

ಯಾಯಾಯಾಯಾಯಾಯಾಯಾಯಾ

ಯಾಯಾಯಾಯಾಯಾಯಾಯಾಯಾ

ಯಾಯಾಯಾಯಾಯಾಯಾಯಾಯಾ

(ಪಾದುಕಾಸಹಸ್ರಂ - 30-26)

ಇದು ಕೇವಲ ಏಕಾಕ್ಷರಶ್ಲೋಕವಷ್ಟೇ ಅಲ್ಲ, ಇದರಲ್ಲಿ ಕಂಕಣ, ಪದ್ಮ, ಗೋಮೂತ್ರಿಕೆ ಮೊದಲಾದ ಹಲವು ಚಿತ್ರಬಂಧಗಳೂ ಅಡಗಿವೆಯೆನ್ನುತ್ತಾರೆ ಪ್ರಾಜ್ಞರು - ನಾನು ಪರಿಶೀಲಿಸಿ ನೋಡಹೋಗಿಲ್ಲ.  ಇಂಥವನ್ನು ಮಹಾಯಮಕಗಳೆನ್ನುತ್ತಾರೆ.  ಚಮತ್ಕಾರಿಕಪದ್ಯ ಹೌದು, ಆದರೆ ಇದೇನು ಅರ್ಥವಿಲ್ಲದ ಅಕ್ಷರಜೋಡಣೆಯಲ್ಲ.  ಬೇರೆಬೇರೆ ಪದಗಳು ಸಂಧಿಯಾಗಿ, ಪರಿಣಾಮದಲ್ಲಿ ಎಲ್ಲ ಒಂದೇ ಅಕ್ಷರವಾಗಿರುವುದು.  ಇದನ್ನು ಬಿಡಿಸಿದರೆ - 

ಯಾಯಾಯಾ ಅಯ ಆಯಾಯ ಅಯಾಯ ಅ-

ಯಾಯ ಅಯಾಯ ಅಯಾಯ ಅಯಾಯಾ

ಯಾಯಾಯ ಆಯಾಯಾಯ ಆಯಾಯಾ-

ಯಾ ಯಾ ಯಾ ಯಾ ಯಾ ಯಾ ಯಾ ಯಾ

ಇದರ ಅರ್ಥವಿವರಣೆ ಸದ್ಯದ ಬರಹದ ವ್ಯಾಪ್ತಿಯನ್ನು ಮೀರಿದುದಾದ್ದರಿಂದ ಅದಕ್ಕೆ ಕೈ ಹಾಕಿಲ್ಲ.  ಇಂಥವು ಬೇರೆಬೇರೆ ಛಂದಸ್ಸುಗಳಲ್ಲೂ ಇವೆ, ಸದ್ಯದ ಬರಹ ವಿದ್ಯುನ್ಮಾಲೆಯನ್ನು ಕುರಿತದ್ದಾದ್ದರಿಂದ ಈ ಶ್ಲೋಕವನ್ನು ಉದಾಹರಿಸಿದೆ.  ಹಾಗೇ ವೇದಾಂತದೇಶಿಕರದೇ ಯಾದವಾಭ್ಯುದಯದ ಈ ಶ್ಲೋಕವನ್ನೂ ನೋಡಬಹುದು-

ನಾನಾನಾನಾನಾನಾನಾನಾ

ನಾನಾನಾನಾನಾನಾನಾನಾ

ನಾನಾನಾನಾನಾನಾನಾನಾ

ನಾನಾನಾನಾನಾನಾನಾನಾ

(ಯಾದವಾಭ್ಯುದಯ - 6-96)

ಅದೇ ರೀತಿ ಶ್ರೀ ಮಧ್ವಾಚಾರ್ಯರ ಯಮಕಭಾರತದಲ್ಲಿಯೂ ಇಂತಹ ರಚನೆಗಳನ್ನು ಕಾಣಬಹುದು, ಅದರಲ್ಲಿ ವಿದ್ಯುನ್ಮಾಲಾವೃತ್ತದ ಈ ರಚನೆಯನ್ನು ನೋಡಿ-

ಭಾಭಾಭಾಭಾಭಾಭಾಭಾಭಾ

ಭಾಭಾಭಾಭಾಭಾಭಾಭಾಭಾ

ಭಾಭಾಭಾಭಾಭಾಭಾಭಾಭಾ

ಭಾಭಾಭಾಭಾಭಾಭಾಭಾಭಾ

(ಯಮಕಭಾರತ - 78)

ಮೇಲಿನವು ಗಂಭೀರವಾದ ರಚನೆಗಳಾದುವು.  ಆದರೆ ನಮ್ಮ ಉದ್ದೇಶ ಈ ರಚನೆಗಳ ಪರಿಚಯವಲ್ಲ, ಈ ವೃತ್ತದ ಸ್ವಭಾವಪರಿಚಯವಷ್ಟೇ?  ಇದು ಎಷ್ಟು ಸರಳವಾದ, ಸುಲಭವಾಗಿ ಕೈಗೆಟುಕುವ ಲಯವೆಂದರೆ, ಸರಳವಾದ ದಿನಬಳಕೆಯ ಮಾತುಗಳೂ ಈ ಲಯಕ್ಕೆ ಹೊಂದಿಬಿಡುತ್ತವೆ.  ಬಾಲ್ಯದಲ್ಲಿ ಕಣ್ಣಾಮುಚ್ಚಾಲೆಯಾಟದಲ್ಲಿ ಹೇಳುತ್ತಿದ್ದ ಈ ಪದ್ಯ ನೆನಪಿದೆಯೇ?

ಕಣ್ಣಾಮುಚ್ಚೇ ಕಾಡೇಗೂಡೇ

ಉದ್ದಿನ್ಮೂಟೇ ಉಂಟೇ ಹೋಯ್ತು

ನಮ್ಮಾ ಹಕ್ಕೀ ಬಿಟ್ಟೇ ಬಿಟ್ಟೇ

ನಿಮ್ಮಾ ಹಕ್ಕೀ ಬಚ್ಚಿಟ್ಕೊಳ್ಳೀ

ಇಲ್ಲಿ ಲಯಕ್ಕಾಗಿ ಅಕ್ಷರಗಳನ್ನು ಜಗ್ಗಿಸುವುದು, ತುರುಕುವುದು ಇಂಥವೆಲ್ಲ ಇದೆ, ಪದಗಳು ಅವುಗಳ ಮೂಲರೂಪದಲ್ಲಿಲ್ಲ, ಇರಲಿ.  ಒಂದು ಗಂಭೀರವಾದ ವೃತ್ತರಚನೆಯಲ್ಲಿ ಹೀಗಿರುವುದಿಲ್ಲ ಎಂಬುದನ್ನು ಮನಸ್ಸಿನಲ್ಲಿಡೋಣ.  ಆದರೆ ವಿದ್ಯುನ್ಮಾಲೆಯ ಲಯ ಆಡುಮಾತಿಗೂ ಎಷ್ಟು ಸೊಗಸಾಗಿ ಹೊಂದುತ್ತದೆಂದು ತೋರಿಸಬಯಸಿದೆನಷ್ಟೇ.  ತುಂಬಾ ದಿನದ ಹಿಂದೆ ನಾನೊಂದು ತಮಾಷೆಯ ಚೌಪದಿ ರಚಿಸಿದ್ದೆ-

ಗುಟ್ಟೊಳ್ ಬಚ್ಚಿಟ್ಟಾ ತಂಬಿಟ್ಟಂ

ಛಟ್ಟನೆ ಹಾರಿಸಿ ಬಿಟ್ಟಂ ಕಿಟ್ಟಂ

ಸಿಟ್ಟಿಂದಟ್ಟುತ ಸುಬ್ಬಾ ಭಟ್ಟಂ

ದಟ್ಟಿಯು ತೊಡರಲ್ ಬಿದ್ದಂ ಕೆಟ್ಟಂ

ಇದು ವಿದ್ಯುನ್ಮಾಲೆಯಲ್ಲ, ಚತುರ್ಮಾತ್ರಾಚೌಪದಿ (ನಾಲ್ಕುನಾಲ್ಕು ಮಾತ್ರೆಯ ಲಯವುಳ್ಳದ್ದು); ವಿದ್ಯುನ್ಮಾಲೆಯಲ್ಲಾದರೆ, ಮೇಲೆ ವಿವರಿಸಿದಂತೆ ಸರ್ವಗುರು ಬರಬೇಕು.  ಆದರೆ ಇದನ್ನು ಸುಲಭವಾಗಿ ವಿದ್ಯುನ್ಮಾಲೆಯಾಗಿ ಪರಿವರ್ತಿಸಬಹುದು (ಮೊದಲ ಸಾಲು ಈಗಾಗಲೇ ಪೂರ್ತಿ ಗುರ್ವಕ್ಷರಗಳೇ ಇದ್ದು, ವಿದ್ಯುನ್ಮಾಲೆಯಾಗಿಯೇ ಇದೆ, ಉಳಿದದ್ದನ್ನೂ ಪರಿವರ್ತಿಸಿದರೆ ಹೀಗೆ)-

ಗುಟ್ಟೊಳ್ ಬಚ್ಚಿಟ್ಟಾ ತಂಬಿಟ್ಟಂ

ಕಿಟ್ಟಂ ಛಟ್ಟೆಂದೆತ್ತೇ ಬಿಟ್ಟಂ

ಸಿಟ್ಟಿಂದಟ್ಟಲ್ ಸುಬ್ಬಾ ಭಟ್ಟಂ

ಕೆಟ್ಟಂ ಕಿಟ್ಟಂ ಬಿದ್ದೇ ಬಿಟ್ಟಂ

ಅಯ್ಯೋ, ನಾನು ನಿಮ್ಮೊಡನೆ ಹರಟುತ್ತಾ ಕೂತೆ - ಸಿಂಬಣ್ಣ ನೋಡಿ, ಬಿಸ್ಕೆಟ್ ತಿಂದು ಮುಗಿಸಿ, ಅದೇನೋ ಗಲಾಟೆ ನೋಡಲು ಗೇಟಿನ ಮುಂದೆ ಹೋಗಿ ನಿಂತಿದೆ; ಅಲ್ಲೆಲ್ಲೋ ಮೆರವಣಿಗೆ, ಒಂದಷ್ಟು ಜನ ಘೋಷಣೆ ಕೂಗುತ್ತಿದ್ದಾರೆ-

"ಬೇಕೇಬೇಕೂ ನ್ಯಾಯಾ ಬೇಕೂ"

"ಸಾಲಾ ಮನ್ನಾ ಮಾಡ್ಲೇ ಬೇಕೂ"

"ಅಕ್ಕೀಬೇಳೇ ಬಿಟ್ಟೀ ಬೇಕೂ"

"ಕಾರೂ ಬೇಕು ಬೈಕೂ ಬೇಕು"


"ಚಟ್ನೀಗಿಡ್ಲೀ ಬೇಕೇ ಬೇಕೂ

ಆಲೂಗಡ್ಡೇ ಪಲ್ಯಾ ಬೇಕೂ

ಪೂರೀ ಸಾಗೂ ಕಾಫೀ ಬೇಕೂ

ಬೇಕೇಬೇಕೂ ಬೇಕೇಬೇಕೂ"

Monday, November 20, 2023

ವರ್ಲ್ಡ್ ಕಪ್ ನೆಪದಲ್ಲಿ...

1987ರಲ್ಲೋ ಏನೋ, ವರ್ಲ್ಡ್ ಕಪ್ ನಡೆಯುತ್ತಿತ್ತೆಂದು ನೆನಪು. ಲೈವ್ ನೋಡಲು ಪಕ್ಕದ ಮನೆ ಟೀವಿ ಮುಂದೆ ಜಮಾಯಿಸಿದ್ದೆವು - ಅಲ್ಲ, ನನ್ನ ನಾಲ್ವರು ಮಿತ್ರರು ನನ್ನನ್ನೂ ಕರೆದುಕೊಂಡು ಹೋಗಿ ಅಲ್ಲಿ ಜಮಾಯಿಸಿದ್ದರು. ಏನು ಕೂಗಾಟ, ಚೀರಾಟ, ನಗು, ಕಣ್ಣೀರು, ಪ್ರಾರ್ಥನೆ. ನನಗೋ ಒಂದೂ ಅರ್ಥವಾಗಲೊಲ್ಲದು.

ನನಗೆ ಸ್ಪೋರ್ಟ್ಸ್ ಮೊದಲಿನಿಂದ ಅಷ್ಟಕ್ಕಷ್ಟೇ. ಎಳವೆಯಲ್ಲಿ ಬೀದಿಯಲ್ಲಿ ಆಡುತ್ತಿದ್ದ ಜೂಟಾಟ, ಕಲ್ಲು-ಮಣ್ಣು ಬಿಟ್ಟರೆ ಗೋಲಿ ಚಿನ್ನಿದಾಂಡುಗಳೂ ಅಷ್ಟಕ್ಕಷ್ಟೇ. ಆಮೇಲಾಮೇಲೆ ಕಬಡ್ಡಿ ಬಂತು - ಅಲ್ಲಿಂದಾಚೆಗೆ ಸ್ವಲ್ಪ 'ಸೊಫೆಸ್ಟಿಕೇಟೆಡ್' ನೆಲೆಯಲ್ಲಿ ನನ್ನ ಆಟ ಬ್ಯಾಡ್ಮಿಂಟನ್ ವರೆಗೆ ಬಂದು ನಿಂತಿತು - ಅದೂ ಸಿಂಗಲ್ಸ್ - ಆಗಾಗ ನಾನೂ ಗೆಲ್ಲುತ್ತಿದ್ದುದೂ ಉಂಟು. ಡಬಲ್ಸ್ ಆದರೆ ಜೊತೆಗಾರನಿಂದ ಬೈಸಿಕೊಳ್ಳುವುದು ಸಾಮಾನ್ಯ.

ಒಮ್ಮೆ ಹೈಸ್ಕೂಲಿನಲ್ಲಿ, ಹುಡುಗರೆಲ್ಲಾ ಪಿಟಿ ಮಾಸ್ಟರನ್ನು ಕಾಡಿ ಬೇಡಿ ಫುಟ್ಬಾಲ್ ಪಡೆದಿದ್ದರು. ಎಲ್ಲರಿಗೂ ಆಟ ಗೊತ್ತಿತ್ತೆಂದು ನನ್ನೆಣಿಕೆ, ಏಕೆಂದರೆ ಯಾರೂ ಯಾರಿಗೂ ಏನೂ ಹೇಳಲಿಲ್ಲ. ತಾನಾಗೇ ಎರಡು ಗುಂಪಾಯಿತು, ನನ್ನನ್ನು ಯಾರೋ ಒಂದು ಗುಂಪಿನಲ್ಲಿ ಹಾಕಿದರು. ನನಗೆ ಚೆಂಡನ್ನು ಒದೆಯಬೇಕೆಂಬುದೊಂದು ಬಿಟ್ಟು ಇನ್ನೇನೂ ತಿಳಿದಿರಲಿಲ್ಲ. ಮೇಷ್ಟ್ರ ಹತ್ತಿರ ಹೋಗಿ 'ಸಾರ್, ನಂಗೆ ಆಟ ಬರೊಲ್ಲ, ಇಲ್ಲೇ ಕೂತು ನೋಡ್ತೀನಿ" ಎಂದುದಕ್ಕೆ "ಸೋಮಾರಿ ಮುಂಡೇದೇ, ಓದಂತೂ ನೈವೇದ್ಯ, ಹೋಗಿ ಆಟವಾದರೂ ಆಡು, ಶಕ್ತಿ ಬರುತ್ತೆ" ಎಂಬ 'ಆಶೀರ್ವದೆ' ಸಿಕ್ಕಿತು. ಹೊಸ ಸ್ಕೂಲು ಬೇರೆ, ಹುಡುಗರ ಪರಿಚಯವೂ ಅಷ್ಟಿಲ್ಲ. ಇದ್ದುದರಲ್ಲೇ ಸ್ವಲ್ಪ ಗೊತ್ತಿರುವವನಿಗೆ, "ಲೋ, ನಂಗೆ ಆಟ ಗೊತ್ತಿಲ್ಲ ಕಣೋ" ಎಂದು ಹೇಳಿಕೊಂಡೆ. ಅವನು "ಅದರಲ್ಲೇನಿದೆಯೋ, ಬಾಲನ್ನ ಗೋಲಿನ ಕಡೆ ಒದೆದುಕೊಂಡು ಹೋದರಾಯಿತು" ಅಂದ. ಒದೆಯುವುದೇನೋ ಸರಿ, ಆದರೆ ಗೋಲೆಂಬುದು ಎಲ್ಲಿರುತ್ತದೆ ಬೇಕಲ್ಲ - ಆಳುದ್ದ ಶರೀರವನ್ನು ಗೇಣುದ್ದ ಮಾಡಿಕೊಂಡು ಕೇಳಿದೆ - "ಗೋಲ್ ಎಲ್ಲಿರುತ್ತೋ?". ಅವನಿಗೀಗ ತಮ್ಮ ತಂಡದ ರಿಸ್ಕ್ ಅರ್ಥವಾಯಿತೆನ್ನಿಸುತ್ತದೆ. ಕ್ಯಾಪ್ಟನ್ ಹತ್ತಿರ ಹೋಗಿ ಹೇಳಿದ "ಲೋ, ಇವನಿಗೆ ಆಟ ಗೊತ್ತಿಲ್ಲ, ಇವನ್ನ ಫಾರ್ವರ್ಡಲ್ಲಿ ಹಾಕಿದರೆ "ಚೊಂಬ್ ಹಿಡಿಸ್ತಾನಷ್ಟೇ". ಆಮೇಲೆ ಏನೇನೋ ಮಾತಾಡಿಕೊಂಡರು, ಅವನೇ ನನ್ನ ಕರೆದುಕೊಂಡು ಹೋಗಿ "ನೋಡು, ಇದೇ ಗೋಲ್ ಪೋಸ್ಟು, ನೀನು ಇದರ ಮಧ್ಯ ಸುಮ್ಮನೇ ನಿಂತಿರು ಆಯ್ತಾ, ಬಾಲ್ ಬಂದರೆ ತಡಿ" ಅಂದ, ಹೋದ. ನನಗೆ ನೆಮ್ಮದಿಯಾಯಿತು, ಸುಮ್ಮನೇ ನಿಂತು ಆಟ ನೋಡುವುದಷ್ಟೇ ಕೆಲಸ - ಅಲ್ಲಿ ಕುಳಿತಿರುವುದರ ಬದಲು ಇಲ್ಲಿ ನಿಂತಿರುವುದು - ಫುಟ್ಬಾಲ್ ಅಂತಹ ಕಷ್ಟದ ಆಟವೇನಲ್ಲ ಎನಿಸಿತು. ಆಟ ಶುರುವಾಯಿತು. ಚೆಂಡು ಅಲ್ಲೆಲ್ಲೋ ದೂರದಲ್ಲಿ, ಎದುರು ಗೋಲ್ ಪೋಸ್ಟಿನ ಹತ್ತಿರವೇ ಒದ್ದಾಡುತ್ತಿತ್ತು, ಅಲ್ಲಲ್ಲ, ಒದೆಸಿಕೊಂಡಾಡುತ್ತಿತ್ತು. ಎಷ್ಟು ಹೊತ್ತಾದರೂ ಅದು ಈ ಕಡೆ ಬರುವ ಹಾಡೇ ಇಲ್ಲ, ಕಾದು ಕಾದು ಸಾಕಾಯಿತು. ಅವರಿಂದ ಚೆಂಡನ್ನು ಬಿಡಿಸಿಕೊಂಡು ನಮ್ಮ ಗೋಲ್ ಕಡೆ ತರಲಾರದ ನಮ್ಮ ಟೀಮಿನವರ ಅಸಮರ್ಥತೆಯೇ ನನಗೆ ಅದರಲ್ಲಿ ಕಂಡಂತಾಗಿ ಬೇಸರವಾಗಹತ್ತಿತು. ಕೊನೆಗೂ ಒಂದು ಸಲ ಚೆಂಡು ಈ ಕಡೆ ಬರತೊಡಗಿತು. ಎದುರಿನವರು ತಾವಾಗೇ ಇತ್ತಕಡೆ ಚೆಂಡು ಕಳಿಸಲು ಯತ್ನಿಸುತ್ತಿದ್ದರೂ ನಮ್ಮ ಕಡೆಯ ಮಂಕುಗಳು ಮಾತ್ರ ಅದನ್ನು ಇತ್ತ ಬರದಂತೆ ತಡೆಯುತ್ತಿದ್ದಾರೆ, ಬದಲಿಗೆ ಅವರ ಕಡೆಗೇ ಎಳೆದೊಯ್ಯಲು ಪ್ರಯತ್ನಿಸುತ್ತಿದ್ದಾರೆ! ಕೊನೆಗೊಮ್ಮೆ ನಮ್ಮವರ ಪ್ರಯತ್ನವನ್ನೂ ಮೀರಿ ಚೆಂಡು ಇತ್ತ ಬರಲಾರಂಭಿಸಿತು. ಅದರ ಹಿಂದೆ ಅಷ್ಟೂ ಜನ ಕೂಗುತ್ತಾ ಕೈಯೆತ್ತಿ ನನ್ನ ಕಡೆ ನೋಡುತ್ತಾ ಏನೋ ಒದರುತ್ತಾ ಇತ್ತಕಡೆಯೇ ಬರಲಾರಂಭಿಸಿದರು - ಇದ್ದಕ್ಕಿದ್ದಂತೆ ಹಿಂಡು ಜನ ಕೈಯೆತ್ತಿಕೊಂಡು ನಿಮ್ಮ ಕಡೆ ಓಡಿ ಬರತೊಡಗಿದರೆ ನಿಮಗೆ ಹೇಗಾಗಬಹುದು ಯೋಚಿಸಿ ನೋಡಿ. ಕೂಗುತ್ತಿದ್ದವರು ಅದೇನು ಹಿಡಿ ಹಿಡಿ ಎನ್ನುತ್ತಿದ್ದರೋ ತಡಿ ತಡಿ ಎನ್ನುತ್ತಿದ್ದರೋ ಅರ್ಥವಾಗದೇ, ಹಿಡಿಯಬೇಕೋ ಸ್ವಲ್ಪಹೊತ್ತು ತಡೆಯಬೇಕೋ ಗೊಂದಲಗೊಂಡು ನೋಡುತ್ತಿರುವಷ್ಟರಲ್ಲಿ ಅವರ ಕೂಗು ಕೈಕರಣ ಇನ್ನೂ ಹೆಚ್ಚಾಯಿತು. ಚೆಂಡು ತೀರ ಹತ್ತಿರಕ್ಕೆ ಬಂತು, ಅಷ್ಟೇನು ವೇಗವಿರಲಿಲ್ಲ. ನನ್ನ ಮಿತ್ರ ಹೇಳಿದ್ದು ನೆನಪಾಯಿತು - "ಬಾಲು ನಿನ್ನ ಕಡೆ ಬಂದರೆ ಹಿಡಿ" ಅಷ್ಟು ಹೊತ್ತಿಗಾಗಲೇ ತೀರ ಹತ್ತಿರ ಬಂದಿದ್ದ ಬಾಲನ್ನು ಪಕ್ಕನೆ ಎರಡೂ ಕೈಗಳಲ್ಲಿ ಹಿಡಿದೆ. ನನಗೋ, ನಾನೂ ಆಟಕ್ಕಾಗಿ ಏನೋ ಮಾಡಿದೆನಲ್ಲ ಎನ್ನುವ ಖುಷಿ. ಬಾಲನ್ನೆತ್ತಿ ಅವರಿಗೆ ಕೊಡಹೋದೆ. ಆದರೆ ಈ ಅಯೋಗ್ಯರಿಗೆ ಒಂದು ಚೂರೂ ಕೃತಜ್ಞತೆಯಿದ್ದಂತೆ ಕಾಣಲಿಲ್ಲ. ಬದಲಿಗೆ ನನ್ನನ್ನೇ ಏನೇನೋ ಬೈಯುತ್ತಾ, ಕೊನೆಗೆ ತಿರಸ್ಕಾರವನ್ನೆಲ್ಲಾ ಒಟ್ಟು ಸೇರಿಸಿ "ಹೋಗೋ" ಎಂದರು. ನಾನು ಹೋದೆ.

ನನಗೆ ಅದೇನೋ, ಮೊದಲಿಂದಲೂ ಈ 'ಸೊಫೆಸ್ಟಿಕೇಟೆಡ್' ಆಟಗಾರರ ಮಾತು, ಅವರ ಟೆಂಪರಮೆಂಟ್ ಅರ್ಥವೇ ಆಗುವುದಿಲ್ಲ, ಯಾವುದಕ್ಕೆ ಕೋಪಿಸಿಕೊಳ್ಳುತ್ತಾರೋ, ಯಾವುದನ್ನು ಮೆಚ್ಚುತ್ತಾರೋ, ಎಲ್ಲಿ ಮೋಸ ಮಾಡುತ್ತಾರೋ ಗೊತ್ತಾಗುವುದಿಲ್ಲ. ಇನ್ನೂ ಒಂದೆರಡು ವರ್ಷ ಹಿಂದೆ, ಅಂದರೆ ಆರೋ ಏಳೋ ಓದುತ್ತಿದ್ದಾಗ ಬೀದಿಯ ಹುಡುಗರೆಲ್ಲಾ ಕ್ರಿಕೆಟ್ ಆಡಲು ನಮ್ಮ ಸ್ಕೂಲ್ ಗ್ರೌಂಡಿಗೆ ಹೋಗಿದ್ದೆವು. ಅದುವರೆಗೆ ಅದು ಇದು 'ಲೋಕಲ್' ಆಟಗಳನ್ನಾಡಿಕೊಂಡಿದ್ದ ಕೆಲ ಹುಡುಗರಿಗೆ ಕ್ರಿಕೆಟ್ ಆಡುವ ಹುಚ್ಚು ಹತ್ತಿತ್ತು. ನನಗೆ ಈ ಆಟವೇ ಹೊಸದು. ಅದು ಯಾವುದೋ 'ಅದೃಷ್ಟ'ದಿಂದ ನನಗೆ ಬ್ಯಾಟಿಂಗ್ ಬಂದಿತ್ತು. ಒಂದೆರಡು ಬಾಲು ಚೆನ್ನಾಗೇ ಹೊಡೆದೆ. ಎದುರು ಪಾರ್ಟಿಯಲ್ಲಿದ್ದ ಬಾಬು (ನನ್ನ ಸ್ನೇಹಿತನೇ) ಬಂದು "ಮಂಜು, ಆ ಬ್ಯಾಟ್ ಕೊಡಮ್ಮ, ಈ 'ಮಕ್ಕಳಿಗೆ' ಬುದ್ಧಿ ಕಲಿಸ್ತೀನಿ" ಎಂದು ಹೇಳಿ ಬ್ಯಾಟ್ ಇಸಿದುಕೊಂಡ. ಕೊಟ್ಟರೆ, ಆ 'ಮಕ್ಕಳಿಗೆ' ಬುದ್ಧಿ ಕಲಿಸುವ ಬದಲು ಆ ಬ್ಯಾಟನ್ನೇ ವಿಕೆಟ್ಟಿಗೆ ಬಡಿದು "ಔಟ್" ಎಂದು ಕಿರಿಚಿದ. ಬ್ಯಾಟ್ ಕೊಡುವಾಗ "ಬಿ.ಸಿ." ಎಂದು ಹೇಳಿ ಕೊಡಬೇಕಿತ್ತಂತೆ (ಬಿ.ಸಿ ಎಂದರೆ ಏನು ಅರ್ಥವೋ ನನಗಿನ್ನೂ ತಿಳಿದಿಲ್ಲ, Before Christ ಅಂತೂ ಇರಲಾರದು) - ಹಾಗೆ ಹೇಳಿದರೆ ಅದು ಆಟವನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಂತೆ. ಹಾಗೆ ಹೇಳದೇ ಬ್ಯಾಟ್ ಕೊಟ್ಟುದರಿಂದ ಅವನು ಆ ಬ್ಯಾಟ್ ವಿಕೆಟಿಗೆ ಸೋಕಿಸಿದಾಗ, ನಾನೇ ಆಡುವಾಗ ಸೋಕಿಸಿದಂತಾಗಿ ನಾನು ಔಟ್ ಅಂತೆ. ಸ್ನೇಹಿತನೇ ಹೀಗೆ ಕತ್ತು ಕೊಯ್ಯುತ್ತಾನೆಂದು ಹೇಗೆ ಗೊತ್ತಾಗಬೇಕು? ಔಟಾದುದರಿಂದ ನನಗೇನೂ ನಷ್ಟವಿಲ್ಲ, ಸರಿಯೆಂದು ಹೇಳಿ ಹೊರಟೆ. ಆದರೆ ನನಗಾದ ಅನ್ಯಾಯಕ್ಕೆ ನನಗಿಂತ ನಮ್ಮ ಟೀಮಿನವರಿಗೆ ಭಯಂಕರ ಕೋಪ ಬಂತು. ಮೋಸ ಎಂದು ಕೂಗಿ ಜಗಳಕ್ಕೆ ಬಿದ್ದರು. "ಹೋಗ್ಲಿ ಬಿಡ್ರೋ, ಮೋಸಕ್ಕೆ ದೇವ್ರು ತೋರ್ಸುತ್ತೆ" ಎಂದೆ (ಅದು ಆ ಕಾಲದಲ್ಲಿ ನಮ್ಮ ಫೇವರಿಟ್ ಶಾಪವಾಕ್ಯ). ಅದು ಅವರನ್ನು ಸಮಾಧಾನಿಸುವ ಬದಲು ಇನ್ನಷ್ಟು ಕೆರಳಿಸಿತು. "ಏ ಗೂಬ್ಮುಂಡೇದೆ, ಮಾಡೋದ್ ಮಾಡಿಬಿಟ್ಟು, ಈಗ ದೇವ್ರು ತೋರ್ಸುತ್ತಂತೆ" ಎಂದು ನನಗೇ ಬೈದು ಮತ್ತೆ ಜಗಳ ಮುಂದುವರೆಸಿದರು. ಹಾಗೂ ಹೀಗೂ ಬ್ಯಾಟು ಮತ್ತೆ ನನ್ನ ಕೈಗೆ ಬಂತು. "ಸರಿಯಾಗಿ ಆಡು, ಆಡುವಾಗ ಏನೇ ಆದರೂ ಕ್ರೀಸು ಬಿಟ್ಟು ಹೊರಗೆ ಬರಬೇಡ" ಎಂದು ಮೂತಿ ತಿವಿದು, ನಮ್ಮ ಕಡೆಯವರೆಲ್ಲಾ ಹೋಗಿ ಕೂತರು. ಮತ್ತೆ ನನ್ನ ಬ್ಯಾಟಿಂಗ್ ಶುರು. ಬಾಲನ್ನು ಹೊಡೆದ ಮೇಲೆ ರನ್ ಮಾಡಬೇಕಲ್ಲ. ಇವರು ಕ್ರೀಸು ಬಿಟ್ಟು ಹೊರಬರಬೇಡ ಎಂದಿದ್ದರು. ಸರಿ, ನನಗೇಕೆ ಎಂದು ಸುಮ್ಮನೆ ನಿಂತರೆ, ಎದುರು ಕ್ರೀಸಿನಿಂದ ರಘು "ಓಡೋ" ಎಂದು ಕೂಗುತ್ತಾ ಓಡಿ ಬಂದ. ನಾನು ಕ್ರೀಸು ಬಿಟ್ಟು ಓಡಲಿಲ್ಲ. ಅವನು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮತ್ತೆ ಓಡಿ ಹೋದರೆ, ಅಷ್ಟರಲ್ಲಿ ಆವನ ವಿಕೆಟ್ಟಿಗೆ ಚೆಂಡೆಸೆದು ಅವನನ್ನು ಔಟ್ ಮಾಡಿಬಿಟ್ಟಿದ್ದರು. ನನ್ನ ಕಡೆ ನೋಡುತ್ತಾ ಗೊಣಗುತ್ತಾ ಬೈಯುತ್ತಾ ಅವನು ಹೋದ. ಮತ್ತೆ ಒಂದೆರಡು ಬಾಲ್ ಆಡಿದ ಮೇಲೆ ಮೂರನೆಯ ಬಾಲಿಗೆ ಸರಿಯಾಗಿ ಬೀಸಿದೆ. ಚೆಂಡು ಆಗಸಕ್ಕೆಗರಿತು - ಇದು ಸಿಕ್ಸ್ ಎಂದು ನನ್ನೆಣಿಕೆ. ಸಿಕ್ಸ್ ಅಲ್ಲದಿದ್ದರೆ ಕೊನೆಯ ಪಕ್ಷ ಫೈವ್ ಆದರೂ...

ಆದರೆ ಅದು ನಾಲ್ಕೂವರೆ ದಾಟಲಿಲ್ಲ. ಆಕಾಶಕ್ಕೆ ನೆಗೆದ ಚೆಂಡು ಭೂಸ್ಪರ್ಶವಾಗದಂತೆ ಗುಂಡ ಗಪ್ಪನೆ ಹಿಡಿದೇ ಬಿಟ್ಟ. "ಔಟ್" ಎಂದು ಕೂಗಿದರು. ಪ್ರತಿಯಾಗಿ ಮೋಸಾ ಎಂದು ಕೂಗುವ ದರದ್ ಏನೂ ನನಗೆ ಕಾಣಲಿಲ್ಲ. ಬಂದು ಕುಂತೆ. ಸ್ವಾರಸ್ಯವೆಂದರೆ ನಮ್ಮವರೂ "ಔಟ್" ಎಂಬ ಸಂಭ್ರಮದ ಕೂಗಿಗೆ ದನಿಗೂಡಿಸಿ, ನನ್ನ ನಿರ್ಗಮನವನ್ನು ಸಂಭ್ರಮಿಸಿದ್ದು!

ಹೀಗಾಗಿ, ಸ್ಪೋರ್ಟ್ಸ್ ಎನ್ನುವ ವಿಷಯದಲ್ಲಿ ನನಗೆ ಮೊದಲಿಂದಲೂ ಆಲಸಿಕೆಯೇ. ಅದರ ಪ್ರಪಂಚವೇ ಬೇರೆ - ಆ ರಣೋತ್ಸಾಹ, ಆ ಭಾವೋದ್ರೇಕ, ಆ ರೋಷಾವೇಷ ಇವು ನನ್ನಲ್ಲಿ ಉಕ್ಕುವುದೇ ಇಲ್ಲ. ಆದ್ದರಿಂದ ಆ ಗುಂಪುಭಾವನೆಗಳು ನನ್ನಲ್ಲಿ ಉತ್ಸಾಹಕ್ಕಿಂತ ಅವರಿಗೆ ಸರಿಗಟ್ಟಲಾಗದ ಆತಂಕವನ್ನೇ ಹೆಚ್ಚಿಸುತ್ತದೆ - ಒಂದು ರೀತಿ performance anxiety ಎನ್ನುತ್ತಾರಲ್ಲ, ಅಂಥದ್ದು. ಆದರೆ ಕೆಲವರಿರುತ್ತಾರೆ. ಅವರಿಗೆ ಕ್ರಿಕೆಟ್ಟಿನ ಗಂಧಗಾಳಿಯಿರುವುದಿಲ್ಲ, ಆದರೂ ಕೆಲವು ಪದಗಳು ಗೊತ್ತಿರುತ್ತವೆ, ಕೆಲವು ಆಟಗಾರರ ಹೆಸರು ಗೊತ್ತಿರುತ್ತದೆ. ಅದನ್ನೇ ಹಿಡಿದುಕೊಂಡು ಕತೆ ಕಟ್ಟುತ್ತಾ ಜೋರುಜೋರಾಗಿ ಮಾತಾಡುತ್ತಿರುತ್ತಾರೆ. ಅವರಲ್ಲಿ ಕೆಲವರು ಕಳೆದ ವಾರವಷ್ಟೇ "ನನಗೆ ಕ್ರಿಕೆಟ್ ಅಂದರೆ ಏನೂ ಗೊತ್ತಿಲ್ಲಪ್ಪ" ಎಂದವರು. ಅವರು ಕ್ರಿಕೆಟ್ ಬಗ್ಗೆ ಬಿಡುತ್ತಿದ್ದ ಬಂಡಲುಗಳನ್ನು ಕಂಡು ತಳವೆಳಗಾಗಿಹೋಗಿದ್ದೆ. ಸಾಹಿತ್ಯಕ್ಷೇತ್ರದಲ್ಲೂ ಅಂಥವರು ಸಾಕಷ್ಟೇ ಇದ್ದಾರಲ್ಲ, ಸಂಗೀತದಲ್ಲೂ ಇದ್ದಾರೆ - ದಿ. ಎ ಎನ್ ಮೂರ್ತಿರಾಯರು ಅಂಥವರನ್ನು "ಸಂಗೀತಜಗತ್ತಿನ ಅಪೂರ್ಣಬೋಧರು" ಎಂದು ಗೌರವಿಸಿದ್ದಾರೆ

ಇರಲಿ, ಆರಂಭದಲ್ಲಿ ಹೇಳಿದ ನನ್ನ ನಾಲ್ವರು ಸನ್ಮಿತ್ರರು ಅಂತಹ ಖೊಟ್ಟಿ ಕ್ರಿಕೆಟ್ ಪ್ರೇಮಿಗಳೇನಲ್ಲ. ಇಬ್ಬರಂತೂ ಕ್ರಿಕೆಟ್ಟಿನಲ್ಲಿ ಉಗ್ರವಾದಿಗಳು ("ಅಭಿಮಾನಿಗಳತ್ಯುಗ್ರರ್", ಜೊತೆಗೆ ವಾದಿಗಳೂ ಹೌದು, ಆದ್ದರಿಂದ ಉಗ್ರವಾದಿಗಳು); ಇನ್ನಿಬ್ಬರು ಕ್ರಿಕೆಟ್ ರಸಿಕರು, ಆದರೂ ಆ ಇಬ್ಬರ ಪ್ರಭಾವದಿಂದ ತಾತ್ಕಾಲಿಕವಾಗಿ ಉಗ್ರವಾದಿಗಳಂತೆ ಆಡುತ್ತಿದ್ದವರು. ಕ್ರಿಕೆಟ್ ಸಂದರ್ಭವಿಲ್ಲದಾಗ ಊರಿನ ವಿಷಯವೆಲ್ಲ ಹರಟುವ ನಮ್ಮೈವರಲ್ಲಿ, ಕ್ರಿಕೆಟ್ ವಿಷಯ ಬಂದೊಡನೆ ಎರಡು ಗುಂಪಾಗಿಬಿಡುತ್ತಿತ್ತು - ಒಂದು, ಕ್ರಿಕೆಟ್ ಅಭಿಮಾನಿಗಳಾದ ಆ ನಾಲ್ವರು, ಇನ್ನೊಂದು, ಕ್ರಿಕೆಟ್ಟಿನ ಎಬಿಸಿಡಿ ತಿಳಿಯದ ಮೂಕ (ಅವರ ಪ್ರಕಾರ ಮೂರ್ಖ)ಪ್ರಾಣಿಯಾದ ನಾನು. ಹೀಗಾಗಿ, ಸ್ವಾರಸ್ಯಕರವಾದ ಹರಟೆಯ ನಡುವೆ ಯಾವನಾದರೂ ಕ್ರಿಕೆಟ್ ವಿಷಯ ಎತ್ತಿದನೋ, ನನಗೆ ಮೈ ಪರಚಿಕೊಳ್ಳುವಂತಾಗುತ್ತಿತ್ತು, ಹೋಗಿ ಅವನ ಬಾಯಿ ಮುಚ್ಚುವಂತಾಗುತ್ತಿತ್ತು. ಇದು ವಾಕ್ಸ್ವಾತಂತ್ರ್ಯದ ಹರಣ, ಫ್ಯಾಸಿಸ್ಟ್ ಮನೋಭಾವ ಎಂದೆಲ್ಲಾ ನಿಮಗೆ ಅನ್ನಿಸಬಹುದು, ಆದರೆ ನನ್ನ ಕಷ್ಟ ನನಗೆ. ನನಗೆ ಅರ್ಥವಾಗುತ್ತಿದ್ದುದು ಕೆಲವೇ ಪದಗಳು - ಸಿಕ್ಸ್, ಫೋರ್, ರನ್, ಕ್ಯಾಚ್, ರನ್ ಔಟ್, ಓವರ್. ಇನ್ನು ವಿಕೆಟ್ ಎನ್ನುವ ಪದವಂತೂ ಸಿಕ್ಕಾಪಟ್ಟೆ ತ್ರಾಸು ಕೊಡುತ್ತಿತ್ತು - ವಿಕೆಟ್ ಎಂದರೆ ನಾನು ತಿಳಿದಂತೆ, ಬ್ಯಾಟ್ಸ್ಮನ್ ಹಿಂದೆ ನೆಲಕ್ಕೆ ಹೊಡೆದಿರುವ ಮೂರು ದೊಣ್ಣೆಗಳು. ಬಾಲೇನಾದರೂ ವಿಕೆಟ್ಟಿಗೆ ಬಡಿದರೆ, ವಿಕೆಟ್ ಬಿತ್ತು ಎನ್ನುವರು - ಸರಿಯೇ, ಅದೇನು ನಿಜಕ್ಕೂ ಬೀಳಬೇಕಿಲ್ಲ, ಬಾಲು ವಿಕೆಟ್ಟಿಗೆ ಬಡಿದರೂ ಅದು ಬಿದ್ದಂತೆಯೇ, ಔಟೇ, ಸಂಶಯವಿಲ್ಲ, ರನ್ ಔಟ್ ಆದರೂ ವಿಕೆಟ್ ಬಿದ್ದಂತೆಯೇ, ಏಕೆಂದರೆ ಆಗಲೂ ಬಾಲು ಬಡಿಯುತ್ತಿದ್ದುದು ವಿಕೆಟ್ಟಿಗೇ. ಕೆಲವೊಮ್ಮೆ ಬ್ಯಾಟ್ಸ್ಮನ್ ಕಾಲನ್ನು ವಿಕೆಟ್ ಮುಂದೆ ತಂದರೂ ಔಟಂತೆ (ಅದನ್ನು ಎಲ್ ಬಿ ಡಬ್ಲ್ಯೂ ಎನ್ನುತ್ತಾರೆ - ಲೆಗ್ ಬಿಫೋರ್ ವಿಕೆಟ್). ಅಲ್ಲಿ ಬಾಲು ವಿಕೆಟ್ಟಿಗೆ ಬಡಿಯದಿದ್ದರೂ ವಿಕೆಟ್ ವಿಷಯ ಬಂದುದರಿಂದ, ಅಲ್ಲೂ ವಿಕೆಟ್ ಬಿದ್ದಂತೆಯೇ, ಒಪ್ಪಿಕೊಳ್ಳೋಣ. ಆದರೆ ಕ್ಯಾಚಿನಲ್ಲಿ ಔಟಾದರೂ ವಿಕೆಟ್ ಬಿತ್ತು ಎನ್ನುವರು - ಇದು ನನಗೆ ಅರ್ಥವಾಗದ ವಿಷಯ. ಸ್ಕೋರ್ ಎಷ್ಟು ಎಂದರೆ 123/4 ಎನ್ನುವರು. ನಾನು 123 ರನ್ನು, ನಾಲ್ಕು ಓವರಿನಲ್ಲಿ ಎಂದುಕೊಂಡರೆ, ಅಲ್ಲವಂತೆ, ಅದು 4 ವಿಕೆಟ್ಟಿಗೆ 123 ರನ್ನಂತೆ. ನಾನೇ ಆಟವನ್ನು ಕಣ್ಣಲ್ಲಿ ಕಣ್ಣಿಟ್ಟು ಗಮನಿಸಿದಂತೆ ಇಬ್ಬರು ಔಟಾದದ್ದು ಕ್ಯಾಚಿನಿಂದ. ಒಬ್ಬ ಎಲ್ ಬಿ ಡಬ್ಲ್ಯೂ. ವಿಕೆಟ್ ಬಡಿದು ಔಟಾದದ್ದು ಒಬ್ಬನೇ. ಹಾಗಿದ್ದ ಮೇಲೆ ನಾಲ್ಕು ವಿಕೆಟ್ ಹೇಗೆ? ಅಲ್ಲ, ಈ ಪ್ರಶ್ನೆಯಲ್ಲಿ ಏನು ತಪ್ಪಿದೆ? ನಾನೇನು ಹಿಂದೆ ಮೂರು ವಿಕೆಟ್ ನಿಲ್ಲಿಸಿದ್ದರೂ ಬಿದ್ದದ್ದು ಒಂದೇ ವಿಕೆಟ್ ಹೇಗೆ ಎಂದು ಕೇಳಲಿಲ್ಲ. ಆದರೂ ಇದು ಮೂರ್ಖಪ್ರಶ್ನೆಯಾಗಿಬಿಟ್ಟಿತು. ವಿಕೆಟ್ ಎಂದರೆ ಬ್ಯಾಟ್ಸ್ಮನ್ ಅಂತೆ, ಬಿತ್ತು ಎಂದರೆ ಬ್ಯಾಟ್ಸ್ಮನ್ ಔಟ್ ಅಂತೆ, ಬಾಕಿ ಎಂದರೆ ಉಳಿದ ಬ್ಯಾಟ್ಸ್ಮನ್ ಅಂತೆ - ಯಾರಿಗೆ ಕನಸು ಬೀಳಬೇಕು ಇದು? ಇಂತಹ ನೂರು ವಿಕೆಟ್ಟುಗಳ ಸೈಜಿನ ನಮ್ಮ ಗಡಮ ಗುಂಡಣ್ಣನನ್ನು ಆಲದ ಮರಕ್ಕೆ ಹೋಲಿಸುವ ಬದಲು ವಿಕೆಟ್ಟಿಗೆ ಹೋಲಿಸಬಹುದೇ? ಇದು ನನ್ನ ಕಲ್ಪನೆಗೆ ಮೀರಿದ್ದು.

ಮೊದಮೊದಲು ನನ್ನ ಪೆದ್ದು ಪ್ರಶ್ನೆಗಳಿಗೆ ಅತ್ಯುತ್ಸಾಹದಿಂದ ಉತ್ತರಿಸುತ್ತಿದ್ದ ಅವರು, ಅವರ ಅತ್ಯುತ್ಸಾಹವನ್ನು ಅಪಾರ್ಥ ಮಾಡಿಕೊಂಡು ನಾನು ಹೆಚ್ಚು ಹೆಚ್ಚು ಪ್ರಶ್ನೆ ಕೇಳತೊಡಗಿದಂತೆಲ್ಲ ವ್ಯಗ್ರರಾಗುತ್ತಿದ್ದರು, ಆಮೇಲಾಮೇಲೆ ಪ್ರಶ್ನೆ ಬಂದರೆ ಸಾಕು ಉಗ್ರರಾಗಿಬಿಡುತ್ತಿದ್ದರು. ಹೀಗಿರುವಾಗ ಈ ಬುದ್ವಂತರು ಮಾತಾಡುತ್ತಿದ್ದರೆ, ನನಗಿದ್ದ ಲಿಮಿಟೆಡ್ ಜ್ಞಾನದಲ್ಲಿ ನಾನು ಮಾತಾಡುವುದಾದರೂ ಹೇಗೆ? ಎದ್ದು ನಡೆದುಬಿಡೋಣವೆಂದರೆ, ನೀನೆಲ್ಲಿ ನಡೆವೆ ದೂರ, ಎಲ್ಲೆಲ್ಲು... ಕ್ರಿಕೆಟ್ಟೇ. ಹೀಗಾಗಿ, ಇದ್ದ ಐವರಲ್ಲಿ ನಾಲ್ವರೂ ಬಾಯ್ ಕ್ರಿಕೆಟ್ ಆಡತೊಡಗಿದರೆ ನನಗೆ ಸಂಜೆ ಏಳರ ಹೊತ್ತಿಗೆ ಕೋರಮಂಗಲ ಸರ್ಕಲ್ ಟ್ರಾಫಿಕ್ಕಿನಲ್ಲಿ ಹೊಗೆ ಕಕ್ಕುವ ಲಾರಿಯ ಹಿಂದೆ ಸಿಕ್ಕಿಕೊಂಡ ಬೈಕ್ ಸವಾರನ ಫೀಲಿಂಗ್ ಬರುವುದೇನಾಶ್ಚರ್ಯ? ಆದ್ದರಿಂದಲೇ ಮೈ ಪರಚಿಕೊಳ್ಳುವಂತಾಗುತ್ತಿದ್ದುದು.

ಇರಲಿ, ವಿಷಯ ಎಲ್ಲೆಲ್ಲಿಗೋ ಹೋಯಿತು. 1987ಕ್ಕೆ ಮರಳಿ ಬರೋಣ, ಅವತ್ತಾದದ್ದೂ ಹೀಗೇ - ವರ್ಲ್ಡ್ ಕಪ್ ಲೈವ್ ನೋಡಲು ಪಕ್ಕದ ಮನೆಯ ಟೀವಿಯ ಮುಂದೆ ಜಮಾಯಿಸಿದ್ದೆವಲ್ಲ, ನಾವೈವರು (ನಾನು ಮತ್ತು ಆ ನಾಲ್ವರು ಖದೀಮರು), ವಾಸ್ತವದಲ್ಲಿ ನಾವು ಅಲ್ಲಿ ಹೋಗಿದ್ದೇನು ಕ್ರಿಕೆಟ್ ನೋಡಲೆಂದಲ್ಲ, ಪರೀಕ್ಷೆಗೆ ಓದಲಿಕ್ಕೆ (ಕೊನೆಯ ಪಕ್ಷ, ಮುಗ್ಧನಾದ ನಾನಾದರೂ ಹಾಗೆ ನಂಬಿದ್ದೆ). ಅಲ್ಲಿ 'ಕಾಮ್' ಆಗಿರುತ್ತದೆ, ಓದಲು ಚೆನ್ನ. ಹಾಗೇ 'ಅಣ್ಣ' ಟೀವಿ ಹಾಕಿದರೆ ಐದೇ ಐದು ನಿಮಿಷ ಹೈಲೈಟ್ಸ್ ನೋಡಿಬಿಡೋಣ ಎಂದ ಅಚ್ಚುತನ ಮಾತು ಸಾಚಾ ಎಂದೇ ನಂಬಿದ್ದೆ. ಸಮಯಕ್ಕೆ ಎಂದೂ ಕೇರ್ ಮಾಡದ ನಾವು ಅಂದು ಮಾತ್ರ ಠಾಕೋಠೀಕ್ ಊಟವಾದ ಕೂಡಲೇ ಅಲ್ಲಿ ಹಾಜರ್ (ಪುಸ್ತಕಪಾಣಿಗಳಾಗಿ ಎಂದು ಬೇರೆ ಹೇಳಬೇಕಿಲ್ಲವಲ್ಲ). ಟೀವಿಯ ಮುಂದೆ ಆಯಕಟ್ಟಿನ ಜಾಗ ಹಿಡಿದು ಕೂತದ್ದೂ ಆಯಿತು (ಅಲ್ಲೇ ಮೇಲೆ ಫ್ಯಾನ್ ಇತ್ತು, ತಂಗಾಳಿ ಚೆನ್ನಾಗಿತ್ತು, ಅದಕ್ಕೇ). ಓದಲು ಶುರು ಮಾಡಿದ್ದೂ ಆಯಿತು. ಪದೇ ಪದೇ ಗಡಿಯಾರ ನೋಡುತ್ತಿದ್ದ ಅಚ್ಚುತ ಮಾತ್ರ ಆ ಮನೆಯ 'ಅಣ್ಣ'ನ ಕಡೆ ಯಾಚನೆಯ ದೃಷ್ಟಿ ಬೀರುತ್ತಿದ್ದ. ನಾನೂ ಅದನ್ನು ಗಮನಿಸಿದ್ದೆ - ನಾವು ಗಂಭೀರವಾಗಿ ಓದಿಕೊಳ್ಳುತ್ತಿದ್ದುದರಿಂದ ಆ ಅಣ್ಣ ಟೀವಿ ಹಾಕಿಬಿಟ್ಟರೆ ನಮ್ಮ ಓದಿನ ಗತಿಯೇನು ಎಂದು ಆತ ಆತಂಕಗೊಂಡಂತಿತ್ತು. ಹಾಕಬೇಡಿ ಎಂದು ಅವರೆಡೆ ದೀನದೃಷ್ಟಿ ಬೀರುತ್ತಿದ್ದಾನೆನಿಸಿತು, ಅವನ ಕಾಳಜಿಯ ಬಗೆಗೆ ಹೆಮ್ಮೆಯಾಯಿತು ಕೂಡ. ಆದರೇನು, ನಾವು ಓದಿ IAS ಮಾಡುವ ಭವ್ಯಭವಿಷ್ಯದ ಬಗೆಗೆ ಚೂರೂ ಕಾಳಜಿಯಿಲ್ಲದ ಆ ಅಣ್ಣ, ಟೀವಿ ಹಾಕಿಯೇ ಬಿಟ್ಟರು (ಈ ಕ್ರಿಕೆಟ್ ಎನ್ನುವುದು ನೋಡಿ, ಮನುಷ್ಯನ ಸಾಮಾಜಿಕ ಜವಾಬ್ದಾರಿಯನ್ನೇ ಅಪಹರಿಸಿಬಿಡುತ್ತದೆ, ನಾವು ಹಾಳಾದರೆ ಅವರಿಗೇನು?). ಅದುವರೆಗೂ ಯಾಚನೆಯ ದೃಷ್ಟಿ ಬೀರುತ್ತಿದ್ದ ಇವನ ಮುಖವನ್ನೊಮ್ಮೆ ನೋಡಿದೆ. ಅಲ್ಲಿ ದುಃಖವೇನೂ ಕಾಣಲಿಲ್ಲ, ಬದಲಿಗೆ ಸಂತೃಪ್ತಿ ಸಮಾಧಾನ ಆಡುತ್ತಿತ್ತು. ಆಗಲೇ ಕಣ್ಣು ಟೀವಿಯಲ್ಲಿ ನೆಟ್ಟು ಹೋಗಿತ್ತು. ಏನಾದರೂ ಹಾಳಾಗಲಿ, ನಾನಂತೂ ಹಾಳಾಗಲು ತಯಾರಿರಲಿಲ್ಲ, ಧೀರನಂತೆ ಓದುವುದನ್ನು ಮುಂದುವರೆಸಿದೆ.

ಆಟ ಸ್ವಲ್ಪ ಕಾವೇರುತ್ತಿದ್ದಂತೆ ಟೀವಿಯಲ್ಲಿನ ಕಾಮೆಂಟರಿಯೊಡನೆ ಟೀವಿಯ ಹೊರಗೂ ರನ್ನಿಂಗ್ ಕಾಮೆಂಟರಿ ಶುರುವಾಯಿತು (ಅರ್ಥಾತ್, ಕೋಣೆ ತುಂಬಾ ಶತಪಥ ಓಡಾಡಿಕೊಂಡು ಕಾಮೆಂಟರಿ). ಆ ಹಾರಾಟ, ಕೂಗಾಟ, ಚೀರಾಟ - ಅಬ್ಬಾ! ಭಾರತ ಆಡುತ್ತಿತ್ತು, ಅವರ ಜೊತೆ ಯಾರೋ ನೆನಪಿಲ್ಲ. ಆ ಪಂದ್ಯದಲ್ಲಿ ಭಾರತ ಸೋತಿತೋ ಗೆದ್ದಿತೋ ನೆನಪಿಲ್ಲ, ಸದ್ಯಕ್ಕಂತೂ ಆಟ ತೂಗುಯ್ಯಾಲೆಯಲ್ಲಿತ್ತು. ಜಯಲಕ್ಷ್ಮಿ ಒಂದೊಂದು ಸಲ ಆಕಡೆ ಈಕಡೆ ವಾಲಿದಾಗಲೂ ಗಲಾಟೆ ತಾರಕಕ್ಕೇರುತ್ತಿತ್ತು.

ಈ ನಡುವೆ, ಅಲ್ಲಿ ನಮ್ಮ ಅವತಾರದ ನಿಜೋದ್ದೇಶವನ್ನು ನೆನಪಿಸಿ ಗೆಳೆಯರನ್ನು ಸನ್ಮಾರ್ಗಕ್ಕೆಳೆಯುವ ವಿಫಲಪ್ರಯತ್ನ ನಡೆಸಿದೆ. ಎಕನಾಮಿಕ್ಸ್ ನಲ್ಲಿ Diminishing Marginal Utility ಪಾಠ ಇತ್ತು. ಹಾಗಂದ್ರೆ ಏನೋ ಎಂದು ಎಕನಾಮಿಕ್ಸಿನಲ್ಲಿ 'ಪಂಟರ್' ಆದ ಮಿತ್ರನನ್ನು ಕೇಳಿದರೆ ಆ ಪ್ರಭೃತಿ "ಸದ್ಯಕ್ಕೆ ಇಂಡಿಯಾ ಟೀಮ್ ಸ್ಕೋರ್ ಮಾಡ್ತಿದೆಯಲ್ಲಾ, ಅದೇ Diminishing Marginal Utility" ಎನ್ನುವುದೇ? "ಲೋ ಅಕೌಂಟಿಂಗ್ ರೂಲ್ ಸ್ವಲ್ಪ ಕಷ್ಟ ಅನ್ಸುತ್ತೆ ಕಣೋ, ಒಂದ್ಸಲ ನೋಡೋಣ ಬರ್ರೋ" ಎಂದರೆ, "ಇಲ್ಲಿ ಇಂಡಿಯಾ ಅಕೌಂಟೇ ಕ್ಲೋಸ್ ಆಗ್ತಿದೆ, ಅಕೌಂಟಿಂಗ್ ರೂಲಂತೆ, ಸುಮ್ನಿರೋ" ಎಂದು ಬಾಯಿ ಮುಚ್ಚಿಸಲಾಯಿತು. ಸಂಜೆ ವಾಕಿಂಗ್ ಟೈಮೂ ಆಯ್ತು - "ವಾಕಿಂಗ್ ಹೋಗಿದ್ ಬರೋಣ ಬನ್ರಪ್ಪಾ, ಅಷ್ಟೊತ್ತಿಗೆ ಇನ್ನಷ್ಟು ವಿಕೆಟ್ ಬಿದ್ದಿರುತ್ತೆ, ಯಾವುದೂ ನಿಚ್ಚಳವಾಗಿ ಗೊತ್ತಾಗುತ್ತೆ" ಅಂದೆ. ಸ್ನೇಹಿತ ನನ್ನನ್ನೇ ನುಂಗಿಬಿಡುವಂತೆ ದುರುಗುಟ್ಟಿ ನೋಡಿ ಪಕ್ಕನೆ ಟೀವಿಯ ಕಡೆ ದೃಷ್ಟಿ ಹರಿಸಿದ - ನನ್ನ ಕಡೆ ನೋಡುವಷ್ಟರಲ್ಲಿ ನಿಜಕ್ಕೂ ವಿಕೆಟ್ ಬಿದ್ದೇ ಹೋಗುತ್ತೆ ಎಂದು ತಿಳಿದನೇನೋ. ಆದರೆ ವಿಧಿವಿಲಾಸ ನೋಡಿ, ಅವನು ಹಾಗೆ ಟೀವಿ ಕಡೆ ಕಣ್ಣು ಹಾಕೋಕ್ಕೂ ವಿಕೆಟ್ಟೊಂದು ನಿಜವಾಗೂ ಬೀಳೋಕ್ಕೂ ಒಂದೇ ಆಯಿತು. ಈಗ ಇಡೀ ಕೋಣೆ ನನ್ನನ್ನು ದುರುಗುಟ್ಟಿಕೊಂಡು ನೋಡತೊಡಗಿತು. ಇದ್ದಕ್ಕಿದ್ದ ಹಾಗೆ ನಾನಿದ್ದ ಪರಿಸರ ಶತ್ರುಪರಿಸರವಾಗಿ ಬದಲಾಗತೊಡಗಿ ನನಗೆ ಗಾಬರಿಯಾಯಿತು.

ಸರಿ, ದ್ವೀಪದಲ್ಲಿ ನಾನೊಬ್ಬನೇ ಎಷ್ಟು ಕಾಲ ಒಬ್ಬಂಟಿಯಾಗಿರಲು ಸಾಧ್ಯ. ಎಲ್ಲರೊಳಗೊಂದಾಗು ಮಂಕುತಿಮ್ಮ ಎಂದು ನನಗೆ ನಾನೇ ಹೇಳಿಕೊಂಡು ಪುಸ್ತಕ ಮುಚ್ಚಿಟ್ಟೆ, ಆಟವನ್ನು ನೋಡತೊಡಗಿದೆ. ಅಷ್ಟೇ ಅಲ್ಲ, ಪ್ರಾಮಾಣಿಕವಾಗಿ ಅರ್ಥ ಮಾಡಿಕೊಳ್ಳಲೂ ಯತ್ನಿಸುತ್ತಿದ್ದೆ. ಅವರು ಉದ್ಗಾರ ತೆಗೆದಾಗೆಲ್ಲಾ ಕಣ್ಣು ಕಿರಿದು ಮಾಡಿ ಆ ಉದ್ಗಾರಕ್ಕೆ ಕಾರಣವನ್ನು ಟೀವಿಯಲ್ಲಿ ಹುಡುಕತೊಡಗಿದೆ. ಅದೇನು, ಇದು ಹೇಗೆ ಇತ್ಯಾದಿ ಪ್ರಶ್ನೆ ಕೇಳತೊಡಗಿದೆ. ಆದರೆ ನನ್ನ ಸತ್ಪ್ರಯತ್ನಗಳ ಅರಿವಾದರೂ ಇವಕ್ಕಿರಬೇಕಲ್ಲ - ಪ್ರಶ್ನೆ ಕೇಳಿದಾಗೆಲ್ಲಾ ಸಿಡುಕುವುದು, ದುರುಗುಟ್ಟಿ ನೋಡುವುದು - ಅಬ್ಬಬ್ಬಬ್ಬಾ! ಅಷ್ಟರಲ್ಲಿ ಒಬ್ಬ "ಅಯ್ಯಯ್ಯೋ, ಸಿದ್ಧು ರನ್ನರ್ ಗೆ ಬಂದ್ನಲ್ಲಾ, ಬ್ಯಾಟಿಂಗ್ ಬ್ರೇಕಾಯ್ತಲ್ಲಾ ಒಳ್ಳೇ ಸಮಯಕ್ಕೆ" ಅಂದ. ನನಗೆ ನೋಡಿ, ಆಗಲೇ ಹೇಳಿದೆನಲ್ಲ, ಈ ಆಟಗಾರರ (ಅದರ ನೋಟಗಾರರ) ಟೆಂಪರಮೆಂಟೇ ಅರ್ಥವಾಗೊಲ್ಲ - ಯಾವಾಗ ಏನೋ! ಹೋಗಲಿ, ನಾನಾದರೂ ಸುಮ್ಮನಿರಬೇಕು ತಾನೆ? ಕೇಳಿಯೇ ಕೇಳಿದೆ - "ಈ ರನ್ನರ್ ಎಲ್ಲಿರ್ತಾನೆ?".

ಕೇಳಿದ್ದೇ ತಪ್ಪೇ? ಅಷ್ಟೇ ಜ್ಞಾಪಕ. ತಲೆಯ ಮೇಲೆ ಏನೋ ಧಪ್ಪನೆ ಬಿದ್ದಂತಾಯಿತು. ಒಂದು ಕ್ಷಣದ ಮೈಮರೆವು - ಇಡೀ ದೇಹ ಗಾಳಿಯಲ್ಲಿ ತೇಲಿಕೊಂಡು ಬಾಗಿಲಿನೆಡೆ ಸಾಗತೊಡಗಿತ್ತು. ಸಾವರಿಸಿಕೊಂಡು ನೋಡಿದರೆ, ಈ ನಾಲ್ಕೂ ಜನ ದುಷ್ಟರು ತಲೆಯ ಮೇಲೆ ಗುದ್ದಿ, ನನ್ನನ್ನು ಅನಾಮತ್ತು ಎತ್ತಿ ಬಾಗಿಲ ಕಡೆಗೊಯ್ಯುತ್ತಿದ್ದಾರೆ. ಲೋ ಲೋ ಎನ್ನುತ್ತಿದ್ದಂತೆ ಬಾಗಿಲಿಂದ ಹೊರಗೇ ದಬ್ಬಿ, ಬೆನ್ನ ಹಿಂದೆ ದಬ್ಬನೆ ಬಾಗಿಲು ಹಾಕಿದರು. ಒಳಗೆ ಹೋ ಎಂದು ಕೋಲಾಹಲ - "And... he is OUT" - ಕೂಗಿತು ಟೀವಿ.

ಒಳಗೆ ಇನ್ನೊಂದು ವಿಕೆಟ್ ಬಿದ್ದಿತ್ತು.

-
-
-
-
-
ಸೂ: ಈ ದಿನ ಮತ್ತೊಂದು ವರ್ಲ್ಡ್ ಕಪ್ ಫೈನಲ್. ಇದನ್ನು ಬೆಳಗ್ಗೆಯೇ ಬರೆದಿದ್ದೆ. ಇಡೀ ದೇಶ ತುದಿಗಾಲಿನಲ್ಲಿ ನಿಂತು ಕ್ರಿಕೆಟ್ ನೋಡುತ್ತಿದೆ, ಭಾವನೆಗಳು ಬಹಳ ರಭಸವಾಗಿರುತ್ತದೆ. 1987ರ ಪುನರಾವರ್ತನೆ ನನಗಾಗುವುದು ಬೇಡವೆಂದು ಸ್ವಲ್ಪ ತಡೆದೆ. ಈಗ ನೋಡಿದರೆ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತಿದೆಯೆಂದು ದುಃಖದ ವಾರ್ತೆ ಬಂದಿದೆ. ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ಈ ದುಃಖ ಭರಿಸುವ ಶಕ್ತಿ ಬರಲಿ - ಜಾತಸ್ಯ ಮರಣಂ ಧ್ರುವಂ, ಅಲ್ಲಲ್ಲ, ಆಟವೆಂದರೆ ಸೋಲು ಗೆಲುವು ಇದ್ದದ್ದೇ. ಆಷ್ಟ್ರೇಲಿಯಾ ಆದರೂ ಗೆದ್ದಿತಲ್ಲ, ಅವರೊಡನೆ ಸಂತಸ ಪಡೋಣ - ಈ ಹಿಂದೆ ಭಾರತ ಹಲವು ಬಾರಿ ಗೆದ್ದಿದೆ, ಆ ಸಂತಸವನ್ನು ನೆನೆಯೋಣ, ಮುಂದೆಯೂ ಗೆಲ್ಲುತ್ತದೆ, ಆ ಭರವಸೆಯನ್ನು ಇಡೋಣ. ಎಲ್ಲಕ್ಕಿಂತ ಹೆಚ್ಚಾಗಿ, ಕ್ರಿಕೆಟ್ಟಿನಲ್ಲಿ ಸೋತ ಭಾರತ ಚಂದ್ರಯಾನದಲ್ಲಿ ಗೆದ್ದಿದೆಯೆಂಬುದನ್ನೂ ಮರೆಯದಿರೋಣ
🙂

Friday, September 23, 2022

ಬೆಳದಿಂಗಳ ಕಸುಬು

ಚಂದ್ರನನ್ನು ಹಾಡಿ ಹೊಗಳದವರಾರು.  ತಂಬೆಳಕು ನೀಡುವವನು, ಮನಸ್ಸಿಗೆ ಆಹ್ಲಾದ ನೀಡುವವನು, ನಿಶಾಪತಿ, ತಾರಾಪತಿ, ನೈದಿಲೆಗಳಿಗೆ ಚಕೋರಪಕ್ಷಿಗೆ ಪರಮಾಪ್ತಮಿತ್ರ, ಎಷ್ಟೆಲ್ಲ ಉಪಾಧಿಗಳು ಚಂದ್ರನಿಗೆ! "ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ" ಎನ್ನುತ್ತಾರೆ ಬಸವಣ್ಣನವರು.  ಇನ್ನು ಪ್ರೇಮಿಗಳಿಗಂತೂ ಮನ್ಮಥನನ್ನು ಬಿಟ್ಟರೆ ಈತನೇ ಆರಾಧ್ಯದೈವ.  ಬೆಳದಿಂಗಳಿನಲ್ಲಿ ಕಡಲತಡಿಯಲ್ಲಿ ಕೈಕೈ ಹಿಡಿದುಕೊಂಡು ನಡೆಯುವ ಪ್ರೇಮಿಗಳಿಗೆ ಬೇರೆ ಪ್ರಪಂಚವೇ ಬೇಡವಂತೆ - ಅಂತೆ, ನಮಗೆ ತಿಳಿಯದು.  "ತೆಂಗುಗರಿಗಳ ನಡುವೆ ತುಂಬು ಚಂದಿರ ಬಂದು ಬೆಳ್ಳಿ ಹಸುಗಳ ಹಾಲ ಕರೆಯುವಂದು ಅಂಗಳದ ನಡುವೆ ಬೃಂದಾವನದ ಬಳಿ ನಿಂದು ಹಾಡುವೆವು ಸಿರಿಯ ಕಂಡು" ಎಂದು ಕವಿ ಕನಸುತ್ತಾನೆ.  

ಇಂಥಾ ಚಂದಿರನನ್ನು ದ್ವೇಷಿಸುವವರೂ ಇರುತ್ತಾರೆಯೇ?  ಯಾಕಿಲ್ಲ?  ಆರಾಧ್ಯದೈವವೆಂದು ಕೊಂಡಾಡುವ ಅದೇ ಪ್ರೇಮಿಗಳನ್ನು ಒಮ್ಮೆ ಅಗಲಿಸಿ, ಅವರ ಮೇಲೆ ಬೆಳದಿಂಗಳನ್ನು ಹರಿಸಿ ನೋಡಿ, ಆಗ ತಿಳಿಯುತ್ತದೆ ಅವರ ಚಂದ್ರಭಕ್ತಿಯ ಅಸಲಿಯತ್ತು - ಪ್ರೇಮಿಯನ್ನಗಲಿದ ಜೀವಕ್ಕೆ ಬೆಳದಿಂಗಳೇ ಬಿಸಿಲಾಗಿ ಕಾಡುತ್ತದಂತೆ, ಮಲಯಾನಿಲ ಬಿಸಿಗಾಳಿಯಾಗಿಬಿಡುತ್ತದಂತೆ, ಚಂದನ ಮೈಸುಡುತ್ತದಂತೆ.  ಶೃಂಗಾರಕಾವ್ಯಗಳ ಅರ್ಧಕ್ಕರ್ಧ ಈ ವಿರಹಿಗಳ ವಿರಹಾಲಾಪದಿಂದಲೇ ತುಂಬಿ ಹೋಗಿದೆ - ಮನ್ಮಥ, ವಸಂತ, ಚಂದ್ರ, ಚಂದನ ಮತ್ತು ಮಲಯಾನಿಲ ಇವಿಷ್ಟನ್ನು ಎಷ್ಟು ಗೋಳುಗರೆದರೂ ಸಾಲದು.  ಪಾಪ ಇಲ್ಲೊಬ್ಬ ಪ್ರೇಮಿ ಚಂದ್ರನಲ್ಲಿ ಹೇಗೆ ಮೊರೆಯಿಡುತ್ತಾನೆ ನೋಡಿ, ರಾಜಶೇಖರನ ವಿದ್ಧಶಾಲಭಂಜಿಕಾ ನಾಟಕದಲ್ಲಿ:

ಸೂತಿರ್ದುಗ್ಧಸಮುದ್ರತೋ ಭಗವತಃ ಶ್ರೀಕೌಸ್ತುಭೌ ಸೋದರೌ

ಸೌಹಾರ್ದಂ ಕುಮುದಾಕರೇಷು ಕಿರಣಾಃ ಪೀಯೂಷಧಾರಾಕಿರಃ

ಸ್ಪರ್ಧಾ ತೇ ವದನಾಂಬುಜೈರ್ಮೃಗದೃಶಾಂ ತತ್ ಸ್ಥಾಣುಚೂಡಾಮಣೇ

ಹಂಹೋ ಚಂದ್ರ ಕಥಂ ನು ಮುಂಚಸಿ ಮಯಿ ಜ್ವಾಲಾಮುಚೋ ವೇದನಾಃ

(ಹೇ ಚಂದ್ರಭಗವನ್, ನೀನು ಹುಟ್ಟಿದ್ದು ನೋಡಿದರೆ ಹಾಲಿನ ಸಮುದ್ರದಲ್ಲಿ, ಲಕ್ಷ್ಮಿಯೂ ಕೌಸ್ತುಭರತ್ನವೂ ನಿನ್ನ ಸೋದರರು, ನಿನ್ನ ಸ್ನೇಹವೋ ಕುಮುದಪುಷ್ಪಗಳಿಂದ ತುಂಬಿದ ಕೊಳಗಳೊಡನೆ, ಕಿರಣವೋ ಅಮೃತಧಾರೆ, ಇನ್ನು ನಿನ್ನ ಸ್ಪರ್ಧೆಯೋ, ಆ ಮೃಗನಯನಿಯರ ಮುಖಕಮಲಗಳೊಂದಿಗೇ, ವಾಸವನ್ನು ನೋಡಿದರೆ, ಸಾಕ್ಷಾತ್ ಶಿವನ ತಲೆಯಮೇಲೆ ಚೂಡಾಮಣಿಯಾಗಿ ನೆಲೆಸಿದ್ದೀಯೆ - ಹೀಗಿದ್ದೂ ನನ್ನ ಮೇಲೆ ಮಾತ್ರ ಏಕಪ್ಪಾ ಈ ವೇದನಾಮಯವಾದ ಜ್ವಾಲೆಯನ್ನು ಹರಿಸುತ್ತಿದ್ದೀಯೆ?)

ಚಂದ್ರನನ್ನು ದ್ವೇಷಿಸುವ ಇನ್ನೊಂದು ಜೀವವಿದೆ - ಆತ ವಿರಹಿಯೂ ಅಲ್ಲ, ಪ್ರೇಮಿಯೂ ಅಲ್ಲ, ಭಾವುಕನೂ ಅಲ್ಲ, ಕೇವಲ ಡೌನ್ ಟು ಅರ್ಥ್ ಕಸಬುದಾರ - 

ಕಳ್ಳ.  

ಈಗಿನ ಕಳ್ಳರು ಹೇಗೋ ಗೊತ್ತಿಲ್ಲ, ಹಿಂದಿನ ಕಳ್ಳರಂತೂ ಪಾರಂಪರಿಕವಾಗಿ ಚಂದ್ರನನ್ನು ದ್ವೇಷಿಸಿಕೊಂಡೇ ಬಂದಿದ್ದಾರೆ.  "ಚೋರ ನಿಂದಿಸಿ ಶಶಿಯ ಬೈದೊಡೆ... ಏನಹುದು" ಎಂದು ಹೀಯಾಳಿಸುತ್ತಾನೆ ಕವಿ ಕುಮಾರವ್ಯಾಸ.  ಆಚಾರ್ಯ ಚಾಣಕ್ಯನಂತೂ "ಚೋರಾಣಾಂ ಚಂದ್ರಮಾ ರಿಪುಃ" ಎಂದೇ ಘೋಷಿಸಿಬಿಟ್ಟಿದ್ದಾನೆ.  ಕಳ್ಳನೊಬ್ಬನದೇ ಏಕೆ, ಆ ಪೂರ್ತಿ ಪದ್ಯವೇ ಅವಗಾಹ್ಯವಾಗಿದೆ, ಒಮ್ಮೆ ನೋಡಿಬಿಡೋಣ:

ಲುಬ್ಧಾನಾಂ ಯಾಚಕಃ ಶತ್ರುಃ ಮೂರ್ಖಾಣಾಂ ಬೋಧಕೋ ರಿಪುಃ |

ಜಾರಸ್ತ್ರೀಣಾಂ ಪತಿಃ ಶತ್ರುಃ ಚೋರಾಣಾಂ ಚಂದ್ರಮಾ ರಿಪುಃ

(ಚಾಣಕ್ಯನೀತಿ 10-6)

(ಲೋಭಿಗೆ ಬೇಡುವವನೇ ಶತ್ರುವಾದರೆ ಮೂರ್ಖನಿಗೆ ಬೋಧಿಸುವವನು; ಹಾದರಗಿತ್ತಿಗೆ ಪತಿಯೇ ಶತ್ರುವಾದರೆ, ಕಳ್ಳರಿಗೆ ಚಂದ್ರನೇ ಶತ್ರು)

ಎಂಜಲ ಕೈಯಲ್ಲಿ ಕಾಗೆ ಹೊಡೆಯದ ಲೋಭಿಯ ಬಳಿ ಹೋಗಿ ಸ್ವಲ್ಪ "ಕೀತ ಬೆಟ್ಟಿಗೆ ಉಚ್ಚೆ ಹೊಯ್ಯಿ" ಎಂದು ಬೇಡಿದರೆ ಆತ "ಜಲ ಮಲ ಕಟ್ಟಿ ಮೂರು ದಿನ ಆಯ್ತು" ಎಂದು ಹೇಳಿ ಎದ್ದು ಹೋದನಂತೆ.  ಹೀಗಿರುವಾಗ ಯಾಚಿಸಿದರೆ?  ನೀವೇ ಯೋಚಿಸಿ!  ಇನ್ನು ಮೂರ್ಖರಿಗೆ ಬೋಧಕರು ಅದೆಂತಹ ಪರಮಶತ್ರುಗಳು ಎಂಬುದನ್ನಂತೂ ಹೇಳುವುದೇ ಬೇಡ.  ಅಂತಹ ಸರ್ವಜ್ಞನೇ "ಮೂರ್ಖರಿಗೆ ನೂರ್ಕಾಲ ಬುದ್ಧಿ ಪೇಳಿದರೇನು ಗೋರ್ಕಲ್ಲ ಮೇಲೆ ಮಳೆ ಸುರಿಯಲಾ ಕಲ್ಲು ನೀರ್ಗುಡಿಯಲಪ್ಪುದೇ" ಎಂದು ಕೈ ಚೆಲ್ಲಿ, ಅಲ್ಲಲ್ಲ, ನೀರು ಚೆಲ್ಲಿ ಕೈಬಿಟ್ಟಿದ್ದಾನೆ.  ಸರ್ವಜ್ಞನಾದರೋ ನೂರ್ಕಾಲ ಮಳೆಸುರಿದು ನೋಡಿದ.  ಆದರೆ ಇದನ್ನು ಶತಮಾನಗಳ ಮೊದಲೇ ಕಂಡಿದ್ದ ಚಾಣಕ್ಯ, ಈ ಪ್ರಯತ್ನವೇ ವಿಫಲ ಎನ್ನುತ್ತಾನೆ.  "ಎಷ್ಟು ನೂರು ಬಾರಿ ತೊಳೆದರೂ ಗುದವು ಗುದವೇ ಹೊರತು ವದನವಾದೀತೇ" ಎಂಬುದು ಆತನ ನೇರ ಅಭಿಪ್ರಾಯ (ದುರ್ಜನಂ ಸಜ್ಜನಂ ಕರ್ತುಂ ಉಪಾಯಂ ನ ಹಿ ಭೂತಲೇ; ಅಪಾನಂ ಶತಧಾ ಧೌತಂ ನ ಶ್ರೇಷ್ಠಮಿಂದ್ರಿಯಂ ಭವೇತ್ (ಚಾಣಕ್ಯನೀತಿ - 10-10) - ದುರ್ಜನರನ್ನು ಸಜ್ಜನರನ್ನಾಗಿ ಮಾಡುವ ಉಪಾಯ ಈ ಭೂಮಿಯಲ್ಲಿ ಇಲ್ಲವೇ ಇಲ್ಲ; ಗುದವನ್ನು ನೂರು ಬಾರಿ ತೊಳೆದರೂ ಅದು ವದನವಾಗುವುದಿಲ್ಲ)

ಅದಿರಲಿ, ಮೂಲಶ್ಲೋಕಕ್ಕೆ ಮರಳೋಣ. ಲೋಭಿಗಳು ಮತ್ತು ಮೂರ್ಖರ ಬಗೆಗೆ ಹೇಳಿದ್ದೇನೋ ಸರಿ, ಆದರೆ "ಜಾರಸ್ತ್ರೀಣಾಂ ಪತಿಃ ಶತ್ರುಃ" ಎಂಬಲ್ಲಿ ಮಾತ್ರ ಚಾಣಕ್ಯನು ಪಕ್ಕಾ ಮೇಲ್ ಶೌವೆನಿಸ್ಟಿಕ್ ಆಗಿಬಿಟ್ಟಿದ್ದಾನೆ - ಜಾರತನವನ್ನು ಕೇವಲ ಸ್ತ್ರೀಯರು ಮಾಡುತ್ತಾರೆಯೇ?  ಅಥವಾ ಜಾರತನ ಮಾಡುವ ಪುರುಷರಿಗೇನು ಅವರ ಸತಿ ಶತ್ರುವೇ ಅಲ್ಲವೇ?  ಇದನ್ನೂ ಚಾಣಕ್ಯ ಹೇಳಬೇಕಾಗಿತ್ತು.  ಈ ಕಾರಣಕ್ಕಾಗಿ ಯಾರಾದರೂ ಚಾಣಕ್ಯನ ಮೇಲೆ ಹಕ್ಕುಚ್ಯುತಿ ಮಂಡಿಸುವುದಿದ್ದರೆ ಅದನ್ನು ನಾನಂತೂ ಬೆಂಬಲಿಸುತ್ತೇನೆ.  

ನೋಡಿ, ನಾವು ಶುರುಮಾಡಿದ್ದು ಕಳ್ಳನ ವಿಷಯ.  ಕಳ್ಳತನದ ಸುಳಿವು ಕಂಡದ್ದೇ ತಡ, ಮಾತು ಯಾವಯಾವುದೋ ಕಳ್ಳವ್ಯವಹಾರಗಳ ಹಾದಿಯನ್ನೇ ಹಿಡಿಯಿತು.  ಮತ್ತೆ ಸರಿದಾರಿಗೆ - ಅಂದರೆ ಕಳ್ಳನ ದಾರಿಗೆ ಬರೋಣ - "ಚೋರಾಣಾಂ ಚಂದ್ರಮಾ ರಿಪುಃ" - ಸದ್ಯಕ್ಕೆ ನಮ್ಮ ಅವಗಾಹನೆಗೆ ಬೇಕಾದ್ದು ಈ ಚಂದ್ರವೈರಿಯಾದ ಕಳ್ಳೋತ್ತಮನೇ.  

ಇಷ್ಟಕ್ಕೂ ಕಳ್ಳನಿಗೆ ಚಂದ್ರನ ಮೇಲೆ ಅಷ್ಟು ದ್ವೇಷವೇಕೆ, ಅದಕ್ಕೇನಾದರೂ ಪುರಾಣದ ಕತೆಯಿದೆಯೇ ಎಂದು ಕೇಳಬೇಡಿ - ಅದರ ಹಿಂದೆ ಇರುವುದು ಪುರಾಣವಲ್ಲ, ಕಾಮನ್ ಸೆನ್ಸು.  ಅಲ್ಲ, ಎಲ್ಲೆಲ್ಲೂ ಹಾಲು ಚೆಲ್ಲಿದಂತೆ ಬೆಳದಿಂಗಳು ಚೆಲ್ಲಿದ್ದರೆ ಆ ಬೆಳದಿಂಗಳ ರಾತ್ರಿಯಲ್ಲಿ ಕಳ್ಳನೇನು ಮೋಹಿನಿಯ ಜೊತೆ ಕೂತು ರೊಮ್ಯಾನ್ಸ್ ಮಾಡುತ್ತಾ ಕಾಲ ಹಾಕಬೇಕೇ?  ಅವ ಬಂದಿರುವುದು ಕಳ್ಳತನ ಮಾಡಲು - ಕಳ್ಳತನ ಯಾರ ಕಣ್ಣಿಗೂ ಬೀಳದಂತೆ ಮಾಡಬೇಕಾದ ಕೆಲಸ, ನಮ್ಮ ವಡಿವೇಲುವಿನಂತೆ ಢಾಣಾಢಂಗುರ ಹೊಯಿಸಿ, ಪೋಸ್ಟರ್ ಹಚ್ಚಿ ಮಾಡಬೇಕಾದ ಸಮಾರಂಭವಲ್ಲ.  ಅದು ಹೇಳಿಕೇಳಿ ಕಪ್ಪು ಕೆಲಸ - ಅದಕ್ಕೆ ಬೆಳದಿಂಗಳ ರಾತ್ರಿ ಆಗಿಬರದು. ಮಾಟಮಂತ್ರವೇ ಮೊದಲಾದ ಅಭಿಚಾರವಿದ್ಯೆಗಳಂತೆ ಇದೂ ಕಪ್ಪು ರಾತ್ರಿಯಲ್ಲೇ ಮಾಡಬೇಕಾದ ಕೆಲಸ - ಸೂರ್ಯಗ್ರಹಣವೂ ಕಪ್ಪುಕಾಲವೇ ಆದರೂ ಅದು ಮಾಟಮಂತ್ರಗಳಿಗೆ ಆದೀತೇ ಹೊರತು ಕಳ್ಳತನಕ್ಕೆ ಆಗಿಬರುವುದಿಲ್ಲ, ಏಕೆಂದರೆ ಸೂರ್ಯಗ್ರಹಣಗಳು ಆಗುವುದು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲೇ ನೋಡಿ!  ಗ್ರಹಣಕ್ಕೆ ಹೆದರಿ ಜನ ಮನೆಯಲ್ಲೇ ಗುಬ್ಬೆಂದು ಕೂತಿರುವಾಗ ಅಲ್ಲಿಗೆ ಕಳ್ಳ ಹೊಕ್ಕು ಜಯಿಸಲಾಗುವುದೇ?

ಈಗೆಲ್ಲ ಬಿಡಿ, ಕಳ್ಳನ ಕೆಲಸಕ್ಕೆ ಕಲ್ಲು ಹಾಕಲು ಹುಣ್ಣಿಮೆಯ ಚಂದ್ರನೇ ಬೇಕಿಲ್ಲ - ಬೀದಿ ದೀಪಗಳಿವೆ (ಅವು ನೂರಕ್ಕೆಪ್ಪತ್ತರಷ್ಟು ಕೆಟ್ಟು ಕೂತಿರುತ್ತವೆ ಎಂಬ ವಿಷಯವನ್ನು ಸದ್ಯಕ್ಕೆ ಪಕ್ಕಕ್ಕಿಡೋಣ), ಅವಿಲ್ಲದಿದ್ದರೇನಾಯಿತು, ದಂಡಿಯಾಗಿ ಬೀದಿ ನಾಯಿಗಳಿವೆ - ನಮ್ಮ ರಕ್ಷಣೆಗಾಗಿಯೇ ಕಾರ್ಪೊರೇಷನ್ನು ಅವುಗಳನ್ನು ಬೀದಿಬೀದಿಗಳಲ್ಲಿ ಬೆಳೆಸಿದೆ, ಸ್ವಲ್ಪ ಶ್ರೀಮಂತರ ಮನೆಗಳಲ್ಲಾದರೆ ಮನೆಯಲ್ಲಿ ಸಾಕಿದ ನಾಯಿಗಳೂ ಇರುತ್ತವೆ, ಮನೆಯ ದೀಪಗಳಂತೂ ಇದ್ದೇ ಇವೆ, ಸ್ವಲ್ಪ ಮುಂದುವರೆದ ಮನೆಗಳಲ್ಲಿ ಬರ್ಗಲರ್ ಅಲಾರ್ಮು, ಸಿಸಿಟಿವಿ ಹೀಗೆ ಇನ್ನೂ ಏನೇನೋ ಇರುತ್ತವೆ.  ಆದ್ದರಿಂದ ಈಚಿನ ಕಳ್ಳರಿಗೆ ಚಂದ್ರನೇನು ಬಲುದೊಡ್ಡ ತೊಡಕಲ್ಲ.  ಅಲ್ಲದೇ ಈಗಂತೂ ಹಾಡುಹಗಲಲ್ಲೇ ದರೋಡೆ ಮಾಡಿ ಹೋಗುವಷ್ಟು ಟೆಕ್ನಾಲಜಿ ಮುಂದುವರೆದಿರುವುದರಿಂದ ಈಗೇನಿದ್ದರೂ ಚಂದ್ರ ಒಂದು ಸಂಕೇತವಷ್ಟೇ - ಕಸುಬಿಗೆ ತೊಡಕಾಗಿರುವ ಎಲ್ಲದರ ಸಂಕೇತ - ಎಲ್ಲಿ ಯಾವುದೇ ಕೆಟ್ಟದಿದ್ದರೂ ಅದನ್ನು ಬ್ರಾಹ್ಮಣ್ಯವೆಂದು ಕರೆಯುವುದಿಲ್ಲವೇ, ಹಾಗೆ ಎಂದಿಟ್ಟುಕೊಳ್ಳಬಹುದು.

ಅದೇನೇ ಇರಲಿ, ವಾಸ್ತವದಲ್ಲಿ ಕಳ್ಳರು ಚಂದ್ರಪ್ರೇಮಿಗಳಲ್ಲದಿದ್ದರೂ ಚಂದ್ರದ್ವೇಷಿಗಳಲ್ಲ ಎಂಬುದನ್ನು ಸ್ಥಾಪಿಸಲಿಕ್ಕೆ ಇಷ್ಟು ಹೇಳಬೇಕಾಯಿತು.  ಅಷ್ಟೇಕೆ, ಈಗೀಗ ಒಂದು ಹೊಸಬಗೆಯ ಕಳ್ಳರ ಸಮುದಾಯ ರೂಪುಗೊಂಡಿದೆ.  ಅವರು ಸುತರಾಂ ಚಂದ್ರದ್ವೇಷಿಗಳಲ್ಲ.  ಇವರೂ ಸಾಮಾನ್ಯವಾಗಿ ನಡುರಾತ್ರಿಯಲ್ಲೇ ಕೆಲಸಮಾಡುವುದರಿಂದ ಇವರನ್ನು ನಿಶಾಚರರು ಎಂದೇ ಕರೆಯಬಹುದಾದರೂ ಇವರ ಕಸುಬಿಗೆ moonlighting ಎಂಬ ಸುಂದರವಾದ, ಕಾವ್ಯಮಯವಾದ ಹೆಸರಿದೆ.  ತಡೆಯಿರಿ, ಹೆಸರನ್ನು ನೋಡಿಕೊಂಡು ಕಸುಬಿಗಿಳಿಯುವುದು ಒಳ್ಳೆಯದಲ್ಲ.  ಹೆಸರು moonlighting ಆದರೂ ವಾಸ್ತವದಲ್ಲಿ ಅದು ಕಳ್ಳಕೆಲಸ.  ಒಂದು ಕಂಪನಿಯಲ್ಲಿ ಕೆಲಸಕ್ಕಿದ್ದುಕೊಂಡೇ ಗುಟ್ಟಾಗಿ ಇನ್ನೊಂದು ಕಂಪನಿಗೆ ಕೆಲಸ ಮಾಡುವುದಕ್ಕೆ ಕಾರ್ಪೊರೇಟ್ ವಲಯದಲ್ಲಿ moonlighting ಎಂಬ ನಾಮಧೇಯವಿದೆ.  ಈ moonlighting ಯಾವ ಕ್ಷೇತ್ರದಲ್ಲೂ ಆಗಬಹುದಾದರೂ ಸಾಮಾನ್ಯವಾಗಿ ಇದು ಐಟಿ ವಲಯದಲ್ಲೇ ಹೆಚ್ಚು.  ಈಗಂತೂ work from home ಬಹಳ ಹೆಚ್ಚಾದುದರಿಂದ ಈ 'ತಂಬೆಳಕು ಕೋರ'ರ ಸಂಖ್ಯೆಯೂ ವಿಪರೀತ ಹೆಚ್ಚಾಗಿದೆಯಂತೆ.  ಸಾಮಾನ್ಯವಾಗಿ ಐಟಿ ವಲಯದಲ್ಲಿ ಕೆಲಸದಲ್ಲಿರುವ ಯಾರಿಗಾದರೂ ಅವರವರ ಮಾನವಸಂಪನ್ಮೂಲವಿಭಾಗದಿಂದ ಹೀಗೆ ಮಾಡದಂತೆ ಎಚ್ಚರಿಕೆ ಸಂದೇಶ ಬಂದೇ ಇರುತ್ತದೆ.  ಸರಿ, ಮಾಡುವುದು ಕಳ್ಳಕೆಲಸ.  ಇದಕ್ಕೆ moonlighting ಎಂಬ ಹೆಸರೇಕೆ ಎಂದಿರಾ?  ಅದು ಹೀಗೆ.  ನೀವು ಮಾಡುವ ಮುಖ್ಯ ಕೆಲಸ ಸಾಮಾನ್ಯವಾಗಿ ಹಗಲು ಹೊತ್ತಿನದು - 9ರಿಂದ 6 ಎಂದಿಟ್ಟುಕೊಳ್ಳೋಣ - ಇದು sunlight ಇರುವ ಸಮಯ.  ಅದಾದ ಮೇಲೆ ನಿಮ್ಮ ಬಿಡುವಿನ ಸಮಯದಲ್ಲಿ ಇನ್ನೊಂದು ಕಂಪನಿಯಲ್ಲಿ ಇನ್ನೊಂದು ಆರೇಳು ಗಂಟೆ ಕೆಲಸ ಮಾಡುತ್ತೇನೆಂದರೆ ಅದು ರಾತ್ರಿಯ ಕೆಲಸವಾಯಿತಲ್ಲ - ಅದು moonlight ಸಮಯವಷ್ಟೇ?  ಆ ಸಮಯದಲ್ಲಿ ಮಾಡುವ ಕೆಲಸವಾದ್ದರಿಂದ ಅದು moonlighting.  

ಸರಿಯಪ್ಪಾ, ಆದರೂ ಕಳ್ಳಕೆಲಸಕ್ಕೆ ಇಷ್ಟು ಸುಂದರ ಹೆಸರೇ ಎಂದರೆ, ನೋಡಿ, ನಾವು ಐಟಿ ಜನ, ಭಾಷಾನಯವನ್ನು ಅರಿತವರು, ಯಾವುದನ್ನೂ ಎದುರಾಳಿಯ (ಅವನು ಕಳ್ಳನೇ ಆದರೂ) ಮನಸ್ಸಿಗೆ ನೋವಾಗದಂತೆ ಹೇಳುವ ಕಲೆ ನಮ್ಮ ಕಸುಬಿನ ಒಂದು ಭಾಗ.  ಅದ್ದರಿಂದಲೇ ಮೀಟಿಂಗುಗಳಲ್ಲಿ problem (ಗೋಳು)ಗಳು concernಗಳಾಗುತ್ತವೆ, hurdle (ತೊಡಕು)ಗಳು challengeಗಳಾಗುತ್ತವೆ; ನಾವು ಒಬ್ಬರಿನ್ನೊಬ್ಬರೊಂದಿಗೆ discuss ಮಾಡುವುದಿಲ್ಲ, brainstorm ಮಾಡುತ್ತೇವೆ, ಹಾಗೆ brainstorm ಮಾಡಲು ಒಂದೆಡೆ ಸೇರಬೇಕಲ್ಲ, ಸೇರಬೇಕೆಂದರೆ ಸಂಬಂಧಪಟ್ಟವರನ್ನು ಸಂಪರ್ಕಿಸಬೇಕಲ್ಲ; ಹಾಗೆಲ್ಲಾ ಒಡ್ಡೊಡ್ಡಾಗಿ ಹೋಗಿ ಸಂಪರ್ಕಿಸಿಬಿಡುವುದಿಲ್ಲ, ನಯವಾಗಿ touch base ಮಾಡುತ್ತೇವೆ - ಇಲ್ಲ ಇಲ್ಲ, ತಪ್ಪು ತಿಳಿಯಬೇಡಿ, ಮುಟ್ಟುವ ಕೆಲಸವೇನು ಇಲ್ಲ, ಮೀಟಿಂಗ್ ಮಾಡೋಣವಾ ಎಂದು ಕೇಳುವ ವಿಧಾನವಷ್ಟೇ ಅದು.  ಅಷ್ಟೇಕೆ, ಐಡಿ ಕಾರ್ಡ್ ಇಲ್ಲದೇ ಹೊಂಚು ಕಾದು ಇನ್ನೊಬ್ಬರ ಹಿಂದೆ ಒಳನುಗ್ಗುವುದನ್ನೂ tresspassing ಎಂದು ಕರೆದು ಅವರ ಮನನೋಯಿಸುವುದಿಲ್ಲ, ಅವರಿಗೆ ಖುಶಿಯಾಗುವ ಹಾಗೆ tailgating ಎನ್ನುತ್ತೇವೆ.  ಆದ್ದರಿಂದಲೇ ಒಂದು ಕೆಲಸದಲ್ಲಿದ್ದುಕೊಂಡೇ ಇನ್ನೊಂದು ಕಡೆ ಕೆಲಸ ಮಾಡುವುದನ್ನು doublecrossing ಎನ್ನುವ ಬದಲು ಡೀಸೆಂಟಾಗಿ moonlighting ಎನ್ನುತ್ತೇವಷ್ಟೇ.  ಬೇಕಾದರೆ ಇದನ್ನು "ಚಂದ್ರೋಪಜೀವನ" ಎಂದು ಅನುವಾದಿಸಿಕೊಳ್ಳಬಹುದು, ಅಥವಾ ಅಚ್ಚಗನ್ನಡದಲ್ಲಿ "ಬೆಳದಿಂಗಳ ಬದುಕು" ಎನ್ನಬಹುದು (ಬದುಕು = ಉದ್ಯೋಗ, ಉಪಜೀವಿಕೆ, ವೃತ್ತಿ).  ಅಥವಾ ಹೆಚ್ಚು ಕಸುಬುದಾರಿಕೆ ಕಾಣಬೇಕೆಂದರೆ "ಬೆಳದಿಂಗಳ ಕಸುಬು" ಎನ್ನಲೂ ಬಹುದು.  ಏನೇ ಇರಲಿ, ಇತ್ತೀಚಿಗೆ ಈ moonlighting ಒಂದು ಭಾರೀ ಪಿಡುಗಾಗಿದೆಯಂತೆ.  ಆದರೆ ಅದಕ್ಕಾಗಿ ಚಂದ್ರನನ್ನು ಶಪಿಸಬೇಕಿಲ್ಲ - ಈ ವಿಷಯದಲ್ಲಿ ನಿಜಕ್ಕೂ ನಿಷ್ಪಾಪಿ ಆತ.  

ಇರಲಿ, ಇಷ್ಟೆಲ್ಲಾ ಹೇಳಿದ ಮೇಲೆ ಒಂದು ಜೋಕು ನೆನಪಿಗೆ ಬರುತ್ತಿದೆ.  ಅದೂ ಒಂದನ್ನು ಕೇಳಿಬಿಡುವುದರಲ್ಲಿ ನಿಮಗೆ ಹೆಚ್ಚಿನ ತೊಂದರೆಯೇನೂ ಆಗದು.  ಪರೀಕ್ಷೆಗೆ ಹೋದವನೊಬ್ಬನಿಗೆ ಅಲ್ಲಿ ಹಸುವಿನ ಮೇಲೆ ಪ್ರಬಂಧ ಬರೆಯಲು ಹೇಳಿದ್ದು ಕೇಳಿ ಗಾಬರಿಯಾಯಿತಂತೆ.  ಇವನು ಓದಿಕೊಂಡು ಹೋಗಿದ್ದು ತೆಂಗಿನ ಮರದ ಬಗ್ಗೆ.  ಚಿಂತಿಸಿ ಏನು ಪ್ರಯೋಜನ?  ಓದಿಕೊಂಡು ಹೋಗಿದ್ದಂತೆ ತೆಂಗಿನ ಮರದ ಮೇಲೇ ಪ್ರಬಂಧ ಬರೆದನಂತೆ, ಕೊನೆಯಲ್ಲಿ "ಇಂಥಾ ಕಲ್ಪವೃಕ್ಷದಂತಹ ತೆಂಗಿನ ಮರಕ್ಕೆ, ಕಾಮಧೇನುವಿನಂತಹ ಹಸುವನ್ನು ಕಟ್ಟುತ್ತಾರೆ - ಇಲ್ಲಿಗೆ ಹಸುವಿನ ಮೇಲಿನ ಪ್ರಬಂಧ ಮುಗಿಯಿತು" ಎಂದು ಮುಗಿಸಿ ಎದ್ದು ಬಂದನಂತೆ.  ಮಿತ್ರ ಶ್ರೀ Hunasuru Sudeendra ಅವರು moonlighting ಬಗ್ಗೆ ಬರೆಯಿರಿ ಎಂದರು.  ಅದಕ್ಕಾಗಿ ಇಷ್ಟು ಬರೆಯಬೇಕಾಯಿತು.


Wednesday, June 1, 2022

ನಿರಾಶಯ

ನನ್ನ ಕವಿತೆಗೆ ಅದಿರಲಿ ಇದಿರಲಿ ಎಂದೆಲ್ಲ ನಾನು ಕೇಳುವುದಿಲ್ಲ ಅದಿಲ್ಲದಿರಲಿ ಇದಿಲ್ಲದಿರಲಿ ಎಂದಂತೂ ಮೊದಲೇ ಕೇಳುವುದಿಲ್ಲ. "ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವ ವೀರನೂ ಅಲ್ಲ" ಬೇಕಾದ್ದ ಬೇಕಾದೆಡೆಯಿಡುವ ಸೃಷ್ಟಿಶಕ್ತಿಯ ಬಾರದ್ದ ಬಾರದೆಡೆಯಿಡದ ದೃಷ್ಟಿವಿವೇಕವ ಬಳಸಲರಿಯದೆ ಮತ್ತೊಂದಕೆ ಗೆಂಜುವ ಹಲ್ಲು ಶೂರನದೂ ಅಲ್ಲ ಇದು ಕಾರಣ ನೆರೆ ಮೂರು ಲೋಕವೂ ಕವಿತೆಯ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ. ತನ್ನ ರಕ್ತಮಾಂಸದೆ ಮೈದಳೆದ ಕವಿತೆಗೆ ಅವರ ಸತ್ವ, ಇವರ ಸತ್ಯ, ಅವರ ಹೃದಯ, ಇವರ ಮಿದುಳು
ಇನ್ನೊಬ್ಬರ ರಕ್ತ ಸಿಕ್ತ ಬಟ್ಟೆ ತಿರಿತಂದು ತೊಡಿಸಿ ಮೆರೆಸುವ ತಿರುಪ ತನಗೆಂದೂ ಬಾರದಿರಲಿ. ಗಾಂಧಿ ಬುದ್ಧ ಬಸವ ಅಲ್ಲಮರ, ಇಸಾಯಿ ಪೈಗಂಬರರ ಸತ್ವ ಕವಿತೆಯಲ್ಲಲ್ಲ, ಅದು ಹುಟ್ಟುವ ಮಣ್ಣಿನಲ್ಲಿ ತುಂಬಲಿ ಇರುವುದಿಲ್ಲದ ಅಲ್ಲದ್ದು ಮೊಳೆತ ಅಷ್ಟಾವಕ್ರವ ಹುಟ್ಟುವ ಮೊದಲೇ ಹೂತು ಮತ್ತೊಂದ ನೇಯುವ ಕಸುವಿರದವ ಕವಿಯೇ ಅಲ್ಲ
ವಿಸೂ: ಇದೊಂದು ಪದ್ಯವಲ್ಲ (ಕಾವ್ಯ ಮೊದಲೇ ಅಲ್ಲ), ಪದ್ಯದ ಕೌದಿ ಹೊದ್ದ ಗದ್ಯ ಎಂದು ಈ ಮೂಲಕ ದೃಢೀಕರಿಸುತ್ತೇನೆ. ಹಾಗೆಂದ ಮಾತ್ರಕ್ಕೆ ಇದನ್ನು ಯಾವುದೇ ಪಠ್ಯಪುಸ್ತಕದಲ್ಲಿ (ಕದ್ದಾದರೂ) ಅಳವಡಿಸಲು ನನ್ನ ಅನುಮತಿಯಿಲ್ಲವೆಂದೂ ಈ ಮೂಲಕ ಸ್ಪಷ್ಟಪಡಿಸುತ್ತೇನೆ. ಮತ್ತಿದನ್ನು ಯಾರ ಕೋರಿಕೆಯೂ ಇಲ್ಲದೇ ನಾನಾಗಿಯೇ ಸ್ವಯಿಚ್ಛೆಯಿಂದ ಇಲ್ಲಿ ಪ್ರಕಟಿಸುತ್ತಿದ್ದೇನಾದ್ದರಿಂದ ನನ್ನ ಬರಹಕ್ಕೆ ನಾನೇ ಕಾರಣವೆಂದೂ ಇದಕ್ಕಾಗಿ ಬೇರಾರನ್ನೂ ದೂರಬಾರದೆಂದೂ ಈ ಮೂಲಕ ವಿನಂತಿಸುತ್ತೇನೆ.

Wednesday, May 11, 2022

ಹಿರಿದು ಕಿರಿದು

ಹಿರಿದೆಂಬುದ ಭಂಜಿಸಿದೊಡೆ ಹಿರಿದಹೆನೆಂಬ ಕಿರಿತನವ ನೋಡಿರೇ ನೆರೆಗೆರೆಯನಳಿದು ತಾ ಹಿರಿದಹೆನೆಂಬ ಕಿರಿಗೆರೆಯಂತಪ್ಪಿರಯ್ಯಾ ಅಯ್ಯಾ ನಿಮ್ಮೀ ಕಿರಿತನವೆ ಹಿರಿದು ವಿಕಾರಮಾಯಿತ್ತು ಮೊಳೆವ ಸಿರಿಗೆ ನೆರಳಾಗದೆ ಎಲರಾಗದೆ ಬಿಸುಪಾಗದೆ ಬೆಳಕಾಗದೆ ಮರೆಯಾಗದೆ ಹಿರಿದಲ್ಲ ಬೆಳೆಯ ಹಿಗ್ಗಿಂಗೆ ಎದೆಯರಳದೆ ಕೈವರಿಯದೆ ಮೈದಡಹದೆ ತಕ್ಕೈಸದೆ ಹಿರಿದಲ್ಲ ಪೆತ್ತ ಮಗುವ ತಿಂಬ ರಕ್ಕಸಿ ತಾಯಪ್ಪಳೇ ಶಿವಪೂಜೆಗೆ ಗೋಕ್ಷೀರವಲ್ಲದೆ ಕತ್ತೆಯ ಹಾಲಪ್ಪುದೇ ಮೊಲ್ಲೆಮಲ್ಲಿಗೆಯಲ್ಲದೆ ಕಳ್ಳಿಯ ಮುಳ್ಳಪ್ಪುದೇ ಹೂವಿನೊಳಗಂಧವಾಗದೆ ಹೊಗುವ ಮುಳ್ಳಪ್ಪೊಡೆ ಹಣ್ಣಿನೊಳಸ್ವಾದವಾಗದೆ ಹಿಡಿದ ಹುಳುವಪ್ಪೊಡೆ ಆದರಿಸಿ ಅಂದಣವನಿಕ್ಕಿರೆ ಸೊಣಗನಂತಪ್ಪೊಡೆ ಆ ಮುಳ್ಳನಾ ಹುಳುವನಾ ಸೊಣಗನನೆಡಗೈಯ ತುದಿವೆರಲೊಳೆ ಚಿಮ್ಮಿ ಮಿಂದು ಮಡಿಯಾಗೆಂದ ನಮ್ಮ ದಮ್ಮಪುರದ ಮಂಜೇಶನು.



Friday, April 1, 2022

ಮನುಷ್ಯಜಾತಿ ತಾನೊಂದೆ ವಲಂ...

ಆದಿಕವಿ ಪಂಪನೇ ಹೀಗೆ ಹೇಳಿದ್ದಾನೆ, ಆದ್ದರಿಂದ ಮನುಷ್ಯರೆಲ್ಲ ಒಂದೇ, ನಮ್ಮಲ್ಲಿ ಭೇದಭಾವ ಸಲ್ಲ ಎಂಬರ್ಥದ ಅಭಿಪ್ರಾಯವೊಂದನ್ನು ಫೇಸ್ಬುಕ್ಕಿನಲ್ಲಿ ನೋಡಿದೆ.  ಈ ಅಭಿಪ್ರಾಯದ ಬಗೆಗೆ ನಮ್ಮ ತಕರಾರಿಲ್ಲ; ಅಥವಾ ಮೇಲಿನ ಮಾತುಗಳು ಪಂಪನವೇ ಎಂಬಲ್ಲಿ ಕೂಡ ತಕರಾರಿಲ್ಲ.  ಆದರೆ ಮೇಲಿನ ಮಾತುಗಳು ಈ ಅಭಿಪ್ರಾಯವನ್ನು ಸೂಚಿಸುತ್ತವೆ ಎಂಬ 'ಮೂಢನಂಬಿಕೆ'ಯ ಬಗೆಗಷ್ಟೇ ತಕರಾರು.

ಇದು ಹೊಸದೇನಲ್ಲ.  ಪಂಪ "ಮನುಷ್ಯರೆಲ್ಲ ಒಂದೇ" ಎಂದೇ ಹೇಳಿದ್ದಾನೆ ಎಂಬ ಅಭಿಪ್ರಾಯ ಬಹಳವಾಗಿ ಚಾಲ್ತಿಯಲ್ಲಿದೆ.  ಕೆಲವು ಹಿರಿಯ ವಿಮರ್ಶಕರು (ತಿಳಿಯದವರೇನಲ್ಲ), ಅದಾವುದೋ ತಮಗಷ್ಟೇ ತಿಳಿದಿರಬಹುದಾದ ಕಾರಣಕ್ಕೆ ಇಂಥದ್ದೊಂದು ವ್ಯಾಖ್ಯಾನವನ್ನು ಹರಿಯಬಿಟ್ಟಿದ್ದಾರೆ, ಸಾವಿರ ವರ್ಷದ ಹಿಂದೆಯೇ ಜಾತಿಪದ್ಧತಿಯನ್ನು ವಿರೋಧಿಸಿದ ಪ್ರಗತಿಪರಕವಿಯದೊಂದು ಇಮೇಜ್ ಸಿದ್ಧವಾಗಿಬಿಟ್ಟಿದೆ, ಮತ್ತು ಪಂಪನಿಗೆ ತಾನು ಕನಸುಮನಸಿನಲ್ಲಿಯೂ ಊಹಿಸಿರದ ಜಾತ್ಯತೀತ ವಿಶ್ವಮಾನವಕವಿಯ ಪಟ್ಟ ದಕ್ಕಿಬಿಟ್ಟಿದೆ.  ಜಾತಿಯನ್ನು ಖಂಡಿಸುವವರು (ಅದಕ್ಕಾಗಿ ಬ್ರಾಹ್ಮಣರ ಮೂತಿ ದೆಬ್ಬುವವರು), ಪಂಪನನ್ನು ಓದಿಕೊಂಡಿದ್ದೇನೆಂದು ತೋರಿಸಿಕೊಳ್ಳುವವರು, ಪಂಪನನ್ನು ಅರೆಬರೆ ಓದಿಕೊಂಡವರು, ಪಂಪನ ಹೆಸರನ್ನು ಎಲ್ಲೋ ಕೇಳಿದವರು, ಪುಡಾರಿಗಳು, ಪುಡಿಸಾಹಿತಿಗಳು, ಧಡಿಸಾಹಿತಿಗಳು, ಮಾನವತಾವಾದದ ಉದ್ಯಮವನ್ನು ನಡೆಸುವವರು ಎಲ್ಲರಿಗೂ ಪಂಪನ ಇದೊಂದು ವಾಕ್ಯ, ಅಲ್ಲಲ್ಲ, ವಾಕ್ಯಖಂಡ ಬಹಳ ಅನುಕೂಲಕರವಾದ ಕೈಹಿಡಿಯಾಗಿ ಪರಿಣಮಿಸಿಬಿಟ್ಟಿದೆ.  ಇದೊಂದು ಸಾಲನ್ನು ಪಂಪನ 'ವಿಶ್ವಮಾನವದೃಷ್ಟಿ'ಗೆ ದ್ಯೋತಕವಾಗಿ ಎಲ್ಲೆಲ್ಲಿ ಎಷ್ಟೆಷ್ಟು ಹೇಗೆಹೇಗೆ ಬರೆದರೂ ಸಾಲದು.  ಅಷ್ಟೇಕೆ, ಸ್ವತಃ ಕನ್ನಡಸಾಹಿತ್ಯಪರಿಷತ್ತೇ ತನ್ನ ಪುಸ್ತಕಸರಣಿಯಲ್ಲಿ ಇದನ್ನು ಘೋಷವಾಕ್ಯವಾಗಿ ಮುದ್ರಿಸಿಕೊಂಡಿದೆ.  ಹೀಗಾಗಿ ಈ ವಾಕ್ಯದ ಹಿಂದುಮುಂದು ತಿಳಿಯದೇ, ಈ ಮಾತಿನ ಮೂಲಕ "ಮನುಷ್ಯಜಾತಿ ಒಂದೇ" ಎಂಬ ಏಕತ್ವದ ಸಂದೇಶವನ್ನು ಪಂಪ ಸಾರುತ್ತಿದ್ದಾನೆ ಎಂದು ಮುಗ್ಧವಾಗಿ ನಂಬಿದವರೂ ಕಡಿಮೆಯಿಲ್ಲ.

ಇರಲಿ, ಕೆಟ್ಟ ಅಪಾರ್ಥಗಳಿಗಿಂತ ಒಳ್ಳೆಯ ಅಪಾರ್ಥ ಯಾವಾಗಲೂ ಒಳ್ಳೆಯದೇ.  ಈ ವಾಕ್ಯದ ಅಭಿಪ್ರಾಯವೇನೇ ಇರಲಿ, ಮನುಷ್ಯಜಾತಿಯೊಂದೇ ಎಂಬುದರಲ್ಲಿ ಎರಡು ಮಾತಿಲ್ಲವೇ ಇಲ್ಲ.  ಬಸವಣ್ಣನವರೇ ಹೇಳಿಲ್ಲವೇ - "ನೆಲನೊಂದೆ ಹೊಲಗೇರಿ ಶಿವಾಲಯಕೆ"; ಅದಕ್ಕೆ ಸರ್ವಜ್ಞನೂ ದನಿಗೂಡಿಸಿದ್ದಾನಲ್ಲ - "ನಡೆವುದೊಂದೇ ಭೂಮಿ ಕುಡಿವುದೊಂದೇ ನೀರು ಸುಡುವಗ್ನಿಯೊಂದೆ ಇರುತಿರಲು ಕುಲಗೋತ್ರ ನಡುವೆ ಎತ್ತಣದು"; ಕನಕದಾಸರೂ ಅದನ್ನೇ ಹೇಳುತ್ತಾರೆ - "ಕುಲಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ?"  ಅಷ್ಟೇಕೆ ಪಂಪನೂ ಕುಲಾಚಾರಗಳನ್ನು ಗೌರವಿಸಿದರೂ ಅದು ಅತಿರೇಕಕ್ಕೆ ಹೋದರೆ ಸಹಿಸುವವನಲ್ಲ.   ಉದಾಹರಣೆಗೆ ವಿಕ್ರಮಾರ್ಜುನವಿಜಯದಲ್ಲಿ ಕರ್ಣನ ಬಾಯಲ್ಲಿ ಆತ ಹೇಳಿಸುವ ಮಾತುಗಳನ್ನು ಕೇಳಿ:

"ಕುಲಮನೆ ಮುನ್ನಮುಗ್ಗಡಿಪಿರೇಂ ಗಳ, ನಿಮ್ಮ ಕುಲಂಗಳಾಂತು ಮಾರ್ಮಲೆವನನಟ್ಟಿ ತಿಂಬುವೆ? ಕುಲಂ ಕುಲಮಲ್ತು - ಚಲಂ ಕುಲಂ, ಗುಣಂ ಕುಲಂ, ಅಭಿಮಾನಮೊಂದೆ ಕುಲಂ, ಅಣ್ಮು ಕುಲಂ.  ಬಗೆವಾಗಳ್ ಈಗಳ್ ಈ ಕಲಹದೊಳಣ್ಣ ನಿಮ್ಮ ಕುಲವಾಕುಲಮಂ ನಿಮಗುಂಟುಮಾಡುಗುಂ" (ಕುಲವನ್ನೇ ಎತ್ತೆತ್ತೆತ್ತಿ ಆಡುವಿರಲ್ಲ, ನಿಮ್ಮ ಕುಲಗಳೇನು ಏರಿಬರುವ ಶತ್ರುಗಳನ್ನು ಅಟ್ಟಿ ತಿನ್ನುತ್ತವೆಯೇ?  ಕುಲ ಕುಲವಲ್ಲಪ್ಪಾ, ಛಲ ಕುಲ, ಗುಣ ಕುಲ, ಅಭಿಮಾನವೊಂದೇ ಕುಲ, ವೀರ್ಯವೇ ಕುಲ.  ನೋಡಿದರೆ ಈಗ ಈ ಕಲಹದಲ್ಲಿ, ಅಣ್ಣಾ, ನಿಮ್ಮ ಕುಲವೇ ನಿಮಗೆ ಆಕುಲವನ್ನು (ದುಃಖವನ್ನು) ತಂದೀತು).

ಪಂಪನ ಶಾಸ್ತ್ರದೃಷ್ಟಿಯೇನೇ ಇರಲಿ, ಮೇಲೆ ಕರ್ಣ ಹೇಳುವ ಮಾತು ಕೆಲಮಟ್ಟಿಗೆ ಪಂಪನ ಜೀವನದೃಷ್ಟಿಯನ್ನೂ ಧ್ವನಿಸುತ್ತದೆಂದಿಟ್ಟುಕೊಳ್ಳಬಹುದು. ಮಾನವಧರ್ಮವೇ ಸರ್ವಶ್ರೇಷ್ಠವೆಂಬ ಮಾತಿನಲ್ಲಿ ಅನುಮಾನವಿಲ್ಲ; ಮಾನವತೆಯೆಂಬುದು ದಯೆ-ಕರುಣೆ ಎಂದು ಅರ್ಥೈಸುವುದಾದರೆ ಸ್ವತಃ ಜೈನಮತಾವಲಂಬಿಯಾದ ಪಂಪನೂ ಮಾನವಧರ್ಮದಲ್ಲಿ ನಂಬಿಕೆಯಿಟ್ಟವನೇ ಎಂದರೂ ತಪ್ಪಾಗಲಾರದು.  ಆದರೆ ಪಂಪನ 'ಮಾನವತೆ' ನಮ್ಮ ಆಧುನಿಕಬುದ್ಧಿಜೀವಿಗಳ ಬ್ರಾಂಡಿನ ಮಾನವತೆಯಲ್ಲ.  ಅವನ ಮಾನವತೆಯು ಜಾತಿ-ಕುಲ-ನಂಬಿಕೆಗಳಿಗೆ, ಅದರಿಂದ ಹೊಮ್ಮಬಹುದಾದ ಸಹಜವಾದ ಹೆಮ್ಮೆಗೆ, ಸ್ವಾಭಿಮಾನಕ್ಕೆ, ಶ್ರೇಷ್ಠತೆಯ ಪ್ರಜ್ಞೆಗೆ ಎಂದೂ ವಿರುದ್ಧವಾದದ್ದಲ್ಲ.  ಅಷ್ಟೇಕೆ?  ಸ್ವತಃ ಪಂಪ ಧರ್ಮದಿಂದ ಜೈನನಾದರೂ ಜಾತಿಯಿಂದ ಬ್ರಾಹ್ಮಣ, ಮತ್ತು ಅವನಿಗೆ ತನ್ನ ಜಾತಿಯ ಬಗ್ಗೆ ಅಪಾರವಾದ ಹೆಮ್ಮೆಯಿದೆ.  'ವಿಪ್ರಶ್ರೇಷ್ಠ'ನಾದ ತನ್ನ ತಂದೆ ಅಭಿರಾಮದೇವರಾಯ (ಭೀಮಪಯ್ಯ)ನು ಜೈನಧರ್ಮವನ್ನು ಪರಿಗ್ರಹಿಸಿದ ಘಟನೆಯನ್ನು ಹೆಮ್ಮೆಯಿಂದ ವಿವರಿಸುತ್ತಾ ಪಂಪ ಹೀಗೆ ಹೇಳುತ್ತಾನೆ:

ಜಾತಿಯೊಳೆಲ್ಲಮುತ್ತಮದ ಜಾತಿಯ ವಿಪ್ರಕುಲಂಗೆ ನಂಬಲೇ

ಮಾತೊ ಜಿನೇಂದ್ರಧರ್ಮಮೆ ವಲಂ ದೊರೆ ಧರ್ಮದೊಳೆಂದು ನಂಬಿ ತ

ಜ್ಜಾತಿಯನುತ್ತರೋತ್ತರಮೆ ಮಾಡಿ ನೆಗೞ್ಚಿದನಿಂತಿರಾತ್ಮವಿ

ಖ್ಯಾತಿಯನಾತನಾತನ ಮಗಂ ನೆಗೞ್ದಂ ಕವಿತಾಗುಣಾರ್ಣವಂ

 - ವಿಕ್ರಮಾರ್ಜುನವಿಜಯ 14/48

(ಜಾತಿಗಳಲ್ಲಿ ಉತ್ತಮಜಾತಿಯವನಾದ ವಿಪ್ರನಿಗೆ ಧರ್ಮಗಳಲ್ಲಿ ಉನ್ನತವಾದ ಜಿನೇಂದ್ರಧರ್ಮವೇ ಸರಿಯಾದ ಧರ್ಮವೆಂದು ನಂಬಿ, ಅದರಿಂದ ಆ (ಬ್ರಾಹ್ಮಣ)ಜಾತಿಯನ್ನೇ ಉತ್ತರೋತ್ತರವನ್ನಾಗಿಸಿ (ತನ್ನ ಜಾತಿಯ ಪೆರ್ಮೆಯನ್ನು ಇನ್ನೂ ಹಿರಿದಾಗಿಸಿ) ತನ್ನ ಖ್ಯಾತಿಯನ್ನೂ ಹೆಚ್ಚಿಸಿಕೊಂಡನು; ಆತನ (ಅಂತಹ ಅಭಿರಾಮದೇವರಾಯನ) ಮಗನೇ ಈ ಕವಿತಾಗುಣಾರ್ಣವನಾದ ಪಂಪ)

ಮುಂದುವರೆದು ತನ್ನ ಬಗ್ಗೆ ಪಂಪ ಹೇಳಿಕೊಳ್ಳುವ ಪರಾಕುಗಳನ್ನೂ ನೋಡಿ - 

ಪಂಪಂ ಧಾತ್ರೀವಳಯನಿ

ಳಿಂಪಂ ಚತುರಂಗಬಳಭಯಂಕರಣಂ ನಿ

ಷ್ಕಂಪಂ ಲಲಿತಾಲಂಕರ

ಣಂ ಪಂಚಶರೈಕರೂಪನಪಗತಪಾಪಂ

 - ವಿಕ್ರಮಾರ್ಜುನವಿಜಯ 14/49

(ಪಂಪ, ಧಾತ್ರೀವಳಯನಿಳಿಂಪ (ಭೂಲೋಕದ ದೇವತೆ - ಭೂಸುರ - ಬ್ರಾಹ್ಮಣ), ಚತುರಂಗಬಲಭಯಂಕರ, ಎಂದೂ ನಡುಗದವನು, ಲಲಿತವಾಗಿ ಅಲಂಕರಿಸಿಕೊಂಡ ಮನ್ಮಥರೂಪ, ಪಾಪರಹಿತ).

ಮತ್ತೆ, ತನ್ನ ದೊರೆಯಾದ ಅರಿಕೇಸರಿಯು ತನಗೆ ಮೆಚ್ಚುಗೆಯಾಗಿ ಕೊಡಮಾಡಿದ ಧರ್ಮಪುರವೆಂಬ ಅಗ್ರಹಾರವನ್ನು ಪಂಪನು ವರ್ಣಿಸುವ ಬಗೆ ನೋಡಿ:

ದೆಸೆ ಮಖಧೂಮದಿಂ ದ್ವಿಜರ ಹೋಮದಿನೊಳ್ಗೆಱೆ ಹಂಸಕೋಕಸಾ

ರಸಕಳನಾದದಿಂದೊಳಗೆ ವೇದನಿನಾದದಿನೆತ್ತಮೆಯ್ದೆ ಶೋ

ಭಿಸೆ ಸುರಮಥ್ಯಮಾನವನಧಿಕ್ಷುಭಿತಾರ್ಣವಘೋಷದಂತೆ ಘೂ

ರ್ಣಿಸುತಿರಲೀ ಗುಣಾರ್ಣವನ ಧರ್ಮದ ಧರ್ಮವುರಂ ಮನೋಹರಂ

 - ವಿಕ್ರಮಾರ್ಜುನವಿಜಯ 14/57

(ದಿಕ್ಕುಗಳು ಬ್ರಾಹ್ಮಣರ ಹೋಮಧೂಮದಿಂದಲೂ, ಒಳ್ಳೆಯ ಕೆರೆಗಳು ಹಂಸಕೋಕಸಾರಸಪಕ್ಷಿಗಳ ಕಳಕಳನಾದದಿಂದಲೂ, ಊರಿನ ಒಳಭಾಗವು ವೇದನಿನಾದದಿಂದಲೂ ಶೋಭಿಸುತ್ತಿರಲು, ಗುಣಾರ್ಣವನ ಧರ್ಮದ ಈ ಧರ್ಮಪುರವು ದೇವತೆಗಳಿಂದ ಕಡೆಯಲ್ಪಟ್ಟ ಸಮುದ್ರದಂತೆ ಘೂರ್ಣಿಸುತ್ತಾ ಮನೋಹರವಾಗಿತ್ತು) 

ಇದನ್ನೋದಿ ಪಂಪನಿಗೆ ಬ್ರಾಹ್ಮಣ್ಯದ, ಶ್ರೇಷ್ಠತೆಯ ವ್ಯಸನವಿತ್ತೆಂದು ನಾನಂತೂ ಹುಯಿಲೆಬ್ಬಿಸುವುದಿಲ್ಲ.  "ಮನುಷ್ಯಜಾತಿ ತಾನೊಂದೆವಲಂ" ಎಂಬ ಅರ್ಧವಾಕ್ಯವನ್ನು ಹಿಡಿದು ಪಂಪನನ್ನು ಆಧುನಿಕ ಬ್ರಾಂಡ್ ಮಾನವತಾವಾದಿಯಾಗಿಸಿ ಮೆರೆಸಿದವರು ಈಗ ಇದನ್ನೋದಿ ನಿಲುವು ಬದಲಿಸಿಕೊಂಡರೆ, ಪಂಪನ 'ಶ್ರೇಷ್ಠತೆಯ ವ್ಯಸನದ ಬಗ್ಗೆ, ಎದ್ದು ಕಾಣುವ 'ಬ್ರಾಹ್ಮಣ್ಯ'ದ ಬಗ್ಗೆ ಹುಯಿಲೆಬ್ಬಿಸಿದರೆ ನಾನು ಪಂಪನನ್ನು ರಕ್ಷಿಸಲೂ ಹೋಗುವುದಿಲ್ಲ.  ಏಕೆಂದರೆ ಸ್ವಪ್ರಶಂಸೆ ಪ್ರಾಚೀನಕವಿಗಳ ಶೈಲಿಯೇ ಆಗಿದೆ.  ಅದು ತಪ್ಪೂ ಅಲ್ಲ, ಮತ್ತು ಪಂಪನಂತಹ ಸಿದ್ಧಕವಿಗಳಿಗೆ ಅದು ಕೇವಲ ವ್ಯಸನವೂ ಅಲ್ಲ.  ಆದ್ದರಿಂದ ಅದರ ವೈಖರಿಯನ್ನು ಆಸ್ವಾದಿಸುತ್ತಾ ತಲೆದೂಗುತ್ತೇನಷ್ಟೇ.  ಬ್ರಾಹ್ಮಣ್ಯದ ಹೆಮ್ಮೆ ಪಂಪನಿಗಿರಬಹುದು, ಆದರೆ ನಮ್ಮ ಹೆಮ್ಮೆ ಪಂಪನ ಬ್ರಾಹ್ಮಣ್ಯಲ್ಲ, ಸ್ವತಃ ಪಂಪನೇ.

ಇರಲಿ, ಇಲ್ಲಿ ವಿವರಿಸಹೊರಟದ್ದು "ಮನುಷ್ಯಜಾತಿ ತಾನೊಂದೆ ವಲಂ" ಎಂಬ ಸಾಲನ್ನಷ್ಟೇ?  ಇದು ಬರುವುದು ಆದಿಪುರಾಣದಲ್ಲಿ, ಭರತಚಕ್ರವರ್ತಿಯ ರಾಜ್ಯಭಾರವನ್ನು ವರ್ಣಿಸುವ ಹದಿನೈದನೆಯ ಆಶ್ವಾಸದಲ್ಲಿ.  ರಾಜ್ಯದಲ್ಲಿ ತಂತಮ್ಮ ಜಾತಿಧರ್ಮಗಳನ್ನು ನಿಷ್ಠೆಯಿಂದ ಪಾಲಿಸದವರನ್ನು ಬೇರಿರಿಸಿ, ಪಾಲಿಸುವವರನ್ನು ಸನ್ಮಾನಿಸುವ ಮೂಲಕ ಧರ್ಮವ್ರತಗಳನ್ನು ಬಿಟ್ಟವರೂ ಮತ್ತೆ ಅದನ್ನು ಹಿಡಿಯುವಂತೆ ಮಾಡುತ್ತಿದ್ದ ಎಂದು ವಿವರಿಸುವ ಭಾಗ.  ಹೀಗೆ ಸ್ವಧರ್ಮವ್ರತಗಳಲ್ಲಿ ನಿರತರಾದ ಕೃಷಿ, ವಾಣಿಜ್ಯ, ಶಿಲ್ಪ, ಮೊದಲಾದ ಕಸುಬುದಾರರನ್ನೂ, ಶ್ರಾವಕರನ್ನೂ, ಉಪಾಸನೆ ಅಧ್ಯಯನ ಅಧ್ಯಾಪನ ಮೊದಲಾದವುಗಳಲ್ಲಿ ನಿರತರಾದ ಬ್ರಾಹ್ಮಣರನ್ನೂ ಯಾವಯಾವ ರೀತಿ ಸನ್ಮಾನಿಸುತ್ತಿದ್ದನೆಂದು ವಿವರಿಸುವ ಈ ಭಾಗದಲ್ಲಿ, ಬ್ರಾಹ್ಮಣರನ್ನು ಕುರಿತು ಬರುವ ಮಾತುಗಳು ಹೀಗಿವೆ:

"ಉಪಾಸಕಾಧ್ಯಯನಾಧ್ಯಾಪನಾನಂತರಂ ಸಕಳಶಾಸ್ತ್ರಂಗಳನೋದುವೋದಿಸುವ ನೆನೆವ ಬರೆವ ಪರಮಸ್ವಾಧ್ಯಾಯಮುಂ, ಪಂಚಾಣುವ್ರತಾದಿಪ್ರವರ್ತನಸ್ವಭಾವಸಂಯಮಮುಮನ್ ಅನಶನವೃತ್ಯಾದಿ ತಪೋನುಷ್ಠಾನಮುಂಬೆರಸು ಆರ್ಯಷಟ್ಕರ್ಮಂಗಳಂ ನಿಮಗಿವು ಕುಲಾಚಾರಂಗಳೆಂದಱಿಯೆ ಪೇೞ್ದು ಕೈಕೊಳಿಸಿ,

ಆಱುಂ ವೃತ್ತಿಗಳನಿವಂ

ಮೀಱಿದರಲ್ಲರ್ ದ್ವಿಜನ್ಮರೀವೃತ್ತಿಗಳಿಂ

ಬೇಱಾದರ್ ದ್ವಿಜರುಂತೇಂ

ಬೇಱುಂಟೆ ಮನುಷ್ಯಜಾತಿ ತಾನೊಂದೆ ವಲಂ"

 - ಆದಿಪುರಾಣ 15/14

ಇಲ್ಲಿ ಬರುವುದು "ಮನುಷ್ಯಜಾತಿ ತಾನೊಂದೆ ವಲಂ" ಎಂಬ ಮಾತು.  ಇದರರ್ಥ ಸ್ಥೂಲವಾಗಿ ಹೀಗೆ:

ಉಪಾಸನೆ, ಅಧ್ಯಯನ, ಅಧ್ಯಾಪನ, ಶಾಸ್ತ್ರಗಳನ್ನು ಓದುವುದು, ಓದಿಸುವುದು, ಚಿಂತಿಸುವುದು, ಬರೆಯುವುದು ಮೊದಲಾದ ಚಟುವಟಿಕೆಗಳನ್ನೂ, ಪಂಚಾಣುವ್ರತವೇ ಮೊದಲಾದ ಸಂಯಮವನ್ನೂ, ಉಪವಾಸವೇ ಮೊದಲಾದ ತಪೋನುಷ್ಠಾನಗಳಿಂದ ಕೂಡಿದ ಆರ್ಯರ ಆರು ಕರ್ಮಗಳನ್ನೂ "ನಿಮಗಿದು ಕುಲಾಚಾರ" ಎಂದು ತಿಳಿಯಹೇಳಿ, "ಈ ಆರು ವೃತ್ತಿಗಳನ್ನು ದ್ವಿಜರು (ಬ್ರಾಹ್ಮಣರು) ಎಂದಿಗೂ ಮೀರುವುದಿಲ್ಲ, ಏಕೆಂದರೆ ಈ ವೃತ್ತಿಗಳೇ ಅವರನ್ನು ಇತರರಿಂದ ಬೇರಾಗಿಸಿರುವುದು (ವಿಶಿಷ್ಟವಾಗಿಸಿರುವುದು).  ಅದು ಬಿಟ್ಟರೆ ಅವರು ಕೇವಲ ಮನುಷ್ಯಜಾತಿ ಒಂದೇ ಆಗಿ (ಮನುಷ್ಯಜಾತಿಯಷ್ಟೇ ಆಗಿ) ಉಳಿಯುತ್ತಾರಲ್ಲವೇ? (ಅವರನ್ನು ದ್ವಿಜರೆನ್ನಲಾಗುತ್ತದೆಯೇ?)

ಎಂದರೆ ಮನುಷ್ಯಜಾತಿ ಒಂದು ಪದರ, ಅದರ ಮೇಲೆ ದ್ವಿಜರು ತಮ್ಮ ಈ ಷಟ್ಕರ್ಮಗಳಿಂದ ಎರಡನೆಯ ಜನ್ಮ ತಳೆಯುತ್ತಾರೆ, ಉಳಿದ ಮನುಷ್ಯಜಾತಿಯಿಂದ ಒಂದು ಮೆಟ್ಟಿಲು ಮೇಲೇರುತ್ತಾರೆ.  ಈ ಕರ್ಮಗಳನ್ನು ಬಿಟ್ಟರೆ ದ್ವಿಜತ್ವವನ್ನು ಕಳೆದುಕೊಂಡ ಅವರು ಕೇವಲ ಮನುಷ್ಯರೊಂದೇ ಆಗಿ ಉಳಿಯುತ್ತಾರೆ ಎಂಬುದು ಇಲ್ಲಿ ಕವಿಯ ಭಾವ.  ಅದನ್ನೇ ಮುಂದಿನ ಪದ್ಯದಲ್ಲಿ ಇನ್ನಷ್ಟು ಸ್ಪಷ್ಟಪಡಿಸುತ್ತಾನೆ:

ವ್ರತಸಂಸ್ಕಾರದಿನಾದರ್ವಿ

ತತಗುಣರ್ ಬ್ರಾಹ್ಮಣರ್ ಕ್ರಿಯಾಸಂತತಿಸಂ

ಯುತರುಚಿತಸತ್ಕ್ರಿಯಾವಿರ

ಹಿತನಾತಂ ನಾಮಧಾರಕಂ ದ್ವಿಜನಲ್ಲಂ

 - ಆದಿಪುರಾಣ 15/15

ಹುಟ್ಟುತ್ತ ಸಾಮಾನ್ಯಮನುಷ್ಯರಾದ ಬ್ರಾಹ್ಮಣರು ಈ ವ್ರತಸಂಸ್ಕಾರಗಳಿಂದ, ಅದಕ್ಕನುಗುಣವಾದ ಕ್ರಿಯಾಕರ್ಮಗಳಿಂದ ವಿತತಗುಣರಾಗುತ್ತಾರೆ (ವಿಸ್ತರಿಸಿದ, ಉತ್ತಮಗುಣವನ್ನು ಸಂಪಾದಿಸುತ್ತಾರೆ).  ಈ ಸತ್ಕ್ರಿಯಾಸಂಸ್ಕಾರಗಳನ್ನು ಬಿಟ್ಟ ಬ್ರಾಹ್ಮಣ ಕೇವಲ ಹೆಸರಿಗೆ ಬ್ರಾಹ್ಮಣನೆನಿಸುತ್ತಾನಷ್ಟೇ, ಅವನು ದ್ವಿಜನಲ್ಲ.

ಮೇಲಿನ ಎರಡೂ ಪದ್ಯಗಳನ್ನು ವಿವರವಾಗಿ ಓದಿದರೆ, "ಮನುಷ್ಯಜಾತಿ ತಾನೊಂದೆ ವಲಂ" ಎಂಬ ಮಾತಿನಲ್ಲಿರುವ "ಒಂದೇ" ಎಂಬುದನ್ನು ಯಾವ ಅರ್ಥದಲ್ಲಿ ಬಳಸಿದ್ದೆಂಬುದು ಸ್ಪಷ್ಟವಾಗುತ್ತದೆ.  "ಒಂದೇ" ಎಂಬುದನ್ನು ಎರಡರ್ಥದಲ್ಲಿ ಬಳಸಬಹುದಷ್ಟೇ? 

1) "ಎಲ್ಲರೂ ಒಂದೇ" ಎಂಬ ಸಮಷ್ಟಿ ಅರ್ಥದಲ್ಲಿ (ನಾವೆಲ್ಲರೂ ಒಂದೇ, ಮನುಷ್ಯಜಾತಿ ಒಂದೇ, ಇತ್ಯಾದಿ); 

2) "ಒಂದೇ, ಅಷ್ಟೇ, only" ಎಂಬ ಅರ್ಥದಲ್ಲಿ (ನನ್ನ ಬಳಿ ಒಂದೇ ಪುಸ್ತಕವಿದೆ, ಒಂದೇ ನಾಯಿಯಿದೆ ಇತ್ಯಾದಿ).  

ಇಲ್ಲಿ ಒಂದೇ ಎಂಬ ಪದವನ್ನು ಬಳಸಿರುವುದು ಈ ಎರಡನೆಯ ಅರ್ಥದಲ್ಲಿ - ದ್ವಿಜಸಂಸ್ಕಾರವನ್ನು ಬಿಟ್ಟ ಬ್ರಾಹ್ಮಣನಲ್ಲಿ ಉಳಿಯುವುದು "ಮನುಷ್ಯಜಾತಿಯೊಂದೇ (ಮತ್ತೇನು ಇಲ್ಲ)" ಎಂಬ ಅರ್ಥದಲ್ಲಿ.  ಬ್ರಾಹ್ಮಣನ ಕುಲಾಚಾರವೇನು, ಅವನು ಇತರ ಮನುಷ್ಯರಿಗಿಂತ ಹೇಗೆ ಬೇರಾಗುತ್ತಾನೆ, ತನ್ನ ಕುಲಾಚಾರಗಳನ್ನು ಬಿಟ್ಟ ಬ್ರಾಹ್ಮಣ ಹೇಗೆ ಕೇವಲ ಮನುಷ್ಯನಾಗಿಯಷ್ಟೇ ಉಳಿಯುತ್ತಾನೆ, ಹೇಗೆ ಹೆಸರಿಗಷ್ಟೇ ಬ್ರಾಹ್ಮಣನಾಗಿರುತ್ತಾನೆ, ಅದರ ಮೇಲಿನ 'ದ್ವಿಜ' ಎಂಬ ಎರಡನೆಯ ಪದರವನ್ನು ಕಳೆದುಕೊಂಡು ಮನುಷ್ಯ ಎಂಬ 'ಒಂದೇ' ಪದರದಲ್ಲಿ ಉಳಿದುಬಿಡುತ್ತಾನೆ ಎಂಬ ವಿವರಣೆಯಷ್ಟೇ ಇಲ್ಲಿರುವುದು.  ಇಲ್ಲಿ "ಒಂದೇ" ತತ್ತ್ವದ ವಿಶ್ವಮಾನವದೃಷ್ಟಿಯನ್ನು ಹುಡುಕುವ ವ್ಯರ್ಥಪ್ರಯತ್ನ ಬೇಡವೇನೋ.

ಕೊನೆಯದಾಗಿ, ಇಲ್ಲಿ ವಿವರಿಸಿರುವುದು ಪಂಪನ ಮತ್ತು ಅವನ ಪಾತ್ರಗಳ ಅಭಿಪ್ರಾಯವೇ ಹೊರತು ನನ್ನದಲ್ಲ.  ಈ ವಿಷಯದ ಬಗ್ಗೆ ನನ್ನ ಅಭಿಪ್ರಾಯ ಇಲ್ಲಿ ಅಪ್ರಸ್ತುತ.

ಅಂದ ಹಾಗೆ, "ಬೇಱಾದರ್ ದ್ವಿಜರುಂತೇಂ ಬೇಱುಂಟೆ ಮನುಷ್ಯಜಾತಿ ತಾನೊಂದೆ ವಲಂ" ಎಂಬುದೂ ಪಂಪನೇ ಸ್ವತಃ ಮಾಡಿಕೊಂಡ ಅಭಿಪ್ರಾಯವೂ ಅಲ್ಲ. ಪಂಪನ ಆದಿಪುರಾಣದ ಆಕರವಾದ ಜಿನಸೇನಾಚಾರ್ಯರ ಮಹಾಪುರಾಣದ (ಪೂರ್ವಪುರಾಣ/ಆದಿಪುರಾಣ) 38ನೆಯ ಅಧ್ಯಾಯದ ಈ ಕೆಳಗಿನ ಶ್ಲೋಕಗಳನ್ನು ಗಮನಿಸಬಹುದು (ಬ್ರಾಕೆಟ್ಟಿನಲ್ಲಿ ಅದರ ಸ್ಥೂಲ ಅರ್ಥವನ್ನೂ ವಿವರಿಸಿದ್ದೇನೆ - ಪಂಪನು ತನ್ನ ಆದಿಪುರಾಣದಲ್ಲೂ ಇದೇ ಅಭಿಪ್ರಾಯವನ್ನೇ ಯಥಾವತ್ತಾಗಿ ತಂದಿದ್ದಾನೆ ):

ವಿಶುದ್ಧಾ ವೃತ್ತಿರೇವೈಷಾಂ ಷಟ್ತಯೋಷ್ಟಾ ದ್ವಿಜನ್ಮನಾಂ

ಯೋऽತಿಕ್ರಾಮೇದಿಮಾಂ ಸೋऽಜ್ಞೋ ನಾಮ್ನೈವ ನ ಗುಣೈರ್ದ್ವಿಜಃ ||42||

(ಮೇಲೆ ಹೇಳಿದ ಷಟ್ಕರ್ಮಗಳು (ಪೂಜಾ, ದಾನ, ಸ್ವಾಧ್ಯಾಯ, ಇತ್ಯಾದಿ) ದ್ವಿಜರಿಗೆ ಆಚರಣೀಯ.  ಇವನ್ನು ಅತಿಕ್ರಮಿಸುವ ಅಜ್ಞನು ಕೇವಲ ಹೆಸರಿಗಷ್ಟೇ ದ್ವಿಜನಾಗಿರುತ್ತಾನೆ, ಗುಣದಿಂದಲ್ಲ)

ತಪಃ ಶ್ರುತಂಚ ಜಾತಿಶ್ಚ ತ್ರಯಂ ಬ್ರಾಹ್ಮಣ್ಯಕಾರಣಮ್

ತಪಶ್ರುತಾಭ್ಯಾಂ ಯೋ ಹೀನೋ ಜಾತಿಬ್ರಾಹ್ಮಣ ಏವ ಸಃ ||43||

(ತಪಸ್ಸು, ಶಾಸ್ತ್ರಜ್ಞಾನ ಮತ್ತು ಜಾತಿ ಇವು ಮೂರು ಬ್ರಾಹ್ಮಣ್ಯಕ್ಕೆ ಕಾರಣಗಳು.  ತಪಸ್ಸು ಮತ್ತು ಶಾಸ್ತ್ರಜ್ಞಾನವಿಲ್ಲದಾತ ಕೇವಲ ಜಾತಿಬ್ರಾಹ್ಮಣನಷ್ಟೇ)

ಮನುಷ್ಯಜಾತಿರೇಕೈವ ಜಾತಿನಾಮೋದಯೋದ್ಭವಾ

ವೃತ್ತಿಭೇದಾಹಿತಾದ್ಭೇದಾಚ್ಚಾತುರ್ವಿಧ್ಯಮಿಹಾಶ್ನುತೇ ||45||

(ಮೂಲತಃ ಮನುಷ್ಯಜಾತಿಯೊಂದೇ, ಆದರೆ ಜೀವನೋಪಾಯಕ್ಕಾಗಿ ಮಾಡುವ ನಾಲ್ಕು ವಿಧದ ಕರ್ಮಗಳಿಂದಾಗಿ ಅದು ನಾಲ್ಕು ವಿಧದ ಜಾತಿಯಾಗಿ ಪರಿಣಮಿಸುತ್ತದೆ)

ಬ್ರಾಹ್ಮಣಾ ವ್ರತಸಂಸ್ಕಾರಾತ್ ಕ್ಷತ್ರಿಯಾಃ ಶಸ್ತ್ರಧಾರಣಾತ್

ವಣಿಜೋಽರ್ಥಾರ್ಜನಾನ್ಯಾಯಾಚ್ಛೂದ್ರಾನ್ಯಗ್ವೃತ್ತಿಸಂಶ್ರಯಾತ್ ||46||

(ವ್ರತಸಂಸ್ಕಾರದಿಂದ ಬ್ರಾಹ್ಮಣ, ಶಸ್ತ್ರಧಾರಣದಿಂದ ಕ್ಷತ್ರಿಯ, ನ್ಯಾಯಬದ್ಧವಾದ ಧನಾರ್ಜನದಿಂದ ವೈಶ್ಯ ಮತ್ತು ಇತರ ವೃತ್ತಿಗಳಿಂದ ಶೂದ್ರ - ಹೀಗಾಗುತ್ತದೆ).

ದ್ವಿರ್ಜಾತೋ ಹಿ ದ್ವಿಜನ್ಮೇಷ್ಟಃ ಕ್ರಿಯಾತೋ ಗರ್ಭತಶ್ಚ ಯಃ

ಕ್ರಿಯಾಮಂತ್ರವಿಹೀನಸ್ತು ಕೇವಲಂ ನಾಮಧಾರಕಃ ||48||

(ದ್ವಿಜನೆಂದರೆ ಎರಡು ಜನ್ಮ ತಾಳಿದವನು - ಗರ್ಭದಿಂದ ಮೊದಲನೆಯ ಜನ್ಮ, ಕ್ರಿಯೆಯಿಂದ (ಸಂಸ್ಕಾರದಿಂದ) ಎರಡನೆಯದು.  ಕ್ರಿಯಾಮಂತ್ರವಿಹೀನನಾದ ಬ್ರಾಹ್ಮಣನು ಕೇವಲ ಹೆಸರಿಗಷ್ಟೇ ಬ್ರಾಹ್ಮಣನಾಗಿರುತ್ತಾನೆ)

ನೆನಪಿರಲಿ, ಮೇಲಿನ ಯಾವ ಉಲ್ಲೇಖಗಳೂ ವೈದಿಕ ಉಲ್ಲೇಖಗಳಲ್ಲ, ಸ್ವತಃ ಪಂಪನೇ ಆಕರವಾಗಿರಿಸಿಕೊಂಡಿರುವ ಜೈನರ ಪವಿತ್ರಗ್ರಂಥವಾದ ಮಹಾಪುರಾಣದ್ದು.  ಆದರೆ ಇವನ್ನು ನೋಡಿದಾಗ, ವೈದಿಕವಲಯದಿಂದ ಈ ಕೆಳಕಂಡ ಶ್ಲೋಕಗಳೂ ನೆನಪಾದರೆ ಅದು ಅಸಹಜವಲ್ಲ:

ಜನ್ಮನಾ ಜಾಯತೇ ಶೂದ್ರಃ ಸಂಸ್ಕಾರಾತ್ ದ್ವಿಜ ಉಚ್ಯತೇ

ವೇದಜ್ಞಾನೇನ ವಿಪ್ರತ್ವಂ ಬ್ರಹ್ಮಜ್ಞಾನೇನ ಬ್ರಾಹ್ಮಣಃ

(ಹುಟ್ಟುವಾಗ ಎಲ್ಲರೂ ಶೂದ್ರರಿರುತ್ತಾರೆ, ಉಪನಯನಸಂಸ್ಕಾರದಿಂದ ದ್ವಿಜರೆನಿಸಿಕೊಳ್ಳುತ್ತಾರೆ, ವೇದಜ್ಞಾನದಿಂದ ವಿಪ್ರರಾಗುತ್ತಾರೆ, ಬ್ರಹ್ಮಜ್ಞಾನದಿಂದ ಬ್ರಾಹ್ಮಣರಾಗುತ್ತಾರೆ)

ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ (ಭಗವದ್ಗೀತಾ)

(ಗುಣಕರ್ಮವಿಶೇಷಗಳಿಗನುಗುಣವಾಗಿ ನಾಲ್ಕು ವರ್ಣಗಳು ನನ್ನಿಂದ ಸೃಷ್ಟಿಸಲ್ಪಟ್ಟಿವೆ)

ಶೂದ್ರೇಣ ಹಿ ಸಮಸ್ತಾವತ್ ಯಾವದ್ವೇದೇ ನ ಜಾಯತೇ (ಮನುಸ್ಮೃತಿ)

ಉಪನಯನವೇ ಮೊದಲಾದ ದ್ವಿಜಸಂಸ್ಕಾರಗಳಾಗುವವರೆಗೆ ಎಲ್ಲರೂ ಶೂದ್ರರೇ.

ಈ ಕೊನೆಯ ಮೂರು ಉಲ್ಲೇಖಗಳನ್ನು ನೋಡಿದ ಮೇಲೆ, ಇದುವರೆಗೆ ಮಹಾನ್ ಮಾನವತಾವಾದಿಯಾಗಿದ್ದ ಪಂಪನೂ ಇದ್ದಕ್ಕಿದ್ದಂತೆ ವೈದಿಕವಾದಿ, ಬ್ರಾಹ್ಮಣವಾದಿ, ಭಗವದ್ಗೀತಾವಾದಿ, ಮನುವಾದಿ ಹೀಗೆಲ್ಲ ಕಾಣತೊಡಗಿದರೆ ತಪ್ಪು ನನ್ನದಲ್ಲ.  ನಮಗಂತೂ "ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪನಾವಗಂ" - ಆವಗಂ!!!

Wednesday, January 5, 2022

ಮುದ್ದಣಮನೋಲಹರಿ

ಮುದ್ದಣನಿಗೂ ಮನೋರಮೆಗೂ ಒಂದೇ ಜಗಳ , ವಿಳ್ಳೇದೆಲೆ ವಿಷಯಕ್ಕೆ.  ಕೊಡಲೇ ಇಲ್ಲವೆಂದು ಇವನು, ಹತ್ತು ಕೊಟ್ಟಿದ್ದೇನೆಂದು ಅವಳು.  

ಅದು ಹೀಗಾಯ್ತು.  ಅರಮನೆಯಿಂದ ರಾಜಮರ್ಯಾದೆ ಹೊತ್ತು ದಣಿದು ಬಂದ ಗಂಡನಿಗೆ ಕಾಲಿಗೆ ನೀರಿತ್ತು, ಕೈಹಿಡಿದು ಒಳಚೌಕಿಗೆ ಕರೆದೊಯ್ದು, ಮಣೆಯ ಮೇಲೆ ಕುಳ್ಳಿರಿಸಿ ಸೊಗಸಾದ ಹಣ್ಣುಗಳನ್ನು ತಿನ್ನಲಿತ್ತು, ಕೆನೆ ಹಾಲನ್ನು ಕುಡಿಯಲಿತ್ತು, ಬಳಿಯಲ್ಲೇ ಕುಳಿತು ನರುದಂಬುಲವನ್ನು ಮಡಚಿಕೊಡುತ್ತಾ ಅವನು ಹೇಳುವ ನಲ್ಗತೆಯನ್ನು ಆಲಿಸುವುದು ಮನೋರಮೆಯ ವಾಡಿಕೆ.  ಇಂದೂ ಆದದ್ದು ಅದೇ.  ಆದರೆ ಕತೆ ಕೇಳುವ ಭರದಲ್ಲಿ ಅವಳು ತಂಬುಲವನ್ನು ಕೊಡಲೇ ಇಲ್ಲವೆಂಬುದು ಮುದ್ದಣನ ವಾದ, ಇಲ್ಲ, ಕೊಟ್ಟಿದ್ದೇನೆಂದರೆ ಕೊಟ್ಟಿದ್ದೇನೆ ಎಂದು ಇವಳ ವಾದ.  ಇರಲಿ ಇದನ್ನು ನಮ್ಮ ಬಡನುಡಿಯಲ್ಲಿ ವರ್ಣಿಸಿ ಕೆಡಿಸುವುದೇಕೆ?  ಬನ್ನಿ ಅದೇನು ಕಲಹವೋ ಅಲ್ಲಿಯೇ ನೋಡೋಣ:

***

ಮುದ್ದ: ದೇವೀ

ಮನೋ: ಆಂ?

ಮುದ್ದ: ಕತೆ ನಿನಗೆ ಸೊಗಮೆನಿಸಿರ್ಪುದೇಂ?

ಮನೋ: ಅಲ್ತೇಂ?  ಬಲ್ಸೊಗಸು ಕಣಾ ನೀಂ ಕತೆವೇೞ್ವ ಮೊಗಸು.

ಮುದ್ದ: ಅಕ್ಕಕ್ಕು ರಮಣೀ.  ಅಂತಾ ಮಾತೀಗಳೆಮ್ಮ ಮನಕಂ ಬಂದುದೈಸೆ.

ಮನೋ: ಅಂತೇಕೆನುವಯ್?

ಮುದ್ದ: ಮತ್ತೇವೇೞ್ವೆನ್? ಕತೆಗೇಳ್ವೊಂದು ಮನಮರೆವಿನೊಳೆನ್ನ ನಿಚ್ಚದ ಮೆಚ್ಚಿನ ನಱುದಂಬುಲಕಂ ಸೊನ್ನೆಸುತ್ತಿರ್ದಪೆಯಲ್ತೇ?

ಮನೋ: ಮನಮರೆವೇಂ? ಏವಾತೋ?  ಆಂ ಸೊನ್ನೆಸುತ್ತಿದೆನ್?

ಮುದ್ದ: ಮತ್ತೇಂ?  ತಂಬುಲಮೆಲ್ಲೇ?

ಮನೋ: ಎಲ್ಲೆಂಬೆಯೇಂ?  ನಿನ್ನ ಗಡಿಗೆವೊಟ್ಟೆಯೊಳ್.  ಒಂದೆರೞ್ಮೂರೋರಂತೆ ಪತ್ತು ತಂಬುಲಮಂ ಮಡಿದಿತ್ತೆನೈಸೆ? 

ಮುದ್ದ:  ಪತ್ತು? ಎಂದೇ?  ಎನಗೇಂ?

ಮನೋ: ಆಂ, ಪತ್ತು - ಒಂದೆರೞ್ಮೂರ್ನಾಲ್ಕೈದಾರಲ್ತು, ಪತ್ತು, ಪತ್ತು; ಇಂದೇ, ಈಗಳೇ, ನಿನಗೇ.  

ಮುದ್ದ: ಓವೋ, ನೀಂ ಬಲ್ಗಡಸುಗಾರ್ತಿಯೈಸೆ!  ನಡುವೊಳ್ ಪುಸಿ ಸೊಗಸಕ್ಕುಂ, ನುಡಿಯೊಳಲ್ತು.

ಮನೋ: ಆ?  ಆಂ ಪುಸಿವೆನೇಂ?  ಒಂದಾದುದೆರೞ್ಮೂರಾದುದು, ಪತ್ತುಂ ವೀಳಯಮನೆಡೆವಿಡದೆ ತಡೆಯಿಡದೆ ಮೆದ್ದುದಿಲ್ಲಾ?  ನೀನೇಂ ಗಂಡನೆಯೋ ತೊಂಡುಮೇಂಕೆಯೋ?

ಮುದ್ದ: ಪುಸಿಯಲ್ಲದೇಂ ದಿಟಮೇ?  ಕತೆವೇಳ್ವೊಂದುದ್ಯಮದೊಳ್ ಬಾಯಾಱಿವಂದೊಡಂ ತೆಱೆವಾಯ್ಮುಚ್ಚಿರ್ದೆನಿಲ್ಲ.  ಪತ್ತುಂ ವೀಳಯಂ ಮೆದ್ದೆನ್?

ಮನೋ: ಅವ್ವೀ!  ಏವೇಳ್ವಯ್?  ನಿನ್ನೊಳಾವ ಬೂತುವೊಕ್ಕಿದುದೋ? ಕತೆವೇಳ್ವೆಡೆಯೆಡೆಯೊಳ್ ತಂಬುಲಮಂ ಮಡಿಮಡಿದು, ಎನ್ನ ರಸಿಕರಾಜಂಗೆ ನಲ್ವೆಚ್ಚನೀವೊಂದು ಪಾಂಗಿನೊಳಾನೆ ತುಟಿಯೊಳ್ವಿಡಿದು ಬಾಯ್ಗಿತ್ತೆನಿಲ್ಲಾ? 

ಮುದ್ದ:  (ನೆನಪಿನಿಂದೆ) ಆಂ!  ಅಂತುವೇೞ್!  ಅಂತುವೇೞ್!

ಮನೋ: ಏಂ? ನೆನವಾದುದೋ?

ಮುದ್ದ: ಅಪ್ಪುದು!  ಕತೆಗೇಳ್ವೆಡೆಯೆಡೆಯೊಳ್ ಸೊಗವರಿದಿರೆ, ರಸಿಕತೆವಿಕ್ಕಿರೆ, ಚೆಂಗದಪಿನ ಚೆಲುನಗೆವೆರಸು ನೀಂ ತಂಬುಲಮಂ ಮಡಿದುದು ದಿಟಂ

ಮನೋ: (ಗೆಲ್ದ ಸಂತಸದಿಂದೆ) ಹಾಂ!  ಅಂತೆವೇೞ್!

ಮುದ್ದ: ಮಡಿದುದಂ ನಿನ್ನ ತುಟಿಯೊಳಿಟ್ಟುದುಂ ಸಚ್ಚಂ

ಮನೋ: (ಕಾತರದಿಂದೆ) ಮುಂದೆ, ಮುಂದೆ?

ಮುದ್ದ: ಸರಸದಿಂ ಅದನೆನ್ನ ಬಾಯ್ವೞಿಗೆ ತಂದುದುಂ ದಿಟಮೇ

ಮನೋ: (ಉದ್ವೇಗದಿಂದೆ) ಮತ್ತಂ?  ಪೇೞ್ ಪೇೞ್

ಮುದ್ದ: ಮತ್ತೇವೇೞ್ವೆಂ?  ಆದೊಡದಂ ನೀನೆನ್ನ ಬಾಯ್ಗಿತ್ತುದಿಲ್ಲಂ!

ಮನೋ: (ಅಚ್ಚರಿಯಿಂದೆ) ಆಂ?  ಮತ್ತೇಗೆಯ್ದೆನೋ!

ಮುದ್ದ: (ಪುಸಿಗೋವದಿಂದೆ) ಏಗೆಯ್ದೆಯೇಂ? ಅದನಿತುಮಂ ನೀನೆ ಮೆಯ್ದೆಯಲ್ತೆ?  ಅಟ್ಟಡುಗೆಯಂ ಕುಡದೆ ತಾನುಣ್ಬ ತಿನಿವೆಂಡಿರೊಲ್!  ಬಯಸಿ ಬಾಯ್ವಿಟ್ಟುದನಿತೆಯೆಮಗೊದವಿದ ಭಾಗ್ಯಂ!

ಮನೋ: (ಬಿಲ್ಲುಂಬೆಱಗಾಗಿ) ಅವ್ವಯ್ಯಾ! ಇದೇಂ ಗಡಸೋ! ಇದೇಂ ಗಟ್ಟಿಗಾಱತನಮೋ! ಸೆಱಗಿಲ್ಲದೆ ಪುಸಿವದಟೋ! ಪುಸಿನುಡಿವೊಂದುಪಾಂಗು ಇಂತುಮಿರ್ಕುಮೆ!  ಹಾ ಗೌರೀ! ಇನಿತುಂ ಭಂಡುಳ್ಳ ಗಂಡನೊಡನೆಂತು ಬಾಳಂಗೆಯ್ವೆಂ! 

ಮುದ್ದ: ಏವೆಣ್ಣೆ?  ಆಗಳಿಂ ನೋಳ್ಪೆಂ. ಆಂ ಗಡಸುಗಾಱಂ ಗಡ!  ಪುಸಿವಂ ಗಡ! ಭಂಡಂ ಗಡ! ತೊಂಡಂ ಮೇವ ಮೇಂಕೆಗಡ!  ತಂಬುಲಮನಾರ್ ಮೆದ್ದರ್ ಈಗಳೆ ನೋಳ್ಪಂ.   ಆರ ತುಟಿಯೊಳ್ ರಂಗುವೆರ್ಚಿರ್ಪುದೋ ರನ್ನಗನ್ನಡಿಯೊಳೆ ಕಾಣ್ಬಂ.

ಮನೋ: ಪೋ!  ಇದೇತಱ ಮಾತಯ್?  ಬೊಮ್ಮನಿತ್ತ ಸಾಜದ ತುಟಿಗೆಂಪಂ ತಂಬುಲಗೆಂಪಿಂಗೆತ್ತುವುದೇವಾತೋ? 

ಮುದ್ದ: ಅಂತೇಂ?  ಅಂತಪ್ಪೊಡಾ ಚೆಂದುಟಿಯ ಕೆಂಪೆನಿತು ಸಾಜಮೊ ತುಟಿಯನೆ ಕೇಳ್ವಂ (ಬೞಿಸಾರ್ದು ಮೊಗವಿಡಿವನ್)

ಮನೋ: (ಬೆರ್ಚುತ್ತುಂ, ನಾಣ್ಚುತ್ತುಂ, ಕೊಸಱುತ್ತುಂ) ಓ ಇದೇಂ ಮಾೞ್ಪಯ್! ಬಿಡು ಬಿಡು! ನಡುವಗಲ್, ಪಿರಿಯರ್ ನೋಳ್ಪರಿಲ್ಲಾ?  ಇದೇನೀ ನಾಣಿಲಿಗೆಯ್ತಂ! ಮಾಣ್ ಮಾಣ್!

ಇಂತು "ಮಾಣ್ಮಾಣೆಂಬೊಂದು ನೆವದಿಂದೊಚ್ಚತಮುಣ್ಮುವ ಕಾಮಿನಿಯ ಕಂಠರುತಿಯ ಹೂಂಕೃತಿಯುಪಚಾರಮಾಗೆ ತುಂಬುಂಗೊಡನೊಳಿಟ್ಟೊಂದು ನುಣ್ಮೞಲ್ವರಲಿಂ ಪುಟ್ಟುವ ಕುಳ್ಕುಳೆಂಬ ಮೆಲ್ಲುಲಿಯ ಪಾಂಗಿನಿಂ ಕಂಠಮೂಲದೊಳಡಿಗಡಿಗೆ ಕಳಕಳನಾದಮೊದವೆ ಮುಂಬಲ್ಗಳಿಂ ಮೆಲ್ಲನೆ ಕರ್ಚಿಯುಂ, ತನಿರಸಂ ಸೋಱುವನ್ನಂ..."

***

ಸಾಕು ಬನ್ನಿ, ಇನ್ನು ನಾವಲ್ಲಿರುವುದು ತರವಲ್ಲ.  ನೀವೂ ಸರಿ, ಅಲ್ಲೇ ಖುರ್ಚಿ ಹಾಕಿಕೊಂಡು ಕೂತೇ ಬಿಡುವುದೇ?  ಅವರಷ್ಟಕ್ಕೆ ಅವರನ್ನು ಬಿಟ್ಟು ನಮ್ಮ ಕೆಲಸ ನೋಡೋಣ.  ಅಂದಹಾಗೆ, ಎಲ್ಲರ ಕನ್ನಡದ ಜಗಳ ಏನಾಯ್ತು?

ವಿ.ಸೂ:  

ಬೇರೇನನ್ನೋ ಗಂಭೀರವಾಗಿ ಬರೆಯಲು ಹೊರಟದ್ದು - ಸಂಸ್ಕೃತವಿಲ್ಲದ ಕನ್ನಡವೆಂದರೆ ಅದನ್ನು ವಿಕಾರ ಮಾಡಲೇಬೇಕೆಂದಿಲ್ಲ ಎಂದೇನೋ ಹೇಳುತ್ತಾ, ಕನ್ನಡ-ಸಂಸ್ಕೃತ-ಸಂಸ್ಕೃತವಿಲ್ಲದ ಹಳಗನ್ನಡ, ಚೆಲುಗನ್ನಡ ಹೀಗೆ ಲೇಖನವೊಂದನ್ನು ಬರೆಯಹೊರಟೆ.  ಮುದ್ದಣ ಮನೋರಮೆಯರ ಉದಾಹರಣೆಯೊಂದಿಗೆ ಶುರುಮಾಡಿದರೆ, ಅದು ತನ್ನಷ್ಟಕ್ಕೇ ಚೆಲುವಾದೊಂದು ಲಹರಿಯಾಗಿ ಬೆಳೆಯತೊಡಗಿತು.  ಬರೆಯಬೇಕೆಂದಿದ್ದ ವಿಷಯವನ್ನು ಪಕ್ಕಕ್ಕಿಟ್ಟು ಲಹರಿಯನ್ನು ಬೆಳೆಯಲು ಬಿಟ್ಟೆ - ಇಷ್ಟಾಯ್ತು.

ಅಂದ ಹಾಗೆ, ಇದು ಮುದ್ದಣನ ಬರಹವಲ್ಲ - ಹಿನ್ನೆಲೆ ಮುದ್ದಣನದ್ದು, ಮುದ್ದಣಮನೋರಮೆಯರ ಅಂತರಂಗಕ್ಕಿಳಿದಾಗ ಹೊರಟ ಸಂಭಾಷಣೆ ನನ್ನದೇ ಲಹರಿ.   "***" ಚಿಹ್ನೆಯ ಮೇಲಿರುವ ಕೊನೆಯ ಪ್ಯಾರಾ ಮಾತ್ರ (ಮಾಣ್ಮಾಣೆಂಬೊಂದು ನೆವದಿಂದೊಚ್ಚತಮುಣ್ಮುವ...") ಮುದ್ದಣನದು, ರಾಮಾಶ್ವಮೇಧದ ಅಷ್ಟಮಾಶ್ವಾಸದ ಒಂದು ಭಾಗ.

Wednesday, December 29, 2021

ಮಾತೆಂಬ ಜ್ಯೋತಿರ್ಲಿಂಗ

ಬಹಳ ಕಾಲ ಇದರ ಬಗ್ಗೆ ಬರೆಯಬೇಕೆಂದು ಯೋಚಿಸುತ್ತಿದ್ದೆ.  ಹಂಸಲೇಖ ಬಿರುದಾಂಕಿತರಾದ ಶ್ರೀಮಾನ್ ಗಂಗರಾಜು ಅವರು ಮೊನ್ನೆ ಈ ವಚನವನ್ನು ತಮ್ಮ ಸಮರ್ಥನೆಗೆ ಬಳಸಿಕೊಂಡ ರೀತಿ ನೋಡಿ ಬರೆಯಲೇಬೇಕೆಂಬ ಒತ್ತಡ ಮೂಡಿತು. 

ಅವರೇನೋ ಮುತ್ತಿನ ಹಾರದಂತಿರಬೇಕು ಎಂದು ಮಾತಾಡತೊಡಗಿದರೆ (ಬರೆದುಕೊಂಡು ಬಂದಿಲ್ಲದುದರಿಂದ) ಏನೇನೋ ಆಗಿ, ಅದರೊಳಗಿನ ಮಾಣಿಕ್ಯದ ದೀಪ್ತಿ, ಸ್ಫಟಿಕದ (ಸತ್ಯದ) ಸಲಾಕಿಗಳೆಲ್ಲ ಕಂಡುಬಿಟ್ಟುವಂತೆ - ಅದೇ, ವಯೋವೃದ್ಧ ದಿವಂಗತ ಸನ್ಯಾಸಿಯೊಬ್ಬರ ಆಹಾರಕ್ರಮದ ಬಗ್ಗೆ ಕೆಲದಿನಗಳ ಹಿಂದೆ ಲೇವಡಿ ಮಾಡಿದ್ದ ವಿಷಯ ಅವರು ಹೇಳಿದ್ದು.  ಆ ವಿಷಯಕ್ಕಾಗಲೀ, ಅವರ ಮಾಲುಬಾಲು ಸಾಹಿತ್ಯಕ್ಕಾಗಲೀ 'ಅಹುದಹುದು' ಎಂದು ತಲೆಹಾಕುವ ಲಿಂಗ ಯಾವುದೋ ನಮಗೆ ತಿಳಿಯದು.  ಆದರೆ ವಚನದಲ್ಲಿ ಬಸವಣ್ಣನವರು ನಿರ್ದೇಶಿಸಿದ 'ಅಹುದಹುದೆ'ನ್ನುವ ಲಿಂಗ ಮಾತ್ರ ಆ ಲಿಂಗವಲ್ಲವೆಂಬುದು ನಮ್ಮ ಅರಿವು.  ಅದೇನೇ ಇರಲಿ, ಈ ನೆಪದಲ್ಲಾದರೂ ಈ ಉಜ್ವಲವಾದ ವಚನವನ್ನೊಮ್ಮೆ ಮತ್ತೆ ಮನನ ಮಾಡಿಕೊಳ್ಳಬಹುದಾದರೆ ಅದು ಒಳ್ಳೆಯದೇ ಅಲ್ಲವೇ?  ಅದಕ್ಕಾಗಿ ಗಂಗರಾಜರಿಗೆ ನಮ್ಮ ಕೃತಜ್ಞತೆ ಸಲ್ಲಲೇಬೇಕು.

ನುಡಿದಡೆ ಮುತ್ತಿನ ಹಾರದಂತಿರಬೇಕು. ನುಡಿದಡೆ ಮಾಣಿಕದ ದೀಪ್ತಿಯಂತಿರಬೇಕು. ನುಡಿದಡೆ ಸ್ಫಟಿಕದ ಶಲಾಕೆಯಂತಿರಬೇಕು. ನುಡಿದಡೆ ಲಿಂಗ ಮೆಚ್ಚಿ ಅಹುದಹುದೆನಬೇಕು. ನುಡಿಯೊಳಗಾಗಿ ನಡೆಯದಿದ್ದಡೆ ಕೂಡಲಸಂಗಮದೇವನೆಂತೊಲಿವನಯ್ಯಾ.

ಅಣ್ಣನವರ ಈ ಸುಪ್ರಸಿದ್ಧವಚನವನ್ನು ಕೇಳದವರಾರು?  ಅದನ್ನು ಉದಾಹರಿಸದ ಹಿರಿಯರಿಲ್ಲ, ತಮ್ಮ ಮಾತಿನಲ್ಲಿ ಬಳಸಿ ಟೀಆರ್ಪಿ ಬೇಳೆ ಬೇಯಿಸಿಕೊಳ್ಳದ ಸಾಹಿತಿ-ರಾಜಕಾರಣಿಯಿಲ್ಲ.  ಮಹಾಜ್ಞಾನಿಗಳಿಂದ ಹಿಡಿದು ಅಪಾಪೋಲಿಗಳವರೆಗೆ ಎಲ್ಲರಲ್ಲೂ ಅವರವರದೇ ಕಾರಣಗಳಿಗಾಗಿ ಜನಪ್ರಿಯವಾದ ವಚನವಿದು.  ಆದರೆ ಇದರ ತಾಕತ್ತು ನೋಡಿ - ಬಳಸಿದವರು ಯಾರೇ ಇರಲಿ, ಯಾವ ಗದ್ದಲದೊಡನೆಯೇ ಬಳಸಿರಲಿ, ಆ ಗದ್ದಲವನ್ನೂ ಮೀರಿ ಪ್ರಜ್ಞೆಯನ್ನು ತಟ್ಟುತ್ತದೆ, ಅದರ ಉಜ್ವಲಪ್ರಭೆ ಕಣ್ಸೆಳೆಯುತ್ತದೆ - ಏಕೆಂದರೆ "ಮಾತೆಂಬುದು ಜ್ಯೋತಿರ್ಲಿಂಗ" ಎಂಬ ಹಿರಿಯರಿವಿನಿಂದ ಬಂದ ಕಾಣ್ಕೆ ಅದು, ಸ್ವಯಂಪ್ರಕಾಶವುಳ್ಳದ್ದು, ಸ್ವಯಂಪಾವಿತ್ರ್ಯವುಳ್ಳದ್ದು.  ಅದಕ್ಕೇ ಎಂತಹ ನಾಲಿಗೆಯ ಮೇಲೇ ನಲಿದರೂ ಅದರ ತೇಜ ಮಸಗುವುದಿಲ್ಲ, ಚುರುಕು ಕುಂದುವುದಿಲ್ಲ.   ಬದಲಿಗೆ ಹಲವರನ್ನು ಚಿಂತನೆಗೆ ಹಚ್ಚುತ್ತದೆ, ಹಲವು ಪ್ರಜ್ಞೆಗಳಲ್ಲಿ ಪ್ರತಿಫಲಿಸುತ್ತದೆ, ಪ್ರಜ್ವಲಿಸುತ್ತದೆ.

ಈ ವಚನದ ಸೊಗಸನ್ನು ನೋಡಿ.  ಒಂದು ನುಡಿ - ಅದು ಹೇಗಿರಬೇಕೆಂಬುದಕ್ಕೆ ಹಲವು ಉಪಮೆಗಳು, ಸೋಪಾನಕ್ರಮದಲ್ಲಿ ಒಂದು ಇನ್ನೊಂದಕ್ಕಿಂತ ಉಜ್ವಲಗೊಳ್ಳುತ್ತಾ ಹೋಗಿ ಕೊನೆಗೆ ಅತ್ಯುನ್ನತವಾದ ಪರಿಣಾಮದಲ್ಲಿ ವಿಶ್ರಾಂತಿ ಹೊಂದುತ್ತದೆ.  ಒಂದು ವಾಕ್ಯವನ್ನೋ ಪದವನ್ನೋ ಅಕ್ಷರವನ್ನೋ ತೆಗೆದು ಹಾಕುವಂತಿಲ್ಲ - ವಚನಗಳ ಸೊಗಸೇ ಹಾಗೆ.  ಅದರಲ್ಲೂ ಈ ವಚನವಂತೂ ಸ್ವೋಪಜ್ಞವಾದುದು, ತನ್ನ ಮಾತಿಗೆ ತಾನೇ ಉದಾಹರಣೆಯಾಗಿ ನಿಲ್ಲುವಂಥದು.

ಅಣ್ಣನವರ ಈ ವಚನವನ್ನು ಪರಿಭಾವಿಸುವುದಕ್ಕೂ ಮುಂಚೆ, ಆ ವಚನ ನಮ್ಮ ಮುಂದಿಡುವ ಪ್ರಶ್ನೆಯನ್ನು ಮೊದಲು ಗಮನಿಸಬೇಕು.  ಈ ವಚನ ಹೇಳುತ್ತಿರುವುದು "ನುಡಿದರೆ" ಹೇಗಿರಬೇಕು ಎಂಬುದನ್ನು ಕುರಿತು ತಾನೆ?  ನುಡಿದರೆ - ನುಡಿ ಹೀಗಿರಲು ಸಾಧ್ಯವಿಲ್ಲದಿದ್ದರೆ?  ಈ ವಿಷಯದಲ್ಲಿ ವಚನದ್ದು ದಿವ್ಯಮೌನ.  ಆ ಮೌನವೇ ಆ ಪ್ರಶ್ನೆಗೆ ಉತ್ತರ - ಸಾಧ್ಯವಿಲ್ಲದಿದ್ದರೆ? ತೆಪ್ಪಗಿರು.  ಒಂದರ್ಥದಲ್ಲಿ ಈ ವಚನವು ಆಡಿ ತೋರಿಸಿರುವುದಕ್ಕಿಂತ ಆಡದೇ ತೋರಿಸಿರುವುದೇ ಅಗಾಧವಾದದ್ದು - ಅದನ್ನರಿಯದೇ ವಚನ 'ಆಡಿದ್ದನ್ನು' ಮಾತ್ರ ವಿಶ್ಲೇಷಿಸುವುದು ಮೂರ್ಖತನವೇ ಸರಿ.  ಅಲ್ಲಮ ಒಂದೆಡೆ ಹೇಳುತ್ತಾನಲ್ಲ "ಅರಿಯಬಾರದ ಘನವನರಿತವರು ಅರಿಯದಂತಿಪ್ಪರು" - ಏಕೆಂದರೆ ಅದು ಮಾತಿಗೆ ಮೀರಿದ್ದು, ಹೇಳುವುದಕ್ಕೂ ಕೇಳುವುದಕ್ಕೂ ಅದು ಸಂದರ್ಭವೇ ಅಲ್ಲ. ಇದೇ ಅಲ್ಲಮಪ್ರಭುದೇವರು ಇನ್ನೊಂದು ಕಡೆ ಹೇಳುತ್ತಾರೆ "ವಾಕಿನಿಂ ಪರಬ್ರಹ್ಮವ ನುಡಿವ ಕುತರ್ಕಿಗಳೆಡೆಯಲ್ಲಿ ಮಾಗಿಯ ಕೋಗಿಲೆಯಂತೆ ಮೂಗನಾಗಿರಬೇಕು" 

ಇದು ಅರಿತವರ ಮಾತಾಯಿತು; ಇನ್ನು ಅರಿಯದವರೋ?  ಅಲ್ಲಿ ಮಾತಿಗೆ ಕೆಲಸವೇ ಇಲ್ಲ.  ಬಾಯಿಬಿಟ್ಟು ಬಣ್ಣಗೇಡಾದರೆ ಪ್ರಯೋಜನವೇನು?  ತುಂಬಿದ ಕೊಡ ತುಳುಕುವುದಿಲ್ಲ, ಬರಿಗೊಡಗಳೂ ತುಳುಕುವುದಿಲ್ಲವಷ್ಟೇ? ಒಂದು ಹಳೆಯ ಜೋಕ್ ನೆನಪಾಗುತ್ತದೆ - I know only my mother tongue but I can keep shut in ten other languages (ನನಗೆ ನನ್ನ ತಾಯ್ನುಡಿಯಷ್ಟೇ ಗೊತ್ತು, ಆದರೆ ಇನ್ನೂ ಹತ್ತು ಭಾಷೆಗಳಲ್ಲಿ ನಾನು ತೆಪ್ಪಗಿರಬಲ್ಲೆ).  ಹೀಗೆ ತೆಪ್ಪಗಿದ್ದುಬಿಡುವುದೇ ಅನೇಕವೇಳೆ ಘನತೆಯನ್ನು ತಂದು ಕೊಡುತ್ತದೆ.  ತೆಲುಗಿನಲ್ಲಿ ಒಂದು ಗಾದೆಯಿದೆ - "ಅಯ್ಯವಾರಿಕಿ ಜ್ಞಾನಮೂ ಲೇದು ಗರ್ವಮೂ ಲೇದು" - ಜ್ಞಾನಮು ಲೇಕಪೋತೆ ಏಮಿ, ಗರ್ವಮು ಲೇದು ಕಾದಾ? (ಜ್ಞಾನವಿಲ್ಲದಿದ್ದರೆ ಏನು, ಗರ್ವವಂತೂ ಇಲ್ಲವಲ್ಲ) ಎಂದು ಸಮಾಧಾನಪಟ್ಟುಕೊಳ್ಳಬಹುದಲ್ಲ.  ಇಷ್ಟಕ್ಕೂ ಕೊಡದ ಖಾಲಿತನ ಹೀನಾಯವೇನಲ್ಲ.  ಖಾಲಿಯಾಗುವುದೇ ತುಂಬಿಸುವುದರ ಮೊದಲ ಹೆಜ್ಜೆ - ಖಾಲಿಯಿದ್ದೇನೆಂಬ ಅರಿವು ಇದಕ್ಕೆ ಸಾಧಕ.  ಆದರೆ ಆ ಅರಿವು ಕೀಳರಿಮೆಯಾದರೆ ಮಾತ್ರ ಮಹಾಕಷ್ಟ.  ಖಾಲಿ ಕೊಡವನ್ನು ನೀರಿಗೊಯ್ಯಬೇಕು, ನೀರು ಸದ್ದಿಲ್ಲದೇ ಒಳತುಂಬುತ್ತಿದ್ದರೆ ಒಳಗಿನ ಗಾಳಿ ಸದ್ದಿಲ್ಲದೇ ಇನ್ನೊಂದು ಬದಿಯಿಂದ ಹೊರಹೋಗಬೇಕು - ಆಗ ಆ ಕೊಡ ಖಾಲಿಯಿದ್ದಾಗಲೂ ತುಂಬಿದ ಮೇಲೂ ತುಳುಕದೇ ಉಳಿದೀತು.  ಕೊಡದ ಬಾಯಿ ಬಹಳ ಚಿಕ್ಕದಾದರೆ ನೀರು ತುಂಬುವಾಗಲೂ ಡುಬುಡುಬು ಸದ್ದು ತಪ್ಪಿದ್ದಲ್ಲ.  ಎಷ್ಟೋ ವೇಳೆ ಪೂರ್ತಿ ತುಂಬುವುದೂ ಇಲ್ಲ.  ಈ ನೀರುತುಂಬುವುದಕ್ಕಿಂತ ಸುಲಭವೆಂದು ಖಾಲಿ ಕೊಡದೊಳಗೆ ಕಲ್ಲು ಹಾಕಿ ಆಡಿಸಿದರೆ?  ತುಂಬಿದ ಕೊಡದ ನೀರು ಕೊಡದೊಳಗೇ ಅಲ್ಲಾಡುತ್ತಾ ಹೊರಡಿಸುವ ಮೃದುಮಧುರವಾದ ಸಪ್ಪಳವೆಲ್ಲಿ, ಖಾಲಿ ಕೊಡದೊಳಗೆ ಕಲ್ಲಾಡಿಸುವ ಗಲಗಲ ಗಡಗಡ ಶಬ್ದವೆಲ್ಲಿ?  ಬಹುಶಃ ಈ ಎರಡನೆಯದು ಬಸವಣ್ಣನವರನ್ನು ಬಹಳ ಹೈರಾಣಗೊಳಿಸಿರಬಹುದು.  ಆ ಖಾಲಿ ಕೊಡಗಳ ಗದ್ದಲದ ಸಂತೆಯಲ್ಲಿ ಮೌನವನ್ನ, ಮೌನ ಮಥಿಸಿ ಹೊರಬಿದ್ದ ಮುತ್ತಿನ ಹಾರದಂತಹ ಮಾತಿನ ಬೆರಗನ್ನು ಕುರಿತು ಧ್ಯಾನಿಸುತ್ತಾರೆ ಬಸವಣ್ಣ. 

ಈ ಹೋಲಿಕೆಗಳು ಸೋಪಾನಕ್ರಮದಲ್ಲಿ (ಮೆಟ್ಟಿಲುಮೆಟ್ಟಿಲಾಗಿ) ಹೋಗುತ್ತವೆಂದು ನಾನು ಮೊದಲಲ್ಲಿ ಹೇಳಿದೆ.  ಅದನ್ನು ಈಗ ಗಮನಿಸೋಣ.

ಮೊದಲನೆಯದಾಗಿ ಮುತ್ತು ಅಪರೂಪದ ವಸ್ತು (ಕೃತಕ ಮುತ್ತುಗಳ ವಿಷಯ ಬಿಡಿ, ಹಾಗೆಯೇ ಬಣ್ಣದ ಮಾತುಗಳನ್ನೂ ಬಿಡಿ, ಅವು ನೋಡಿದೊಡನೆ ತಿಳಿದುಬಿಡುತ್ತದೆ).  ಎಲ್ಲೋ ಲಕ್ಷಾಂತರ ಹನಿಗಳಲ್ಲಿ ಒಂದು ಮುತ್ತಾಗುತ್ತದೆ.  ಇಂತಹ ಮುತ್ತುಗಳ ಹಾರವೊಂದನ್ನು ಮಾಡಬೇಕಾದರೆ ಒಂದೊಂದೇ ಮುತ್ತನ್ನು ಹೆಕ್ಕಿ ತರಬೇಕು.  ಇನ್ನು ಮುತ್ತಿನಲ್ಲಿ ಹಲವು ಬಣ್ಣಗಳಿರಬಹುದು, ಆದರೆ ಮುತ್ತಿನ ಹಾರವೆಂದರೆ ಕಣ್ಣಿಗೆ ಬರುವುದು ಶುಭ್ರವಾದ ಬಿಳಿಯ ಮುತ್ತೇ.  ಈ 'ಶುಭ್ರ'ತೆಯೇ ಮಾತಿನ ಮುಖ್ಯಗುಣ.  ಅದಕ್ಕೇ ವಾಗ್ದೇವಿಯನ್ನು "ಸರ್ವಶುಕ್ಲಾ" ಎಂದಿದ್ದಾನೆ ಲಾಕ್ಷಣಿಕ ದಂಡಿ; ಕವಿರಾಜಮಾರ್ಗಕಾರನ ಪ್ರಕಾರ ಆಕೆ "ವಿಶದವರ್ಣೆ" - ಸ್ವಚ್ಛವಾದ (ಬಿಳೀ) ಬಣ್ಣದವಳು.  "ಕುಂದೇಂದುತುಷಾರಹಾರಧವಳಾ" ಎಂದೇ ನಾವು ಸರಸ್ವತಿಯನ್ನು ಧ್ಯಾನಿಸುವುದು.  ಆಡುವ ಮಾತು ಆಕೆಯ ಪ್ರತೀಕವಾಗಿಲ್ಲದಿದ್ದರೆ ಹೇಗೆ?  ಆಡಬೇಕೇ ಅಂತಹ ಮಾತನ್ನು?  ಇನ್ನು ಮುತ್ತಿನ ಇನ್ನೊಂದು ಲಕ್ಷಣ ದುಂಡು - ದುಂಡೆಂದರೆ ದುಂಡೇ, ಒಂದಿನಿತೂ ಓರೆಕೋರೆಗಳಿಲ್ಲ.  ಆಡಿದ ಮಾತು ಹೀಗೆ ಸ್ಫುಟವಾಗಿರಬೇಕೆಂಬುದು ಒಂದು.  ಮತ್ತೆ, ಇಲ್ಲಿ ಅಣ್ಣನವರು ಮುತ್ತಿನಂತಹ ಮಾತಿನ ಬಗೆಗೆ ಹೇಳುತ್ತಿಲ್ಲ, ಮುತ್ತಿನ ಹಾರದಂತಹ ಮಾತಿನ ಬಗ್ಗೆ.  ಮಾತು ಮುತ್ತಿನಂತಿದ್ದರೇನಾಯಿತು, ಅದಕ್ಕೊಂದು ಸಂಬದ್ಧತೆ, ಪ್ರಮಾಣವಿಲ್ಲದಿದ್ದರೆ? ಮುತ್ತಿನಲ್ಲಿ ಬೇರೆಬೇರೆ ಗಾತ್ರದವಿವೆ.  ಅದನ್ನು ಸಮಂಜಸವಾಗಿ ಕಟ್ಟುವುದು ಅಕ್ಕಸಾಲಿಯ ಕೌಶಲ.  ಯಾವಯಾವುದೋ ಗಾತ್ರದ ಮುತ್ತುಗಳನ್ನು ಪೋಣಿಸಿ ಕೊರಳಿಗೆ ಹಾಕಿದರೆ ಅದು ಹಾರವಾಗುವುದಿಲ್ಲ, ಕೊರಳಿಗೆ ಭಾರವಾಗುತ್ತದಷ್ಟೇ.  ಉತ್ತಮವಾದ ಕೈಬರಹವನ್ನು "ಮುತ್ತು ಪೋಣಿಸಿದಂತೆ" ಎನ್ನುತ್ತೇವೆ.  ಮುತ್ತು ಪೋಣಿಸಿದ ಹಾರದ ಹೋಲಿಕೆಯೂ ಇದೇ ಆಶಯವನ್ನು ಹೊಂದಿದಂಥದ್ದು - ಮಾತಿನಲ್ಲಿ ಶುಭ್ರತೆ, ಹೊಳಪು, ಸಮಂಜಸತೆ, ಸಂಬದ್ಧತೆ. 

ಆಯಿತು, ಇಷ್ಟಿದ್ದರೆ ಸಾಕೇ?  ಇಂತಹ ಮುತ್ತಿನ ಹಾರದಂತಹ ಮಾತುಗಳನ್ನು ಯಾವುದೇ ಮಾತಿನ ಕಲೆಗಾರನೂ ಪಂಡಿತನೂ ನೂರು ಆಡಿಯಾನು.  ಅದನ್ನು ಆಭರಣದಂತೆ ಧರಿಸಿ ಮೆರೆಯಬಹುದಷ್ಟೇ - ಪ್ರಯೋಜನವೇನು?  ಮುತ್ತಿನಂತೆ ಮುದ್ದುಮುದ್ದಾದ ನೂರು ಪದಗಳನ್ನು ಜೋಡಿಸಿದರೆ ಏನು ಫಲ?  ಅರ್ಥದ ಬೆಳಕಿಲ್ಲದ ಬರೀ ಮಾತು ಎಷ್ಟು ಸುಂದರವಾಗಿದ್ದರೆ ಏನು ಪ್ರಯೋಜನ?  ಮಾಣಿಕದ ದೀಪ್ತಿಯಂತೆ ಅರ್ಥವನ್ನು ಬೆಳಗಿ ತೋರಿಸಬಲ್ಲುದಾದರೆ, ಅದೀಗ ಮಾತು.

ಮಾತು ಬೆಳಗಿ ಅರ್ಥದ ಬೆಳಕು ಹೊಮ್ಮುವುದೇನೋ ಸರಿಯೇ.  ಆ ಬೆಳಕಿನಲ್ಲಿ ಕಣ್ಣಿಗೆ ಕಾಣುವುದು ಕಂಡಿತು.  ಕಾಣದ್ದು? ಅಡಗಿದ್ದು?  ಹೊರಗಿನದನ್ನು ಬೆಳಗುವ ಮಾತಿಗೆ ತನ್ನನ್ನು ತಾನೇ ಬೆಳಗಿಸಿಕೊಳ್ಳುವ, ತನ್ನ ಒಳಗನ್ನು ತೆರೆದು ತೋರುವ ಶಕ್ತಿಯೂ ಇರಬೇಕಲ್ಲವೇ?  "ಮಾತು ಅರ್ಥ ಎರಡು ವ್ಯರ್ಥ ಸ್ವಯಂ ಅರ್ಥವಿರದಿರೆ" ಅಲ್ಲವೇ?  ಹಾಗೆ ಸ್ವಯಂ ಅರ್ಥವನ್ನು ಹೊಂದಿದ ಮಾತಿಗೆ ವಿವರಣೆ ಬೇಕಿಲ್ಲ, ಸಂಪೂರ್ಣ ಪಾರದರ್ಶಕವಾಗಿರುತ್ತದೆ.  ಇಲ್ಲಿ ಅಣ್ಣನವರು ಸ್ಫಟಿಕದ ಶಲಾಕೆ ಎಂಬ ಮಾತನ್ನು ಬಳಸುತ್ತಾರೆ.  ಇದೊಂದು ಮಾತಿನಲ್ಲಿ ಅದೆಷ್ಟು ಅರ್ಥಗಳು ಹುದುಗಿವೆ ನೋಡಿ - ಸ್ಪಟಿಕ ಶುಭ್ರತೆಯ, ಪಾರದರ್ಶಕತೆಯ ಸಂಕೇತ.  ಆಡಿದ ಮಾತು ನಿಚ್ಚಳವಾಗಿರಬೇಕು, ಅದರ ಹೊರ ಅರ್ಥ ಒಳ ಅರ್ಥಗಳೆಲ್ಲ ಮನದಟ್ಟಾಗಬೇಕು, ಅಷ್ಟಾದರೆ ಸಾಕೇ?  ಮಾತು ಕೇವಲ ಸ್ಫಟಿಕವಾದರೆ ಸಾಲದು, ಸ್ಫಟಿಕದ ಶಲಾಕೆಯಾಗಬೇಕು.  ಶಲಾಕೆಯೆಂದರೆ ಕಿಟಕಿಗೆ ಹಾಕುವ ಕಬ್ಬಿಣದ ಸಲಾಕೆಯಲ್ಲ, ಮೊನೆಯಾದ, ದೃಢವಾದ, ಹಗುರಾದ ಕಡ್ಡಿ.  ಅದನ್ನು ಹಿಡಿದು ತೋರಿದರೆ, ಅದರ ಮೊನೆ ಗಮ್ಯವನ್ನು ಮುಟ್ಟಬೇಕು, ತೋರಿದ ಅರಿವಾಗಬೇಕು, ಆದರೆ ತೋರುವ ಶಲಾಕೆ ಕಾಣಬಾರದು - ಅರ್ಥವಷ್ಟೇ ಉಳಿಯಬೇಕು, ಮಾತು ನಿಲ್ಲಬಾರದು.  ದಿ. ಮೈಸೂರು ವಾಸುದೇವಾಚಾರ್ಯರು ವೀಣೆ ಶೇಷಣ್ಣನವರು ಯಾವಾಗಲೂ ಹೇಳುತ್ತಿದ್ದ ಒಂದು ಮಾತನ್ನು ನೆನೆಯುತ್ತಾರೆ - ವೀಣೆ ನುಡಿಸಿದರೆ, ಆ ತಂತಿ ಮಿಡಿಯುವ ಉಗುರಿನ ಕಟಪಟ ಶಬ್ದ ಒಂದಿನಿತೂ ಕೇಳಬಾರದು, ಕೇವಲ ಮಿದುವಾದ, ಹದವಾದ ನಾದವಷ್ಟೇ ಹೊರಹೊಮ್ಮಬೇಕು - ಅದೇ ಆಶಯ ಇಲ್ಲೂ.  ಆಡಿದ ಮಾತು, ತಾನು ಹೇಳಬೇಕಾದ ಭಾವವನ್ನಷ್ಟೇ ತೋರಿ ತಾನು ಮರೆಯಾಗಬೇಕು.  ಅದು ಬಹಳ ಕಷ್ಟಸಾಧ್ಯ.  ಬಹಳ ತಪಸ್ಸನ್ನು ಬೇಡುವಂಥದ್ದು.  ಅದಕ್ಕೇ ಕವಿ ಶಿವರುದ್ರಪ್ಪನವರು "ಮನದ ಭಾವ ಹೊಮ್ಮಿಸಲಿಕೆ ಭಾಷೆ ಒರಟು ಯಾನ" ಎನ್ನುತ್ತಾರೆ.  ಹೀಗೆ ಕಷ್ಟವಾದ್ದರಿಂದಲೇ ಮಾತು ಹೀಗಿರಬೇಕೆಂಬುದು ಒಂದು ಆದರ್ಶ.  ಶಲಾಕೆಗೆ ಬಾಣ, ಭರ್ಜಿ ಮೊದಲಾದ ಅರ್ಥಗಳೂ ಇವೆ - ಅವೂ ಮೊನೆಯುಳ್ಳವೇ.  ಆಡಿದ ಮಾತು ಗುರಿತಪ್ಪದೇ ಹೋಗಿ ಗಮ್ಯದಲ್ಲಿ ನೆಡಬೇಕು - ನೆಟ್ಟ ಮಾತು ಮರೆಯಾಗಬೇಕು, ನೆಟ್ಟ ಅನುಭವ ಮಾತ್ರ ಉಳಿಯಬೇಕು - ಇದು ಸ್ಫಟಿಕದ ಶಲಾಕೆ. 

ಹೀಗೆ, ಒಂದು ಆಡಲೇಬೇಕಾದ ಮಾತು ಹೇಗಿರಬೇಕೆಂದು ವಿವರಿಸುತ್ತಲೇ ಹೋಗಬಹುದು - ಎಷ್ಟೆಂದು ವಿವರಿಸುವುದು.  ಅದೇ ಒಂದು ಮಾತಿನ ಹೋರಟೆಯಾಗಬಾರದಷ್ಟೇ.  ಅದಕ್ಕೇ ಏನೋ ಮಾತಿನ ಕೊನೆಯಲ್ಲಿ "ಇತ್ಯಾದಿ" ಎಂದು ಹೇಳಿ ಮುಗಿಸುವಂತೆ ಬಸವಣ್ಣನವರು ಇದೆಲ್ಲ ಲಕ್ಷಣಗಳ ಒಟ್ಟಾರೆ ಗಮ್ಯವನ್ನು ತಿಳಿಸಿ ಮುಗಿಸುತ್ತಾರೆ - "ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು" ಎಂದುಬಿಡುತ್ತಾರೆ.  ಲಿಂಗವೆಂದರೆ ಅಲ್ಲೆಲ್ಲೋ ಹೊರಗೆ ಕುಳಿತ ಕಲ್ಲುಬಂಡೆಯಲ್ಲ - ನನ್ನದೇ ಒಳಗಿನ ಒಳಗು, ಯಾವುದನ್ನು ಬಿಟ್ಟು ನಾನಿಲ್ಲವೋ ಅದು - ನೀವು ಅದನ್ನು ಇಷ್ಟಲಿಂಗವೆನ್ನಿ, ಪರಶಿವನೆನ್ನಿ, ಮತ್ತೊಂದೆನ್ನಿ - ಅದು ನಿಮ್ಮ ಪ್ರಜ್ಞೆಯ, ಅಸ್ತಿತ್ವದ ಒಂದು ಭಾಗವೇ ಆಗಿರದಿದ್ದರೆ ಅದು ಕೇವಲ ಕಲ್ಲು.  ಈ ನಿಮ್ಮೊಳಗಿನ ಲಿಂಗ ನಿಮ್ಮ ಮಾತನ್ನು ಮೆಚ್ಚಬೇಕು, ಮೆಚ್ಚಿ ಅಹುದಹುದೆನಬೇಕು.  ಅದು ಅಹುದೆನ್ನುತ್ತದೆಯೋ ಅಲ್ಲದೆನುತ್ತದೆಯೋ ಎಂಬುದು ಹೊರಗಿನವರಿಗಿಂತ ನಿಮಗೇ ಅರಿವಾಗುವಂಥದ್ದು. 

ಮಾತೆಂಬುದು ಜ್ಯೋತಿರ್ಲಿಂಗವೆಂಬ ಪ್ರಜ್ಞೆಯಿರುವವನು ಸಿಕ್ಕಸಿಕ್ಕಂತೆ ಆಡಿ ಅದನ್ನು ಮೈಲಿಗೆ ಮಾಡಲಾರ.  ಅದನ್ನೇ ಅಲ್ಲಮಪ್ರಭುವಿನ ಮಾತಿನಲ್ಲಿ ಹೇಳುವುದಾದರೆ "ಮಾತೆಂಬುದು ಜ್ಯೋತಿರ್ಲಿಂಗ, ಸ್ವರವೆಂಬುದು ಪರತತ್ವ; ತಾಳೋಷ್ಠ ಸಂಪುಟವೆಂಬುದು ನಾದಬಿಂದು ಕಳಾತೀತ. ಗುಹೇಶ್ವರನ ಶರಣರು ನುಡಿದು ಸೂತಕಿಗಳಲ್ಲ ಕೇಳಾ ಮರುಳೆ"  

ಇಷ್ಟಾಗಿಯೂ ನುಡಿಯಲೇ ಬೇಕೆಂದರೆ, ನುಡಿಯ ಸೂತಕವನ್ನೊಲ್ಲದ ನಿಚ್ಚಟನು ಆ ನುಡಿಗೆ 'ನಡೆ'ಯ ಮುಡಿ ಹಾಸುತ್ತಾನೆ, ಏಕೆಂದರೆ ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನು ಒಲಿಯನೆಂಬ ಪ್ರಜ್ಞೆ ಅವನಿಗಿದ್ದೇಯಿದೆ.  ಈ ಪ್ರಜ್ಞೆ ತಪ್ಪಿದರೆ, ಮಾತೆಂಬುದು ತೂತುಮಡಕೆಯಿಂದ ಸೋರುವ ಹೊಲಸಾಗುತ್ತದೆ.  ಅದನ್ನು ಹೊನ್ನಿನ ಧಾರೆಯೆನ್ನಲಾಗದಷ್ಟೇ?