Wednesday, May 11, 2011

ಅರಿವಿನ ದಾರಿ

ಚಿತ್ರಕೃಪೆ: ಅಂತರ್ಜಾಲ
ತೈತ್ತಿರೀಯೋಪನಿಷತ್ತಿನ ಭೃಗುವಲ್ಲಿಯೆಂಬ ಭಾಗದಲ್ಲಿ ಒಂದು ಸುಂದರ ಸಂವಾದವಿದೆ. ವರುಣನ ಮಗನಾದ ಭೃಗು, ಬ್ರಹ್ಮಜ್ಞಾನವನ್ನು ಹೊಂದುವ ಕುತೂಹಲದಿಂದ, ತಂದೆಯ ಬಳಿ ಸಾರಿ ಹೀಗೆ ಕೇಳುತ್ತಾನೆ:

"ಭಗವನ್, ನನಗೆ ಬ್ರಹ್ಮನ ಬಗ್ಗೆ ತಿಳಿಸಿಕೊಡಿ" ಸಂಬಂಧದಿಂದ ತಂದೆಯೇ ಹೌದಾದರೂ ಕಾರ್ಯನಿಮಿತ್ತ ಗುರು, ವರುಣ. ಅದರಿಂದ ಗುರುವನ್ನು ಸಂಬೋಧಿಸುವ ರೀತಿ "ಭಗವನ್... "

ವಿಷಯವೋ ಅತಿ ಗಹನ. ಭೃಗುವಿನದ್ದು ಒಂದು ಸಾಲಿನ ಪ್ರಶ್ನೆ. ಆದರೆ ಉತ್ತರವೋ? ವರುಣನಾದರೋ ಅದು ಯಾವ ಸಿದ್ಧ ಉತ್ತರ ಹೇಳಿಯಾನು?

"ಮಗೂ, ಅನ್ನ, ಪ್ರಾಣ, ಕಣ್ಣು, ಕಿವಿ, ಮನಸ್ಸು ಮಾತು, ಇವು ಬ್ರಹ್ಮನನ್ನು ತಿಳಿಯುವ ಸಾಧನಗಳು" ಒಗಟಿನ ರೀತಿಯಲ್ಲಿ ನುಡಿಯುತ್ತಾನೆ ವರುಣ "ಯಾವುದರಿಂದ ಸಕಲಭೂತಗಳೂ ಜನಿಸುತ್ತವೆಯೋ, ಹೀಗೆ ಹುಟ್ಟಿದವು ಯಾವುದರಿಂದ ಜೀವಿಸುತ್ತವೆಯೋ, ಕೊನೆಗೆ ಯಾವುದನ್ನು ಸೇರಿ ಅದರಲ್ಲೇ ಲೀನವಾಗುತ್ತವೆಯೋ, ಅದನ್ನು ಕುರಿತು ಚಿಂತಿಸು; ಅದೇ ಬ್ರಹ್ಮ"

ಹೀಗೆ ಬ್ರಹ್ಮನನ್ನು ತಿಳಿಯುವ ಸಾಧನಗಳನ್ನೂ ಬ್ರಹ್ಮನ ಸುಳುಹನ್ನೂ ತಂದೆಯಿಂದ ಅರಿತ ಭೃಗು ಈ ಕುರಿತು ಚಿಂತಿಸಲು (ತಪಸ್ಸನ್ನಾಚರಿಸಲು) ನಿಶ್ಚಯಿಸಿ ಹಿಂದಿರುಗುತ್ತಾನೆ. ಕೆಲಕಾಲದ ತಪಸ್ಸಿನಿಂದ ಉತ್ತರವೊಂದು ಮನಸ್ಸಿನಲ್ಲಿ ಮೂಡುತ್ತದೆ: ಅನ್ನವೇ ಬ್ರಹ್ಮ. ಏಕೆಂದರೆ ಸಕಲಭೂತಗಳೂ ಕೇವಲ ಅನ್ನದಿಂದಲೇ ಜನಿಸುತ್ತವೆ, ಹೀಗೆ ಹುಟ್ಟಿದವು ಅನ್ನದಿಂದಲೇ ಜೀವಿಸುತ್ತವೆ. ಕೊನೆಗೆ ಅನ್ನವನ್ನೇ ಸೇರಿ ಅದರಲ್ಲಿ ಲೀನವಾಗುತ್ತವೆ (ಮತ್ತೊಂದಕ್ಕೆ ಅನ್ನವಾಗುತ್ತವೆ - ಆಹಾರ ಸರಪಳಿ ಅದೇ ಅಲ್ಲವೇ? ಅನ್ನವಿಲ್ಲದೇ ಜಗತ್ತಿಲ್ಲ; ಜಗತ್ತೇ ಅನ್ನಮಯ!). ಆದ್ದರಿಂದ ಅನ್ನವೇ ಬ್ರಹ್ಮ ಇರಬೇಕು. ಹೀಗೆ ತರ್ಕಿಸಿ ಭೃಗು ಮತ್ತೆ ತಂದೆಯ ಬಳಿ ಬರುತ್ತಾನೆ, ಅದೇ ಪ್ರಶ್ನೆ ಕೇಳುತ್ತಾನೆ:

"ಭಗವನ್, ನನಗೆ ಬ್ರಹ್ಮನ ಬಗ್ಗೆ ತಿಳಿಸಿಕೊಡಿ"

ಅದಕ್ಕೆ ವರುಣನ ಉತ್ತರ "ಮಗೂ, ತಪಸ್ಸಿನಿಂದ ಬ್ರಹ್ಮನನ್ನು ತಿಳಿ, ತಪಸ್ಸೇ ಬ್ರಹ್ಮ"

ಭೃಗುವಿಗೆ ತನ್ನ ತರ್ಕದಲ್ಲೇನೋ ಕೊರತೆಯಿರಬಹುದೆಂದು ಅರಿವಾಗುತ್ತದೆ. ತಂದೆ ಹೇಳಿದ ಬ್ರಹ್ಮನ ಲಕ್ಷಣಗಳೆಲ್ಲಾ ಅನ್ನಕ್ಕಿದ್ದರೂ, ಅದಕ್ಕೆ ಹುಟ್ಟೂ ಇದೆಯಲ್ಲವೇ? ಆದರೆ ಬ್ರಹ್ಮನಾದರೋ ಅನಾದಿ! ಸರಿ, ಮತ್ತೆ ತಪಸ್ಸನ್ನು ಮುಂದುವರೆಸಲು ನಿಶ್ಚಯಿಸಿ ಹಿಂದಿರುಗುತ್ತಾನೆ ಭೃಗು.

ಕೆಲಕಾಲದ ತಪಸ್ಸಿನಿಂದ ಹೊಸದೊಂದು ಉತ್ತರ ಮೂಡುತ್ತದೆ: ಪ್ರಾಣವೇ ಬ್ರಹ್ಮ. ಏಕೆಂದರೆ ಸಕಲಭೂತಗಳೂ ಕೇವಲ ಪ್ರಾಣದಿಂದಲೇ ಜನಿಸುತ್ತವೆ, ಹೀಗೆ ಹುಟ್ಟಿದವು ಪ್ರಾಣದಿಂದಲೇ ಜೀವಿಸುತ್ತವೆ. ಕೊನೆಗೆ ಪ್ರಾಣವನ್ನೇ ಸೇರಿ ಅದರಲ್ಲಿ ಲೀನವಾಗುತ್ತವೆ. ಆದ್ದರಿಂದ ಪ್ರಾಣವೇ ಬ್ರಹ್ಮ ಇರಬೇಕು. (ಉಸಿರಿಲ್ಲದೇ ಜೀವವೊಂದು ಹುಟ್ಟುವುದು, ಬದುಕುವುದಾದರೂ ಹೇಗೆ? ಮತ್ತು ಕೊನೆಗೆ ಅದು ವಿರಾಟ್ ಸ್ವರೂಪಿಯಾದ ಪ್ರಾಣದಲ್ಲಲ್ಲವೇ ಲೀನವಾಗಬೇಕು?). ಈ ಹೊಸ ಉತ್ತರದೊಡನೆ ಭೃಗು ಮತ್ತೆ ತಂದೆಯ ಬಳಿ ಬರುತ್ತಾನೆ,

"ಭಗವನ್, ನನಗೆ ಬ್ರಹ್ಮನ ಬಗ್ಗೆ ತಿಳಿಸಿಕೊಡಿ"

ಮತ್ತೆ ವರುಣನಿಂದ ಅದೇ ಉತ್ತರ "ಮಗೂ, ತಪಸ್ಸಿನಿಂದ ಬ್ರಹ್ಮನನ್ನು ತಿಳಿ, ತಪಸ್ಸೇ ಬ್ರಹ್ಮ" ಮತ್ತೆ ವರುಣನು ಹೀಗಂದದ್ದು ಕೇಳಿ, ಮತ್ತೂ ತಪಸ್ಸನ್ನು ಮುಂದುವರೆಸಲು ನಿಶ್ಚಯಿಸಿ ಹಿಂದಿರುಗುತ್ತಾನೆ ಭೃಗು.

ಮತ್ತೆ ಕೆಲಕಾಲದ ತಪಸ್ಸಿನಿಂದ ಅವನಿಗನ್ನಿಸುತ್ತದೆ; ಅರೆ, ಎಲ್ಲದರ ಹುಟ್ಟು ಬದುಕು ನಾಶಕ್ಕೆ ಮನಸ್ಸೇ ಕಾರಣವಲ್ಲವೇ? ಏಕೆಂದರೆ ಕೇವಲ ಮನಸ್ಸಿನ ಕಾರಣದಿಂದಲೇ ಸಕಲಭೂತಗಳೂ ಜನಿಸುತ್ತವೆ, ಹೀಗೆ ಹುಟ್ಟಿದವು ಮನೋಮಾತ್ರದಿಂದಲೇ ಜೀವಿಸುತ್ತವೆ. ಕೊನೆಗೆ ಮನಸ್ಸನ್ನೇ ಸೇರಿ ಅದರಲ್ಲಿ ಲೀನವಾಗುತ್ತವೆ. ಆದ್ದರಿಂದ ಮನಸ್ಸೇ ಬ್ರಹ್ಮ! (ಕೇವಲ ಅನ್ನ, ಪ್ರಾಣಗಳಿದ್ದು ಮನಸ್ಸಿನ ಸಂಕಲ್ಪವಿಲ್ಲದಿದ್ದರೆ ಯಾವುದು ಸಾಧ್ಯ!) ಮತ್ತೆ ತಂದೆಯ ಬಳಿ ಸಾರುತ್ತಾನೆ ಭೃಗು; ಮತ್ತೆ ಅದೇ ಪ್ರಶ್ನೆ:

"ಭಗವನ್, ನನಗೆ ಬ್ರಹ್ಮನ ಬಗ್ಗೆ ತಿಳಿಸಿಕೊಡಿ"

ಆದರೆ ಉಹುಂ... ವರುಣನಿಂದ ಮತ್ತೆ ಅದೇ ಉತ್ತರ! "ಮಗೂ, ತಪಸ್ಸಿನಿಂದ ಬ್ರಹ್ಮನನ್ನು ತಿಳಿ, ತಪಸ್ಸೇ ಬ್ರಹ್ಮ"

ಮತ್ತೆ ತಪಸ್ಸು! ಸರಿ, ಮತ್ತೂ ತಪಸ್ಸನ್ನು ಮುಂದುವರೆಸಲು ನಿಶ್ಚಯಿಸಿ ಹಿಂದಿರುಗುತ್ತಾನೆ ಭೃಗು.

ಕೆಲಕಾಲದ ತಪಸ್ಸಿನನಂತರ ಮತ್ತೊಂದು ಹೊಳಹು: ಅನ್ನ, ಪ್ರಾಣ, ಮನಸ್ಸುಗಳಿದ್ದರೂ ತನ್ನ ಸುತ್ತೆಲ್ಲ ನಡೆಯುವ ವ್ಯಾಪಾರದ ಹಿಂದೆ ವಿಶೇಷವಾದ ಜ್ಞಾನವೊಂದಿರಲೇಬೇಕಲ್ಲವೇ? ಕೇವಲ ಈ ವಿಜ್ಞಾನದ ಕಾರಣದಿಂದಲೇ ಸಕಲಭೂತಗಳೂ ಜನಿಸುತ್ತವೆ, ಹೀಗೆ ಹುಟ್ಟಿದವು ವಿಜ್ಞಾನದ ಬಲದಿಂದಲೇ ಜೀವಿಸುತ್ತವೆ. ಕೊನೆಗೆ ವಿಜ್ಞಾನವನ್ನೇ ಸೇರಿ ಅದರಲ್ಲಿ ಲೀನವಾಗುತ್ತವೆ. (ಕೇವಲ ಸಂಕಲ್ಪಮಾತ್ರದಿಂದ ಎಲ್ಲವೂ ನಡೆಯುತ್ತವೆಯೇ? ಸೃಷ್ಟಿ, ಸ್ಥಿತಿ ಲಯಗಳಿಗೂ ಅದೊಂದು ಕ್ರಿಯೆಯಿದೆ, ಕ್ರಮವಿದೆ, ಅದರ ಹಿಂದೊಂದು ವಿಜ್ಞಾನವಿದೆಯಲ್ಲವೇ?) ಆದ್ದರಿಂದ ಬ್ರಹ್ಮನೆಂದರೆ ಸರ್ವವ್ಯಾಪಿಯಾದ ಈ ವಿಜ್ಞಾನವೇ ಹೌದು! ಹೀಗೆ ತಿಳಿದು ಭೃಗು ಮತ್ತೆ ತಂದೆಯ ಬಳಿ ಬರುತ್ತಾನೆ, ಮತ್ತೆ ಅದೇ ಪ್ರಶ್ನೆ!

ಇಲ್ಲ, ಈ ಬಾರಿಯೂ ವರುಣನ ಉತ್ತರ ಅದೇ!! ಬಂದದಾರಿಗೆ ಸುಂಕವಿಲ್ಲವೆಂಬಂತೆ ಮರಳುವ ಭೃಗು ಮತ್ತೆ ತಪಸ್ಸನ್ನು ಮುಂದುವರೆಸುತ್ತಾನೆ. ಸಾಕಷ್ಟು ತಪಸ್ಸಿನ ನಂತರ ಕೊನೆಗೊಮ್ಮೆ ಅವನಿಗೆ ಹೊಳೆಯುತ್ತದೆ, ಜಗತ್ತಿನ ಎಲ್ಲದರ ಮೂಲ, ಆಧಾರ, ಗಮ್ಯ ಏನು? ಆನಂದವಲ್ಲವೇ? ಕೇವಲ ಆನಂದದ ಕಾರಣದಿಂದಲೇ ಸಕಲಭೂತಗಳೂ ಜನಿಸುತ್ತವೆ. ಹೀಗೆ ಹುಟ್ಟಿದವು ಆನಂದಕ್ಕಾಗಿಯೇ ಜೀವಿಸುತ್ತವೆ, ಕೊನೆಗೆ ಪರಮಾನಂದದಲ್ಲಿ ಲೀನವಾಗುತ್ತವೆ ಅಲ್ಲವೇ? ಆನಂದದ ಅಪೇಕ್ಷೆಯಿಲ್ಲದೇ ಸೃಷ್ಟಿಕ್ರಿಯೆಯಿಲ್ಲ. ಅದರ ಅವಲಂಬನೆಯಿಲ್ಲದೆಯೇ ಬದುಕಿಲ್ಲ. ಇದೆಲ್ಲವನ್ನೂ ಒಳಗೊಂಡ ಪರಮಾನಂದ (eternal bliss ಅನ್ನೋಣ)ವೊಂದಿದೆ; ಅದು ಸರ್ವವ್ಯಾಪಿ, ಕೊನೆಗೆ ಎಲ್ಲವೂ ಅದರಲ್ಲೇ ಲೀನವಾಗಬೇಕು. ಆದ್ದರಿಂದ ಜಗತ್ತೆಲ್ಲವೂ ಆನಂದಮಯವಲ್ಲವೇ? ಆದ್ದರಿಂದ ಬ್ರಹ್ಮನೆಂದರೆ ಈ ಪರಮಾನಂದವಲ್ಲದೇ ಮತ್ತೇನು?

ಇದು, ವರುಣನಿಂದ ಪ್ರೇರಿತವಾದ, ಭೃಗುವು ಅರಿತ ವಿದ್ಯೆ ("ಸೈಷಾ ಭಾರ್ಗವೀ ವಾರುಣೀ ವಿದ್ಯಾ") ಎನ್ನುತ್ತದೆ ಉಪನಿಷತ್ತು. ಹೃದಯದ ಆಳದಲ್ಲಿ ಪ್ರತಿಷ್ಠಿತವಾದ ಈ "ಬ್ರಹ್ಮ"ನನ್ನು ಯಾವನು ಅರಿಯುತ್ತಾನೋ ಅವನು ಅದೇ ಬ್ರಹ್ಮನಲ್ಲಿ (ಪರಮಾನಂದದಲ್ಲಿ) ನೆಲೆನಿಲ್ಲುತ್ತಾನೆ; ಸ್ವಕೀಯವಾದ ಈ ಆನಂದದ ಹೊರಗುರುತಾಗಿ, ಇಹದಲ್ಲಿ ಅವನು ಅನ್ನವಂತನೂ ಅದನ್ನು ಭೋಗಿಸುವವನೂ ಆಗುತ್ತಾನೆ; ಜನಸಂಪತ್ತಿನಿಂದಲೂ, ಪಶುಸಂಪತ್ತಿನಿಂದಲೂ, ಬ್ರಹ್ಮವರ್ಚಸ್ಸಿನಿಂದಲೂ ಕೂಡಿ ಮಹಾ ಕೀರ್ತಿವಂತನಾಗುತ್ತಾನೆ ಎನ್ನುವುದು ಉಪನಿಷತ್ತಿನ ಮಾತು. ಮುಂದುವರೆಯುವ ಉಪನಿಷತ್ತು ಅನ್ನದ ವಿವಿಧ ಆಯಾಮಗಳನ್ನೂ, ಬ್ರಹ್ಮೌಪಾಸನೆಯ ವಿವಿಧ ರೂಪಗಳನ್ನೂ, ಆತ್ಮಸಾಕ್ಷಾತ್ಕಾರದ ವಿವಿಧ ಮಜಲುಗಳನ್ನೂ ವಿವರಿಸುತ್ತದೆ.

ಮೇಲಿನ ಸಂವಾದದಲ್ಲಿ ಗಮನಸೆಳೆಯುವ ಅಂಶವೆಂದರೆ ಜ್ಞಾನಸಾಧನೆಯಲ್ಲಿ ಚಿಂತನೆಗೆ/ತಪಕ್ಕೆ ಇರುವ ಮಹತ್ವ; ಆರ್ಷೇಯವಾಗಿ ಬಂದದ್ದು ಇದು. ಭೃಗುವು ವರುಣನಬಳಿ ಹೋದಾಗಲೆಲ್ಲಾ ಅವನಿಗೆ ಸಿಗುವ ಉತ್ತರ ಒಂದೇ? "ತಪಸಾ ಬ್ರಹ್ಮ ವಿಜಿಜ್ಞಾಸಸ್ವ..."; ಎಷ್ಟು? "ತಪಸ್ಸೇ ಬ್ರಹ್ಮ" ಎನ್ನುವಷ್ಟು. ಕೊನೆಯಲ್ಲಿ ಭೃಗು ಅರಿಯುವ ಸತ್ಯ ವರುಣನಿಗೆ ಮೊದಲೇ ತಿಳಿದಿದ್ದರೆ ಅದನ್ನು ಆಗಲೇ ಹೇಳಿಬಿಡಬಹುದಿತ್ತಲ್ಲವೇ? ಈ ಪ್ರಶ್ನೆ ಸಹಜ. "Why re-invent the wheel" ಅನ್ನುವ ಯುಗ ನಮ್ಮದು. ಆದರೆ ಸನಾತನ ವಿದ್ಯಾಭ್ಯಾಸದ ರೀತಿ ಅದಲ್ಲ. ಈ ಅಂತಿಮ ಸತ್ಯ ವರುಣನಿಗೇ ಗೊತ್ತಿತ್ತೋ ಅನ್ನುವುದೂ ಬೇರೆಯ ವಿಷಯ. ಹಾಗೊಂದುವೇಳೆ ಅವನಿಗೆ ಗೊತ್ತಿದ್ದೂ ಅದನ್ನು ಅವನೇ ಹೇಳಿದ್ದರೆ, ಅದು ಅವನದೇ ಸತ್ಯವಾಗಿ ಉಳಿಯುತ್ತಿತ್ತೇ ಹೊರತು ಭೃಗುವಿನದಾಗುತ್ತಿರಲಿಲ್ಲ. ಸತ್ಯದ ದಾರಿಯನ್ನಷ್ಟೇ ಗುರು ಸೂಚಿಸಬಲ್ಲ; ಸುಳುಹುಗಳನ್ನು ನೀಡಬಲ್ಲ, ದಾರಿ ತಪ್ಪುವಲ್ಲಿ ತಿದ್ದಬಲ್ಲ, ಆದರೆ ಆ ದಾರಿಯಲ್ಲಿ ಸ್ವತಃ ನಡೆದು ಸತ್ಯವನ್ನು ಕಂಡುಕೊಳ್ಳುವ ಜವಾಬ್ದಾರಿ ಶಿಷ್ಯನದೇ. ಸತ್ಯ ಅವನದಾಗುವುದು ಹಾಗೆ. ಈ ದಾರಿಯಲ್ಲಿ ಕಷ್ಟಗಳೇ ಅವನ ಆಹಾರ. ಬೆಂಬಿಡದ ಛಲ, ಸತ್ಯವಾದಿತ್ವ, ಕಷ್ಟಸಹಿಷ್ಣುತೆಗಳೇ ಅವನ ಕಾಪು. ಬದುಕು-ಸಾವುಗಳ ರಹಸ್ಯವನ್ನರಿಯಲು ಯಮನಿಗೇ ಬೆನ್ನು ಬಿದ್ದ ನಚಿಕೇತನಾಗಲಿ, ತನ್ನ ವಂಶವೇ ಗೊತ್ತಿಲ್ಲದೆಯೂ ಗೊತ್ತಿಲ್ಲವೆಂಬುದನ್ನೇ ನಿರ್ಭೀತಿಯಿಂದ ಹೇಳುವ ಸತ್ಯಕಾಮ ಜಾಬಾಲಿಯಾಗಲೀ, ಗುರುವಿನ ಮಾತಿಗಾಗಿ ತಮ್ಮನ್ನೇ ಕೊಟ್ಟುಕೊಳ್ಳುವ ಉಪಮನ್ಯು ಆರುಣಿಗಳಾಗಲೀ ನಮಗೆ ತಿಳಿಸುವುದು ಇದನ್ನೇ. ಇದು ವಿದ್ಯೆ ಗಳಿಕೆಗೆ ಅರ್ಹತೆ; ಇದು ಅರಿವಿನ ದಾರಿ, ಅನ್ವೇಷಿಗಳ ದಾರಿ, ಋಷಿಗಳ ದಾರಿ, ವೇದಗಳ ದಾರಿ. ಹಾಗೆ ಕಡುಕಷ್ಟದ ಹಾದಿಯಲ್ಲಿ ನಡೆದಾಗಲಷ್ಟೇ ಅವನಿಗೆ ಬ್ರಹ್ಮಸ್ವರೂಪದ ಆನಂದದ ಅನುಭೂತಿ ದೊರಕಬಹುದೇ ಹೊರತು, ಅದನ್ನು ಯಾರೋ ಹೇಳಿಕೊಟ್ಟಾಗಲ್ಲ. ಮರುಭೂಮಿಯಲ್ಲಿ ದೊರಕುವ ಓಯಸಿಸ್ಸಿನ ಬೆಲೆ ಕೂತಲ್ಲೇ ಕೈಚಾಚಿದಾಗ ಸಿಕ್ಕುವ ನೀರಿನ ಬಾಟಲಿಗಿಲ್ಲವಷ್ಟೆ? ಈ ವಿದ್ಯೆ/ಅರಿವು ಬ್ರಹ್ಮಜ್ಞಾನವಿರಬಹುದು, ವೈದ್ಯಕೀಯವಿರಬಹುದು, ವಿಜ್ಞಾನ, ಗಣಿತ, ಅರ್ಥ, ಮತ್ತಾವುದೇ ಶಾಸ್ತ್ರವಿರಬಹುದು, ಇಲ್ಲಿ short cuts, ಗೈಡು, ಟ್ಯುಟೋರಿಲ್ಲುಗಳಿಲ್ಲ, "100% results guaranteed" ಅನ್ನುವ ಬೋರ್ಡುಗಳಿಲ್ಲ, ಸೀಟು, ಡೊನೇಶನ್ನು ವ್ಯವಹಾರಗಳಿಲ್ಲ; ಇಲ್ಲಿ ಗುರು ರಾಜಕೀಯಮಾಡುವುದಿಲ್ಲ (ಕೈಚಾಚಿದರೆ ಅದು ಆಶೀರ್ವದಿಸುವುದಕ್ಕಷ್ಟೇ), ಶಿಷ್ಯ strike ಮಾಡುವುದಿಲ್ಲ, ಅಪ್ಪ-ಅಮ್ಮಂದಿರು ಗುರುಗಳನ್ನು ಜಬರಿಸುವುದೂ ಇಲ್ಲ! ಇರುವುದೆಲ್ಲಾ ಕೇವಲ ವಿದ್ಯೆ, ದಾನ, ಆದಾನ! "ಆಚಾರ್ಯಃ ಪೂರ್ವರೂಪಮ್, ಅಂತೇವಾಸ್ಯುತ್ತರ ರೂಪಮ್, ವಿದ್ಯಾ ಸಂಧಿಃ, ಪ್ರವಚನಗ್ಂ ಸಂಧಾನಮ್"

20 comments:

Subrahmanya said...

ಉಪನಿಷತ್ತಿನ ಬ್ರಹ್ಮಜಿಜ್ಞಾಸೆಯಿಂದ ಆರಂಭಿಸಿ
ಅನ್ನಂ ಬ್ರಹ್ಮೇತಿ ಪರಿಜ್ಞಾನಮ್
ಪ್ರಾಣೋ ಬ್ರಹ್ಮೇತಿ ಪರಿಜ್ಞಾನಮ್
ಮನೋ ಬ್ರಹ್ಮೇತಿ ಪರಿಜ್ಞಾನಮ್
ವಿಜ್ಞಾನಂ ಬ್ರಹ್ಮೇತಿ ಪರಿಜ್ಞಾನಮ್
ಆನಂದೋ ಬ್ರಹ್ಮೇತಿ ಪರಿಜ್ಞಾನಮ್
ಎನ್ನುವವರೆಗೆ ರುಚಿಕಟ್ಟಾಗಿ ಬರೆದು ವಾಸ್ತವದ ಚಿತ್ರಣದ ಜೊತೆ ತಳುಕು ಹಾಕಿ ಉಣಬಡಿಸಿದ್ದೀರಿ.

ಶೇಕಡಾ ೧೦೦ ಫಲಿತಾಂಶ ಗ್ಯಾರಂಟಿ ಎನ್ನುವುದು ಇಂದಿನ ಡೊನೇಶನ್ ಮೇಲೆ ಆಧಾರಿತವಾಗಿರುವುದಂತೂ ಸತ್ಯ. ನಚಿಕೇತ, ಶ್ವೇತಕೇತು ಗಳಂತಹ ವಿದ್ಯಾರ್ಥಿಗಳಾಗಲೀ, ಭೃಗು ಜೈವಲಿ ಗಳಂತಹ ಜ್ಞಾನಿಗಳನ್ನಾಗಲೀ ಇಂದು ಕಾಣಬಯಸುಸುದೇ ಹಾಸ್ಯಾಸ್ಪದ ಸಂಗತಿಯಾಗುತ್ತದೆ.

correction:

ಕೊನೆಯ ಸಾಲು ತೈತ್ತಿರೀಯ ಉಪನಿಷತ್ತಿನ ಶೀಕ್ಷಾವಲ್ಲಿಯ ಸಂಹಿತೋಪಸಾನದ್ದು. ಹೀಗೆ ಇರಬೇಕಲ್ಲವೇ ?

"ಆಚಾರ್ಯಃ ಪೂರ್ವ ರೂಪಮ್, ಅಂತೇ ವಾಸ್ಯುತ್ತರ ರೂಪಮ್, ವಿದ್ಯಾ ಸಂಧಿಃ, ಪ್ರವಚನಗ್ಂ ಸಂಧಾನಮ್ "

(ಯಜುರ್ವೇದ)

ಸೀತಾರಾಮ. ಕೆ. / SITARAM.K said...

uttam lekhana

sunaath said...

ಬ್ರಹ್ಮಜಿಜ್ಞಾಸೆಗಾಗಿ ಧನ್ಯವಾದಗಳು.

Unknown said...

ಅರಿವಿನ ದಾರಿಯಲ್ಲ

ಅಱಿವಿನ ದಾರಿ

Shashi Dodderi said...

hi
this is an excellent writing and your efforts to bring kumaravyasa here is outstanding.
Even though I dont agree with any of the thought process of Upanishads, I would love to read them. I want to study why they have come up with such logic........... and thinking continues.

Manjunatha Kollegala said...

ಸೀತಾರಾಮು, ಧನ್ಯವಾದ, ಬರುತ್ತಿರಿ

Manjunatha Kollegala said...

Thanks ಸುಬ್ರಹ್ಮಣ್ಯ... ಹೌದು ಅದು ಶೀಕ್ಷಾವಲ್ಲಿಯದೇ ಸಾಲುಗಳು.

ಪ್ರವಚನಗ್ಂ, ಅರ್ಥದಲ್ಲಿ ಪ್ರವಚನಂ ತಾನೆ? ನಿಜಹೇಳಬೇಕೆಂದರೆ ಅವೆರಡರ ವ್ಯತ್ಯಾಸ ನನಗಿನ್ನೂ ಅರ್ಥವಾಗಿಲ್ಲ. ತಿದ್ದುಪಡಿಗೆ ಧನ್ಯವಾದಗಳು. ತಿದ್ದಿದ್ದೇನೆ.

Manjunatha Kollegala said...

ಧನ್ಯವಾದ ಸುನಾಥರೇ, ಬ್ರಹ್ಮಜಿಜ್ಞಾಸೆ ನನ್ನ ಪಾಲಿಗೆ ತುಸು ಹೆಚ್ಚು; ಹೆಚ್ಚೆಂದರೆ ಇದು ತಪೋಜಿಜ್ಞಾಸೆ ಅನ್ನಬಹುದು :)

Arun ಅರುಣ್ said...

Manju,

I remeber you explaining this to me long back in a colourful way :). Please keep writing.

Arun

Manjunatha Kollegala said...

ನೀವು ಹೇಳಿದ್ದಷ್ಟೂ ಹಳಗನ್ನಡದ ಬಳಕೆ (ಹೞಗನ್ನಡದ ಬೞಕೆ?), ಆದರೆ ಮೊದಲಿದ್ದ ಱ ೞ ಗಳು ಈಗಾಗಲೇ ಕನ್ನಡ ಬರಿಗೆಮಾಲೆಯಿಂದ ಮರೆಯಾಗಿಬಿಟ್ಟಿರುವುದರಿಂದ ಈ ಸೊಲ್ಲುಗಳನ್ನು ಯಾರೂ ಯಾರಿಗೂ ಹೇಳಿಕೊಡುತ್ತಲೂ ಇಲ್ಲ, ನಮ್ಮ ದುರದೃಷ್ಟ. ಕಾರಣಗಳೇನೇ ಇರಲಿ ಇವು ಈಗಾಗಲೇ ಬಳಕೆಯಲ್ಲಿ ಬಂದುಬಿಟ್ಟಿರುವುದರಿಂದ, ಹೆಚ್ಚಾಗಿ ಇವು ಸಾಧಿತ ಪದಗಳಲ್ಲದೇ ಬೇರಿನ ಪದಗಳೇ ಆಗಿರುವುದರಿಂದ ಅದು "ತಪ್ಪು" ಎಂದು ಎನ್ನಿಸದು. ಬಳಕೆಯ ಬಲದಿಂದ ಇದೂ ಸರಿಯೇ, ಮೂಲರೂಪ ಎಂಬ ಕಾರಣದಿಂದ ಅದೂ ಸರಿಯೇ. ಆದ್ದರಿಂದ ನೀವು ಹೇಳುವುದು ಮೂಲರೂಪವೆಂಬ ಕಾರಣಕ್ಕೆ ಖಂಡಿತಾ ಒಪ್ಪುತ್ತೇನೆ, ಮತ್ತು ಎಲ್ಲರೂ ಅದನ್ನೇ ಬಳಸುವಂತೆ ಆಗಲಿ. ಒಮ್ಮೆ ಬಳಕೆಯಲ್ಲಿ ಬಂದರೆ, ಬರಹದಲ್ಲಿ ಉಪಯೋಗಿಸಲು ಸುಲಭ.

Manjunatha Kollegala said...

@ Nostalgia,

"and thinking continues" well said, I agree with you fully on this.

Thanks that you liked this write-up. Keep visiting.

Manjunatha Kollegala said...

Arun, isn't it? I bet; those were The days. We discussed so many things; we discovered even so called "dry" spiritual discussions could be colourful and intensively interesting. I miss the bygone years.

Keep in touch.

Dr.Samir Kagalkar said...

very nicely written Manju !As a teacher myself (and a continuous student throughout my life) I can appreciate the value of your article.. very good !

Anonymous said...

@manju avare: tumbA chennagi bardideera. dhanyavaadagaLu :-).
Vishu

Manjunatha Kollegala said...

Thanks Sameer & Vishu,

I am glad that you liked it. Keep visiting

parijata said...

ಉತ್ತಮಲೇಖನ

Dinamani said...

ಉತ್ತಮ ನಿರೂಪಣೆ. ಮುಂದುವರೆಯಲಿ.

Niranjana said...

" ಇಲ್ಲಿ short cuts, ಗೈಡು, ಟ್ಯುಟೋರಿಲ್ಲುಗಳಿಲ್ಲ, "100% results guaranteed" ಅನ್ನುವ ಬೋರ್ಡುಗಳಿಲ್ಲ, ಸೀಟು, ಡೊನೇಶನ್ನು ವ್ಯವಹಾರಗಳಿಲ್ಲ; ಇಲ್ಲಿ ಗುರು ರಾಜಕೀಯಮಾಡುವುದಿಲ್ಲ (ಕೈಚಾಚಿದರೆ ಅದು ಆಶೀರ್ವದಿಸುವುದಕ್ಕಷ್ಟೇ), ಶಿಷ್ಯ strike ಮಾಡುವುದಿಲ್ಲ, ಅಪ್ಪ-ಅಮ್ಮಂದಿರು ಗುರುಗಳನ್ನು ಜಬರಿಸುವುದೂ ಇಲ್ಲ! "

ಈ ಸಾಲುಗಳು ಈಗ ಇನ್ನೂ ಹೆಚ್ಚು ಪ್ರಸ್ತುತವಾಗಿವೆ.

nannavishwa said...

ಪ್ರವಚನಂ ಅನ್ನುವುದೇ ಮೂಲರೂಪ. ಈ "ಅಂ" ಬಂದಾಗ "ಗ್‌ಂ" ಆಗುವುದು ವೇದಗಳಲ್ಲಿ ಸಾಮಾನ್ಯ. ಏಕೆ ಹೀಗೆ ಎಂದು ಗೊತ್ತಿಲ್ಲ. ಪದಪಾಠ ಮಾಡುವಾಗ ಪ್ರವಚನಂ ಎಂದೇ ಹೇಳಿಕೊಡುತ್ತಾರೆ.

Unknown said...

ನಾನು ಓದುತ್ತಿರುವ ಮೊದಲ ಬರಹ. ತುಂಬಾ ಚೆನ್ನಾಗಿ ಮೂಡಿಬಂದಿದೆ. ಧನ್ಯವಾದಗಳು