Tuesday, June 12, 2007

ಮನೆಗೆ ಗೋಡೆಗಳಿಲ್ಲ

ಬಾಗಿಲಂತೂ ಮಜಬೂತು,
ಅಂದದ ಕೆತ್ತನೆ, ಚಂದದ ಕುಸುರಿ,
ತೇಗದ ಮರ ಬಿಡು, ಭಾರಿ ದುಬಾರಿ.

ಅರೆ!
ಬಾಗಿಲಂದವ ಮೆಚ್ಚಿ ಅಲ್ಲೆ ನಿಂತರೆ ಹೇಗೆ?
ಒಳಗೆ ಬಾ ಗೆಳೆಯಾ.
ನಗಬೇಡ,
ಈ ನನ್ನ ಮನೆಗೆ ಗೋಡೆಗಳಿಲ್ಲ!

ಇದು ನೋಡು ಹಾಲು, ಅಡುಗೆ ಮನೆ ಅಲ್ಲಿ, ಮತ್ತಲ್ಲಿಯೇ ಊಟ;
ಎಡಕಿಹುದು ಮಂಚ, ಅಲ್ಲಿಯೆ ಪ್ರಣಯದಾಟ.
ಏನಯ್ಯ ಬಾಯ್ಬಿಡುವೆ, ಹೇಳಲಿಲ್ಲವೆ?
ನಮ್ಮ ಮನೆಗೆ ಗೋಡೆಗಳಿಲ್ಲ.

ಊಟ-ತಿಂಡಿ, ಜಳಕ,
ಶೃಂಗಾರ, ರತಿಯ ಪುಳಕ,
ಉಂಡು ಮಲಗೋ ತನಕ

ಮಾರಾ-ಮಾರಿ, ಜಗಳ-ಕದನ,
"ಅದಿಲ್ಲ-ಇದಿಲ್ಲ"ಗಳ ಅನುದಿನದ ಕಾಷ್ಟ-ವ್ಯಸನ,
ಇಲ್ಲಿ ಎಲ್ಲವು ಮುಕ್ತ, ನೋಡುಗರಿಗೆ.

ಯಾಕಯ್ಯ ಸಂಕೋಚ?
ಕೂಡು, ಇದು ನಿಮ್ಮ ಮನೆಯೇ
ಅಂತ ತಿಳಿ.
ತುಸು ವಿಶ್ರಮಿಸಿಕೋ ಕೂತು.
ಕೇಳಿಲ್ಲವೇ ಮಾತು?
"ಎಲ್ಲರ ಮನೆ ದೋಸೆ ತೂತು"
ಇಲ್ಲಿ ಹೊಸದಿನ್ನೇನಿದ್ದೀತು?

ತೆರೆದ ಮನೆ ನೋಡು, ನಮ್ಮಂತೆಯೇ ಇಲ್ಲಿ
ವಾಸ್ತವ್ಯ ಹೂಡಿಹವು ಹಾವು-ಹಲ್ಲಿ.
ಗೋಡೆಯಿಲ್ಲದ ಮೇಲೆ ಬಾಗಿಲೇಕೆಂದೆಯಾ?
ತಾತನ ಕಾಲದ್ದೋ ಅದು,
'ಮನೆ'ತನದ ಮರ್ಯಾದಿ!

ಮನದಂತೆಯೇ ನನ್ನ ಮನೆಯ ಬಾಗಿಲು ಕೂಡ,
ಸದಾ ತೆರೆದದ್ದೇ, ಮಾನವರ ಸ್ವಾಗತಕ್ಕೆ.
ಆದರೂ ಒಮ್ಮೊಮ್ಮೆ ಜಂತುಗಳೂ ಕೂಡ
ನುಸುಳುವುದೂ ಉಂಟು ಬಾಗಿಲ ಮುಖಾಂತರವೇ!
ಹಾಗೆಂದು ಬಾಗಿಲನು ಮುಚ್ಚಿಬಿಡಲಾದೀತೇ?
ನೆಗಡಿ ಬಂತೆಂದು ಮೂಗನೇ ಕೊಯ್ಯುವಂತೆ!

ಮನೆಗೆ ಗೋಡೆಗಳಿಲ್ಲವೆಂದು ಚಿಂತಿಸಬೇಡ,
ನೆರೆಹೊರೆಯ ಗೋಡೆಗಳೆ ನಮ್ಮವೂ ಕೂಡ.
ಕಿಟಕಿಗಳೂ ಉಂಟು;
ಯಾವಾಗಲಾದರೂ ತೆರೆಯಬಹುದು,
ಅವರಿಗೆ ಬೇಕಾದಾಗ.

ಹೊರಟೇಬಿಟ್ಟೆಯಾ? ಆಯ್ತು, ಬಾರೋ ಆಗಾಗ.
ಏನೆಂದೆ?... ಸಿಕ್ಕೇ ಸಿಗುವೆನು, ನನಗೆ ಮತ್ತಾವ ಜಾಗ?
"ಕತ್ತೆ ಸತ್ತರೆ ಹಾಳು ಗೋಡೆ" ಅನ್ನುವೆಯಾ?
ಆ ಮಾತುಗಳಿಗಿಲ್ಲಿ ಅರ್ಥವಿಲ್ಲ;
ನಮ್ಮ ಮನೆಗೆಲ್ಲಿಯೂ ಗೋಡೆಗಳೆ ಇಲ್ಲ!

- ೦೩/೦೬/೧೯೯೮

7 comments:

Anonymous said...

ಮತ್ತೊಂದು ಅದ್ಬುತ ಕವನ ಮಂಜುನಾಥ ಅವರೆ.
'ಬಾಗಿಲ್ಲದ ಮನೆಗೆ ಅಂದದ ಬಾಗಿಲು' - ಈ ಪ್ರತಿಮೆ ಸ್ವಾರಸ್ಯವಾಗಿದೆ. Excellent Symbolism and imagery.

[quote]
ಕಿಟಕಿಗಳೂ ಉಂಟು;
ಯಾವಾಗಲಾದರೂ ತೆರೆಯಬಹುದು,
ಅವರಿಗೆ ಬೇಕಾದಾಗ.
[/unquote]

^^ ಎಂದು ನೀವು ಹೇಳುವಾಗ, ಅಲ್ಲಿ ಇರುವ ತುಸು ಕುಹುಕ ಬಹಳವಾಗಿ ರುಚಿಸಿತು.

ಲಹರಿಗಳು ಹೀಗೆ ಬರಲಿ. ವಾಚಕರು ನಾವು ಬಕ ಪಕ್ಶಿಗಳ ಹಾಗೆ ಕಾದಿರುವೆವು.

loop said...

hey manju :)
goDegaLillada maneyalli manadalli badukuvAse !!
Awesome poetry!

Manjunatha Kollegala said...

Hi Srikanth & Indira,

Thanks for your words

ಜಯಂತ ಬಾಬು said...

ಗೋಡೆ ಇಲ್ಲ..ಹೌದು ..ಗೋಡೆ ಇಲ್ಲದ ಮೇಲೆ ಛಾವಣಿಯು ಇರದಷ್ಟೇ..?ಮಳೆ,ಗಾಳಿಗೆ ಏನು ಮಾಡ್ತೀರ ಸಾರ್.. ??

ಅಧ್ಬುತವಾದ ಕವನ....ನನಗೆ ತುಂಬಾ ಹಿಡಿಸಿದ ಸಾಲುಗಳು..

"ಮನೆಗೆ ಗೋಡೆಗಳಿಲ್ಲವೆಂದು ಚಿಂತಿಸಬೇಡ,
ನೆರೆಹೊರೆಯ ಗೋಡೆಗಳೆ ನಮ್ಮವೂ ಕೂಡ.
ಕಿಟಕಿಗಳೂ ಉಂಟು;
ಯಾವಾಗಲಾದರೂ ತೆರೆಯಬಹುದು,
ಅವರಿಗೆ ಬೇಕಾದಾಗ."

Manjunatha Kollegala said...

ನೆರೆ ಇದ್ದ ಮೇಲೆ "ಹೊರೆ" ಇಲ್ಲದಿರುತ್ತಾ ಜಯಂತ್? ;)ಚಿಂತಿಸಬೇಡಿ, ಮಳೆ, ಗಾಳಿ ಎಲ್ಲ ಮೇಲ್ಮನೆಯ ಪಾಲು ;)

Thanks for your review

Anonymous said...

"goDegaLLillada manegU bAgilu" eShTu artha ide idakke!! admuthavada Uhane.. tumba chennagide

"ಹಾಗೆಂದು ಬಾಗಿಲನು ಮುಚ್ಚಿಬಿಡಲಾದೀತೇ?
ನೆಗಡಿ ಬಂತೆಂದು ಮೂಗನೇ ಕೊಯ್ಯುವಂತೆ!"

ee line tumba hiDsitu nange...


Girish

Manjunatha Kollegala said...

ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದ ಗಿರೀಶ್. ಬರುತ್ತಿರಿ