ನಮ್ಮ ಬಾಲ್ಯದಲ್ಲಿ ನಮ್ಮ ತಾತ ಒಂದು ಕತೆ ಹೇಳುತ್ತಿದ್ದರು, ಆಚಾರ್ ಅಮಲ್ದಾರ್ ಕತೆ ಎಂದೇ ಪ್ರಸಿದ್ಧ. ಕತೆಯನ್ನು ಅವರಿಂದ ನಾನು ಕೇಳಿದ್ದಂತೆಯೇ ಅರಿಕೆ ಮಾಡಿಕೊಳ್ಳುತ್ತಿದ್ದೇನೆ. ಏನಾಯ್ತಂತೆ-
ದಿವಾನ್ ಪೂರ್ಣಯ್ಯನವರ ಮನೆಯಲ್ಲಿ ದೇವರ ಪೂಜೆ ಮಾಡಲು ಒಬ್ಬ ಆಚಾರ್ ಬರೋರಂತೆ. ಪಾಪ ನಿಷ್ಠಾವಂತ ಬ್ರಾಹ್ಮಣ, ದಿನಾ ದೇವರ ಪೂಜೆ ಮಾಡಿ ದಿವಾನರಿಗೆ ತೀರ್ಥ ಕೊಡೋರು. ಆಮೇಲೇ ಅರಮನೆಗೆ ದಿವಾನ್ ಸಾಹೇಬರ ಪಯಣ. ಹೀಗೇ ದಶಕಗಳೇ ಕಳೆದುವು. ದಿವಾನರು ನಿವೃತ್ತರಾಗುವ ಸಮಯ ಬಂತು. ಇಷ್ಟು ವರ್ಷ ಮನೆಯಲ್ಲಿ ಪೂಜೆ ಮಾಡಿದ್ದಾರೆ, ಈ ಆಚಾರ್ರಿಗೆ ತಮ್ಮ ಅಧಿಕಾರಾವಧಿಯಲ್ಲಿ ಏನಾದರೂ ಮಾಡಬೇಕೆಂಬ ಅಪೇಕ್ಷೆ ದಿವಾನರದು. ಕರೆದು ಕೇಳುತ್ತಾರೆ - "ಆಚಾರ್ ಸ್ವಾಮಿ, ನನ್ನ ಮನೆ ದೇವರ ಚಾಕರಿಯಲ್ಲೇ ನಿಮ್ಮ ಜೀವನ ಪೂರ್ತಿ ಸವೆಸಿದಿರಿ, ದಕ್ಷಿಣೆ ಬಿಟ್ಟು ಇನ್ನೊಂದನ್ನು ನಾನು ಕೊಡಲೂ ಇಲ್ಲ ನೀವು ಕೇಳಲೂ ಇಲ್ಲ. ಇನ್ನೇನು ನಾನು ರಿಟೈರ್ ಆಗಲಿದ್ದೇನೆ. ನನ್ನ ಕೈ ನಡೆಯುವಾಗ ನಿಮಗೆ ಏನಾದರೂ ಮಾಡಬೇಕು ಅಂತ ನನ್ನ ಆಸೆ. ನಿಮಗೆ ಏನು ಬೇಕು ಅಪ್ಪಣೆ ಮಾಡಬೇಕು".
ಈ ಆಚಾರ್ರೋ, ಬಡತನವನ್ನೇ ಮಡಿಪಂಚೆಯ ರೂಪದಲ್ಲಿ ಉಟ್ಟು, ಅದರದೇ ಒಂದು ತುಂಡನ್ನು ಹೆಗಲ ಮೇಲೆ ಹೊದ್ದ ಮನುಷ್ಯ. ಅದರಲ್ಲೇ ಜೀವನವೇ ಕಳೆದಿದೆ. ಈಗ ಇನ್ನೇನು ಬೇಕಾದೀತು? ಕೈ ಮುಗಿದುಕೊಂಡು ಹೇಳಿದರಂತೆ - "ಅಯ್ಯೋ ಸ್ವಾಮಿ, ನನಗೇನು ಬೇಕು ನನ್ನೊಡೆಯಾ, ಒಂದು ಹೊತ್ತೂಟ ಹೇಗೋ ಇಲ್ಲೇ ಕಳೆದು ಹೋಗುತ್ತೆ, ಮನೆಯಲ್ಲಿ ಹೆಂಡತಿ ಮಕ್ಕಳು ನೆಮ್ಮದಿಯಾಗಿದ್ದಾರೆ. ನಿಮ್ಮ ದಯೆಯೊಂದಿದ್ದರೆ ಸಾಕು"
ಪೂರ್ಣಯ್ಯ ಬಿಡಲಿಲ್ಲ - "ಅಯ್ಯೋ ಹಾಗೆಲ್ಲಾದರೂ ಉಂಟೇ, ನೀವು ಏನಾದರೂ ಕೇಳಲೇ ಬೇಕು. ನೋಡಿ, ಶ್ರೀರಂಗಪಟ್ಟಣದ ಹತ್ತಿರ ಒಂದು ಗ್ರಾಮ ಉಂಬಳಿ ಹಾಕಿಕೊಡಲೇ? ಅಥವಾ ಒಂದು ಹತ್ತೆಕರೆ ಜಮೀನು?"
"ಅಯ್ಯೋ ಅದೆಲ್ಲಾ ಬೇಡ ಮಾಸ್ವಾಮಿ, ಈ ವಯಸ್ಸಾದ ಕಾಲದಲ್ಲಿ ಅದನ್ನೆಲ್ಲ ನಡೆಸೋ ಶಕ್ತಿಯಾದರೂ ಎಲ್ಲಿಂದ ಬರಬೇಕು" - ಆಚಾರ್ರು ಕೊಂಚ ತಡೆದು, ಯೋಚಿಸಿ ಹೇಳಿದರಂತೆ - "ತಾವು ಇಷ್ಟೊಂದು ಕೇಳುತ್ತಿದ್ದೀರಿ ಅಂತ ಹೇಳಬೇಕಾಗಿದೆ. ಬಹುಕಾಲದಿಂದ ಮನಸ್ಸಿನಲ್ಲಿ ಒಂದು ಆಶೆ ಉಂಟು, ಅದನ್ನು ಖಾವಂದರು ನಡೆಸಿಕೊಡುವುದಾದರೆ..."
ಪೂರ್ಣಯ್ಯನವರಿಗೆ ಬಹಳ ಹಿಗ್ಗು. ಆತುರರಾಗಿ ಕೇಳಿದರಂತೆ, "ಹೇಳಿ ಆಚಾರ್ ಸ್ವಾಮಿ, ಅದೇನು ಹೇಳಿ, ಧಾರಾಳವಾಗಿ ನಡೆಸಿಕೊಡೋಣ"
ಆಚಾರ್ರು, ಹಿಂಜರಿಯುತ್ತ, ಹಲ್ಲು ಗಿಂಜುತ್ತ, ಕೈ ಹೊಸೆಯುತ್ತಾ - "ಅದೇನೋ ಚಿಕ್ಕಂದಿನಿಂದ ಒಂದು ಆಸೆ ಬಂದುಬಿಟ್ಟಿದೆ, ಈ ಅಮಲ್ದಾರಿಕೆ ಅಂತಾರಲ್ಲ, ಅದನ್ನ ಒಂದು ದಿನವಾದರೂ ಮಾಡಿಯೇ ಚಟ್ಟ ಹತ್ತಬೇಕು ಅಂತ. ತಿರುಕನ ಕನಸು ಅಂತ ಸುಮ್ಮನಾಗಿದ್ದೆ. ಈಗ ಖಾವಂದರು ಜುಲುಮೆ ಮಾಡುತ್ತಿರುವುದರಿಂದ ಹೇಳಬೇಕಾಗಿದೆ. ಅದನ್ನೊಂದು ದಿನ ನಡೆಸಿ ಕೊಟ್ಟುಬಿಟ್ಟರೆ..."
ಪೂರ್ಣಯ್ಯನವರು ಜೋರಾಗಿ ನಕ್ಕುಬಿಟ್ಟರಂತೆ - "ಆಚಾರ್ರೇ, ಬಲೇ ತಮಾಷೆ ಮಾಡ್ತೀರ್ರಪ್ಪ, ನಾನು ಗಂಭೀರವಾಗಿ ಕೇಳುತ್ತಿದ್ದರೆ ನೀವು ಏನೇನೋ ಹೇಳುತ್ತೀರಿ. ನಿಮಗೆ ಏನು ಬೇಕು ಸ್ವಲ್ಪ ಗಂಭೀರವಾಗಿ ಹೇಳಿ. ಸುಮ್ಮನೇ ತಮಾಷೆ ಮಾಡಬೇಡಿ"
ಆಚಾರ್ರು ಗಂಭೀರವದನರಾಗಿ - "ಇಲ್ಲ ಮಾಸ್ವಾಮಿ, ನಾನು ತಮಾಷೆ ಮಾಡ್ತಿಲ್ಲ, ತಾವು ಬಲವಂತ ಮಾಡಿದ್ದರಿಂದ ಯೋಚಿಸಿಯೇ ಅರಿಕೆ ಮಾಡಿಕೊಂಡಿದ್ದು. ಇದು ಬಿಟ್ಟು ನನಗೆ ಬೇರೇನೂ ಅಗತ್ಯವೇ ಇಲ್ಲ"
ಈಗ ಪೂರ್ಣಯ್ಯನವರು ಚಿಂತಾಕ್ರಾಂತರಾದರು. ಬ್ರಾಹ್ಮಣ ಕೇಳಿಬಿಟ್ಟಿದ್ದಾನೆ, ಇಲ್ಲವೆನ್ನುವ ಹಾಗಿಲ್ಲ, ಆದರೆ ಕೇಳಿರುವುದೋ, ಆಗುವುದಲ್ಲ ಹೋಗುವುದಲ್ಲ. ಅನುನಯದಿಂದ ಹೇಳಿದರಂತೆ - "ಸ್ವಾಮಿ, ಅಮಲ್ದಾರಿಕೆ ಅಂದರೆ ಅದೇನು ಹುಡುಗಾಟದ ಮಾತೇ? ಅಮಲ್ದಾರ ಅಂದರೆ ಇಡೀ ತಾಲ್ಲೂಕಿಗೇ ಸರ್ಕಾರದ ಪ್ರತಿನಿಧಿ. ಅದಕ್ಕೆಲ್ಲಾ ಬಹಳ ಅನುಭವ ಇರಬೇಕು, ದೊಡ್ಡದೊಡ್ಡ ಜನದ ಜೊತೆ ಸಂಪರ್ಕವಿರಬೇಕು, ಅದು ಬಹಳ ಜವಾಬ್ದಾರಿ ಕೆಲಸ, ನೀವು ತಿಳಿದಂತೆ ಅಲ್ಲ. ನಿಮಗೆ ಬೇಕಾದಷ್ಟು ಜಮೀನು, ಹಸು, ಕುದುರೆ ಎಲ್ಲ ಕೊಡುತ್ತೇನೆ, ಏನು ಬೇಕೋ ಕೇಳಿ"
ಆಚಾರ್ರದು ಒಂದೇ ಮಾತು - "ಏನೋ ಇದೊಂದು ಆಶೆಯಿತ್ತು, ತಾವು ಕೇಳಿದಿರಿ ಅಂತ ಹೇಳಿದೆ ಸ್ವಾಮಿ. ಮಾಡುವುದಾದರೆ ಇದೊಂದು ಅಪ್ಪಣೆಯಾಗಬೇಕು. ಇಲ್ಲದಿದ್ದರೆ ಪರವಾಗಿಲ್ಲ, ದೇವರೇನು ಯಾವುದಕ್ಕೂ ಕಮ್ಮಿ ಮಾಡಿಲ್ಲ, ನನಗೆ ಇನ್ನೇನೂ ಬೇಡ"
ದಿವಾನರಿಗೆ ಒಳ್ಳೆ ಪೀಕಲಾಟ. ಚಿಂತಿಸಿ ಚಿಂತಿಸಿ, ಕೊನೆಗೆ, ಒಂದು ದಿನಕ್ಕೆ ತಾನೆ, ಆದದ್ದಾಗಲಿ ನೋಡಿಕೊಳ್ಳೋಣ ಎಂದು ಆರ್ಡರ್ ಹಾಕಿಕೊಟ್ಟರಂತೆ - "ಶ್ರೀ ರಂಗಾಚಾರ್ಯರನ್ನು ದಿನಾಂಕ... ರಂದು ಒಂದು ದಿನದ ಮಟ್ಟಿಗೆ ಶ್ರೀರಂಗಪಟ್ಟಣದ ಅಮಲ್ದಾರರನ್ನಾಗಿ ನೇಮಕ ಮಾಡಲಾಗಿದೆ"
ಆಚಾರ್ಯರಿಗೆ ಸ್ವರ್ಗಕ್ಕೆ ಮೂರೇ ಗೇಣು. ಖಾವಂದರಿಗೆ ಕೃತಜ್ಞತೆಯಿಂದ ಕೈ ಮುಗಿದು, ನಾಳೆ ಬೆಳಂಝಾಮವೇ ಹೊರಟುಬಿಡುತ್ತೇನೆ ಎಂದು ಹೇಳಿ ಮನೆಗೆ ಹೊರಡುತ್ತಿದ್ದಾಗ ಅವರನ್ನು ತಡೆದು ಒಂದು ಕಿವಿಮಾತು ಹೇಳಿದರಂತೆ ಪೂರ್ಣಯ್ಯ - "ನೋಡಿ ಆಚಾರ್ ಸ್ವಾಮಿ, ಇದೊಂದು ಮಾತನ್ನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಂಡಿರಿ - ಈ ಆಫೀಸು ವ್ಯವಹಾರದಲ್ಲಿ ಶಿರಸ್ತೇದಾರ್ರು ಬಹಳ ಮುಖ್ಯ, ಯಾವಾಗಲೂ ಅವರ ಕಿವಿ ಕಚ್ಚಿಕೊಂಡೇ ಇರತಕ್ಕದ್ದು, ಹೆಡ್ ಗುಮಾಸ್ತರು ಸ್ವಲ್ಪ ತರಲೆ, ಅವರಲ್ಲಿ ಯಾವಾಗಲೂ ಮುಖ ಕಪ್ಪಗೇ ಮಾಡಿಕೊಂಡಿರಿ - ಮರೆಯಬೇಡಿ"
ಸರಿ, ಇವತ್ತು ಏಕಾದಶಿ, ಮಾರನೇ ದಿನ ಬೆಳ್ಳಿ ಮೂಡುವ ಮೊದಲೇ ಎದ್ದು, ಪ್ರಾತರ್ವಿಧಿಗಳನ್ನು ಮುಗಿಸಿ ಹೊರಟರು ಆಚಾರ್ರು. ದಾರಿಯಲ್ಲೇ ಕಾವೇರೀ ಸ್ನಾನವೂ ಆಗುತ್ತೆ, ಅಲ್ಲೇ ಅಡುಗೆ ಮಾಡಿದರೆ ಪಾರಣೆಯೂ ಆಗುತ್ತೆ ಎಂದು ಅಡುಗೆ ಸಾಮಾನೆಲ್ಲವನ್ನೂ ಆಳಿನ ಕೈಲಿ ಹೊರೆಸಿಕೊಂಡು (ಅಮಲ್ದಾರರು ತಾನೆ, ಸರ್ಕಾರ ಕೂಡಲೇ ಒಬ್ಬ ಆಳನ್ನೂ ಕೊಟ್ಟಿತ್ತು) ಹೊರಟರಂತೆ. ಅಮಲ್ದಾರರ ಸವಾರಿಗಾಗಿ ಆಗಲೇ ಒಂದು ಕುದುರೆ ಬಂದು ನಿಂತಿತ್ತು. ಅಮಲ್ದಾರರೇನು ಉನ್ನತ ಹಯವನ್ನೇರಿ ಸವಾರಿ ಮಾಡುವಷ್ಟು ಕಟ್ಟುಮಸ್ತಾದ ಆಸಾಮಿಯೇ? ಆ ತುರಗ ಈ ಅಮಲ್ದಾರರನ್ನು ಎಲ್ಲಾದರೂ ಕೆಡವಿಬಿಟ್ಟರೆ ಏನು ಗತಿ - ನಗೋರ ಮುಂದೆ ಹಾರಿ ಬಿದ್ದಂತೆ. ಅದಕ್ಕಾಗಿಯೇ, ಸ್ವಲ್ಪ ಮೆದುವಾದ, ಹೇಳಿದಂತೆ ಕೇಳುವ, ಜಟಕಾ ಬಂಡಿಗೆ ಕಟ್ಟುವ, ಓಡುವ ಬದಲು ನಡೆಯುವ ಕುಳ್ಳು ಕುದುರೆಯೊಂದನ್ನು ದಿವಾನರು ವಿಶೇಷವಾಗಿ ಹುಡುಕಿಸಿ ವ್ಯವಸ್ಥೆ ಮಾಡಿಸಿದ್ದರು. ಸರಿ, ಅಮಲ್ದಾರಸಾಹೇಬರು ತಮ್ಮ ಥಟ್ಟನ್ನೇರಿ (ಥಟ್ಟು ಎಂದರೆ ಕುದುರೆ) ಹೊರಟರು. ಆ ಥಟ್ಟೋ, ಓಡುವುದಲ್ಲ ನಡೆಯುವುದು ಎಂದೆವಲ್ಲ, ಸರಿ. ಆದರೆ ಅದರ ನಿಧಾನಸ್ವಭಾವ ಎಷ್ಟು ಮಟ್ಟಿನದೆಂದರೆ, ಒಂದು ಹೆಜ್ಜೆ ಮುಂದಿಟ್ಟರೆ ಮೂರು ಹೆಜ್ಜೆ ಹಿಂದಿಡುವುದು. ಅದೇನು ದೊಡ್ಡ ಮಾತೇ? ಮೈಸೂರಿಗೆ ಮುಖವಾಗಿ, ಶ್ರೀರಂಗಪಟ್ಟಣಕ್ಕೆ ಬೆನ್ನಾಗಿ, ಮೈಸೂರಿನ ಕಡೆ ಒಂದು ಹೆಜ್ಜೆ, ಶ್ರೀರಂಗಪಟ್ಟಣದ ಕಡೆ ಮೂರು ಹೆಜ್ಜೆ ಇಡುತ್ತಾ ಥಟ್ಟು ಹೊರಟಿತು. ಅದರ ಹಿಂದೆ, ಅಲ್ಲಲ್ಲ ಮುಂದೆ, ಸಾಮಾನು ಸರಂಜಾಮು ಹೊತ್ತ ಆಳು ರಂಗ. ಹೀಗೇ ಸವಾರಿ ಬೆಳೆಯುತ್ತಾ, ಅರುಣೋದಯದ ಹೊತ್ತಿಗೆ ಸವಾರಿ ತಿರುಮಕೂಡಲು ತಲುಪಿತು. [ಇದೇನು, ಮೈಸೂರು ಶ್ರೀರಂಗಪಟ್ಟಣದ ದಾರಿಯಲ್ಲಿ ತಿರುಮಕೂಡಲು ಎಲ್ಲಿ ಬರುತ್ತದೆ ಎಂದು ಪಾಠಕಮಹಾಶಯರು ಮೂಗು ಮುರಿಯಬಾರದು (ಅದು ತಮ್ಮ ಮೂಗಿಗೇ ಕೇಡು). ಒಂದು, ಆಗೆಲ್ಲಾ ಈಗಿನಂತೆ ನೈಸ್ ರಸ್ತೆಯಿರಲಿಲ್ಲ; ಎರಡು, ಆಚಾರವಂತರಾದ ಅಮಲ್ದಾರ್ರು ಮನಸ್ಸು ಮಾಡಿದರೆ ತಿರುಮಕೂಡಲನ್ನು ದಾರಿಯಲ್ಲಿ ತಂದುಕೊಳ್ಳುವುದು ದೊಡ್ಡದೇ? ತ್ರಿವೇಣೀಸಂಗಮ, ಅಗಸ್ತೇಶ್ವರನ ಸನ್ನಿಧಿ, ಶೇಷಚಂದ್ರಿಕಾಚಾರ್ಯರ ಸನ್ನಿಧಿ, ಗುಂಜಾನರಸಿಂಹಸ್ವಾಮಿಯ ಸನ್ನಿಧಿ - ದೊಡ್ಡ ಅಧಿಕಾರಕ್ಕೆ ಹೋಗುತ್ತಿರುವ ಅಮಲ್ದಾರ್ ಸಾಹೇಬರು ಸಂಗಮಸ್ನಾನ ಮಾಡಿ ದೇವರಿಗೆ ಗುರುಗಳಿಗೆ ನಮಸ್ಕರಿಸುವುದೊಂದು ತಪ್ಪೇ?]
ಸರಿ, ತಿರುಮಕೂಡಲು ತಲುಪಿದವರೇ, "ಕಾವೇರೀಕಪಿಲಾಲವಾಲಕಲಿತಾ... " ಸ್ತೋತ್ರಾದಿಗಳನ್ನು ಪಠಿಸುತ್ತಾ, ಸಂಗಮದಲ್ಲಿ ಸ್ನಾನಾಹ್ನಿಕಗಳನ್ನು ಪೂರೈಸಿ, ಅಲ್ಲೇ ಮೂರು ಕಲ್ಲುಗುಂಡು ಹೂಡಿ ಲಕ್ಷಣವಾಗಿ ಅನ್ನ ತೊವ್ವೆ ಮಾಡಿ, ಪೂಜೆ ದ್ವಾದಶಿ ಪಾರಣೆ ಮುಗಿಸಿ ಮತ್ತೆ ಸವಾರಿ ಬೆಳೆಸಿ, ಬೆಳಗ್ಗೆ ಹತ್ತು ಗಂಟೆಗೆಲ್ಲಾ ಸಾಹೇಬರು ಅಮಲ್ದಾರ್ ಆಫೀಸಿನ ಮುಂದೆ ಹಾಜರು.
"ಲಾ... ಯಾರಾ ಅಲ್ಲಿ" - ಆಚಾರಮಲ್ದಾರರ ಗುಟುರಿಗೆ, ಆಗತಾನೇ ಆಫೀಸು ತೆಗೆದು, ಬಾಗಿಲ ಮುಂದೆ ಕುಂತು ತೂಕಡಿಸುತ್ತಿದ್ದ ಪ್ಯೂನು ಪಾಪಣ್ಣ ಗಡಬಡಿಸಿ ಮೇಲೆದ್ದ. ನೋಡುತ್ತಾನೆ, ಯಾರೋ ಆಚಾರೈನೋರು, ಗಂಧಾಕ್ಷತೆ ತುಳಸೀಮಾಲಾಲಂಕೃತರಾಗಿ ಕುದುರೆಯ ಮೇಲೆ ಕುಂತಿದ್ದಾರೆ.
"ಯಾರ್ಸಾಮೇ, ಏನಾಗಬೇಕಿತ್ತು?" ಎದ್ದವನೇ ಕೈ ಮುಗಿದುಕೊಂಡು ನಮ್ರನಾಗಿ ಕೇಳಿದ ಪಾಪಣ್ಣ
"ಅಮಲ್ದಾರಾಫೀಸು ಇದೇ ಏನಯ್ಯಾ?" ಜರ್ಬಾಗಿ ಕೇಳಿದರು ಆಚಾರು
"ಔದು ಬುದ್ದೀ, ಅಮಲ್ದಾರು ಸಾಯಬ್ರು ಇನ್ನೂ ಅಪೇಂಟಾಗಿಲ್ಲ, ಯೆಡ್ ಗುಮಾಸ್ತಯ್ನೋರು ಆಪೀಸು ನೋಡ್ಕತವ್ರೆ"
"ಓಹೋ, ಹೆಡ್ ಗುಮಾಸ್ತ್ರೋ, ಎಲ್ಲಿದ್ದಾರೆ?"
"ಇನ್ನೂ ಬಂದಿಲ್ಲ ಬುದ್ದೀ, ಗದ್ದೆತವ್ಕೋಗವ್ರೆ, ಅವ್ರೇನಿದ್ರೂ ಅನ್ನೆರಡು ಗಂಟೆಗೇ ಬರಾದು"
"ಸರಿ, ಸಿರಸ್ತೇದಾರ್ರು"
"ಅವ್ರೂ ಬಂದಿಲ್ಲ ಬುದ್ದೇ, ಪೂಜಗೀಜ ಮುಗುಸ್ಕಂಡು ಅವ್ರೂ ಮದ್ಯಾನ ಬತ್ತರೆ"
"ಏನಯ್ಯಾ, ಆಪೀಸು ಹತ್ತಕ್ಕೆ, ಇವರೆಲ್ಲ ಮಧ್ಯಾಹ್ನ ಬರೋದು? ಹೋಗಿ ಕರ್ಕಂಬಾರಯ್ಯ"
"ಅದ್ಸರಿ, ನೀವು ಯಾರ ಬುದ್ದಿ? ಏನಾಗ್ಬೇಕಿತ್ತು ಯೇಳಿ"
"ನಾನು ಯಾರಾ? ಈ ತಾಲೂಕಿಗೆ ಹೊಸಾ ಅಮಲ್ದಾರ್ರು"
ಪಾಪಣ್ಣಗೆ ತಡೆಯಲಾರದ ನಗೆ - "ಅಯ್ಯ, ಏನಯ್ನೋರೇ ಬೆಳ್ಬೆಳಗ್ಗೆ ನಿಮ್ದು? ಏನಾರ ದಕ್ಸ್ಣೆ ಗಿಕ್ಸ್ಣೆ ಬೇಕಿದ್ರೆ ಕ್ಯೋಳಿ, ಅಮಲ್ದಾರಂತೆ ಅಮಲ್ದಾರು... ಏ, ವೋಗಿ ಬುದ್ದಿ ಸುಮ್ಕೆ"
"ಏಯ್, ಏನು ತಲೆಯೆಲ್ಲಾ ಮಾತಾಡ್ತೀ, ನೋಡಿಲ್ಲಿ, ನಿಮ್ಮಪ್ಪ ಕೊಟ್ಟಿದಾನೆ ಆರ್ಡ್ರು"
ದಿವಾನರ ಆರ್ಡರು ನೋಡಿದ ಕೂಡಲೇ ಪ್ಯೂನ್ ಪಾಪಣ್ಣನ ಮೈಯೆಲ್ಲಾ ಬೆವರು ಕಿತ್ತುಕೊಂಡಿತು. ನಿಂತಲ್ಲೇ ಸಾಷ್ಟಾಂಗ ಹೊಡೆದು "ತೆಪ್ಪಾಯ್ತು ಬುದ್ದೀ, ವಟ್ಟಗಾಕ್ಕಂಬುಡಿ - ಈಗ್ಲೇ ವೋಗಿ ಕರ್ಕಂಬತ್ತಿನಿ" ಎಂದು ಅಲ್ಲಿಂದ ಕಂಬಿ ಕಿತ್ತ.
ಇದನ್ನೆಲ್ಲ ನೋಡಿ ಅಲ್ಲೇ ನಡುಗುತ್ತಾ ನಿಂತಿದ್ದ ಅಟೆಂಡರನ್ನು ನೋಡಿ ಅಮಲ್ದಾರ್ರು "ನೀನ್ಯಾರೋ" ಅಂದರು.
"ನಾನು ಪುಟ್ಟಯ್ಯ ಬುದ್ದಿ, ಅಟೆಂಡ್ರು".
"ಸರಿ, ಪುಟ್ಟಾ, ನನ್ನ ಜಾಗ ತೋರ್ಸು ನಡಿ. ಎಲ್ಲಾ ಕ್ಲೀನ್ ಮಾಡು"
"ಅಪ್ಪಣೆ ಬುದ್ದಿ" - ಪುಟ್ಟ ಟೇಬಲ್ ಎಲ್ಲ ಕ್ಲೀನ್ ಮಾಡಿ, ಸಾಯಬ್ರಿಗೆ ಕೂರಲು ಅನುವು ಮಾಡಿ ಕೊಟ್ಟ.
"ಲಾ ಪುಟ್ಟಾ"
"ಏನ್ ಬುದ್ದೀ"
"ಇಲ್ಲಿ ಲಾಂದ್ರ ಇದೆಯೇನೋ"
"ಐತೆ ಬುದ್ದಿ"
"ತತ್ತಾ..."
ಓಡಿ ಹೋದ ಪುಟ್ಟ ಲಾಂದ್ರ ತಂದ.
"ಒಳಗೆ ಎಣ್ಣೆ ಇದೆಯಾ"
"ಐತೆ ಬುದ್ದಿ"
"ಸರಿ, ಲಾಂದ್ರ ಹಚ್ಚು"
"ಬುದ್ದೀ, ಅಗಲೊತ್ತು, ಇಪ್ಪಾಟಿ ಬೆಳಕಿದೆ, ಈಟೊತ್ನಲ್ಲಿ ಲಾಂದ್ರ... ಆ..."
"ಥಬ್ಬಲೀ... ನಾ ಹೇಳ್ದಷ್ಟು ಮಾಡು, ನಾನು ಅಮಲ್ದಾರು, ಒದ್ದೋಡಿಸಿಯೇನು, ಹುಷಾರ್..."
"ಅಯ್ಯಯ್ಯೋ, ತೆಪ್ಪಾಯ್ತು ಬುದ್ದೀ..." ಪುಟ್ಟ ಲಾಂದ್ರ ಹಚ್ಚಿದ.
ಲಾಂದ್ರದ ಮುಚ್ಚಳ ತೆಗೆದು ಮೇಲೇಳುತ್ತಿದ್ದ ದೀಪದ ಹಬೆಗೆ ಕೈಯಿಟ್ಟರು ಆಚಾರ್ರು. ಬೆಳಗಿನ ಚುಮುಚುಮು ಚಳಿಗೆ ಕೈ ಬೆಚ್ಚಗಾಯಿತು. ಒಂದಾದಮೇಲೊಂದು ಕೈ ಕಾಸಿಕೊಳ್ಳುತ್ತಾ, ಬೆಚ್ಚನೆಯ ದೀಪದ ಹೊಗೆ ಅಂಗೈಯಲ್ಲಿ ಕಟ್ಟತೊಡಗಿತು.
ಇಷ್ಟು ಹೊತ್ತಿಗೆ, ಪಾಪಣ್ಣ ಶಿರಸ್ತೇದಾರ್ರು ಮತ್ತೆ ಹೆಡ್ ಗುಮಾಸ್ತರನ್ನ ಕರೆತಂದ. ಇಬ್ಬರೂ ಗಡಗಡ ನಡುಗುತ್ತಾ ಬಿಟ್ಟ ಕೆಲಸ ಬಿಟ್ಟು ಓಡಿ ಬಂದಿದ್ದರು. ಶಿರಸ್ತೇದಾರ್ರ ಶಿರದಲ್ಲಿ, ತರಾತುರಿಯಲ್ಲಿ ಸೊಟ್ಟಂಪಟ್ಟ ಕಟ್ಟಿದ್ದ ರುಮಾಲಿನ ತುದಿ ಶಿರಪೇಶಿನಂತೆ ನೇತಾಡುತ್ತಿತ್ತು. ಹೆಡ್ ಗುಮಾಸ್ತರ ಹೆಡ್ಡು ಖಾಲಿಯಿತ್ತು - ರುಮಾಲು ಇನ್ನೂ ಕೈಯಲ್ಲಿತ್ತು, ಕೂದಲು ಉದುರಿತ್ತು. ಬೋಳು ತಲೆಯಿಂದ ಬೆವರು ಧಾರಾಕಾರವಾಗಿ ಹರಿದು, ಇನ್ನೂ ಗದ್ದೆಯ ಕೆಸರು ಮೆತ್ತಿದ್ದ ಅವರ ಕಾಲನ್ನು ತೊಳೆಯುತ್ತಿತ್ತು. ಠೀವಿಯಿಂದ ಲಾಂದ್ರದ ಮೇಲಿಟ್ಟಿದ್ದ ಕೈ ಮೇಲೆತ್ತದೇ ಇಬ್ಬರನ್ನೂ ಹತ್ತಿರ ಕರೆದರು ಅಮಲ್ದಾರ್ರು.
"ನಿಮ್ಮಲ್ಲಿ ಶಿರಸ್ತೇದಾರ್ರು ಯಾರ್ರೀ?" ಗುಡುಗಿದರು
ಶಿರಸ್ತೇದಾರ್ ಮುಂದೆ ಬಂದರು "ನಾನು ಮಾಸ್ವಾಮಿ, ನರಸಿಮ್ಮೂರ್ತಿ. ಇವತ್ತು ಸ್ವಲ್ಪ ತಡವಾಯಿತು... ಅದು..."
"ಹತ್ರಾ ಬನ್ರೀ"
ಶಿರಸ್ತೇದಾರರಿಗೆ ನಡುಕ, ಕಪಾಳಮೋಕ್ಷದ ಭೀತಿ... ಹೆದರಿಕೊಂಡೇ ಹತ್ತಿರ ಬಂದರು.
"ಇನ್ನೂ ಹತ್ರಾ ಬನ್ರೀ..."
ಇನ್ನೂ ಹತ್ತಿರ ಬಂದರು ಶಿರಸ್ತೇದಾರ್ರು.
"ಇನ್ನೂ ಬನ್ನಿ, ಎಲ್ಲಿ ಕಿವಿ ಕೊಡಿ..."
ಕಿವಿ ಕೊಟ್ಟು ಗುಟ್ಟಿನ ಮಾತು ಕೇಳುವುದು ಶಿರಸ್ತೇದಾರರಿಗೆ ಹೊಸದೇನಲ್ಲ - ಎಲ್ಲ ಸಾಹೇಬರು ಮಾಡಿಕೊಂಡು ಬಂದದ್ದೇ ಅದು. ಸ್ವಲ್ಪ ನಿರಾಳವಾಗಿ ಗುಟ್ಟು ಕೇಳಲು ಕಿವಿಯನ್ನು ಅಮಲ್ದಾರರ ಮುಖದ ಬಳಿ ತಂದರು.
"ಇನ್ನೂ ಹತ್ರಾ ಬನ್ನಿ" ಎಂದು ಶಿರಸ್ತೇದಾರರ ಕಿವಿಯನ್ನು ಹತ್ತಿರ ಎಳೆದುಕೊಂಡ ಅಮಲ್ದಾರರು ಕಿವಿಯ ಬಳಿ ಬಾಯಿಟ್ಟವರೇ ಕಟಕ್ಕನೆ ಕಚ್ಚಿಯೇ ಬಿಟ್ಟರು.
ಗುಟ್ಟಿಗಾಗಿ ಕಿವಿ ತಂದಿದ್ದ ಶಿರಸ್ತೇದಾರರಿಗೆ ಇದು ಕಪಾಳಮೋಕ್ಷಕ್ಕೂ ಮೀರಿದ ಆಘಾತ. ಸ್ವಲ್ಪ ತಡವಾಗಿ ಬಂದರೆ ಈ ಶಿಕ್ಷೆಯೇ! ಅಯ್ಯಯ್ಯೋ ಎಂದು ಕೂಗುತ್ತಾ ಸಾವರಿಸಿಕೊಳ್ಳುವಷ್ಟರಲ್ಲಿ ಸಾಹೇಬರು ಮತ್ತೆ ಹುಕುಂ ಮಾಡಿದರು...
"ಎಲ್ಲಿ, ಆ ಕಿವಿ ಕೊಡಿ..."
ಹೌಹಾರಿದ ಶಿರಸ್ತೇದಾರರು "ಅಯ್ಯಯ್ಯೋ, ಬ್ಯಾಡಿ ಸ್ವಾಮೀ... ತಪ್ಪಾಯ್ತು..." ಎಂದು ಅಲವತ್ತುಕೊಳ್ಳುವಷ್ಟರಲ್ಲಿ ಬಲವಂತದಿಂದ ಆ ಕಿವಿಯನ್ನೂ ಎಳೆದುಕೊಂಡ ಅಮಲ್ದಾರರು ಅದನ್ನೂ ಕಟಕ್ಕನೆ ಕಡಿದುಬಿಟ್ಟರು. ಶಿರಸ್ತೇದಾರರಿಗೋ ಎರಡೂ ಕಿವಿಯಿಂದಲೂ ಧಾರಾಕಾರ ನೆತ್ತರು.
ಈಗ ಅಮಲ್ದಾರರ ದೃಷ್ಟಿ, ಧಾರಾಕಾರ ಬೆವರು ಮುಂತಾದುವನ್ನು ಸುರಿಸಿಕೊಳ್ಳುತ್ತಾ ನಿಂತಿದ್ದ ಹೆಡ್ ಗುಮಾಸ್ತರ ಮೇಲೆ ಬಿತ್ತು.
"ನೀವೇಯೋ ಹೆಡ್ ಗುಮಾಸ್ತ್ರು? ಏನ್ ಹೆಸರು?"
"ಶ್ ಶ್ ಶ್ರೀಕಂಠಸ್ವಾಮಿ ಮಾಸ್ವಾಮೀ..." ತೊದತೊದಲುತ್ತಾ ನಡುಗಿದರು ಹೆಡ್ ಗುಮಾಸ್ತರು.
"ಬನ್ನಿ, ಹತ್ರ ಬನ್ನಿ"
ಇದಂತೂ ಹೆಡ್ ಗುಮಾಸ್ತರಿಗೆ ತಮ್ಮ ಮರಣಶಾಸನದಂತೆಯೇ ಕೇಳಿಸಿತು. ಎರಡೂ ಕಿವಿಯಿಂದ ನೆತ್ತರು ಸುರಿಸುತ್ತಾ ನಿಂತಿದ್ದ ಶಿರಸ್ತೇದಾರರ ಮುಖವನ್ನೇ ದೀನವದನದಿಂದ ನೋಡುತ್ತಾ, ತಮ್ಮ ಕಿವಿ ಸವರಿಕೊಳ್ಳುತ್ತಾ, ಮರಣದಂಡನೆಗೆ ಗುರಿಯಾದ ಖೈದಿಯಂತೆ ಅಮಲ್ದಾರರ ಬಳಿ ಸರಿದರು ಹೆಡ್ ಗುಮಾಸ್ತರು.
"ಬನ್ರೀ, ಹತ್ರ ಬನ್ರೀ..." ನಿಧಾನಕ್ಕೆ ಲಾಂದ್ರದ ಮೇಲಿಟ್ಟಿದ್ದ ತಮ್ಮ ಕೈಯೆತ್ತಿದರು ಅಮಲ್ದಾರರು. ಕೈಯಲ್ಲಿ ದಪ್ಪಗೆ ಕಟ್ಟಿದ್ದ ಲಾಂದ್ರದ ಕಪ್ಪು.
"ತಪ್ಪಾಯ್ತು ಮಾಸ್ವಾಮೀ, ಇನ್ಮೇಲೆ ತಡವಾಗಿ ಬರೊಲ್ಲ..." ಅಮಲ್ದಾರರ ಆ ಮಶೀಮಯ ಹಸ್ತವನ್ನೇ ನೋಡುತ್ತಾ ಅಯೋಮಯವಾಗಿ ಮುಖವನ್ನು ಹತ್ತಿರ ತಂದರು ಹೆಡ್ ಗುಮಾಸ್ತರು.
ಹೆಡ್ ಗುಮಾಸ್ತರು ಮುಖ ಹತ್ತಿರ ತಂದೊಡನೆ ಅಮಲ್ದಾರರು ಅನಾಮತ್ ಆ ಮಸಿಗಟ್ಟಿದ್ದ ಕೈಯನ್ನು ತಂದವರೇ ರಪ್ಪನೆ ಆ ಮಸಿಯನ್ನು ತಮ್ಮ ಮುಖಕ್ಕೆ ಬಳಿದುಕೊಂಡರು, ಹೆಡ್ ಗುಮಾಸ್ತರ ಮುಖವನ್ನು ಕೆಕ್ಕರಿಸಿ ನೋಡಿದರು. ಮುಖಕ್ಕೆ ಮಸಿ ಬಳಿದು ಅವಮಾನಿಸುತ್ತಾರೇನೋ ಎಂದುಕೊಂಡು ಹೆದರುತ್ತಿದ್ದ ಹೆಡ್ ಗುಮಾಸ್ತರಿಗೆ, ಅಮಲ್ದಾರರು ತಾವೇ ಮುಖಕ್ಕೆ ಮಸಿ ಬಳಿದುಕೊಂಡು ಕೆಕ್ಕರಿಸಿ ನೋಡುವುದನ್ನು ಕಂಡು ಹುಚ್ಚೇ ಹಿಡಿದಂತಾಯಿತು. ಕಿತ್ತುಕೊಳ್ಳಲು ಬೋಳುತಲೆಯಲ್ಲಿ ಕೂದಲೂ ಇಲ್ಲದುದನ್ನು ನೆನೆಯುತ್ತಾ ಕಿಂಕರ್ತವ್ಯಮೂರ್ಖರಾಗಿ ನಿಂತಿರುವಾಗ್ಗೆ-
ಸನ್ನಿವೇಶ ವಿಪರೀತಕ್ಕಿಟ್ಟುಕೊಂಡುದನ್ನು ಗಮನಿಸಿದ ಪುಟ್ಟಯ್ಯ ಪಾಪಣ್ಣಗಳು ಓಡಿ ಹೋಗಿ ಊರ ಪಟೇಲರಿಗೆ ಸುದ್ದಿ ಮುಟ್ಟಿಸಲು, ಅವರು ಹರಿಕಾರರನ್ನಟ್ಟಿ ಮೈಸೂರಿಗೆ ಸುದ್ದಿ ಮುಟ್ಟಿಸಲು, ಏನಾದರೂ ಉಪದ್ವ್ಯಾಪವಾದೀತೆಂದು ಮೊದಲೇ ಮನಗಂಡು, ಹೊರಡಲು ಆಗಲೇ ಸಿದ್ಧರಾಗಿದ್ದ ದಿವಾನ್ ಪೂರ್ಣಯ್ಯನವರು ತಡಮಾಡದೇ ಹಾರಗುದುರೆಯ ಮೇಲೆ ಕುಳಿತು ರಂಗಪಟ್ಟಣಕ್ಕೆ ಬಂದಿಳಿದರು. ಅಮಲ್ದಾರ್ ಕಛೇರಿಯಲ್ಲಿ ನೋಡುತ್ತಾರೆ -
ಹಾಡ ಹಗಲೇ ಲಾಟೀನು ಉರಿಯುತ್ತಿದೆ, ಮುಖಕ್ಕೆ ಮಸಿ ಬಳಿದುಕೊಂಡ ಅಮಲ್ದಾರ್ ಸಾಹೇಬರು ಒಮ್ಮೆ ಹೆಡ್ ಗುಮಾಸ್ತರನ್ನು ಮುಖ ಕಪ್ಪಗೆ ಮಾಡಿಕೊಂಡು ನೋಡುತ್ತಾ, ಮತ್ತೊಮ್ಮೆ ಶಿರಸ್ತೇದಾರರ ಕಿವಿ ಕಚ್ಚುತ್ತಾ ಅಮಲ್ದಾರಿಕೆ ನಡೆಸುತ್ತಿದ್ದಾರೆ. ಶಿರಸ್ತೇದಾರರ ಕಿವಿಯಿಂದ ರಕ್ತ ಧಾರಾಕಾರವಾಗಿ ಹರಿಯುತ್ತಿದೆ, ಸಾಹೇಬರ ಕಪ್ಪು ಮುಖವನ್ನು ಕಂಡು ಹೆಡ್ ಗುಮಾಸ್ತರರ ಮುಖ ಹೆದರಿ ಬಿಳಿಚಿಕೊಂಡಿದೆ.
ಓಡಿ ಬಂದ ಪೂರ್ಣಯ್ಯನವರು ಕೇಳುತ್ತಾರೆ - "ಇದೇನು ಆಚಾರ್ ಸ್ವಾಮೀ, ಏನು ಮಾಡುತ್ತಿದ್ದೀರಿ?". ಖಾವಂದರನ್ನು ನೋಡಿದೊಡನೇ ತಮ್ಮ ಅಮಲ್ದಾರಿಕೆಯನ್ನು ಸ್ವಲ್ಪ ನಿಲ್ಲಿಸಿ, ಹಸನ್ಮುಖರಾಗಿ ಕೈ ಮುಗಿದುಕೊಂಡು ಆಚಾರ್ರು ವರದಿ ಒಪ್ಪಿಸಿದರಂತೆ - "ಖಾವಂದರು ಅಪ್ಪಣೆ ಕೊಡಿಸೋಣವಾಗಿತ್ತಲ್ಲ - ಯಾವಾಗಲೂ ಶಿರಸ್ತೇದಾರರ ಕಿವಿ ಕಚ್ಚಿಕೊಂಡೇ ಇರತಕ್ಕದ್ದು, ಹೆಡ್ ಗುಮಾಸ್ತರರಲ್ಲಿ ಯಾವಾಗಲೂ ಮುಖ ಕಪ್ಪಗೇ ಮಾಡಿಕೊಂಡಿರಬೇಕು ಅಂತ - ಹಾಗೇ ನಡೆಸೋಣವಾಗ್ಯದೆ, ಮಾಸ್ವಾಮಿಗಳು ಪರಾಮರಿಸಬೇಕು, ಶಿರಸ್ತೇದಾರರ ಕಿವಿಯೆರಡೂ ಸರಿಯಾಗಿ ಕಚ್ಚಿ ಹಾಕ್ಯದೆ, ಹೆಡ್ ಗುಮಾಸ್ತರ ವಿಷಯ, ನನ್ನ ಮುಖದಲ್ಲೇ ಸ್ವಾಮಿಗಳಿಗೆ ಅರಿಕೆಯಾಗ್ಯದೆ"
ವಿಷಯ 'ಅರಿಕೆ'ಯಾದ ಪೂರ್ಣಯ್ಯನವರು ತಲೆ ಚಚ್ಚಿಕೊಂಡು ಹೇಳಿದರಂತೆ - "ಅಯ್ಯೋ ಆಚಾರ್ ಸ್ವಾಮೀ, ನಾನು ಹೇಳಿದ್ದೇನು ನೀವು ಮಾಡುತ್ತಿರುವುದೇನು? ಶಿರಸ್ತೇದಾರ್ರ ಕಿವಿ ಕಚ್ಚಿಕೊಂಡಿರಬೇಕು ಎಂದರೆ, ಯಾವಾಗಲೂ ಗುಟ್ಟಿನ ವಿಷಯಗಳನ್ನು ಅವರಲ್ಲಿ ಉಸುರಬೇಕು, ಅವರನ್ನ ವಿಶ್ವಾಸದಲ್ಲಿಟ್ಟಿರಬೇಕು ಅಂತ; ಹೆಡ್ ಗುಮಾಸ್ತರಲ್ಲಿ ಮುಖ ಕಪ್ಪಗೆ ಮಾಡಿಕೊಳ್ಳಬೇಕು ಅಂದರೆ ಮಸಿ ಬಳಿದುಕೊಳ್ಳೋದಲ್ಲ, ಅವರೊಡನೆ ಸ್ವಲ್ಪ ಕೋಪದಿಂದಲೇ ವ್ಯವಹರಿಸಬೇಕು, ಸಲುಗೆ ನೀಡತಕ್ಕದ್ದಲ್ಲ ಅಂತ; ನೀವು ನೋಡಿದರೆ ಈ ಬಡಪಾಯಿಗಳನ್ನು ಹೀಗೆ ಹೆದರಿಸುವುದೇ? ಆಗಲಿ, ಒಂದು ದಿನದ ಅಮಲ್ದಾರಿಕೆ ಮುಗಿದು ತಮ್ಮ ಆಸೆ ಈಡೇರಿತು ತಾನೆ? ಇನ್ನು ಇದೆಲ್ಲ ಉಪದ್ವ್ಯಾಪ ಬಿಟ್ಟು ನನ್ನ ಜೊತೆಗೆ ಬನ್ನಿ, ಪೂಜೆ ಮಾಡಿಕೊಂಡು ನಮ್ಮ ಮನೆಯಲ್ಲಿರಿ" ಎಂದು ಹೇಳಿ, ಕಿವಿ ಸೋರುತ್ತಿದ್ದ ಶಿರಸ್ತೇದಾರರಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಿ, ಕರ್ತವ್ಯನಿರ್ವಹಣೆಯ ಲೋಪಕ್ಕೆ ಇಬ್ಬರಿಗೂ ಛೀಮಾರಿ ಹಾಕಿ, ಆಚಾರ್ರನ್ನು ಕರೆದುಕೊಂಡು ಮೈಸೂರಿಗೆ ತೆರಳಿದರಂತೆ - ಇತಿ ಮಂಗಳಂ.
No comments:
Post a Comment