Saturday, August 11, 2007

ನೀನು ೨

ನೀ ಗಗನ ತಾರಾ,
ನಾ ಮಂದ್ರ
ಪಂಚಮ;
ನಡುವಿನಂತರ

ಗಾಂಧಾರ-
ದಾಚೆಯ ದಾರಿ
ಗಮನಶ್ರಮ.

ನೀ ಬಾಗಿ ಎನ್ನ ಸೋಂಕಿಸಬಾರದು,
ನಾ ಎಟುಕಿ ನಿನ್ನ ಪಿಡಿಯುವುದಾಗದು;
ಆದರೂ ಇದು ಸಾಧ್ಯ.
ಅಲ್ಲಿಂದ ನೀನಿಲ್ಲಿಗವತರಿಸಿ ಬರಬಹುದು,
ಅಥವ ಇಲ್ಲಿಂದೆನ್ನನುದ್ಧರಿಸಿಕೊಳಬಹುದು;
ಎರಡೂ ಪಾವನ!

ತಾನಗಳ ಗಮಕಿಸುವ
ದೇವಯಾನ ವಿಮಾನ
ವಿರೆ
ಯಾವುದಾಗದು ಹೇಳು
ಸ್ವರ್ಗ ಗಾನ?

- ೨೯/೦೧/೨೦೦೭

7 comments:

Anonymous said...

By far the best poem from KSM's artillery....truly touching...No more comments.

Manjunatha Kollegala said...

Thanks Srikanth, for your kind word. But don't end me there ;)

Susheel Sandeep said...

ಸಾರ್..ಇನ್ನೂ ನಿಮ್ಮ ಪದಗಳನ್ನು ಮುರಿಯುವ ಹಿಂದಿನ ಸೀಕ್ರೆಟ್ಟು ಅರ್ಥವಾಗಿಲ್ಲ ಈ ನನ್ನ ಮಂದ ಬುದ್ಧಿಗೆ..ಹಾಗಾಗಿ ಕವನದ ಸಂಪೂರ್ಣ ಸಾರವನ್ನು ಹೀರಲಾಗುತ್ತಿಲ್ಲ...:(

Manjunatha Kollegala said...

ಸುಶೀಲರೇ, ಅಂಥಾ ಸೀಕ್ರೆಟ್ ಏನಿಲ್ಲ. ಪದಗಳನ್ನು ನಾನಾ ಕಾರಣಗಳಿಗೆ ಮುರಿಯಲಾಗುತ್ತೆ - ಅಂಥಾ ಛೇದ ಹೊಸ ಅರ್ಥ ಹೊಳೆಸುವುದಿದ್ದರೆ, ಹೊಸ ಲಯ (ಅಥವಾ significant ಲಯಹೀನತೆ) ತರಬಹುದಿದ್ದರೆ.. ಕೆಲವೊಮ್ಮೆ ಮನಸಿನ ಭಾವದ ಲಯ ಕೂಡ ಇದಕ್ಕೆ ಕಾರಣವಿರಬಹುದು ;) Most of the time ಅದು ತುಂಬಾ ಯೋಚಿಸಿ ಮಾಡುವುದಲ್ಲ, spontaneous ಆಗೆ ಬರುವುದು.

ಉದಾಹರಣೆಗೆ,
ನೀ ಗಗನ ತಾರಾ,
ನಾ ಮಂದ್ರ
ಪಂಚಮ

it is actually ಮಂದ್ರಪಂಚಮ (ಸಂಗೀತದಲ್ಲಿ ತಗ್ಗಿನ ಸ್ಥಾನದಲ್ಲಿರುವ ಪಂಚಮ ಸ್ವರ), ಹಾಗೇ ಮಂದ್ರವು ತಾರಾ ಕ್ಕೆ ವಿರುದ್ಧವೂ ಆಗುತ್ತದೆ, ಮತ್ತೆ "ಪಂಚಮ" ಕೆಳಗಿನ ಜಾತಿಯನ್ನೂ ಸೂಚಿಸುತ್ತದೆ... ಒಟ್ಟಾರೆ "ನೀನು" ಮತ್ತು ಕವಿಯ ನಡುವಣ ಎತ್ತರದ ಅಂತರವನ್ನು ಗಾಢವಾಗಿಸುತ್ತವೆ, ಅದಕ್ಕೇ "ನಡುವಿನಂತರ" "ದ" ಇಂದ separate. ಮತ್ತೆ, "ದ" ಸಂಗೀತದ ಒಂದು ಸ್ವರ (ಹಾಗೇ ಗಾಂಧಾರ ಕೂಡ). ಇವೆರಡು ಸ್ವರಗಳಿಗೂ ಸಹಾ ಹಾಗೇ ದೂರ-ಹತ್ತಿರದ ಸಂಬಂಧವಿದೆ... ಅದನ್ನು ಸೂಚಿಸಲು "ದ" ಮತ್ತು ಗಾಂಧಾರ ಗಳು highlight ಆಗಬೇಕಾಯಿತು... ಹೀಗೇ, ಒಂದೊಂದಕ್ಕೆ ಒಂದೊಂದು ಕಾರಣ...

commentಗಾಗಿ ಧನ್ಯವಾದ

Susheel Sandeep said...

ಮಂಜು ಸಾರ್,
ನಿಮ್ಮ ವಿವರಣೆಗೆ ನಾ ಋಣಿ...ನಿಮ್ಮ ಕವನಗಳಲ್ಲಿ ಅಡಕವಾಗಿರುವ ಅರ್ಥ ಹೊರಗೆಳೆಯುವ ಮುನ್ನ ಸಾಕಷ್ಟು ಹೋಂ‍ವರ್ಕ್ ಮಾಡಿಸೋ ಈ ನಿಮ್ಮ ಶೈಲಿ ಅದ್ಭುತ. ಇನ್ನಷ್ಟು ಕಾವ್ಯ-ಕೃಷಿ ನಡೀಲಿ

Manjunatha Kollegala said...

ಸುಶೀಲ್,
thanks for your comments. ಹೀಗೇ ಬರುತ್ತಿರಿ.
ಮಂಜು

ಅರುಣ ಸಿರಿಗೆರೆ said...

ಮಂಜುನಾಥ್ ರವರೆ,

ನಿಮ್ಮ ಈ ಕವನಗಳನ್ನ ಓದಿದ ಮೇಲೆ, ಅವುಗಳನ್ನ ವಿಮರ್ಷೆ ಮಾಡೋದಿಕ್ಕೆ ಕಷ್ಟ ಆಗ್ತಾ ಇದೆ. ಒಂದು ತರಹದ ಮುಜುಗರ.
ನಿಮ್ಮ ಶೈಲಿ ತುಂಬಾ ಚೆನ್ನಾಗಿದೆ. ಪದಬಳಕೆ ಬಗ್ಗೆ ಮಾತಿಲ್ಲ.