Tuesday, February 19, 2008

ಆಟೋಗ್ರಫಿ

ಇವತ್ತೇಕೋ ಇದನ್ನು ಬರೆಯಬೇಕೆನ್ನಿಸಿತು. ಬಹುದಿನದ ನಂತರ ಮಡದಿ ಮಗುವಿನೊಂದಿಗೆ ಒಂದು ಸಿನಿಮಾಕ್ಕೆ ಹೋಗಿದ್ದೆ (ಅದರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ, ಸಾಧ್ಯವಾದರೆ). ಸಿನಿಮಾ ಮುಗಿಸಿಕೊಂಡು, ಚೆನ್ನೈ ಸಿಟಿ ಸೆಂಟರ್ ನಲ್ಲಿದ್ದ ಚಿತ್ರಮಂದಿರದಿಂದ ಮೈಲಾಪುರಕ್ಕೆ ಬಂದೆವು. ಅಲ್ಲಿ ರಾತ್ರೆ ಊಟ ಮುಗಿಸಿಕೊಂಡು ತಿರುವಾನ್ಮಿಯೂರಿಗೆ ಹೋಗಲು ಬಸ್ಸು ಕಾಯುತ್ತಿದ್ದೆವು. ಆಗಲೇ ತಡವಾಗುತ್ತಿದ್ದರಿಂದ, ಆಟೋ ಹಿಡಿದು ಹೋದರಾಯಿತೆಂದು ಆಟೋ ವಿಚಾರಿಸಿದರೆ, ಯಥಾಪ್ರಕಾರ ತಲೆ ಬೆಲೆ, ನೂರರಿಂದ ನೂರ ಮೂವತ್ತಕ್ಕೆ ಕಡಿಮೆ ಒಬ್ಬನೂ ಇಲ್ಲ. ಮೈಲಾಪುರದಿಂದ ತಿರುವಾನ್ಮಿಯೂರಿಗೆ ಮೀಟರ್ ಹಾಕಿದರೆ ಹೆಚ್ಚೆಂದರೆ ಅರುವತ್ತು ರೂಪಾಯಿ ಆದೀತು. ಆದರೆ ಇಲ್ಲಿ ನೂರು ರೂಪಾಯಿ ಸಾಮಾನ್ಯ ಬೆಲೆ. ಆದರೂ ಚೌಕಾಸಿ ಮಾಡದೆ ಆಟೋ ಹತ್ತುವುದು ಹೇಗೆ. ನಾನು ಎಂಭತ್ತು ರೂಪಾಯಿ ಕೊಡಲು ತಯಾರಿದ್ದೆ (ಇನ್ನೊಂದು ಇಪ್ಪತ್ತು ರೂಪಾಯಿ ಹೆಚ್ಚಾಗುತ್ತಿತ್ತೆಂದಲ್ಲ, ಆದರೂ ಆಟವನ್ನು ನಿಯಮಕ್ಕನುಸಾರ ಆಡಬೇಕಷ್ಟೇ?). ಬೆಂಗಳೂರು ಮತ್ತು ಚೆನ್ನೈ ಈ ಎರಡೂ ಕಡೆ ಆಟೋದವರ ಜೊತೆ ಏಗಿ ಏಗಿ, ಅವರ ಪಟ್ಟು-ಪ್ರತಿ ಪಟ್ಟುಗಳೆಲ್ಲ ಅರ್ಥವಾಗಿಬಿಟ್ಟಿದೆ. ಹಣವನ್ನು ಚರಂಡಿಯಲ್ಲಿ ಬಿಸಾಡಿದರೂ ಪರವಾಗಿಲ್ಲ, ಆಟೋದವನಿಗೆ ಮಾತ್ರ ಒಂದು ಕಾಸು ಹೆಚ್ಚು ಕೊಡಬಾರದೆಂಬ ದುರ್ಬುದ್ಧಿ ಅದು ಹೇಗೊ ಮನದಲ್ಲಿ ಕೂತುಬಿಟ್ಟಿದೆ. ಆಟೋದವರೆಲ್ಲಾ ಕೆಟ್ಟವರಲ್ಲ ಎಂಬ ಥಿಯರಿ ಗೊತ್ತಿದ್ದರೂ, ಎಷ್ಟೋ ಜನ ಒಳ್ಳೆಯ ಆಟೋ ಚಾಲಕರನ್ನು ನಾನೇ ನನ್ನ ಕಣ್ಣಾರೆ ನೋಡಿದ್ದರೂ, ಅದೇಕೋ, ಆಟೋದವನ ಜೊತೆ ವ್ಯವಹರಿಸುವಾಗ, ಪಾವ್ಲೋವ್ ನ ನಾಯಿಯಂತೆ ನನ್ನ ತಲೆಯಲ್ಲಿ ಚೌಕಾಸಿಯ ಗಂಟೆ ಬಾರಿಸತೊಡಗುತ್ತದೆ, ಮೈಯೆಲ್ಲಾ ಕಣ್ಣಾಗುತ್ತದೆ, ಕಣ್ಣುಗಳು ಮೀಟರಿನಲ್ಲಿ ಕೀಲಿಸಿ ಹೋಗುತ್ತವೆ, ಮಾತು ಬಿಗಿಯಾಗುತ್ತದೆ.

ನನ್ನ ಎಂಬತ್ತು ರೂಪಾಯಿ ಬೆಲೆಗೆ ಒಪ್ಪುವ ಆಟೋಗಾಗಿ ಕಾಯುತ್ತಾ ಅರ್ಧ ಗಂಟೆ ಕಳೆಯಿತು. ಹೊತ್ತಾಗುತ್ತಿದೆ, ಮನೆಗೆ ಬೇಗ ಹೋಗೋಣವೆಂದು ಮಡದಿಯ ವರಾತ ಹೆಚ್ಚಾಯಿತು. ಕೊನೆಗೆ ನಾನು ನಿಧಾನವಾಗಿ ನೂರಕ್ಕೆ ಏರುವಹೊತ್ತಿಗೆ, ಆಟೋ ದರ ಕೂಡ ಏರಿತ್ತು.

ಅಷ್ಟು ಹೊತ್ತಿಗೆ ಅಲ್ಲಿಗೆ ಒಂದು ಆಟೋ ಬಂತು. ಆ ವ್ಯಕ್ತಿಗೆ ಹೋಗಬೇಕಾದ ಸ್ಥಳದ ವಿವರ ಹೇಳಿ ದರ ಎಷ್ಟೆಂದು ಕೇಳಿದೆ. ಅವನು ಎಂಭತ್ತು ರೂಪಾಯಿ ಕೇಳಿದಾಗ ಒಂದು ಕ್ಷಣ ದಂಗಾದೆ. ಈ ಹೊತ್ತಿನಲ್ಲಿ ಅಲ್ಲಿ ನಡೆಯುತ್ತಿದ್ದ ರೇಟ್ ನೂರ ಮೂವತ್ತು ರುಪಾಯಿ. ಇವನಿಗೆ ಹೋಗಬೇಕಾದ ಸ್ಥಳದ ದೂರ ತಿಳಿದಿಲ್ಲದಿರಬಹುದು, ಆಮೇಲೆ ತಗಾದೆ ಮಾಡಬಾರದೆಂದು ಮತ್ತೆ ಅವನಿಗೆ ಸ್ಥಳದ ಗುರುತು ಹೇಳಿದೆ. ಮತ್ತೆ ಅವನು ಎಂಭತ್ತು ರೂಪಯಿಯ ಬೇಡಿಕೆಯನ್ನು ಪುನರುಚ್ಚರಿಸಿದ. ಇದಕ್ಕಿಂತಾ ಒಳ್ಳೆಯ ದರ ಎಲ್ಲಿ ಸಿಗಲು ಸಾಧ್ಯ? ಸರಿ, ಆಟೋ ಹತ್ತಿಯೇ ಬಿಡಬೇಕೆಂದುಕೊಳ್ಳುವಾಗ, ಅಲ್ಲಿಯವರೆಗೂ ಅಪ್ರತಿಭವಾಗಿದ್ದ ಚೌಕಾಸಿ ಪ್ರಜ್ಞೆ ಮತ್ತೆ ಸಾವರಿಸಿಕೊಂಡು. ಅಲ್ಲಿಂದ ತಿರುವಾಣ್ಮಿಯೂರಿಗೆ ತೀರ ಹತ್ತಿರವೆಂದೂ, ಎಂಭತ್ತು ರೂಪಾಯಿ ಹೆಚ್ಚಾಯಿತೆಂದೂ ಹೇಳಿದೆ. ಹೆಚ್ಚೆಂದರೆ ಎಪ್ಪತ್ತು ರೂಪಾಯಿ ಕೊಡುತ್ತೇನೆಂದೆ (ತೀರಾ ಕಡಿಮೆ ಕೇಳುವಹಾಗೂ ಇಲ್ಲ). ತುಸುಹೊತ್ತು ನನ್ನ ಮುಖವನ್ನೇ ದಿಟ್ಟಿಸಿ ನಸು ನಕ್ಕು ಆತ ಹೇಳಿದ, "ಸರ್, ಈ ಹೊತ್ತಿನಲ್ಲಿ ಇಲ್ಲಿ ಎಲ್ಲರೂ ನೂರಿಪ್ಪತ್ತು ಕೇಳುವುದು ನಿಮಗೂ ಗೊತ್ತು, ಒಂದು ರೇಟ್ ಹೇಳಿ ಮತ್ತೆ ಕಡಿಮೆ ಮಾಡುವುದು ಬೇಡವೆಂದು ನಾನು ಸರಿಯಾದ ರೇಟ್ ಹೇಳಿದ್ದೇನೆ; ಇನ್ನೂ ಚೌಕಾಸಿ ಮಾಡುವುದು ನಿಮಗೆ ಸರಿ ಅನ್ಸುತ್ತಾ ಸಾರ್?" ಇದಕ್ಕೆ ನನ್ನಲ್ಲಿ ಉತ್ತರವಿರಲಿಲ್ಲ. ಆದರೂ ಎಂಬತ್ತಕ್ಕೆ ಒಪ್ಪಿ ಬಿಗಿಮುಖ ಮಾಡಿಕೊಂಡು ಆಟೋ ಏರಿ ಕುಳಿತೆ.

ಆಟೋ ಚಾಲಕ ಸ್ವಲ್ಪ ಮಾತುಗಾರನೆಂದು ತೋರುತ್ತದೆ, ದಾರಿಯುದ್ದಕ್ಕೂ ಅದು ಇದು ಮಾತಾಡುತ್ತಾ ಬಂದ. ಊಟ ಆಯಿತೇ ವಿಚಾರಿಸಿದ, ಮೈಲಾಪುರದಲ್ಲಿ ದೇವಸ್ಥಾನಕ್ಕೆ ಬಂದಿದ್ದಿರಾ ಎಂದ, ತಿರುವಾಣ್ಮಿಯೂರಿನಲ್ಲಿ ಮರುಂದೀಶ್ವರನ ದೇವಸ್ಥಾನಕ್ಕೆ ಏಕೆ ಹೋಗಲಿಲ್ಲವೆಂದು ವಿಚಾರಿಸಿದ. ದಾರಿಯಲ್ಲಿ ಮಗು ಸ್ವಲ್ಪ ಗಲಾಟೆ ಮಾಡಿದಾಗ "ಆಟೊ ನಿಲ್ಲಿಸಲೇ" ಎಂದ. ಬೇರೆಯವರಂತೆ ಇವನಬಳಿ ಏಕೋ ಮುಖ ಗಂಟುಮಾಡಿಕೊಂಡಿರಲು ಆಗುತ್ತಿಲ್ಲ, ಆದರೂ ನನ್ನ limited ತಮಿಳು ಜ್ಞಾನ ನನ್ನ ನಾಲಗೆಯನ್ನು ತಡೆದಿತ್ತು. ಸಾಧ್ಯವಾದಷ್ಟು ಹಸನ್ಮುಖಿಯಾಗಿರಲು ಪ್ರಯತ್ನಿಸುತ್ತಾ, ಕೇಳಿದ್ದಕ್ಕೆ ಹೂಂ - ಉಹೂಂ ಕೊಡುತ್ತಾ ಬಂದೆ.

ಮಾತಿನ ಮಧ್ಯೆ ಈ ಚಾಲಕನಿಗೆ ಕಾಲು ಸ್ವಾಧೀನದಲ್ಲಿರಲಿಲ್ಲವೆಂಬುದು ಗಮನಕ್ಕೆ ಬಂತು. ಪಕ್ಕದಲ್ಲಿದ್ದ ಅವನ ಊರೆಗೋಲುಗಳನ್ನು ತೋರುತ್ತಾ ನನ್ನ ಮಡದಿ ಮೆಲುದನಿಯಲ್ಲಿ ಹೇಳಿದಳು, "ಇಂಥವರ ಜೊತೆ ಚೌಕಾಸಿ ಮಾಡುವುದು ಸರಿಯಲ್ಲ, ಅವನು ಕೇಳಿದಷ್ಟು ಕೊಟ್ಟುಬಿಡಿ... afterall, we should help such people" ಮನಸ್ಸಿಗೆ ಸ್ವಲ್ಪ ನೋವಾಯಿತಾದರೂ ನನಗೇಕೋ ಈ ಮನುಷ್ಯನ ಬಗ್ಗೆ ಅಭಿಮಾನ ತೋರುತ್ತಿತ್ತೇ ಹೊರತು, ಕರುಣೆಯಲ್ಲ. "ಸಹಾಯ" ಮಾಡಿ ಅವನ ಅಭಿಮಾನ ಕೆಡಿಸುವುದು ನನಗೆ ಸರಿಬರಲಿಲ್ಲ. ಮೇಲಾಗಿ, ಚೌಕಾಸಿ ಮಾಡುವುದು ಸರ್ವೇ ಸಾಮಾನ್ಯ, ಹಾಗೂ ನಾನೇನು ತೀರಾ unfairಆಗೇನೂ ಇಲ್ಲ. ಇಷ್ಟಕ್ಕೂ ನಾನು ಅವನು ಕೇಳಿದ ಎಂಭತ್ತು ರುಪಾಯನ್ನು ಕೊಡಲು ಸಿದ್ಧನಿದ್ದೆ.
ತಿರುವಾನ್ಮಿಯೂರು ಬಂತು. ಕೈಯಲ್ಲಿ ಸಿದ್ಧಮಾಡಿಟ್ಟುಕೊಂಡಿದ್ದ ಎಂಭತ್ತು ರುಪಾಯಿಯನ್ನು ಅವನ ಕೈಯಲ್ಲಿಟ್ಟು ಆಟೋ ಇಳಿದೆವು. ಗುಡ್ ನೈಟ್ ಹೇಳಿದ ಆತ ಒಂದು ಕ್ಷಣ ತಡೆಯ ಹೇಳಿದ. ಆಲ್ಲೇ ದಾರಿಯಲ್ಲಿ ನಿಂತಿದ್ದವನೊಬ್ಬನ ಹತ್ತಿರ ಹತ್ತು ರೂಪಾಯಿಗೆ ಚಿಲ್ಲರೆ ಇಸಿದುಕೊಂಡು ಐದು ರೂಪಾಯಿ ಮರಳಿ ಕೊಟ್ಟ. ಎಂಬತ್ತು ರೂಪಾಯಿ ಕೊಟ್ಟು ಹೋಗುವುದರಲ್ಲಿದ್ದ ನನಗೆ ಇದು ಕೊಂಚ ಆಶ್ಚರ್ಯ ತಂದಿತು. ಅದನ್ನು ಇಸಕೊಳ್ಳದೆ, ನಾನು ಅವನು ಕೇಳಿದ ಎಂಭತ್ತು ರೂಪಾಯಿಯನ್ನೇ ಕೊಟ್ಟಿರುವುದಾಗಿಯೂ, ಚಿಲ್ಲರೆಯೇನೂ ಬಾಕಿ ಇಲ್ಲವೆಂದೂ ಹೇಳಿದೆ. ಅದಕ್ಕವನು ಒಪ್ಪದೇ ಹೇಳಿದ "ಸಾರ್, ನಾನು ಕೇಳಿದ್ದು ಎಂಭತ್ತೇ ಆದರೂ ನೀವು ಕೊಡುತ್ತೇನೆಂದದ್ದು ಎಪ್ಪತ್ತು ರುಪಾಯಿ. ಅದಕ್ಕೆ ಮನಸಿನಲ್ಲಿ ನಿಮ್ಮ ಎಪ್ಪತ್ತು ರೂಪಾಯಿಗೆ ತಯಾರಿದ್ದೆ. ಆದರೂ ಎಂಭತ್ತು ಕೊಟ್ಟಿದ್ದು ನೋಡಿ ಒಂದುರೀತಿ ಅನ್ನಿಸಿತು, ಅದಕ್ಕೆ ಈ extra ಹಣವನ್ನ ಎರಡು ಭಾಗ ಮಾಡಿ ನಿಮಗೆ ಐದು ರೂಪಾಯಿ ವಾಪಸ್ ಕೊಡುತ್ತಿದ್ದೇನೆ, ವ್ಯವಹಾರ ಅಂದರೆ ವ್ಯವಹಾರ, ದಯವಿಟ್ಟು ತಗೊಳ್ಳಿ" ಅಂದ. ಮತ್ತೆ ನನ್ನಲ್ಲಿ ಉತ್ತರವಿರಲಿಲ್ಲ... ಐದು ರುಪಾಯಿಯನ್ನು ತೆಗೆದುಕೊಂಡರೆ ಹೇಗೆ, ಇಲ್ಲದಿದ್ದರೆ ಹೇಗೆ ಎಂದು ಚಿಂತಿಸಿ ಬಳಲುತ್ತಿರಲು, ಐದು ರುಪಾಯಿ ನಾಣ್ಯವನ್ನ ನನ್ನ ಕೈಯಲ್ಲಿ ತುರುಕಿ ಹೇಳಿದ "ನಿಮಗೆ ಬೇಡದಿದ್ದರೆ, ಮಗೂಗೆ ಒಂದು chocolate ತೆಗೆದು ಕೊಡಿ ಸಾರ್"... ಇಷ್ಟು ಹೇಳಿ, ಆಟೋ ತಿರುಗಿಸಿಕೊಂಡು, ನಮ್ಮೆಲ್ಲರತ್ತ ಮತ್ತೊಂದು ಟಾಟಾ ಮಾಡಿ ಏರಿ ಬರುತ್ತಿದ್ದ ಟ್ರಾಫಿಕ್ ನಲ್ಲಿ ಕಣ್ಮರೆಯಾದ.
ಘಟನೆಯ ಬಗ್ಗೆ ಭರತವಾಕ್ಯವೊಂದನ್ನು ಬರೆಯಬೇಕಿಲ್ಲವೇನೋ. ಮತ್ತೊಂದು ಸಾಮಾನ್ಯ ಘಟನೆಯಾಗಿ ಮರೆಯಬಹುದಿದ್ದ ಇದು, ಏಕೆ ಮಹತ್ವ ಪಡೆಯಿತು, ತಿಳಿಯುತ್ತಿಲ್ಲ. ನಾನು ಎಂಭತ್ತು ಕೊಟ್ಟು ಅವನು ಐದು ಮರಳಿ ಕೊಡುವದರ ಬದಲು, ನಾನು ಎಪ್ಪತ್ತು ರೂಪಾಯಿ ಕೊಟ್ಟು ಅವನು ಇನ್ನೈದಕ್ಕೆ ಚೌಕಾಸಿ ಮಾಡಿದ್ದರೆ (ಹಾಗೂ ಎಪ್ಪತ್ತೈದೇ ರೂಪಾಯಿ), ಸಮೀಕರಣ ಬದಲಾಗುತ್ತಿತ್ತೇ? ಅಥವಾ ನನ್ನ ಮಾತಿನಂತೆ ಅವನು ಎಪ್ಪತ್ತನ್ನಷ್ಟೇ ತೆಗೆದುಕೊಂಡು ಪೂರಾ ಹತ್ತು ರೂಪಾಯಿ ವಾಪಸು ಕೊಟ್ಟಿದ್ದರೆ? ಅಥವಾ ಎಲ್ಲರಂತೆ ನೂರು ಕೇಳಿ ಕೊನೆಗೆ ಎಪ್ಪತ್ತಕ್ಕೇ ಒಪ್ಪಿದ್ದರೆ? ಏಕೋ ಲೆಕ್ಕ ಹತ್ತುತ್ತಿಲ್ಲ.

5 comments:

Deepak said...

ಇಂತಹ Auto drivers ಸಿಗ್ತಾರಾ ,ಅಂತ ಆಶ್ಚರ್ಯ ಆಯ್ತು.

ಜಯಂತ್ said...

ಪ್ರಶ್ನೆ: ಘಟನೆಯ ಬಗ್ಗೆ ಭರತವಾಕ್ಯವೊಂದನ್ನು ಬರೆಯಬೇಕಿಲ್ಲವೇನೋ. ಮತ್ತೊಂದು ಸಾಮಾನ್ಯ ಘಟನೆಯಾಗಿ ಮರೆಯಬಹುದಿದ್ದ ಇದು, ಏಕೆ ಮಹತ್ವ ಪಡೆಯಿತು, ತಿಳಿಯುತ್ತಿಲ್ಲ..

ಉತ್ತರ: ಹಣವನ್ನು ಚರಂಡಿಯಲ್ಲಿ ಬಿಸಾಡಿದರೂ ಪರವಾಗಿಲ್ಲ, ಆಟೋದವನಿಗೆ ಮಾತ್ರ ಒಂದು ಕಾಸು ಹೆಚ್ಚು ಕೊಡಬಾರದೆಂಬ ದುರ್ಬುದ್ಧಿ ಅದು ಹೇಗೊ ಮನದಲ್ಲಿ ಕೂತುಬಿಟ್ಟಿದೆ. ಆಟೋದವರೆಲ್ಲಾ ಕೆಟ್ಟವರಲ್ಲ ಎಂಬ ಥಿಯರಿ ಗೊತ್ತಿದ್ದರೂ, ಎಷ್ಟೋ ಜನ ಒಳ್ಳೆಯ ಆಟೋ ಚಾಲಕರನ್ನು ನಾನೇ ನನ್ನ ಕಣ್ಣಾರೆ ನೋಡಿದ್ದರೂ, ಅದೇಕೋ, ಆಟೋದವನ ಜೊತೆ ವ್ಯವಹರಿಸುವಾಗ, ಪಾವ್ಲೋವ್ ನ ನಾಯಿಯಂತೆ ನನ್ನ ತಲೆಯಲ್ಲಿ ಚೌಕಾಸಿಯ ಗಂಟೆ ಬಾರಿಸತೊಡಗುತ್ತದೆ, ಮೈಯೆಲ್ಲಾ ಕಣ್ಣಾಗುತ್ತದೆ, ಕಣ್ಣುಗಳು ಮೀಟರಿನಲ್ಲಿ ಕೀಲಿಸಿ ಹೋಗುತ್ತವೆ, ಮಾತು ಬಿಗಿಯಾಗುತ್ತದೆ..


ನಿಮ್ಮ ಈ ಲೇಖನ ಒತ್ತಿ.. ಒತ್ತಿ.. ಹೇಳ್ತ ಇರೋದೆ ಅದನ್ನ ಅನಿಸಿತು. ಯಾರೋ ಒಬ್ಬರು ಇಬ್ಬರು ಮಾಡುವ ತಪ್ಪಿಗೆ ನಾವು ಒಂದು ಗುಂಪು,ಸಮುದಾಯವನ್ನೇ Biased ಆಗಿ ನೋಡ್ತಿವಲ್ಲ ...

Srikanth said...

ಆಟೋ ಚಾಲಕರು ಅಂದ್ರೆ ಆತೋಮ್ಯಾಟಿಕ್ ಆಗಿ ಮನದಲ್ಲಿ ಒಳ್ಳೆ ಅಭಿಪ್ರಾಯ ಮೂಡದ ಈ ಕಾಲದಲ್ಲಿ, ಇವರು ಯಾರೋ ಆಟೋ ರಾಜನೇ ಸರಿ!

ಸಾಮಾನ್ಯಯವಾಗಿ ಯಾರೂ ಗಮನ ಸಹಾ ಕೊಡದ ವಿಷಯದ ಮೇಲೆ ಇಷ್ಟು ಅರ್ಥವತ್ತಾಗಿ ಬರ್ದಿದೀರಿ. ಅಮೇಜಿಂಗ್ !

Manju said...

:) Thanks

ಸುಶ್ರುತ ದೊಡ್ಡೇರಿ said...

ಪ್ರಿಯ ಮಂಜು,
ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ