Wednesday, May 31, 2017

ಕಂದ ನೀನು ಸಾಯಲೇಕೆ...



ಕಳೆದೆರಡು ದಿನದಿಂದ ಈ ಮುಗ್ಧ ಕರುವಿನ ಚಿತ್ರ ಪದೇಪದೇ ನಿದ್ದೆಗೆಡಿಸುತ್ತಿದೆ.  ಮೊನ್ನೆ ಕೇರಳದಲ್ಲಿ ಕೆಲವು ರಕ್ಕಸರು ಪ್ರತಿಭಟನೆಯ ಹೆಸರಿನಲ್ಲಿ ಕಡಿದು ತಿಂದು ತೇಗಿದರಲ್ಲ, ಆ ಪಾಪದ ಕರುವೇ ಇದು.  ಕಡಿಯಲು ಟೆಂಪೋ ಹತ್ತಿಸುವ ಕೆಲವೇ ಕ್ಷಣಗಳ ಹಿಂದಿನ ಚಿತ್ರ.  ಬಲಿಗೆ ಹೋಗುವ ಪ್ರಾಣಿಗಳ ಕಣ್ಣುಗಳಲ್ಲಿ ಸಾಮಾನ್ಯವಾಗಿ ಕಾಣುವ ಭಯದ ಸೂಚನೆಯೂ ಇಲ್ಲ ಅದರ ಮೊಗದಲ್ಲಿ.  ಇನ್ನೈದೇ ನಿಮಿಷದಲ್ಲಿ ತನ್ನನ್ನು ಕೊಲ್ಲುತ್ತಾರೆಂಬ ಅರಿವೂ ಇರಲಾರದು ಪಾಪದ್ದಕ್ಕೆ.  ಕೇವಲ ಯಾರದೋ ಮೇಲಿನ ಹುರುಡಿಗಾಗಿ ಇದನ್ನು ಕತ್ತರಿಸಿ ಚೆಲ್ಲಿದ ಕಟುಕರು ಈ ಮೊಗವನ್ನು, ಈ ಭಾವವನ್ನು ಕ್ಷಣಕಾಲವಾದರೂ ನಿರುಕಿಸಿದ್ದರೇ?  ಖಂಡಿತಾ ಇರಲಿಕ್ಕಿಲ್ಲ.

ಬಾಲ್ಯದಲ್ಲಿ ನಾನು ಕೊಟ್ಟಿಗೆಯಲ್ಲಿ ಕೂತು ದಿನಗಟ್ಟಲೆ ಹರಟುತ್ತಿದ್ದ ತುಂಗೆ ಕರುವೂ ಬಹುತೇಕ ಹೀಗೇ ಇತ್ತು.  ಅದೇ ಬಟ್ಟಲುಗಣ್ಣು, ಅದೇ ಹೊಳಪು, ಅದೇ ಮಾಟವಾದ ಮೋರೆ, ತುಸುವೇ ನಗುವಂತಿದ್ದ ಮುಖಭಾವ, ಹಣೆಯ ಮೇಲೆ ಅದೇ ಬಿಳಿಯ ಲಾಂಛನ.  ಮೈಬಣ್ಣವೊಂದು ತುಸು ತಿಳಿದು, ವಯಸ್ಸೊಂದು ಇನ್ನೂ ಚಿಕ್ಕದು... ಅಂಥದ್ದೊಂದು ಮುದ್ದಾದ ಜೀವಿಗೆ ಇಂಥ ದಾರುಣವಾದ ಅಂತ್ಯವೂ ಸಾಧ್ಯವಿರಬಹುದೆಂದು ಯೋಚಿಸಲೂ ಆಗದ ವಯಸ್ಸು ಅದು.  ಹಾಲು ಕರೆಯುವುದನ್ನು ನಿಲ್ಲಿಸಿದ ಹಸುವಿಗೂ ಮನೆಯಲ್ಲಿ ಹೊರೆ ಹುಲ್ಲು, ಒಂದಷ್ಟು ’ತಿಂಡಿ’ ದಕ್ಕುತ್ತಿತ್ತು; ಮೇಯಲು ಗೋಮಾಳವಿತ್ತು.  ಸತ್ತವುಗಳನ್ನು ಸಾಮಾನ್ಯವಾಗಿ ಮಾದಿಗರು ಒಯ್ಯುತ್ತಿದ್ದರಾದರೂ ಕೆಲವು ಮನೆಗಳಲ್ಲಿ ಮನೆಯ ಸದಸ್ಯರಂತೆಯೇ ಇರುತ್ತಿದ್ದ ಅವುಗಳು ಆನಂತರ ಛಿದ್ರಛಿದ್ರವಾಗಿ ಹೋಗುವುದನ್ನು ಕಲ್ಪಿಸಿಕೊಳ್ಳಲಾಗದೇ ಕೆಲವು ಮನೆಯವರು ತಮ್ಮ ಜಾಗೆಯಲ್ಲೇ ಮಣ್ಣು ಮಾಡುತ್ತಿದ್ದುದೂ, ಅದಕ್ಕಾಗಿ ಕೆಲವೊಮ್ಮೆ ಮಾದಿಗರು ಬಂದು ಜಗಳವಾಡುತ್ತಿದ್ದುದೂ ಉಂಟು - ಆಗ ಅದರ ಹಿಂದಿನ ಆರ್ಥಿಕತೆ, ಸಾಮಾಜಿಕ ನಡಾವಳಿಗಳು ನನಗಿನ್ನೂ ಅರ್ಥವಾಗದ ವಯಸ್ಸು.  ಹೋರಿಗರುಗಳನ್ನೂ ಅವು ಹಾಲು ಕುಡಿಯುವುದನ್ನು ಬಿಡುವವರೆಗೆ ಇಟ್ಟುಕೊಂಡು ಆಮೇಲೆ ಅದನ್ನು ರೈತರಿಗೆ ಮಾರುತ್ತಿದ್ದುದನ್ನೂ, "ಕಟುಕರಿಗೆ ಮಾರಿಗೀರೀಯ" ಎಂಬ ಕೊನೆಯ ಎಚ್ಚರಿಕೆಯೊಂದಿಗೆ ಬೀಳ್ಕೊಡುತ್ತಿದ್ದುದನ್ನೂ ನೋಡಿದ್ದೇನೆ.  ಆಮೇಲೆ ಅವುಗಳ ಗತಿ ಏನಾಗುತ್ತಿತ್ತೋ ಅರಿಯೆ - ಕೆಲವೊಮ್ಮೆ ಅವು ’ಮನೆ’ಯನ್ನು ಹುಡುಕಿಕೊಂಡು ಕೊಟ್ಟಿಗೆಗೇ ಮರಳಿ ಬಂದದ್ದೂ, ಆಗೆಲ್ಲಾ ಅವಕ್ಕೊಂದಷ್ಟು ಹುಲ್ಲು ಹಾಕಿ, ಮೈದಡವಿ, ’ಬುದ್ಧಿ ಹೇಳಿ’ ಮತ್ತೆ ಹೊಸ ಯಜಮಾನರ ಬಳಿ ಕಳಿಸುತ್ತಿದ್ದುದೂ ಉಂಟು.

ಇವೆಲ್ಲ, ಹಸುವನ್ನು (ಹಸುಗಳನ್ನು) ಮನೆ ಮಟ್ಟಿಗೆ ಸಾಕುತ್ತಿದ್ದ ದೊಡ್ಡದೊಡ್ಡ ಅವಿಭಕ್ತ ಕುಟುಂಬಗಳ ಕಾಲ - ಹೊರಗಿನಿಂದ ಹಾಲನ್ನು ಕೊಂಡು ತಂದರಿಯದ ಕಾಲ - ಹೈನುಗಾರಿಕೆ ಆಗಷ್ಟೇ ನಿಧಾನಕ್ಕೆ ಉದ್ಯಮದ ರೂಪ ಪಡೆಯುತ್ತಿದ್ದ ಕಾಲ.  ಹಸುವನ್ನು ಪೂಜಿಸುವುದು, ಪ್ರೀತಿಸುವುದು, ಸತ್ತರೆ ಮನೆಯವರ ಸಾವಿನಂತೆಯೇ ದುಃಖಿಸಿ ಮಣ್ಣು ಮಾಡುವುದು ಇಷ್ಟು ಮಾತ್ರ ಗೊತ್ತಿದ್ದ ಬಾಲ್ಯ ನಮ್ಮದು.  ಕೆಲವರು ಮಾತ್ರ ಹೋರಿಗರುಗಳನ್ನೂ, ಉಳಲಾರದ ಮುದಿ ಎತ್ತುಗಳನ್ನೂ ಎಲ್ಲೋ ಅಪರೂಪಕ್ಕೆ ಗೊಡ್ಡು ಹಸುಗಳನ್ನೂ ಹೊರಗಿನವರಿಗೆ ಮಾರುತ್ತಿದ್ದುದುಂಟು (ಸಹಜವಾಗಿಯೇ ಅವು ಕಸಾಯಿಖಾನೆಯ ದಾರಿ ಹಿಡಿಯುತ್ತಿದ್ದಿರಬೇಕು), ಆದರೆ ಬಾಲ್ಯಕ್ಕೆ ಆ ಕಠೋರ ಸತ್ಯ ತಿಳಿದಿರಲಿಲ್ಲ. 

ಮುಂದೆ ದೊಡ್ಡವನಾದಮೇಲೆ, ಹಸುವು ಸಮಾಜದ ಹಲವು ಸಮುದಾಯಗಳ ಆಹಾರವೂ ಹೌದು ಎಂಬ ಗಲಿಬಿಲಿಗೊಳಿಸುವ ವಾಸ್ತವ, ಪ್ರಜ್ಞೆಯಲ್ಲಿ ದಾಖಲಾದರೂ ಅದೇಕೋ ಭಾವಪ್ರಪಂಚದಲ್ಲಿ ಅದು ದಾಖಲಾಗಲೇ ಇಲ್ಲ.  ಆದ್ದರಿಂದಲೇ ಹಸುವನ್ನು ಕಡಿಯುವ ವಿಷಯಕ್ಕೆ ಇಷ್ಟು ನೋವು.  ಕಾರ್ಯನಿಮಿತ್ತ ಮುಂದೊಮ್ಮೆ ದುಬಾಯಿಗೆ ಹೋದಾಗ, ಬ್ರೆಡ್ಡಿಗೆ ಬಳಿಯುವ ಚೀಸ್ ಸ್ಪ್ರೆಡ್ಡಿನಲ್ಲಿ ಕರುವಿನ ಕರುಳುಪಚ್ಚಿಯ ಲೇಹ್ಯವಿರುತ್ತದೆಂದು ತಿಳಿದಾಗ, ಅದನ್ನು ಅರಿಯದೇ ತಿಂದ ಪಾಪಪ್ರಜ್ಞೆಯಿಂದ ಇಡೀ ದಿನವೆರಡು ದಿನ ನರಳಿದ್ದಿದೆ

ಆದರೆ ನಿರ್ಭಾವುಕವಾಗಿ ಚಿಂತಿಸುವ ಮನಸ್ಸಿಗೆ (ಹಸುವಿನ ವಿಷಯದಲ್ಲಿ ಇದು ಬಹಳ ಕಷ್ಟ), ಒಂದು ವಿಷಯ ಮನದಟ್ಟಾಗುತ್ತದೆ.  ನಾವೇ ಕುಣಿಕುಣಿದು (ಕುಡಿಕುಡಿದು) ಬರಮಾಡಿಕೊಂಡ ಹೈನು ಕ್ರಾಂತಿಯ ಆಧಾರಸ್ತಂಭವೇ ಹಸು.  ಹಸು ಸಾಕಣೆ ಮೊದಲಿನಂತೆ ಮನೆಮಟ್ಟಿನ ಭಾವನಾತ್ಮಕ ವಿಷಯವಾಗಿ ಉಳಿದಿಲ್ಲ, ಅದೊಂದು ಉದ್ಯಮವಾಗಿ ಬೆಳೆದಿದೆ (ಇದಾಗಬಾರದೆಂದು ಮನಸ್ಸು ಚೀರುತ್ತದೆ, ಆದರೆ ’ಅಭಿವೃದ್ಧಿ’ಯ ಕೂಗಿನಲ್ಲಿ ಅದು ಯಾರಿಗೂ ಕೇಳದು).  ಉದ್ಯಮವೆಂದಮೇಲೆ ಮುಗಿಯಿತು, ಅಲ್ಲಿ ಭಾವನೆಗಿಂತ ಲಾಭ-ನಷ್ಟದ ವ್ಯವಹಾರವೇ ಮುಖ್ಯ.  ಹಾಕಿದ ದುಡ್ಡು ವಾಪಸ್ ಬಂದರೆ ಸಾಲದು, ಲಾಭ ಬರಬೇಕು.  ಲಾಭವಿಲ್ಲದ ಉದ್ಯಮ ಉದ್ಯಮವಲ್ಲ - ಇದು ಯಾವುದೇ ಉದ್ಯಮದ ಮೂಲಮಂತ್ರ.  ತೆಂಗಿನ ಮರ ಕೇವಲ ಎಳನೀರು, ತೆಂಗಿನ ಕಾಯಿ ಕೊಡಲು ಸೀಮಿತವಾಗಿ ಉಳಿಯಲಾರದು - ಅದರ ಮಟ್ಟೆ, ಕಡ್ಡಿ, ತೊಗಟೆ, ನಾರು, ಬೇರು ಎಲ್ಲವೂ ’ಉಪಯೋಗ’ಕ್ಕೆ ಬರದಿದ್ದರೆ ತೆಂಗಿನ ಉದ್ಯಮ ಫಲಕಾಣದು.  ಸಕ್ಕರೆ ಉದ್ಯಮ ತೆಗೆದುಕೊಳ್ಳಿ, ಕೇವಲ ಕಬ್ಬಿನ ರಸ ಹಿಂಡಿದರೆ ಮುಗಿಯುವುದಿಲ್ಲ - ಕಬ್ಬಿನ ರಸ ಸಕ್ಕರೆಯೋ ಬೆಲ್ಲವೋ ಆಗುತ್ತದೆ, ಅದರ ಚರಟ ಕಾಕಂಬಿಯಾಗುತ್ತದೆ, ಗಸಿ ಮತ್ತೆಲ್ಲೋ ಉಪಯೋಗಕ್ಕೆ ಬರುತ್ತದೆ; ಇತ್ತ ಕಬ್ಬಿನ ಸಿಪ್ಪೆಯೋ ಹಿಂಡಿ ಉಳಿದ ಬೆಂಡೋ ಕಾಗದವಾಗುತ್ತದೆ, ಮೇವಾಗುತ್ತದೆ, ಗೊಬ್ಬರವಾಗುತ್ತದೆ.  ಇವಿಷ್ಟೂ ಆಗದಿದ್ದರೆ ಕೇವಲ ಸಕ್ಕರೆ ತೆಗೆದು ಅಷ್ಟು ದೊಡ್ಡ ಉದ್ಯಮವನ್ನು ಸಾಕಲಾಗದು.  ಉದ್ಯಮವೊಂದರ ಮೂಲವಸ್ತುವಾದ ಹಸುವಿನ ಪಾಡೂ ಇದೇ.  ಹಾಲಿನ ಜೊತೆಗೇ - ಇಟ್ಟರೆ ಸಗಣಿಯಾಗಿ, ತಟ್ಟಿದರೆ ಕುರುಳಾಗಿ, ಮೇಲುಗೊಬ್ಬರವಾಗಿ ಬ್ರಾಹ್ಮಣರ ಮನೆಯ ಪವಿತ್ರ ಪಂಚಗವ್ಯವಾಗಿ ಮುಗಿಯುವುದಲ್ಲ; ಹಾಲು ಕೊಟ್ಟು ಮುಗಿದನಂತರ ಅದು ತಿನ್ನುವ ಖಾದ್ಯವೂ ಆಗುತ್ತದೆ, ಕಾಲಿನ ಚಪ್ಪಲಿಯಾಗುತ್ತದೆ, ಸೊಂಟದ ಬೆಲ್ಟಾಗುತ್ತದೆ!  ನಮ್ಮ ಮನೆಯ ಗೋಮಾತೆಯಾಗಿ ಅರಿಸಿನಕುಂಕುಮ ಪೂಜಿಸಿಕೊಂಡು ಅಕ್ಕಿ ಬೆಲ್ಲ ಬಾಳೆಯ ನೈವೇದ್ಯ ಸ್ವೀಕರಿಸಿಕೊಂಡು, ಪ್ರೀತಿಯಿಂದ ಗಂಗೆದೊಗಲು ನೇವರಿಸಿಕೊಳ್ಳುತ್ತಾ, ಕೊರಳು ಮೈಕೈ ತುರಿಸಿಕೊಳ್ಳುತ್ತಾ ಇರಬೇಕಿದ್ದ ಹಸು ಇವತ್ತು ಹಾಲಿನ, ಮಾಂಸದ, ಕರುಗಳ ಇಳುವರಿ ಹೆಚ್ಚಿಸಲು ಹಲವು ಹಾರ್ಮೋನುಗಳನ್ನು ಚುಚ್ಚಿಸಿಕೊಳ್ಳುತ್ತಾ, ಅನಾರೋಗ್ಯಕರ ಅಮಾನವೀಯ ಪರಿಸರದಲ್ಲಿ ಇತರ ನೂರಾರು ಹಸುಗಳೊಂದಿಗೆ ಜೀವ ಸವೆಸುತ್ತಾ, ಕ್ಯಾನುಗಟ್ಟಲೆ ಹಾಲಿನ ಹೊಳೆ ಹರಿಸಿ, ಮೊಲೆ ಬತ್ತಿದೊಡನೆ ಕಸಾಯಿಗಾಡಿಗಳನ್ನೇರಬೇಕು; ಜೀವಂತವಿದ್ದಾಗಲೇ ಕಾಲು ಕಡಿಸಿಕೊಂಡು, ಚರ್ಮ ಸುಲಿಸಿಕೊಂಡು, ಮೂಳೆ ಹಿರಿಸಿಕೊಂಡು, ಹದವಾದ ಮಾಂಸವಾಗಿ ಕ್ಯಾನು ತುಂಬಬೇಕು - ಇವೆಲ್ಲ ಕೇವಲ ಹಾಲು-ಹಯನುಗಳಿಗಿಂತ ಬಹುದೊಡ್ಡ ವ್ಯವಹಾರ - ಕೇವಲ ಒಂದು ಜಾತಿ, ಒಂದು ಧರ್ಮ, ಒಂದು ಆರ್ಥಿಕತೆಯನ್ನು ಮೀರಿದ್ದು - ನಾವೇ ಕುಣಿಕುಣಿದು ಬರಮಾಡಿಕೊಂಡ ಕ್ಷೀರೋದ್ಯಮಕ್ರಾಂತಿಯ ಫಲ.  ಕಾಡಿನಲ್ಲಿ ಸ್ವತಂತ್ರವಾಗಿ ರಾಜಾರೋಷವಾಗಿ ತಿರುಗುವ ಹುಲಿಯನ್ನೇ ಅದರ ಚರ್ಮ ಹಲ್ಲು ಉಗುರುಗಳಿಗಾಗಿ ಸಂಚುಮಾಡಿ ಕೊಲ್ಲುವ ಮನುಷ್ಯ, ಇನ್ನು ಮಾಡಿದ್ದು ಮಾಡಿಸಿಕೊಳ್ಳುವ ಪುಣ್ಯಕೋಟಿಯನ್ನು ಬಿಡುತ್ತಾನೆಯೇ?

ಗೋವನ್ನು ಈ ವಿಷವಲಯದಿಂದ ಬಿಡಿಸಿ ಮೊದಲಿನ ಮುದ್ದಿನ ಗೋಮಾತೆಯಾಗಿ ಸಂರಕ್ಷಿಸಿಕೊಳ್ಳಬೇಕೆನ್ನುವವರು ಮಾಡಬೇಕಾದ ಮೊದಲ ಕೆಲಸ ಏನು ಗೊತ್ತೇ? ಕಾಲಿಗೆ ಹಾಕುವ ಚರ್ಮದ ಚಪ್ಪಲಿ, ಬೂಟು, ಥಳಥಳಿಸುವ ಚರ್ಮದ ಬೆಲ್ಟನ್ನೂ ಒಳಗೊಂಡಂತೆ ಉದ್ಯಮವು ಕೊಡಮಾಡಬಹುದಾದ ಎಲ್ಲ ಗೋ-ಉತ್ಪನ್ನಗಳನ್ನೂ ಖಡಾಖಂಡಿತವಾಗಿ ತ್ಯಜಿಸುವುದು (ಉದ್ಯಮದಿಂದ ಬರುವ ಹಾಲು ಹಯನನ್ನೂ ಒಳಗೊಂಡಂತೆ) - ಆ ಚರ್ಮದ್ದು ಗೋವಿನದ್ದೇ ಎಂದು ಖಾತ್ರಿಯೇನು ಎಂಬುದು ಮೂರ್ಖ ಪ್ರಶ್ನೆಯಾಗುತ್ತದೆ; ಗೋವಿನ ಮಾಂಸವನ್ನೇ ಬಿಡದವರು ಚರ್ಮಕ್ಕೆ ಅಂತ್ಯಸಂಸ್ಕಾರ ಮಾಡುವುದಿಲ್ಲ!

ಅಷ್ಟೇಕೆ, ಮನೆಯ ಮುದ್ದುಮಗುವಿಗೆ ಎರೆಯುವ ಹಾಲು, ಹಬೆಯಾಡುವ ಕಾಫಿ, ಬಿಸಿಬಿಸಿ ಮಸಾಲೆ ದೋಸೆಯ ಮೇಲೆ ಕರಗುವ ಆ ಬೆಣ್ಣೆ ಮುದ್ದೆ, ಮನೆಯ ಶಾಲಗ್ರಾಮಕ್ಕೆ ಎರೆಯುವ ಕ್ಷೀರಾಭಿಷೇಕ ಇವಾವುದೂ ಮೊದಲಿನಂತೆ ಗೋವಿನ ಸಹಜಸ್ಥಿತಿಯಿಂದ ಬರುತ್ತಿರುವ ಉತ್ಪನ್ನಗಳಾಗಿ ಉಳಿದಿಲ್ಲ, ಬದಲಿಗೆ ಹೆಚ್ಚಿದ ಜನಸಂಖ್ಯೆಯ ರಕ್ಕಸದಾಹದ ಫಲವಾದ ಕ್ಷೀರಕ್ರಾಂತಿಯ ಪೈಶಾಚಿಕತೆಗೆ ಸಿಕ್ಕು ನರಳುತ್ತಿರುವ ಜಂತುವೊಂದರ ವಿಸರ್ಜನೆಯೆಂದು ಅರಿತು, ಅದನ್ನು ತ್ಯಜಿಸುವುದು; ಕುಟುಂಬಕ್ಕೆ ಬೇಕಾದ ಹಾಲನ್ನು ಹತ್ತಿರದ ಗೌಳಿಯ ಕುಟುಂಬದಿಂದಲೇ ಕೊಂಡುಕೊಳ್ಳುವುದು (ಸಿಕ್ಕರೆ) - ಇವು ಸಾಧ್ಯವಾದರೆ!  ಗೋವಿನ ಬಗೆಗೆ ಇಷ್ಟೊಂದು ಅಕ್ಕರೆ, ಭಕ್ತಿ-ಗೌರವಗಳಿರುವ ಸಮಾಜಕ್ಕೆ, ಗೋಮಾತೆಯ ರಕ್ಷಣೆಗಾಗಿ ಇಷ್ಟನ್ನು ಮಾಡುವುದು ಕಷ್ಟವಾಗಲಾರದೇನೋ.  ಇಷ್ಟಾಗಿಬಿಟ್ಟರೆ ಏನಾಗುತ್ತದೆ?  ಕ್ಷೀರೋತ್ಪನ್ನ ಮತ್ತಿತರ ಗೋ-ಉತ್ಪನ್ನಗಳ ಬೇಡಿಕೆ ಸಾಕಷ್ಟು ಕುಸಿಯುತ್ತದೆ, ಮತ್ತು ರಫ್ತಿಗಷ್ಟೇ ಸೀಮಿತಗೊಳ್ಳುತ್ತದೆ.  ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿ ಮುಗಿಸಿದ ನಮಗೆ, ಆಗ ರಫ್ತನ್ನು ಪ್ರತಿಬಂಧಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ನೈತಿಕ ಬಲ ಸಿದ್ಧಿಸುತ್ತದೆ.  ಗೋ-ಉತ್ಪನ್ನಗಳ ಉಪಭೋಗ ಕುಸಿದಾಗ, ಸಹಜವಾಗಿಯೇ ಹೆಚ್ಚಿನ ಇಳುವರಿಗಾಗಿ ಹೆಚ್ಚುಹೆಚ್ಚು ಗೋವುಗಳನ್ನು ಉತ್ಪಾದಿಸುವುದು, ಮತ್ತು ಅವುಗಳನ್ನು ಪೀಡಿಸುವುದು ನಿಂತು, ಮೊದಲಿನಂತೆ ಗೋಮಾತೆ ತನ್ನನ್ನು ಪ್ರೀತಿಯಿಂದ ನೋಡಿಕೊಳ್ಳುವ ಮನೆಯ ಸದಸ್ಯಳಾಗುತ್ತಾಳೆ.  ಬರಡು ಹಸು, ಎತ್ತು, ಹೋರಿಗರುಗಳ ಕಸಾಯಿಖಾನೆ ಯಾತ್ರೆ ಇದರಿಂದ ಸಂಪೂರ್ಣ ಬಂದಾಗದಿದ್ದರೂ, ಗೋಮಾಂಸದ ಬಳಕೆ ಅಷ್ಟಕ್ಕೆ ಸೀಮಿತವಾಗಿ, ಗೋಮಾಂಸದ ಪೂರೈಕೆ ಕಡಿಮೆಯಾಗಿ, ಬದಲೀ ಮಾಂಸಕ್ಕೆ ಬೇಡಿಕೆ ಹೆಚ್ಚಿ, ಮಾಂಸದ ಮಾರುಕಟ್ಟೆಯಲ್ಲಿ ಅದೊಂದು ರೀತಿಯ ಸಮತೋಲನವೇರ್ಪಡುತ್ತದೆ.  ಗೋಮಾಂಸನಿಷೇಧದಿಂದ ಸಾಧಿಸಬಯಸುವುದೂ ಇದನ್ನೇ ತಾನೆ?  ಇನ್ನಿದರ ಜೊತೆಗೆ, ನೆಲಗಳ್ಳರು, ಪುಢಾರಿಗಳು, ಸ್ವಾರ್ಥಿ ರಾಜಕಾರಣಿಗಳು ನುಂಗಿ ನೀರು ಕುಡಿದಿರುವ ಗೋಮಾಳಗಳನ್ನು ಸರಿಯಾಗಿ ಒದ್ದು ಕಕ್ಕಿಸಿದರೆ, ಗೋವುಗಳು ನಿರಾತಂಕವಾಗಿ ಉಸಿರಾಡುತ್ತಾ, ಬಾಯಾಡಿಸುತ್ತಾ ನೆಮ್ಮದಿಯ ಬದುಕು ಕಂಡುಕೊಳ್ಳುವಂತಾಗುತ್ತದೆ, ಜೊತೆಗೆ ಮೊದಲೇ ಸಾಲದ ಶೂಲದಿಂದ ಆತ್ಮಹತ್ಯೆಯತ್ತ ಜಾರುತ್ತಿರುವ ರೈತ ಕೂಡ ಬರಡು ಹಸುಗಳನ್ನು ಕಾಸು ಖರ್ಚು ಮಾಡಿ ಸಾಕಬೇಕಾದ, ಅಥವಾ ಅದಕ್ಕೆ ಗತಿಯಿಲ್ಲದೇ ಅವನ್ನು ಕಸಾಯಿಖಾನೆಗೆ ಅಟ್ಟಬೇಕಾದ ಧರ್ಮಸಂಕಟದಿಂದ ಬಚಾವಾಗುತ್ತಾನೆ.  ಇವಿಷ್ಟರ ಜೊತೆಗೆ ಮತ್ತೂ ಒಂದಾಗುತ್ತದೆ.  ಗೋವಿನ ಸೆಂಟಿಮೆಂಟಿನಿಂದಲೇ ಓಟು ಸೀಟು ಕಾಸು ಮಾಡಿಕೊಳ್ಳುವ ಎಲ್ಲಾ ಬಣದ ರಾಜಕಾರಣಿಗಳಿಗೆ ನಿರುದ್ಯೋಗ ಬಂದೊದಗುತ್ತದೆ.  ಹಾಗಾಗಲು ಅವರೇಕೆ ಬಿಟ್ಟಾರು?

ಅದೇ ಕಾರಣಕ್ಕೋ ಏನೋ, ಸರ್ಕಾರಗಳಿಗಾಗಲೀ, ಸಂಬಂಧಿಸಿದ ಇತರಿಗಾಗಲೀ ಇದಾವ ಸೂಕ್ಷ್ಮವೂ ಕಾಣುವುದಿಲ್ಲ!  ತಾನು ಘೋಷಿಸಿದಂತೆ ಗೋರಕ್ಷಣೆಯ ಬಗೆಗೆ ನಿಜವಾದ ಕಳಕಳಿಯಿದ್ದರೆ ಅದಕ್ಕೆ ತಕ್ಕಂತೆ, ಯಾರಿಗೂ ಅನ್ಯಾಯವಾಗದಂತೆ, ಯಾರಿಗೂ ನಷ್ಟವಾಗದಂತೆ ಸಮಗ್ರ ವ್ಯವಸ್ಥೆಯೊಂದನ್ನು ರೂಪಿಸಬೇಕಾದ ಸರ್ಕಾರ, ಕಾರ್ಯಸಾಧುವಲ್ಲದ, ಮೇಲ್ನೋಟಕ್ಕೇ ಹಲವು ಸಮುದಾಯಗಳಿಗೆ ವಿರುದ್ಧವೆಂದು ಕಾಣುವ, ಸಮಸ್ಯೆಯ ಮೂಲವನ್ನು ಮುಟ್ಟಿಯೂ ನೋಡದ ಕಾನೂನೊಂದನ್ನು ಹೊಸೆದು ತನ್ನ ಜವಾಬ್ದಾರಿ ಮುಗಿಯಿತೆಂದುಕೊಂಡಂತಿದೆ (ಇದು ಇವತ್ತಿನ ಒಂದು ಕಾನೂನಿನ ಬಗೆಗಲ್ಲ, ಗೋರಕ್ಷಣೆ ಕುರಿತ ಕಾನೂನುಗಳೆಲ್ಲವೂ ಹಿಡಿದ ದಾರಿಯೇ ಇದು).  ಹೂಸಿದ್ದು ಕೆಮ್ಮಿದ್ದಕ್ಕೆಲ್ಲ ಕಾನೂನಿನ ಕತ್ತಿಯೇ ಪರಿಹಾರವೆಂದು ಸರ್ಕಾರಗಳು ಭಾವಿಸುತ್ತಿರುವಾಗಲೇ ಗೋರಕ್ಷಣೆಯ ಹೆಸರಿನಲ್ಲಿ ಗುಂಡಾಗಿರಿ ತಲೆಯೆತ್ತುತ್ತಿದೆ - ಅದಕ್ಕೆ ತಕ್ಕಂತೆ ದನಗಳ್ಳತನವೂ, ಹಸುವಿನ ಮೇಲೆ ವಿನಾಕಾರಣ ಕ್ರೌರ್ಯವೂ!    ಇಲ್ಲಿ ನಿರ್ದಿಷ್ಟ ಸಮುದಾಯವೊಂದರ ಹಕ್ಕಿನ ಹೋರಾಟಕ್ಕಿಂತ, ಹಿಂದೂ ಭಾವನೆಗಳನ್ನು ಹಣಿಯುವ ಹಪಹಪಿಯೇ ಎದ್ದೆದ್ದು ಕಾಣುತ್ತಿದೆ.

ಇನ್ನು ಭಾರತದ ಬಹು ದೊಡ್ಡ ಜಾತಿಗಳಲ್ಲೊಂದಾದ ಮುಸ್ಲಿಮ್ ಸಮುದಾಯ, ಇವತ್ತಿಗೂ ಅಲ್ಪಸಂಖ್ಯಾತರ ಸೋಗು ಹಾಕುತ್ತಾ, ಬ್ರಿಟಿಷರ ಕಾಲದಿಂದಲೂ ಬಂದ ಚಾಳಿಯನ್ನು ಮುಂದುವರೆಸುತ್ತಾ ಮುಖ್ಯವಾಹಿನಿಯ ಜೊತೆ ಬೆರೆಯುವ, ಭ್ರಾತೃತ್ವ ಮೆರೆಯುವ ಯಾವ ಪ್ರಯತ್ನವನ್ನೂ ಮಾಡದೇ, ವಿದೇಶೀ ಶಕ್ತಿಗಳ, ಹಲ್ಕಾ ರಾಜಕಾರಣಿಗಳ ಕೈಯ ದಾಳವಾಗುವ ಬೇಜವಾಬ್ದಾರಿತನದಲ್ಲೇ ಸಾರ್ಥಕತೆ ಕಂಡಿದೆ.  ಒಬ್ಬರನ್ನೊಬ್ಬರು ಎದುರು ಹಾಕಿಕೊಂಡು ಸಹಬಾಳ್ವೆ ನಡೆಸಲು ಸಾಧ್ಯವೇ ಇಲ್ಲವೆನ್ನುವ ಸಾಮಾನ್ಯ ಸತ್ಯವೂ ಇವರಿಗರಿವಾಗುವಂತಿಲ್ಲ.  ಬೇಕಿದ್ದೋ ಬೇಡದೆಯೋ ಧರ್ಮಾಧಾರದ ಮೇಲೆ ದೇಶವಿಭಜನೆಯಾದಮೇಲೆ, ಅಲ್ಲಿ ಹೋಗದೇ ಇಲ್ಲೇ ಇರಬೇಕೆನ್ನುವ ನಿರ್ಧಾರವನ್ನೂ ತೆಗೆದುಕೊಂಡಮೇಲೆ, ಜಾತ್ಯತೀತ ರಾಷ್ಟ್ರದಲ್ಲಿ ಪರಧರ್ಮವನ್ನು ಗೌರವಿಸುತ್ತಾ ತಮ್ಮ ಧರ್ಮವನ್ನು ತಮ್ಮ ಮನೆ/ಸಮುದಾಯದ ಮಟ್ಟಿಗೆ ಆಚರಿಸುತ್ತಾ ಹೊಂದಿಕೊಂಡು ಇರುವುದರ ಬದಲಿಗೆ, ಮಾತೆತ್ತಿದ್ದಕ್ಕೂ ವೈಯಕ್ತಿಕ ಕಾನೂನಿನ ಗುಮ್ಮ ತೆಗೆಯುತ್ತಾ ಗಂಡಾಗುಂಡಿ ಮಾಡುತ್ತಾ ಪ್ರತ್ಯೇಕವಾಗಿಯೇ ಉಳಿದುಬಿಡುವಲ್ಲೇ ಪರಮಾರ್ಥ ಕಂಡುಕೊಂಡಂತಿದೆ (ಈ ’ಪ್ರತ್ಯೇಕತೆ’ಯೇ ದೇಶದ ವಿಭಜನೆಗೆ ಕಾರಣವಾದ ’ದ್ವಿರಾಷ್ಟ್ರ ಸಿದ್ಧಾಂತ’ದ ತಳಹದಿಯಲ್ಲವೇ, ವಿಭಜನೆಯಾಗಿದ್ದಂತೂ ಆಯಿತಲ್ಲ, ಇಲ್ಲಿ ಉಳಿದುಕೊಂಡಮೇಲೆ ಪ್ರತ್ಯೇಕತೆಯಿನ್ನೇತರದು?  ಈ ಪ್ರಶ್ನೆ ಅವರನ್ನಾಗಲೀ ಅವರನ್ನು ಓಲೈಸುವ ರಾಜಕಾರಣಿಗಳನ್ನಾಗಲೀ ಕಾಡಿದಂತಿಲ್ಲ).   ಇನ್ನಿವರನ್ನು ತುಷ್ಟೀಕರಿಸುವ ರಾಜಕೀಯವನ್ನೇ ಪರಮಧರ್ಮ ಮಾಡಿಕೊಂಡ ’ರಾಷ್ಟ್ರೀಯ’ ಚಿಲ್ಲರೆ ಪಕ್ಷಗಳು, ಚಿಲ್ಲರೆ ಪಕ್ಷಗಳ ರಾಷ್ಟ್ರೀಯ ರಾಜಕಾರಣಿಗಳು, ಸ್ವತಃ ಈ ಸಮುದಾಯವೇ ಕನಸುಮನಸಿನಲ್ಲೂ ಎಣಿಸಿರದ ಬೇಡಿಕೆಗಳನ್ನು ಅವರ ಪರವಾಗಿ ಮುಂದಿಡುತ್ತಾ, ಸ್ವತಃ ಅವರಿಗೇ ಹೊಳೆದಿರದ ಕ್ಯಾತೆಗಳನ್ನು ಅವರ ಪರವಾಗಿ ತೆಗೆಯುತ್ತಾ, ಸ್ವತಃ ಅವರೇ ಎಣಿಸಿರದ ಕ್ರೌರ್ಯಗಳನ್ನಾಚರಿಸುತ್ತಾ ಇಡೀ ದೇಶದ ಬದುಕನ್ನು ನರಕ ಮಾಡುತ್ತಿದ್ದಾರೆ. 

ಮನಸ್ಸು ಮತ್ತೆ ಮೊನ್ನಿನ ಘಟನೆಗೇ ಮರಳುತ್ತಿದೆ.  ವೇದಗಳಲ್ಲಿ ಒಂದು ಮಾತಿದೆ "ಅನ್ನಂ ನ ನಿಂದ್ಯಾತ್, ತದ್ ವ್ರತಮ್".  ಈ ದೇಶದಲ್ಲಿ ಶುದ್ಧ ಸಸ್ಯಾಹಾರದಿಂದ ಹಿಡಿದು ಗೋಮಾಂಸದವರೆಗೆ ಹಲವು ಆಹಾರಪದ್ಧತಿಗಳು ಕಾಲದಿಂದ ನಡೆದುಬಂದಿವೆ.  ಇವರಲ್ಲಿ ವೇದವೋದಿದವರೆಷ್ಟೋ, ಅದರ ಗಂಧಗಾಳಿಯೂ ಇರದವರೆಷ್ಟೋ, ಆದರೆ ಅನ್ನವನ್ನು ನಿಂದಿಸುವ, ದೂಷಿಸುವ, ಅಪವಿತ್ರಗೊಳಿಸುವ ಸಂಸ್ಕೃತಿ ಎಲ್ಲೂ ಕಂಡಿದ್ದಿಲ್ಲ.  ತಿನ್ನುವುದೇನೇ ಇರಲಿ, ಅದರ ಪಾವಿತ್ರ್ಯವನ್ನು ವ್ರತದಂತೆ ಕಾಯ್ದುಕೊಂಡು ಬರುವುದನ್ನು ನೋಡಿದ್ದೇವೆ (ಮೋಜಿಗಾಗಿ ಹಾಕಿಸಿಕೊಂಡು ಬೀದಿಗೆ ಚೆಲ್ಲುವ ಆಧುನಿಕ ಸಿರಿವಂತ ಭಿಕ್ಷುಕರ ವಿಷಯ ಬೇರೆ ಬಿಡಿ).  ಧಾರ್ಮಿಕ ಕಾರಣಗಳಿಗಾಗಿ ನಡೆಯುವ ಬಲಿಯಲ್ಲೂ (ಸರ್ವಥಾ ಸಮರ್ಥನೀಯವಲ್ಲದಿದ್ದರೂ) "ಕೊಂದ ಪಾಪ ತಿಂದು ಪರಿಹಾರ" ಎಂಬ ಸಮಾಧಾನವಾದರೂ ಇದೆ.  ಮನುಷ್ಯರ ಮಾತು ಹಾಗಿರಲಿ, ತನ್ನ ಸುತ್ತ ಜಿಂಕೆ ಕಾಡೆಮ್ಮೆಗಳ ಹಿಂಡೇ ಇದ್ದರೂ ಹೊಟ್ಟೆ ತುಂಬಿದ ಸಿಂಹ ಅವುಗಳ ಕಡೆ ಕಣ್ಣೆತ್ತಿಯೂ ನೋಡುವುದಿಲ್ಲ - ತಮಾಷೆಗಾಗಿ, ಮೋಜಿಗಾಗಿ, ಕ್ರೌರ್ಯಕ್ಕಾಗಿ, ದ್ವೇಷಕ್ಕಾಗಿ ಕೊಲ್ಲುವುದಿಲ್ಲ.    ಅಂಥದ್ದರಲ್ಲಿ ಮೊನ್ನೆ ಕೇರಳದಲ್ಲಿ ನಡೆದ ಗೋವಧೆ, ಎಂಥ ಮೃಗಗಳೂ ತಲೆ ತಗ್ಗಿಸುವಂಥದು.  ಇಲ್ಲಿ ಕೊಂದದ್ದು, ತಿಂದದ್ದು ಹಸಿವಿಗಲ್ಲ, ರಾಜಕೀಯಕ್ಕೆ, ಹುರುಡಿಗೆ, ಯಾರಿಗೋ ’ಪಾಠ’ ಕಲಿಸುವುದಕ್ಕೆ!  ಮತ್ತೊಮ್ಮೆ ಮೊದಲು ಕೇಳಿದ ಪ್ರಶ್ನೆಯನ್ನೇ ಕೇಳಬೇಕೆನಿಸುತ್ತದೆ - "ಕೇವಲ ಯಾರದೋ ಮೇಲಿನ ಹುರುಡಿಗಾಗಿ ಒಂದು ಮುಗ್ಧ ಕರುವನ್ನು ಕತ್ತರಿಸಿ ಚೆಲ್ಲಿದ ಈ ಕಟುಕ ಪ್ರಾಣಿಗಳು ಆ ಕರುವಿನ ಮೊಗವನ್ನು, ಆ ಭಾವವನ್ನು ಕ್ಷಣಕಾಲವಾದರೂ ನಿರುಕಿಸಿದ್ದರೇ?"  ಖಂಡಿತಾ ಇರಲಿಕ್ಕಿಲ್ಲ.  ಕೊಂದಪಾಪ ತಿಂದು ಪರಿಹಾರ ಎನ್ನುವ ಸಮಾಧಾನವೂ ಇಲ್ಲಿಲ್ಲ, ಏಕೆಂದರೆ ಕೇವಲ ರಾಜಕೀಯವನ್ನೇ ತಿಂದು ರಾಜಕೀಯವನ್ನೇ ವಿಸರ್ಜಿಸಿ ರಾಜಕೀಯಕ್ಕಾಗಿಯೇ ಕೊಲ್ಲುವ ಈ ಪಿಶಾಚಿಗಳು ಅನ್ನ ತಿನ್ನುವ ಜಾತಿಗಂತೂ ಸೇರಿದವಲ್ಲ

1 comment:

sunaath said...

ಸಾರ್ವಜನಿಕವಾಗಿ ಕರುವನ್ನು ಕಡಿದು, ಮಾಂಸಭಕ್ಷಣೆಯನ್ನು ಮಾಡಿದ್ದನ್ನು ಓದಿ ಹಾಗು ಕರುವಿನ ಮುಗ್ಧ ಚಿತ್ರವನ್ನು ನೋಡಿ, ಮನಸ್ಸು ಶೋಕತಪ್ತವಾಯಿತು. ರಾಷ್ಟ್ರಪಿತ ಗಾಂಧೀಜಿಯವರು, ‘Cow is a poem of pity' ಎನ್ನುವುದು ಈ ರಾಷ್ಟ್ರದ ಮಕ್ಕಳಿಗೆ ತಿಳಿದಿಲ್ಲವೇನೊ? ಅಲ್ಪಸಂಖ್ಯಾತ ಗಿಮಿಕ್‍ದ ಬಗೆಗೆ ಸರಿಯಾಗಿ ಬರೆದಿದ್ದೀರಿ. ಎಲ್ಲರೂ ಭಾರತೀಯರೆ ಆದಾಗ, ಅಲ್ಪಸಂಖ್ಯಾತರಾರು? ದುರ್ಬಲ ವರ್ಗದವರಿಗೆ ವಿಶೇಷ ಸವಲತ್ತುಗಳನ್ನು ಕೊಡುವುದು ಸರಿಯೆ, ಆದರೆ ಅಲ್ಪಸಂಖ್ಯಾತರು ಅನ್ನುವ ನೆಪದಲ್ಲಿ ಸವಲತ್ತುಗಳು ಯಾತಕ್ಕೆ? ‘ಸಾಚಾರ್ ಕಮಿಟಿ ವರದಿ’ಯಲ್ಲಿ ಹಿಂದು ಸಮಾಜದಲ್ಲಿ ಇರುವಷ್ಟೇ ಬಡವರು, ಅಶಿಕ್ಷಿತರು ಮುಸ್ಲಿಮ ಸಮಾಜದಲ್ಲಿ ಇರುವರು (ಅರ್ಥಾತ್ ಹೆಚ್ಚಿಗೆ ಇಲ್ಲ್ಲ), ಆದರೂ ಸಹ ಅವರಿಗೆ ಸವಲತ್ತುಗಳನ್ನು ಕೊಡಬೇಕು ಎಂದು ಹೇಳಲಾಗಿದೆ!