Wednesday, June 1, 2022

ನಿರಾಶಯ

ನನ್ನ ಕವಿತೆಗೆ ಅದಿರಲಿ ಇದಿರಲಿ ಎಂದೆಲ್ಲ ನಾನು ಕೇಳುವುದಿಲ್ಲ ಅದಿಲ್ಲದಿರಲಿ ಇದಿಲ್ಲದಿರಲಿ ಎಂದಂತೂ ಮೊದಲೇ ಕೇಳುವುದಿಲ್ಲ. "ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವ ವೀರನೂ ಅಲ್ಲ" ಬೇಕಾದ್ದ ಬೇಕಾದೆಡೆಯಿಡುವ ಸೃಷ್ಟಿಶಕ್ತಿಯ ಬಾರದ್ದ ಬಾರದೆಡೆಯಿಡದ ದೃಷ್ಟಿವಿವೇಕವ ಬಳಸಲರಿಯದೆ ಮತ್ತೊಂದಕೆ ಗೆಂಜುವ ಹಲ್ಲು ಶೂರನದೂ ಅಲ್ಲ ಇದು ಕಾರಣ ನೆರೆ ಮೂರು ಲೋಕವೂ ಕವಿತೆಯ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ. ತನ್ನ ರಕ್ತಮಾಂಸದೆ ಮೈದಳೆದ ಕವಿತೆಗೆ ಅವರ ಸತ್ವ, ಇವರ ಸತ್ಯ, ಅವರ ಹೃದಯ, ಇವರ ಮಿದುಳು
ಇನ್ನೊಬ್ಬರ ರಕ್ತ ಸಿಕ್ತ ಬಟ್ಟೆ ತಿರಿತಂದು ತೊಡಿಸಿ ಮೆರೆಸುವ ತಿರುಪ ತನಗೆಂದೂ ಬಾರದಿರಲಿ. ಗಾಂಧಿ ಬುದ್ಧ ಬಸವ ಅಲ್ಲಮರ, ಇಸಾಯಿ ಪೈಗಂಬರರ ಸತ್ವ ಕವಿತೆಯಲ್ಲಲ್ಲ, ಅದು ಹುಟ್ಟುವ ಮಣ್ಣಿನಲ್ಲಿ ತುಂಬಲಿ ಇರುವುದಿಲ್ಲದ ಅಲ್ಲದ್ದು ಮೊಳೆತ ಅಷ್ಟಾವಕ್ರವ ಹುಟ್ಟುವ ಮೊದಲೇ ಹೂತು ಮತ್ತೊಂದ ನೇಯುವ ಕಸುವಿರದವ ಕವಿಯೇ ಅಲ್ಲ
ವಿಸೂ: ಇದೊಂದು ಪದ್ಯವಲ್ಲ (ಕಾವ್ಯ ಮೊದಲೇ ಅಲ್ಲ), ಪದ್ಯದ ಕೌದಿ ಹೊದ್ದ ಗದ್ಯ ಎಂದು ಈ ಮೂಲಕ ದೃಢೀಕರಿಸುತ್ತೇನೆ. ಹಾಗೆಂದ ಮಾತ್ರಕ್ಕೆ ಇದನ್ನು ಯಾವುದೇ ಪಠ್ಯಪುಸ್ತಕದಲ್ಲಿ (ಕದ್ದಾದರೂ) ಅಳವಡಿಸಲು ನನ್ನ ಅನುಮತಿಯಿಲ್ಲವೆಂದೂ ಈ ಮೂಲಕ ಸ್ಪಷ್ಟಪಡಿಸುತ್ತೇನೆ. ಮತ್ತಿದನ್ನು ಯಾರ ಕೋರಿಕೆಯೂ ಇಲ್ಲದೇ ನಾನಾಗಿಯೇ ಸ್ವಯಿಚ್ಛೆಯಿಂದ ಇಲ್ಲಿ ಪ್ರಕಟಿಸುತ್ತಿದ್ದೇನಾದ್ದರಿಂದ ನನ್ನ ಬರಹಕ್ಕೆ ನಾನೇ ಕಾರಣವೆಂದೂ ಇದಕ್ಕಾಗಿ ಬೇರಾರನ್ನೂ ದೂರಬಾರದೆಂದೂ ಈ ಮೂಲಕ ವಿನಂತಿಸುತ್ತೇನೆ.

2 comments:

Badarinath Palavalli said...

ನಿಜ ಹೇಳಬೇಕೆಂದರೆ,
ಅಸಲು‌ ಕವಿತೆ ಏನನ್ನು ತಲುಪಿಸಬೇಕು ಎಂಬುದನ್ನು ನಿಮ್ಮ ರಚನೆ ಸ್ಪಷ್ಟವಾಗಿ ಸೂಚಿಸುತ್ತಿದೆ.

ಕವಿತೆಗೂ ಗೌರವ ತಂದುಕೊಡಲೊಲ್ಲದ ಹಲವು ಕವಿತೆಗಳು ಎಲ್ಲ ಕಡೆ ಸುಲಭವಾಗಿ ಓದಿಗೆ ಸಿಗುತ್ತಿರುವಾಗ, ಒಂದು ಸತ್ವ ಭರಿತ ಒಳ್ಳೆಯ ಕೃತಿ ಜನರಿಗೆ ತಲುಪದೇ ಹೋಗುತ್ತಿರುವುದು ವಿಪರ್ಯಾಸವೇ ಸರಿ.

sunaath said...

ನಾನು ಹೇಳಬೇಕೆನ್ನುವದನ್ನು ಬದರಿನಾಥ ಪಲವಳ್ಳಿಯವರು ಮೊದಲೇ ಹೇಳಿಬಿಡುತ್ತಿದ್ದಾರೆ. ಅವರಿಗೆ ಧನ್ಯವಾದಗಳು.