Friday, September 23, 2011

ಪ್ರಭಾತ ಚತುರ್ಮುಖ

"ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapana.com) ಪಂಚಮಾತ್ರೆಯ ಚೌಪದಿಯಲ್ಲಿ ಮುಂಜಾವಿನ ವರ್ಣನೆಯ ಬಗೆಗೊಂದು ಸವಾಲಿತ್ತು.  ಅದಕ್ಕಾಗಿ ರಚಿಸಿದ್ದು ಈ ಚೌಪದಿಗಳು:


(೧)
ಸೋರೆ ಕತ್ತಲ ಸಾರ ನೇಸರನ ಮೆಲ್ಬರವ
ಸಾರೆ ಗಗನಾಂಗನೆಯ ಕೆಂಪು ಕದಪು|
ವಾರಿಜದ ಮೊಗವರಳಿ ಮಲಗಿದಿಬ್ಬನಿ ಹೊರಳಿ
ಕೋರಿದುವು ಮಂಗಳದ ಮುಂಬೆಳಗನು||

(೨)
ತಂಗದಿರನಗಲಿಕೆಯ ವಿರಹಕಾಡಲು ರಾತ್ರಿ
ಯಂಗನೆಯ ಕೆನ್ನೆ ತುಸು ಬಿಳುಪಡರಿದೆ|
ಸಂಗಡಲೆ ರವಿಯು ಝುಮ್ಮನೆ ಸೋಂಕೆ ಬಿಸುಪಿನಾ
ಲಿಂಗನದಿ ನಾಚಿ ಮೊಗ ಕೆಂಪೇರಿದೆ||

(೩)
ಮುಂಗೋಳಿ ಕೂಗಿರಲು, ಹಕ್ಕಿಗಳು ಹಾಡಿರಲು
ರಂಗೋಲಿ ನಗುತಲಿವೆ ಅಂಗಳದೊಳು|
ಅಂಗಡಿಯು ತೆರೆಯುತಿದೆ, ತರಕಾರಿ ಕೂಗು ಮನೆ
ಮುಂಗಡೆಯೆ ಸಾಗುತಿದೆ ಏನು ಬೇಕು?

(೪)
ಮಾಗಿಯಿರುಳಿನ ಕೊನೆಗೆ ಮೂಡಣದಿ ನಸುವೆ ಬೆಳ
ಗಾಗೆ ಜಗವೆದ್ದು ಚಡಪಡಿಸುತಿಹುದು|
ಸಾಗೆ ಭರಗುಟ್ಟಿ ಮೋಟಾರುಗಳು ಒಣಮರದ
ಕೋಗಿಲೆಯೆ ಶ್ರುತಿಗೆಟ್ಟು ಕಾಗುತಿಹುದು||

14 comments:

hamsanandi said...

ನಾಲ್ಕೂ ಮುಖಗಳ ದರ್ಶನ ಬಹಳ ಚೆನ್ನಾಗಿದೆ; ನನಗೆ ಮೊದಲ ಎರಡ ಮುಖಗಳು ಬಹಳ ಹಿಡಿಸಿದವು!

Unknown said...

ಬಹಳ ಚನ್ನಾಗಿವೆ. ನನಗೂ ಮೊದಲೆರಡರ ನಾಲ್ಕೂ ಸಾಲುಗಳು ಬಹಳ ಹಿಡಿಸಿದವು. ಮೂರನೇಯದರ ಮೂರನೆಯ ಸಾಲಿನಲ್ಲಿ ಅಂಗಡಿ ಪ್ರಾಸಕ್ಕಾಗಿ ಬಂತೇನೋ ಅನಿಸಿತು, ಆದರೆ ಮುಂಜಾನೆಯ ಚಟುವಟಿಕೆಗಳನ್ನ ತುಂಬಾ ಚನ್ನಾಗಿ ಹಿಡಿದಿಟ್ಟಿದೆ. ಕೊನೆಯದರಲ್ಲಿ 'ಬಸ್ಸಾಟೊಗಳು' ಬಂದಾಗ ಓದು ಸ್ವಲ್ಪ ತಡವರಿಸಿತು, ಆದರೆ ಅದೂ ಮುಂಜಾನೆಯ ಸುಂದರ ವಾತಾವರಣದಲ್ಲಿ ಬಸ್ಸಾಟೊಗಳ ಭರಗುಟ್ಟುವಿಕೆಯ ಅನುಭವವನ್ನು ತಂದುಕೊಟ್ಟಿತು ಃ)

Badarinath Palavalli said...

ನಾಲ್ಕೂ ಕೋನಗಳಲ್ಲಿ ಮೂಡಿರುವ ಭಾವಗಳು ವಿಭಿನ್ನವಾಗಿವೆ. ಶೈಲಿ ವಿಭಿನ್ನವಾಗಿದ್ದು, ಗ್ರಹಿಕೆಯಲ್ಲೂ ಪ್ರೌಢಿಮೆ ಇದೆ. ಒಳ್ಳೆಯ ಕವನ.

ರಾಘವೇಂದ್ರ ಜೋಶಿ said...

ಹಹಹ..ಚೆನ್ನಾಗಿದೆ.ಒಂದಂತೂ ನಿಜ,ಈ ರೀತಿಯ ಕವಿತೆ ಬರೆಯಲು ತುಂಬ ಧೈರ್ಯ ಬೇಕು.
ಹಿಡಿತ,ಗ್ರಹಿಕೆ,ಓದು,ಸಾಹಸ-ಎಲ್ಲದರಲ್ಲೂ ಆಸಕ್ತಿ ತೋರುವ ಧೈರ್ಯವಿರುವವರು ಮಾತ್ರ ಈ ಥರ
break the rules ಅಂತ ಹೇಳ್ತಾರೆ.ಮಾಡ್ತಾರೆ. :-)

Subrahmanya said...

ತುಂಬಾ ಚೆನ್ನಾಗಿದೆ. ಮೊದಲೆರೆಡು ಮುಖಗಳಂತೂ ಹೊಳೆಯುತ್ತಿವೆ !.

V.R.BHAT said...

ವಾಹ್ವಾ ವಾಹ್ವಾ ಮಂಜುನಾಥರೇ, ಆದಿ ಪ್ರಾಸದಲ್ಲಿ ನಾಲ್ಕು ಚೌಪದಿಗಳನ್ನು ರಚಿಸಿ, ನೇಸರನ ಮುಖಕ್ಕೆ ರಂಗು ಬಳಿದಿದ್ದೀರಿ, ನೇಸರನಿಗೆ ಒಂದೊಮ್ಮೆ ನೆಗಡಿಯಾಗಿದ್ದರೂ ಮೂಗು ಒರೆಸಿಕೊಂಡು ಓಡಿಬರಬೇಕು !! ಹೊಸ ಹಳೆಯ ಮಾರಾಟ ಕೇಂದ್ರಗಳ ಉಲ್ಲೇಖ, ರಾತ್ರಿಯಂಗನೆಯ ಕನ್ಯೆಯ ಕೆನ್ನೆ ಬಿಳುಪೇರಿದಾಗಲೇ ಬಹಳ ಕೆಲಸಗಳು ಜಗದಲ್ಲಿ ಅಲ್ಲವೇ ? ಇನ್ನೇನು ವಿಹರಿಸಬೇಕು ಎನ್ನುವಷ್ಟರಲ್ಲಿ ರವಿ ಬಂದು ಮುಖವನ್ನು ಕೆಂಪಗೆ ಮಾಡಿಬಿಟ್ಟನಲ್ಲಾ ಹೋಗಲಿ ಬೇಡ ಕಾವ್ಯ ಕಳೆಕಟ್ಟಿದೆ, ಕಳೆಯಿಲ್ಲದ ಬೆಳೆ!! ಪೈರು ಹಸನಾಗಿದೆ-ಮೇಯುವವರು ಮೇಯಲಿ.

Susheel Sandeep said...

ಅಮೋಘವಾಗಿದೆ.
As usual - ರಾತ್ರಿಯಂಗನೆಯ, ಬಿಸುಪಿನಾಲಿಂಗನದಿ ಅನ್ನುವಲ್ಲಿ ಪದಗಳನ್ನು ಒಡೆವ ನಿಮ್ಮ ಕಲೆ ಅತಿ ಇಷ್ಟವಾಗತ್ತೆ.

ಸೂಪರ್ ಸಾಲುಗಳು ಸರ್:
ತಂಗದಿರನಗಲಿಕೆಯ ವಿರಹಕಾಡಲು ರಾತ್ರಿ
ಯಂಗನೆಯ ಕೆನ್ನೆ ತುಸು ಬಿಳುಪಡರಿದೆ|
ಸಂಗಡಲೆ ರವಿಯು ಝುಮ್ಮನೆ ಸೋಂಕೆ ಬಿಸುಪಿನಾ
ಲಿಂಗನದಿ ನಾಚಿ ಮೊಗ ಕೆಂಪೇರಿದೆ||

Manjunatha Kollegala said...

@ ಹಂಸಾನಂದಿ, ಧನ್ಯವಾದ

@ ಅನಿಲ್, ಮೊದಲೆರಡು ಚರಣಗಳು ಮುಂಜಾವಿನ ಸೊಗಸನ್ನು ಚಿತ್ರಿಸಿದರೆ, ಮೂರನೆಯದು ಸಹಜ, ನೆಮ್ಮದಿಯ ಜನಜೀವನದಲ್ಲಿ ಮುಂಜಾವನ್ನು ಚಿತ್ರಿಸುತ್ತದೆ, ಮತ್ತು ಕೊನೆಯದು ಮುಂಜಾವಿನ ನಯ ನವಿರುಗಳೊಂದಕ್ಕೂ ಮನಗೊಡದ ಪಟ್ಟಣದ ಒಡ್ಡು ಮುಂಜಾನೆಯನ್ನು ಚಿತ್ರಿಸಲೆತ್ನಿಸುತ್ತದೆ. ಚಡಪಡಿಸುವ ಜಗ, ಬಸ್ಸಾಟೋಗಳ ಭರಾಟೆ, ಒಣಮರ, ಶ್ರುತಿಗೆಟ್ಟ ಕೋಗಿಲೆ ಇವೆಲ್ಲ ಇದನ್ನೇ ಸೂಚಿಸುತ್ತವೆ. Anyway, ಬಸ್ಸಾಟೋವನ್ನು ತೆಗೆದು ಮೋಟಾರು ಮಾಡಿದ್ದೇನೆ.

@ ಬದರೀನಾಥ್, ಧನ್ಯವಾದ
@ ರಾಘವೇಂದ್ರ, ಧನ್ಯವಾದ. ಕಾರಂತರು ಯಾವುದೋ ನುಡಿಗಂಟು ಸಂಪಾದನಾ ಮಂಡಲಿಯ ಸದಸ್ಯರಾಗಿದ್ದಾಗ ಹೇಳಿದರೆನ್ನಲಾದ ಮಾತು ನೆನಪಿಗೆ ಬರುತ್ತದೆ. "ನೀವು ಹೇಳಿದ ಪದಕ್ಕೆ ಅರ್ಥ ಎಲ್ಲಿದೆ ತೋರಿಸಿ" ಎಂದು ಯಾರೋ ಹೇಳಿದಾಗ ಕಾರಂತರು ಹೇಳಿದರಂತೆ "ನಾವು ಬರೆಯುವವರು, ಪದ ಹೇಳುವುದಷ್ಟೇ ನಮ್ಮ ಕೆಲಸ. ಅರ್ಥ ಹುಡುಕುವುದು ಅರ್ಥ ಹಚ್ಚುವುದು ನಿಮ್ಮ ಕೆಲಸ" :) ಬಹುಶಃ ಅದು ಕವಿಗೆ ತುಸು ಹೆಚ್ಚೇ ಇರಬೇಕೆನ್ನಿಸುತ್ತದೆ :)

@ ಸುಭ್ರಹ್ಮಣ್ಯ, ಧನ್ಯವಾದ

@ ಭಟ್ರೇ, ನಾನೂ ಕಾಣದ್ದನ್ನು ನೀವು ಕವನದಲ್ಲಿ ಕಾಣುತ್ತಿದ್ದೀರಿ. ಇರಲಿ, ಬರೆದು ಮುಗಿಸಿದ ಮೇಲೆ ಕವಿತೆ ನನ್ನದಲ್ಲ, ನಿಮ್ಮದು. ನಿಮ್ಮ ಮೆಚ್ಚು ನುಡಿಗೆ ನನ್ನಿ.

@ ಸುಶೀಲ್, ಮತ್ತೆ, ಇಲ್ಲಿ ಪದ ಒಡೆದದ್ದು ಉಳಿದ ನವ್ಯ ಕವನಗಳಂತೆ ಉದ್ದೇಶಪೂರ್ವಕವಲ್ಲ. ಕವನದ ಛಂದಸ್ಸೇ ಹಾಗಿರುವುದರಿಂದ ಅದು ಅಲ್ಲಿಗೇ ಒಡೆಯಬೇಕು. ಅದರಿಂದ ನಿಮಗೆ ಬೇರೆಬೇರೆ ಅರ್ಥಗಳು ಹೊಳೆದರೆ ನಾನು ಜವಾಬ್ದಾರನಲ್ಲ ;) ;) ನಿಮ್ಮ ಮೆಚ್ಚುಗೆಗೆ ನನ್ನಿ.

sunaath said...

ಮೊದಲನೆಯದಾಗಿ ಕವನದ ಶೈಲಿ ಹಾಗು ಛಂದಸ್ಸು ತುಂಬ ಚೆನ್ನಾಗಿವೆ. ಓದುಗನನ್ನು ಇವೇ ಸೆರೆ ಹಿಡಿಯುತ್ತವೆ. ನಂತರದಲ್ಲಿ ಕವನವು ಕೊಡುವ ಚಿತ್ರಣ,..ನಿಸರ್ಗದ ಒಂದು ಚೈತನ್ಯಪೂರ್ಣ ಕ್ರಿಯೆಯಾದ ಬೆಳಗು, ನಮ್ಮ ಜೀವನದಲ್ಲೂ ಸಹ ಹೇಗೆ ಚೈತನ್ಯವನ್ನು ತುಂಬುತ್ತದೆ ಎನ್ನುವ ಮೂರನೆಯ ನುಡಿ. ನಾಲ್ಕನೆಯ ನುಡಿಯಲ್ಲಿ ಕಾಗುವ ಕೋಗಿಲೆ ಒಂದು ಭಿನ್ನ ಸ್ವರವನ್ನು ಸೂಚಿಸುತ್ತ, ನಾಗರಿಕ ಜೀವನದ ಮತ್ತೊಂದು ಮುಖವನ್ನು ಸೂಚಿಸುತ್ತದೆ.
ಕವನ ಹೀಗಿರಬೇಕು.

Manjunatha Kollegala said...

ಸುನಾಥರೇ, ಧನ್ಯವಾದ ನಿಮ್ಮ ಎಂದಿನ ನಲ್ನುಡಿ, ಪ್ರೋತ್ಸಾಹಕ್ಕೆ

ಜಯಂತ ಬಾಬು said...

ಸೊಗಸಾದ ಕವನ ಸಾರ್. ನನಗೇನೋ ಬಸ್ಸಾಟೋ ಪದ ಬಳಕೆ ಮೋಟಾರಿಗಿಂತ ಹಿಡಿಸಿತು..

Manjunatha Kollegala said...

ಜಯಂತ, ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್. ನಗರಜೀವನದ ನಯವರಿಯದ ಕರ್ಕಶತೆಯನ್ನು ಬಿಂಬಿಸಲು ಬಸ್ಸಾಟೊ ಎನ್ನುವ ಪದವೇ ಸೂಕ್ತವೆಂದು ನನ್ನ ಅಭಿಪ್ರಾಯವೂ ಕೂಡ. ಆದರೆ ಈಗಾಗಲೇ ಆ ಕೆಲಸವನ್ನು ಬೇರೆ ಪ್ರತಿಮೆಗಳು ಮಾಡುತ್ತಿರುವುದರಿಂದ ಇದೊಂದು ಅನಗತ್ಯ expression ಅನ್ನಿಸಿತು. ಹೇಳುವುದನ್ನೆಲ್ಲಾ ನಾವೇ ಹೇಳಿಬಿಟ್ಟರೆ ಕಾವ್ಯದ್ದೇನು ಕೆಲಸ :)

ಅಲ್ಲದೇ ನಗರದ ಕರ್ಕಶತೆಯನ್ನು ಹೇಳುವಾಗಲೂ ಛಂದಸ್ಸು ತಪ್ಪಲಿಲ್ಲ, ಅಂದಮೇಲೆ ಬಸ್ಸಾಟೊಗಳನ್ನು ಬಳಸಿ ಛಂದಸ್ಸಿಗೆ ತೊಡಕುಮಾಡುವುದೇಕೆಂದು ಬಸ್ಸಾಟೊಗಳನ್ನು ಕೈಬಿಟ್ಟು ಮೊಟಾರನ್ನು ಹಾಕಿದೆ.

ಸಾಗರದಾಚೆಯ ಇಂಚರ said...

sundara hagoo artha garbita

Manjunatha Kollegala said...

ಧನ್ಯವಾದ ಗುರು ಅವರೆ, ಬರುತ್ತಿರಿ.