Wednesday, October 21, 2009

ಮಾತು ಒಡೆದರೆ...

ಮೊನ್ನೆ ಸುಮ್ಮನೇ ಟಿ.ವಿ. ಚಾನೆಲ್ಲುಗಳನ್ನು ತಿರುಗಿಸುತ್ತಿರಬೇಕಾದರೆ ಚಾನೆಲ್ಲೊಂದರಲ್ಲಿ ಬಭ್ರುವಾಹನ ಚಿತ್ರದ ಹಾಡೊಂದು ಬರುತ್ತಿತ್ತು - ರಾಜಕುಮಾರ್ ಜಯಮಾಲಾ ಅಭಿನಯದ ಜನಪ್ರಿಯ ಗೀತೆ, "ಆರಾಧಿಸುವೇ ಮದನಾರಿ". ನಿಮ್ಮಲ್ಲಿ ಅನೇಕರಿಗೆ ಅರಿವಿರುವಂತೆ ಅದೊಂದು ಪ್ರಣಯಸನ್ನಿವೇಶ. ಅರ್ಜುನ ಸನ್ಯಾಸಿ ತನ್ನ ಪೂಜಾ-ಕೈಂಕರ್ಯಗಳಿಗೆಂದು ನಿಯಮಿಸಿದ್ದ ಸುಭದ್ರೆಯೊಡನೆ ಸರಸವಾಡುತ್ತಾ, ಪೂಜೆಯ ನೆವದಲ್ಲಿ ಅವಳೊಡನೆ flirt ಮಾಡುವ ಹಾಡು ಅದು. ಈ ಹಾಡನ್ನು ನಾನು ಮೊದಲು ನೋಡಿದ್ದು ಬಹುಶಃ ಸಿನಿಮಾದಲ್ಲೇ. "ಬಭ್ರುವಾಹನ" ನಮ್ಮೂರಿಗೆ ಬಂದದ್ದು ೭೭ರಲ್ಲೋ ೭೮ರಲ್ಲೋ. ನನಗಾಗ ೮-೧೦ ವಯಸ್ಸಿರಬೇಕು. ಖುಶಿ ಕೊಡುವ ಸಂಗೀತದ ಜೊತೆಗೆ ಸಿನಿಮಾದ ಶ್ರೀಮಂತ ಸೆಟ್, ರಾಜಕುಮಾರರ ಶೃಂಗಾರಭರಿತ ಅಭಿನಯ, 'ಮದನಾರಿ' ಸುಭದ್ರೆಯ ಮದವೇರಿಸುವ ಸೌಂದರ್ಯ, ಒನಪು-ವಯ್ಯಾರ ಇವು ನನ್ನ ಎಳೆಗಣ್ಣಿಗೆ ಕಟ್ಟಿದ್ದ ಅಂಶಗಳು. ಆಮೇಲೆ ಈ ಚಿತ್ರವನ್ನು ಎಷ್ಟೋ ಬಾರಿ ನೋಡಿದ್ದೇನೆ, ಹಾಡನ್ನು ಅದೆಷ್ಟೋ ಬಾರಿ ನೋಡಿದ್ದೇನೆ-ಕೇಳಿದ್ದೇನೆ. ತಲೆಚಿಟ್ಟು ಹಿಡಿಸುವ ಟಿ.ವಿ ಕಾರ್ಯಕ್ರಮಗಳ ನಡುವೆ ಆಗೊಮ್ಮೆ ಈಗೊಮ್ಮೆ ಇಂಥ ಮುದಕೊಡುವ ಹಾಡುಗಳು ಸುಳಿಯುವುದುಂಟು. ಮೊನ್ನೆ ಈ ಹಾಡು ಕೇಳುತ್ತಿದ್ದಾಗ ಮೂವತ್ತು ವರ್ಷಗಳ ಹಿಂದೆ ಇದಕ್ಕೆ ಸಂಬಂಧಿಸಿದ ಮೋಜಿನ ಪ್ರಸಂಗ ನೆನಪಿಗೆ ಬಂತು.

ಬೆಳಗ್ಗೆ ಎಲ್ಲೋ ಯಾರೋ ರೇಡಿಯೋ ಹಾಕಿದ್ದರು (ಯಾರಾದರೂ ಕೇಳುತ್ತಿದ್ದರೆಂದಲ್ಲ, ಯಾರಾದರು ಕೇಳಲಿ ಕೇಳದಿರಲಿ, ರೇಡಿಯೋ ಮಾತ್ರ ಅರಚುತ್ತಿರಬೇಕು; ಆಗೆಲ್ಲ ರೇಡಿಯೋ ನಮ್ಮ ದಿನಚರಿಯನ್ನು ನಿಯಂತ್ರಿಸುವ calender ಆಗಿತ್ತು). ವಿವಿಧಭಾರತಿ ಇರಬೇಕು, ಚಿತ್ರಗೀತೆಗಳ ಕಾರ್ಯಕ್ರಮದಲ್ಲಿ ಈ ಹಾಡು ಪ್ರಸಾರವಾಗುತ್ತಿತ್ತು. ಅಲ್ಲೆಲ್ಲೋ ಜಗುಲಿಯ ಮೇಲೆ ಕುಳಿತಿದ್ದ ನಮ್ಮ ತಾತನವರು (ಆಗ ಅವರಿಗೆ ಸುಮಾರು ಎಂಬತ್ತು ವರ್ಷ) ಆ ಹಾಡನ್ನು ಆಸ್ವಾದಿಸುತ್ತಾ ತಲೆದೂಗುತ್ತಿದ್ದರು; ಬಾಯಿಂದ "ಭೇಷ್ ಭೇಷ್..." ಎಂಬ ಉದ್ಗಾರ ಬೇರೆ. ಇದನ್ನು ಕಂಡ ನಮ್ಮ ತಾಯಿ, ನಮ್ಮ ಸೋದರತ್ತೆಗೆ (ನಮ್ಮ ತಾತನವರ ಮಗಳಿಗೆ) ಅದನ್ನು ತೋರಿಸಿ ನಗುತ್ತಿದ್ದರು. ನಮ್ಮತ್ತೆಗೋ ಒಂದು ರೀತಿ ಇರುಸುಮುರುಸು, ಮುಜುಗರ. ಸಾತ್ವಿಕರಾದ, ಋಜುಸ್ವಭಾವದವರಾದ, ಸಿನಿಮಾ ಮುಖವನ್ನೇ ನೋಡಿಲ್ಲದ ನಮ್ಮ ತಾತ ಈ ವಯಸ್ಸಿನಲ್ಲಿ ಅದಾವುದೋ ಶೃಂಗಾರದ ಹಾಡನ್ನು ಅಷ್ಟು public ಆಗಿ ಮೆಚ್ಚುವುದೆಂದರೇನು, ತಲೆದೂಗುವುದೆಂದರೇನು!

ಆದರೆ ನನಗೆ ಆಶ್ಚರ್ಯ, ಅವರು ಆ ಹಾಡನ್ನು ಮೆಚ್ಚಿದರೆ ಇವರಿಗೇನು? ಆ ಹಾಡಿನ ಸಂಗೀತ ಎಷ್ಟು ಸೊಗಸಾಗಿತ್ತೆಂದರೆ, ಸ್ವತಃ ಹಾಡುಗಾರರಾಗಿದ್ದ ನಮ್ಮ ತಾತನವರು ಅದನ್ನು ಮೆಚ್ಚಿ ತಲೆದೂಗದಿರಲು ಸಾಧ್ಯವೇ ಇರಲಿಲ್ಲ. ನಮ್ಮ ಅತ್ತೆ ಮತ್ತು ನಮ್ಮ ತಾತನವರ ಸಂಭಾಷಣೆ ಹೆಚ್ಚು ಕಡಿಮೆ ಹೀಗಿತ್ತು:

ನಮ್ಮತ್ತೆ: (ಇರುಸುಮುರುಸಿನಿಂದ, ಅಪ್ಪನ ಬಳಿ ಸಾರಿ) ಏನಪ್ಪ ಇದು ಅಸಹ್ಯ, ಹೋಗಿ ಹೋಗಿ ಈ ಹಾಡಿಗೆ ತಲೆತೂಗುತ್ತ ಇದೀಯಲ್ಲ

ತಾತ: ಯಾಕೇ ಪುಟ್ಟಾ, ಅದರ ಸಾಹಿತ್ಯ ನೋಡು, ಎಷ್ಟು ಸೊಗಸಾಗಿದೆ (ನನ್ನ ಸ್ವಗತ, ಅರೇ, ಸಾಹಿತ್ಯವೇ? ಅಥವಾ ಸಂಗೀತವೋ? ಸಾಹಿತ್ಯದಲ್ಲೇನಿದೆ!)

ನಮ್ಮತ್ತೆ: (ತಲೆ ಚಚ್ಚಿಕೊಳ್ಳುತ್ತಾ), ಬಡುಕೋಬೇಕು, ಅದರಲ್ಲೇನಿದೆಯಪ್ಪಾ ಅಂಥಾದ್ದು... ನೀನಂತೂ...

ನಮ್ಮ ತಾತ ಅದಕ್ಕೇನೂ ಉತ್ತರ ಕೊಡುವ ಗೋಜಿಗೆ ಹೋಗಲಿಲ್ಲ. ನಕ್ಕುಕೊಂಡು ಸುಮ್ಮನಾದರೆಂದು ನೆನಪು.

ಆಮೇಲೂ ಸುಮಾರು ಸಲ ಆ ಹಾಡನ್ನು ನೋಡಿದಾಗೆಲ್ಲ/ಕೇಳಿದಾಗೆಲ್ಲ ನಮ್ಮ ತಾಯಿ-ತಂದೆ ಆ ಘಟನೆಯನ್ನು ನೆನಪಿಸಿಕೊಂಡು ನಕ್ಕದ್ದಿದೆ; ಹಾಗೇ ಆ ಸಾಹಿತ್ಯದಲ್ಲಿ ತಾತನವರು ಮೆಚ್ಚಿದ್ದು ಏನಿದೆಯೆಂದು ನಾನು ತಲೆಕೆಡಿಸಿಕೊಂಡಿದ್ದೂ. ಆಮೇಲೊಂದುದಿನ, (ತಲೆಯಲ್ಲಿ ಕುಳಿತಿದ್ದ ಮದ'ನಾರಿ' ಕ್ಷಣಕಾಲ ಮರೆಯಾದಾಗ) ಇದ್ದಕ್ಕಿದ್ದಂತೆ ಹೊಳೆಯಿತು; ಅರೇ, ಮದನಾರಿಯೆಂದರೆ ಶಿವನಲ್ಲವೇ (ಮದನ + ಅರಿ)! ಜೊತೆಗೇ ನೆನಪಿಗೆ ಬಂತು, ತೆರೆಯಮೇಲೆ ಆ ಮದ'ನಾರಿ'ಯ ಮುಂದೆಯೇ ಕುಳಿತಿದ್ದ ಶಿವನ ಮೂರ್ತಿ; ಅರ್ಜುನ ಪೂಜಿಸುವಂತೆ ಅಭಿನಯಿಸುತ್ತಿದ್ದುದು ಆ ಮದನಾರಿಯನ್ನೇ! ಆಗ ಆ ಹಾಡಿನ ಪೂರ್ಣ ಸ್ವಾರಸ್ಯ ಅರಿವಿಗೆ ಬಂತು. ಈಗ ಮೊನ್ನೆ ಆ ಹಾಡನ್ನು ಮತ್ತೆ ನೋಡಿದಾಗ ಈ ಬಗ್ಗೆ ಬರೆಯಬೇಕೆನ್ನಿಸಿತು. ಕೇವಲ ಅದೊಂದು ಅರ್ಥಪಲ್ಲಟದಿಂದ ಇಡೀ ಹಾಡಿನ ರಸವೇ ಅದುಹೇಗೆ ಶೃಂಗಾರದಿಂದ ಭಕ್ತಿಗೆ ಬದಲಾಗುತ್ತದೆ ನೋಡಿ:

ಆರಾಧಿಸುವೇ ಮದನಾರಿ ಆದರಿಸು ನೀ ದಯ ತೋರಿ

ಅಂತರಂಗದಲಿ ನೆಲೆಸಿರುವೆ ಆಂತರ್ಯ ತಿಳಿಯದೆ ಏಕಿರುವೆ
ಸಂತತ ನಿನ್ನ ಸಹವಾಸ ನೀಡಿ ಸಂತೋಷದಿಂದೆನ್ನ ನಲಿಸೆಂದು ಕೋರುವೆ

ಮೈದೋರಿ ಮುಂದೆ ಸಹಕರಿಸು ಆ ಮಾರನುರವಣೆ ಪರಿಹರಿಸು
ಪ್ರೇಮಾಮೃತವನು ನೀನುಣಿಸು ತನ್ಮಯಗೊಳಿಸು ಮೈಮರೆಸು
ಚಿನ್ಮಯ ಭಾವ ತುಂಬುತ ಜೀವ ಆನಂದ ಆನಂದ ಆನಂದವಾಗಲಿ


ಇಡೀ ಹಾಡಿನ ಸಾಹಿತ್ಯ, ಎರಡು ಅರ್ಥಗಳಿಗೂ ಸಂಪೂರ್ಣ ಹೊಂದುತ್ತದೆ. ಬಳಸುವುದು ಒಂದೇ ಪದ, ಕೊಡುವುದು ಎರಡು ಅರ್ಥ (ಅದು ನೀವು ಈಗ ನೋಡುವ double-meaning ಅಲ್ಲ!). ಹೀಗೆ ಒಂದೇ ಪದ ಅಥವಾ ಪದಪುಂಜಗಳನ್ನು ಬಳಸಿ ವಿವಿದಾರ್ಥಗಳನ್ನು ಸೂಚಿಸುವುದಕ್ಕೆ ಅಲಂಕಾರದ ಪರಿಭಾಷೆಯಲ್ಲಿ ಶ್ಲೇಷೆಯೆನ್ನುತ್ತಾರೆ.

ಶ್ಲೇಷಾಲಂಕಾರ ಪ್ರತಿಭಾವಂತ ಕವಿಯೊಬ್ಬನ ಕೈಯಲ್ಲಿ ಉತ್ತಮ ಸಾಧನ. ಪ್ರಾಚೀನ-ಆಧುನಿಕ ಕವಿಗಳು ನಾಟಕಕಾರರು ಶ್ಲೇಷೆಯನ್ನು ಒಂದಿಲ್ಲೊಂದು ರೀತಿಯಲ್ಲಿ ಬಳಸುತ್ತಲೇ ಬಂದಿದ್ದಾರೆ. ಉದಾಹರಣೆಗೆ ಭಾಸನ "ಪ್ರತಿಜ್ಞಾಯೌಗಂಧರಾಯಣ" ನಾಟಕದ ನಾಂದಿ ಪದ್ಯವನ್ನು ನೋಡಿ:

ಪಾಂತು ವಾಸವದತ್ತಾಯೋ ಮಹಾಸೇನೋತಿ ವೀರ್ಯವಾನ್
ವತ್ಸರಾಜಸ್ತು ನಾಮ್ನಾ ಸ ಶಕ್ತಿರ್ಯೌಗಂಧರಾಯಣಃ

(ವಾಸವದತ್ತಾಭ್ಯುದಯ ಮಹಾಸೇನ ಬಹುವೀರ್ಯಯುತ ವತ್ಸರಾಜ
ಶಕ್ತಿಯ ತಳೆದಿಹ ಯೌಗಂಧರಾಯಣ ಕರುಣದಿ ಕಾಪಾಡಲೆಮ್ಮ - ಅನು: ಸಿ.ಪಿ.ಕೆ)


ಸ್ಥೂಲವಾಗಿ ಅದರ ಅರ್ಥ ಹೀಗೆ. ವಾಸವ (ಇಂದ್ರ)ನಿಗೆ ಜೀವನವನ್ನು (ಆಯು = ಜೀವನ, ಅಭ್ಯುದಯ) ನೀಡಿದ, ಅತಿ ವೀರ್ಯವಂತನೂ ವತ್ಸರಾಜನೆಂಬ ಹೆಸರುಳ್ಳವನೂ, ಮಹಾಸೇನನೂ ಆದ ಶಕ್ತಿಯುತನಾದ (ಅಥವ ಶಕ್ತ್ಯಾಯುಧ - ವೇಲಾಯುಧವನ್ನು ತಳೆದ) ಯೌಗಂಧರಾಯಣನು (ಕುಮಾರಸ್ವಾಮಿಯು) ನಮ್ಮನ್ನು ಕಾಪಾಡಲಿ (ಕುಮಾರಸ್ವಾಮಿಗೆ ವತ್ಸರಾಜನೆಂದೂ ಹೆಸರಿದೆ - ಗಣಪತಿಯು ಜ್ಯೇಷ್ಠರಾಜನಾದರೆ, ಅವನ ತಮ್ಮ ಸುಬ್ರಹ್ಮಣ್ಯನು ವತ್ಸರಾಜ; ಹಾಗೆಯೇ ದೇವಸೇನಾನಿಯಾದ ಈತ ಮಹಾಸೇನ; ಅಂತೆಯೇ ಯುಗಂಧರ (ಶಿವ)ನ ಮಗನಾದ್ದರಿಂದ ಯೌಗಂಧರಾಯಣ)

ಇದು ಕುಮಾರಸ್ವಾಮಿಯನ್ನು ಕುರಿತ ಸ್ತುತಿಯಾದರೆ, ನಾಟಕದ ಮಟ್ಟದಲ್ಲಿ ಅದರ ಮುಖ್ಯಪಾತ್ರಗಳ ಸ್ತುತಿಯೂ ಹೌದು, ಹಾಗೆಯೇ ನಾಟಕದ ಸ್ಥೂಲ ಪೂರ್ವಸೂಚಿಕೆಯೂ ಹೌದು - ವಾಸವದತ್ತೆ (ಮತ್ತವಳ ಅಭ್ಯುದಯ - ವಿವಾಹವೇ ಈ ನಾಟಕದ ವಸ್ತು), ಆಕೆಯ ತಂದೆ ಮಹಾಸೇನ (ಪ್ರದ್ಯೋತ); ವೀರಶ್ರೇಷ್ಠನಾದ ವತ್ಸರಾಜ (ಉದಯನ); ಇವೆಲ್ಲದರ ಜೊತೆಗೆ ಈ ನಾಟಕದ ನಾಯಕ, ಚತುರನೂ ಶಕ್ತಿಯುತನೂ ಆದ ಮಂತ್ರಿ ಯೌಗಂಧರಾಯಣ; ವಾಸವದತ್ತೆಯ ನವಜೀವನಕ್ಕೆ ಕಾರಣವಾಗುವ ಅವನ ಯುಕ್ತಿ-ಚಾತುರ್ಯಗಳು - ಇವನ್ನು ಸೂತ್ರಧಾರ ಸ್ತುತಿಸುತ್ತಾ ನಾಟಕವನ್ನು ಪ್ರಾರಂಭಿಸುತ್ತಾನೆ.

ಹೀಗೆಯೇ ಈ ನಾಟಕದ ಮುಂದುವರಿಕೆಯಾದ "ಸ್ವಪ್ನವಾಸದತ್ತಾ" ನಾಟಕದಲ್ಲೂ ಇಂಥದ್ದೇ ಶ್ಲೇಷೆಯನ್ನು ಬಳಸುತ್ತಾನೆ ಕವಿ (ಅದು ಬಲರಾಮನ ಬಗ್ಗೆ ಹಾಗೂ ನಾಟಕದ ಪಾತ್ರಗಳ ಬಗ್ಗೆ - ಶ್ಲೋಕ ನೆನಪಿಲ್ಲ)

ಇನ್ನು ಕಾಳಿದಾಸನ ಬಹು ಪರಿಚಿತ ಸಾಲು "ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ"

ಜಗನ್ಮಾತಾಪಿತರಾದ (ಪಿತರೌ = ತಂದೆ-ತಾಯಿಯ ಜೋಡಿಯನ್ನು ಒಟ್ಟಾಗಿ ಸೂಚಿಸಿದಾಗ) ಪಾರ್ವತೀ ಪರಮೇಶ್ವರನ್ನು ವಂದಿಸುತ್ತೇನೆ, ಇದು ಒಂದು ಅರ್ಥವಾದರೆ, ಜಗಜ್ಜನಕರಾದ ಪಾರ್ವತೀಪ (ಪಾರ್ವತೀ ಪತಿ = ಶಿವ) ಹಾಗೂ ರಮೇಶ್ವರ (ರಮಾಪತಿ = ವಿಷ್ಣು) ಇವರನ್ನು ವಂದಿಸುತ್ತೇನೆ (ಇಲ್ಲಿ ಕವಿ "ಪಿತರೌ" ಎಂಬ ದ್ವಿ ವಚನವನ್ನು ಎಷ್ಟು ಚಾತುರ್ಯದಿಂದ ಬಳಸಿದ್ದಾನೆ ಎಂಬುದನ್ನು ಗಮನಿಸಬಹುದು)

[ಅಡಿಟಿಪ್ಪಣಿ: "ಪಾರ್ವತೀಪ + ರಮೇಶ್ವರೌ" ಎಂಬ ಛೇಧನ "ಜಗತಃ ಪಿತರೌ" ಎಂಬ ದ್ವಿವಚನದ ಸಂದರ್ಭದಲ್ಲಿ ವ್ಯಾಕರಣದ ದೃಷ್ಟಿಯಿಂದ ಅಸಾಧುವೆಂದೂ, "ವಾಕ್" ಎಂಬ ಸ್ತ್ರೀಲಿಂಗಪದಕ್ಕೂ "ಅರ್ಥ" ಎಂಬ ಪುಲ್ಲಿಂಗಪದಕ್ಕೂ ಸಂವಾದಿಯಾಗಿ "ಪಾರ್ವತೀ ಪರಮೇಶ್ವರೌ" ಎಂಬ ಹೋಲಿಕೆ ಬರುವುದರಿಂದ, ಪಾರ್ವತೀಪ ಹಾಗೂ ರಮೇಶ್ವರ ಎಂಬ ದ್ವಿ ಪುಲ್ಲಿಂಗ ಪದಗಳ ಬಳಕೆ ಆಲಂಕಾರಿಕವಾಗೂ ಅಸಾಧುವೆಂದೂ, ತನ್ನ ಕಾವ್ಯಗಳಲ್ಲೆಲ್ಲಾ ಅಸಾಧಾರಣ ವ್ಯಾಕರಣ ಪ್ರಜ್ಞೆ ಮೆರೆಯುವ ಕಾಳಿದಾಸ ಕೇವಲ ಸಣ್ಣ ಕಾವ್ಯಪ್ರಯೋಜನಕ್ಕೆ ಇಂಧಾ ವ್ಯಾಕರಣದೋಷಕ್ಕೆಡೆಗೊಡುವುದು ಅಸಂಭವವೆಂದೂ ಆದ್ದರಿಂದ ಇಲ್ಲಿ ಶ್ಲೇಷೆಯನ್ನು ಹುಡುಕಹೊರಡುವುದು ವ್ಯರ್ಥವೆಂದೂ ವಿದ್ವಾಂಸರ ಅಭಿಪ್ರಾಯ. ಹೆಚ್ಚಿನ ವಿವರಗಳಿಗೆ ಶ್ರೀ ವಿವೇಕರ ಪ್ರತಿಕ್ರಿಯಾರೂಪದ ಲೇಖನವನ್ನು ನೋಡಿ, ಕಾಮೆಂಟಿನಲ್ಲಿ]


ಇನ್ನು ಕನ್ನಡಕ್ಕೆ ಬಂದರೆ, "ಕವಿರಾಜಮಾರ್ಗ"ದ ಈ ಮಂಗಲಾಚರಣೆಯ ಪದ್ಯವನ್ನು ನೋಡಿ:

ಶ್ರೀವಿಶದ ವರ್ಣೆ ಮಧುರಾ
ರಾವೋಚಿತೆ ಚತುರ ರುಚಿರ ಪದರಚನೆ ಚಿರಂ
ದೇವಿ ಸರಸ್ವತಿ ಹಂಸೀ
ಭಾವದಿ ನೆಲೆಗೊಳ್ಗೆ ಕೂರ್ತು ಮನ್ಮಾನಸದೊಳ್

ಶ್ರೀ ವಿಶದವರ್ಣೆ (ಮಂಗಳಕರವಾದ, ಶುಭ್ರವಾದ ಬಿಳೀ ಬಣ್ಣವುಳ್ಳವಳು), ಮಧುರಾರಾವೋಚಿತೆ (ಮಧುರವಾದ ಸ್ತುತಿಗೆ ಅರ್ಹಳು), ಚತುರ ರುಚಿರ ಪದರಚನೆ (ಸುಂದರವಾದ ಸುಲಲಿತವಾದ ನಡೆಯುಳ್ಳವಳು) ಚಿರಂದೇವಿ (ಶಾಶ್ವತಿ - "ಚಿರಂಜೀವಿ"ಯಂತೆ, ಚಿರಂದೇವಿ) ಸರಸ್ವತಿ, ಹಂಸೀ ಭಾವದಿ ನೆಲೆಗೊಳ್ಗೆ ಕೂರ್ತು ಮನ್ಮಾನಸದೊಳ್ (ಹಂಸವು ಮಾನಸ ಸರೋವರದಲ್ಲಿ ನೆಲೆಗೊಳ್ಳುವಂತೆ, ನೀನು ನನ್ನ ಮನಸ್ಸಿನಲ್ಲಿ ನೆಲೆಸು);

ಮತ್ತೆ, ಶ್ರೀ ವಿಶದವರ್ಣೆ (ಮಂಗಳಕರವಾದ ಸ್ಫುಟವಾದ ಅಕ್ಷರಗಳನ್ನುಳ್ಳವಳು - ವರ್ಣ = ಅಕ್ಷರ), ಮಧುರಾರಾವೋಚಿತೆ (ಮಧುರವಾದ ನುಡಿಯನ್ನು ಹೊಂದಿದವಳು = ಭಾಷೆ ಮಧುರವಾಗಿದೆ ಎಂಬ ಅಭಿಪ್ರಾಯ), ಚತುರ ರುಚಿರ ಪದರಚನೆ (ಸುಂದರವಾದ ಸುಲಲಿತವಾದ ಪದರಚನೆಯ ಸಾಮರ್ಥ್ಯವುಳ್ಳವಳು) ಚಿರಂದೇವಿ (ಶಾಶ್ವತಿ - ಅಕ್ಷರ ಶಾಶ್ವತ "ಅ+ಕ್ಷರ = ನಾಶವಿಲ್ಲದ್ದು) ಸರಸ್ವತಿ (ಭಾಷೆಗೆ ಸರಸ್ವತಿ ಎಂದೂ ಪರ್ಯಾಯವುಂಟು) ಹಂಸೀ ಭಾವದಿ ನೆಲೆಗೊಳ್ಗೆ ಕೂರ್ತು ಮನ್ಮಾನಸದೊಳ್ (ಹಂಸವು ಮಾನಸ ಸರೋವರದಲ್ಲಿ ನೆಲೆಗೊಳ್ಳುವಂತೆ, ನೀನು ನನ್ನ ಮನಸ್ಸಿನಲ್ಲಿ ನೆಲೆಸು) - ಇದು ಮಾತಿನ ಅಧಿದೇವಿಯಾದ ವಾಗ್ದೇವಿಯನ್ನು (ವಾಗ್ದೇವಿ = ಸರಸ್ವತಿ, ಮತ್ತೆ) ಕುರಿತ ಅರ್ಥ. ಮೊದಲ ಅರ್ಥದಲ್ಲಿ ಸರಸ್ವತಿಯ ದೈವೀ ಸ್ವರೂಪದ ವರ್ಣನೆಯಿದ್ದರೆ, ಎರಡನೆಯ ಅರ್ಥದಲ್ಲಿ ಆಕೆಯ ವಾಕ್ ಸ್ವರೂಪದ ವರ್ಣನೆಯಿದೆ. ಈ ರೀತಿ ವಿವಿಧಾರ್ಥಗಳನ್ನು ಹೊಳೆಸುವುದೂ ಮಾತಿನ ಶಕ್ತಿಯೇ ತಾನೆ? ಇದು ವಾಗ್ದೇವಿಯನ್ನು ಸ್ತುತಿಸುವ ಈ ಶ್ಲೋಕದ ಚಮತ್ಕಾರ.

ಇದೇ ಬಗೆಯ ಶ್ಲೇಷೆಯನ್ನು ಕವಿ ಮುದ್ದಣ ಹೇಗೆ ತರುತ್ತಾನೆ ನೋಡಿ ("ಶ್ರೀರಾಮ ಪಟ್ಟಾಭಿಷೇಕ" ಕಾವ್ಯದ ಮಂಗಲಾಚರಣೆಯಿಂದ):

ಹರಿಗೆರಗಿ ಸೋಮನಂ ನುತಿಸುತೆ ಮನಂದಣಿಯೆ
ಹರಿವಾಹನನ ಬಲಂಗೊಂಡು ಹರಿಪುತ್ರರಂ
ಹರಿಸುತಾದ್ಯರ್ಗೆ ತಲೆವಾಗಿ ಗುರು ಕವಿ ಬುಧರ ಪದಕಮಲಮಂ ಧ್ಯಾನಿಸಿ
ಹರಿಗೆರಗಿ ಸೋಮನಂ ನುತಿಸುತೆ ಮನಂದಣಿಯೆ
ಹರಿವಾಹನನ ಬಲಂಗೊಂಡು ಹರಿಪುತ್ರರಂ
ಹರಿಸುತಾದ್ಯರ್ಗೆ ತಲೆವಾಗಿ ಗುರು ಕವಿ ಬುಧರ ಪದಕಮಲಮಂ ಧ್ಯಾನಿಪೆಂ


ಹರಿ (ವಿಷ್ಣು)ಗೆರಗಿ, ಸೋಮ (ಶಿವ)ನಂ ನುತಿಸುತೆ ಮನಂದಣಿಯೆ, ಹರಿವಾಹನನ (ಗರುಡ?) ಬಲಂಗೊಂಡು ಹರಿಪುತ್ರರಂ (ಬ್ರಹ್ಮ) ಹರಿಸುತಾದ್ಯರ್ಗೆ (ಹನುಮನೇ ಮೊದಲಾದ ಕಪಿಶ್ರೇಷ್ಠರಿಗೆ - ಹರಿ = ಕಪಿ) ತಲೆವಾಗಿ ಗುರು (ಗುರುಗಳು) ಕವಿ (ಕವಿಗಳು/ಸಹೃದಯರು) ಬುಧ (ಪಂಡಿತ/ಜ್ಞಾನಿ)ರ ಪದಕಮಲಮಂ ಧ್ಯಾನಿಸಿ; ಮತ್ತೆ ಹರಿ (ಸೂರ್ಯ)ಗೆರಗಿ, ಸೋಮ (ಚಂದ್ರ)ನಂ ನುತಿಸುತೆ, ಮನಂದಣಿಯೆ ಹರಿವಾಹನ (ಮೇಷವಾಹನ = ಮಂಗಳ) ನ ಬಲಂಗೊಂಡು, ಹರಿಪುತ್ರರಂ (ಹರಿ(ಸೂರ್ಯ)ಪುತ್ರ = ಶನಿ) ಹರಿಸುತಾದ್ಯರ್ಗೆ (ಹರಿ=ಹಾವು; ಹಾವಿನಿಂದ ಹುಟ್ಟಿದವರು (?) ರಾಹುಕೇತು) ತಲೆವಾಗಿ, ಗುರು (ಗುರು) ಕವಿ (ಶುಕ್ರ) ಬುಧ (ಕವಿ = ಬುಧ)ರ ಪದಕಮಲಮಂ ಧ್ಯಾನಿಸುವೆ.

ಷಟ್ಪದಿಯ ಎರಡೂ ಅರ್ಧಗಳಲ್ಲಿ ಒಂದೇ ಪದಗಳನ್ನು ಬಳಸಿದರೂ ಮೊದಲ ಅರ್ಧದಲ್ಲಿ ತ್ರಿಮೂರ್ತಿಗಳು, ಗುರು-ಹಿರಿಯರನ್ನು ವಂದಿಸುವ ಕವಿ, ಎರಡನೇ ಅರ್ಧದಲ್ಲಿ ಅದೇ ಪದಗಳನ್ನು ಬಳಸಿ ನವಗ್ರಹಗಳನ್ನು ವಂದಿಸುತ್ತಾನೆ. ಈ ಷಟ್ಪದಿಯಲ್ಲಿ ವಿಷಯದ ಹರಿವಿನಲ್ಲಿ, ಅನ್ವಯದಲ್ಲಿ ಅಷ್ಟು ಸ್ಪಷ್ಟತೆ ಕಾಣುವುದಿಲ್ಲ, ಆದರೂ ಶ್ಲೇಷೆಗೆ ಇದೊಂದು ಉದಾಹರಣೆಯೆಂದು ಇಲ್ಲಿ ಕೊಟ್ಟಿದ್ದೇನೆ.

ಇದೆಲ್ಲಾ ಬುದ್ಧಿಯ ಚಮತ್ಕಾರವಾಯಿತು; ಪ್ರಯತ್ನ ಪಟ್ಟು ಬರೆಯದೇ ಬಂದದ್ದಲ್ಲ, ಪ್ರಯತ್ನ ಪಟ್ಟು ಅರಿಯದೇ ಅರ್ಥವಾಗುವುದಲ್ಲ. ಆದರೆ ಸ್ವಯಂಪ್ರಭೆಯಿರುವ ಕಾವ್ಯದ ಮಿಂಚಿಲ್ಲದಿದ್ದರೆ ಅದಾವ ಅಲಂಕಾರ ತಾನೆ ಮಿನುಗೀತು? ಶ್ರೀ ಎನ್ಕೆಯವರು ಬೇಂದ್ರೆಯರ ಬಗ್ಗೆ ಆಗಾಗ ಹೇಳುತ್ತಿದ್ದ ಘಟನೆಯೊಂದು ನೆನಪಿಗೆ ಬರುತ್ತದೆ. ಬೇಂದ್ರೆಯವರು ಕೆಲ ಮಿತ್ರರೊಡನೆ ಇನ್ನೊಬ್ಬ ಮಿತ್ರರ ಮನೆಗೆ ಹೋಗಿದ್ದರಂತೆ. ಮಿತ್ರರು ಹೊರಗೆಲ್ಲೋ ಹೋಗಿದ್ದರಿಂದ, ಸ್ವಲ್ಪ ಕಾಯಬೇಕಾಯಿತು. ಅವರು ಬರುವವರೆಗೆ ಹೀಗೇ ಸ್ವಲ್ಪ ಸುತ್ತಾಡಿ ಬರೋಣ ಎಂದ ಮಿತ್ರರ ಸಲಹೆಗೆ ಒಪ್ಪದ ಬೇಂದ್ರೆ, ಇತರರನ್ನು ಸುತ್ತಲು ಕಳುಹಿಸಿ ಮನೆಯಲ್ಲೇ ಉಳಿದರಂತೆ. ಅವರನ್ನು ಉಪಚರಿಸಲು ಮನೆಯೊಡತಿ ಒಂದು ತಟ್ಟೆಯಲ್ಲಿ ದೊಡ್ಡ ತಂಬಿಟ್ಟು ತಂದಿತ್ತರಂತೆ. ಅದನ್ನು ತಿಂದು ಮುಗಿಸುವ ವೇಳೆಗೆ ಹಿಂದಿರುಗಿದ ಇತರ ಮಿತ್ರರು, ತಮ್ಮನ್ನೆಲ್ಲಾ ಬಿಟ್ಟು ಬೇಂದ್ರೆ ತಂಬಿಟ್ಟು ತಿಂದರು ಎಂದು ಆಕ್ಷೇಪಿಸಿದಾಗ ಬೇಂದ್ರೆ ಉತ್ತರ "ನೀವ್ ನಂಬಿಟ್ ಹ್ವಾದ್ರಿ, ನಾವ್ ತಂಬಿಟ್ ತಿಂದ್ವಿ" (ನೀವು ನಮ್ಮನ್ನ ಬಿಟ್ಟು ಹೋದಿರಿ, ನಾವು ತಮ್ಮನ್ನ ಬಿಟ್ಟು ತಿಂದೆವು)

ಅ.ರಾ.ಮಿತ್ರರು ಶ್ಲೇಷಾಲಂಕಾರಕ್ಕೆ ಬಹು ಸೊಗಸಾದ ಉದಾಹರಣೆಯೊಂದನ್ನು ರಚಿಸಿ ಕೊಟ್ಟಿದ್ದಾರೆ, ತಮ್ಮ "ಛಂದೋಮಿತ್ರ" ಪುಸ್ತಕದಲ್ಲಿ:

ಪೀತವರ್ಣಪ್ರೀತೆ ಗೃಹಪತ್ರಕರ್ತೆ
ದೋಷದ ಕರಡು ತಿದ್ದದ ಮನೆಯ ಸಂಪಾದಕ
ಇಬ್ಬರಿಂ ಹಾಳಾಯ್ತು ಮನೆಯಚ್ಚುಕೂಟ
ಬತ್ತಿ ಹೋಯಿತು ಕೇಳು ಅರ್ಥ ಜೀವನದಿ

ಪೀತ = ಹಳದಿ ಪತ್ರಿಕೋದ್ಯಮ (yellow press - useless gossip), ಚಿನ್ನ ಕೂಡ
ಗೃಹಪತ್ರಕರ್ತೆ = ಗೃಹಿಣಿಯೆಂಬ ಪತ್ರಕರ್ತೆ, ಗೃಹಪತ್ರ (ಮನೆಯ ಖರ್ಚುವೆಚ್ಚ) ನೋಡುವವಳು ಕೂಡ
ಸಂಪಾದಕ = ಪತ್ರಿಕಾ ಸಂಪಾದಕ, ಹಣ ಸಂಪಾದಿಸುವವನು (ಯಜಮಾನ) ಎಂದು ಕೂಡ
ಅರ್ಥ = ಸ್ವಾರಸ್ಯ, ಹಣ ಕೂಡ
ಜೀವನದಿ = ಜೀವನದಲ್ಲಿ, ಜೀವ-ನದಿ ಕೂಡ (ಅರ್ಥ (ಹಣ)ವೆಂಬ ಜೀವನದಿ ಈ ದುಂದುವೆಚ್ಚದಿಂದ ಬತ್ತಿಹೋಯಿತು ಎಂದೂ ಅರ್ಥ)

ಶ್ಲೇಷೆಯ ಶುದ್ಧ ರೂಪದಲ್ಲಿ, ಒಂದೇ ಪದಕ್ಕೆ ಸಹಜವಾಗೇ ವಿವಿಧ ಅರ್ಥಗಳಿರುತ್ತವೆ. ಈ ಅರ್ಥಗಳು ಸಹಜ ನಿಘಂಟು ಅರ್ಥಗಳೇ ಹೊರತು ಸಾಧಿತ (ವ್ಯಂಗ್ಯ) ಅರ್ಥಗಳಲ್ಲ. ಉದಾ: ಅತ್ತೆ, ನಿನ್ನಿಂದ ನಾನತ್ತೆ. ಇಲ್ಲಿ ಅತ್ತೆ (ಗಂಡನ ಅಥವ ಹೆಂಡತಿಯ ತಾಯಿ) ಮತ್ತು (ಅತ್ತೆ, ಅಳುವುದರ ಭೂತಕಾಲ) ಎರಡೂ ನಿಘಂಟಿನ ಅರ್ಥಗಳೇ. ಹೀಗೆ ಪದಗಳನ್ನು ಒಡೆಯದೆಯೇ ಅದರ ವಿವಿಧಾರ್ಥಗಳನ್ನು ಚಮತ್ಕಾರಿಕವಾಗಿ ಬಳಸಿಕೊಳ್ಳುವುದಕ್ಕೆ ಅಭಂಗಶ್ಲೇಷೆ ಎನ್ನುತ್ತಾರೆ. ದುಂಡಿರಾಜರ ಈ ಹನಿ ನೋಡಿ:

ಕ್ಯಾಶ್ ಕೌಂಟರಿನ
ಹುಡುಗಿಯರ
ಮುಖದಲ್ಲಿ ನಗು
ಹುಡುಕಿದರೂ ಸಿಗದು
ಅದಕ್ಕೆ ಇರಬೇಕು
ಹಾಕಿದ್ದಾರೆ ಬೋರ್ಡು
"ನಗದು"


ಒಂದೇ ಪದವನ್ನು ಚಮತ್ಕಾರಿಕವಾಗಿ ಒಡೆಯುವುದರ ಮೂಲಕವೂ ಶ್ಲೇಷೆ ಉದಿಸುತ್ತದೆ. ಇದನ್ನು ಸಭಂಗ ಶ್ಲೇಷೆ ಎನ್ನುತ್ತಾರೆ ಉದಾ: ಭೀಮ"ನ ಗದೆ"ಯೆತ್ತುವ ನಿನ್ನ ಸಾಹಸಕೆ ಅವ "ನಗದೆ" ಇರಲು ಹೇಗೆ ಸಾಧ್ಯ? ಈ ಕೆಳಗಿನ ಸುಂದರ ಸಾಲುಗಳನ್ನು ನೋಡಿ:

ಯಥಾ ನಯತಿ ಕೈಲಾಸಂ ನಗಂ ಗಾನ ಸರಸ್ವತೀ
ತಥಾ ನಯತಿ ಕೈಲಾಸಂ ನ ಗಂಗಾ ನ ಸರಸ್ವತೀ ||

ಇಲ್ಲಿನ "ನಗಂ ಗಾನ" ಹಾಗೂ "ನ ಗಂಗಾ ನ" ಎಂಬ ಒಡೆಯುವಿಕೆಯನ್ನು ಗಮನಿಸಿ.

ಮಾತಿನಲ್ಲಿ ಅಲ್ಲಲ್ಲಿ ಹೀಗೆ ಮಿಂಚಿ ಮರೆಯಾಗುವ ಶ್ಲೇಷೆ ಮನಸ್ಸಿಗೆ ಹಿತವೆನ್ನಿಸಿದರೂ, ಅದು ಅತಿಯಾದರೆ ತಲೆಚಿಟ್ಟು ಹಿಡಿಯಬಹುದಲ್ಲವೇ? ಶ್ಲೇಷೆಯ ಅತಿ ಬಳಕೆ ಚಿತ್ರಕವಿತ್ವವೆಂಬ ಅಧಮ ಕಾವ್ಯಪ್ರಕಾರವಾಗಿಬಿಡುತ್ತದೆಂದು ಆಲಂಕಾರಿಕರ ಮತ. ಆದ್ದರಿಂದ ಇದನ್ನು ಸೂಕ್ಷ್ಮವಾಗಿ, ರಸಪೂರ್ಣವಾಗಿ ಬಳಸುವ ಔಚಿತ್ಯಪ್ರಜ್ಞೆ ಅತಿ ಅವಶ್ಯಕ.

ಮೇಲಿನ ಚರ್ಚೆಯಲ್ಲಿ ನಾವು ಗಮನಿಸಿದ ಮುಖ್ಯ ಅಂಶವೆಂದರೆ, ಶ್ಲೇಷೆಯಲ್ಲಿ ಪದವೊಂದನ್ನು ವಿವಿಧಾರ್ಥಗಳಲ್ಲಿ ಬಳಸಿದರೂ, ಆ ವಿವಿಧಾರ್ಥಗಳು ಆ ಪದಕ್ಕೆ ಸಹಜವಾಗಿಯೇ ನಿಘಂಟಿನಲ್ಲಿ ದೊರಕೊಂಡಿರುವುದು; ಅವಾವುವೂ ಸಾಧಿತ ಅಥವ ವ್ಯಂಗ್ಯಾರ್ಥಗಳಲ್ಲ. ಉದಾಹರಣೆಗೆ ಮಾಮೂಲು ಎಂಬ ಪದಕ್ಕೆ ಇರುವ ಅರ್ಥ, ಸಾಧಾರಣವಾಗಿ, ಸಾಮಾನ್ಯವಾಗಿ, routine, customary ಇತ್ಯಾದಿ. ಆದರೆ ಅದೇ ಲಂಚವೆಂಬ ವಿಶೇಷಾರ್ಥದಲ್ಲೂ ಬಳಕೆಯಲ್ಲಿದೆ. ಆದ್ದರಿಂದ ಬಳಕೆಯಲ್ಲಿ ಮಾಮೂಲು ಎನ್ನುವ ಪದವನ್ನು ಹೀಗೆ ಎರಡರ್ಥದಲ್ಲಿ ಬಳಸಿದರೆ, ಅದು ಶ್ಲೇಷೆಯಾಗುವುದಲ್ಲ, ಬದಲಿಗೆ ವ್ಯಂಜನಾವೃತ್ತಿಯೆಂಬ ಮತ್ತೊಂದು ಅಲಂಕಾರವಾಗುತ್ತದೆ. ವ್ಯಂಜನಾವೃತ್ತಿಯ ಮಿತಿಯೆಂದರೆ, ಈ ವ್ಯಂಗ್ಯಾರ್ಥ ಎಷ್ಟೆಂದರೂ ಸಂದರ್ಭದ ಚಮತ್ಕಾರದಿಂದ ಮೂಡಿರುವ ಅರ್ಥವಾದ್ದರಿಂದ, ಮೊದಲ ಕೆಲವು ಪ್ರಯೋಗಗಳಲ್ಲಿ ಚಮತ್ಕಾರಿಕವಾಗಿ ಸೊಗಸೆನ್ನಿಸಿದರೂ, ಅದರ ಮಿತಿಮೀರಿದ ಬಳಕೆ ತನ್ನ ಹೊಳಪು ಕಳೆದುಕೊಳ್ಳುತ್ತದೆ. "ಯಡಿಯೂರಪ್ಪನವರ ಸರ್ಕಾರ ’ಶೋಭಾ’ಯಮಾನವಾಗಿ ಮಿನುಗುತ್ತದೆ" ಎಂದಂತೆ!


"Pun" ಎನ್ನುವುದು ಶ್ಲೇಷೆ ಮತ್ತು ವ್ಯಂಜನಾವೃತ್ತಿಗಳ ನಡುವೆ ಸಂಚರಿಸುವ ಇಂಗ್ಲಿಷ್ ಸಮಾನಾಂತರ. Ogden Nash ಪನ್ನಿನ ಅನಂತ ಸಾಧ್ಯತೆಗಳನ್ನು ಪರಿಚಯಿಸಿದ ಕವಿ. ಅವನ ಈ ಸಾಲುಗಳನ್ನು ನೋಡಿ:

There was an old man in the trunk
Who inquired of his wife, "Am I drunk?"
She replied with regret
"I'm afraid so, my pet"
And he answered, "It's just as I thunk."

ಕುಡುಕ ಗಂಡ ಹೆಂಡತಿಯನ್ನು ಕೇಳುತ್ತಾನೆ, "ನಾನು ಕುಡಿದಿದ್ದೀನಾ?" ಅವಳು ಉತ್ತರಿಸುತ್ತಾಳೆ, "ಹೌದು ಮುದ್ದೂ". ಅದಕ್ಕವನು ಹೇಳುತ್ತಾನೆ, "ಅದೇ ನಾನೂ ಯೋಚಿಸಿದ್ದು". ಇದು ಭಾಷಾಂತರಕ್ಕೆ ಸಿಕ್ಕುವ pun ಅಲ್ಲ. ಇಲ್ಲಿ ಸ್ವಾರಸ್ಯವಿರುವುದು ಕೊನೇ ಸಾಲಿನ "thunk" ಎನ್ನುವ ಪದದಲ್ಲಿ. Drink ಎನ್ನುವುದು Drunk ಆದಂತೆ, ಕುಡುಕನ ಬಾಯಲ್ಲಿ Think ಅನ್ನುವುದು Thunk (Thought ಬದಲಿಗೆ). ಅದೇ ಇಲ್ಲಿನ Pun. ಪದವನ್ನು ತಿರುಚಿ Pun ಉತ್ಪಾದಿಸುವುದಕ್ಕೆ ಇದು ಉದಾಹರಣೆ. ಮತ್ತೆ ಅವ ಅದೆಷ್ಟು ಕುಡುಕನಾಗಿಬಿಟ್ಟಿದ್ದಾನೆಂದರೆ, ಅವನ ಹೆಂಡತಿಯ ಪಾಲಿಗೆ ಅವನೊಂದು ಪೆಟ್ಟಿಗೆಯಲ್ಲಿ ಹೊತ್ತೊಯ್ಯುವ ಸಾಕುಪ್ರಾಣಿಯಂತೆ (trunk ಮತ್ತು pet ಅನ್ನುವುದರ pun ಇದು). ಅದಕ್ಕೇ ಅವನು "honey" ಅಲ್ಲ, "sweatheart" ಅಲ್ಲ, "pet". ಮತ್ತೆ Trunk - Drunk; (Re)gret - Pet ಈ ಪ್ರಾಸಗಳ ಜೊತೆಗೆ ಕೊನೆಯ ಸಾಲಿನಲ್ಲಿ Thunk ಎನ್ನುವ ವಿಲಕ್ಷಣ ಪ್ರಾಸವೂ ಸೇರಿ ಅದಕ್ಕೆ ಮತ್ತಷ್ಟು ಹಾಸ್ಯದ ಲೇಪ ಕೊಡುತ್ತದೆ.

ಇದೇ ಉಸಿರಿನಲ್ಲಿ ವೈಯೆನ್ಕೆಯವರ ಒಂದು ಹನಿ ನೆನಪಿಗೆ ಬರುತ್ತದೆ:

ಕರುಣಾಳು ಬಾ ಬೆಳಕೆ
ಮಸುಕಿದೀ ಪಬ್ಬಿನಲಿ
ಕೈ ಹಿಡಿದು ಕುಡಿಸೆನ್ನನು

ಸುಪ್ರಸಿದ್ಧವಾದ ಸಾಲೊಂದನ್ನು ತೆಗೆದುಕೊಂಡು ಅದಕ್ಕೆ ವಿಲಕ್ಷಣ ತಿರುವನ್ನು ಕೊಡುವುದು ಇಲ್ಲಿನ pun; ಹಾಗೆಯೇ ನಡೆಯುವನಿಗೆಂತೋ ಅಂತೆಯೇ ಕುಡಿಯುವವನಿಗೂ ಬೇಕು ಬೆಳಕು (ಅವನಿಗೆ ಹೆಚ್ಚೇ ಬೇಕು, ಏಕೆಂದರೆ ಅವನ "ಮಬ್ಬು" ಹೆಚ್ಚು) ಅನ್ನುವುದು ಕೂಡ; ಪಬ್ಬೇ ಮಬ್ಬಾಗುವ pun ಕೂಡ ಇಲ್ಲಿದೆ

Pun ಸಾಹಿತ್ಯದ ಬೆಳೆ ಆಧುನಿಕ ಕನ್ನಡದಲ್ಲಿ ಸಾಕಷ್ಟು ಹುಲುಸಾಗಿಯೇ ಬೆಳೆದಿದೆ. ಕೈಲಾಸಂರಿಂದ ಹಿಡಿದು ದುಂಡಿರಾಜರವರೆಗೂ ಅನೇಕ punಡಿತರು ನಮ್ಮಲ್ಲಿದ್ದಾರೆ (ಕ್ಷಮಿಸಿ, ಈ punಡಿತ ಎನ್ನುವ ಶ್ಲೇಷೆಯೇ (ಹಾಗನ್ನಬಹುದೇ) ತನ್ನ ಅತಿ ಬಳಕೆಯಿಂದ ಕ್ಲೀಷೆ (cliche)ಯಾಗಿ ಹೋಗಿದೆ)

Punನ್ನಿನ ವಿಷಯಕ್ಕೆ ಬಂದರೆ ದುಂಡಿರಾಜರನ್ನು ಮರೆಯಲು ಸಾಧ್ಯವೇ ಇಲ್ಲ, ಆದರೆ ಸಮಸ್ಯೆಯೆಂದರೆ ಅವರ ಯಾವ ಹನಿಯನ್ನು ಉದಾಹರಿಸುವುದು ಯಾವುದನ್ನು ಬಿಡುವುದು? ಕಾವ್ಯ ಮಿಂಚಲು ಭಾಮಿನಿಯೇ ಆಗಬೇಕೇ, ಮಿನಿ ಆಗದೇ? ಅವರು ಹೇಳುತ್ತಾರೆ:

ಅಯ್ಯಾ ಕುಮಾರವ್ಯಾಸ
ನಾನು ನಿನ್ನ ದಾಸ
ನೀನು ಬರೆದದ್ದು ಭಾಮಿನಿ
ನನ್ನದೋ ಬರೀ 'ಮಿನಿ'


ಹಾಗೆಯೇ ಇನ್ನೊಂದು:

ಬ್ಯಾಂಕ್ ಜೀವನದ
ಏಕತಾನದಿಂದ
ರೋಸಿ ಹೋಗಿ
ಎಲ್ಲ ಮರೆತು ಹಾಯಾಗಿ
ಸುತ್ತಾಡಿ ಬರಲೆಂದು
ರೈಲು ಹತ್ತಿದರೆ ಅಲ್ಲೂ
ಅದೇ ಸೊಲ್ಲು
ಚೆಕ್ ಬುಕ್ ಚೆಕ್ ಬುಕ್ ಚೆಕ್ ಬುಕ್

ಶ್ಲೇಷೆ ಅಥವ ಪನ್ನು ಬರೀ ಕಾವ್ಯದ ಪುಸ್ತಕಗಳಲ್ಲಿ ಮಾತ್ರ ಇರುವುದೆಂದು ತಿಳಿಯಬೇಡಿ ಮತ್ತೆ. ಬಹುಶಃ ಯಾವುದೇ ಪದಕ್ಕೂ ಬಳಕೆಯ ಬಲದಿಂದ ಶ್ಲೇಷೆಯ ಅಥವ ಪನ್ನಿನ 'ದಮ್' ಕೊಡಬಹುದೆನ್ನಿಸುತ್ತದೆ. ನಾ. ಕಸ್ತೂರಿಯವರು ಈ ಶ್ಲೇಷಾರ್ಥ ವ್ಯಂಗ್ಯಾರ್ಥಗಳನ್ನು ಸಂಗ್ರಹಿಸಿ ಒಂದು ಅರ್ಥಕೋಶವನ್ನೇ ರಚಿಸಿದ್ದಾರೆ, ಹೆಸರು "ಅನರ್ಥಕೋಶ"! ಅದರ ಒಂದೆರಡು ಎಂಟ್ರಿಗಳನ್ನು ನೋಡಿ:

ತುಪ್ಪ = ಪಾತ್ರೆಗೆ ಚಮಚೆಯಿಂದ ಬಡಿದಾಗ ಉಂಟಾಗುವ ಶಬ್ದವಿಶೇಷ
ಕೃದಂತ = ಕೃತಕ ಹಲ್ಲಿನ ಸೆಟ್ಟು


ಯಾರನ್ನಾದರೂ ಮೇಧಾವಿಗಳೆಂದು ಹೇಳಬೇಕಾದರೆ "ಬೃಹಸ್ಪತಿ" ಎನ್ನುತ್ತೇವೆ; ಹೀಯಾಳಿಸಬೇಕಾದರೆ ಕೂಡ! ನಮ್ಮಲ್ಲೊಬ್ಬರು "ಮೇಧಾವಿ" ಎಂಬ ಪದವನ್ನು ಅಪಭ್ರಂಶಿಸಿ "ಮೇದಾವಿ" ಎಂದೇ ಬಳಸುತ್ತಿದ್ದರು. ಈ ಅಪಭ್ರಂಶ ಉದ್ದೇಶಪೂರ್ವಕವೆಂದೇ ನನ್ನ ಗುಮಾನಿ; ಏಕೆಂದರೆ ಈ ಮಾರ್ಪಾಡು ಅವರಿಗೆ ಬೇಕಾದಾಗ ಅದನ್ನು ಶ್ಲೇಷೆಯಾಗಿಯೂ ಬಳಸುವ ಅನುಕೂಲವನ್ನಿತ್ತಿತ್ತು. ಯಾರನ್ನಾದರೂ "ಮೇದಾವಿ" ಎಂದು ಹೊಗಳುವಾಗ ಅದೊಂದು ನಿಷ್ಪಾಪಿ ಕಾಗುಣಿತದ ತಪ್ಪಾಗಿ ಕಾಣುತ್ತಿದ್ದರೂ, ಯಾರನ್ನಾದರೂ ತೆಗಳಬೇಕಾದಾಗ ಅವರು ಅದಕ್ಕಿಡುತ್ತಿದ್ದ ಅರ್ಥ "ಮೇದಾವಿ = ಮೇದುಕೊಂಡು ತಿರುಗುವವನು"

ಮತ್ತೆ ಕುಡುಕ ಅಪ್ಪನಿಗೆ ಮಗ ಬರೆಯುತ್ತಿದ್ದ ಪತ್ರದ ಒಕ್ಕಣೆ "’ತೀರ್ಥರೂಪು’ ತಂದೆಯವರಿಗೆ..."

ನನಗೆ ತಿಳಿದ ವಯೋವೃದ್ಧ ಪುರೋಹಿತರೊಬ್ಬರು ಪೌರೋಹಿತ್ಯಕ್ಕಾಗಿ ತಮ್ಮ ಬಳಿ ಬರುತ್ತಿದ್ದ ಕಕ್ಷಿದಾರರನ್ನು ಕೇಳುತ್ತಿದ್ದರು "ಮರ್ಯಾದೆ ಎಷ್ಟು ಕೊಡುತ್ತೀರಿ?" ಇಲ್ಲಿ "ಮರ್ಯಾದೆ" ಎಂದರೆ ದಕ್ಷಿಣೆ ಎಂದರ್ಥ.

ಎಷ್ಟೊಂದು ಪದಗಳು, ಬಳಸುವವರ ಪ್ರತಿಭಾಚಾತುರ್ಯದಿಂದ, ಬಳಕೆಯ ಸಾಮಾನ್ಯತೆಯಿಂದ ಪನ್ ಆಗಿ ಮಾರ್ಪಟ್ಟಿವೆ ನೋಡಿ - ಮಾಮೂಲು, ದಕ್ಷಿಣೆ, ಸಮಾಜ ಸೇವೆ, ಸತ್ಯಾಗ್ರಹ, ಅಹಿಂಸಾತ್ಮಕ ಹೋರಾಟ... ಅಷ್ಟೇಕೆ, "ಮಣ್ಣಿನ ಮಗ" ಎಂಬುದಕ್ಕಿಂತ ಉತ್ತಮ ಪನ್ ಬೇಕೆ!

21 comments:

Vivekanand P V said...

ಕವಿಯ ಪ್ರತಿಭೆ ಅನನ್ಯಸದೃಶವಾದುದು.

ಒಮ್ಮೆ ಶತಾವಧಾನಿ ಗಣೇಶರು ಹೇಳಿದ ಶ್ಲೇಷೆ: "ಅತ್ತೆ, ನೀವತ್ತೆಲ್ಲಿ ಹೋಗುವಿರಿ?" ಲೇಖನವನ್ನೋದಿ ಆಸ್ವಾದಿಸುವ ಓದುಗರಿಗೆ (ಜಾಲಜ್ಞಾನಪಿಪಾಸುಗಳಿಗೆ) ಇದರ ವಿಶ್ಲೇಷಣೆಯನ್ನು ಗೃಹಪಾಠವಾಗಿ ನೀಡಬಹುದು. :-)

ತುಂಬ ಸೊಗಸಾದ ಲೇಖನ. ಮತ್ತು ಅಷ್ಟೇ ಸೊಗಸಾದ ನಡೆಯು ಕೂಡ ಇಲ್ಲಿದೆ. ಮತ್ತಷ್ಟು ಲೇಖನಗಳನ್ನು ಕಾಯುತ್ತಾ,

ವಿವೇಕ.

bilimugilu said...

Manjunath,
Very Informative!!! ಶ್ಲೇಷೆ idara bagge oLLe maahiti. Luk forward to many more such educative articles :-)
Rgds,
Roopa

ಭಾವಜೀವಿ... said...

ಸೊಗಸಾದ ಲೇಖನ..!!
ವೈಯನ್ಕೆಯವರ ಪನ್‌ ಕೊಂಚ ತಪ್ಪಾಗಿರಬೇಕು ಅನ್ನಿಸುತ್ತಿದೆ. ನಾನು ಓದಿದ ಪ್ರಕಾರ ಅದು 'ಮಬ್ಬಿನಲಿ' ಬದಲಿಗೆ 'ಪಬ್ಬಿನಲಿ ' ಎಂದಾಗಬೇಕು.

Manjunatha Kollegala said...

ತಿದ್ದುಪಡಿಗೆ ಧನ್ಯವಾದ ಭಾವಜೀವಿಯವರೇ, ಈ ಪದ್ಯವನ್ನೂ ನಾನು ನೆನಪಿನ ಮಬ್ಬಿನಿಂದಲೇ (ಪಬ್ ಅಲ್ಲ) ಹೆಕ್ಕಿ ತಂದದ್ದು. ತಿದ್ದಿಕೊಂಡಿದ್ದೇನೆ.

Thanks Vivek and Roopa for your words

Susheel Sandeep said...

ಎಂದಿನಂತೆಯೇ ಮತ್ತೊಂದು ಇಂಟರೆಸ್ಟಿಂಗ್ ಲೇಖನ ಸರ್!
'ಮದನಾರಿ' ಹಾಡಿನಂತೇ ಲೇಖನವನ್ನೂ ಆಸ್ವಾದಿಸಿಕೊಂಡು ಓದಿಕೊಂಡೆ..
ವೈಎನ್ಕೆ, ಡುಂಡಿರಾಜ್ ರ ಅಪ್ರತಿಮ punಡಿತ್ಯದ ಸೊಗಸೇ ಸೊಗಸು. ಡುಂಡಿಯ ಮತ್ತೊಂದು ಅಲ್ಟ್ರಾ ಫೇಮಸ್ ಹನಿ ನೆನಪಾಯ್ತು -

ಅಕಸ್ಮಾತ್ ನನ್ನ ನೋಡಿ
ಅವಳು ನಕ್ಕಳು
ನಮಗೀಗ
ಮೂರು ಮಕ್ಕಳು

ಶ್ಲೇಷೆಯ ಬಗ್ಗೆ ಇಷ್ಟು ಸಲೀಸಾಗಿ ವಿವರವಾಗಿ ಬರೆದಿದ್ದು ನೋಡಿ ಸಂತಸವಾಯ್ತು!

sunaath said...

ಮಂಜುನಾಥ,
ಶ್ಲೇಷೆಗಳ ನಿಮ್ಮ ವಿಶ್ಲೇಷಣೆ ಓದಿ ಕುಣಿದಾಡುವಷ್ಟು ಸಂತೋಷವಾಯಿತು. ಎಲ್ಲೆಲ್ಲಿಂದೆಲ್ಲ ಹೆಕ್ಕಿ ಇಂತಹ ಮುತ್ತುಗಳನ್ನು ಕೊಟ್ಟಿದ್ದೀರಲ್ಲ. ಸಿನೆಮಾ ಹಾಡಿನಲ್ಲೂ ಸಹ ಇಂತಹ ಶ್ಲೇಷೆ ಇದೆಯಲ್ಲ ಎನ್ನುವದು ಗೊತ್ತಿರಲಿಲ್ಲ. ಅದನ್ನು ತಿಳಿಸಿದ ನಿಮಗೆ ಅನೇಕ ಧನ್ಯವಾದಗಳು.
By the way, ನಮ್ಮ ಸಿನೆಮಾ ಗೀತರಚನಾಕಾರರು ತುಂಬ ತಿಳಿದವರೇ ಆಗಿದ್ದರು ಎನ್ನುವದಕ್ಕೆ ಈ ಕೆಳಗಿನ ಗೀತೆಯನ್ನು ಗಮನಿಸಿರಿ:
"ತುಂಟಾ ತುಂಟಿ ಸೊಂಟಾ ಬಳಸಿ,ಜಂಟಿ ಕುಣಿದರೆ,
ಗಂಡೇ ಗಾಂಗು, ಹೆಣ್ಣೇ ಸಾಂಗು, ಡೆನ್ನೇ ಕ್ಯಾಬರೆ!"

ನಮ್ಮಲ್ಲಿ ಅನೇಕರು ‘ಕ್ಯಾಬರೆ’ ಎಂದರೆ ಒಂದು ತರಹದ ಕುಣಿತ ಎಂದು ತಿಳಿದಿದ್ದಾರೆ. ಆದರೆ ಈ ಗೀತೆ ಬರೆದ ಕವಿಗೆ
cabaret= a place where cabaret dance is performed ಎನ್ನುವ ನೈಜ ಅರ್ಥ ಗೊತ್ತಿದೆ!
ಅದಲ್ಲದೆ, ಗಂಡನ್ನು gongಇಗೂ, ಹೆಣ್ಣನ್ನು songಇಗೂ ಹೋಲಿಸಿರುವದೂ ಸಹ ಸಮಂಜಸವಾಗಿದೆ!

ಭಾಷೆಗೆ ಚೆಲವು ಕೊಡುವ ಇಂತಹ ಉದಾಹರಣೆಗಳನ್ನು ಮತ್ತೆ ಮತ್ತೆ ನೀಡಿರಿ ಎಂದು ಕೋರುತ್ತೇನೆ.

ಜಯಂತ ಬಾಬು said...

ಶ್ಲೇಷೆಯ ಬಗ್ಗೆ ಒಂದು ಸರಳ ಸುಂದರ ಲೇಖನ. ಪನ್ ನ ಹಲವು ಸಾಧ್ಯತೆಗಳನ್ನು ಕನ್ನಡ ಸಾಹಿತ್ಯ ದಲ್ಲಿ ಕಾಣಬೇಕಾಗಿದೆ. ಮತ್ತಷ್ಟು ಲೇಖನಗಳ ನಿರೀಕ್ಷೆಯಲ್ಲಿ ...

ಜಯಂತ್

Arun said...

ಅರಾದಿಸುವೆ ಮದ ’ನಾರಿ’ ಹಾಡಲ್ಲಿ ನಮಗೆ ಕಾಣುತ್ತಾ ಇದ್ದದ್ದು ನಾರಿ ಮಾತ್ರ....ಹೀಗು ಅರ್ಥ್ ಬರಬಹುದು ಅ೦ತ ಗೊತ್ತಾಯಿತು. ದನ್ಯವಾದ

Srikanth said...

ಎಂದಿನಂತೆ ಉತ್ತಮ ಬರಹ. ಇತರ ಮಿತ್ರರು ಈ ವಿಷಯವನ್ನು ಗಮನಿಸಿದ್ದಾರೆಯೋ ಇಲ್ಲವೊ ನನಗೆ ತಿಳಿದಿಲ್ಲ, ಆದರೆ ಮಂಜು ಅವರು ಸಾಮನ್ಯವಾಗಿ, ಸ್ವಾಭಾವಿಕವಾಗಿ ಮಾತನಾಡುವಾಗಲೂ ಶ್ಲೇಷಾಲಂಕಾರ ತಾಂಡವವಾಡುತ್ತಿರುತ್ತದೆ.

ಸುಶ್ಲೇಷೆಯ ಬಗ್ಗೆ ನನ್ನ ಕೆಲವು ಕುಚೇಷ್ಟೆಗಳು:

ಆಶ್ಲೇಷ : ಒಂದೇ ಹಾವು ಎರಡು ನಾಲಿಗೆ.
ಈ-ಶ್ಲೇಷ: ಎರಡು ಅರ್ಥ ಒಂದೇ ಸಾಲಿಗೆ.


ಒಂದೇ ಪದ ವಿವಿದಾರ್ಥಗಳನ್ನು ಸೂಚಿಸುವುದು - ಶ್ಲೇಷೆ
ಪದೇ ಪದೇ ಬಳಸಿದ್ದನ್ನೆ ಬಳಸುವುದು - ಕ್ಲೀಷೆ ( Cliche)
ಮತ್ತೆ ಮತ್ತೆ ಒಂದೇ ಹಾಡನ್ನು ಬಿತ್ತರಿಸುವುದು - ಉಷೆ
(ಬಹುಶಃ ನಿಮ್ಮ ಲೇಖನದ ಪ್ರಾಸ್ತಾವಿಕದಲ್ಲಿನ ಹಾಡು ಅದೇ ಚ್ಯಾನಲ್ ನಲ್ಲಿ ಕೇಳಿರಬೇಕು)

-- ಶ್ರೀಕಾಂತ

Anonymous said...

ಮ೦ಜು,
ಸಿನೇಮಾದ ಹಾಡೋ೦ದರಲ್ಲಿರುವ ಶ್ಲೇಷೆಯೊ೦ದರಿ೦ದ ಶುರುಮಾಡಿ, ಭಾಸ, ಕಾಳಿದಾಸರನ್ನು ಸುತ್ತಿ, ಅ.ರಾ.ಮಿತ್ರ, ದು೦ಡಿರಾಜ್ ರೊ೦ದಿಗೆ ಬರಹ ಕೊನೆಯಾಗಿರುವುದು ವಿಶೇಷ.

ದಿನದಿ೦ದ ದಿನಕ್ಕೆ ಬರಹದ ಶೈಲಿ ಉತ್ತಮವಾಗುತ್ತಿದೆ, ಜೋತೆಗೆ ಸುಲಭವಾಗಿ (interesting) ಓದಿಸಿಕೊಳ್ಳುತ್ತದೆ.

(ಪಕ್ಕಾ ಸಿನೇಮಾ ಪ್ರೇಮಿಗಳಿಗೆ ಸ್ವಲ್ಪ ನಿರಾಸೆಯಾಗಿರಬಹುದು, ಬಬ್ರುವಾಹನನಿ೦ದ ವಿಷಾಯಾ೦ತರವಾಗಿರುವದಕ್ಕೆ)

ಪ್ರೀತಿಯಿ೦ದ
ಅಚ್ಚುತ

guruve said...

ಶ್ಲೇಷಾಲಂಕಾರದ ಬಗ್ಗೆ ಅತ್ಯುತ್ತಮ ಲೇಖನ.. ಹೇರಳ ಉದಾಹರಣೆಗಳಿಂದ ಅಧ್ಯಯನಶೀಲವಾದ ಲೇಖನ..

ದಾಸರ ಈ ಪದವೂ ಶ್ಲೇಷೆಯಿಂದ ಕೂಡಿದೆಯಲ್ಲವೆ?

ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ…
ಯೋಗ್ಯ ರಾಗಿ
ಭೋಗ್ಯ ರಾಗಿ
ಭಾಗ್ಯವಂತ ರಾಗಿ
ನೀವು
ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ…

C V Bhagavat said...

ಉತ್ತಮ ಲೇಖನ, ಆದರೆ ನೋಡುತ್ತಾ ಹೋದರೆ ಪ್ರಾಚೀನ ಸಂಸ್ಕೃತ ಉದಾಹರಣೆಗಳ ಶ್ಲೇಷೆಗೂ englishನ punಗೂ ಆಧುನಿಕ "ಹನಿ"ಗಳ ಪನ್ನಿಗೂ ಸಾಕಷ್ಟೇ ವ್ಯತ್ಯಾಸವಿರುವುದು ಕಾಣಬರುತ್ತದೆ. ಶ್ಲೇಷೆಗೇ ವಿವಿಧಾರ್ಥವೇ? :)

Manjunatha Kollegala said...

ಭಾಗವತರೇ, ತಮ್ಮ ಮಾತು ನಿಜ. ಈ ಬಗ್ಗೆ ನನ್ನ ಇತರ ಪಂಡಿತ ಮಿತ್ರರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂಥದ್ದೊಂದು ಲೇಖನವನ್ನು ಮುಂದಿನ ಕಾಮೆಂಟಿನಲ್ಲಿ ಪ್ರಕಟಿಸುತ್ತೇನೆ.

Manjunatha Kollegala said...
This comment has been removed by the author.
Manjunatha Kollegala said...
This comment has been removed by the author.
ಹಂಸಾನಂದಿ said...

ಒಳ್ಳೇ ಬರಹ. ಅದರಲ್ಲೂ ಕವಿರಾಜಮಾರ್ಗದ ಮಂಗಳಾಚರಣೆಯನ್ನು ಬಿಡಿಸಿ ಹೇಳಿರುವುದು ಸೊಗಸಾಗಿದೆ. ಇದು ಕವಿರಾಜಮಾರ್ಗಕಾರನ ಹೆಚ್ಚಾಯವನ್ನೇ ತೋರುತ್ತದೆ ಎಂದು ನನ್ನೆಣಿಕೆ - ಏಕೆಂದರೆ ಮೂಲದ ಕಾವ್ಯಾದರ್ಶದ ಮಂಗಳಶ್ಲೋಕವನ್ನು ಹೀಗೆ ಅರ್ಥೈಸಲು ಸಾಧ್ಯವಿಲ್ಲವೇನೋ (ನನಗೆ ತಿಳಿದಂತೆ) ಎನ್ನಿಸುತ್ತೆ.

Joey said...

ತುಂಬ ಒಳ್ಳೆಯ ಓದು. ಎಷ್ಟೊಂದು ವಿಚಾರಗಳನ್ನು ಮುಂದಿಟ್ಟಿದ್ದೀರಿ. ತುಂಬಾ ಹಿತವಾಗಿತ್ತು.

Harish - ಹರೀಶ said...

ಅಪಾರ್ಥಕೋಶದಲ್ಲಿ ಓದಿದ್ದು..

ಪತಿ = "ದಂಪತಿ"ಗಳಲ್ಲಿ "ದಂ" ಇಲ್ಲದವನು. :-)

Manjunatha Kollegala said...

ಈ ಲೇಖನದ ಬಗ್ಗೆ ನನ್ನ ವಿದ್ವಾಂಸ ಮಿತ್ರರಾದ ಶ್ರೀ ವಿವೇಕರ ಅಭಿಪ್ರಾಯಗಳನ್ನು ಇಲ್ಲಿ ಕೊಡುತ್ತಿದ್ದೇನೆ. ಈ ಮುಂಚೆ ಇದನ್ನು ಇಲ್ಲಿ ಪ್ರಕಟಿಸಿದ್ದೆ, ಆದರೆ ಯಾವುದೋ ತಾಂತ್ರಿಕ ಕಾರಣದಿಂದ ಅದರ ಬಹು ಭಾಗ ಕಾಣೆಯಾಗಿದೆ. ಆದ್ದರಿಂದ ಅದನ್ನು ಸಂಪೂರ್ಣ ತೆಗೆದುಹಾಕಿ ಇಲ್ಲಿ ಮರುಪ್ರಕಟಿಸುತ್ತಿದ್ದೇನೆ. ಲೇಖನದ ವ್ಯಾಕರಣ ಹಾಗೂ ಅಲಂಕಾರಾಂಶಗಳನ್ನು ಚಿಕಿತ್ಸಕವಾಗಿ ಪರಿಶೀಲಿಸುವುದರೊಂದಿಗೆ Punನ್ನಿನ ಇತರ ಪ್ರಕಾರಗಳು ಹೇಗೆ "ಶ್ಲೇಷೆ"ಗಿಂತಾ ಭಿನ್ನ, ಹೇಗೆ ಸಭಂಗ ಶ್ಲೇಷೆಯ ಅತಿ ಬಳಕೆ "ಚಿತ್ರ ಕವಿತ್ವ"ವೆಂಬ ಮತ್ತೊಂದು ಕಾವ್ಯಪ್ರಕಾರವಾಗಿಬಿಡಬಹುದು; "ವ್ಯಂಜನಾವೃತ್ತಿ"ಯೆಂಬ ಮತ್ತೊಂದು ಪ್ರಕಾರ ಶ್ಲೇಷೆಗಿಂತ ಹೇಗೆ ಭಿನ್ನ ಮುಂತಾದ ಸ್ವಾರಸ್ಯಕರ, ಮಾಹಿತಿ ಪೂರ್ಣ ಚರ್ಚೆ ಇಲ್ಲಿದೆ. ಇದರೊಂದಿಗೆ ನನ್ನ ಲೇಖನದ ಅನೇಕ ಅಂಶಗಳು ತಿದ್ದುಪಡಿಗೊಳಪಡುತ್ತವೆ. ತಿದ್ದುಪಡಿಗಳನ್ನು ಯುಕ್ತ ಸ್ಥಳಗಳಲ್ಲಿ ಸೂಚಿಸಿದ್ದೇನೆ. ಲೇಖನವನ್ನು ತಿದ್ದುಪಡಿಯೊಂದಿಗೆ ಮತ್ತೆ ಓದಿಕೊಳ್ಳಲು ಕೋರುತ್ತೇನೆ.

ಈ ಅಭಿಪ್ರಾಯರೂಪದ ಲೇಖನಕ್ಕೆ ವಿವೇಕರಿಗೆ ಮತ್ತೊಮ್ಮೆ ಧನ್ಯವಾದಗಳನ್ನು ಸೂಚಿಸುತ್ತಾ:

==========================

ಪ್ರಿಯ ಮಂಜುನಾಥ,

ಶ್ಲೇಷೆಯ ಶಾಸ್ತ್ರವಿಚಾರ:

ಬಳಸಿರುವ ಒಂದೇ ಪದವು ತನ್ನ ನೈಘಂಟುಕಾರ್ಥದಲ್ಲಿಯೇ ಭಿನ್ನವಾದ ಎರಡೋ ಅಥವಾ ಹೆಚ್ಚು ಅರ್ಥಗಳನ್ನು ಸೂಚಿಸುವುದರಿಂದ ವಾಕ್ಯದಲ್ಲಿ (ಪದ್ಯದಲ್ಲಿ) ಉಂಟಾಗುವ ಒಟ್ಟಾರೆ ಅರ್ಥಸ್ವಾರಸ್ಯವು ಶ್ಲೇಷೆ. ಇದರಲ್ಲಿ ಅಭಂಗ ಮತ್ತು ಸಭಂಗ ಶ್ಲೇಷೆಗಳೆಂದು ಎರಡು ವಿಧ. ಅಭಂಗದಲ್ಲಿ ಶಬ್ದವು ಒಡೆಯದೆಯೇ ಎರಡು ಅರ್ಥಗಳನ್ನು ಸೂಚಿಸುವುದು.

ಉದಾ: ಅತ್ತೆ ನಾನು ಅತ್ತೆ. (ಇಲ್ಲಿರುವ ಅತ್ತೆ ಎಂಬ ಪದಕ್ಕೆ ಅಭಂಗದಲ್ಲಿ ಎರಡರ್ಥ. ಮನುಷ್ಯ ಸಂಬಂಧ ವಿಶೇಷವಾದ ಅತ್ತೆ –ಸೋದರತ್ತೆ ಇತ್ಯಾದಿ – ಎಂಬುದೊಂದು. ಅಳುವುದರ ಭೂತಕಾಲರೂಪವೊಂದು. ಇವೆರಡನ್ನು ಭಿನ್ನರೂಪಗಳಲ್ಲಿ ಬಳಸುತ್ತ ಹೋದಂತೆ ವಾಕ್ಯಕ್ಕೆ ಅನೇಕಾರ್ಥಗಳು ಲಭಿಸುವುದು ಸ್ಪಷ್ಟ.)

Manjunatha Kollegala said...

ವಿವೇಕರ ಅಭಿಪ್ರಾಯಗಳು ಮುಂದುವರಿದಿದೆ...
=============================

ರನ್ನನ ಗದಾಯುದ್ಧದ ಪ್ರಸಿದ್ಧ ಪದ್ಯದಲ್ಲಿ ಒಂದು ಕಡೆ, ಚಕ್ರಾಂಕಮಗಲ್ವಿನಂ ಎಂಬ ಪ್ರಯೋಗವಿದೆ (ಗದಾಯುದ್ಧ: ನವಮಾಶ್ವಾಸ, ೩೫ನೇ ಪದ್ಯ; ಪಂಕಜಮುಮಂ ಸುಹೃದ್ವದನ...). ನೈಘಂಟುಕವಾಗಿ ಚಕ್ರ ಎಂಬುದಕ್ಕೆ ಸುಮಾರು ಅರ್ಥಗಳು (ಅಭಂಗವಾಗಿಯೇ). ಚಕ್ರಾಂಕ ಎಂಬುದಕ್ಕೆ ಒಂದು ಅರ್ಥ ಚಕ್ರವಾಕ ಎಂಬ ಪಕ್ಷಿ ವಿಶೇಷ. ಇನ್ನೊಂದು ಅರ್ಥ ಚಕ್ರವರ್ತಿಯೆಂಬ ಬಿರುದು/ಸ್ಥಾನ (ಅಂಕ=ಬಿರುದು, ಸ್ಥಾನ) ವಿಶೇಷ. ಮತ್ತೊಂದು ಅರ್ಥ ಸೇನೆಯೆಂದು. ಇವುಗಳನ್ನು ಒಂದೊಂದು ರೀತಿಯಾಗಿ ಬಳಸಿದಾಗಲೂ ಪದ್ಯದ ಒಟ್ಟಾರೆ ತಾತ್ಪರ್ಯವು ಕೆಡದೇ (ಇದು ತುಂಬ ವಿಶೇಷ) ಪದ್ಯಕ್ಕೆ ವಿಧವಿಧವಾದ ಆಹ್ಲಾದಕಾರ್ಥಗಳು ಲಭಿಸಿ ಪದ್ಯವು ಶೋಭಿಸುತ್ತದೆ.ಸಭಂಗದಲ್ಲಿ ಸಂಧಿಯೋ, ಸಮಾಸವೋ ಇಲ್ಲವೇ ಪದವೇ ಅನಿಶ್ಚಿತವಾಗಿ ಒಡೆಯುವುದರಿಂದ ಅರ್ಥಸ್ವಾರಸ್ಯ ಉಂಟಾಗುತ್ತದೆ.ಉದಾ: ದೀನಾನಾಥ = ದೀನ+ಅನಾಥ! (೧); ದೀನಾಃ + ನಾಥ (ದೀನರ ನಾಥ) (೨) [ ಸಂಧಿ ರೂಪದಲ್ಲಿ]ಯಥಾ ನಯತಿ ಕೈಲಾಸಂ ನಗಂ ಗಾನ ಸರಸ್ವತೀ

ತಥಾ ನಯತಿ ಕೈಲಾಸಂ ನ ಗಂಗಾ ನ ಸರಸ್ವತೀ ||

(ನಗಂ-ಗಾನ ಮತ್ತು ನ-ಗಂಗಾ-ನ ಎಂಬಲ್ಲಿ ಚಮತ್ಕಾರಿಕವಾಗಿ ಶಬ್ದಚ್ಛೇದನ)God is nowhere :: God is now here!

(ಇಂಗ್ಲಿಷಿನಲ್ಲಿ ಡಾ. ರಾಧಾಕೃಷ್ಣನ್ನರದೆಂಬ ಪ್ರಚಾರವಿರುವ ಶ್ಲೇಷೆ)ಒಟ್ಟಿನಲ್ಲಿ ಶ್ಲೇಷೆಯು ಒಂದರ್ಥದಲ್ಲಿ ಶಬ್ದಪ್ರಧಾನವಾದ ಅರ್ಥಾಲಂಕಾರ. ಅಭಂಗ ಶ್ಲೇಷೆಗಿಂತ ಸಭಂಗ ಶ್ಲೇಷೆಯು ಹೆಚ್ಚು ಆಪ್ಯಾಯನವೆನ್ನುವುದು ಆಲಂಕಾರಿಕರ ಮತ. ಇದು ಅತಿಯಾದರೆ ಚಿತ್ರಕವಿತ್ವವೆಂಬ ಅಧಮ ಕಾವ್ಯಪ್ರಕಾರವಾಗಿಬಿಡುವ ಅಪಾಯವೂ ಇದೆ. ಆದ್ದರಿಂದ ಶ್ಲೇಷೆಯ ಬಳಕೆಯಲ್ಲಿ ತುಂಬ ಸೂಕ್ಷ್ಮವಾಗಿ ಅಷ್ಟೇ ಔಚಿತ್ಯಪೂರ್ಣವಾಗಿ ಬಳಸುವ ಕವಿಪ್ರಜ್ಞೆ ತುಂಬಾ ಆವಶ್ಯಕ.* * *ಶ್ಲೇಷೆಯನ್ನು ವ್ಯಂಜನಾವೃತ್ತಿಯೆಂದು ಭ್ರಮಿಸುವ ಅಪಾಯವೂ ಇದೆ. [ಉದಾ: ಮಾಮೂಲು] ಇಲ್ಲಿ ಲಂಚವೆನ್ನುವುದು ನೈಘಂಟುಕಾರ್ಥವಲ್ಲ. ಅದು ವ್ಯಂಗ್ಯಾರ್ಥ. ಒಂದೊಮ್ಮೆ ಅದನ್ನು ಯಾವುದೋ ನಿಘಂಟುವಿನಲ್ಲಿ ಸೇರಿಸಿದರೂ ಅದು ವ್ಯಂಗ್ಯಾರ್ಥವಾಗಿಯೇ ಜೀವಿಸುತ್ತದೆ. ಏಕೆಂದರೆ, ಶಬ್ದದ ಮೂಲರೂಪಗಳಾದ ಧಾತುಗಳ ಸ್ತರದಲ್ಲಿ ಈ ವ್ಯಂಗ್ಯಾರ್ಥವನ್ನು ಸಾಧಿಸಲಿಕ್ಕೆ ಸಾಧ್ಯವಿಲ್ಲ. ಎಷ್ಟೆಂದರೂ ಅದು ಚಮತ್ಕಾರದ ಬಳಕೆಯಿಂದ ಬಂದಿರುವ ಅರ್ಥ. ಇಂಥವುಗಳು ಮೊದಲಬಾರಿಗೆ ಪ್ರಯೋಗವಾದಾಗ ಹೆಚ್ಚು ಶೋಭಾಯಮಾನವಾಗಿಯೂ ಬಳಕೆಯು ಅತಿಯಾದಂತೆಲ್ಲ ಹೊಳಪಿಲ್ಲದವಾಗಿಯೂ ಇರುತ್ತವೆ. ಇದಕ್ಕೆ ಇನ್ನಷ್ಟು ಉದಾಹರಣೆಗಳನ್ನು ಕೊಡಬಹುದು.೧. ನಿಮಗೆ ದೊಡ್ಡ ನಮಸ್ಕಾರ!

೨. ಬಂದಾ ನೋಡು ಬೃಹಸ್ಪತಿ!ಈ ವಾಕ್ಯಗಳ ಆಶಯವನ್ನು ಗಮನಿಸಿದರೆ, ಶಬ್ದಗಳ ನೈಘಂಟುಕಾರ್ಥಕ್ಕೆ ಭಂಗಬಂದಿರುವುದು ಸ್ಪಷ್ಟ. ಆವಾಗ ವ್ಯಂಗಾರ್ಥವು ಪ್ರತಿಪಾದಿತವಾಗುತ್ತದೆ. ಇದನ್ನೇ ವ್ಯಂಜನಾವೃತ್ತಿಯೆಂದು ವೈಯಾಕರಣರು ಹೇಳುತ್ತಾರೆ. ತತ್ತ್ವತಃ ಶ್ಲೇಷೆಯಲ್ಲಿ ನೈಘಂಟುಕಾರ್ಥಕ್ಕೆ ಭಂಗ ಬರುವುದೇ ಇಲ್ಲ. ಆದರೆ ವ್ಯಂಜನಾವೃತ್ತಿಯಲ್ಲಿ ಅದು ಅವಶ್ಯವಾಗಿ ಇದ್ದೇ ಇರುತ್ತದೆ.

Manjunatha Kollegala said...

ವಿವೇಕರ ಅಭಿಪ್ರಾಯಗಳು ಮುಂದುವರಿದಿದೆ...
=============================

ಇನ್ನು ಕಾಲಿದಾಸನ ರಘುವಂಶ ಮಹಾಕಾವ್ಯದ ನಾಂದಿಪದ್ಯದಲ್ಲಿ ಶ್ಲೇಷೆಯ ಔಚಿತ್ಯವಿಚಾರ:

ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ ||

ಉಪಮಾಲಂಕಾರದಲ್ಲಿ ಅತಿಶಯ ಸಿದ್ಧಿಮಂತನಾದ ಕಾಲಿದಾಸನು, ವಾಕ್ ಮತ್ತು ಅರ್ಥಗಳನ್ನು ಪಾರ್ವತೀ ಮತ್ತು ಪರಮೇಶ್ವರರಿಗೆ ಹೋಲಿಸಿ ಅವರನ್ನು ವಂದಿಸುತ್ತೇನೆಂದು ಮಂಗಳಾಚರಣೆಯನ್ನು ಮಾಡುತ್ತಾನೆ.

ಇಲ್ಲಿ ಪಾರ್ವತೀಪ-ರಮೇಶ್ವರ ಎಂಬುದಾಗಿ ಶ್ಲೇಷೆಯನ್ನು ಸಾಧಿಸಲು ಹೊರಟ ಪಕ್ಷದಲ್ಲಿ, ಕವಿಯ ಆಶಯಕ್ಕೇ ಭಂಗಬರುವುದು ಸುವಿದಿತ. ಏಕೆಂದರೆ, ವಾಕ್ ಎಂಬುದು ಸ್ತ್ರೀಲಿಂಗ ಮತ್ತು ಅರ್ಥವೆಂಬುದು ಪುಲ್ಲಿಂಗ. ಇದೇ ಲಿಂಗೌಚಿತ್ಯವನ್ನು ಕವಿಯು ಜಗತ್ತಿನ ತಂದೆತಾಯಿಗಳಾದ ಪಾರ್ವತೀ-ಪರಮೇಶ್ವರರಲ್ಲಿ ಮೆರೆದಿದ್ದಾನೆ. ಅಲ್ಲದೇ ಇಲ್ಲಿ ಬಂದಿರುವ ಪಿತರೌ ಎಂಬುದು ದ್ವಿತೀಯಾ ವಿಭಕ್ತಿಯಲ್ಲಿರುವ, ಮಾತಾ ಚ ಪಿತಾಚ ಪಿತರೌ ಎಂಬ ರೂಪವೇ ಹೊರತು ಪಿತೃ ಎಂಬುದರ ದ್ವಿತೀಯಾ ದ್ವಿವಚನ ರೂಪವಲ್ಲ. ಒಂದುಪಕ್ಷ ಇದನ್ನೇ ಸಾಧಿಸಿದರೂ, ಕಾಲಿದಾಸನಿಗೆ ಉಪಮಾಲಂಕಾರದಲ್ಲಿ ಅವಶ್ಯವಾದ ಲಿಂಗಪ್ರಜ್ಞೆಯೇ ಇರಲಿಲ್ಲವೆಂದು ಸಾಧಿಸಿದಂತೆ. ಇದು ಸಾಧುವಲ್ಲ. ಏಕೆಂದರೆ, ಈ ವಿಷಯದಲ್ಲಿ ಕಾಲಿದಾಸನಿಗಿರುವ ವ್ಯಾಕರಣಪ್ರಜ್ಞೆ ಅಸಾಧಾರಣವಾದದ್ದು. ಅದು ಅವನ ಎಲ್ಲ ಕಾವ್ಯಗಳಲ್ಲಿ ವಿದಿತವಾಗಿರುವ ಸತ್ಯ. ಉದಾಹರಣೆಗೆ ಸ್ತ್ರೀಯನ್ನು ಹೋಲಿಸಬೇಕಾದರೆ ಚಂದ್ರಕಲಾ ಎನ್ನುವ, ಪುರುಷನಿಗೆ ಚಂದ್ರಃ ಎನ್ನುವ, ನಪುಂಸಕ ಲಿಂಗಕ್ಕೆ ಚಂದ್ರಬಿಂಬಂ ಎನ್ನುವ ಮಟ್ಟಿನ ಕೌಶಲ ಆತನದು. ಆದ್ದರಿಂದ ಅತಿಪಾಂಡಿತ್ಯಪ್ರದರ್ಶನಚಾಪಲ್ಯಕ್ಕೆ ಒಳಗಾಗಿ ಇಲ್ಲದ ಶ್ಲೇಷೆಯನ್ನು ತೋರಿಸಲು ಹೋಗಿ ವ್ಯಾಕರಣವಿವೇಕವನ್ನು ಕಳೆದುಕೊಳ್ಳುವದು ಸಾಧುವಲ್ಲ.

ಕೊನೆಯದಾಗಿ ಒಂದು ವಿಷಯ. ಇಷ್ಟೆಲ್ಲ ಕೂದಲುಸೀಳುವ ತರ್ಕವೇಕೆಂಬ ಪ್ರಶ್ನೆ ಸಹಜವಾದದ್ದೇ. ಇದಕ್ಕೆ ಉತ್ತರವಿಷ್ಟೆ, ನಮ್ಮ ಅನುಭವಕ್ಕೆ ಯಾವ ತರ್ಕವೂ ಬೇಕಾಗಿಲ್ಲ. ಆದರೆ ಆ ಅನುಭವವನ್ನು ಇನ್ನೊಬ್ಬರಿಗೆ ತಿಳಿಸಬೇಕಾದರೆ ಪ್ರಮಾಣ-ಪ್ರಮೇಯ ಪುರಸ್ಸರವಾಗಿ ತರ್ಕಬದ್ಧವಾಗಿಯೇ ಮಂಡಿಸಬೇಕಾಗುತ್ತದೆ. ಇಲ್ಲದೇ ಹೋದರೆ, ನಮ್ಮ ಪರಿಭಾಷೆಗೆ ಅತಿವ್ಯಾಪ್ತಿಯೋ ಇಲ್ಲವೇ ಅವ್ಯಾಪ್ತಿಯೋ ಒದಗಿ ಶಾಸ್ತ್ರದ ಹದ ಕೆಡುವುದರ ಜೊತೆಗೆ ವಿಷಯದ ಸ್ಪಷ್ಟತೆಯೂ ನಶಿಸುತ್ತದೆ. ಇದನ್ನೇ ಶ್ರೀ ಶಂಕರರದೆಂಬ ಪ್ರತೀತಿಯಿರುವ ಪ್ರಶ್ನೋತ್ತರರತ್ನಮಾಲಿಕೆಯಲ್ಲಿ ತುಂಬ ಚುಟುಕಾಗಿ: ಕಿಮ್ ಪಾಂಡಿತ್ಯಂ? ಪರಿಚ್ಛೇದಃ! ಎನ್ನಲಾಗಿದೆ.

ನಮ್ಮ ದೂರವಾಣಿ ಮಾತುಕತೆಯಲ್ಲಿಯ ಅಂಶಗಳನ್ನು ಬರೆದಿದ್ದೇನೆ. ಕೆಲಸಗಳ ಒತ್ತಡದಿಂದ ಬರೆದು ಕಳಿಸುವುದು ತಡವಾಯಿತು. ಕ್ಷಮೆಯಿರಲಿ.

-ವಿವೇಕಾನಂದ